ವಿಷಯಕ್ಕೆ ಹೋಗು

ಕುಲುಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೦೭ರ ಕೈಗಾರಿಕಾ ಕುಲುಮೆ

ಕುಲುಮೆ ಎಂದರೆ ಹೆಚ್ಚಿನ ತಾಪಮಾನದ ಕಾಯಿಸುವಿಕೆಗೆ ಬಳಸಲಾದ ಒಂದು ಸಾಧನ. ಕುಲುಮೆಗೆ ಬೇಕಾದ ಉಷ್ಣ ಶಕ್ತಿಯನ್ನು ನೇರವಾಗಿ ಇಂಧನ ದಹನದಿಂದ, ವಿದ್ಯುಚ್ಛಕ್ತಿಯಿಂದ (ಉದಾಹರಣೆಗೆ ವಿದ್ಯುತ್‌ಚಾಪ ಕುಲುಮೆ), ಅಥವಾ ಚೋದನ ಕುಲುಮೆಗಳಲ್ಲಿ ಚೋದನ ತಾಪನದಿಂದ ಪೂರೈಸಬಹುದು. ಬ್ರಿಟನ್‍ನಲ್ಲಿ ಕುಲುಮೆ ಎಂದರೆ ಅನೇಕ ಸಂದರ್ಭಗಳಲ್ಲಿ ಬಳಸಲಾದ ಕೈಗಾರಿಕಾ ಕುಲುಮೆ, ಉದಾಹರಣೆಗೆ ಅದಿರಿನಿಂದ ಲೋಹವನ್ನು ಹೊರತೆಗೆಯುವುದು (ಸ್ಮೆಲ್ಟಿಂಗ್) ಅಥವಾ ತೈಲ ಸಂಸ್ಕರಣಾಗಾರಗಳು ಮತ್ತು ಇತರ ರಾಸಾಯನಿಕ ಕಾರ್ಖಾನೆಗಳಲ್ಲಿ, ಉದಾಹರಣೆಗೆ ಆಂಶಿಕ ಶುದ್ಧೀಕರಣ ಉರುಳೆಗಳಿಗೆ ಉಷ್ಣ ಮೂಲವಾಗಿ.

ಕುಲುಮೆಗಳನ್ನು ನಾಲ್ಕು ವರ್ಗಗಳಾಗಿ ವರ್ಗೀಕರಿಸಬಹುದು: ನೈಸರ್ಗಿಕ ಪ್ರವಾಹ ಕುಲುಮೆ, ಒತ್ತಾಯಪಡಿಸಿದ ಗಾಳಿ ಕುಲುಮೆ, ಒತ್ತಾಯಪಡಿಸಿದ ಪ್ರವಾಹ ಕುಲುಮೆ, ಸಾಂದ್ರೀಕರಣ ಕುಲುಮೆ. ಮೊದಲ ವರ್ಗದ ಕುಲುಮೆಗಳೆಂದರೆ ನೈಸರ್ಗಿಕ ಪ್ರವಾಹ, ವಾತಾವರಣ ಸುಡುಕ ಕುಲುಮೆಗಳು. ಈ ಕುಲುಮೆಗಳು ಇಟ್ಟಿಗೆ, ಕಲ್ಲು ಅಥವಾ ಉಕ್ಕಿನ ಹೊರ ಪದರದ ಒಳಗೆ ಜೋಡಿಸಲ್ಪಟ್ಟ ಎರಕಹೊಯ್ದ ಕಬ್ಬಿಣ ಅಥವಾ ರಿವೆಟ್‍ಗೊಳಿಸಿದ ಉಕ್ಕಿನ ಉಷ್ಣ ವಿನಿಮಯಕಗಳನ್ನು ಹೊಂದಿರುತ್ತಿದ್ದವು. ಶಾಖ ವಿನಿಮಯಕಾರಕಗಳಿಗೆ ಇಟ್ಟಿಗೆ ಅಥವಾ ಕಲ್ಲಿನ ಚಿಮಣಿಗಳ ಮೂಲಕ ಹೊರಗಂಡಿಗಳನ್ನು ಒದಗಿಸಲಾಗುತ್ತಿತ್ತು. ವಾಯು ಪರಿಚಲನೆಯು ಕಟ್ಟಿಗೆ ಅಥವಾ ಲೋಹದಿಂದ ನಿರ್ಮಿಸಲಾದ ದೊಡ್ಡ, ಮೇಲ್ಮುಖವಾಗಿ ಭದ್ರಪಡಿಸಲಾದ ಕೊಳವೆಗಳನ್ನು ಅವಲಂಬಿಸಿತ್ತು. ಈ ಪೈಪ್‍ಗಳು ಬಿಸಿ ಗಾಳಿಯನ್ನು ನೆಲಹಾಸಿಗೆ ಅಥವಾ ಮನೆಯ ಒಳಗಿನ ಗೋಡೆಯ ತೆರಪುಗಳಿಗೆ ನಿರ್ದೇಶಿಸುತ್ತಿದ್ದವು. ಎರಡನೇ ವರ್ಗದ ಕುಲುಮೆ ಎಂದರೆ ಒತ್ತಾಯಪಡಿಸಿದ ಗಾಳಿಯ, ವಾತಾವರಣ ಸುಡುಕ ಶೈಲಿಯ ಕುಲುಮೆ ಮತ್ತು ಇದು ಎರಕಹೊಯ್ದ ಕಬ್ಬಿಣ ಅಥವಾ ವಿಭಾಗೀಯ ಉಕ್ಕಿನ ಉಷ್ಣ ವಿನಿಮಯಕಾರಕವನ್ನು ಹೊಂದಿತ್ತು. ೧೯೫೦ ಮತ್ತು ೧೯೬೦ರ ದಶಕದಾದ್ಯಂತ ದೊಡ್ಡ ನೈಸರ್ಗಿಕ ಪ್ರವಾಹ ವ್ಯವಸ್ಥೆಗಳನ್ನು ಬದಲಿಸಲು ಈ ಶೈಲಿಯ ಕುಲುಮೆಯನ್ನು ಬಳಸಲಾಯಿತು. ಕೆಲವೊಮ್ಮೆ ಇದನ್ನು ಅಸ್ತಿತ್ವದಲ್ಲಿದ್ದ ಗುರುತ್ವ ನಾಳಜಾಲದ ಮೇಲೆ ಅನುಸ್ಥಾಪಿಸಲಾಗುತ್ತಿತ್ತು. ಬಿಸಿಯಾದ ಗಾಳಿಯನ್ನು ಬೆಲ್ಟ್ ಚಾಲಿತ ಮತ್ತು ವ್ಯಾಪಕ ಶ್ರೇಣಿಯ ವೇಗಗಳಿಗಾಗಿ ವಿನ್ಯಾಸಗೊಳಿಸಲಾದ ಬೀಸುಗಗಳು ಚಲಿಸುತ್ತಿದ್ದವು. ಆಧುನಿಕ ಕುಲುಮೆಗಳಿಗೆ ಹೋಲಿಸಿದರೆ ಈ ಕುಲುಮೆಗಳು ಕೂಡ ದೊಡ್ಡದಾಗಿದ್ದು, ಚಿಲಕವಿರುವ ತೆಗೆಯಬಲ್ಲ ಫಲಕಗಳಿರುವ ಭಾರದ ಉಕ್ಕಿನ ಹೊರಭಾಗಗಳನ್ನು ಹೊಂದಿರುತ್ತಿದ್ದವು. ಮೂರನೇ ವರ್ಗದ ಕುಲುಮೆಯೆಂದರೆ ಒತ್ತಾಯಪಡಿಸಿದ ಪ್ರವಾಹ, ಮಧ್ಯಮ ದಕ್ಷತೆಯ ಕುಲುಮೆ. ಇದು ಉಕ್ಕಿನ ಉಷ್ಣ ವಿನಿಮಯಕ ಮತ್ತು ಬಹುವೇಗದ ಬೀಸುಗವನ್ನು ಹೊಂದಿತ್ತು. ಇವು ಉಷ್ಣ ವಿನಿಮಯಕದ ಮೂಲಕ ಗಾಳಿಯನ್ನು ಎಳೆಯುವ ದಹನ ಗಾಳಿ ಬೀಸುಗಗಳನ್ನು ಹೊಂದಿದ್ದವು. ಇದು ಇಂಧನ ದಕ್ಷತೆಯನ್ನು ಬಹಳವಾಗಿ ಹೆಚ್ಚಿಸುತ್ತಿತ್ತು ಮತ್ತು ಇದೇ ಸಮಯದಲ್ಲಿ ಉಷ್ಣ ವಿನಿಮಯಕಗಳು ಚಿಕ್ಕದಾಗುವುದಕ್ಕೆ ಅವಕಾಶ ನೀಡುತ್ತಿತ್ತು.

"https://kn.wikipedia.org/w/index.php?title=ಕುಲುಮೆ&oldid=873810" ಇಂದ ಪಡೆಯಲ್ಪಟ್ಟಿದೆ