ಧವಳಗಿರಿ
ಧವಳಗಿರಿ ಪರ್ವತವು ೮೧೬೭ ಮೀ. ( ೨೬೭೯೫ ಅಡಿ) ಎತ್ತರವಿದ್ದು ವಿಶ್ವದ ೭ನೆಯ ಅತ್ಯುನ್ನತ ಶಿಖರವಾಗಿದೆ. ಹಿಮಾಲಯ ಪರ್ವತಶ್ರೇಣಿಯ ಉಪಸರಣಿಯಾದ ಧವಳಗಿರಿ ಹಿಮಾಲ್ ನ ಪೂರ್ವದಂಚಿನಲ್ಲಿ ನೇಪಾಳದ ಉತ್ತರಮಧ್ಯಭಾಗದಲ್ಲಿ ಈ ಪರ್ವತವಿದೆ. ಕಾಳಿ ಗಂಡಕಿಯ ಆಳವಾದ ಕೊಳ್ಳದ ಒಂದು ಮಗ್ಗುಲಲ್ಲಿರುವ ಧವಳಗಿರಿಯು ಕೊಳ್ಳದ ಇನ್ನೊಂದು ಮಗ್ಗುಲಲ್ಲಿರುವ ಅನ್ನಪೂರ್ಣಾ ಪರ್ವತಕ್ಕೆ ಹೊಂದಿರುವಂತೆ ಕಾಣುತ್ತದೆ. ಹೀಗೆ ೮೦೦೦ ಮೀ. ಗಳಿಗೂ ಎತ್ತರವಾಗಿರುವ ಎರಡು ಪರ್ವತಗಳು ಒಂದಕ್ಕೊಂದು ಅಂಟಿದಂತೆ ಕಾಣುವ ನೋಟ ಜಗತ್ತಿನಲ್ಲಿಯೇ ಅದ್ವಿತೀಯ ಮತ್ತು ಅದ್ಭುತ. ಧವಳಗಿರಿ ಎಂಬ ಹೆಸರಿನ ಅರ್ಥ ಶ್ವೇತಪರ್ವತ ಎಂಬುದಾಗಿದೆ. ೧೮೦೮ರಲ್ಲಿ ಗುರುತಿಸಲ್ಪಟ್ಟ ಈ ಶಿಖರವು ಬಹುಕಾಲದವರೆಗೆ ಜಗತ್ತಿನ ಅತಿ ಎತ್ತರದ ಶಿಖರವೆಂದು ನಂಬಲಾಗಿತ್ತು. ಕಾಳಿ ಗಂಡಕಿ ಕೊಳ್ಳದಿಂದ ಹಠಾತ್ತಾಗಿ ಮೇಲೆದ್ದು ನಿಂತಿರುವಂತೆ ಕಾಣುವ ಧವಳಗಿರಿಯ ಮೈ ಬಲು ಕಡಿದಾಗಿದ್ದು ಹಲವು ಕಡೆ ಅತಿ ತೀವ್ರ ಇಳಿಜಾರು ಹೊಂದಿದೆ. ೧೯೬೦ರ ಮೇ ೧೩ರಂದು ಸ್ವಿಸ್-ಆಸ್ಟ್ರಿಯಾ ಪರ್ವತಾರೋಹಿ ತಂಡದ ೬ ಮಂದಿ ಈ ಶಿಖರವನ್ನು ಮೊಟ್ಟಮೊದಲ ಬಾರಿಗೆ ತಲುಪುವಲ್ಲಿ ಯಶಸ್ವಿಯಾದರು.
ಬಾಹ್ಯ ಸಂಪರ್ಕಕೊಂಡಿಗಳು
[ಬದಲಾಯಿಸಿ]- Dhaulagiri on Peakware Archived 2010-01-02 ವೇಬ್ಯಾಕ್ ಮೆಷಿನ್ ನಲ್ಲಿ.
- Dhaulagiri on summitpost.org (Detailed description of trekking and of first ascent)
- Himalayan Index