ಮಂತ್ರಾಲಯ
ಮಂತ್ರಾಲಯ
ಮಂತ್ರಾಲಯ | |
---|---|
Website | www.mantralayam.com |
ಮಂತ್ರಾಲಯವು ಆಂಧ್ರ ಪ್ರದೇಶ ದಲ್ಲಿ ಕರ್ನೂಲು ಜಿಲ್ಲೆಯ ಮಂತ್ರಾಲಯ| ತಾಲ್ಲೂಕಿನ ಒಂದು ಊರು. ಶ್ರೀ ರಾಘವೇಂದ್ರ ಸ್ವಾಮಿ ರವರ ನೆಲೆವೀಡಾಗಿದ್ದರಿಂದ ಪ್ರಖ್ಯಾತಿಗೊಂಡ ಸ್ಥಳ. ತುಂಗಭದ್ರಾ ನದಿಯ ದಂಡೆಯಲ್ಲಿದೆ
ಪೌರಾಣಿಕ ಹಿನ್ನೆಲೆ
[ಬದಲಾಯಿಸಿ]ಮೊದಲು ಇದಕ್ಕೆ ಮಂಚಾಲೆ ಎಂಬ ಹೆಸರಿತ್ತು. ಬಹುಶಃ ಇಲ್ಲಿಯ ಅಧಿದೇವತೆ ಮಂಚಾಲಾಂಬಿಕೆ (ಮಂತ್ರಾಲಯಾಂಬಿಕೆ) ಯಾದ್ದರಿಂದ ಈ ಹೆಸರು ಬಂದಿರಬಹುದು. ಈ ಪ್ರದೇಶ ಹಿಂದೆ ಹಿರಣ್ಯಕಶಿಪುವಿನ ರಾಜ್ಯವಾಗಿತ್ತೆಂದೂ ಇಲ್ಲಿರುವ ಮಂಚಾಲಾಂಬಿಕೆ (ಭವಾನಿಯ ಮತ್ತೂಂದು ಹೆಸರು) ಆತನ ಕುಲದೇವತೆಯಾಗಿದ್ದಳೆಂದೂ ಪ್ರಹ್ಲಾದ ಇಲ್ಲಿ ತನ್ನ ಕುಲದೇವತೆಯನ್ನು ಪೂಜಿಸುತ್ತ ಯಜ್ಞ ನಡೆಸಿದನೆಂದೂ ಹೇಳಲಾಗಿದೆ.
ದ್ವಾಪರಯುಗದಲ್ಲಿ ಪಾಂಡವರು ಅಶ್ವಮೇಧಯಾಗ ಮಾಡುವಾಗ ಚೈತ್ರಯಾತ್ರೆ ಸಮಯದಲ್ಲಿ ಅರ್ಜುನನಿಗೂ ಅನುಸಾಲ್ವನಿಗೂ ಇದೇ ಸ್ಥಳದಲ್ಲಿ ಯುದ್ಧ ನಡೆಯಿತೆಂದೂ ಆಗ ಅನುಸಾಲ್ವನ ರಥ ಪ್ರಹ್ಲಾದ ಯಜ್ಞ ಮಾಡಿದ ಸ್ಥಳದಲ್ಲಿದ್ದುದರಿಂದ ಈತನನ್ನು ಸೋಲಿಸುವುದು ಅರ್ಜುನನಿಗೆ ಕಷ್ಟವಾಗಿ ಕೃಷ್ಣನ ಸೂಚನೆಯಂತೆ ಅರ್ಜುನ ರಥವನ್ನು ಹಿಂದಕ್ಕೆ ಸರಿಸಿದಾಗ ಅನಸಾಲ್ವನ ರಥ ಮುಂದೆ ಬಂದು ಈತ ಸೋತುಹೋದನೆಂದೂ ಹೇಳಲಾಗಿದೆ. ಈ ಕಾರಣದಿಂದ ಇದು ವಿಜಯದ ಸ್ಥಾನವೆಂದು ಪ್ರಸಿದ್ದವಾಗಿದೆ.
ರಾಘವೇಂದ್ರಸ್ವಾಮಿಗಳು ನೆಲೆಸಿದ ಪುಣ್ಯಕ್ಷೇತ್ರ
[ಬದಲಾಯಿಸಿ]ಇಲ್ಲಿ ರಾಘವೇಂದ್ರಸ್ವಾಮಿಗಳ ಮಠ ಹಾಗೂ ಬೃಂದಾವನವಿದೆ. ರಾಘವೇಂದ್ರ ಗುರುಸಾರ್ವಭೌಮರು ಮಧ್ವಮತ ಸಂಪ್ರದಾಯವನ್ನು ಅವಲಂಬಿಸಿ ಸಶರೀರರಾಗಿ ಇಲ್ಲಿ ಬೃಂದಾವನಸ್ಥರಾದರು (ಕ್ರಿ.ಶ. 1671 ಶ್ರಾವಣ ಬಹುಳ ಬಿದಿಗೆ ಗುರುವಾರ) ಎನ್ನಲಾಗಿದೆ. ಇವರನ್ನು ಗುರುಸಾರ್ವಭೌಮರು, ರಾಯರು, ಮಂತ್ರಾಲಯ ಪ್ರಭುಗಳು ಎಂದೂ ಕರೆಯುತ್ತಾರೆ. ರಾಯರ ಬೃಂದಾವನದ ಎಡಗಡೆ ವಾದೀಂದ್ರರ ಬೃಂದಾವನವಿದೆ. ಮಠದ ಆವರಣದಲ್ಲಿ ಸುಧರ್ಮೇಂದ್ರ ತೀರ್ಥಸ್ವಾಮಿಗಳ ಮತ್ತು ಸುವೃತೀಂದ್ರ ತೀರ್ಥಸ್ವಾಮಿಗಳವರ ಬೃಂದಾವನಗಳೂ ಇವೆ. ರಾಘವೇಂದ್ರಸ್ವಾಮಿಗಳ ಬೃಂದಾವನದ ಎದುರಿಗೆ ವಾಯುದೇವರ ವಿಗ್ರಹವಿದೆ. ಮಠದ ಹೊರಗಡೆ ಎಡಭಾಗದಲ್ಲಿ ಮಂಚಾಲಾಂಬಿಕೆಯ ದೇವಸ್ಥಾನವಿದೆ. ಈ ಗ್ರಾಮ ರಾಯರ ನೆಲಸುವಿಕೆಯಿಂದ ಪುಣ್ಯಕ್ಷೇತ್ರ ಎನಿಸಿದೆ.
ಇಲ್ಲಿಗೆ ಸಹಸ್ರಾರು ಯಾತ್ರಿಕರು ಬರುತ್ತಾರೆ. ಭಕ್ತಾದಿಗಳು ತುಂಗಭದ್ರಾ ನದಿಯಲ್ಲಿ ಮಿಂದು ರಾಯರ ಸೇವೆಗೈದು ತಮ್ಮ ಇಷ್ಟಾರ್ಥಗಳನ್ನು ಪಡೆಯುತ್ತಾರೆ.
ರಾಯರಸೇವೆ ಸಲ್ಲಿಸುವುದಕ್ಕಾಗಿ ಧರ್ಮದರ್ಶಿಗಳ ಒಂದು ಸಮಿತಿ ಇದೆ.
ಐತಿಹಾಸಿಕ ಹಿನ್ನೆಲೆ
[ಬದಲಾಯಿಸಿ]ಈ ಪ್ರದೇಶ 1792ರ ತನಕ ಮುಸಲ್ಮಾನ್ ಆಳರಸರ ವಶದಲ್ಲಿತ್ತು. ಮೊದಲನೆಯ ಮೈಸೂರು ಯುದ್ಧದ ತರುವಾಯ ಹೈದರಾಬಾದ್ ನಿಜಾಮರ ವಶಕ್ಕೆ ಬಂದಿತ್ತು. 1630ರ ಸುಮಾರಿನಲ್ಲಿ ಅಸದಿಲ್ಲೀಖಾನ್ ಈ ಪ್ರಾಂತ್ಯದ ನವಾಬನಾಗಿದ್ದ. ಈತನ ದಿವಾನ ವೆಂಕಣ್ಣಪಂಡಿತರಾಯರ ಭಕ್ತನಾಗಿದ್ದ.
ತೀರ್ಥಾಟನೆಯ ಸಮಯದಲ್ಲಿ ರಾಯರು ಆದವಾನಿಗೂ ಭೇಟಿ ನೀಡಿದರು. ನವಾಬ ರಾಯರ ತಪಃ ಶಕ್ತಿಗೆ ಮಾರುಹೋಗಿ ಅವರು ಕೇಳಿದ ಸ್ಥಳವನ್ನು ಜಹಗೀರು ಕೊಡುವುದಾಗಿ ವಚನವಿತ್ತ. ಆಗ ರಾಯರು ಮಂಜಾಲೆಯನ್ನು ದಾನರೂಪವಾಗಿ ಕೊಡುವಂತೆ ನವಾಬನನ್ನು ಕೇಳಿದರು. ಅಲ್ಲಿಯೇ ಇದ್ದ ವೆಂಕಣ್ಣಪಂಡಿತ ಅಚ್ಚರಿಯಿಂದ ಬರೀ ಮರಳು ಮತ್ತು ಕಾಡಿನಿಂದ ಕೂಡಿದ ನಿರುಪಯುಕ್ತ ಪ್ರದೇಶವನ್ನು ಏಕೆ ಬಯಸಿದಿರಿ ಎಂದು ರಾಯರನ್ನು ಕೇಳಿದಾಗ ರಾಯರು ತಾನೇ ಆ ಜನ್ಮದಲ್ಲಿ ಪ್ರಹ್ಲಾದನಾಗಿದ್ದು ಯಜ್ಞಮಾಡಿದ ಜಾಗ ಅದೆಂದು ಅದರ ಮಹತ್ತ್ವ ತಿಳಿಸಿದರಂತೆ. ಆ ಕಾಲಕ್ಕೆ ಅದು ಒಬ್ಬ ಫಕೀರನ ವಶದಲ್ಲಿರಲಾಗಿ ವೆಂಕಣ್ಣ ದಿವಾನ ಅದನ್ನು ಆತನಿಂದ ಬಿಡಿಸಿಕೊಟ್ಟುದಲ್ಲದೆ ನವಾಬನ ಹಣದಿಂದಲೇ ಮಠವನ್ನೂ ಕಟ್ಟಿಸಿಕೊಟ್ಟನೆಂದು ಐತಿಹ್ಯ ಹೇಳುತ್ತದೆ. ರಾಯರ ಬೃಂದಾವನ ಹಿಂದೆ ಅವರು ಪ್ರಹ್ಲಾದನಾಗಿದ್ದಾಗ ಯಜ್ಞ ಏರ್ಪಡಿಸಿದ್ದ ಸ್ಥಳದಲ್ಲಿಯೇ ಇದೆ ಎಂದು ಹೇಳುತ್ತಾರೆ.
1971ರಲ್ಲಿ ರಾಘವೇಂದ್ರ ಸ್ವಾಮಿಗಳ ಮೂರನೆಯ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಾರಿಗೆ ಮತ್ತು ಇತರ ಸೌಕರ್ಯಗಳು
[ಬದಲಾಯಿಸಿ]ಚೆನ್ನೈ_ಬೊಂಬಾಯಿ ರೈಲುಮಾರ್ಗದಲ್ಲಿರುವ ಮಂತ್ರಾಲಯಮ್ ರೋಡ್ ಸ್ಟೇಷನ್ ಎಂಬಲ್ಲಿಗೆ 15 ಕಿಮೀ ದೂರದಲ್ಲಿದೆ. ದಕ್ಷಿಣ ರೈಲುಮಾರ್ಗದಲ್ಲಿ ಮಂತ್ರಾಲಯಮ್ ರೋಡ್ ರಾಯಚೂರಿನಿಂದ 28 ಕಿಮೀ ದೂರದಲ್ಲಿಯೂ ಗುಂತಕಲ್ ಜಂಕ್ಷನ್ನಿಂದ 93 ಕಿಮೀ ದೂರದಲ್ಲಿಯೂ ಇದೆ. ಮಂತ್ರಾಲಯಮ್ ರೋಡ್ ಸ್ಟೇಷನ್ಗೆ ಅಣುಮಂತ್ರಾಲಯ ಎಂಬ ಇನ್ನೊಂದು ಹೆಸರಿದೆ.
ಆದವಾನಿಯಿಂದಲೂ ಮಂತ್ರಾಲಯಕ್ಕೆ ಬಸ್ಸುಗಳಿವೆ.
ಮಂತ್ರಾಲಯಮ್ ರೋಡ್ ಸ್ಟೇಷನ್ ಹತ್ತಿರವೇ ಹರಿವಾಣ ಹನುಮಂತಾಚಾರ್ಯರ ಛತ್ರವಿದೆ. ಮಂತ್ರಾಲಯಕ್ಕೆ ಹೋಗಿ ಬರುವ ಯಾತ್ರಾರ್ಥಿಗಳಿಗೆ ಇಲ್ಲಿ ಊಟ ವಸತಿಯ ಏರ್ಪಾಡು ಉಂಟು. ಮಂತ್ರಾಲಯದಲ್ಲಿ ಯಾತ್ರಿಕರು ಉಳಿದುಕೊಳ್ಳಲು ಛತ್ರಗಳಿವೆ. ಮಠದ ವತಿಯಿಂದ ಪ್ರತಿದಿನ ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಉಂಟು. ಇಲ್ಲಿ ಅಂಚೆ, ತಾರು, ವಿದ್ಯುದ್ದೀಪ ಮತ್ತು ನೀರಿನ ಸೌಕರ್ಯಉಂಟು. ಚಿಕ್ಕಪುಟ್ಟ ಹೋಟಲುಗಳೂ ಅಂಗಡಿಗಳೂ ಇವೆ.
ಹವಾಗುಣ
[ಬದಲಾಯಿಸಿ]ಫೆಬ್ರವರಿ ತಿಂಗಳಿನ ಅನಂತರ ಇಲ್ಲಿ ಬಲು ಬಿಸಿಲು, ಸೆಕೆ. ಇಲ್ಲಿಯ ಹೆಚ್ಚು ಪ್ರದೇಶ ಮರಳಿನಿಂದ ಕೂಡಿರುವುದರಿಂದ ಮರಳು ಕಾದು ತಿರುಗಾಡುವುದೇ ಕಷ್ಟವಾಗುತ್ತದೆ.
ಹೆಚ್ಚಿನ ಓದಿಗೆ
[ಬದಲಾಯಿಸಿ]- ಮಂತ್ರಾಲಯ ನದೀಪ್ರವಾಹದಲ್ಲಿ ಮುಳುಗಡೆ;;ಪಟ್ಟಣದಲ್ಲಿನ ಸುಮಾರು 1,600-ಬೆಸ ಮನೆಗಳಲ್ಲಿ 50 ರಷ್ಟು ಮನೆಗಳು ಕಾಣುತ್ತಿದ್ದವು. ಪ್ರವಾಹದ ನೀರು 13 ಅಡಿಗಳಷ್ಟು ಎತ್ತರ ಏರಿತ್ತು; ಮತ್ತು ಪ್ರಖ್ಯಾತ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನವನ್ನು ಸಂಪೂರ್ಣವಾಗಿ ಮುಳುಗಿಹೋಗಿತ್ತು ದಿ. ೩-೧೦-೨೦೦೯.:ಯು ಟ್ಯೂಬ್:[೧]
ಬಾಹ್ಯ ಕೊಂಡಿಗಳು
[ಬದಲಾಯಿಸಿ]ವಿಕಿಟ್ರಾವೆಲ್ ನಲ್ಲಿ ಮಂತ್ರಾಲಯ ಪ್ರವಾಸ ಕೈಪಿಡಿ (ಆಂಗ್ಲ)