ಡಾನಟೆಲೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೬ ನೇ ಶತಮಾನದ ಭಾವಚಿತ್ರ

ಡಾನಟೆಲೊ ಸು.1386-1466. ಇಟಲಿಯ ಖ್ಯಾತಶಿಲ್ಪಿ. ರಿನೆಸಾನ್ಸ್ ಕಲೆಯ ಆದ್ಯಪ್ರವರ್ತಕ.

ತಂದೆ ನೀಕ್ಕೊಲೊ ಡಿ ಬೆಟ್ಟೊ ಬಾರ್ಡಿ. ಬಾಲ್ಯದ ಬಗೆಗೆ ವಿಶೇಷವಾಗಿ ಏನೂ ತಿಳಿದುಬರುವುದಿಲ್ಲ. 1400ರ ಸುಮಾರಿಗೆ ಫ್ಲಾರನ್ಸಿನ ಚರ್ಚುಗಳಲ್ಲಿ ಕೆತ್ತನೆ ಕೆಲಸ ಮಾಡುತ್ತಿದ್ದ ಶಿಲ್ಪಗಳಿಂದ ಶಿಲಾಪುತ್ಥಳಿಗಳನ್ನು ಕೆತ್ತುವ ಕಲೆ ಕಲಿತಿರಬಹುದು. 1404ರಲ್ಲಿ ಹಾಗೂ 1407ರಲ್ಲಿ ಈತ ಲೊರೆಂಝೊ ಗಿಬೆರ್ಟಿಯ ಕಲಾಶಾಲೆಯಲ್ಲಿ ವ್ಯಾಸಂಗ ಆರಂಭಿಸಿದ. ಈತನ ಪ್ರಾರಂಭದ ಕೃತಿಗಳಲ್ಲಿ ಗಿಬೆರ್ಟಿಯ ಪ್ರಭಾವವನ್ನು ಚೆನ್ನಾಗಿ ಕಾಣಬಹುದು. ಕೆಲಕಾಲದಲ್ಲೆ ಈತನ ಶೈಲಿಯ ಕ್ರಾಂತಿಕಾರಕ ಬದಲಾವಣೆಗಳಾದವು. ತನ್ನ ನೆಚ್ಚಿನ ಗೆಳೆಯನ ಸಹಾಯದಿಂದ ರೋಮಿಗೆ ಹೋಗಿ ಅಲ್ಲಿಯ ಪುರಾತನ ಅವಶೇಷಗಳನ್ನು ಈತ ಅಭ್ಯಾಸ ಮಾಡಿದನೆಂದೂ ಹೇಳಲಾಗಿದೆ. ಇವೆಲ್ಲವುಗಳ ಪರಿಣಾಮವಾಗಿ ಈತ ರಿನೆಸಾನ್ಸ್ ಕೆಲಯ ಆದ್ಯಪ್ರವರ್ತಕನಾಗಿ ಪುರಾತನ ಶಾಸ್ತ್ರೀಯ ಕಲೆಯನ್ನು ಪುನರುಜ್ಜೀವನಗೊಳಿಸುವ ಪರಿಶ್ರಮಿಸಿದ ಶ್ರೇಷ್ಠ ಕಲಾವಿದನೆನಿಸಿಕೊಂಡ.

ಡಾನಟೆಲೊ ಅನೇಕ ಧಾರ್ಮಿಕ ಸಂಸ್ಥೆಗಳಲ್ಲಿ ಕಲಾಸೇವೆ ಮಾಡಿದ್ದುಂಟು. 1406ರ ನವೆಂಬರಿನಲ್ಲಿ ಫ್ಲಾರೆನ್ಸಿನ ಚರ್ಚಿಗಾಗಿ ಚಂದ್ರಶಿಲೆಯ ಚಿಕ್ಕ ಪ್ರತಿಮೆಗಳೆರಡನ್ನು ಕೆತ್ತುತ್ತಿದ್ದು ಇವುಗಳಲ್ಲಿ ಒಂದನ್ನು ಮಾತ್ರ ಪೂರೈಸಿದ್ದ. ದುರ್ದೈವವೆಂದರೆ ಈ ಪ್ರತಿಮೆಗಳು ಈಗ ಉಳಿದು ಬಂದಿಲ್ಲ. ನಮಗೆ ಇದುವರೆಗೆ ತಿಳಿದುಬಂದಿರುವಂತೆ ಡೇವಿಡ್ ಎಂಬುದು ಈತನ ಪ್ರಾರಂಭದ ಕೃತಿಗಳಲ್ಲಿ ಪ್ರಮುಖವಾದದ್ದು, 1408-9ರಲ್ಲಿ ಚಂದ್ರಶಿಲೆಯಲ್ಲಿ ರೂಪುಗೊಂಡಿದ್ದು. ಇದು ಈಗ ಫ್ಲಾರನ್ಸಿನ ವಸ್ತುಸಂಗ್ರಹಾಲಯದಲ್ಲಿದೆ. ಇದೇ ಮಾಲಿಕೆಯಲ್ಲಿ ರಚಿತವಾದ ಸೇಂಟ್ ಜಾನ್ ಇವಾಂಜೆಲಿಸ್ಟ್ ಎಂಬ ಅಮೃತಶಿಲಾಪುತ್ಥಳಿಯನ್ನೂ (ಈಗ ಇದು ಫ್ಲಾರನ್ಸಿನ ಕತೀಡ್ರಲ್ ಮ್ಯೂಸಿಯಂನಲ್ಲಿದೆ) ಸ್ಟಕ್ರೋಸ್‍ನಲ್ಲಿರುವ ಮರದ ಶಿಲುಬೆಯನ್ನೂ (1409-11ರಲ್ಲಿ ರೂಪುಗೊಂಡದ್ದು) ಹೆಸರಿಸಬಹುದು. ಗಾತಿಕ್ ಸಂಪ್ರದಾಯದಲ್ಲಿ ರಚನೆಗೊಂಡಿದ್ದರೂ ಈ ಕೃತಿಗಳಲ್ಲಿ ವಿಶಿಷ್ಟವಾದ ಶಾಸ್ತ್ರೀಯ ಶೈಲಿ ಮೂಡಿಬಂದಿದೆ.

ಡಾನಟೆಲೊನ ಸ್ವಪ್ರತಿಭೆ ಪರಿಪೂರ್ಣಗೊಂಡಿರುವುದು ಸೇಂಟ್ ಮಾರ್ಕ್ (1411-13) ಮತ್ತು ಸೇಂಟ್ ಜಾರ್ಜ್ (ಸು. 1415-16) ಎರಡು ಅಮೃತ ಶಿಲಾವಿಗ್ರಹಗಳಲ್ಲಿ. ಫ್ಲಾರನ್ಸಿನಲ್ಲಿರುವ ಚರ್ಚಿನ ದೇವಕೋಷ್ಟಕಗಳಲ್ಲಿ ಪ್ರದರ್ಶಿಸುವುದಕ್ಕಾಗಿ ತಯಾರಿಸಿದ ಜೀವಂತ ಕಳೆಯಿಂದ ಕೂಡಿರುವ ಈ ಕೃತಿಗಳಲ್ಲಿ ಆತ್ಮವಿಶ್ವಾಸ ಹಾಗೂ ವ್ಯಕ್ತಿಗತ ತೇಜಸ್ಸು ತುಂಬಿದೆ. ಏಬ್ರಹಂ, ಐಸ್ಯಾಕ್ ಮುಂತಾದ ಪ್ರವಾದಿಗಳ ಕೃತಿಗಳನ್ನು ಇಲ್ಲಿ ಹೆಸರಿಸಬಹುದು. ಅಲ್ಲದೆ ರೋಮನ್ ಪೋರ್ಟ್ರೇಟ್ ಕಲೆಯಿಂದ ಸ್ಫೂರ್ತಿಗೊಂಡ ಟ್ಸೂಕೊನ್ (1423-25) ಮತ್ತು ಜೆರೊಮಿಯಾ (1435) ಎಂಬ ಕೃತಿಗಳಲ್ಲಿ ಕಲಾವಿದನ ಸ್ವಂತಿಕೆ ಎದ್ದು ಕಾಣುತ್ತದೆ. ಉಬ್ಬುಗೆತ್ತನೆಯ ಚಿತ್ರಗಳಲ್ಲಿ ಮುಂಭಾಗದ ವಿಗ್ರಹಗಳು ಮಾತ್ರ ಆಳವಾಗಿಯೂ ಸ್ಪಷ್ಟವಾಗಿಯೂ ಹಿನ್ನೆಲೆಯ ಎಲ್ಲ ಚಿತ್ರಗಳು ಸೂಕ್ಷ್ಮವಾಗಿಯೂ ನವಿರಾಗಿಯೂ ಕಾಣುವಂತೆ ಕೆತ್ತುವುದು ಗಿಬೆರ್ಟಿಯ ತಂತ್ರವಾಗಿತ್ತು. ಆದರೆ ಡಾನಟೆಲೊ ಈ ದೃಶ್ಯ ನಿರೂಪಣೆಯ ಆಳ ಅಗಲಗಳನ್ನು ಇನ್ನೂ ಸ್ಪಷ್ಟವಾಗಿ ನಿರೂಪಿಸುವ ಹೊಸ ತಂತ್ರವನ್ನು ಬಳಸಿದ್ದು ಇದರಿಂದ ಸೂಕ್ಷ್ಮಾತಿ ಸೂಕ್ಷ್ಮ ವಿವರಗಳೆಲ್ಲ ಆಳವಾಗಿ ಹಾಗೂ ಸುಸ್ಪಷ್ಟವಾಗಿ ಎದ್ದುಕಾಣುವುದಲ್ಲದೆ, ಬೆಳಕು ನೆಳಲಿನ ಮೋಡಿಯೂ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಸೇಂಟ್ ಜಾರ್ಜ್ ಕಿಲಿಂಗ್ ದಿ ಡ್ರ್ಯಾಗನ್ (1416-17) ಎಂಬ ಕೃತಿಯನ್ನು ಇಲ್ಲಿ ಹೆಸರಿಸಬಹುದು. ಇದಲ್ಲದೆ 1420-30ರಲ್ಲಿ ಈ ವಿಧಾನವನ್ನು ಅನುಸರಿಸಿ ಈತ ರರಿಸಿದ ಅನೇಕ ಕೃತಿಗಳಲ್ಲಿ ಮುಖ್ಯವಾದುವನ್ನು ಇಲ್ಲಿ ಹೆಸರಿಸಬಹುದು. ದಿ ಪಜಿû ಮಡಾನ (1422) ಈಗ ಇದು ಬರ್ಲಿನ್‍ನಲ್ಲಿದೆ. ದಿ ಶಾ ಮಡಾನ (ಸುಮಾರು 1425-28) (ಬಾಸ್ಟನ್ ವಸ್ತು ಸಂಗ್ರಹಾಲಯದಲ್ಲಿಡಲಾಗಿದೆ), ದಿ ಅಸಂಪ್ಷನ್ ಆಫ್ ದಿ ವಿಷನ್ (1427-28), ದಿ ಅಸಂಪ್ಷನ್ ಎಂಡ್ ಡೆಲಿವರಿ ಆಫ್ ದಿ ಕೀಸ್ ಟು ಸೇಂಟ್ ಪೀಟರ್ (ಸುಮಾರು 1428-30) ಈಗ ಇದು ಲಂಡನ್ನಿನ ವಿಕ್ಟೋರಿಯ ಆಲ್ಬರ್ಟ್ ಮ್ಯೂಸಿಯಂನಲ್ಲಿದೆ.

1430-40ರಲ್ಲಿ ಡಾನಟೆಲೊ ಫ್ಲಾರನ್ಸ್, ರೋಮ್, ಪೀಸಾ, ಮುಂತಾದೆಡೆಗಳಲ್ಲಿ ಪ್ರವಾಸಮಾಡಿದ್ದಲ್ಲದೆ ಕಲಾಕ್ಷೇತ್ರದಲ್ಲಿ ಬಹಳ ದುಡಿದ ಮೀಕೆಲೊಟ್ಸೊನ ಸಹಭಾಗಿತ್ವದಲ್ಲಿ ಶಿಲ್ಪವನ್ನು ಮುಂದುವರಿಸಿದ. ಇವರಿಬ್ಬರೂ ಸೇರಿ ಅಮೃತ ಶಿಲೆಯ ಅನೇಕ ಪಟ್ಟಿಕೆಗಳನ್ನು ಕೆತ್ತಿ ಕಾರ್ಡಿನಲ್ ರಿನಾಲ್ಡೊ ಬ್ರನಾಚಿಯ ಸಮಾಧಿಗಾಗಿ ತಯಾರಿಸಿದರು. ಅಸಂಕ್ಷನ್, ಸಲೂಮಿ ಮುಂತಾದ ಉತ್ತಮ ಕೃತಿಗಳನ್ನು ರಚಿಸಿದ ಕೀರ್ತಿ ಡಾನಟೆಲೊಗೆ ಸಲ್ಲುತ್ತದೆ. ಈ ಕೃತಿಗಳ ಒಟ್ಟು ಸಂಯೋಜನೆಯಲ್ಲಿ ಕಾಣುವ ಸಾಮಂಜಸ್ಯ ಹಾಗೂ ಚಲನೆಯ ಗುಣ ಮೆಚ್ಚುವಂಥದ್ದು. 1432ರಿಂದ 33ರ ವರೆಗೆ ಒಂದು ವರ್ಷಕಾಲ ರೋಮಿನಲ್ಲಿರುವ ಜಾನ್ ಕ್ರಿವೆಲಿಯ ಸಮಾಧಿಯ ಪಾವಟಿಗೆಯ ಫಲಕಗಳನ್ನು ಈತ ಕೆತ್ತಿದ. ಇವೆಲ್ಲಕ್ಕಿಂತ ಹೆಚ್ಚಾಗಿ ಈತನ ಡೇವಿಡ್ ಎಂಬ ಅಮೂಲ್ಯಕೃತಿ ರೋಮಿನ ಪುರಾತನ ಶಿಲ್ಪಕಲೆಯನ್ನು ನೆನಪಿಗೆ ತರುವಂತಿದೆ. ಕಂಚಿನಲ್ಲಿ ರಚಿಸಿದ ಈ ವಿಗ್ರಹದ ಶೈಲಿ ರಿನೇಸಾನ್ಸ್ ಕಲೆಗೆ ಪ್ರೇರಣೆ ನೀಡಿತು. ಹೀಗೆ ಕಂಚಿನ ಪ್ರತಿಮೆಗಳನ್ನು ರಚಿಸುವ ಕಲೆಯಲ್ಲೂ ಡಾನಟೆಲೊ ಸಿದ್ಧಹಸ್ತನಾಗಿದ್ದ. ಸೇಂಟ್ ಲೂಯಿ ಆಫ್ ಫೌಲೌಸಿ ಎಂಬ ಬೃಹದಾಕಾರದ ಪ್ರತಿಮೆಯನ್ನು ಇಲ್ಲಿ ಹೆಸರಿಸಬಹುದು. ಸುಮಾರು 1432ರಲ್ಲಿ ಸಿದ್ಧವಾದ ಈ ಪ್ರತಿಮೆಯನ್ನು ಓರ್‍ಸನ್ ಮೀಕಲ್ ನಲ್ಲಿರುವ ದೇವಕೋಷ್ಟದಲ್ಲಿಡಲಾಯಿತು. 1460ರಲ್ಲಿ ಸ್ಟಕ್ರೋಸ್‍ಗೆ ತರಲಾಯಿತು. ಅದರ ಮೇಲೆ ಸೇರಿಕೊಂಡಿದ್ದ ಕೊಳೆಗಳೆನ್ನೆಲ್ಲ ಶುದ್ಧ ಮಾಡಲಾಗಿ ಪ್ರತಿಮೆಯ ಮೂಲಸೌಂದರ್ಯ ಎದ್ದುಕಾಣತೊಡಗಿತು. ಇಡೀ ಶರೀರವನ್ನು ಮುಚ್ಚುವಂತೆ ಹೊದಿಕೆ ಹಾಕಿದ್ದರೂ ಅದರ ಹಿನ್ನೆಲೆಯಲ್ಲಿರುವ ದೇಹಸೌಂದರ್ಯಕ್ಕೆ ಚ್ಯುತಿಬಂದಂತಿಲ್ಲ.

ಪೋಪ್ ಜಾನ್ XXIII ನ ಸಮಾಧಿಯಲ್ಲಿ ರಚಿಸಿದ ಅತ್ಯುತ್ತಮ ಕೃತಿಗಳನ್ನು (1425-27)ರಲ್ಲಿ ಹೆಸರಿಸಬೇಕು. ದಿ ಫೀಸ್ಟ್ ಆಫ್ ಹೆರಡ್ (1423, 1425) ಎಂಬ ಇನ್ನೊಂದು ಕೃತಿಯನ್ನು ವಾಸ್ತು ವೈಭವದ ಹಿನ್ನೆಲೆಯಲ್ಲಿ ರಚಿಸಲಾಗಿದ್ದು, ಅದರಲ್ಲಿನ ರೇಖಾವಿನ್ಯಾಸದ ಸೊಬಗು ಆಕರ್ಷಕವಾಗಿದೆ. ಇವಲ್ಲದೆ ಸುಂದರವಾದ ಸ್ತ್ರೀವಿಗ್ರಹಗಳೆಂದರೆ ಫೇಯ್ತ್ ಮತ್ತು ಹೋಪ್.

1443ರಲ್ಲಿ ಡಾನಟೆಲೊ ಫ್ಲಾರನ್ಸಿನ ಚರ್ಚಿಗಾಗಿ ಕಂಚಿನ ದ್ವಾರಗಳನ್ನು ರಚಿಸುವುದರಲ್ಲಿದ್ದ. ಆದರೆ ಈ ಮಧ್ಯೆ ಪಜವಕ್ಕೆ ಹೋಗಬೇಕಾಗಿ ಬಂದದ್ದರಿಂದ ಇದು ಕೈಗೂಡಲಿಲ್ಲ. ಅಲ್ಲಿರುವಾಗ ಇರಾಸ್ಮೊಡ ನರ್ನಿ ಎಂಬ ಅತಿ ಭವ್ಯವಾದ ಕೃತಿಯನ್ನು ರಚಿಸಿದ (ಇದನ್ನು ಗಾಟಾ ಮೆ ಲಾಟಾ ಎಂದೂ ಕರೆಯುತ್ತಾರೆ). 1447-50ರಲ್ಲಿ ಸೃಷ್ಟಿಸಿದ ಈ ಮೇರುಕೃತಿಯಲ್ಲಿ ಸಮಕಾಲೀನ ವೀರಯೋಧನ ಲಕ್ಷಣಗಳನ್ನು ಮುಖ್ಯವಾಗಿ ಗಮನಿಸಬೇಕು. ಗಂಭೀರ ಮುಖಭಾವ, ಬೌದ್ಧಿಕ ಪ್ರೌಢಿಮೆಗಳು ಯಥಾವತ್ತಾಗಿ ಇಲ್ಲಿ ಮೂಡಿಬಂದಿವೆ. ಅಂತೋನಿಯಾನ ಕಂಚಿನ ಶಿಲುಬೆ (1444-47) ಭಾವನಾನಿರೂಪಣೆಯ ದೃಷ್ಟಿಯಿಂದ ಅಮೋಘವಾದ್ದು. ಅಂತೋನಿಯಾನ ವೇದಿಕೆಯಲ್ಲಿ ಚಿತ್ರಿಸಿದ ಮಡಾನ, ಸೇಂಟ್ ಫ್ರಾನ್ಸಿಸ್ ಮುಂತಾದ ಕೃತಿಗಳಲ್ಲಿ ನಯ ನಾಜೂಕು, ಭಾವುಕತೆ ಯಥಾವತ್ತಾಗಿ ಮೂಡಿವೆ. ಈ ದಿಸೆಯಲ್ಲಿ ಹೆಸರಿಸಬೇಕಾದ ಇನ್ನೊಂದು ಕೃತಿಯೆಂದರೆ ಮಿರಕಲ್ಸ್ ಆಫ್ ಸೇಂಟ್ ಅಂತೊನಿ. ಇಲ್ಲಿ ಸಂಯೋಜನೆ ಹಾಗೂ ನಿರೂಪಣಾಶಕ್ತಿ ಬಹಳ ಸಾಂದ್ರವಾಗಿ ಮೂಡಿವೆ. ಡಾನಟೆಲೊ ತನ್ನ ಜೀವಿತದ ಕೊನೆಗಾಲದಲ್ಲಿ ಕೆಲವು ಮರದ ವಿಗ್ರಹಗಳನ್ನು ಮಾಡಿದ್ದುಂಟು. ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಎಂಬ ಕೃತಿಯನ್ನು ಇಲ್ಲಿ ಹೆಸರಿಸಬಹುದು. ಇದರಲ್ಲಿ ನೈಜತೆ ಹಾಗೂ ಅಂತಃಶಕ್ತಿ ಪರಿಣಾಮಕಾರಿಯಾಗಿ ಮೂಡಿವೆ. ಈತನ ಕೊನೆಗಾಲದ ಕೃತಿಗಳಲ್ಲಿ ನಿರೂಪಣಾವಿಧಾನ ಪ್ರಧಾನವಾಗಿ ಕಂಡುಬರುತ್ತದೆ. ಮ್ಯಾಗ್ಡಲೀನ್ (ಮರದ ಕೆತ್ತನೆ ಸು.1455) ಯಂಗ್ ಸೇಂಟ್ ಜಾನ್ (ಅಮೃತಶಿಲಾಪ್ರತಿಮೆ), ಸೇಂಟ್ ಜಾನ್ (ಕಂಚಿನದು 1457) ಇತ್ಯಾದಿ ಕೃತಿಗಳನ್ನು ಇಲ್ಲಿ ಉದಾಹರಿಸಬಹುದು. 1450ರ ಸುಮಾರಿಗೆ ಡಾನಟೆಲೊ ಸಾನ ಎಂಬಲ್ಲಿ ವಾಸವಾಗಿದ್ದು ಅಲ್ಲಿಯ ಚರ್ಚುಗಳಿಗಾಗಿ ಭವ್ಯವಾದ ದ್ವಾರಗಳನ್ನು ರಚಿಸುತ್ತಿದ್ದ. ಲೊರೆಂಝೊ ಚರ್ಚಿನಲ್ಲಿ ಈತ ರಚಿಸಿದ ಉಬ್ಬು ಗೆತ್ತನೆಯ ಶಿಲ್ಪಗಳಲ್ಲಿ ಕ್ರೈಸ್ತಧರ್ಮದ ಮೂಲ ಧಾರ್ಮಿಕ ಮನೋಭಾವ ಯಥಾವತ್ತಾಗಿ ಮೂರ್ತೀಭವಿಸಿದೆ. ದುರ್ದೈವದ ಮಾತೆಂದರೆ 1466ರ ಡಿಸೆಂಬರ್ 13ರಂದು ಈತ ಅಕಾಲಮರಣಕ್ಕೀಡಾದ (ಆತನನ್ನು ಅಲ್ಲೇ ಸಮಾಧಿ ಮಾಡಲಾಯಿತು) ಕಾರಣ ಆ ಕೃತಿಯನ್ನು ಪೂರ್ಣ ಮಾಡಲಾಗಲಿಲ್ಲ. 15ನೆಯ ಶತಮಾನದ ಕಲಾಚರಿತ್ರೆಯಲ್ಲೆ ಖ್ಯಾತನಾದ ಡಾನಟೆಲೊ ಪುರಾತನ ಕಲಾಶೈಲಿಯನ್ನು ಅತ್ಯಂತ ಸಮರ್ಥವಾಗಿ ಪುನರುಜ್ಜೀವಗೊಳಿಸಿ ಕೀರ್ತಿವಂತನಾದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಡಾನಟೆಲೊ&oldid=1080327" ಇಂದ ಪಡೆಯಲ್ಪಟ್ಟಿದೆ