ಬೊಮ್ಮಘಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಬೊಮ್ಮಘಟ್ಟವು,' 'ಬಳ್ಳಾರಿ' ಜಿಲ್ಲೆಯ ಪ್ರಮುಖ ಸ್ಥಳಗಳಲ್ಲೊಂದು. ಇಲ್ಲಿಯ 'ಶ್ರೀ ಹುಲಿಕುಂಟೇರಾಯ ದೇವಸ್ಥಾನ'ವು ಜಗತ್ಪ್ರಸಿದ್ದ. 'ಶ್ರೀ ಹುಲಿಕುಂಟೇರಾಯ ದೇವಸ್ಥಾನ'ವು ೧೫ನೇ ಶತಮಾನದಲ್ಲಿ ನಿರ್ಮಿಸಿದರೆಂದು ಪ್ರತೀತಿ. 'ಶ್ರೀ ಕೃಷ್ಣದೇವರಾಯ'ನ ಕಾಲದಲ್ಲಿ, 'ಪ.ಪೂ. ವ್ಯಾಸರಾಜರು ಶ್ರೀ ಹುಲಿಕುಂಟೇರಾಯ' ಸ್ಥಿರಪೂಜೆಗೈದರೆಂದು ಪ್ರತೀತಿ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದ ದಶಮಿಯಂದು 'ರತೋತ್ಸವ' ಇರುತ್ತದೆ.--117.192.166.42 ೧೭:೪೭, ೨ ಜನವರಿ ೨೦೧೦ (UTC)

ಇತಿಹಾಸ[ಬದಲಾಯಿಸಿ]

ಶ್ರೀಹರಿಕಾರುಣ್ಯದಿಂದ ಸೃಷ್ಟಿಗೆ ಪ್ರಾಪ್ತರಾದ ಸಕಲ ಜೀವರ ಗತಿಕಾಣಿಸತಕ್ಕ ಪ್ರಭುಗಳು ಶ್ರೀಮುಖ್ಯಪ್ರಾಣದೇವರು. ಇವರು ಶ್ರೀವಿಷ್ಣುಭಕ್ತ್ಯಾದ್ಯನಂತರ ಗುಣಪರಿಪೂರ್ಣರು. ಬ್ರಹ್ಮರುದ್ರಾದಿಗಳಿಂದ ಪ್ರಾರ್ಥಿತನಾದ ಭಗವಂತನ ಆಜ್ಞೆಯನ್ನು ಅನರ್ಘ್ಯರತ್ನದಂತೆ ಶಿರದಲ್ಲಿ ಧರಿಸಿ, ಉಳಿದ ಅಶೇಷ ದೇವತೆಗಳ ಪ್ರಾಥನೆಯನ್ನು ಹಾರದೋಪಾದಿ ಕೊರಳಲ್ಲಿ ಧರಿಸಿ, ಸಚ್ಚಾಸ್ತ್ರ ಕರ್ತ್ರುಗಳಾಗಿ, ಅನಾದಿ ಸತ್ಸಂಪ್ರದಾಯ ಪರಂಪರಾ ಪ್ರಾಪ್ತವಾದ ಶ್ರೀಮದ್ವೈಷ್ಣವ ಸಿದ್ದಾಂತವನ್ನು ಪ್ರತಿಷ್ಥಾಪಿಸಿದ ಮಹಾನುಭಾವರು. ಭಗವಂತನ ಸೇವಾರೂಪವಾದ ಈ ಕೈಂಕರ್ಯದಿಂದ ಪರಮಪ್ರೀತನಾದ ಆ ಮಹಾನುಭಾವನ ಪರಮಾನುಗ್ರಹಪಾತ್ರರು. ಸ್ವಯಂ ಸಂಶಯರಹಿತರು. ಅನುಗ್ರಹ ಮಾತ್ರದಿಂದ ತಮ್ಮ ಭಕ್ತರ ಸಂಶಯಗಳನ್ನು ನಿವಾರಿಸತಕ್ಕ ಜಗದ್ಗುರುಗಳು. ಇವರು ಸಪ್ತಕೋಟಿ ಮಹಾಮಂತ್ರಸಿದ್ದರು. ಸರ್ವಸಾಮರ್ಥ್ಯೋಪೇತರು. ಅನಂತ ರೂಪಾವಯವ ಗುಣಾಕ್ರಿಯ ಜಾತ್ಯಾವಸ್ಥಾವಿಶಿಷ್ಠ ಭಗವಂತನ ಉಪಾಸಕರು. ತಮ್ಮನ್ನು ನಂಬಿದ ಭಕ್ತರನ್ನು ದುಷ್ಥಮಾರ್ಗಗಳಿಂದ ಉದ್ಹರಿಸಿ, ಸನ್ಮಾರ್ಗಕ್ಕೆ ಒಯ್ಯುವ ದಾರಿದೀಪ ಶ್ರೀಪ್ರಾಣದೇವರು. ತಮ್ಮನ್ನಾಶ್ರಯಿಸಿರುವ ಜೀವಿಗಳ ಉದ್ಧಾರಾರ್ಥ ಪ್ರತಿದಿನ ಶ್ರೀರಮಾಪತಿಯಲ್ಲಿ "ಪರಮದಯಾಳೋ, ಕ್ಷಮಾಸಮುದ್ರ, ಭಕ್ತವತ್ಸಲ, ಭಕ್ತಾಪರಾಧ ಸಹಿಷ್ಣೋ, ನಿನ್ನ ಅಧೀನರಾದ ಈ ಜೀವರು ದುಃಖಿತಾಂತಃಕರುಣಿಗಳಾಗಿದ್ದಾರೆ, ಬಳಲಿ ಬೆಂಡಾಗಿದ್ದಾರೆ, ದಾರಿಕಾಣದೆ ನಿನ್ನನ್ನೇ ಶರಣು ಹೋಗಿದ್ದಾರೆ, ಇವರನ್ನು ಉದ್ಧರಿಸಿ ಕಾಪಾಡು ಪ್ರಭು" ಎಂದು ವಿಜ್ಞಾಪಿಸಿಕೊಳ್ಳುವ ಅನಿಮಿತ್ತ ಬಂಧುಗಳು. ಸರ್ವಸ್ತಳಗಳಲ್ಲಿ, ಸರ್ವಕಾಲದಲ್ಲಿ, ಸರ್ವಾಕಾರನಾದ, ಸರ್ವಾಧಾರನಾದ, ಸರ್ವಾಶ್ರಯನಾದ, ಸರ್ವಸೃಷ್ಟಿ-ಸ್ಥಿತಿ-ಲಯಕಾರನಾದ, ಸರ್ವನಿಯಾಮಕನಾದ, ಸರ್ವಪ್ರವರ್ತಕನಾದ, ಸರ್ವರ ಯೋಗ್ಯತಾನುಸಾರ ಜ್ಞಾನಜ್ಞಾನಬಂಧ ಮೊಕ್ಷಪ್ರದನಾದ, ಸರ್ವಸತ್ತಾಪ್ರದನಾದ, ಸರ್ವಶಬ್ದವಾಚ್ಯನಾದ, ಸರ್ವಶಬ್ದ ಪ್ರವೃತ್ತಿ ನಿಮಿತ್ತನಾದ, ಸರ್ವಗುಣಗಳಿಂದ ಪರಿಪೂರ್ಣತಮನಾದ, ಸರ್ವದೋಷಗಳಿಂದ ದೂರನಾದ, ಸರ್ವಾಚಿಂತ್ಯನಾದ, ಸರ್ವೋತ್ತಮನಾದ, ಸರ್ವೆಶ್ವರನಾದ, ಸರ್ವಾಂತ್ಯಂತ ವಿಲಕ್ಷಣನಾದ, ಸ್ವಗತಭೇದ ವಿವರ್ಜಿತನಾದ, ಶ್ರೇಯಃಪತಿಯ ರಮಾಯುಕ್ತ ಅಶೇಷ ಭಗವದ್ರೂಪಂಗಳನ್ನು ನಿತ್ಯವೂ ಕಂಡು ಆನಂದಿಸುವ ಆನಂದಮಯರು. ಶ್ರೀಮುಖ್ಯಪ್ರಾಣರು ಅಭಿಮಾನಾದಿ ಸರ್ವದೋಶದೂರರು. ಅಸೂಯೆರ್ಷ್ಯಾದಿ ಸಕಲ ಮನೋದೋಷ ನಿವಳಕರು, ಸರ್ವತಾತ್ವಿಕ ದೇವಪ್ರೇರಕರು, ಸರ್ವತಾತ್ವಿಕ ಅಸುರಭಂಜಕರು, ದುರ್ಮತಭಂಜಕರಾದ ಪ್ರಯುಕ್ತ 'ಪ್ರಭಂಜನ' ರೆಂದು ಇವರಿಗೆ ಹೆಸರು. ಪ್ರತಿದಿನ, ಪ್ರತಿಕ್ಷಣ, ಬುದ್ಧಿಶೋಧಕರು, ಸರ್ವ ಕಾರ್ಯಗಳನ್ನು ಮಾಡುವವರೂ, ಮಾಡಿಸುವವೂ, ಆದ ಅವರು ಸರ್ವ ಕರ್ಮಕ್ಕೆ ಪ್ರಭುಗಳು, ಮಾಡಿದ ಸರ್ವ ಕರ್ಮಗಳನ್ನು ಭಗವಂತನಲ್ಲಿ ಸಮರ್ಪಿಸುವವರೂ, ಸರ್ವಕರ್ಮಗಳ ಫಲಭೋಕ್ತ್ರಗಳೂ, ಸರ್ವಜೀವರಲ್ಲಿದ್ದು ಸರ್ವಕರ್ಮಗಳ ಫಲಗಳನ್ನು ಜೀವರಿಗೆ ಉಣಿಸತಕ್ಕವರೂ ಇವರೇ. ಸಕಲಕಾರ್ಯಗಳಿಗೆ ಪ್ರೇರಕರೂ, ಸಕಲ ಕಾರ್ಯಗಳ ಉದ್ಭೋದಕರೂ, ಸಕಲ ಕಾರ್ಯಗಳನ್ನು ಪವಿತ್ರಗೊಳಿಸುವವರೂ, ಸಕಲ ಕಾರ್ಯಗಳ ಸಿದ್ದಿಪ್ರದರೂ, ಸಕಲ ಕಾರ್ಯನಿಷ್ಟರೂ, ಸಕಲ ಕಾರ್ಯಗಳಿಗೆ ಸಾಕ್ಷೀಭೂತರೂ ಆದ ಇವರು ಅಶೇಷ ಜೀವರ ಅನಂತ ಜನ್ಮಗಳ ಧರ್ಮಾಧರ್ಮಗಳನ್ನು ಬಲ್ಲ ರಮಾನಾರಾಯಣರ ಅನ್ಯತ್ರ ಸರ್ವಜ್ಞರು. ಹೇಗೆ ಲಕ್ಷ್ಮೀಶನಾದ ನಾರಾಯಣನು ವೈಕುಂಟವನ್ನು ಬಿಟ್ಟು ಕಲಿಯುಗದ ಜನರನ್ನು ಉದ್ಧರಿಸಲು ಸ್ವಯಂ ತಾನೇ ಬಂದು ವೆಂಕಟಾಚಲದಲ್ಲಿ ವಿರಾಜಮಾನನಾಗಿ ಸಕಲರನ್ನು ಪರಿಪಾಲಿಸುತ್ತಿರುವನೋ ಹಾಗೆಯೇ ಜಗತ್ಪ್ರಾಣರಾದ ಪ್ರಾಣದೇವರು ಸತ್ಯಲೋಕದಿಂದ ಆಗಮಿಸಿ, ಹುಲಿಕುಂಟೆನಾಮ ತಟಾಕದಲ್ಲಿ ಹೂಲೀ ಎಂಬ ಸಸ್ಯದ ಪೊದೆಯೊಂದರಲ್ಲಿ ಗೂಢವಾಗಿ ನೆಲೆಸಿದ್ದರು. ಅನೇಕ ಶತಮಾನಗಳ ಹಿಂದೆ ಈ ತಟಾಕದ ಸಮೀಪದಲ್ಲಿ ಬೋಮ್ಮಯ್ಯನೆಂಬ ಗೋವಳನು ಸಹಸ್ರಾರು ಪಶುಗಳ ಪಾಲನೆಯಲ್ಲಿ ನಿರತನಾಗಿದ್ದನು. ಬೆಳ್ಳಿಗ್ಗೆ ಎದ್ದು ಶುಚಿಭೂರ್ತನಾಗಿ ಜಗಚ್ಜಕ್ಷು ಶ್ರೀಸೂರ್ಯನಾರಾಯಣರಿಗೆ ನಮಿಸಿ, ಹಸುಗಳ ಹಟ್ಟಿಯನ್ನು (ಗೋಶಾಲೆ) ಶುಭ್ರಗೊಳಿಸಿ, ಸಮೀಪದಲ್ಲಿ ಮೇಯುತ್ತಿರುವ ಹಸುಗಳನ್ನು ಕಪಿಲೆ, ಗಂಗೆ, ಯಮುನೆ, ತುಂಗಭದ್ರೆ, ಗೊಧೆ ಮುಂತಾದ ಹೆಸರುಗಳಿಂದ ಕರೆದುಕೂಡಲೇ ಅವು ಬಂದು ಅವನನ್ನು ಸುತ್ತುವರೆಯುತ್ತಿದ್ದವು. ತುರುಕರುಗಳನ್ನು ಉಣಬಿಟ್ಟು ಅವು ತೃಪ್ತಿಯಾದ ನಂತರ ಸಮೃದ್ದವಾಗಿ ಉಳಿದ ಕ್ಷೀರವನ್ನು ಕರೆದು ಪಡುಗಗಟ್ಟಲೆ ತುಂಬುವವನು. ನಂತರ ಊಟ ಪೂರೈಸಿ ಗೋವುಗಳನ್ನು ಮೇಯಿಸಲು ಹೊರಡುವವನು. ಗಿರಿಗಹ್ವರಗಳಿಂದ ಕೂಡಿದ ಪ್ರದೇಶವಾದ ಪ್ರಯುಕ್ತ ವನ್ಯಮೃಗಗಳಿಂದ ರಕ್ಷಿಸಲು ವಿಶೇಷ ಎಚ್ಹರಿಕೆ ವಹಿಸುವನು. ಮಧ್ಯಾನ್ಹದ ತರಣಿಯರುಬೆಯಿಂದ ತ್ರುಷೆಗೊಂಡ ತರುಗಳಿಗೆ ಜಲಪ್ರಾಶನ ಮಾಡಿಸಲು ಕಿರಿಗುಡ್ಡದ ತಪ್ಪಲಲ್ಲಿರುವ ಹುಲಿಕುಂಟೆ ತಟಾಕದ ಬಳಿಗೆ ಅಟ್ಟುವನು. ಹಸುಗಳು ಹೊಟ್ಟೆತುಂಬಾ ಮೇದು ನೀರು ಕುಡಿದು ಸಂಜೆಯವರೆಗೆ ಸುತ್ತಾಡಿ ಸಾಯಂಕಾಲ ಹಟ್ಟಿಗೆ ಹಿಂತಿರುಗುವನು. ಹೀಗೆ ಅವನ ದಿನಚರಿ ನಡೆಯುತ್ತಿತ್ತು. ದಿನ ಕಳೆಯುತ್ತಿರಲಾಗಿ ಒಂದಾನೊಂದು ದಿನ ತೇಜಸ್ವಿಯಾದ ಒಂದು ಹೊಸ ಹಸು ಅದೇ ಜನಿಸಿದ ಶಿಶುವಿನೊಂದಿಗೆ ಹೇಗೋ ನುಸುಳಿಕೊಂಡು ಬಂದು ಹಿಂಡನ್ನು ಸೇರಿಕೊಂಡಿತು. ಹೊಸ ಹಸುವಿನ ದಿವ್ಯ ಲಕ್ಷಣವನ್ನುಕರುವಿನ ಕಳೆಯನ್ನು ಕಂಡು ಗೋವಳನು ಮುದಗೊಂಡನು. ಆ ದಿನ ರಾತ್ರಿ ಉಳಿದ ಹಸುಗಳೊಂದಿಗೆ ಈ ಹಸುವನ್ನು ಹಿಂಡಿದಾಗ ಅದರ ಅಮೃತಮಯವಾದ ಹೇರಳವಾದ ಹಾಲನ್ನು ಕಂಡು ವಿಸ್ಮಯಗೊಂಡನು. ನೂರಾರು ಹಸುಗಳನ್ನು ಸಾಕುವ ಬದಲು ಇಂತಹ ಒಂದೇ ಹಸುವನ್ನು ಸಾಕಿದರೆ ಸಾರ್ಥಕವಾಗುವುದೆಂದು ಮನಗಂಡನು. ಮರುದಿನ ಹಸುಳೆಯೊಂದಿಗೆ ಹಸು ಮೇಯಲು ಹೊರಟಿತು. ಉಳಿದ ಹಸುಗಳಂತೆ ಓದಲು ತುಂಬಿಕೊಳ್ಳಲು ತೃಣ ಸಂಗ್ರಹಕ್ಕಾಗಿ ಕಾತರಿಸದೆ ಏನನ್ನೋ ಹುಡುಕುತ್ತಾ, ನೆಲವನ್ನು ಮೂಸಿ ನೋಡುತ್ತಾ ಅತ್ತಿತ್ತ ಚಲಿಸುತ್ತಿತ್ತು. ಹೊಸ ಸ್ತಳವಾದುದರಿಂದ ಹೀಗೆ ಮಾಡುತ್ತಿರಬಹುದೆಂದು ಅವನೂ ಉದಾಸೀನತೆ ವಹಿಸಿದನು. ಹಸು ಹೇಗೋ ಗೋವಳನ ಕಣ್ಣು ತಪ್ಪಿಸಿ ಓಡಿಹೋಗಿ ಕೆಲವು ಸಮಯದ ನಂತರ ಬಾನು ಹಿಂಡಿನೊಳಗೆ ಸೇರಿಕೊಂಡಿತು. ರಾತ್ರಿ ಹಾಲು ಹಿಂಡಲು ಹೋದಾಗ ಅವನಿಗೆ ಆಶ್ಚರ್ಯವಾಯಿತು. ಬೆಳಿಗ್ಗೆ ಅನೇಕ ಬಳ್ಳಗಳ ಹಾಲು ಹಿಂಡಿದ ಹಸುವಿನ ಕೆಚ್ಚಲಲ್ಲಿ ಒಂದು ಹನಿಯೂ ಹಾಲು ಇಲ್ಲ. ದೃಷ್ಟಿದೋಷ ಪರಿಹಾರಕ್ಕಾಗಿ ರಕ್ಷೆಯನ್ನು ಮಾಡಿದುದಾಯಿತು. ಅದರಿಂದ ಯಾವ ಪ್ರಯೋಜನವೂ ಸಿಗಲಿಲ್ಲ. ಅಂದಿನಿಂದ ಹಸು ಹಾಲನ್ನೇ ಕೊಡದಾಯಿತು. ಕೆಚ್ಚಲು ಬತ್ತಲಿಲ್ಲ, ಕರು ನವೆಯಲಿಲ್ಲ, ಇದರ ಮಹಿಮೆ ಗೋವಳನಿಗೆ ತಿಳಿಯದಾಯಿತು. ಹೀಗೆಯೇ ಕೆಲವು ದಿನ ಕಳೆದು ಶರದೃತು ಪ್ರಾಪ್ತವಾಯಿತು. ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆ ನಡೆಸಲು ಗೋವಳನ ಹಟ್ಟಿಯಲ್ಲಿ ವ್ಯವಸ್ತೆ ನಡೆಯಿತು. ಪ್ರತಿದಿನಕ್ಕಿಂತ ಮುಂಚೆ ಹಸುಗಳನ್ನು ಮೇಯಿಸಲು ಅಟ್ಟಿದನು. ಮಧ್ಯಾಹ್ನ ಹುಲಿಕುಂಟೆ ತಟಾಕಕ್ಕೆ ನೀರು ಕುಡಿಯಲು ಬಂದಾಗ ಗೋವಳನು ಹಸುಗಳನ್ನೆಲ್ಲಾ ತಟಾಕದಲ್ಲಿ ಮೀಯಿಸಿದನು. ಅಂದು ಹೊಸ ಹಸುವಿನ ರೀತಿಯೇ ಬೇರೆಯಾಗಿತ್ತು. ಎಲ್ಲಿಯೋ ನೋಡುತ್ತಿತ್ತು. ಯಾರನ್ನೋ ನಿರೀಕ್ಷಿಸುವಂತೆ ತೋರುತ್ತಿತ್ತು. ಅದರ ರೀತಿನೀತಿಗಳನ್ನು ಗಮನಿಸಿದ ಅವನು ಅದರ ಚಲನವಲನಗಳ ಬಗ್ಗೆಯೂ ಗಮನವಿರಿಸಿದನು. ಹಸು ಮೆಲ್ಲಮೆಲ್ಲನೆ ಅವನ ದೃಷ್ಟಿಯಿಂದ ಜಾರುತ್ತಾ ಕೆರೆಯ ಏರಿಯ ಕೆಳೆಗೆ ಇಳಿಯಹತ್ತಿತ್ತು. ದೂರದಿಂದ ಅವನೂ ಅದನ್ನು ಹಿಂಬಾಲಿಸಿದನು. ಅನತಿದೂರದಲ್ಲಿಯೇ ಒಂದು ಹುಲೀಪೊದೆ. ಆ ಪೊದೆಯ ಮೇಲೆ ಹತ್ತಿ ಹೋಗಲು ನಿಸರ್ಗದತ್ತವಾದ ಕಲ್ಲುಹಾಸಿಗೆ. ಹಸು ಪೋದಯ ಮೇಲೇರಿ ನಿಂತಿತು. ಕರುವನ್ನು ಉಣಬಿಟ್ಟಾಗ ತೊರೆಬಿಡದಿದ್ದ ತುರು ಧಾರಾಕಾರವಾಗಿ ಅಮೃತವರ್ಷವನ್ನುಸುರಿಸಿತು. ಸಮೀಪದಿಂದ ಆ ದೃಶ್ಯವನ್ನು ನೋಡುತ್ತಿದ್ದ ಗೋವಳನಿಗೆ ಅತಿಶಯವಾದ ಕೋಪದಿಂದ ಮತಿಮಥನಿಸಿತು. ಕ್ರುದ್ದನಾದ ಅವನು ಹಿಂದೆ ಮುಂದೆ ಆಲೋಚಿಸದೆ ಮಂದಮತಿಯಾಗಿ ಕೈಯಲ್ಲಿದ್ದ ಕಠಾರಿಯಿಂದ ಮೇಲೆತ್ತಿ ಹೊಯ್ದನು. ಕ್ಷಣಮಾತ್ರದಲ್ಲಿ ಗೋವು ಮಾಯವಾಯಿತು. ಹುಲಿಪೋದೆಯಿಂದ ಪ್ರಳಯಕಾಲಾಭೀಲಕೀಲಕ್ಕೂ ಮಿಗಿಲಾದ ಶಬ್ದದಿಂದೊಡಗೂಡಿದ ಪ್ರಭೆ ಮಿಂಚಿ ಅದೃಶ್ಯವಾಯಿತು. ಗೋವಳನು ಭಯಭ್ರಾಂತನಾಗಿ ಮೂರ್ಛೆಗೊಂಡನು.

ಸ್ಥಾಪನೆ[ಬದಲಾಯಿಸಿ]

ಮೂರ್ಛೆ ತಿಳಿದೆದ್ದ ಗೂವಳನು ಚಿಂತಾಕುಲನಾಗಿ ಹಟ್ಟಿಗೆ ಹಿಂತಿರುಗಿದನು. ನಭವು ಅಸ್ತನಾದ ಸೂರ್ಯನ ಕೆಂಬಣ್ಣದಿಂದ ಕೂಡಿ ಪ್ರಶಾಂತವಾಗಿತ್ತು. ಬೇಗಬೇಗನೆ ಗೋಪೂಜೆ ಮುಗಿಸಿ ಮನದ ಕಳವಳ ಹೆಚ್ಚುತ್ತಿರಲು ಘಟನೆ ನಡೆದ ದಿಕ್ಕಿಗೆ ನಮಸ್ಕರಿಸಿ ತನ್ನ ಅಪರಾಧಗಳನ್ನು ಮನ್ನಿಸಬೇಕೆಂದು ಪ್ರಾರ್ಥನೆ ಸಲ್ಲಿಸಿ, ನಿದ್ರಾಸಕ್ತನಾದನು. ತನುಮನಗಳ ದಣಿವಿನಿಂದ ಗಾಢವಾದ ನಿದ್ರೆ ಹತ್ತಿತು. ಇದೇನು ಅದ್ಭುತ ಪ್ರಭೆ, ಕನಸೋ ನನಸೋ ತಿಳಿಯದಾಗಿದೆ. ಅಣುರೂಪಿ ಪ್ರಾಣದೇವ ಹುಲೀಕುಂಜದಿಂದ ಹೊರಬಂದು ನಿಂತ್ತಿದ್ದಾನೆ ! ಕನಸಿನಲ್ಲಿ ಹಿಂದಿನ ಘಟನೆಯ ಸ್ಮರಣೆಯಿಂದ ತತ್ತರಿಸುತ್ತಿದ್ದ ಗೋವಳನನ್ನು ಕರುಣಾದೃಷ್ಟಿಯಿಂದ ನೋಡುತ್ತಿದ್ದಾನೆ !! ಅಭಯ ಪ್ರಧಾನ ಮಾಡುತ್ತಿದ್ದಾನೆ !! ಅವನ ಕ್ರೂರ ಕುಠಾರದಿಂದ ಘಾಸಿಯಾಗಿದ್ದರೂ ಹಸನ್ಮುಖಿಯಾಗಿದ್ದಾನೆ - " ಏಳು ಭಕ್ತವರ, ಇದರಲ್ಲಿ ನಿನ್ನದೇನೂ ಅಪರಾಧವಿಲ್ಲ. ಗೂಢನಾಗಿದ್ದ ನಾನು ಈಗ ಪ್ರಭುವಿನ ಆಜ್ಞೆಯಂತೆ ಹೊರಬಂದು ಭಕ್ತರ ಅಭಿಷ್ಟಗಳನ್ನು ಈಡೇರಿಸಲು ಅವಕಾಶ ಒದಗಿತು. ವಜ್ರಕಾಯನಾದ ನನಗೆ ನಿನ್ನ ಕುಠಾರ ಧಾರೆ ಏನು ಮಾಡಬಲ್ಲದು? ಆದರೂ ಈ ಘಟನೆಯ ಸ್ಮರಣಾರ್ಥರಾಗಿ ಸ್ವಯಂ ಅಭಿವ್ಯಕ್ತನಾದ ನನ್ನ ಪ್ರತೀಕದ ತೊಡೆಯ ಭಾಗದಲ್ಲಿ ಸ್ವಲ್ಪ ಗುರುತು ಮಾತ್ರ ಉಳಿಯುವುದು. ನಿನ್ನ ಹೆಸರು ಅಜರಾಮರವಾಗುವುದು. ಈ ಗ್ರಾಮದ ವಿಬುಧಪ್ರಿಯರಾದ ಕರಣಿಕರಿಗೆ ನಿನ್ನೆ ನಡೆದ ಘಟನೆಯನ್ನು ಅರುಹಿ ಈ ಹುಲಿಕುಂಜದಿಂದ ಅಡಗಿರುವ ನನ್ನನ್ನು ಹೊರತೆಗೆದು ಸ್ತಾಪಿಸಲು ತಿಳಿಸು" ಎಂದು ಅಪ್ಪಣೆ ಮಾಡಿ, ಪುನಃ ಹುಲಿಕುಂಜದೊಳಗೆ ಅದೃಷ್ಯನಾದನು. ಗೋವಳನಿಗೆ ಎಚ್ಚರವಾಯಿತು. ಆಗಲೇ ಉಶಃಕಾಲವಾಗಿತ್ತು. ಸ್ವಪ್ನ ಸ್ಮರಣೆಗೆ ಬಂದು ರೋಮಾಂಚನವಾಯಿತು. ಪುನಃ ಅದೇ ದಿಕ್ಕಿಗೆ ನಮಸ್ಕರಿಸಿದ. ಬೇಗ ಬೇಗನೆ ಮುಖ ಪ್ರಕ್ಷಾಲನ ಮಾಡಿಕೊಂಡು ಅಗ್ರಹಾರದಲ್ಲಿ ವಾಸಿಸುತ್ತಿದ್ದ ಕರಣಿಕರ ಮನೆಗೆ ಓಡಿದ. ಭಕ್ತಿಯಿಂದ ಅವರಿಗೆ ನಮಸ್ಕರಿಸಿ ಸ್ವಪ್ನ ವೃತ್ತಾಂತವನ್ನೂ ಹಿಂದಿನ ದಿನ ನಡೆದ ಅದ್ಭುತ ಘಟನೆಯನ್ನೂ ಅರುಹಿದ. ಕರನಿಕರು ಭಾವುಕರು ಹಾಗೂ ದೈವಭಕ್ತರು. ಈ ಘಟನೆ ನಡೆದ ಸ್ತಳ, ಹುಲಿಕುಂಟೆ ತಟಾಕ ಅವರಿಗೇ ಸೇರಿತ್ತು. ತಮ್ಮ ಸ್ವಾಧೀನವಿರುವ ಸ್ತಳದಲ್ಲಿಯೇ ಸ್ವಯಂ ಪ್ರಾಣದೇವರು (ತಿರುಪತಿಯ ಶ್ರೀನಿವಾಸನಂತೆ) ಗುಪ್ತವಾಗಿ ಅಡಗಿರುವ ವಿಷಯ ತಿಳಿದು ಪುಳಕಿತರಾದರು. ಪುರೋಹಿತರ ಸೂಚನೆಯಂತೆ ಗ್ರಾಮದ ಅಬಾಳವೃದ್ಧರನ್ನು ಮುಂದಿಟ್ಟುಕೊಂಡು ಮಂಗಳವಾದ್ಯ ಮೊಳಗುತ್ತಿರಲು ಕಲಶ ಕನ್ನಡಿಯೊಂದಿಗೆ, ವಿಪ್ರರ ವೇದಘೋಷ, ಗಾಯಕರ ಗಾಯನ,ಆನಂದೋದ್ರೆಕದಿಂದ ಕೂಡಿದ ಭಕುತರ ಭಜನೆ, ನರ್ತನ ನಡೆದಿರಲು ಸೂಚಿತ ಸ್ತಳವನ್ನು ಸೇರಿದರು. ಎಲ್ಲರೂ ಹುಲಿಕುಂಟೆ ತಟಾಕದ ನಿರ್ಮಲ ಜಲದಲ್ಲಿ ಮಿಂದು ಶುಚಿಯಾಗಿ, ಎದುರಿಗೆ ಕಂಗೊಳಿಸುವ ಹುಲೀಪೋದೆಗೆ ಫಲ ಸಮರ್ಪಣೆಗೈದು, ಭಕ್ತಿಯಿಂದ ಸ್ತುತಿಸಿದರು. ತರುಣರು ಹಿರಿಯರ ಅಪ್ಪಣೆಯಂತೆ ಪೊದೆಯನ್ನು ಸವರಹತ್ತಿದರು. ಏನಾಶ್ಚರ್ಯವಿದು ?! ಯಾವ ಶಿಲ್ಪಿಯ ಉಳಿಸುತ್ತಿಗೆಗಳಿಗೂ ಸಿಗದ ಅಲೌಕಿಕ ಪ್ರಾಣದೇವರ ಪ್ರತೀಕ ಕಂಗೊಳಿಸುತ್ತಿದೆ. ಸುಂದರ ಗಂಭೀರ ಮುಖಮಂಡಲ. ದುಷ್ಟ ಶಿಕ್ಷಣಾರ್ಥವಾಗಿ ಎತ್ತಿದ ಕೈ ಹಾಗೂ ಲಾಂಗೂಲ ಶ್ರೀಮದ್ಹನುಮದವತಾರದ ಸೂಚಕಗಳಾದರೆ, ದುರ್ಯೋಧನಾದಿ ದೈತ್ಯರನ್ನು ಸದೆದ ಶ್ರೀಭೀಮಸೇನನ ಗದೆಯ ಕುರುಹು ಎಡಗೈಯಲ್ಲಿ, ವೇದಗಳಿಗೆ ಅಪಾರ್ಥ ಕಲ್ಪಿಸಿದ ಕುಜನರ ಕುಭಾಷ್ಯರನ್ನು ಅವರ ವಾಕ್ಯಗಳಿಂದಲೇ ನಿರಾಕರಿಸಿದ ಶ್ರೀಮದಾನಂದತೀರ್ಥರ ಲಾಂಚನವಾದ ತುಳಸಿಮಣಿಮಾಲೆ ಕೊರಳಲ್ಲಿ, ಮೆಟ್ಟಿದ ಪಾದುಕೆಗಳು ಕಾಲಲ್ಲಿ ಕಂಗೊಳಿಸುತ್ತಿವೆ. ಶ್ರೀಮದ್ಹನುಮಭೀಮಮಧ್ವರ ಕುರುಹುಗಳಿಂದೊಡಗೂಡಿದ ತ್ರಿಮೂರ್ತ್ಯಾತ್ಮಕ ಮೂರ್ತಿಯನ್ನು ಏನೆಂದು ಕರೆಯಬೇಕೆಂದು ಅರಿಯಲು ಅಸಮರ್ಥರಾಗಿ ಹುಲಿಕುಂಟೆ ನಾಮಕ ತಟಾಕದ ಹುಲಿಪೋದೆಯಲ್ಲಿ ಕಾಣಿಸಿಕೊಂಡ ದೇವನನ್ನು ಶ್ರೀಹುಲಿಕುಂಟೆರಾಯನೆಂದೇ ಘೋಷಿಸಿದರು. ಆನಂದದಿಂದ ಕುಣಿದಾಡಿದರು, ಕೇಕೆ ಹಾಕಿದರು, ಹಾಡಿ ಹೊಗಳಿದರು. ಶ್ರೀಹುಲಿಕುಂಟೆರಾಯನಿಗೆ ತಂತ್ರಸಾರೋಕ್ತವಾಗಿ ಪುನಃ ಪೂಜೆ ಸಲ್ಲಿಸಿದ ನಂತರ ಪ್ರತೀಕವನ್ನು ಅಗ್ರಹಾರಕ್ಕೆ ಒಯ್ಯಬೇಕೆಂದು ಚಿಕ್ಕ ರಥಕ್ಕೆರಿಸಿದರು. ಎಲ್ಲರೂ ಭಕ್ತಿಯಿಂದ ಆ ರಥವನ್ನು ಊರ ಕಡೆಗೆ ಎಳೆಯಹತ್ತಿದರು. ಸುಮಾರು ೫೦೦ ಗಜಗಳು ಕ್ರಮಿಸಿರಬಹುದು, ಆ ರಥದ ಅಚ್ಚು ಮುರಿಯಿತು. ಸಹಸ್ರಾರು ಜನರು ಸೇರಿದ್ದರೂ ಕೆಳಗೆ ಬಿದ್ದ ಪ್ರತೀಕವನ್ನು ಕದಲಿಸಲು ಅಸಮರ್ಥರಾದರು. ಅಷ್ಟರಲ್ಲಿ ದಿನಕರನು ಪಶ್ಚಿಮಾಂಬುಧಿಯನ್ನು ಸೇರಿದುದರಿಂದ ಮರುದಿನ ಬಂದು ಪ್ರಯತ್ನಿಸಬೇಕೆಂದು ನಿಶ್ಚಯಿಸಿ, ಶ್ರೀಸ್ವಮಿಯ ನಾಮ ಸಂಕೀರ್ತನೆ ಮಾಡುತ್ತಾ ಊರಿಗೆ ತೆರಳಿದರು. ಆ ದಿನ ರಾತ್ರಿ ಗ್ರಾಮದ ಕರಣಿಕರಿಗೆ ಸ್ವಪ್ನವಾಗಿ ತನಗೆ ಈಪ್ಸಿತವಾದ ತಾನು ನಿಂತ ಸ್ತಳದಲ್ಲಿಯೇ ಎತ್ತಿ ನಿಲ್ಲಿಸಬೇಕೆಂದು ಸ್ವಾಮಿಯು ಅಪ್ಪಣೆ ಮಾಡಿದುದರಿಂದ ಮರುದಿವಸ ಶುಭಾಮುಹೂರ್ತದಲ್ಲಿ ಕೆಳಗೆ ಬಿದ್ದಿದ್ದ ಪ್ರತೀಕವನ್ನು ಅಲ್ಲಿಯೇ ನಿಲ್ಲಿಸಿ ಮೇಲೆ ಸುಂದರವಾದ ಹಸಿರುವಾಣಿ ಹಂದರವನ್ನು ಹಾಕಿ ಅಲಂಕರಿಸಿ ಪೂಜಿಸಿದರು.