ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿನ್ನೆಲೆ[ಬದಲಾಯಿಸಿ]

೧೯೭೦ರ ಫೆಬ್ರವರಿ ತಿಂಗಳಿನಲ್ಲಿ ಕೇರಳ ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ಅನುಸಾರ ಕಾಸರಗೋಡಿನ ಬಳಿಯಿರುವ ಎಡನೀರು ಮಠಕ್ಕೆ ಸೇರಿದ ಆಸ್ತಿಗಳ ಸ್ವಾಧೀನ ಕುರಿತು ನೋಟೀಸು ಜಾರಿ ಮಾಡುತ್ತದೆ. ಕೇರಳ ರಾಜ್ಯ ಸರ್ಕಾರದ ಭೂಸುಧಾರಣೆ ಕುರಿತು ಮಠದ ಸ್ವಾಮೀಜಿಗಳಾದ ಸ್ವಾಮಿ ಕೇಶವಾನಂದ ಭಾರತಿಯವರು ನ್ಯಾಯವಾದಿಗಳಾದ ನಾನಾಭೋಯ್ ಫಾಲ್ಕಿವಾಲಾ ಅವರ ಸಲಹೆಯ ಮೇರೆಗೆ ಭಾರತದ ಸಂವಿಧಾನದ ಆರ್ಟಿಕಲ್ ೨೬ರ ಅನುಸಾರ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಕೇಸು ಧಾಖಲಿಸುತ್ತಾರೆ.ದೇಶದ ನಾಗರೀಕರು ಆಸ್ತಿ ಹೊಂದುವುದು ಮೂಲಭೂತ ಹಕ್ಕೋ ಅಲ್ಲವೋ ಎನ್ನುವುದು ಈ ಕೇಸಿನ ಮುಖ್ಯ ವಸ್ತುವಾಗುತ್ತದೆ. ಹಾಗು ಮೂಲಭೂತ ಹಕ್ಕುಗಳ ಮಾನ್ಯತೆ ಬಗ್ಗೆ ವಿಸ್ಮೃತ ಚರ್ಚೆಗೆ ಈ ಕೇಸು ನಾಂದಿಯಾಗುತ್ತದೆ. ಈ ಕೇಸಿನ ಕುರಿತಾಗಿ ನ್ಯಾಯಾಲಯದಲ್ಲಿ ಬರೋಬ್ಬರಿ ೬೮ ದಿನಗಳ ಕಾಲ ವಾದ ಪ್ರತಿವಾದಗಳು ನಡೆಯುತ್ತವೆ. ೧೯೭೨ರ ಅಕ್ಟೋಬರ್ ೩೧ ರಂದು ಆರಂಭವಾದ ವಾದ ಪ್ರತಿವಾದಗಳು ೧೯೭೩ರ ಮಾರ್ಚ್ ೨೩ ಸಮಾಪ್ತಿಯಾಗುತ್ತವೆ. ಈ ಕೇಸಿನ ಕುರಿತಾಗಿ ಬಂದ ತೀರ್ಪು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಗು ಭಾರತದ ಸಂವಿಧಾನದ ಕುರಿತಾದ ಮಹತ್ತರ ಮೈಲಿಗಲ್ಲಾಗಿದೆ.[೧][೨][೩]

ಪ್ರಕರಣದ ತೀರ್ಪು[ಬದಲಾಯಿಸಿ]

ಭಾರತದ ಸರ್ವೋಚ್ಛ ನ್ಯಾಯಾಲಯ ಈ ಕೇಸನ್ನು ಆ ಹಿಂದೆ ತೀರ್ಪಿತ್ತಿದ್ದ ಗೋಲಕ್ ನಾಥ್ ವೆರ್ಸಸ್ ಪಂಜಾಬ್ ರಾಜ್ಯ ಸರ್ಕಾರ(೧೯೬೭) ದ ಕೇಸಿನ ತೀರ್ಪಿನ ನೆಲೆಗಟ್ಟಿನಲ್ಲಿ ಹಾಗು ೨೪, ೨೫, ೨೯ನೇ ಸಾಂವಿಧಾನಿಕ ತಿದ್ದುಪಡಿಗಳನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿಸುತ್ತದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತೀ ದೊಡ್ಡದು ಎನ್ನಬಹುದಾದಷ್ಟು ಅಂದರೆ ಹದಿಮೂರು ಜನ ನ್ಯಾಯಾಧೀಶರಿದ್ದ ಸಾಂವಿಧಾನಿಕ ನ್ಯಾಯಪೀಠ ಈ ಕೇಸನ್ನು ಕೂಲಂಕುಷವಾಗಿ ಪರಿಶೀಲಿಸಿ ಹನ್ನೊಂದು ವಿವಿಧ ತೀರ್ಪುಗಳನ್ನು ಕೊಡುತ್ತದೆ, ಅದರಲ್ಲಿ ಕೆಲವು ತೀರ್ಪುಗಳು ಒಪ್ಪಿತವಾದರೆ ಇನ್ನು ಕೆಲವು ಒಪ್ಪಿತವಾಗದೆ ಉಳಿಯುತ್ತವೆ. ಗೋಲಕ್ ನಾಥರ ಹಾಗೂ ಕೇಶವಾನಂದ ಭಾರತಿ ಇಬ್ಬರ ಕೇಸುಗಳನ್ನು ವಹಿಸಿಕೊಂಡು ಆಯಾ ರಾಜ್ಯ ಸರ್ಕಾರಗಳ ವಿರುದ್ಧ ವಾದಿಸಿದ ವಕೀಲರು ನಾನಾಭೋಯ್ ಫಾಲ್ಕಿವಾಲ. ಫಾಲಿ ನಾರಿಮನ್ ಅವರ ನೇತೃತ್ವದಲ್ಲಿ ಫಾಲ್ಕಿವಾಲ ವಾದಿಸುತ್ತಿದ್ದರು.

ತೀರ್ಪಿನ ಪ್ರಾಮುಖ್ಯತೆ[ಬದಲಾಯಿಸಿ]

ಭಾರತದ ನಾಗರೀಕರು ಆಸ್ತಿ ಹೊಂದುವುದು ಮೂಲಭೂತ ಅಂಶವೋ ಅಲ್ಲವೋ ಎಂಬುವುದೇ ಕೇಸಿನ ಮುಖ್ಯ ಅಂಶವಾಗಿತ್ತು.ಭಾರತದ ಸರ್ವೋಚ್ಚ ನ್ಯಾಯಾಲಯ ಸಾಂವಿಧಾನಿಕ ತಿದ್ದುಪಡಿಗಳು ಶಾಸಕಾಂಗದ ಸಭೆಗಳಲ್ಲಿ ಚರ್ಚಿತವಾಗಿ ಉಂಟಾಗಿದ್ದರೂ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಇರಬೇಕು ಎಂದು ಅಭಿಪ್ರಾಯ ಪಟ್ಟಿತು. ಅಷ್ಟೇ ಅಲ್ಲದೆ ಪರಿಚ್ಛೇದ (ಶೆಡ್ಯೂಲ್) ೯ ರಲ್ಲಿ ಶಾಸಕಾಂಗದಲ್ಲಿ ನಿರ್ಣಯಿಸಲಾದ ಸಾಂವಿಧಾನಿಕ ತಿದ್ದುಪಡಿಗಳು ನ್ಯಾಯಿಕ ಸಮಿತಿಗಳಿಂದ ಅಧ್ಯಯನಕ್ಕೊಳಪಟ್ಟು ಅನಂತರ ತಿದ್ದುಪಡಿಗೊಳ್ಳುವಂತೆಯೂ ಮುಂದಿನ ಸಾಂವಿಧಾನಿಕ ತಿದ್ದುಪಡಿಗಳಿಗೆ ಹೊಸ ಮಾರ್ಗಸೂಚಿ ಜಾರಿ ಮಾಡಿತು. ಭಾರತದ ಸಂಸತ್ತು ಪೂರ್ಣ ಮತದೊಂದಿಗೆ ಯಾವುದೇ ತಿದ್ದುಪಡಿಯನ್ನು ಅಂಗೀಕರಿಸಿದ್ದಾಗ್ಯೂ ಮುನ್ನಡೆಯುವ ತಿದ್ದುಪಡಿಯಲ್ಲಿ ಸಾಂವಿಧಾನಿಕ ಲೋಪ ದೋಷಗಳಿದ್ದರೆ ಅದನ್ನು ನ್ಯಾಯಿಕವಾಗಿ ತಿರಸ್ಕರಿಸಬಹುದು ಎನ್ನುವ ತೀರ್ಪು ಭಾರತೀಯ ಕಾನೂನು ವಲಯದಲ್ಲಿ ವಿಶೇಷ ಸ್ಥಾನ ಪಡೆಯಿತು.[೪]

ಈಗಲೂ ಭಾರತೀಯ ವಕೀಲಿ ಪದವಿ ಪಡೆಯುವ ವಿದ್ಯಾರ್ಥಿಗಳು ಅಭ್ಯಸಿಸುವ ಬಹು ಮುಖ್ಯವಾದ ಕೇಸುಗಳಲ್ಲಿ ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರದ ಕೇಸು ಅಗ್ರಗಣ್ಯವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿದ ಕೇಶವಾನಂದ ಭಾರತಿಗಳ ಕೇಸು, ದಿ ಹಿಂದೂ ಪತ್ರಿಕೆಯ ಆಂಗ್ಲ ವರದಿ".
  2. "ಕೇಶವಾನಂದ ಭಾರತಿಗಳ ಕೇಸು ಕುರಿತಾದ ವರದಿ, ಔಟ್ಲುಕ್ ಇಂಡಿಯಾ ತಾಣದಲ್ಲಿ".
  3. "ಕೇಶವಾನಂದ ಭಾರತಿಗಳ ಕೇಸು,ಆಂಗ್ಲ ವರದಿ".
  4. "ಕೇಶವಾನಂದ ಭಾರತೀ ವರ್ಸಸ್‌ ಕೇರಳ ಸರಕಾರ ಕೇಸು ಸ್ಟಡಿ ಖ್ಯಾತಿ ಎಡನೀರು ಮಠದಲ್ಲಿ ಸಂವಿಧಾನ ಪೀಠಿಕೆ ಬಗ್ಗೆ ಉಪನ್ಯಾಸ".