ವಿಷಯಕ್ಕೆ ಹೋಗು

ಜಿಲಾಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿಲಾಂಗ್ - ಆಗ್ನೇಯ ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದ ಒಂದು ರೇವುಪಟ್ಟಣ. ಪೋರ್ಟ್ ಫಿಲಿಪ್ ಕೊಲ್ಲಿಯ ಪಶ್ಚಿಮದ ಕೊನೆಯಲ್ಲಿ, ಕೋರಿಯೊ ಕೊಲ್ಲಿಯ ಮೇಲೆ, ಮೆಲ್ಬರ್ನ್ ನಗರದ ನೈಋತ್ಯಕ್ಕೆ 72 ಕಿ.ಮೀ. ದೂರದಲ್ಲಿ ಇದೆ.

ಜನಸಂಖ್ಯೆ 1,15,047 (1971). ಜಿಲಾಂಗ್ ಒಂದು ಮುಖ್ಯ ರೈಲ್ವೆ ಜಂಕ್ಷನ್. ಮೆಲ್ಬರ್ನ್‍ಗೂ ಜಿಲಾಂಗ್‍ಗೂ ನಡುವೆ ಹೆದ್ದಾರಿಯೂ ಉಂಟು. ಈ ಪಟ್ಟಣ 1837ರಲ್ಲಿ ಹುಟ್ಟಿಕೊಂಡಿತು. ಎರಡನೆಯ ಮಹಾಯುದ್ಧದಿಂದೀಚೆಗೆ ಶೀಘ್ರವಾಗಿ ಬೆಳದಿದೆ. ಇದು ಒಂದು ವಿದ್ಯಾಕೇಂದ್ರ. ಇಲ್ಲೊಂದು ಜವಳಿ ತಾಂತ್ರಿಕ ಕಾಲೇಜು ಇದೆ. ಇಲ್ಲಿಯ ಗ್ರಂಥಾಲಯ ಆಧುನಿಕವಾದ್ದು, ದೊಡ್ಡದು. ಇಲ್ಲಿ ಮೋಟಾರ್ ಕಾರ್, ಗಾಜು, ಉಣ್ಣೆ ಜವಳಿ, ಸಿಮೆಂಟ್, ಫಾಸ್ಫಾಟಿಕ್ ರಸಗೊಬ್ಬರ, ಕೃಷಿಯಂತ್ರ, ತೈಲಪರಿಷ್ಕರಣ ಮುಂತಾದ ಹಲವು ಕೈಗಾರಿಕೆಗಳಿವೆ. ಉಪ್ಪೂ ತಯಾರಾಗುತ್ತದೆ. ಆಸ್ತ್ರೇಲಿಯದಲ್ಲಿ ತಯಾರಾಗುತ್ತಿರುವ ಮೋಟಾರು ಕಾರುಗಳಲ್ಲಿ 90% ರಷ್ಟು ತಯಾರಾಗುವುದು ಇಲ್ಲಿ. ಈ ಪಟ್ಟಣದ ಪೂರ್ವಕ್ಕೆ ಪಾಯಿಂಟ್ ಹೆನ್ರಿ ಎಂಬಲ್ಲಿ 1960ರಲ್ಲಿ ಅಲ್ಯೂಮಿನಿಯಂ ಅದುರನ್ನು ಕರಗಿಸಿ ಲೋಹ ತಯಾರಿಸುವ ಕಾರ್ಖಾನೆ ಸ್ಥಾಪಿತವಾಯಿತು. ಗಾಜಿನ ಕೈಗಾರಿಕೆ 1937ರಲ್ಲೂ ಜಮಖಾನೆ ಕಾರ್ಖಾನೆ 1960ರಲ್ಲೂ ಪ್ರಾರಂಭವಾದುವು. ರಾಜ್ಯದ ಪಶ್ಚಿಮ ಜಿಲ್ಲೆಯಲ್ಲಿ ಬೆಳೆಯುವ ಉಣ್ಣೆ ಜಿಲಾಂಗ್ ಮೂಲಕ ಸಾಗುತ್ತದೆ. ಆಸ್ಟ್ರೇಲಿಯದ ಆಯಾತ-ನಿರ್ಯಾತಗಳಲ್ಲಿ ಐದನೆಯ ಒಂದು ಭಾಗ ಜಿಲಾಂಗ್ ಬಂದರಿನ ಮೂಲಕ ಸಾಗುತ್ತವೆ. ಇದು ಸರ್ವಋತು ಬಂದರು. ಈ ಪಟ್ಟಣದ ರೇವು ಪ್ರದೇಶ 90 ಚ.ಮೈ. ಗಳನ್ನೊಳಗೊಂಡಿದೆ. 34' ಆಳದವರೆಗೆ ಲಂಗರು ಹಾಕಿ ಹಡಗುಗಳನ್ನು ನಿಲ್ಲಿಸುವ ವ್ಯವಸ್ಥೆ 1839ರಲ್ಲಿ ನಿರ್ಮಾಣವಾಯಿತು. ಈ ಬಂದರಿನಿಂದ ಗೋದಿ, ಉಣ್ಣೆ, ಮಾಂಸ, ಹದಮಾಡಿದ ಚರ್ಮ ರಫ್ತಾಗುತ್ತವೆ. ಆಸ್ಟ್ರೇಲಿಯದ ಉಣ್ಣೆ ಉತ್ಖನನದಲ್ಲಿ ಹತ್ತನೆಯ ಒಂದು ಭಾಗ ಇಲ್ಲಿ ಮಾರಾಟವಾಗುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಿಲಾಂಗ್&oldid=1082752" ಇಂದ ಪಡೆಯಲ್ಪಟ್ಟಿದೆ