ವಿಷಯಕ್ಕೆ ಹೋಗು

ಗುಲ್ಜಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಪೂರಣ ಸಿಂಗ್ ಕಾಲ್ರ, ಗುಲ್ಜಾರ್,
ಗುಲ್ಜಾರ್
ಜನನಆಗಸ್ಟ್ ೧೮, ೧೯೩೬
‘ದಿನಾ ಝೇಲಂ’(ಪಾಕಿಸ್ಥಾನದ ಭಾಗ)
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಕವಿ, ಚಲನಚಿತ್ರ ನಿರ್ದೇಶಕರು, ಗೀತ ರಚನೆಕಾರರು
ಸಕ್ರಿಯ ವರ್ಷಗಳು೧೯೫೧-೨೦೧೪
ಗಮನಾರ್ಹ ಕೆಲಸಗಳು'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಚಲನಚಿತ್ರ ಸಂಗೀತಕಾರ, ಚಿತ್ರ ನಿರ್ದೇಶಕ,

'ಸಂಪೂರಣ್ ಸಿಂಗ್ ಕಾಲ್ರಾ' ಎಂಬ ಮೂಲ ಹೆಸರಿನ ವ್ಯಕ್ತಿ ಬಾಲಿವುಡ್ ವಲಯದಲ್ಲಿ ಗುಲ್ಜಾರ್ [] ಎಂಬ ಹೆಸರಿನಿಂದಲೇ ಗುರುತಿಸಲ್ಪಡುತ್ತಿದ್ದಾರೆ. {{ಆಗಸ್ಟ್ ೧೮, ೧೯೩೬) ಕವಿಗಳಾಗಿ, ಚಿತ್ರ ನಿರ್ದೇಶಕರಾಗಿ, ಗೀತ ರಚನಕಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಹಿಂದಿ-ಉರ್ದು, ಪಂಜಾಬಿ, ಮತ್ತು ಹಲವು ಉಪಭಾಷೆಗಳಾದ ಬ್ರಜ್, ಖಾರಿಬೋಲಿ, ಹರ್ಯಾಣ್ವಿ, ಮರ್ವಾರಿ ಭಾಷೆಗಳಲ್ಲಿ ಅವರದ್ದು ಅಪ್ರತಿಮ ಪ್ರಭುತ್ವ. 'ಗುಲ್ಜಾರ್' ಎಂಬುದು ಕಾವ್ಯ ನಾಮ.

ಗುಲ್ಜಾರರು ಈಗಿನ ಪಾಕಿಸ್ಥಾನದ ಭಾಗವಾಗಿರುವ ‘ದಿನಾ ಝೇಲಂ’ ಎಂಬ ಊರಿನಲ್ಲಿ ಸಿಕ್ ಮನೆತನವೊಂದರಲ್ಲಿ ಆಗಸ್ಟ್ 18. 1936ರಲ್ಲಿ ಜನಿಸಿದರು. ಗುಲ್ಜಾರರು ಕವಿಯಾಗುವುದಕ್ಕೆ ಮುಂಚೆ ದೆಹಲಿಯ ಗ್ಯಾರೇಜ್ ಒಂದರಲ್ಲಿ ಕಾರ್ ಮೆಕಾನಿಕ್ ಆಗಿದ್ದರು. ಸಿನಿಮಾ ಸಾಹಿತಿಯಾಗಿ ಗುಲ್ಜಾರರು ಮೊದಲಿಗೆ ಬಿಮಲ್ ರಾಯ್ ಮತ್ತು ಹೃಷಿಕೇಶ್ ಮುಖರ್ಜಿ ಅವರೊಂದಿಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ಗುಲ್ಜಾರರ ಸಾಹಿತ್ಯ ಕೃತಿ ‘ರವಿ ಪಾರ್’ ಎಂಬುದು ಬಿಮಲ್ ರಾಯ್ ಅವರ ಕುರಿತಾಗಿದ್ದು ಸೃಷ್ಟಿಕರ್ತನೊಬ್ಬನ ನೋವುಗಳನ್ನು ಬಣ್ಣಿಸುವಂತದ್ದಾಗಿದೆ.

ಚಿತ್ರರಂಗದಲ್ಲಿ

[ಬದಲಾಯಿಸಿ]

ಗೀತರಚನಕಾರರಾಗಿ ಗುಲ್ಜಾರರು ಪ್ರವೇಶ ಪಡೆದದ್ದು ೧೯೬೩ರ ವರ್ಷದಲ್ಲಿ ಸಚಿನ್ ದೇವ್ ಬರ್ಮನ್ ಸಂಗೀತ ನೀಡಿದ ‘ಬಂಧಿನಿ’ ಚಿತ್ರದ ಮೂಲಕ. ಆ ಚಿತ್ರದ ಎಲ್ಲ ಹಾಡುಗಳನ್ನು ಬರೆದ ಶೈಲೇಂದ್ರರು ಗುಲ್ಜಾರರಿಗೆ ‘ಮೋರಾ ಗೋರ ಆಂಗ್ ಲಾಯ್ಲೆ’ ಗೀತೆಯನ್ನು ಬರೆಯುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಈ ಹಾಡಿಗೆ ಅಭಿನಯ ನೀಡಿದವರು ನೂತನ್. ಗುಲ್ಜಾರರ ಚಿತ್ರಗೀತೆಗಳು ಸಚಿನ್ ದೇವ್ ಬರ್ಮನ್ ಮತ್ತು ರಾಹುಲ್ ದೇವ್ ಬರ್ಮನ್ ಸಂಗೀತ ನಿರ್ದೇಶನದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದವು. ಹೀಗಾಗಿ ಬರ್ಮನ್ ಅವರನ್ನು ತಮ್ಮ ಚಿತ್ರ ಜೀವನಕ್ಕೆ ಇಂಬುಕೊಟ್ಟವರು ಎಂದು ಗುಲ್ಜಾರ್ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಸಲೀಲ್ ಚೌಧುರಿ ಸಂಗೀತ ನಿರ್ದೇಶನದ ಆನಂದ್, ಮೇರೆ ಅಪ್ನೆ ಮುಂತಾದ ಚಿತ್ರಗಳಲ್ಲಿ ಗುಲ್ಜಾರರ ಗೀತೆಗಳು ಪ್ರಶಸ್ತಿ ಪಡೆದವು. ಮೌಸಂ ಚಿತ್ರದ ಮದನ್ ಮೋಹನ್; ವಿಶಾಲ್ ಭಾರದ್ವಾಜ್ ಸಂಗೀತ ನಿರ್ದೇಶನದ ‘ಮ್ಯಾಚಿಸ್’, ಓಂಕಾರ, ಕಾಮಿನಯ್; ಎ ಆರ್ ರೆಹಮಾನ್ ಅವರ ದಿಲ್ ಸೆ, ಗುರು, ಸ್ಲಂ ಡಾಗ್ ಮಿಲಿಯನೇರ್, ರಾವಣ್; ಶಂಕರ್ ಎಹಸಾನ್ ಲಾಯ್ ಅವರ ಬಂಟಿ ಔರ್ ಬಬ್ಲಿ ಹೀಗೆ ಎಲ್ಲ ತಲೆಮಾರುಗಳ ಸಂಗೀತ ನಿರ್ದೇಶಕರ ಜೊತೆಯಲ್ಲಿ ಸಾಹಿತ್ಯ ರಚಿಸಿದ ಕೀರ್ತಿ ಗುಲ್ಜಾರರಿಗೆ ಸೇರಿದೆ.

ಗೀತ ರಚನಾಕಾರರಾಗಿ ಗುಲ್ಜಾರರು ಸಚಿನ್ ದೇವ್ ಬರ್ಮನ್, ಸಲಿಲ್ ಚೌದುರಿ, ಶಂಕರ ಜೈ ಕಿಶನ್. ಹೇಮಂತ್ ಕುಮಾರ್, ರಾಹುಲ್ ದೇವ್ ಬರ್ಮನ್, ಲಕ್ಷ್ಮೀಕಾಂತ್ ಪ್ಯಾರೆಲಾಲ್, ಮದನ್ ಮೋಹನ್, ಎ ಆರ್ ರಹಮಾನ್, ರಾಜೇಶ್ ರೋಶನ್, ಅನು ಮಲಿಕ್, ಶಂಕರ್- ಎಹಸಾನ್ -ಲಾಯ್, ವಿಶಾಲ್ ಭಾರದ್ವಾಜ್ ಮುಂತಾದ ಸಂಗೀತ ನಿರ್ದೇಶಕರೊಂದಿಗಿನ ಜೊತೆಗಾರಿಕೆಯಲ್ಲಿ ಎದ್ದು ಕಾಣುತ್ತಾರೆ.

ಕೇವಲ ಗೀತ ರಚನೆ ಮಾತ್ರವಲ್ಲದೆ ಅವರು ಹಲವಾರು ಚಿತ್ರಗಳಿಗೆ ಸಾಹಿತ್ಯ, ಚಿತ್ರಕತೆ ಮತ್ತು ಸಂಭಾಷಣೆಗಳನ್ನೂ ಒದಗಿಸಿದ್ದಾರೆ. ಗುಲ್ಜಾರರು ನಿರ್ದೇಶಿಸಿದ ಚಿತ್ರಗಳು ಹಲವಾರು ಪ್ರಶಸ್ತಿಗಳನ್ನು ಗಳಿಸಿ ವಿದ್ವಜ್ಜನರಿಂದ ಮೊದಲ್ಗೊಂಡು ಸಾಮಾನ್ಯರವರೆಗೆ ಎಲ್ಲ ವರ್ಗದ ಜನರನ್ನೂ ಆಕರ್ಷಿಸಿವೆ. ದೂರದರ್ಶನದಲ್ಲಿ ಅವರು ಮಿರ್ಜಾ ಗಾಲಿಬ್, ತಹರೀರ್ ಮುನ್ಷಿ ಪ್ರೇಮಚಂದ್ ಕಿ ಕಹಾನಿ ಮುಂತಾದ ಧಾರಾವಾಹಿಗಳನ್ನು ಸಹಾ ಸೃಷ್ಟಿಸಿದ್ದಾರೆ. ಹೆಲೋ ಜಿಂದಗಿ, ಪೊಟ್ಲಿ ಬಾಬಾ ಕಿ, ಜಂಗಲ್ ಬುಕ್ ಮುಂತಾದ ದೂರದರ್ಶನ ದೃಶ್ಯಾವಳಿಗಳಿಗೆ ಗೀತೆ ರಚನೆ ಸಹಾ ಮಾಡಿದ್ದಾರೆ.

ಆಶೀರ್ವಾದ್, ಆನಂದ್, ಖಾಮೋಷಿ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆದ ನಂತರದಲ್ಲಿ ಗುಲ್ಜಾರರು ೧೯೭೧ರಲ್ಲಿ ‘ಮೇರೆ ಅಪ್ನೆ’ ಎಂಬ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ತಪನ್ ಸಿನ್ಹಾ ಅವರ ಬೆಂಗಾಲಿ ಚಿತ್ರ ‘ಅಪರಿಜನ್’ ಅವರ ಹಿಂದಿ ಅವತರಣಿಕೆಯಾದ ಈ ಚಿತ್ರದಲ್ಲಿ ಮೀನಾ ಕುಮಾರಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ಸಾಧಾರಣ ಯಶಸ್ಸಿನ ನಂತರದಲ್ಲಿ ಗುಲ್ಜಾರರು ‘ಪರಿಚಯ್’ ಮತ್ತು ‘ಕೋಶಿಶ್’ ಚಿತ್ರಗಳನ್ನೂ ನಿರ್ದೇಶಿಸಿದರು. ಪರಿಚಯ್ ಚಿತ್ರ ಬೆಂಗಾಲಿ ಬಾಷೆಯ ‘ರಂಗೀನ್ ಉತ್ತರೈನ್’ ಕಥೆಯನ್ನು ಆಧರಿಸಿ ಇಂಗ್ಲಿಷ್ ಭಾಷೆಯ ‘ದಿ ಸೌಂಡ್ ಆಫ್ ಮ್ಯೂಸಿಕ್’ ಪ್ರೇರಣೆ ಪಡೆದು ಜನ ಮೆಚ್ಚುಗೆ ಗಳಿಸಿತು. ‘ಕೋಶಿಶ್’ ಚಿತ್ರ ಕಿವುಡು ಮೂಖ ದಂಪತಿಗಳ ಕಥಾಹಂದರವನ್ನೂ ಒಳಗೊಂಡು ಜಯಾಬಾಧುರಿ ಮತ್ತು ಸಂಜೀವ್ ಕುಮಾರ್ ಅವರ ಅಪ್ರತಿಮ ಅಭಿನಯವನ್ನು ಹೊರತಂದಿತ್ತು. ಸಂಜೀವ್ ಕುಮಾರ್ ಈ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದರು. ೧೯೭೩ರಲ್ಲಿ ತೆರೆಕಂಡ ‘ಅಚಾನಕ್’ ಗುಲ್ಜಾರರ ಮತ್ತೊಂದು ಶ್ರೇಷ್ಠ ಚಿತ್ರವಾಗಿ ಅಪಾರ ಜನಪ್ರಿಯತೆಯ ಜೊತೆಗೆ ಪ್ರಶಸ್ತಿಗಳನ್ನೂ ಗಳಿಸಿಕೊಂಡಿತು. ಗುಲ್ಜಾರರ ‘ಅಂಧಿ’ ಮತ್ತೊಂದು ಶ್ರೇಷ್ಠ ಚಿತ್ರ. ‘ಕಾಲಿ ಆಂಧಿ’ ಎಂಬ ಕಮಲೇಶ್ವರ್ ಅವರ ಕಥೆಯನ್ನು ಆಧರಿಸಿದ ಈ ಚಿತ್ರ ಅಪಾರ ಜನಪ್ರಿಯತೆ ಮತ್ತು ಪ್ರಶಸ್ತಿಗಳನ್ನು ಗಳಿಸಿತ್ತು. ಈ ಚಿತ್ರಕತೆ ತಾರಕೇಶ್ವರ ಸಿನ್ಹ ಅವರ ಜೀವನವನ್ನು ಆಧರಿಸಿತ್ತು. ಆದರೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ವೈಯಕ್ತಿಕ ಜೀವನದ ಎಳೆಗಳು ಈ ಚಿತ್ರದಲ್ಲಿದ್ದವು ಎಂಬ ಮಾತು ಅಂದಿನ ದಿನಗಳಲ್ಲಿ ಪ್ರಖರತೆ ಪಡೆದಿದ್ದವು. ಹೀಗಾಗಿ ಈ ಚಿತ್ರ 1975ರ ತುರ್ತು ಪರಿಸ್ಥಿತಿಯಲ್ಲಿ ನಿಷೇದವನ್ನು ಕಂಡಿತು. ಅವರ ಮುಂದಿನ ಚಿತ್ರ ಖುಷ್ಬೂ. ಅವರ ‘ಮೌಸಂ’ ಚಿತ್ರ ಮತ್ತೊಂದು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. ಶರ್ಮಿಳಾ ಠಾಗೂರ್ ಈ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದರು. ಸಂಜೀವ್ ಕುಮಾರರ ಅಭಿನಯ ಕೂಡಾ ಅಷ್ಟೇ ಶ್ರೇಷ್ಠ ಮಟ್ಟದ್ದಾಗಿತ್ತು. ಅವರ ‘ಅಂಗೂರ್’ ಚಿತ್ರ ಅತ್ಯುತ್ತಮ ಹಾಸ್ಯ ಚಿತ್ರಗಳ ಪರಂಪರೆಯಲ್ಲಿ ನಿಲ್ಲುವಂತದ್ದು. ಅವರ ಇನ್ನಿತರ ಚಿತ್ರಗಳಾದ ಇಜಾಸತ್, ಮಾಚಿಸ್, ಹು ತು ತು ಮುಂತಾದವು ಕೂಡ ಚಿತ್ರ ವಿದ್ವಾಂಸರ ಮೆಚ್ಚುಗೆ ಪಡೆದಂತಹವು. ಗುಲ್ಜಾರರ ನಿರ್ದೇಶನದಲ್ಲಿ ಸಂಜೀವ್ ಕುಮಾರ್, ಜಯಾ ಬಾಧುರಿ, ಜಿತೇಂದ್ರ, ವಿನೋದ್ ಖನ್ನ, ಹೇಮಾಮಾಲಿನಿ ಮುಂತಾದವರ ಶ್ರೇಷ್ಠ ಅಭಿನಯ ಬೆಳಕಿಗೆ ಬಂತು. ದೂರದರ್ಶನದಲ್ಲಿ ಮೂಡಿ ಬಂದ ಮಿರ್ಜಾ ಗಾಲಿಬ್ ಸರಣಿಯಲ್ಲಿ ನಸೀರುದ್ದೀನ್ ಷಾ ಅಭಿನಯಿಸಿದ್ದರು. ಇನ್ನು ಅವರ ಚಿತ್ರಗಳ ಹಾಡುಗಳಲ್ಲಿ ಪರಿಚಯ್ ಚಿತ್ರದ ‘ಮುಸಾಫಿರ್ ಹೂ ಯಾರೋ’, ಆಂಧಿಯ ‘ತೆರೆ ಬಿನಾ ಜಿಂದಗಿ ಸೆ ಕೊಯಿ’,’ಇಜಾಸತ್ ಚಿತ್ರದ ‘ಮೇರಾ ಕುಚ್ ಸಮಾನ್’, ಮಾಸೂಮ್ ಚಿತ್ರದ ‘ತುಜ್ಸೆ ನಾರಾಜ್ ನಹಿ ಜಿಂದಗಿ’ ಮುಂತಾದವು ಚಿರಸ್ಮರಣೀಯವಾಗಿವೆ. ಅವರ ನಿರ್ದೇಶನದ ಹೊರತಾಗಿ ಕೂಡಾ ಇತರ ಚಿತ್ರಗಳಲ್ಲಿ ಇಂದೂ ಮೂಡಿ ಬರುತ್ತಿರುವ ಅವರ ಗೀತ ಸಾಹಿತ್ಯ ಜನಮನವನ್ನು ನಿರಂತರ ಬೆಳಗುತ್ತಾ ಸಾಗಿದೆ.

ಕವಿಯಾಗಿ

[ಬದಲಾಯಿಸಿ]

ಕವಿಯಾಗಿ ಗುಲ್ಜಾರ್ ಅವರ ಕಾವ್ಯಗಳು ಚಾಂದ್ ಪುಕರಾಜ್ ಕಾ, ರಾತ್ ಪಷ್ಮಿನೇ ಕಿ, ಪಂದ್ರಾಹ್ ಪಾಂಚ್ ಪಚ್ಹತ್ತರ್ ಮುಂತಾದ ಕಾವ್ಯ ಸಂಕಲನಗಳಲ್ಲಿ ದಾಖಲಾಗಿವೆ. ಅವರ ಕಥಾ ಸಂಕಲನಗಳೆಂದರೆ ರಾವಿ ಪಾರ್ ಮಾತು ದುವಾನ್.[]

ಪ್ರಶಸ್ತಿ ಗೌರವಗಳು

[ಬದಲಾಯಿಸಿ]
  1. ೨೦೦೪ರ ವರ್ಷದ ಪದ್ಮಭೂಷಣ,
  2. ೨೦೦೨ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ,
  3. ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೋ’ ಗೀತೆಗಾಗಿ ಸಂದ ಅಕಾಡೆಮಿ ಪ್ರಶಸ್ತಿ,
  4. ಗ್ರಾಮಿ ಪ್ರಶಸ್ತಿ ಮುಂತಾದವು ಗುಲ್ಜಾರ್ ಅವರ ವಿದ್ವತ್ಪೂರ್ಣ ಹಾಗೂ ಜನಪ್ರಿಯ ಅಭಿವ್ಯಕ್ತಿಗಳೆರಡೂ ಕ್ಷೇತ್ರಗಳಲ್ಲಿನ ಅಪ್ರತಿಮ ಸಾಧನೆಗಳ ದ್ಯೋತಕವಾಗಿವೆ.
  5. ೨೦೧೪ ರ, ಮೇ, ೩ ನೆಯ ತಾರೀಖಿನಂದು, 'ಪ್ರತಿಷ್ಠಿತ ಡಾ. ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರದಾನಮಾಡಲಾಯಿತು.[]

ನಿರ್ದೇಶನದ ಚಿತ್ರಗಳು

[ಬದಲಾಯಿಸಿ]

ಕವನ ಸಂಕಲನಗಳು

[ಬದಲಾಯಿಸಿ]
  • ಏಕ್ ಚಾಂದ್ ಬೂಂದ್
  • ರಾತ್,ಚಾಂದ್ ಔರ್ ಮೇ
  • ರಾತ್ ಪಾಶ್ಮೀನ್ ಕೀ

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಗುಲ್ಜಾರ್ ಕುರಿತಾದ ಅಧಿಕೃತ ತಾಣ Archived 2006-08-14 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು

[ಬದಲಾಯಿಸಿ]
  1. http://www.gulzar.info/
  2. "ಆರ್ಕೈವ್ ನಕಲು". Archived from the original on 2014-04-23. Retrieved 2014-04-27.
  3. "ದೆಹಲಿಯ ವಿಜ್ಞಾನ ಭವನದಲ್ಲಿ ೨೦೧೪ ರ, ಮೇ ೩, ಶನಿವಾರದಂದು, 'ಪ್ರತಿಷ್ಠಿತ ಡಾ.ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರದಾನಮಾಡಲಾಯಿತು". Archived from the original on 2014-05-04. Retrieved 2014-05-04.
  4. "ಆರ್ಕೈವ್ ನಕಲು". Archived from the original on 2014-04-13. Retrieved 2014-04-27.

<References / >