ವಿಷಯಕ್ಕೆ ಹೋಗು

ಸುಧಾಕರ ಚತುರ್ವೇದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಧಾಕರ ಚತುರ್ವೇದಿ
2008 ರಲ್ಲಿ ಪಂಡಿತ್ ಚತುರ್ವೇದಿ
Bornಜನನ 20, ಏಪ್ರಿಲ್ 1897
Died
ನಿಧನ: 27 ಫೆಬ್ರವರಿ 2020 (ವಯಸ್ಸು 122 313 ದಿನಗಳು)ಬೆಂಗಳೂರು
Known forಇಂಡಾಲಜಿಗೆ ಕೊಡುಗೆಗಳು, ಸೂಪರ್ ಸೆಂಟೆನೇರಿಯನ್ ಸ್ಥಿತಿ(ಶತಾಯಷಿ- ಜಾಗತಿಕ ಹಿರಿಯ)
ಪಂಡಿತ ಸುಧಾಕರ ಚತುರ್ವೇದಿಯವರು ದಿ 20 ಎಪ್ರಿಲ್ 1897 ರಂದು ರಾಮನವಮಿಯಂದು ಜನಿಸಿದರು.(ಜನನ: ದಿ 20 ಎಪ್ರಿಲ್ 1897:: ಮರಣ:ದಿನಾಂಕ 27-02-2020) ಅವರ ಹಿರಿಯರು ತುಮಕೂರಿನ ಕ್ಯಾತಸಂದ್ರದವರು. ಇವರು ಹುಟ್ಟಿದ್ದು ಬೆಂಗಳೂರಲ್ಲಿ. ಇವರ ತಾಯಿ ಲಕ್ಷ್ಮಮ್ಮ, ತಂದೆ ಕೃಷ್ಣರಾಯರು. ಓದಿನಲ್ಲಿ ಸುಧಾಕರ ಪ್ರತಿಭಾವಂತರಾಗಿದ್ದರು. ಇವರ ಜೀವಿತ ಅವಧಿ 122 ವರ್ಷ, 313 ದಿನಗಳು. ಕೆಲವು ಭಾರತೀಯ ಪತ್ರಿಕೆಗಳು ಈ ವಯಸ್ಸಿನ ಅವರನ್ನು ಅತ್ಯಂತ ದೀರ್ಘಾಯುಷ್ಯದ ಭಾರತೀಯನೆಂದು ವರದಿ ಮಾಡಿದೆ. ದೀರ್ಘಾಯಷ್ಯುದ ದಾಖಲೆಗಳನ್ನು ನೋಡಿದರೆ ಇವರು ಜಗತ್ತಿನಲ್ಲೇ ಅತ್ಯಂತ ದೀರ್ಘಾಯಷ್ಯ ಹೊಂದಿದ ವ್ಯಕ್ತಿಯಾಗಿದ್ದಾರೆ. [] []

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]
  • ತಮ್ಮ ಎಂಟನೇ ವಯಸ್ಸಿನಲ್ಲೇ ಅಕ್ಕ ಪದ್ಮಾವತಿ ಬಾಯಿಯವರಿಂದ ವ್ಯಾಕರಣ, ಪ್ರಾಚೀನ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಪೂರ್ಣ ಪರಿಚಯ ಮಾಡಿಕೊಂಡಿದ್ದರು. ದಯಾನಂದ ಸರಸ್ವತಿಯವರ ಜೀವನ ಚರಿತ್ರೆ ಬಾಲ್ಯದಲ್ಲಿ ಮೆಚ್ಚಿನ ಓದು. ಇವರ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಲಕ್ಷ್ಮಮ್ಮ, (ಪುಟ್ಟಮ್ಮ) ಅವರ ಪಾತ್ರವೂ ಪ್ರಮುಖವಾಗಿತ್ತು.
  • ಅವರ ಪ್ರತಿಭೆಯನ್ನ ಗುರುತಿಸಿದ ಹಿರಿಯರು ಇವರನ್ನು [[ಭಾರತ|ಉತ್ತರಭಾರತಕ್ಕೆ}} ವಿದ್ಯಾಭ್ಯಾಸಕ್ಕಾಗಿ ಕಳಿಸಿದರು. ಇವರು ಹದಿಮೂರರ ಬಾಲಕರಾಗಿದ್ದಾಗ ಹೊರಟು ಹರಿದ್ವಾರಕ್ಕೆ ಹೋಗಿ ಅಲ್ಲಿ ಪ್ರಖ್ಯಾತ ಕಾಂಗಡಿ ಗುರುಕುಲದಲ್ಲಿ ಶಿಷ್ಯವೃತ್ತಿ ಸ್ವೀಕರಿಸಿದರು.ಅಲ್ಲಿ ಸ್ವಾಮಿ ಶ್ರದ್ಧಾನಂದರ ಶ್ರದ್ಧೆಯ ಶಿಷ್ಯನಾಗಿ ಅವರ ಜೊತೆವಾಸ ಮಾಡಿದರು. ಅಲ್ಲಿ ಅಖಂಡ ಒಂದು ದಶಕದ ಕಾಲ ಸಂತಸ್ವರೂಪೀ ಬದುಕು ನೆಡೆಸಿದರು. ಅವರು ನಾಲ್ಕು ವೇದಗಳಲ್ಲಿ ಪಾರಮ್ಯಪಡೆದು ಚತುರ್ವೇದಿ ಎಂಬ ಹೆಸರು ಪಡೆದರು. ಚತುರ್ವೇದಿ ಎಂಬ ಅವರ ಹೆಸರು ಅಪ್ಪನಿಂದ ಬಂದ ಕುಲಸೂಚಕವಲ್ಲ.[]

ಪಂಡಿತ ಸುಧಾಕರ ಚತುರ್ವೇದಿ

[ಬದಲಾಯಿಸಿ]
  • ಇವರು ಅಪ್ಪಟ ಕನ್ನಡಿಗರು. ವೈದಿಕ ವಾಗ್ಮಿಗಳು, ಬ್ರಹ್ಮಚರ್ಯವ್ರತಪಾಲಕರು, ಯಾವುದೇ ವೈದಿಕ ವಿಷಯಗಳನ್ನು ಸರಳವಾಗಿ ವಿವರಿಸುವ ನೈಪುಣ್ಯ ಹೊಂದಿದವರು. ಇವರ ಅನೇಕ ಲೇಖನಗಳು, ವಿಚಾರಗಳು ಪುಸ್ತಕರೂಪದಲ್ಲಿ ಪ್ರಕಟಗೊಂಡಿವೆ. ಸತ್ಯಾನ್ವೇಶಿಗಳಿಗೆ ಮಾರ್ಗದರ್ಶಿಯಾಗಿವೆ.

ಗಾಂಧೀಜಿಯವರೊಡನೆ

[ಬದಲಾಯಿಸಿ]
  • 1915ರಲ್ಲಿ ಸುಧಾಕರ ಅವರು ಹರಿದ್ವಾರದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮೊಟ್ಟಮೊದಲ ಬಾರಿಗೆ ಗಾಂಧೀಜಿ ಅವರೊಂದಿಗೆ ಭೇಟಿಯಾಗಿತ್ತು. ದಕ್ಷಿಣ ಭಾರತದವರಾದರೂ ಸುಲಲಿತವಾಗಿ ಹಿಂದಿ ಮಾತನಾಡುವುದನ್ನು ಕಂಡ ಗಾಂಧೀಜಿ ಚಕಿತರಾಗಿದ್ದರು. ಅಂದಿನಿಂದ ಬಾಪು ಜೊತೆಗಿನ ಸ್ನೇಹ ಶುರುವಾಯಿತು. ಕನ್ನಡದಲ್ಲಿ ಸಹಿ ಮಾಡಲು ಹಾಗೂ ಮಾತು ಅರ್ಥವಾಗುವಷ್ಟು ಕನ್ನಡ ಭಾಷೆಯನ್ನು ಗಾಂಧೀಜಿಗೆ ಕಲಿಸುವ ಪ್ರಯತ್ನ ಮಾಡಿದ್ದಾಗಿ ಹೇಳಿದ್ದಾರೆ.
  • ಮಹಾತ್ಮ ಗಾಂಧಿ ಪತ್ರ ಬರೆಯುವಾಗ ಸುಧಾಕರರನ್ನು ಅನೇಕ ಬಾರಿ ಜೊತೆಯಲ್ಲಿರಿಸಿಕೊಳ್ಳುತ್ತಿದ್ದರು. ಕೆಲವು ಬಾರಿ ವೈಸ್‌ರಾಯ್‌ಗಳೊಂದಿಗೆ ನಡೆಸುವ ಪತ್ರ ವ್ಯವಹಾರಗಳ ಹೊಣೆ ಇವರೇ ವಹಿಸಿದ್ದರು. ಗಾಂಧೀಜಿ ಹೊರತರುತ್ತಿದ್ದ ಹಿಂದಿ ಮತ್ತು ಸಂಸ್ಕೃತ ಲೇಖನಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡುತಿದ್ದರು. ಹಾಗೂ ಕನ್ನಡದಲ್ಲಿ ಅಚ್ಚಾಗುತ್ತಿದ್ದ ‘ಹರಿಜನ’ ಪತ್ರಿಕೆಗೆ ಸುಧಾಕರ ಅವರ ಸಹೋದರ ಸಂಪಾದಕರಾಗಿದ್ದರೆಂದು ಹೇಳಿದ್ದಾರೆ. ಸುಧಾಕರ ಚತುರ್ವೇದಿಯವರು ಮಹಾತ್ಮ ಗಾಂಧಿ ಅವರ 'ಪೋಸ್ಟ್ ಮನ್' ಎಂದೇ ಹೆಸರಾಗಿದ್ದರು. []
  • ಗಾಂಧೀಜಿಯವರು ಇವರ ಪಾಂಡಿತ್ಯಕ್ಕೆ, ಕ್ರಾಂತಿಕಾರಕ ವಿಚಾರಗಳಿಗೆ ಮಾರುಹೋಗಿದ್ದರು. ಇವರು ಗಾಂಧೀಜಿಯವರ ವಿಚಾರಧಾರೆಯಿಂದ ಆಕರ್ಷಿತರಾಗಿದ್ದರು. ಗಾಂಧೀಜಿಯವರನ್ನು ಹಲವು ಬಾರಿ ಖಂಡಿಸುತ್ತಿದ್ದರೂ ಅವರ ಪಾಲಿಗೆ ಇವರು ಪ್ರೀತಿಯ ‘ಕರ್ನಾಟಕೀ’ ಆಗಿದ್ದರು.[]

ಸ್ವಾತಂತ್ರ್ಯ ಸಂಗ್ರಾಮದಲ್ಲಿ

[ಬದಲಾಯಿಸಿ]
  • ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಅದನ್ನು ಹತ್ತಿರದಿಂದ ಕಂಡವರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸಾಕ್ಷಿಯಾದವರು. ಆ ಕುರಿತು ಅವರ ಮಾತು: "1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನಸಿಕೊಂಡರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ದೊಡ್ಡದಾದ ತೋಟದಂತಿದ್ದ ಅಲ್ಲಿ ಸುತ್ತಲೂ 3-4 ಅಂತಸ್ತಿನ ಗೋಡೆ, ಒಂದೇ ಬಾಗಿಲು. ನೋಡುತ್ತಿದ್ದಂತೆ ಎಲ್ಲರ ಮೇಲೂ ಗುಂಡಿನ ದಾಳಿ. ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು. ಆದರೆ ಅಂದಿನ ಬ್ರಿಟಿಷ್ ಸರ್ಕಾರ ಕೇವಲ 670 ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿತು. ತಮಗೆ ವೇದ ಮಂತ್ರ ಬರುತ್ತಿದ್ದರಿಂದ ನನಗೆ ಗಾಂಧೀಜಿಯವರು, ಮರಣಿಸಿದವರ ಅಂತ್ಯ ಸಂಸ್ಕಾರ ಮಾಡಲು ಹೇಳಿದರು. ಅವರ ಆಜ್ಞೆಯಂತೆ ನದೀತಟದಲ್ಲಿ ಸಾವಿರಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರ ಮಾಡಿದ್ದೆ."
  • ಸ್ವಾತಂತ್ರ್ಯ ಸಮರದಲ್ಲಿ ಇವರು ಪಾಲ್ಗೊಂಡವರು. ಗಾಂಧೀಜಿ ಸೇರಿದಂತೆ ಹಲವಾರು ಸ್ವಾತಂತ್ರ್ಯ ಸೇನಾನಿಗಳ ಒಡನಾಡಿಯಾಗಿದ್ದವರು. 13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಅವರ ಅಂದಿನ ಸ್ಥಿತಿ ಹೇಗಿತ್ತೆಂದರೆ ಕಿತ್ತು ತಿನ್ನುತ್ತಿದ್ದ ಬಡತನ, ಹೊಟ್ಟೆಗೆ ಏನೂ ಇರುತ್ತಿರಲಿಲ್ಲ, 3-4 ದಿನಗಳು ಏನೂ ತಿನ್ನಲು ಸಿಗದೆ ನೀರು ಮಾತ್ರ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದವರು. ಯಾರಾದರೂ ಆಲೂಗೆಡ್ಡೆ ಕೊಟ್ಟರೆ ಬೇಯಿಸಿಕೊಂಡು ತಿನ್ನಲೂ ಸಾಧನಗಳಿರಲಿಲ್ಲ. ಹಸಿವು ಕಚ್ಚಿಕೊಂಡಿದ್ದರೂ ಏನೂ ಮಾಡಲಾಗುತ್ತಿರಲಿಲ್ಲವೆಂದು ನೆನೆಸಿಕೊಳ್ಳುತ್ತಾರೆ.
  • ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಮಾರ್ಗದಲ್ಲಿ ಸೇರಿಕೊಂಡರು. ಗಾಂಧೀಜಿ ಬರೆದ ಪತ್ರಗಳನ್ನು ವೈಸರಾಯ್‌ಗಳಿಗೆ, ಗವರ್ನರ್‌ ಜನರಲ್‌ಗ‌ಳಿಗೆ ತಲುಪಿಸುವ ದೂತನ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿದರು. ಚಿಕ್ಕ- ದೊಡ್ಡ ಹೋರಾಟಗಳೆಲ್ಲವೂ ಸೇರಿ ಬರೋಬ್ಬರಿ ಮೂವತ್ತಕ್ಕೂ ಹೆಚ್ಚು ಸಲ ಬ್ರಿಟಿಷರಿಂದ ಬಂಧನಕ್ಕೊಳಗಾದರು. ಚರಕ ತಿರುವಿದರು. ಖಾದಿ ಉಟ್ಟರು. ವಿದೇಶಿ ಉತ್ಪನ್ನಗಳನ್ನು ಸುಟ್ಟರು. ಉಪ್ಪಿನ ಸತ್ಯಾಗ್ರಹದಲ್ಲಿ ಸಕ್ರಿಯರಾದರು.[]

ಅದ್ಯಾಪಕರಾಗಿ

[ಬದಲಾಯಿಸಿ]
  1. ಲಾಹೋರಿನಲ್ಲಿದ್ದಾಗ ಭಗತ್ ಸಿಂಗ್ ಇವರ ವಿದ್ಯಾರ್ಥಿಯಾಗಿದ್ದ. ಗಣಿತದಲ್ಲಿ ತೇರ್ಗಡೆಯಾಗಲು ಆತನಿಗೆ 15 ಅಂಕಗಳು ಬೇಕಿದ್ದವು. ಇವರ ಹತ್ತಿರ ಅಂಕ ಕೊಡಲು ಭಗತ್ ಕೇಳಿದಾಗ "ಲಕ್ಷಣವಾಗಿ ಫೇಲಾಗು, ನನ್ನಿಂದ ಇಂತಹ ಕೆಲಸ ಅಸಾಧ್ಯ" ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಭಗತ್ ಮತ್ತು ಅವನ ಇತರ ಒಡನಾಡಿಗಳು ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಹುತಾತ್ಮರಾದರು. ಭಗತ್ ಸಿಂಗ್ ಅವರ ಹೋರಾಟದ ದಾರಿ ಬೇರೆಯಾಗಿತ್ತು. ಗಾಂಧೀಜಿ ಮತ್ತು ಅವರುಗಳ ನಡುವೆ ಯಾವುದೇ ವಿರೋಧದ ಭಾವಗಳಿರಲಿಲ್ಲ.

ವಿವಾಹ - ಬ್ರಹ್ಮಚಾರಿಯಾಗಿಯೇ ಉಳಿದರು

[ಬದಲಾಯಿಸಿ]
  • ಚತುರ್ವೇದಿಯವು ಜೀವನೋಪಾಯಕ್ಕಾಗಿ ಪ್ರವಚನಗಳನ್ನು ಮಾಡಿದರು. ಅದರಿಂದ ರೂ.100 ರಿಂದ ರೂ2,000 ವರೆಗೂ ಸಂಭಾವನೆ ಸಿಗುತ್ತಿತ್ತು. ಇದರಿಂದ ಹಣದ ಸಮಸ್ಯೆ ದೂರವಾಯಿತು.
  • ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲೀಷ್ ಭಾಷೆ ಸರಾಗವಾಗಿ ಮಾತನಾಡುತ್ತಿದ್ದುದರಿಂದ ಪಂಜಾಬ್, ಲಾಹೋರ್, ಪಾಟ್ನಾ, ಕೋಲ್ಕತ್ತಾಗಳಲ್ಲಿ ಭಾಷಣ ಮಾಡಿದರು. ಅಲ್ಲಿ ಶಿಷ್ಯ ವೃಂದವೇ ಸೃಷ್ಟಿಯಾಯಿತು.
  • ಶಿಷ್ಯರಲ್ಲಿ ಯುವತಿಯೊಬ್ಬಳು ಇವರನ್ನು ಪ್ರೀತಿಸಿದ್ದಳು ಹಾಗೂ ಆಕೆಯ ತಂದೆ ತನ್ನ ಮಗಳನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ, ಸುಧಾಕರ ಸ್ವರಾಜ್ಯ ಬರುವವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ತೊಟ್ಟಿದ್ದರು. ರಾಷ್ಟ್ರ ಸ್ವತಂತ್ರವಾಗುವುದು ತಡವಾಯಿತು. ಆ ಸಮಯಕ್ಕೆ ವಯಸ್ಸು 50 ವರ್ಷ ದಾಟಿತ್ತು. 1935ರಲ್ಲಿ ಬಲೋಚಿಸ್ತಾನದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿನ ಜನರ ಸೇವೆಗೆಂದು ತೆರಳಿದ್ದ ಪ್ರೀತಿಯ ಶಿಷ್ಯೆ ಮರಳಿ ಬರಲೇ ಇಲ್ಲ. ಸುಧಾಕರ ಬ್ರಹ್ಮಚಾರಿಯಾಗಿಯೇ ಉಳಿದರು.[]
  1. ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯದ ಅರ್ಥ ತಿಳಿದುಕೊಳ್ಳುವ, ಅಭಿವೃದ್ಧಿ ಕಡೆಗೆ ಗಮನ ಹರಿಸುವುದರೊಂದಿಗೆ ಕಿರಿಯರಿಗೆ ಸ್ವಾತಂತ್ರ್ಯದ ಮಹತ್ವ ತಿಳಿಸುವ ಅಗತ್ಯ ಹೆಚ್ಚು ಎಂಬುದು ಅವರ ಅಭಿಮತ.
  2. ಆಚಾರಕ್ಕಿಂತ ವಿಚಾರಕ್ಕೆ ಹೆಚ್ಚು ಮಹತ್ವ, ಪ್ರಾಧಾನ್ಯ ಕೊಟ್ಟವರು. ನಂಬಿದ ತತ್ವ, ಆದರ್ಶಗಳಿಗೆ ಬದ್ಧರಾದವರು. ಅವರ ಮಾತುಗಳು ಕೆಲವರಿಗೆ ಕಠಿಣವೆನಿಸಿದರೂ ಅದರಲ್ಲಿ ಸತ್ಯವಿದೆ, ತತ್ವವಿದೆ. ಆದರೆ ಪೂರ್ವಾಗ್ರಹ ಪೀಡಿತರಲ್ಲ. ತಾವು ನಂಬಿದ ಯಾವುದೇ ವಿಚಾರ ತಪ್ಪು ಎಂದು ಸಾಧಾರವಾಗಿ ಯಾರೇ ತಿಳಿಸಿಕೊಟ್ಟರೂ ಇದುವರೆಗೂ ನಂಬಿದ ವಿಚಾರ ಬಿಟ್ಟು ಸತ್ಯದ ಹಾದಿ ತುಳಿಯಲು ಸಿದ್ಧವಿರುವವರು.
  3. ವೇದ, ಭಗವದ್ಗೀತೆ, ಇತ್ಯಾದಿಗಳನ್ನು ಅರ್ಥವತ್ತಾಗಿ ಸರಳವಾಗಿ ಶ್ರೋತೃಗಳೆದುರಿಗೆ ಬಿಚ್ಚಿಡುವ ಕಲೆ ಇವರಿಗೆ ಒಲಿದಿದೆ. ಅನಿಷ್ಟ ಸಂಪ್ರದಾಯಗಳ ವಿರುದ್ಧದ ಇವರ ಸಮರ, ಇವರ ಸಾಹಿತ್ಯ ಸೇವೆಗಳಿಗಾಗಿ ಇವರು ವಂದನೀಯರು.
  4. ಇವರು ಬೆಂಗಳೂರಿನ ಜಯನಗರ 5ನೆಯ ಬ್ಲಾಕಿನಲ್ಲಿರುವ ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆಯ ಎದುರು ಸಾಲಿನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದರು.(ಹಿಂದಿನ ಸಂಪಾದನೆ- ಉಲ್ಲೇಖ ಅಗತ್ಯ)

ಸ್ವಾತಂತ್ರ್ಯದ ನಂತರ

[ಬದಲಾಯಿಸಿ]
  • ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮರುದಿನದಿಂದ ಚತುರ್ವೇದಿಗಳ ಗುರಿ ಬದಲಾಯಿತು. ಹಳೆಯದಕ್ಕೆ ಹೊರಳಿಕೊಂಡರು. ವೇದ- ವೇದಾಂತಗಳನ್ನು ಕುರಿತು ಬರೆದರು. ದಯಾನಂದ ಸರಸ್ವತಿಗಳು ವೇದಗಳಿಗೆ ಬರೆದಿದ್ದ ಉದ್ದಾಮ ಭಾಷ್ಯಗಳನ್ನೆಲ್ಲ ಕನ್ನಡಕ್ಕೆ ತರುವ ಕೆಲಸದಲ್ಲಿ ತೊಡಗಿಕೊಂಡರು. 20 ಸಂಪುಟಗಳಲ್ಲಿ 30,000 ಪುಟಗಳಲ್ಲಿ ಬಂದಿರುವ ಆ ಸಾಹಿತ್ಯಕ್ಕೆ ಮುದ್ರಿಸಿದ ಗ್ರಂಥಗಳ ಮುಖಬೆಲೆ 12,000 ರೂಪಾಯಿ ಆಗುವುದು. ಈ ಕೆಲಸದ ಅಗಾಧತೆ, ಮೌಲ್ಯತೆ ಎಷ್ಟೆಂಬುದನ್ನು ನಾವು ಹೇಳಲಾಗದು. ವೈದಿಕರಿಂದ ಜಾತೀಯತೆ ಹುಟ್ಟಿತೆಂಬ ವಾದಕ್ಕೆ ಚತುರ್ವೇದಿಗಳು, ಹಾಗೆ ಜಾತೀಯತೆಯನ್ನು ಪುರಸ್ಕರಿಸಿದ ವೇದಮಂತ್ರವನ್ನು ಉಲ್ಲೇಖೀಸಿ ಎಂದು ಸವಾಲು ಹಾಕಿದ್ದರು.
  • ಅಭಿಮನ್ಯುವಿನಂಥ ವೀರರನ್ನು ಹೆತ್ತ ಭಾರತಿ ನಿನ್ನಂಥ ನರಪೇತಲನನ್ನು ಹುಟ್ಟಿಸಿದ್ದು ಹೇಗೆ ಎಂದು ಗುರುಗಳಾದ ಸ್ವಾಮಿ ಶ್ರದ್ಧಾನಂದರು ನಗೆಯಾಡಿದ್ದರಂತೆ. ಅದು ಶುದ್ಧ ಹಾಸ್ಯವಷ್ಟೆ. ಆದರೆ, ಸಾಧನೆಗೆ ಬೇಕಿರುವುದು ದೊಡ್ಡ ದೇಹವಲ್ಲ, ದೊಡ್ಡ ಸಂಕಲ್ಪಶಕ್ತಿ ಮತ್ತು ಪ್ರತಿಭೆ- ಎಂಬುದನ್ನು ತೋರಿಸಿಕೊಟ್ಟರು. ಹಿತಮಿತ ಆಹಾರ, ರಾಜಕೀಯದಿಂದ ಬಲು ದೂರ. ಅಪಹಾಸ್ಯವಿಲ್ಲದ ಶುದ್ಧಾಂತಃಕರಣದ ನಗೆ. ಸದಾ ದೈಹಿಕ, ಬೌದ್ಧಿಕ ಚಟುವಟಿಕೆ. ವಾರಕ್ಕೊಂದು ಸಣ್ಣ ಹೋಮ, ಜ್ಞಾನಾರ್ಥಿಗಳಿಗೆ ಉಪನ್ಯಾಸ. ನಿಯಮ ತಪ್ಪದ ದಿನಚರಿ[]

ಸಮಾಜ ಸೇವೆ

[ಬದಲಾಯಿಸಿ]
  • ಚತುರ್ವೇದಿಗಳು ವೇದಗಳಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ಬರೆದಿಟ್ಟಿದ್ದಲ್ಲದೆ, ಬರೆದದ್ದನ್ನು ತಾವೇ ಅನುಷ್ಠಾನಕ್ಕಿಳಿಸಲು ಪಣತೊಟ್ಟರು. ಹರಿಜನರ ಮಕ್ಕಳನ್ನು ದತ್ತುಪಡೆದರು. ಅವರನ್ನು ಓದಿಸಿದರು, ಕೆಲವರನ್ನು ಐಎಎಸ್‌ವರೆಗೂ ಓದಿಸಿದರು! ನೂರಾರು ಅಂತರ್ಜಾತೀಯ ಮದುವೆಗಳನ್ನು ಮಾಡಿಸಿದರು; ಹರಿಜನರ ಸಾವಿರಾರು ಕೇರಿಗಳಲ್ಲಿ ಸಂಚರಿಸಿ, ಅವರಿಗೆ ದೇಗುಲ ಪ್ರವೇಶ ಕೊಇಸಿದರು. ಅಸ್ಪೃಶ್ಯತೆಯ ನಿವಾರಣೆಗೆ ಅಹರ್ನಿಶಿ ಆಂದೋಲನ ನೆಡೆಸಿದರು. ಯಾರಿಗೇ ಆಗಲಿ ವೇದ ಕಲಿಯಬೇಕೆಂಬ ಅಪೇಕ್ಷೆಯಿದ್ದರೆ ಸಾಕು, ಅವರಿಗೆಲ್ಲ ವೇದಧಾರೆ ಮಾಡಿದರು. ಹೆಣ್ಣುಮಕ್ಕಳಿಗೂ ವೇದಾದ್ಯಯನಕ್ಕೆ ಅವಕಾಶವಿದೆ ಎಂದು ಅವರಿಗೂ ವೇದಗಳು ಮುಕ್ತವೆಂದು ಸಾರಿದರು. ಯಾವ ಘೋಷಣೆ ಇಲ್ಲದೆ, ವೇದಿಕೆಗಳ ದೊಡ್ಡ ಭಾಷಣಗಳಿಲ್ಲದೆ, ಪ್ರಚಾರಗಳಿಲ್ಲದೆ, ರಾಜಕೀಯ ಅಧಿಕಾರದಂಡವಿಲ್ಲದೆ ಇವನ್ನೆಲ್ಲ ಏಕವ್ಯಕ್ತಿ ಹೋರಾಟದಂತೆ ಸಾಧಿಸಿದರು. ಜಿಎಸ್‌ಎಸ್‌ “ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ’ಎಂದರು. []

ವ್ಯಕ್ತಿತ್ವ - ಗ್ರಂಥ ರಚನೆ

[ಬದಲಾಯಿಸಿ]
  • ಗೌರವರ್ಣ. ಮಟ್ಟಸವಾದ ಎತ್ತರ. ಕನ್ನಡಕದ ಹಿಂದಿನ ಕಣ್ಣುಗಳ ತೀಕ್ಷ್ಣ ನೋಟ. ಮಗುವಿನ ನಿಷ್ಕಲ್ಮಷ ನಗೆಯನ್ನು ನೆನಪಿಗೆ ತರುವಂಥ ಬಾಯಿ ತುಂಬ ನಗು, ಸ್ನೇಹಶೀಲ ವ್ಯಕ್ತಿತ್ವ.
  • ನಾಲ್ಕು ವೇದಗಳ ಸಾರವನ್ನು ಕೇವಲ 28ರ ವಯಸ್ಸಿನಲ್ಲಿಯೇ ಜೀರ್ಣಿಸಿಕೊಂಡು ‘ಚತುರ್ವೇದೀ’ ಎಂಬ ಕೌಟುಂಬಿಕ ನಾಮವನ್ನು ಅನ್ವರ್ಥಮಾಡಿಕೊಂಡ ಪ್ರತಿಭಾವಂತ ಸುಧಾಕರ ‘ಚತುರ್ವೇದಿ’ಗಳು ಶತಾಯುಷಿಯಾಗಿ ಬದುಕಿದವರು.
  • ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್‌ – ಈ ನಾಲ್ಕು ಭಾಷೆಗಳಲ್ಲಿ ಸಂಪೂರ್ಣ ಪ್ರಭುತ್ವ ಇವರದಾಗಿತ್ತು. ವೇದಗಳಿಗೆ ಸಂಬಂಧಿಸಿದಂತೆ ಸುಮಾರು ನಲವತ್ತು ಗ್ರಂಥಗಳನ್ನು ರಚಿಸಿದ್ದಾರೆ.[೧೦]
  • 2009 ರ ಹೊತ್ತಿಗೆ, ನಾಲ್ಕು ವೇದಗಳಲ್ಲಿ ಮೂರು ಮತ್ತು ಋಗ್ವೇದದ ಆರು ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು. [೧೧]
  • ಕನ್ನಡ ಮಾಸಿಕ ನಿಯತಕಾಲಿಕ ವೇದ ತರಂಗವನ್ನು ಪ್ರಕಟಿಸಿದ ಬೆಂಗಳೂರು ಆರ್ಯ ಸಮಾಜದ ಹಿಂದಿನ ಚಲಿಸುವ ಶಕ್ತಿ ಅವರದು. [೧೨]

ಅಂತಿಮ ದಿನಗಳು

[ಬದಲಾಯಿಸಿ]
  1. ಎಲ್ಲಾ ಪಕ್ಷಗಳ ನಾಯಕರು, ಪ್ರತಿಷ್ಠಿತರು ಇವರನ್ನು ಕಂಡು ನಮಸ್ಕರಿಸಿ ಆಶೀರ್ವಾದ ಪಡೆದು ಹೋಗುತ್ತಾರೆ. ಆದರೆ ಇವರನ್ನೇ ಮರೆಯುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿಯನ್ನು ನಯವಾಗಿ ತಿರಸ್ಕರಿಸಿದ ಇವರಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಗೌರವವಾಗಲೀ, ಸನ್ಮಾನವಾಗಲೀ ದೊರೆತಿಲ್ಲ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅವರನ್ನು ಗೌರವಿಸಿದೆ.[೧೩] [೧೪] [೧೫]

ಆಹಾರ ಪದ್ಧತಿ

[ಬದಲಾಯಿಸಿ]
  • ಅವರ ಬದುಕನ್ನು ಹೋರಾಟ ಮತ್ತು ಅಲೆದಾಟಗಳ ಜೋಡಣೆ ಎನ್ನಬಹುದು. ಅಂತಿಮ ದಿನಗಳಲ್ಲಿ 124 ವರ್ಷ ಬದುಕಿದ ಅವರ ನಿತ್ಯ ಚಟುವಟಿಕೆ ಮತ್ತು ಆಹಾರ ಪದ್ಧತಿ ಸೋಜಿಗ ಮೂಡಿಸುತ್ತದೆ. ಬೆಳಿಗ್ಗೆ ಮತ್ತು ರಾತ್ರಿ ಒಂದು ಬಾಳೆ ಹಣ್ಣು ಸೇವಯೇ ಊಟ. ಅದುವೇ ದೀರ್ಘ ಆಯುಷ್ಯದ ಗುಟ್ಟು![೧೬]

ಅವರು ದಿನಾಂಕ ೨೭-೦೨-೨೦೨೦ ರಂದು ಮರಣ ಹೊಂದಿದರು. ಅವರಿಗೆ ೧೨೩ ವರ್ಷ ವಯಸ್ಸಾಗಿತ್ತು [೧೭]

ಹೆಚ್ಚಿನ ವಿವರಗಳಿಗೆ

[ಬದಲಾಯಿಸಿ]

ಬಾಹ್ಯ ಸಂಪರ್ಕ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. ["India's oldest man swears by meditation and Vedas", The Times of India, 28 June 2009]
  2. (Oldest people)
  3. ಹೇಮಂತ್‌ ಕುಮಾರ್‌ ಎಸ್‌. Updated: 27 ಫೆಬ್ರವರಿ 2020,
  4. [https://www.prajavani.net/stories/stateregional/gandhiji-postman-vedic-scholar-sudhakar-chaturvedi-passes-away-708483.html ಸುಧಾಕರ ಚತುರ್ವೇದಿ: ಗಾಂಧೀಜಿಗೆ ಕನ್ನಡ ಕಲಿಸಿದ್ದ ಆಪ್ತ 'ಪೋಸ್ಟ್‌ಮನ್' ಹೇಮಂತ್‌ ಕುಮಾರ್‌ ಎಸ್‌. Updated: 27 ಫೆಬ್ರವರಿ 2020]
  5. https://www.prajavani.net/stories/stateregional/kannada-rajyotsava-awardee-sudhakara-chaturvedi-passed-away-708624.html ಸುಧಾರಕ ಸುಧಾಕರ;ನಂ. ನಾಗಲಕ್ಷ್ಮಿ Updated: 28 ಫೆಬ್ರವರಿ 2020
  6. ಮೂರು ಶತಮಾನಗಳಲ್ಲಿ ನಡೆದಾಡಿದ ಸಾಧಕ; ರೋಹಿತ್‌ ಚಕ್ರತೀರ್ಥ Team Udayavani, Feb 28, 2020,
  7. ಸುಧಾಕರ ಚತುರ್ವೇದಿ: ಗಾಂಧೀಜಿಗೆ ಕನ್ನಡ ಕಲಿಸಿದ್ದ ಆಪ್ತ 'ಪೋಸ್ಟ್‌ಮನ್';ಹೇಮಂತ್‌ ಕುಮಾರ್‌ ಎಸ್‌. Updated: 27 ಫೆಬ್ರವರಿ 2020
  8. ಮೂರು ಶತಮಾನಗಳಲ್ಲಿ ನಡೆದಾಡಿದ ಸಾಧಕ; ರೋಹಿತ್‌ ಚಕ್ರತೀರ್ಥ Team Udayavani, Feb 28, 2020
  9. ಮೂರು ಶತಮಾನಗಳಲ್ಲಿ ನಡೆದಾಡಿದ ಸಾಧಕ; ರೋಹಿತ್‌ ಚಕ್ರತೀರ್ಥ Team Udayavani, Feb 28, 2020
  10. [ಪ್ರಜಾವಾಣಿ- ಸುಧಾರಕ ಸುಧಾಕರ;ನಂ. ನಾಗಲಕ್ಷ್ಮಿ Updated: 28 ಫೆಬ್ರವರಿ 2020]
  11. [Ananth (2 September 2009), Message on 'Sumadhwa Seva']
  12. [Indica, 42, Heras Institute of Indian History and Culture, St. Xavier's College., 2005, p. 129]
  13. ಸುಧಾಕರ ಚತುರ್ವೇದಿ: ಗಾಂಧೀಜಿಗೆ ಕನ್ನಡ ಕಲಿಸಿದ್ದ ಆಪ್ತ 'ಪೋಸ್ಟ್‌ಮನ್';ಹೇಮಂತ್‌ ಕುಮಾರ್‌ ಎಸ್‌. d: 27 ಫೆಬ್ರವರಿ 2020
  14. ವೇದಜೀವನ
  15. ಸುಧಾರಕ ಸುಧಾಕರ;ನಂ. ನಾಗಲಕ್ಷ್ಮಿ;d: 28 ಫೆಬ್ರವರಿ 2020,
  16. ಪ್ರಜಾವಾಣಿ:ಸುಧಾಕರ ಚತುರ್ವೇದಿ: ಗಾಂಧೀಜಿಗೆ ಕನ್ನಡ ಕಲಿಸಿದ್ದ ಆಪ್ತ 'ಪೋಸ್ಟ್‌ಮನ್'; ಹೇಮಂತ್‌ ಕುಮಾರ್‌ ಎಸ್‌. Updated: 27 ಫೆಬ್ರವರಿ 2020
  17. https://www.prajavani.net/district/bengaluru-city/sudhakara-chatruvedi-dead-708472.html