ವಿಷಯಕ್ಕೆ ಹೋಗು

ನೈಲಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Nylon ನೈಲಾನ್ 6,6 Nylon 6,6 unit
ಸಾಂದ್ರತೆ 1.15 g/cm3
`ವಿದ್ಯುತ್ ವಾಹಕತೆ (σ) 10−12 S/m
ಉಷ್ಣ ವಾಹಕತೆ 0.25 W/(m·K)
ಕರಗುವ ಬಿಂದು 463–624 K
190–350 °C
374–663 °F

ನೈಲಾನ್, (Nylon) ಎಂಬುದು ಜಗತ್ತಿನಲ್ಲೆಡೆ ಉಪಯೋಗಿಸಲ್ಪಡುವ ಕೃತಕ ಪಾಲಿಮರ್ ಸಂತತಿಗೆ ಸೇರಿದ ಪಾಲಿಮರ್ ವಸ್ತುವಾಗಿದೆ. ವಲ್ಲಾಸ್ ಕಾರೊಥರ್ಸ್ ಮತ್ತು ಡ್ಯೂಪಾಂಟ್ ಎಂಬ ಸಂಶೋಧಕರಿಬ್ಬರು ೧೯೩೫ ಫೆಬ್ರುವರಿ ೨೮ರಂದು ಮೊಟ್ಟ ಮೊದಲಿಗೆ ಇದನ್ನು ಜಗತ್ತಿಗೆ ಪರಿಚಯಿಸಿದರು. 'ಡೈಮೈನ್,' ಹಾಗು 'ಡೈರ್ಬೊಝೈಲಿಕ್ ಆಸಿಡ್', ಎಂಬ ರಾಸಾಯನಿಕಗಳ ಮಿಶ್ರಣ ಇದಾಗಿದೆ. ದಿನ ನಿತ್ಯ ಬಳಸುವ ಬಟ್ಟೆ, ಕಾಲುಚೀಲಗಳು, ಆಸ್ಪತ್ರೆಯಲ್ಲಿ ಬಳಕೆಯಲ್ಲಿರುವ ಹಲವು ವಸ್ತುಗಳು,ಏರೋಪ್ಲೇನ್, ಪ್ಯಾರಾಚೂಟ್ ನಲ್ಲಿ ಉಪಯೋಗಿಸುವ, ಬಟ್ಟೆಗಳು, ಘನ ಪದಾರ್ಥಗಳು, ಮತ್ತು ಹಗ್ಗದ ಬಳಕೆಯಲ್ಲಿ 'ನೈಲಾನ್' ಅತ್ಯಂತ ಜನಪ್ರಿಯವಾಗಿದೆ. 'ಆಟೋಮೊಬೈಲ್ ಟೈರ್' ಗಳು ನೈಲಾನ್ ಬಳಕೆಗೆ ಒಂದು ಉತ್ತಮ ಉದಾಹರಣೆ. ರೇಷ್ಮೆಗಿಂತ ಅಧಿಕ ಬಾಳಕೆಗೆ ಬರುವ, ಮತ್ತು ಅತ್ಯಂತ ಆಕರ್ಶಕ ಬಣ್ಣಗಳಲ್ಲಿ ಲಭ್ಯವಿರುವ ಈ ಫೈಬರ್, ಮನುಕುಲಕ್ಕೆ ಒಂದು ಪ್ರಮುಖ ಕೊಡುಗೆಯಾಗಿದೆ.

NYLON ಪದದ ಉತ್ಪತ್ತಿ

[ಬದಲಾಯಿಸಿ]

ನ್ಯೂಯಾರ್ಕ್(NY-Newyork) ಮತ್ತು ಲಂಡನ್(London) ನಗರಗಳಲ್ಲಿ ಏಕ ಕಾಲದಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯಲ್ಪಟ್ಟದ್ದರಿಂದ ಇವೆರಡೂ ನಗರಗಳ ಹೆಸರಿನ ಪ್ರಥಮ ಅಕ್ಷರಗಳಾದ NY ಮತ್ತು LON ಸೇರಿಸಿ ನೈಲಾನ್ (NYLON) ಎಂದು ಹೆಸರಿಡಲಾಯಿತೆಂದು ವಿವರಣೆ ಸಿಗುತ್ತದಾದರೂ, ಇದನ್ನು ಅಧಿಕೃತವಾಗಿ ಧೃಡೀಕರಿಸುವವರಿಲ್ಲ.

ಬೆಳವಣಿಗೆ

[ಬದಲಾಯಿಸಿ]

ತಮ್ಮ ಮೂಲ ರಾಸಾಯನಿಕ ವಸ್ತುಗಳಲ್ಲಿ ವ್ಯತ್ಯಾಸಗಳಿದ್ದರೂ ಸರ್ವಸಾಧಾರಣವಾಗಿ ಆ ರಾಸಾಯನಿಕ ವಸ್ತುಗಳನ್ನು ಮಂದಗೊಳಿಸಿ ತಯಾರಿಸುವ ಕೆಲವು ಬಗೆಯ ನೈಲಾನ್ ತಂತುಗಳಿವೆ. ಅವುಗಳಿಗೆಲ್ಲ ಪಾಲಿಯಾಮೈಡ್ ತಂತುಗಳೆಂದು ಹೆಸರು. ಮೂಲವಸ್ತುಗಳ ಸಂಯೋಜನ ಕ್ರಮದಲ್ಲಿ ಸಣ್ಣ ಕಣಗಳು ದೊಡ್ಡ ಕಣಗಳಾಗಿ ಹೇಗೆ ಮಾರ್ಪಡುತ್ತವೆ ಎಂಬ ಬಗ್ಗೆ ಡಬ್ಲ್ಯು. ಎಚ್. ಕರೊಥೆರ್ಸ್ ಮತ್ತು ಆತನ ಸಹಾಯಕ ಸಂಶೋಧಕರು ನಡೆಸಿದ ಸಂಶೋಧನೆಗಳ ಫಲವಾಗಿ ಡ್ಯುಪಾಂಟ್ ಕಂಪೆನಿಯವರು ತಯಾರಿಸಿದ ಹೊಚ್ಚ ಹೊಸ ತಂತುಗಳಿಗೆ ಇಟ್ಟ ಹೆಸರು ನೈಲಾನ್. ಈ ದೊಡ್ಡ ಕಣಗಳಿಗೆ ಪಾಲಿಮರುಗಳೆಂದು ಹೆಸರು. ಕೆಲವು ರಾಸಾಯನಿಕ ವಸ್ತುಗಳು ಪ್ರಬಲ ಹಿರಿಯಕಣಗಳಾಗಿ (ಅತಿಪಾಲಿಮರುಗಳು) ಸಂಯೋಗವಾಗಬಲ್ಲುವೆಂದೂ ಅವುಗಳಲ್ಲಿ ಕೆಲವನ್ನು ದಾರವನ್ನಾಗಿ ಎಳೆಯಬಹುದು ಇಲ್ಲವೆ ಹೊರಡಿಸಬಹುದೆಂದೂ ಡ್ಯುಪಾಂಟ್ ರಾಸಾಯನಿಕ ಸಂಶೋಧಕರು ಕಂಡುಹಿಡಿದರು. ಈ ಉದ್ದೇಶಕ್ಕಾಗಿ ಕಲ್ಲಿದ್ದಲು, ವಾಯು ಮತ್ತು ನೀರು ಇವುಗಳಿಂದ ಪಡೆದ ಆಧಾರವಸ್ತುಗಳು ತೃಪ್ತಿಕರವಾಗಿ ಒಟ್ಟುಗೂಡುತ್ತವೆಂದು ಕಂಡುಬಂದಿತು. ಅದರ ಪರಿಣಾಮವಾಗಿ ನೈಲಾನ್ ಸೃಷ್ಟಿಯಾಯಿತು(1938). ಒಂದು ವರ್ಷದ ತರುವಾಯ ಬಟ್ಟೆ ನೂಲಿನಂತೆಯೆ ಅಲ್ಲದೆ ಬಿರುಸು ಎಳೆ ಮತ್ತು ಫಲಕ ರೂಪಗಳಲ್ಲಿ ಹಾಗೂ ತೀರ ಗಟ್ಟಿಯಾದ ಬಲವಾದ ಮತ್ತು ಸ್ಥಿತಿಸ್ಥಾಪಕ ಗುಣವುಳ್ಳ ಇತರ ಪ್ರಕಾರಗಳಲ್ಲಿ ನೈಲಾನ್ ವಾಣಿಜ್ಯ ಸರಕಾಗಿ ತಯಾರಾಗಲು ಪ್ರಾರಂಭವಾಯಿತು(1939). ರಾಷ್ಟ್ರರಕ್ಷಣೆಯ ಉದ್ದೇಶಗಳಿಗಾಗಿ, ವೈಮಾನಿಕರ ಧುಮುಕು ಛತ್ರಿ, ಸಮವಸ್ತ್ರ, ಟೈರುಗಳ ಹುರಿ ಮೊದಲಾದ ವಸ್ತುಗಳ ತಯಾರಿಕೆಗೆ ನೈಲಾನ್ ಉತ್ಪಾದನೆಗಳನ್ನು ಮೀಸಲಿಡಲಾಯಿತು. ಯುದ್ಧ ಮುಗಿದ ತರುವಾಯ ಪುನಃ ಜನರ ಉಪಯೋಗಕ್ಕಾಗಿ ನೈಲಾನ್ ಉತ್ಪಾದನೆ ಪ್ರಾರಂಭವಾಯಿತು. 66 ಮತ್ತು 6 ತರಹೆಗಳ ಎಳೆಗಳನ್ನು ಡ್ಯುಪಾಂಟ್ ಕಂಪೆನಿ ತಯಾರಿಸತೊಡಗಿತು. ಅದರೊಂದಿಗೆ ನೈಲಾನನ್ನು ಒಂದಲ್ಲ ಒಂದು ರೂಪದಲ್ಲಿ ತಯಾರಿಸುವ ಅನೇಕ ಉದ್ಯಮ ಸಂಸ್ಥೆಗಳಿವೆ. ನೈಲಾನ್ ತಯಾರಾಗುತ್ತಿರುವ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಅದಕ್ಕೆ ಕೊಟ್ಟಿರುವ ಪ್ರಸಿದ್ಧ ಹೆಸರುಗಳಿವು: ಜಪಾನ್-ಅಮಿಲಾನ್, ಜರ್ಮನಿ-ಪೆರ್ಲಾನ್,ನೆದರ್ಲೆಂಡ್-ಬಿಟಾಲ್, ಇಟಲಿ, ಬ್ರೆಜಿಲ್ ಮತ್ತು ಫ್ರಾನ್ಸ್-ರಿಲ್ಸಾನ್.

ತಯಾರಿಕೆ

[ಬದಲಾಯಿಸಿ]

ನೈಲಾನ್ ತಯಾರಿಕೆಗೆ ಬೇಕಾದ ಮೂಲ ಕಚ್ಚಾ ಪದಾರ್ಥಗಳು ಹೈಡ್ರೋಕಾರ್ಬನ್ ಸಂಯುಕ್ತ, ಸಾರಜನಕ, ಆಮ್ಲಜನಕ ಮತ್ತು ಜಲಜನಕ. ಕಲ್ಲಿದ್ದಲಿನಿಂದ ಜಲಜನಕ ಮತ್ತು ಆಮ್ಲಜನಕÀಗಳನ್ನೂ ನೀರಿನಿಂದ ಜಲಜನಕವನ್ನೂ ಪಡೆಯಲಾಗುತ್ತದೆ. ಭಾರಿ ಒತ್ತಡದ ಬಲದಿಂದ ಹೈಡ್ರೊಕಾರ್ಬನ್ ಸಂಯುಕ್ತ ಹಾಗೂ ಇತರ ಮಧ್ಯವರ್ತಿಗಳು ಅಡಿಪಿಕ್ ಆಮ್ಲ ಮತ್ತು ಹೆಕ್ಸಮೆಥಿಲಿನ್ ಡಯಮೈನ್‍ಗಳಾಗಿ ರೂಪುಗೊಳ್ಳುತ್ತವೆ. ಹೆಕ್ಸಮೆಥಿಲಿನ್ ಡೈ ಅಮೊನಿಯಂ ಅಡಿಪೇಟ್ ಎಂಬ ಲವಣದ್ರಾವಣವನ್ನು ತಯಾರಿಸಲು ನೀರಿನೊಡನೆ ನಿರ್ದಿಷ್ಟ ಪ್ರಮಾಣಗಳ ಆಮ್ಲ ಮತ್ತು ಡೈಅಮೈನ್ ದ್ರಾವಣವನ್ನು ಸಂಯೋಜಿಸುತ್ತಾರೆ. ತರುವಾಯ ಸಂಯೋಜೀಕರಣ ಅಂದರೆ ಸಣ್ಣ ಸಣ್ಣ ಕಣಗಳನ್ನು ಒಗ್ಗೂಡಿಸುವ ಕ್ರಿಯೆ ಪ್ರಾರಂಭವಾಗುತ್ತದೆ. ಹೀಗೆ ಸಣ್ಣ ಕಣಗಳನ್ನು ಸಂಯೋಜಿಸಲು ನೈಲಾನ್ ಲವಣದ್ರಾವಣವನ್ನು ಉಸಿರುಪಾತ್ರೆಯಲ್ಲಿ ಹಾಯಿಸುತ್ತಾರೆ. ಆ ಉಸಿರುಪಾತ್ರೆಯಲ್ಲಿ ಒತ್ತಡಕ್ಕೆ ಒಳಪಡುವಂತೆ ದ್ರಾವಣಕ್ಕೆ ಕಾವು ಕೊಟ್ಟಾಗ, ಹೊಸ ಹಿರಿಯ ಕಣವಾಗಿ ರೂಪುಗೊಳ್ಳಲು ಡೈಅಮೈನ್ ಕಣ ಮೂಲ ಆಮ್ಲಕಣದೊಂದಿಗೆ ಮಿಲನವಾಗುತ್ತದೆ. ಕಣಗಳ ಸರಣಿಯಾಗಲು, ಅಂದರೆ ಹಿರಿಯ ಕಣವಾಗಿ ಸಂಯೋಗವಾಗಲು ಈ ಕಣಗಳು ಇದೇ ರೀತಿ ರಚಿತವಾದ ಇತರ ಕಣಗಳೊಂದಿಗೆ ಸೇರಿಕೊಳ್ಳುತ್ತವೆ. ಈ ಸಂಯೋಗದಿಂದ ಹಿರಿಯ ಕಣ ಅಶುದ್ಧಾವಸ್ಥೆಯಲ್ಲೆ ಉಸಿರುಪಾತ್ರೆಯ ತಳದ ಸೀಳುಕಂಡಿಯಿಂದ ಹೊರಬರುತ್ತದೆ. ಅದನ್ನು ನೀರಿನಿಂದ ತಂಪಾಗುವ ತಿರುಗುಚಕ್ರದ ಮೇಲೆ ಇರಿಸುತ್ತಾರೆ. ಆಗ ಅದು ದಂತವರ್ಣದ ಪಟ್ಟಿಯ ಆಕಾರದಲ್ಲಿ ಗಟ್ಟಿಯಾಗುತ್ತದೆ. ಅದನ್ನು ಚೂರುಗಳಾಗಿ ಇಲ್ಲವೆ ಉಣ್ಣೆ ಎಳೆಯಂಥ ಪೊರೆಗಳನ್ನಾಗಿ ಕತ್ತರಿಸುತ್ತಾರೆ. ತರುವಾಯ ನೈಲಾನ್ ಪೊರೆಗಳನ್ನು ಕರಗಿಸಿ, ಕರಗಿಸಿ-ನೂಲು-ತೆಗೆಯುವ ವಿಧಾನದಲ್ಲಿ (ಮೆಲ್ಟ್‍ಸ್ಪಿನ್ನಿಂಗ್) ಕಿರುರಾಟೆಯ ಮೂಲಕ ಹೊರಡಿಸುತ್ತಾರೆ. ಕಿರುರಾಟೆಯ ರಂಧ್ರಗಳಿಂದ ಪ್ರವಹಿಸುವ ನೈಲಾನ್ ಸೂಕ್ಷ್ಮಪಟ್ಟಿಗಳು ತಂಪಾಗಿ ಕೂಡಲೆ ಫನೀಕೃತ ತಂತುಗಳಾಗುತ್ತವೆ. ಈ ಹಂತದಲ್ಲಿ ಮತ್ತೊಂದು ಹೊಸ ಮತ್ತು ಸ್ವಾರಸ್ಯವಾದ ಕ್ರಿಯೆ ನಡೆಯುತ್ತದೆ: ಹೀಗೆ ಉತ್ಪನ್ನವಾದ ನವಿರೆಳೆಗಳು ಮತ್ತು ತಂತುಗಳು ಬಟ್ಟೆ ತಯಾರಿಕೆಗಾಗಿ ಬಳಸುವಷ್ಟು ತೃಪ್ತಿಕರವಾಗಿರುವುದಿಲ್ಲ. ಆದ್ದರಿಂದ ಹಸಿಯಾಗಿ ತೆಗೆಯುವ ವಿಧಾನವೆಂಬ ಕ್ರಮದಲ್ಲಿ ಅವನ್ನು ಮೊದಲ ಉದ್ದಕ್ಕಿಂತಲೂ 3-4 ಪಟ್ಟು ಉದ್ದಕ್ಕೆ ವಿಸ್ತರಿಸುತ್ತಾರೆ. ಈ ಪ್ರಕಾರವಾದ ಲಂಬನೆಯಿಂದ ಅವುಗಳ ಬಲ ಮತ್ತು ಸ್ಥಿತಿಸ್ಥಾಪಕತ್ವ ಉತ್ತಮವಾಗುವುವು. ನೈಲಾನನ್ನು ನವಿರೆಳೆ ಮತ್ತು ತಂತು ರೂಪಗಳಲ್ಲಿ ತಯಾರಿಸುತ್ತಾರೆ. ನೂಲುವ ದ್ರಾವಣದಲ್ಲಿ ಟಿಟಾನಿಯಂ ಡೈಆಕ್ಸೈಡ್ ಮಾದರಿಯ ಹೊಳಪಿಲ್ಲದ ದ್ರವ್ಯವನ್ನು ಸೇರಿಸಿ ಅದರ ಕಾಂತಿಯನ್ನು ಕುಂದಿಸಬಹುದು. ಇದೇ ರೀತಿ ವರ್ಣದ್ರವ್ಯ ಸೇರಿಸಿ ಬಣ್ಣದ ನೈಲಾನ್ ತಯಾರಿಸಬಹುದು.

ವೈಶಿಷ್ಟ್ಯಗಳು

[ಬದಲಾಯಿಸಿ]

ಬಟ್ಟೆ ತಯಾರಿಕೆಯಲ್ಲಿ ಉಪಯೋಗಿಸುವ ಇತರ ಯಾವುದೇ ದಾರಗಳಿಗಿಂತ ನೈಲಾನ್ ತಂತುಗಳು ಗಟ್ಟಿಯಾದವು. ಅವುಗಳ ಶುಷ್ಕ ಸಾಮಥ್ರ್ಯ ಅಧಿಕ. ತೇವಸಾಮಥ್ರ್ಯ ಕೇವಲ 15%. ತೂಕದಲ್ಲಿ ಹಗುರ ಹಾಗೂ ಅವುಗಳ ಘರ್ಷಣ ನಿರೋಧಶಕ್ತಿ ಉಣ್ಣೆಗಿಂತಲೂ ಸುಮಾರು ಮೂರು ಪಟ್ಟು ಹೆಚ್ಚು. ನೈಲಾನ್ ಬಹಳ ಸುಲಭವಾಗಿ ಎಳೆದು ಮತ್ತೆ ಪೂರ್ವಸ್ಥಿತಿಗೆ ತರಬಹುದಾದ ಸ್ಥಿತಿಸ್ಥಾಪಕ ಗುಣವುಳ್ಳ ವಸ್ತು. ತಂತುಗಳು ನುಣುಪಾಗಿಯೂ ರಂಧ್ರವಿಹೀನವಾಗಿಯೂ ಇರುವುದರಿಂದ ಬೇಗ ಕೊಳೆಯಾಗುವುದಿಲ್ಲ. ನೈಲಾನ್ ತೇವವನ್ನು ಹೀರುವುದಿಲ್ಲವಾದ್ದರಿಂದ ಬೇಗ ಒಣಗುತ್ತದೆ. ಜಲನಿರೋಧಗುಣ ಇರುವುದರಿಂದ ನೈಲಾನ್ ಬಟ್ಟೆ ಬೇಸಗೆಯಲ್ಲಿ ತೊಡಲು ಹಿತವಲ್ಲ. ಕೃತಕ ಎಳೆಗಳಂತೆ ನೈಲಾನ್ ಎಳೆಗಳಿಗೂ ವಿಸ್ತರಣಶಕ್ತಿಯನ್ನು ಕೊಡಬಹುದು. ಕ್ಷಾರಗಳನ್ನು ನೈಲಾನ್ ಬಹಳ ಚೆನ್ನಾಗಿ ತಡೆಯುತ್ತದೆ. ಆದರೆ ಸಲ್ಫೂರಿಕ್ ಆಮ್ಲದಲ್ಲಿ ಕರಗಿಹೋಗುತ್ತದೆ. ತೀಕ್ಷ್ಣ ಬಿಸಿಲಿಗೆ ಇಲ್ಲವೆ ಸಾಮಾನ್ಯ ಬೆಳಕಿಗೆ ದೀರ್ಘಕಾಲ ಬಿಟ್ಟರೆ ಸಾಮಾನ್ಯದರ್ಜೆಯ ನೈಲಾನ್ ಹಾಳಾಗುತ್ತದೆ. ನೈಲಾನ್ ಬಟ್ಟೆಗೆ ಬೂಷ್ಟು ಹಿಡಿಯುವುದಿಲ್ಲ; ಕೀಟಗಳಿಂದ ಅಥವಾ ಬೆಳ್ಳಿಹುಳುಗಳಿಂದ ಅದು ನಾಶವಾಗುವುದಿಲ್ಲ. ಅದನ್ನು ಕನಿಷ್ಠ ಉಷ್ಣತೆಗಳಲ್ಲಿ ಮಾತ್ರ ಇಸ್ತ್ರಿ ಮಾಡಬೇಕು. ನೈಲಾನನ್ನು ಬಿಡಿತಂತುಗಳನ್ನಾಗಿ ಮತ್ತು ಹಲವಾರು ಎಳೆಗಳಿಂದ ಕೂಡಿದ ತಂತುಗಳನ್ನಾಗಿ ತಯಾರಿಸುತ್ತಾರೆ. ಅಲ್ಲದೆ ಪ್ರಸಾರಬಲ, ಬಾಳಿಕೆ ಇತ್ಯಾದಿಗಳ ಸಾಧ್ಯತೆಗೆ ರೇಷ್ಮೆಯಂಥ ಹುರಿಮಾಡಿದ ದಾರವನ್ನಾಗಿಯೂ ಅನೇಕ ಎಳೆಗಳ ತಂತುಗಳನ್ನಾಗಿಯೂ ತಯಾರಿಸುತ್ತಾರೆ. ಸೂಕ್ತ ಉದ್ದಳತೆಗಳಿಗೆ ಕತ್ತರಿಸಿದ ನೈಲಾನ್ ನವಿರೆಳೆಗಳನ್ನು ಹತ್ತಿ, ಉಣ್ಣೆ, ರೇಷ್ಮೆ ಅಥವಾ ಮತ್ತಿತರ ತಂತುಗಳೊಂದಿಗೆ ಸೇರಿಸಿ ನೂಲುವುದುಂಟು. ಛಿದ್ರವಾಗದಂತೆ ನೈಲಾನ್ ಬಟ್ಟೆಯನ್ನು ಸೋಡಿಯಂ ಕ್ಲೋರೇಟ್‍ನಿಂದ ಸುರಕ್ಷಿತವಾಗಿ ಬಿಳಿಚಿಸಬಹುದು. ಸಾಮಾನ್ಯವಾಗಿ ನೈಲಾನಿಗೆ ಪ್ರಾಸಾರಿಕ ವರ್ಣಗಳನ್ನು ಉಪಯೋಗಿಸಿ ಬಣ್ಣ ಕಟ್ಟುತ್ತಾರೆ. ಆರಿಸಿದ ಆಮ್ಲವರ್ಣಗಳನ್ನು ಸಹ ಬಣ್ಣಕಟ್ಟಲು ಉಪಯೋಗಿಸಬಹುದು.

ಉಪಯೋಗಗಳು

[ಬದಲಾಯಿಸಿ]

ನೈಲಾನ್ ತನ್ನ ಬಿಗುಲಕ್ಷಣದಿಂದ ವೈಮಾನಿಕರ ಧುಮುಕುಛತ್ರಿ ಬಟ್ಟೆ, ಹುರಿ, ಕುದುರೆ ಮೊದಲಾದ ಭಾರಹೊರುವ ಪ್ರಾಣಿಗಳ ಸರಂಜಾಮು-ಇವುಗಳ ತಯಾರಿಕೆಯಲ್ಲಿ ಬಹು ಮುಖ್ಯವಸ್ತುವಾಗಿದೆ. ಬಾಳಿಕೆ ಮತ್ತು ಬಲದ ದೃಷ್ಟಿಯಿಂದ ನೈಲಾನ್ ಯಂತ್ರವಹನ ಪಟ್ಟಿಗಳ ತಯಾರಿಕೆಗೆ ಯೋಗ್ಯವಾಗಿದೆ. ನೈಲಾನಿನ ಬಹುಮುಖತೆ ಅದರಲ್ಲೂ ತಂತುಗಳ ಮಿಶ್ರಣದಲ್ಲಿ ಅದರ ಪಾತ್ರ ಅಮಿತವಾದದ್ದು. ಸ್ಥಿರವಿದ್ಯುಚ್ಛಕ್ತಿ(ಸ್ಟ್ಯಾಟಿಕ್ ಎಲೆಕ್ಟ್ರಿಸಿಟಿ), ಬಿಳಿನೈಲಾನ್ ಕಂದುಬಣ್ಣಕ್ಕೆ ತಿರುಗುವುದು ಮತ್ತು ಬಟ್ಟೆಯ ಮೇಲೆ ಸುರುಳಿಗಟ್ಟುವುದು ಇವು ನೈಲಾನಿನ ಹಲವು ಕೊರತೆಗಳು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

For historical perspectives on nylon, see the Documents List of "The Stocking Story: You Be The Historian" Archived 2014-02-12 ವೇಬ್ಯಾಕ್ ಮೆಷಿನ್ ನಲ್ಲಿ. at the Smithsonian website, by The Lemelson Center for the Study of Invention and Innovation, National Museum of American History, Smithsonian Institution.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನೈಲಾನ್&oldid=1056226" ಇಂದ ಪಡೆಯಲ್ಪಟ್ಟಿದೆ