ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೧೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅ.ನ.ಕೃಷ್ಣರಾಯ
ಅ.ನ.ಕೃಷ್ಣರಾಯ

ಅನಕೃ (ಅರಕಲಗೂಡು ನರಸಿಂಗರಾಯ ಕೃಷ್ಣರಾಯರು) ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ನೂರಾ ಹತ್ತು ಕಾದಂಬರಿಗೆಳನ್ನು ಬರೆದಿರುವ ಅನಕೃ ಕಾದಂಬರಿ ಸಾರ್ವಭೌಮರೆಂದು ಪ್ರಖ್ಯಾತರಾಗಿದ್ದರು. ಪ್ರಗತಿಶೀಲ ಸಾಹಿತ್ಯ ಚಳುವಳಿಯ ಪ್ರಮುಖರೆಂದು ಕರೆಸಿಕೊಂಡವರು. ಅವರ ಸಂಧ್ಯಾರಾಗ, ಉದಯರಾಗ, ನಟಸಾರ್ವಭೌಮ, ಮಂಗಳಸೂತ್ರ ಮುಂತಾದ ಕಾದಂಬರಿಗಳು ಜನಪ್ರಿಯವಾಗಿವೆ. ಶ್ರೀಸಾಮಾನ್ಯನಿಗೂ ಅರ್ಥವಾಗುವಂತಹ ಸರಳವಾದ ಭಾಷೆ ಉಪಯೋಗಿಸಿ ಬರೆಯುತ್ತಿದ್ದವರಲ್ಲೊಬ್ಬರು. ಅನಕೃ ಪ್ರಸಿದ್ಧ ವಾಗ್ಮಿ, ಕೂಡ. ನೇರ,ನಿಷ್ಟುರ ವ್ಯಕ್ತಿತ್ವ ಅನಕೃ ಅವರದ್ದೆಂದು ಹೇಳಲಾಗುತ್ತದೆ.

ಅನಕೃ ಮಾಡಿದ ಅತಿ ಮಹತ್ತರ ಕಾರ್ಯವೆಂದರೆ ಕನ್ನಡ ಚಳುವಳಿಗಳನ್ನು ಹುಟ್ಟು ಹಾಕಿದ್ದು. ಕನ್ನಡಿಗರ ಸ್ವಾಭಿಮಾನವನ್ನು ತಮ್ಮ ಸಿಡಿಲನುಡಿಗಳಂತಹ ಭಾಷಣಗಳ ಮೂಲಕ ಬಡಿದೆಬ್ಬಿಸಿದರು. ಕರ್ನಾಟಕದಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದ್ದ ಪರಿಸ್ಥಿತಿಯಲ್ಲಿ ಕನ್ನಡದ ಪಾಂಚಜನ್ಯ ಮೊಳಗಿಸಿದರು ಅನಕೃ. "ಕನ್ನಡ ನಮ್ಮ ಭಾಷೆ. ಅದನ್ನು ಮರೆತು ಬಾಳುವುದು ಮೂರ್ಖತನ, ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಧಾನ ಪೂಜೆ ಸಲ್ಲಬೇಕು, ಕನ್ನಡ ಚಲನಚಿತ್ರಗಳು ಪ್ರದರ್ಶನಗೊಳ್ಳಬೇಕು, ಕನ್ನಡ ಆಡಳಿತ ಭಾಷೆಯಾಗಬೇಕು" ಎಂದು ಹೋರಾಟ ಮಾಡಿ ಮಾಸ್ತಿಯವರಿಂದ "ಅಚ್ಚ ಕನ್ನಡಿಗ" ಎಂಬ ಪ್ರಶಂಸೆ ಪಡೆದುಕೊಂಡವರು ಅನಕೃ.