ವಿಷಯಕ್ಕೆ ಹೋಗು

ಕೆಸರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಸರು ನೆಲ

ಕೆಸರು ಎಂದರೆ ನೀರು ಮತ್ತು ವಿಭಿನ್ನ ಪ್ರಕಾರಗಳ ಮಣ್ಣಿನ (ಕಲಸುಮಣ್ಣು, ಬುರುದೆ, ಮತ್ತು ಜೇಡಿಮಣ್ಣು) ಯಾವುದೇ ಸಂಯೋಜನೆಯ ದ್ರವ ಅಥವಾ ಅರೆದ್ರವ ಮಿಶ್ರಣ. ಇದು ಸಾಮಾನ್ಯವಾಗಿ ಮಳೆಯ ನಂತರ ಅಥವಾ ಜಲಮೂಲಗಳ ಹತ್ತಿರ ರಚನೆಯಾಗುತ್ತದೆ. ಪ್ರಾಚೀನ ಕೆಸರು ನಿಕ್ಷೇಪಗಳು ಭೌಗೋಳಿಕ ಕಾಲಾಂತರದಲ್ಲಿ ಗಟ್ಟಿಯಾಗಿ ಜೇಡಿಪದರಗಲ್ಲು ಅಥವಾ ಮಣ್ಣುಕಲ್ಲಿನಂತಹ ಸಂಚಿತ ಶಿಲೆಯ ರಚನೆಯಾಗುತ್ತದೆ. ಇವನ್ನು ಸಾಮಾನ್ಯವಾಗಿ ಲ್ಯೂಟೈಟ್‍ಗಳೆಂದು ಕರೆಯಲಾಗುತ್ತದೆ. ಕೆಸರನ್ನು ವಿವಿಧ ರೀತಿಗಳಲ್ಲಿ ಗೋಡೆಗಳು, ಛಾವಣಿಗಳು ಮತ್ತು ನೆಲಗಳನ್ನು ಕಟ್ಟಲು ಬಳಸಲಾಗುತ್ತಿತ್ತು.

ಕೆಸರಿನಿಂದ ಇಟ್ಟಿಗೆಗಳನ್ನು ತಯಾರಿಸಬಹುದು. ಇವನ್ನು ಗಾರಿಟ್ಟಿಗೆಗಳೆಂದು ಕರೆಯಲಾಗುತ್ತದೆ. ಕೆಸರಿನೊಂದಿಗೆ ನೀರು ಮಿಶ್ರಣ ಮಾಡಿ, ಮಿಶ್ರಣವನ್ನು ಅಚ್ಚುಗಳಲ್ಲಿ ಇಟ್ಟು, ಗಾಳಿಯಲ್ಲಿ ಒಣಗಲು ಬಿಡಲಾಗುತ್ತದೆ.[] ಒಣಹುಲ್ಲನ್ನು ಕೆಲವೊಮ್ಮೆ ಇಟ್ಟಿಗೆಗಳೊಳಗೆ ಬಂಧಕವಾಗಿ ಬಳಸಲಾಗುತ್ತದೆ, ಅದು ಒಂದು ಆಧಾರ ಜಾಲರಿಯನ್ನು ಸೇರಿಸುವುದರಿಂದ. ಇದಿಲ್ಲದಿದ್ದರೆ ಇಟ್ಟಿಗೆಯು ಮುರಿಯುವ ಸಾಧ್ಯತೆ ಹೆಚ್ಚು. ಒಣಹುಲ್ಲು ಇಟ್ಟಿಗೆಯಾದ್ಯಂತ ಬಲವನ್ನು ಪುನರ್ವಿತರಣೆ ಮಾಡುತ್ತದೆ, ಹಾಗಾಗಿ ಮುರಿತದ ಸಾಧ್ಯತೆಯನ್ನು ಕಡಿಮೆಮಾಡುತ್ತದೆ. ಅಂತಹ ಕಟ್ಟಡಗಳನ್ನು ಅಂತರ್ಜಲದಿಂದ ರಕ್ಷಿಸಬೇಕಾಗುತ್ತದೆ, ಸಾಮಾನ್ಯವಾಗಿ ಕಲ್ಲು, ಕಾವಿಟ್ಟಿಗೆ, ಬಂಡೆ ಅಥವಾ ಕಲ್ಲುಮಣ್ಣಿನ ಅಡಿಪಾಯದ ಮೇಲೆ ಕಟ್ಟಿ. ಅವುಗಳನ್ನು ತೇವ ವಾಯುಗುಣಗಳಲ್ಲಿ ಗಾಳಿ ಚಾಲಿತ ಮಳೆಯಿಂದಲೂ ರಕ್ಷಿಸಬೇಕಾಗುತ್ತದೆ, ಸಾಮಾನ್ಯವಾಗಿ ಆಳ ಛಾವಣಿ ಚಾಚುರಚನೆಗಳನ್ನು ಬಳಸಿ. ಅತಿ ಒಣ ವಾಯುಗುಣಗಳಲ್ಲಿ, ಸರಿಯಾಗಿ ಒಣಗಿಸಿದ ಚಪ್ಪಟೆ ಛಾವಣಿಯನ್ನು ಚೆನ್ನಾಗಿ ಸಿದ್ಧಪಡಿಸಲಾದ ಮತ್ತು ಸರಿಯಾಗಿ ನಿರ್ವಹಿಸಲ್ಪಟ್ಟ ಒಣಗಿಸಿದ ಕೆಸರು ಲೇಪನದಿಂದ ರಕ್ಷಿಸಬಹುದು. ಇದು ಕಾರ್ಯಸಾಧ್ಯವಾದದ್ದು ಏಕೆಂದರೆ ತೇವಗೊಂಡಾಗ ಕೆಸರು ವಿಸ್ತಾರವಾಗುತ್ತದೆ ಮತ್ತು ಹಾಗಾಗಿ ಹೆಚ್ಚು ಜಲ ನಿರೋಧಕವಾಗುತ್ತದೆ. ಗಾರಿಟ್ಟಿಗೆಗಳನ್ನು ಸಾಮಾನ್ಯವಾಗಿ ಪ್ವೆಬ್ಲೊ ಇಂಡಿಯನ್ನರು ತಮ್ಮ ಮನೆಗಳು ಮತ್ತು ಇತರ ಅಗತ್ಯ ರಚನೆಗಳನ್ನು ಕಟ್ಟಲು ಬಳಸುತ್ತಿದ್ದರು.

ಬಹುತೇಕವಾಗಿ ಜೇಡಿಮಣ್ಣಾದ ಕೆಸರು, ಅಥವಾ ಜೇಡಿಮಣ್ಣು ಮತ್ತು ಮರಳಿನ ಮಿಶ್ರಣವಾದ ಕೆಸರನ್ನು ಸೆರಾಮಿಕ್‍ಗೆ ಬಳಸಬಹುದು. ಸಾಮಾನ್ಯ ಕಾವಿಟ್ಟಿಗೆ ಇದರ ಒಂದು ರೂಪವಾಗಿದೆ. ಕಾವಿಟ್ಟಿಗೆಗಳು ಹೆಚ್ಚು ಬಾಳಿಕೆ ಬರುತ್ತವೆ ಆದರೆ ಇವನ್ನು ಉತ್ಪಾದಿಸುವುದಕ್ಕೆ ಹೆಚ್ಚು ಶಕ್ತಿ ಬೇಕಾಗುತ್ತದೆ.

ಕುಂಬಾರ ಸಾಮಾನುಗಳನ್ನು ಜೇಡಿಮಣ್ಣಿನ ಮುದ್ದೆಯನ್ನು ಬೇಕಾದ ಆಕಾರದ ವಸ್ತುಗಳಾಗಿ ರೂಪಿಸಿ, ಆವಿಗೆಯಲ್ಲಿ ಹೆಚ್ಚಿನ ತಾಪಮಾನಕ್ಕೆ ಕಾಯಿಸಿ ತಯಾರಿಸಲಾಗುತ್ತದೆ. ಕಾಯಿಸುವುದರಿಂದ ಜೇಡಿಮಣ್ಣಿನ ಎಲ್ಲ ನೀರು ಹೋಗಿಬಿಡುತ್ತದೆ ಮತ್ತು ರಾಸಾಯನಿಕ ಕ್ರಿಯೆಗಳು ಪ್ರಚೋದಿತವಾಗಿ ಅದರ ಬಲ ಮತ್ತು ಗಟ್ಟಿತನದ ಹೆಚ್ಚಳ ಮತ್ತು ಆಕಾರದ ಸ್ಥಾಪನೆಯಂತಹ ಶಾಶ್ವತ ಬದಲಾವಣೆಗಳು ಉಂಟಾಗುತ್ತವೆ. ದಹನದ ಮೊದಲು ಅಥವಾ ನಂತರ ಕುಂಬಾರ ಸಾಮಾನನ್ನು ಅಲಂಕರಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. admin_666 (29 July 2013). "Mud brick". yourhome.gov.au.{{cite web}}: CS1 maint: numeric names: authors list (link)


"https://kn.wikipedia.org/w/index.php?title=ಕೆಸರು&oldid=810158" ಇಂದ ಪಡೆಯಲ್ಪಟ್ಟಿದೆ