ಗೀತಾ ನಾಗಭೂಷಣ
ಗೀತಾ ನಾಗಭೂಷಣ | |
---|---|
ಚಿತ್ರ | [[File:|200px]] |
ಜನನದ ದಿನಾಂಕ | ೨೫ ಮಾರ್ಚ್ 1942 |
ಸಾವಿನ ದಿನಾಂಕ | ೨೮ ಜೂನ್ 2020 |
ಮರಣ ಸ್ಥಳ | ಗುಲ್ಬರ್ಗ |
ವೃತ್ತಿ | academic, ಲೇಖಕ |
ರಾಷ್ಟ್ರೀಯತೆ | ಭಾರತ |
ಮಾತನಾಡುವ ಅಥವಾ ಬರೆಯುವ ಭಾಷೆಗಳು | ಕನ್ನಡ |
ಪೌರತ್ವ | ಭಾರತ |
ದೊರೆತ ಪ್ರಶಸ್ತಿ | ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಲಿಂಗ | ಮಹಿಳೆ |
ಗೀತಾ ನಾಗಭೂಷಣ ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರ್ತಿಯರಲ್ಲೊಬ್ಬರು. ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ತಮ್ಮ ಎಡೆಬಿಡದ ಪರಿಶ್ರಮದಿಂದ ಬಿ.ಎ, ಬಿ.ಎಡ್, ಎಂ.ಎ ಪದವಿಗಳನ್ನು ಗಳಿಸಿ ಬಹುಕಾಲ ಅಧ್ಯಾಪನ ವೃತ್ತಿಯನ್ನೂ ನಡೆಸಿದವರು. ಜೊತೆಗೆ ತಮ್ಮ ಶಿಕ್ಷಕ ವೃತ್ತಿ, ಬರಹ ಪ್ರವೃತ್ತಿ ಮತ್ತು ನಡೆಗಳಿಂದ ಸಮಾಜಕ್ಕೆ ಬೆಳಕು ಕಾಣಿಸುವಲ್ಲಿ ನಿರಂತರ ಪ್ರಯತ್ನಶೀಲರಾದವರು.
ಜೀವನ
[ಬದಲಾಯಿಸಿ]ಗೀತಾ ನಾಗಭೂಷಣ, ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಸಾವಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಮಾರ್ಚ್ ೨೫, ೧೯೪೨ರಲ್ಲಿ ಶಾಂತಪ್ಪ, ಶರಣಮ್ಮದಂಪತಿಗಳ ಪ್ರೀತಿಯ ಮಗಳಾಗಿ ಜನಿಸಿದರು. ಕಲ್ಬುರ್ಗಿಯ ಕನ್ಯಾ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ಪಾ ್ರಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿಯೇ ಮುಗಿಸಿದ ಗೀತಾ, ಗುಲ್ಬರ್ಗಾದ ಕಲೆಕ್ಟರ್ ಆಫೀಸಿನಲ್ಲಿ ಗುಮಾಸ್ತೆಯ ಕೆಲಸಕ್ಕೆ ಸೇರಿದರು. ಅಲ್ಲಿ ದುಡಿಯುತ್ತಲೇ, ಶರಣಬಸವೇಶ್ವರ ಕಲಾಕಾಲೇಜಿನಲ್ಲಿ ಪದವಿಗಳಿಸಿದರು. ಬಿ. ಎ. ಮುಗಿಸಿದ ನಂತರ, ಗುಮಾಸ್ತ ಹುದ್ದೆಯನ್ನು ತೊರೆದು, ಶರಣಬಸಪ್ಪ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇರಿ, ಬಿ. ಎಡ್ ಮುಗಿಸಿದರು. ತದನಂತರ, ಸೊಲ್ಲಾಪುರದ ಕಾಲೇಜಿನಿಂದ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. ಗುಲ್ಬರ್ಗಾದ ನಾಗೇಶ್ವರ ಸಂಯುಕ್ತ ಪದವೀಪೂರ್ವ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಅಲ್ಲಿಯೇ ಪ್ರಾಂಶುಪಾಲರೂ ಆಗಿ, ಒಟ್ಟು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು.
ಸಾಹಿತ್ಯ ಕೃತಿ
[ಬದಲಾಯಿಸಿ]ಡಾ. ಗೀತಾ ನಾಗಭೂಷಣ ಅವರು 1968ರ ವರ್ಷದಲ್ಲಿ ಪ್ರಕಟಗೊಂಡ ‘ತಾವರೆಯ ಹೂವು ಕಾದಂಬರಿಯಿಂದ ಮೊದಲ್ಗೊಂಡು ಇತ್ತೀಚಿನ ‘ಬದುಕು ’ ಕಾದಂಬರಿಯವರೆಗೆ ಇಪ್ಪತ್ತೇಳು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ‘ಬದುಕು’ ಕಾದಂಬರಿಗೆ 2004ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಗೀತಾ ನಾಗಭೂಷಣರ 'ಹಸಿಮಾಂಸ ಮತ್ತು ಹದ್ದುಗಳು'[೧] ಎನ್ನುವ ಕಾದಂಬರಿಯು ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಅವರ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಹಲವಾರು .
ಸಾಹಿತ್ಯ ಸಮ್ಮೇಳನದ ಅಧ್ಯಕ್ಷಣಿಯಾಗಿ
[ಬದಲಾಯಿಸಿ]ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಡಾ. ಗೀತಾ ನಾಗಭೂಷಣರು ಹೇಳಿದ ಮಾತುಗಳು ಮಾರ್ಮಿಕವಾಗಿವೆ. “ವಚನಕಾರರು, ಹರಿದಾಸರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ಸಾವಿರಾರು ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಜನಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತಕಾರ್ಯವನ್ನು ಇಂದಿನ ಸಾಹಿತಿಗಳೂ ಸಾಧಿಸಿ ತೋರಿಸಬೇಕಾಗಿದೆ. ಬರೀ ಶಬ್ದಾಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ, ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದ ಅಭ್ಯುದಯಕ್ಕಾಗಿ ದುಡಿಯುವಂತಾಗಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬ್ ಅಂಬೇಡ್ಕರ್ ರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ನಭೋಸ್ಪರ್ಶಿ ವ್ಯವಸ್ಥೆಗೆ ಏಣಿ ಕಟ್ಟಬೇಕಾಗಿದೆ.”
ಪ್ರಶಸ್ತಿ ಗೌರವಗಳು
[ಬದಲಾಯಿಸಿ]- ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್
- ಅತ್ತಿಮಬ್ಬೆ ಪ್ರಶಸ್ತಿ, 7
- ನಾಡೋಜ ಪ್ರಶಸ್ತಿ (ಮೊದಲ ಮಹಿಳಾ ಸಾಹಿತಿ)
- ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ - ೨೦೦೪ ('ಬದುಕು’ ಕಾದಂಬರಿಗೆ ಮತ್ತು ಕರ್ನಾಟಕದ ಮೊದಲ ಮಹಿಳಾ ಸಾಹಿತಿ)
- ಮಾಣಿಕ ಬಾಯಿ ಪಾಟೀಲ್ ಪ್ರತಿಷ್ಠಾನದ ಪ್ರಶಸ್ತಿ ('ಬದುಕು’ ಕಾದಂಬರಿಗೆ)
- ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ('ಬದುಕು’ ಕಾದಂಬರಿಗೆ)
- ಸರ್. ಎಂ. ವಿಶ್ವೇಶ್ವರಯ್ಯ ದಶಮಾನೋತ್ಸವ ಸಾಹಿತ್ಯ ಪ್ರಶಸ್ತಿ ('ಬದುಕು’ ಕಾದಂಬರಿಗೆ)
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (ಸಮಗ್ರ ಕೃತಿಗಳಿಗಾಗಿ)
- ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಮಹಿಳಾ ಸಾಹಿತಿ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (ಸಮಗ್ರ ಕೃತಿಗಳಿಗಾಗಿ)
- ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
- ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ
- ಬಸವರಾಜ ಕಟ್ಟೀಮನಿ ಕಾದಂಬರಿ ಪ್ರಶಸ್ತಿ
- ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ
- ಕರ್ನಾಟಕ ಲೇಖಕಿಯರ ಬಳಗ ನೀಡಿದ ಅನುಪಮಾ ಪ್ರಶಸ್ತಿ
- ಆರ್ಯಭಟ ಪ್ರಶಸ್ತಿ
- ಆಳ್ವಾಸ್ ನುಡಿಸಿರಿ ಪ್ರಶಸ್ತಿ
- ರತ್ನಮ್ಮ ಸಾಹಿತ್ಯ ಪ್ರಶಸ್ತಿ
- ಗೊರೂರು ಪ್ರಶಸ್ತಿ
- ಧರ್ಮಸ್ಥಳದ ಸಾಹಿತ್ಯ ಪ್ರಶಸ್ತಿ
- ಪ್ರೊ. ಆಲಗುರ ಪ್ರಶಸ್ತಿ
- ಉತ್ತಮ ಉಪನ್ಯಾಸಕಿ ಪ್ರಶಸ್ತಿ,
- ಗುಲ್ಬರ್ಗಾದ ಎಸ್. ಆರ್. ಪಾಟೀಲ್ ಮಹಾಂತ ಜ್ಯೋತಿ’ ಪ್ರತಿಷ್ಠಾನದ ಕಾಯಕ ರತ್ನ ಪ್ರಶಸ್ತಿ
- ಕನ್ನಡಸಾಹಿತ್ಯ ಪರಿಷತ್ತಿನ ಮಲ್ಲಿಕಾ ಮತ್ತು ರಾಜಾರಾಮ್ ದತ್ತಿ ಪ್ರಶಸ್ತಿಗಳು (`ಆಘಾತ’ ಮತ್ತು `ದಂಗೆ’ ಕಾದಂಬರಿಗಳಿಗೆ ಅನುಕ್ರಮವಾಗಿ)
- ಮಾರ್ದನಿ ಪತ್ರಿಕೆಯ ಉತ್ತಮ ಕಾದಂಬರಿ ಬಹುಮಾನ ('ನೋವು’ ಕಾದಂಬರಿಗೆ )
- ಉಮಾಪತಿ ಚುಕ್ಕಿ ಪ್ರತಿಷ್ಠಾನ ಸಿರವಾರದ ಪ್ರಶಸ್ತಿ ('ಧುಮ್ಮಸು’ ಕಾದಂಬರಿಗೆ)
- ಭಾರತೀಯ ಭಾಷಾ ಪರಿಷದ್ ಕೋಲ್ಕತ್ತಾದ 'ರಚನಾ ಸಮಗ್ರ ಪ್ರಶಸ್ತಿ'
- ಡಾ. ಗೀತಾ ನಾಗಭೂಷಣರು ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
- ೨೦೧೨ರಲ್ಲಿ ಗೀತಾ ನಾಗಭೂಷಣರು ಕನ್ನಡಕ್ಕೆ ಮೊಟ್ಟಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ತಂದುಕೊಟ್ಟಿದ್ದಾರೆ[೨] (೧,೦೦,೦೦೦=೦೦)
ಮರಣ
[ಬದಲಾಯಿಸಿ]ಗೀತಾ ನಾಗಭೂಷಣ ಕಲಬುರಗಿಯಲ್ಲಿ, ಜೂನ್ ೨೮, ೨೦೨೦ರಂದು ತಮ್ಮ ೭೮ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.[೩][೪]
ಉಲ್ಲೇಖಗಳು
[ಬದಲಾಯಿಸಿ]- ↑ ಹಸಿಮಾಂಸ ಮತ್ತು ಹದ್ದುಗಳು Archived 2020-06-29 ವೇಬ್ಯಾಕ್ ಮೆಷಿನ್ ನಲ್ಲಿ. , ಕನ್ನಡ ಪುಸ್ತಕ ಪ್ರಾಧಿಕಾರ, ಪಿಡಿಎಫ಼್
- ↑ ಪ್ರಮೀಳಾ ಮಾಧವ್ ರ "ಡಾ.ಗೀತಾ ನಾಗಭೂಷಣ" Archived 2020-06-28 ವೇಬ್ಯಾಕ್ ಮೆಷಿನ್ ನಲ್ಲಿ., ಕರ್ನಾಟಕ ಸಾಹಿತ್ಯ ಅಕಾಡೆಮಿ, ೨೦೧೬
- ↑ ಹಿರಿಯ ಸಾಹಿತಿ ಗೀತಾ ನಾಗಭೂಷಣ ಇನ್ನಿಲ್ಲ
- ↑ ಸಾಹಿತಿ ಡಾ|| ಗೀತಾ ನಾಗಭೂಷಣ ಇನ್ನಿಲ್ಲ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- 'ಹೂಬಿಡದ ಮರ',ಪು.೭೬-೮೬,ಮಯೂರ,ಜೂನ್,೨೦೧೬