ಎ ಎಂ ಜೋಸೆಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎ ಎಂ ಜೋಸೆಫರ ಪೂರ್ಣ ಹೆಸರು ಅಲೋಶಿಯಸ್ ಮರಿಯ ಜೋಸೆಫ್. ಇವರ ಹುಟ್ಟೂರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿ. ಇವರ ತಂದೆ ಕೃಷ್ಣಪ್ಪಯ್ಯರ್ರವರು ಕಳೆದ ಶತಮಾನದಲ್ಲಿ ಮೂಡಲದಾಸಾಪುರದ ಕ್ರೈಸ್ತ ಶಾಲೆಯಲ್ಲಿ ವಿದ್ಯಾಗುರುವಾಗಿದ್ದಾಗ (೧೮೫೬?) ಕ್ರೈಸ್ತತತ್ವಗಳಿಗೆ ಮಾರುಹೋಗಿ ಕ್ರೈಸ್ತ ಧರ್ಮಕ್ಕೆ ಶರಣಾದರು. ಹೀಗೆ ಕೃಷ್ಣಪ್ಪ ಅಯ್ಯನವರು ಚೌರಣ್ಣನಾಗಿ ದಾಸಾಪುರದವರೇ ಆದ ಸ್ವಾಮಿ ಶಾಂತಪ್ಪನವರ ಮಾರ್ಗದರ್ಶನದಿಂದ ಉನ್ನತ ಶಿಕ್ಷಣ ಪಡೆದು ಶೆಟ್ಟಿಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾದರು. ಕ್ರೈಸ್ತ ಧರ್ಮಾವಲಂಬಿಯಾದ ಕಾರಣ ತಂದೆತಾಯಿಯರಿಂದ ದೂರವಾದ ಚೌರಣ್ಣನವರು ಬೆಂಗಳೂರಿನ ಗುಡ್ಷೆಫರ್ಡ್ ಕನ್ಯಾಮಠದಲ್ಲಿದ್ದ ಅನಾಥ ಹುಡುಗಿಯನ್ನು ಮದುವೆಯಾಗಿ ನಾಲ್ಕು ಮಕ್ಕಳನ್ನು ಪಡೆದರು. ಆ ಮಕ್ಕಳಲ್ಲಿ ಎರಡನೆಯವರೇ ಎ ಎಂ ಜೋಸೆಫ್. ಜೋಸೆಫರಿಗೆ ಸುಮಾರು ಹತ್ತು ವರ್ಷ ವಯಸ್ಸಾಗಿದ್ದಾಗ (೧೯೦೦?) ನಮ್ಮ ನಾಡಿನಾದ್ಯಂತ ವ್ಯಾಪಿಸಿದ್ದ ಪ್ಲೇಗ್ ರೋಗಕ್ಕೆ ಚೌರಣ್ಣ ದಂಪತಿ ಬಲಿಯಾದರು. ಆಗ ನಾಡಿನಲ್ಲಿ ಅಪಾರ ಸಾವುನೋವು, ಅಸಂಖ್ಯಾತ ಮಕ್ಕಳು ಅನಾಥರು. ಕನಕಪುರ ರಸ್ತೆಯ ತಟ್ಟುಗುಪ್ಪೆ ಬಳಿಯಲ್ಲಿದ್ದ ಮರಿಯಾಪುರ ಅನಾಥಾಶ್ರಮದಲ್ಲಿ ಜೋಸೆಫರು ಅವರ ಅಣ್ಣ ಎ ಎಂ ಬೆರ್ನಾರ್ಡರೊಂದಿಗೆ ಆಶ್ರಯ ಪಡೆದರು. ಸೋದರರಿಬ್ಬರೂ ಫ್ರೆಂಚ್ ಪಾದ್ರಿಗಳ ಮಾರ್ಗದರ್ಶನದಲ್ಲಿ ಕ್ರೈಸ್ತ ಧರ್ಮೋಪದೇಶವನ್ನೂ ಪ್ರಾಥಮಿಕ ವಿದ್ಯಾಭ್ಯಾಸವನ್ನೂ ಪಡೆದರು. ಬೆಂಗಳೂರು ನಗರದಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿ ಸಂತ ಅಲೋಶಿಯಸ್ ಶಾಲೆಯಲ್ಲಿ ಶಿಕ್ಷಕ ವೃತ್ತಿ ಕೈಗೊಂಡರು. ಅವರು ಪ್ರತಿಭಾವಂತರಾಗಿದ್ದರೂ ಫ್ರೆಂಚ್ ಪಾದ್ರಿಗಳು ನೀಡುತ್ತಿದ್ದ ಕಾಲೇಜು ಶಿಕ್ಷಣದಿಂದ ಏಕೆ ವಂಚಿತರಾದರು ಎಂಬುದು ತಿಳಿದುಬಂದಿಲ್ಲ. ಸಾಂಪ್ರದಾಯಿಕ ಕಾಲೇಜು ಶಿಕ್ಷಣ ಪಡೆಯದಿದ್ದರೂ ವಿಪರೀತ ಜ್ಞಾನದಾಹಿಯಾಗಿದ್ದ ಜೋಸೆಫರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ಅಭ್ಯಸಿಸಿ ತಮ್ಮ ಜ್ಞಾನತೃಷೆಯನ್ನು ತಣಿಸಿಕೊಂಡರು. ಈ ನಡುವೆ ಕ್ರೈಸ್ತ ಶಿಕ್ಷಣಸಂಸ್ಥೆಯಲ್ಲಿನ ತಮ್ಮ ವೃತ್ತಿಗೆ ರಾಜಿನಾಮೆ ಕೊಟ್ಟು ಬೆಂಗಳೂರು ನಗರಸಭಾ ಕಚೇರಿಯಲ್ಲಿ ಬೆರಳಚ್ಚುಗಾರ ವೃತ್ತಿ ಪ್ರಾರಂಭಿಸಿದರು. ತಮ್ಮ ಮೂವತ್ತನೇ ವಯಸ್ಸಿನಲ್ಲಿ ಜೋಸೆಫರು ಮರಿಯಾಪುರದ ಉಪದೇಶಿ ಮರಿಯಪ್ಪನವರ ಮಗಳು ಜೋಸ್ಫಿನಾರನ್ನು ಮದುವೆಯಾದರು. ಹೀಗೆ ತಮ್ಮ ವೃತ್ತಿಜೀವನದಲ್ಲೂ ಸಾಂಸಾರಿಕ ಜೀವನದಲ್ಲೂ ತೃಪ್ತಿ ಕಂಡ ಜೋಸೆಫರು ಲೇಖನಿ ಹಿಡಿದು ಬರಹದಲ್ಲೂ ತೃಪ್ತಿ ಕಾಣಲೆಳಸಿದರು. ಮೊದಮೊದಲು ಅಣ್ಣ ಬೆರ್ನಾರ್ಡರೊಂದಿಗೆ ಪುಸ್ತಕ ಬರೆದು ಒಟ್ಟಿಗೆ ಪ್ರಕಟಿಸುತ್ತಿದ್ದ ಅವರು ನಂತರ ಸ್ವತಂತ್ರವಾಗಿ ಪುಸ್ತಕಗಳನ್ನು ಪ್ರಕಟಿಸತೊಡಗಿದರು. ಅವರ ಅಣ್ಣ ಬೆರ್ನಾರ್ಡರೂ ಮೌಲಿಕವಾದ ಕೃತಿಗಳನ್ನು ರಚಿಸಿರುವರಾದರೂ ವೈವಿಧ್ಯತೆಯ ದೃಷ್ಟಿಯಿಂದ ನೋಡಿದರೆ ಜೋಸೆಫರದೇ ಮೇಲುಗೈ. ಅವರು ಬರೆದ 'ಫಬಿಯೋಲೆ' ಕೃತಿಯಂತೂ ಕನ್ನಡ ಕ್ರೈಸ್ತರ ಮನೆಗಳಲ್ಲಿ ಅಮರವಾಗಿದೆ. ೧೯೨೯ರಲ್ಲಿ ಈ ಕೃತಿಗೆ ಮೈಸೂರರಸರು ದೇವರಾಜ ಬಹದ್ದೂರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ತಮಿಳಿನಲ್ಲಿ ಪ್ರಚಲಿತವಾಗಿದ್ದ ಪವಿತ್ರಬೈಬಲ್ ಗ್ರಂಥವನ್ನು ಕನ್ನಡಕ್ಕೆ ತರುವ ಆಸಕ್ತಿಯಿಂದ ತರ್ಜುಮೆಗೆ ತೊಡಗಿದ ಅವರ ಸಾಹಸವನ್ನು ಮೆಚ್ಚಬೇಕಾದ್ದೇ. ಆದರೆ ಅದನ್ನು ಅವರು ಪ್ರಕಟಿಸಲಾಗದ ಕಾರಣ ತಿಳಿಯದು. ೧೯೬೦ರ ದಶಕದಲ್ಲಿ ಹೊರಬಂದ ಶುಭಸಂದೇಶಗಳ ಕಥೋಲಿಕ ಆವೃತ್ತಿಯಲ್ಲಿ ಎ ಎಂ ಜೋಸೆಫರ ಹಸ್ತಪ್ರತಿಯನ್ನು ಬಳಸಿಕೊಂಡಿರುವ ಬಗ್ಗೆ ಉಲ್ಲೇಖವಿದೆ. ಪುಸ್ತಕಗಳನ್ನು ಹೆಗಲ ಚೀಲದಲ್ಲಿ ಹೊತ್ತು ಹಳ್ಳಿಹಳ್ಳಿಗೆ ಸಾಗಿ ಮಾರಾಟ ಮಾಡುತ್ತಿದ್ದರೆಂದು ಅವರನ್ನು ಕಂಡಿದ್ದ ಹಿರಿಯ ವೃದ್ಧರು ಹೇಳುತ್ತಾರೆ. ೧೮-೮-೦೯೬೫ ರಲ್ಲಿ ತೀರಿಕೊಂಡ ಎ ಎಂ ಜೋಸೆಫರು ಕ್ರೈಸ್ತ ಧರ್ಮಸಭೆಯಿಂದ ಯಾವ ಘನಮಾನ ಗೌರವವನ್ನು ಪಡೆಯದೆ ಮಣ್ಣಲ್ಲಿ ಮಣ್ಣಾಗಿ ಹೋದರು. ಆದರೆ ಕನ್ನಡ ಕಥೋಲಿಕ ಸಾಹಿತ್ಯೇತಿಹಾಸದಲ್ಲಿ ಎ ಎಂ ಜೋಸೆಫರದು ಮರೆಯಲಾಗದ ಸಾಧನೆ.