ಸುಕನ್ಯಾ ಸಮೃದ್ಧಿ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಕನ್ಯಾ ಸಮೃದ್ಧಿ ಖಾತೆ ಹೆಣ್ಣು ಮಕ್ಕಳ ಆರ್ಥಿಕ ಅಭಿವೃದ್ಧಿಗಾಗಿ ಹಾಗು ಅವರ ಭವಿಷ್ಯದ ವಿದ್ಯಾಭ್ಯಾಸ, ವಿವಾಹದಂತಹ ಖರ್ಚು ವೆಚ್ಚಗಳ ವಿಚಾರದಲ್ಲಿ ಪೋಷಕರಿಗೆ ನೆರವಾಗಲು, ಉಳಿತಾಯ ಖಾತೆಯನ್ನು ತೆರೆಯುವ, ಭಾರತ ಸರ್ಕಾರದ ಒಂದು ಯೋಜನೆಯಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನದ ಭಾಗವಾಗಿ, ಈ ಯೋಜನೆ ತಯಾರು ಮಾಡಿ ಜನವರಿ ೨೨ ೨೦೧೫ ರಂದು ಲೋಕಾರ್ಪಣೆಗೊಳಿಸಿದರು. ಈ ಯೋಜನೆಯ ಫಲಾನುಭವಿಗಳು ಸದ್ಯ ಖಾತೆಯಲ್ಲಿನ ತಮ್ಮ ಹಣಕ್ಕೆ ೮.೬% ಬಡ್ಡಿಯನ್ನು ಪಡೆಯುತ್ತಿದ್ದು ತೆರಿಗೆ ಉಳಿತಾಯಕ್ಕೂ ಸಹಕಾರಿಯಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಹೆಣ್ಣು ಮಗು ಹೊಂದಿರುವ ಪಾಲಕರು ಸೂಕ್ತ ಧಾಖಲೆಗಳೊಂದಿಗೆ ಭಾರತದ ಯಾವುದೇ ಅಂಚೆ ಕಛೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ತೆರೆಯಬಹುದು.

ಸಂಕ್ಷಿಪ್ತ ನೋಟ[ಬದಲಾಯಿಸಿ]

೨೦೧೫ ರ ಜನವರಿ ೨೨ ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಹರಿಯಾಣದ ಪಾಣಿಪತ್ ನಲ್ಲಿ ಲೋಕಾರ್ಪಣೆಗೊಳಿಸಿದರು. ಭಾರತದ ಯಾವುದೇ ಅಂಚೆ ಕಛೇರಿ ಹಾಗು ಕೆಲವು ಅಂಗೀಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು ಅವಕಾಶವಿದೆ. ಯೋಜನೆ ಆರಂಭವಾದ ಸಮಯದಲ್ಲಿ ಬಡ್ಡಿಯ ದರ ಶೇ.೯.೧ ರಷ್ಟಿತ್ತು ನಂತರ ಶೇ.೯.೨ ಆಯಿತು. ಆಯಾದ್ರೆ ೨೦೧೬ -೧೭ ಆರ್ಥಿಕ ವರ್ಷದಿಂದ ಬಡ್ಡಿಯು ೮.೬% ದರದಲ್ಲಿದೆ.

ಹೆಣ್ಣು ಮಗು ಹುಟ್ಟಿದಂದಿನಿಂದ ಅದಕ್ಕೆ ಹತ್ತು ವರ್ಷ ತುಂಬುವ ವರೆಗೆ ಯಾವಾಗ ಬೇಕಾದರೂ ಸುಕನ್ಯ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದು. ಒಂದು ಮಗುವಿಗೆ ಕೇವಲ ಒಂದೇ ಖಾತೆ ತೆರೆಯಲು ಅವಕಾಶವಿದೆ. ಅವಳಿ ಜವಳಿ ಹೆಣ್ಣು ಮಕ್ಕಳಾದ ಸಂಧರ್ಭಗಳಲ್ಲೂ ಒಂದೊಂದು ಮಗುವಿಗೂ ಒಂದು ಖಾತೆ ಹೊಂದಲು ಅವಕಾಶವಿದೆ. ತೆರೆಯಲಾದ ಖಾತೆಯನ್ನು ಭಾರತದಾದ್ಯಂತ ಯಾವ ಸ್ಥಳಗಳಿಗಾದರೂ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ.

ಖಾತೆ ತೆರೆದ ನಂತರ ಪೋಷಕರು ಕನಿಷ್ಠ ಪ್ರತೀ ವರ್ಷ ಒಂದು ಸಾವಿರ ರೂಪಾಯಿಗಳನ್ನು ಖಾತೆಗೆ ತುಂಬಬೇಕು. ಗರಿಷ್ಠ ರೂ.೧,೫೦,೦೦೦ ಗಳನ್ನು ಖಾತೆಗೆ ತುಂಬಬಹುದು . ಕನಿಷ್ಠ ೧೦೦೦ ರೂಪಾಯಿಗಳಿಗಿಂತ ಕಡಿಮೆ ಹಣವನ್ನು ತುಂಬಿದರೆ ಅಥವಾ ಆ ವರ್ಷ ಖಾತೆಗೆ ಹಣವೇ ತುಂಬದಿದ್ದ ಪಕ್ಷದಲ್ಲಿ ರೂ.೫೦ ದಂಡವನ್ನಾಗಿ ಪಾವತಿಸಬೇಕು.

ಹೆಣ್ಣು ಮಗು ಹತ್ತು ವರ್ಷ ಪೂರೈಸಿದ ನಂತರ ಆಕೆಯೇ ಆ ಖಾತೆಯನ್ನು ನಿಭಾಯಿಸಬಹುದು. ಹೆಣ್ಣು ಮಗುವಿಗೆ ಹದಿನೆಂಟು ವರ್ಷಗಳು ತುಂಬಿದ ಬಳಿಕ ಖಾತೆಯಲ್ಲಿ ಇರುವ ಹಣದ ೫೦% ಹಣವನ್ನು ಶೈಕ್ಷಣಿಕ ಖರ್ಚುಗಳಿಗೆ ಪಡೆಯಲು ಅವಕಾಶವಿದೆ. ಈ ಖಾತೆಯು ಹೆಣ್ಣು ಮಗುವಿಗೆ ಇಪ್ಪತ್ತೊಂದು ವರ್ಷಗಳು ತುಂಬಿದಾಗ ಪರಿಪೂರ್ಣವಾಗುತ್ತದೆ. ಆಗ ಆ ಖಾತೆಯನ್ನು ಮುಕ್ತಾಯ ಮಾಡಬೇಕು. ಮುಕ್ತಾಯ ಮಾಡದಿದ್ದ ಪಕ್ಷದಲ್ಲಿ ಆ ಖಾತೆಯಲ್ಲಿರುವ ಹಣಕ್ಕೆ ಮುಂದೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. ಹೆಣ್ಣು ಮಗುವಿಗೆ ಹದಿನೆಂಟು ವರ್ಷ ತುಂಬಿದ್ದು ಮದುವೆಯಾಗಿಹೋದರೆ ಆ ಮಗುವಿನ ಖಾತೆಯನ್ನು ಮುಕ್ತಾಯ ಮಾಡಬಹುದು.

ತೆರಿಗೆ ಉಳಿತಾಯ[ಬದಲಾಯಿಸಿ]

ಸುಕನ್ಯ ಸಮೃದ್ಧಿ ಯೋಜನೆಯ ಘೋಷಣೆಯ ಆರಂಭದಲ್ಲಿ ಸೆಕ್ಷನ್ ೮೦ಸಿ ಆದಾಯ ತೆರಿಗೆ ಕಾಯ್ದೆ ಪ್ರಕಾರ ಕೇವಲ ಖಾತೆಯಲ್ಲಿ ಜಮೆಯಾದ ಹಣಕ್ಕೆ ಮಾತ್ರ ತೆರಿಗೆ ವಿನಾಯಿತಿ ಕೊಡುವುದಾಗಿ ಘೋಷಣೆಯಾಗಿತ್ತು. ಆದರೆ ೨೦೧೫ ರ ಕೇಂದ್ರ ಬಜೆಟ್ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಯವರು ಖಾತೆಯಲ್ಲಿರುವ ಹಣಕ್ಕೆ ಸಂದಾಯವಾಗುವ ಬಡ್ಡಿಗೂ ಆದ್ಯ ತೆರಿಗೆಯಿಂದ ವಿನಾಯಿತಿ ಕೊಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ. ಏಪ್ರಿಲ್ ೧. ೨೦೧೫ರ ನಂತರ ಈ ತಿದ್ದುಪಡಿ ಅನುಷ್ಠಾನವಾಗಿದೆ.


ಬಡ್ಡಿದರಗಳ ವಾರ್ಷಿಕ ಸಂಕ್ಷಿಪ್ತ ನೋಟ
ಕ್ರಮ ಸಂಖ್ಯೆ ಆರ್ಥಿಕ ವರ್ಷ ಚಾಲ್ತಿ ದಿನಾಂಕ ಬಡ್ಡಿ ದರ ಕನಿಷ್ಠ ಮೊತ್ತ ಗರಿಷ್ಠ ಮೊತ್ತ
೨೦೧೪-೧೫ ೧ ಏಪ್ರಿಲ್ ೨೦೧೪ ರಿಂದ ೩೧ ಮಾರ್ಚ್ ೨೦೧೫ ೯.೧% ೧,೦೦೦ ೧,೫೦,೦೦೦
೨೦೧೫-೧೬ ೧ ಏಪ್ರಿಲ್ ೨೦೧೫ ರಿಂದ ೩೧ ಮಾರ್ಚ್ ೨೦೧೬ ೯.೨% ೧,೦೦೦ ೧,೫೦,೦೦೦
೨೦೧೬-೧೭ ೧ ಏಪ್ರಿಲ್ ೨೦೧೬ ರಿಂದ ೩೧ ಸೆಪ್ಟೆಂಬರ್ ೨೦೧೬ ೮.೬% ೧,೦೦೦ ೧,೫೦,೦೦೦
೨೦೧೬-೧೭ ೧ ಅಕ್ಟೋಬರ್ ೨೦೧೬ ರಿಂದ ಇದುವರೆವಿಗೂ ೮.೫% ೧,೦೦೦ ೧,೫೦,೦೦೦


ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]