ಸಿ ಎನ್ ಮಂಜಪ್ಪ
ಕನ್ನಡದಲ್ಲಿ ಕಾನೂನು ಶಿಕ್ಷಣ - ಸಿ ಎನ್ ಮಂಜಪ್ಪನವರ ಕಾಣಿಕೆಗಳು
[ಬದಲಾಯಿಸಿ]"ಆಡಳಿತದಲ್ಲಿ ಕನ್ನಡ" ಈ ಕೂಗು ಬಹಳ ಕಾಲದಿಂದಲೂ ಇದೆ. ಆದರೆ ಅದಕ್ಕೆ ಬೇಕಾದ ತಯಾರಿಯ ಬಗ್ಗೆ ಮಾತ್ರ ನಮ್ಮ ಧೋರಣೆ ಬೇರೆ. ಪ್ರಾಥಮಿಕ ಹಂತದಿಂದಇಂಗ್ಲಿಷ್ ಬೇಕೇ ಬೇಕು ಅಂತಲೂ ಅನ್ನುವವರು ನಾವೆ. ಇಂಗ್ಲಿಷಿನ ಬುನಾದಿಯ ಮೇಲೆ ಕನ್ನಡದರಮನೆ ಕಟ್ಟಲು ಸಾಧ್ಯವೇ? ಕನ್ನಡ ಕಲಿಕೆ ಇಲ್ಲದೆ ಕನ್ನಡದಾಡಳಿತ ಎಂತು?
ಪ್ರಾಥಮಿಕ ಹಂತವೊಂದೇ ಅಲ್ಲ. ಉನ್ನತ ಶಿಕ್ಷಣಕ್ಕೂ ಕನ್ನಡವನ್ನೇ ಬಳಸಬೇಕು. ಆಗ ರಾಜ್ಯಾಡಳಿತದಲ್ಲಿ ಕನ್ನಡಬಂದೀತು. ಆದರೆ ಕನ್ನಡದಲ್ಲಿ ಪಠ್ಯಪುಸ್ತಕಗಳೆಲ್ಲಿವೆ? ವೈದ್ಯಕೀಯ, ತಾಂತ್ರಿಕ ಶಿಕ್ಷಣ ಹಾಗಿರಲಿ, ಕಾನೂನು ಶಿಕ್ಷಣಕ್ಕೂ ಸಹ ಉತ್ತಮ ಪಠ್ಯಪುಸ್ತಗಳು ಬಹು ಕಡಿಮೆ. ಈ ಹಿನ್ನೆಲೆಯಲ್ಲಿ ಮಾನ್ಯ ಮಂಜಪ್ಪನವರ ಕಾನೂನು ಕುರಿತಾದ ಕನ್ನಡಪುಸ್ತಕಗಳು ಶ್ಲಾಘನೀಯವೆನ್ನಿಸಿಕೊಳ್ಳುತ್ತವೆ.
ಸಿ.ಎನ್. ಮಂಜಪ್ಪನವರು ತಮ್ಮ ಎಲ್.ಎಲ್.ಎಂ. ಪದವಿಯ ನಂತರ ೧೫ ವರ್ಷಗಳಿಂದ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಚಿಂತನೆಗಳನ್ನು ಮೈಗೂಡಿಸಿಕೊಂಡು ಸದಾ ಚಟುವಟಿಕೆಯಲ್ಲಿರುವ ಇವರು ಕಾನೂನು ಶಿಕ್ಷಣ ಹೇಗಿರಬೇಕು, ಜನಸಾಮಾನ್ಯರಿಗೆ ಕಾನೂನು ತಿಳುವಳಿಕೆ ಉಂಟಾಗಲು ಏನೇನು ಮಾಡಬಹುದು ಎಂಬುದರ ಬಗ್ಗೆ ಪ್ರಯೋಗಾತ್ಮಕ ಯೋಜನೆ ರೂಪಿಸಿದ್ದಾರೆ.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿವಿಧ ಪಂಚಾಯತಿಗಳು, ಕರ್ನಾಟಕ ಪಂಚಾಯತ್ ಕಾಯ್ದೆ ೧೯೯೩ ರ ಅಡಿಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕೆಂದು ಸುಲಭ ಶೈಲಿಯಲ್ಲಿ ಪುಸ್ತಕ ರಚಿಸಿದ್ದಾರೆ. ಈ ಪುಸ್ತಕವನ್ನು ಕಾನೂನು ಸೇವಾ ಪ್ರಾಧಿಕಾರ ಮತ್ತು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ಪ್ರಕಟಿಸಿವೆ.
ಇವರ ಇತರ ಪುಸ್ತಕಗಳ ಪರಿಚಯ:
ಮಾಹಿತಿ ಹಕ್ಕು ಅಧಿನಿಯಮ ೨೦೦೫ - ಟೀಕೆ, ಟಿಪ್ಪಣಿ(Right to Information Act 2005: Comments- along with all related circulars) ಪ್ರಕಾಶಕರು: ಸಿರಿ ಸವಿ ಕಾನೂನು ಪುಸ್ತಕ ಪ್ರಕಾಶನ (ದೂರವಾಣಿ: ೯೮೪೫೧೮೯೨೧೨) ಪುಟ: ೩೨೦ ಬೆಲೆ: ರೂ. ೨೨೫
ಪಂಚಾಯತ್ ರಾಜ್ ಕೈಪಿಡಿ (ಕಾನೂನು, ನಿಯಮ, ಟಿಪ್ಪಣಿ, ಪ್ರಶ್ನೋತ್ತರ) (Panchaayat Raaj - Act, Rules, Comments and FAQs) ಪ್ರಕಾಶಕರು: ಕರ್ನಾಟಕ ಪಂಚಾಯತ್ ಪರಿಷತ್, ಶೇಷಾದ್ರಿಪುರಂ, ಬೆಂಗಳೂರು ಪುಟ: ೧೯೨ ಬೆಲೆ: ರೂ. ೧೦೦
ಕಂಪನಿ ಕಾನೂನು(Companies Act 1956) ಸಹ ಲೇಖನ: ಶ್ರೀ ಎಂ ಎನ್ ಭೀಮೇಶ್, ಉಪನ್ಯಾಸಕರು, ಜೆ ಎಸ್ ಎಸ್ ಕಾನೂನು ಕಾಲೇಜು, ಮೈಸೂರು ಪ್ರಕಾಶಕರು: ಪ್ರಭೋಧ ಪಬ್ಲಿಕೇಶನ್ಸ್, ಮೈಸೂರು (ದೂರವಾಣಿ:೦೮೨೧-೨೫೨೪೩೫೪) ಪುಟ:೫೦೧ ಬೆಲೆ: ರೂ. ೨೭೦
ಬರಲಿರುವ ಪುಸ್ತಕಗಳು: ಕೌಟುಂಬಿಕ ಕಾನೂನುಗಳು, ಅಪರಾಧ ಕಾನೂನು ಪ್ರಕ್ರಿಯೆ
ಸಿ. ಎನ್. ಮಂಜಪ್ಪನವರಿಂದ ಇನ್ನಷ್ಟು ಪುಸ್ತಕಗಳಂತೂ ಖಂಡಿತ ಹೊರಬರಲೆಂದು ನಮ್ಮ ಹಾರೈಕೆ. ಜೊತೆಗೆ ಕನ್ನಡದಲ್ಲಿ ಕಾನೂನು ಓದುಗರು ಹಾಗೂ ಬಳಸುವವರು ಹೆಚ್ಚಾದಲ್ಲಿ ಮಾತ್ರ ನಮ್ಮೆಲ್ಲರ ಬಯಕೆಯಾದ "ಎಲ್ಲೆಲ್ಲೂ ಕನ್ನಡ" ಸಾಕಾರವಾದೀತು.