ಆಗಸ್ಟಸ್ ಎಡ್ವಿನ್ ಜಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೈಮ್ ಪತ್ರಿಕೆಯ ಮುಖಪುಟದಲ್ಲಿ ಆಗಸ್ಟಸ್ ಎಡ್ವಿನ್ ಜಾನ್


ಆಗಸ್ಟಸ್ ಎಡ್ವಿನ್ ಜಾನ್(1878-1961). ಇಂಗ್ಲೆಂಡಿನ ವರ್ಣ ಚಿತ್ರಕಾರ. ಭಾವಚಿತ್ರ. ಪ್ರಕೃತಿಚಿತ್ರ, ರೇಖಾಚಿತ್ರ ಮತ್ತು ಕೆತ್ತನೆ ಕೆಲಸಗಳಲ್ಲೂ ಪ್ರವೀಣನಾಗಿದ್ದ.

ವೇಲ್ಸ್‍ನ ಟೆನ್ಬಿ ಎಂಬಲ್ಲಿ ಜನಿಸಿದ ಈತ ಲಂಡನ್ನಿನ ಸ್ಲೇಡ್ ಲಲಿತಕಲಾ ಶಾಲೆಯಲ್ಲಿ ವ್ಯಾಸಂಗಮಾಡಿ, ಪ್ರತಿಭಾವಂತ ಎಂದು ಹೆಸರಾದ. ಅನಂತರ ಲಿವರ್‍ಪೂಲ್ ವಿಶ್ವವಿದ್ಯಾಲಯದಲ್ಲಿ ವರ್ಣಚಿತ್ರದ ಅಧ್ಯಾಪಕನಾದ (1901-1904). ವಾಟೋ, ರೆಂಬ್ರ್ಯಾಂಟ್, ಗೋಯಾ ಮುಂತಾದ ಪ್ರಸಿದ್ಧ ಕಲಾವಿದರಿಂದ ಪ್ರಭಾವಿತನಾದ ಈತ ಪ್ರಾರಂಭದಲ್ಲಿ ತನ್ನ ಕುಟುಂಬದವರ ಭಾವ ಚಿತ್ರಗಳನ್ನು ಬರೆದ. ಇವುಗಳಲ್ಲಿ ಈತನ ಹೆಂಡತಿಯ ಭಾವಚಿತ್ರ ಪ್ರಸಿದ್ಧವಾಗಿದೆ. ಇದು ಈಗ ಟೇಟ್ ಗ್ಯಾಲರಿಯಲ್ಲಿದೆ. 1910ರ ಅನಂತರ ಈತನ ಶೈಲಿ ಬದಲಾಯಿತು. ಅಲೆಮಾರಿ ಜಿಪ್ಸಿಗಳು ಮತ್ತು ಭಿಕ್ಷುಕರ ಜೀವನದಿಂದ ವಸ್ತುವನ್ನು ಆರಿಸಿಕೊಳ್ಳಲು ಆರಂಭಿಸಿದ. ಅದಕ್ಕಾಗಿ ಜಿಪ್ಸಿಗಳ ಜೊತೆಗಿದ್ದು ಅವರ ನಡೆನುಡಿಗಳನ್ನು ಅಭ್ಯಾಸಮಾಡಿದ. ಡರ್ವೆಂಟ್ ಲೀಸ್ ಮತ್ತು ಜೆ.ಡಿ. ಇನ್ಸ್‍ರೊಡನೆ 1911 ರಿಂದ 1914ರ ವರೆಗ ವೇಲ್ಸ್ ಮತ್ತು ದಕ್ಷಿಣ ಫ್ರಾನ್ಸಿನ ಪ್ರದೇಶಗಳಲ್ಲಿ ಸಂಚರಿಸಿದ. ಇದೇ ಸಮಯದಲ್ಲಿ ಇನ್ಸ್‍ನ ಪ್ರಭಾವಕ್ಕೆ ಒಳಗಾದ. ಎನ್‍ಕ್ಯಾಂಪ್‍ಮೆಂಟ್ ಆಫ್ ಡಾರ್ಟಮೂರ್ ಎಂಬ ವಿಶಿಷ್ಟ ಕೃತಿಯನ್ನು 1906ರಲ್ಲಿ ರಚಿಸಿದ. ಈತನ ಕೆಲವು ಪ್ರಸಿದ್ದ ಕೃತಿಗಳಿವು : ಲಿರಿಕ್ ಫ್ಯಾಂಟಸಿ (1911); ಗಾಲ್‍ವೆ (1916) ; ಜಾರ್ಜ್ ಬರ್ನಾರ್ಡ್ ಷಾ (1914) ; ಲೇಡಿ ಒಟ್ಟೋಲಿನ್ ಮೊರೆಲ್ (1926).

ಜಾನ್ ಹಲವು ಸಂಘಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ. 1903ರಲ್ಲಿ ನ್ಯೂ ಇಂಗ್ಲಿಷ್ ಆರ್ಟ್ ಕ್ಲಬ್ಬಿನ ಸದಸ್ಯನಾಗಿದ್ದ. 1921ರಲ್ಲಿ ರಾಯಲ್ ಅಕಾಡೆಮಿ ಆಫ್ ಆಟ್ರ್ಸ್ ಸಂಸ್ಥೆಯ ಸದಸ್ಯನಾಗಿ ಚುನಾಯಿತನಾದ. 1933-1940ರ ವರೆಗೆ ಲಂಡನಿನ ಟೇಟ್ ಗ್ಯಾಲರಿಯ ನಿರ್ವಾಹಕನಾಗಿದ್ದ.

ಆರನೆಯ ಜಾರ್ಜ್ ದೊರೆ 1942ರಲ್ಲಿ ಈತನಿಗೆ ಆರ್ಡರ್ ಆಫ್ ಮೆರಿಟ್ ಎಂಬ ಗೌರವ ಪದವಿಯನ್ನು ನೀಡಿ ಸನ್ಮಾನಿಸಿದ. ಈತ ಯಾವ ಹೊಸ ಚಿತ್ರ ಶೈಲಿಯನ್ನು ಸ್ಥಾಪಿಸಲಿಲ್ಲ; ಹಾಗೆಯೇ ತನ್ನ ಶೈಲಿಯಲ್ಲಿ ಯಾರನ್ನೂ ಅನುಕರಿಸಲೂ ಇಲ್ಲ.