ದಾಬೇಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾಬೇಲಿ (ಕಚ್ಛಿ ದಾಬೇಲಿ) ಗುಜರಾತ್‍ನ ಕಚ್‍ನಲ್ಲಿ ಹುಟ್ಟಿಕೊಂಡ ಭಾರತದ ಒಂದು ಜನಪ್ರಿಯ ಲಘು ಆಹಾರ. ಇದು ಬೇಯಿಸಿದ ಆಲೂಗಡ್ಡೆಗಳನ್ನು ವಿಶೇಷ ದಾಬೇಲಿ ಮಸಾಲಾದೊಂದಿಗೆ ಮಿಶ್ರಣ ಮಾಡಿ ತಯಾರಿಸಲ್ಪಟ್ಟ ಒಂದು ಖಾರದ ತಿಂಡಿ. ಈ ಮಿಶ್ರಣವನ್ನು ಲಡಿ ಪಾವ್‍ನಲ್ಲಿ ಹಾಕಿ, ಹುಣಸೆ, ಖರ್ಜೂರ, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ ಇತ್ಯಾದಿಗಳಿಂದ ತಯಾರಿಸಲ್ಪಟ್ಟ ಚಟ್ನಿಗಳೊಂದಿಗೆ ಬಡಿಸಲಾಗುತ್ತದೆ. ಇದನ್ನು ದಾಳಿಂಬೆ ಬೀಜ ಮತ್ತು ಹುರಿದ ಕಡಲೇಕಾಯಿಯಿಂದ ಅಲಂಕರಿಸಲಾಗುತ್ತದೆ. ಸರಾಸರಿಯಾಗಿ, ಕಚ್‍ನಾದ್ಯಂತ ಪ್ರತಿದಿನ ೨೦ ಲಕ್ಷ ದಾಬೇಲಿಗಳನ್ನು ಸೇವಿಸಲಾಗುತ್ತದೆ.

ದಾಬೇಲಿ ಎಂದರೆ ಗುಜರಾತಿ ಭಾಷೆಯಲ್ಲಿ ಅಕ್ಷರಶಃ ಒತ್ತಿದ್ದು ಎಂದು.[೧] ಇದನ್ನು ಮಾಂಡ್ವಿಯ ನಿವಾಸಿ ಕೇಶವ್‍ಜಿ ಗಭಾ ಚುಡಸಾಮಾ ಆವಿಷ್ಕರಿಸಿದರು ಎಂದು ಹೇಳಲಾಗಿದೆ. ಇಂದು ಕೂಡ ಈ ನಗರದಲ್ಲಿ ತಯಾರಿಸಲ್ಪಟ್ಟ ದಾಬೇಲಿ ಮಸಾಲೆಯು ಅತ್ಯಂತ ವಿಶ್ವಾಸಾರ್ಹ ಎಂದು ಹೇಳಲಾಗುತ್ತದೆ. ಇಲ್ಲಿ ತಯಾರಾದ ದಾಬೇಲಿಯನ್ನು ಕಚ್ಛಿ ದಾಬೇಲಿ ಎಂದು ಕರೆಯಲಾಗುತ್ತದೆ.

ದಾಬೇಲಿಯನ್ನು ತಯಾರಿಸಲು ದಾಬೇಲಿ ಮಸಾಲೆ, ಸಿಹಿ ಚಟ್ನಿ ಮತ್ತು ಸ್ವಲ್ಪ ನೀರನ್ನು (ಸುಮಾರು ೧ ಟೀ ಚಮಚ) ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಸೇರಿಸಿ. ನಾನ್-ಸ್ಟಿಕ್ ಪ್ಯಾನ್‍ನಲ್ಲಿ ಎಣ್ಣೆಯನ್ನು ಕಾಯಿಸಿ, ತಯಾರಿಸಿದ ದಾಬೇಲಿ ಮಸಾಲೆ ಮಿಶ್ರಣವನ್ನು ಸೇರಿಸಿ ಮಧ್ಯಮ ಉರಿಯಲ್ಲಿ ೧ ನಿಮಿಷ ಬೇಯಿಸಿ, ಬೇಯಿಸುವಾಗ ನಿರಂತರವಾಗಿ ಕೈಯಾಡಿಸುತ್ತಿರಿ. ಬನ್ ಅನ್ನು ಪ್ಯಾನ್ ಮೇಲೆ ಬಿಸಿಮಾಡಿ ಅದರೊಳಗೆ ಬೇಯಿಸಿದ ಆಲೂಗಡ್ಡೆ ಮಿಶ್ರಣ, ದಾಬೇಲಿ ಮಸಾಲೆ ಮತ್ತು ಚಟ್ನಿಯ ಹೂರಣವನ್ನು ತುಂಬಿಸಲಾಗುತ್ತದೆ.

ಈ ಖಾದ್ಯದ ಮುಖ್ಯ ಘಟಕಾಂಶವಾದ ದಾಬೇಲಿ ಮಸಾಲೆಯು ಭಾರತದಾದ್ಯಂತ ಬಹುತೇಕ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ ಮತ್ತು ವಿವಿಧ ಬ್ರ್ಯಾಂಡ್ ಹೆಸರುಗಳಲ್ಲಿ ಮಾರಾಟವಾಗುತ್ತದೆ. ಆದರೆ ಇದರ ಉತ್ಪಾದನೆ ಮುಖ್ಯವಾಗಿ ಕಚ್‍ನಲ್ಲಿ ಆಗುತ್ತದೆ. ಮಾಂಡ್ವಿ ಮತ್ತು ಭುಜ್‍ನಲ್ಲಿ ತಯಾರಿಸಲಾದ ದಾಬೇಲಿ ಮಸಾಲೆಯನ್ನು ಜನರು ಅದರ ರುಚಿ ಮತ್ತು ಜನಾಂಗೀಯತೆಗೆ ಇಷ್ಟಪಡುತ್ತಾರೆ. ದಾಬೇಲಿ ಮಸಾಲೆಯು ಒಣ ಮೆಣಸಿನಕಾಯಿ, ಕರಿ ಮೆಣಸಿನ ಪುಡಿ, ಒಣ ಕೊಬ್ಬರಿ, ಉಪ್ಪು, ಲವಂಗ, ದಾಲ್ಚಿನ್ನಿ, ಹವೀಜ, ಜೀರಿಗೆ, ಅರಿಶಿನ, ಏಲಕ್ಕಿ, ನಕ್ಷತ್ರ ಮೊಗ್ಗು, ಸೈಂಧವ ಲವಣ, ಪಲಾವ್ ಎಲೆ ಮತ್ತು ಇತರ ಗರಂ ಮಸಾಲೆಗಳೊಂದಿಗೆ ತಯಾರಿಸಲ್ಪಟ್ಟ ಒಂದು ಒಣ ಮಿಶ್ರಣ. ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಒಮ್ಮೆ ತಯಾರಿಸಲಾದ ಅಥವಾ ಅಂಗಡಿಯಿಂದ ಖರೀದಿಸಲಾದ ದಾಬೇಲಿ ಮಸಾಲೆಯನ್ನು ಆರರಿಂದ ಹನ್ನೆರಡು ತಿಂಗಳು ಸಂಗ್ರಹಿಸಿಟ್ಟುಕೊಂಡು ಬಳಸಬಹುದು.

ಸಿದ್ಧವಾದ ದಾಬೇಲಿ ಮಸಾಲೆ, ಮೊದಲೇ ತಯಾರಿಸಿ ಇಟ್ಟುಕೊಂಡ ಚಟ್ನಿಗಳು, ಸುಲಭವಾಗಿ ಲಭ್ಯವಾದ ಸೇವ್, ಹುರಿದ ಕಡಲೆಕಾಯಿ, ದಾಳಿಂಬೆ ಮತ್ತು ಬೇಯಿಸಿದ ಆಲೂಗಡ್ಡೆಯಿಂದ, ದಾಬೇಲಿಯನ್ನು ತಯಾರಿಸಲು ೫-೮ ನಿಮಿಷಕ್ಕಿಂತ ಹೆಚ್ಚು ಬೇಕಾಗಿಲ್ಲ ಮತ್ತು ಹಾಗೇಯೇ ಒಂದು ಜನಪ್ರಿಯ ಭಾರತೀಯ ತ್ವರಿತ ಆಹಾರವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Gujarati- English Learner's Dictionary" (PDF). {{cite web}}: Cite has empty unknown parameter: |dead-url= (help)
"https://kn.wikipedia.org/w/index.php?title=ದಾಬೇಲಿ&oldid=843076" ಇಂದ ಪಡೆಯಲ್ಪಟ್ಟಿದೆ