ಕೈಗಾರಿಕಾ ವೈದ್ಯ
ಕೈಗಾರಿಕೆಯಲ್ಲಿ ನಿರಂತರಾಗಿರುವ ಜನರು ಆರೋಗ್ಯ ಪಾಲನೆ, ಕಾಯಿಲೆ ಮತ್ತು ಅಪಘಾತಗಳಿಂದ ಅವರು ನರಳದಂತೆ ರಕ್ಷಣೆ ಒದಗಿಸುವಿಕೆ, ಮತ್ತು ಇವು ಪೀಡಿಸಿದಾಗ ಯೋಗ್ಯ ಶುಶ್ರೂಷೆಯ ನೀಡಿಕೆ-ಇವನ್ನು ಕುರಿತ ವೈದ್ಯವಿಭಾಗ (ಇಂಡಸ್ಟ್ರಿಯಲ್ ಮೆಡಿಸನ್). ಒಬ್ಬ ಕಾರ್ಮಿಕ ದಿನವಹಿ 8-10 ಗಂಟೆಗಳ ಕಾಲ ದುಡಿಯಬೇಕು. ಕೆಲಸ ಅಥವಾ ಕೆಲಸ ಮಾಡುವ ಸಂಭವ ಉಂಟು. ಇಲ್ಲೆಲ್ಲ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ವಿವಿಧ ಕೈಗಾರಿಕೆಗಳಲ್ಲಿ ಉದ್ಯುಕ್ತರಾಗಿರುವವರ ನೆಮ್ಮದಿ, ಆರೋಗ್ಯ ರಕ್ಷಣೆ, ರೋಗ ಚಿಕಿತ್ಸೆಗಳಿಗೆ ಅನ್ವಯಿಸುವ ಅನೇಕ ಕ್ರಮಗಳು ಬಹಳ ಪ್ರಾಮುಖ್ಯಕ್ಕೆ ಬಂದಿವೆ. ರಾಷ್ಟ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಈ ವಿಚಾರವನ್ನು ನೋಡಿಕೊಳ್ಳಲು ಪ್ರತ್ಯೇಕವಾಗಿ ಕೈಗಾರಿಕಾ ಕ್ಷೇತ್ರ ಆರೋಗ್ಯ ಸೇವಾಶಾಖೆಯನ್ನು (ಇಂಡಸ್ಟ್ರಿಯಲ್ ಹೆಲ್ತ್ ಸರ್ವಿಸ್) ತೆರೆಯಲಾಗಿದೆ. ಇದರ ಮುಖ್ಯ ಉದ್ದೇಶಗಳು ಈ ಕೆಳಗಿನಂತಿವೆ.[೧]
ಮುಖ್ಯ ಉದ್ದೇಶಗಳು
[ಬದಲಾಯಿಸಿ](ಅ) ಕೆಲಸಗಾರರನ್ನು ಕೆಲಸ ಮಾಡುವ ವಾತಾವರಣಕ್ಕೆ ಸರಿಹೊಂದಿಸಿ ಅಲ್ಲಿ ಅವನು ನೆಮ್ಮದಿಯಿಂದ ಕೆಲಸ ಮಾಡುವಂತೆ ಸೌಲಭ್ಯಗಳನ್ನು ಕಲ್ಪಿಸಿ, ತನ್ಮೂಲಕ ಅವನ ಆರೋಗ್ಯಾಭಿವೃದ್ಧಿಗೆ ನೆರವಾಗುವುದು. (ಆ)ಉದ್ಯೋಗದಿಂದ ಉದ್ಭವಿಸಬಹುದಾದ ರೋಗಗಳನ್ನು ಮುಂಜಾಗ್ರತೆ ವಹಿಸಿ ತಡೆಗಟ್ಟುವುದು. (ಇ)ಕೆಲಸ ಮಾಡುವಾಗ ಗಾಯಗಳಾಗುವುದನ್ನು ತಪ್ಪಿಸಲು ಸಹಾಯ ಮಾಡುವುದು. (ಈ)ಗಾಯವಾದವರಿಗೆ ಮತ್ತು ರೋಗಗ್ರಸ್ತರಿಗೆ ತುರ್ತು ಚಿಕಿತ್ಸೆ ನೀಡಲು ಬೇಕಾದ ಸೌಲಭ್ಯಗಳಿಗೆ ತಕ್ಕ ವ್ಯವಸ್ಥೆ ಮಾಡುವುದು. (ಉ)ಗಾಯದಿಂದ ಅಥವಾ ರೋಗದಿಂದ, ಕೆಲಸಗಾರ ತಾತ್ಕಾಲಿಕವಾದ ಕೆಲಸ ಮಾಡಲು ನಿಶ್ಯಕ್ತನಾದರೆ ಅವನಿಗೆ ಎಲ್ಲ ವಿಧದ ಸೌಕರ್ಯಗಳನ್ನೂ ಒದಗಿಸಿ ಆದಷ್ಟು ಜಾಗ್ರತೆ ಕೆಲಸಕ್ಕೆ ಹಾಜರಾಗುವಂತೆ ಮಾಡುವುದು. ಶಾಶ್ವತವಾದ ನ್ಯೂನತೆ ಉಂಟಾದವರಿಗೆ ತಕ್ಕ ಪರಿಹಾರ ಕೊಟ್ಟು ಜೀವನೋಪಾಯಕ್ಕೆ ಮಾರ್ಗ ಕಲ್ಪಿಸಿಕೊಡುವುದು. (ಊ)ಆರೋಗ್ಯಾಭಿವೃದ್ಧಿ ಮತ್ತು ಆರೋಗ್ಯರಕ್ಷಣೆಯ ವಿಚಾರದಲ್ಲಿ ಎಲ್ಲ ಕಾರ್ಮಿಕರಿಗೂ ಶಿಕ್ಷಣ ಕೊಡಲು ಏರ್ಪಾಡು ಮಾಡುವುದು. (ಎ) ಕಡೆಯದಾಗಿ, ಕೈಗಾರಿಕಾ ಕ್ಷೇತ್ರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಧ್ಯಯನ, ತನಿಖೆ ಮತ್ತು ಸಂಶೋಧನೆಗೆ ವ್ಯವಸ್ಥೆ ಮಾಡುವುದು.
ಆದರ್ಶ ಉದ್ದೇಶಗಳ ಸಫಲ
[ಬದಲಾಯಿಸಿ]ಈ ಆದರ್ಶ ಉದ್ದೇಶಗಳು ಸಫಲಗೊಳ್ಳಲು ಅನೇಕ ವರ್ಷಗಳಾಗಬಹುದು.ಭಾರತ ದೇಶದ ಮುಖ್ಯ ಕಸುಬು ಕೃಷಿ. ಆದ್ದರಿಂದ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳ ಇತಿಹಾಸ ಮತ್ತು ವಿಕಸನಗಳನ್ನು ಅರಿಯಬೇಕಾದರೆ ಅಮೆರಿಕಾ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್ ಇತ್ಯಾದಿ ದೇಶಗಳ ಇತಿಹಾಸಗಳನ್ನು ಅಧ್ಯಯಿಸುವುದು ಆವಶ್ಯಕ. ಈ ದೇಶಗಳಲ್ಲಿ ಕೈಗಾರಿಕೋದ್ಯಮಗಳೇ ಅನೇಕರ ಜೀವನಕ್ಕೆ ಆಧಾರ ಎಂದು ಹೇಳಬಹುದು. ಇಲ್ಲಿ ರೂಪುಗೊಂಡ ವೈದ್ಯವಿಜ್ಞಾನ ಭಾರತದಂಥ ರಾಷ್ಟ್ರಕ್ಕೆ ಅನೇಕ ವಿಚಾರಗಳಲ್ಲಿ ಮೇಲ್ಪಂಕ್ತಿಯಾಗಬಲ್ಲದು. ಈ ಇತಿಹಾಸವನ್ನು ಇಲ್ಲಿ ಸ್ಥೂಲವಾಗಿ ಪರಿಶೀಲಿಸಲಾಗಿದೆ.ಉದ್ಯೋಗದ ಸಂಪರ್ಕದಿಂದಲೇ ಉಂಟಾಗುವ ರೋಗಗಳ ವಿಚಾರ ಪ್ರಾಚೀನ ಭಾರತ. ಈಜಿಪ್ಟ್ ಹಾಗೂ ರೋಂ ದೇಶಗಳ ವೈದ್ಯರಿಗೆ ತಿಳಿದಿತ್ತೆಂಬುದಕ್ಕೆ ಆಧಾರಗಳಿವೆ. ಆದರೆ ಕೈಗಾರಿಕಾ ಕ್ಷೇತ್ರದಲ್ಲಿನ ಆಧುನಿಕ ವೈದ್ಯವಿಜ್ಞಾನಕ್ಕೆ ಇಟಲಿ ದೇಶದ ಬರ್ನಾರ್ಡೋ ರಾಮಜೀóನಿ 17ನೆಯ ಶತಮಾನದಲ್ಲಿ ತಳಹದಿ ಹಾಕಿದನೆಂದು ಹೇಳಬಹುದು. ರೋಗಿಗಳ ರೋಗ ನಿದಾನ ಮಾಡಲು ವೈದ್ಯರು ಆತನ ಉದ್ಯೋಗವನ್ನು ಕೇಳಿ ತಿಳಿದುಕೊಳ್ಳಲೇಬೇಕೆಂದು ಈತ ಒತ್ತಿ ಹೇಳಿದ. 18-19ನೆಯ ಶತಮಾನದ ಕೈಗಾರಿಕಾ ಕ್ಷೇತ್ರದ ಕ್ರಾಂತಿಯ ತರುವಾಯ ರೋಗ ಪ್ರಚೋದಕ ಉದ್ಯೋಗಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಇದ್ದಕ್ಕಿದ್ದ ಹಾಗೆ ನೂರ್ಮಡಿ ಏರಿತು. ಲೆಕ್ಕವಿಲ್ಲದಷ್ಟು ಕೈಗಾರಿಕೆಗಳು ಕಾಣಿಸಿಕೊಂಡವು. ಯಂತ್ರೀಕರಣ ಮತ್ತು ಹೆಚ್ಚುಹೆಚ್ಚಾಗಿ ರೂಢಿಗೆ ಬರುತ್ತಿರುವ ಸ್ವಯಂಚಾಲನ ವಿಧಾನಗಳಿಂದಾಗಿ ಕೈಗಾರಿಕೆಗಳು ಸರ್ವತೋಮುಖವಾಗಿ ಬೆಳೆದು ಹೊಸ ಹೊಸ ಯಂತ್ರಗಳ ಉಪಯೋಗ ಪ್ರಾರಂಭವಾಯಿತು. ಕೈಗಾರಿಕೆಗಳು ಲಂಗುಲಗಾಮಿಲ್ಲದೆ ಬೆಳೆದುದರ ಪರಿಣಾಮವಾಗಿ ಹೊಸ ಸಮಸ್ಯೆಗಳು ಉದ್ಭವಿಸಿದುವು. ಅಪಘಾತದಿಂದ ಗಾಯ, ಸಂಪೂರ್ಣ ಅಥವಾ ಆಂಶಿಕ ಅಂಗವಿಕಲತೆ, ಇಲ್ಲವೇ ಸಾವುಗಳು ಕಾರ್ಮಿಕರಲ್ಲಿ ಸರ್ವೇಸಾಮಾನ್ಯವಾದುವು. ಕೆಲಸಮಾಡುವ ಕಡೆ ವಿಷಪೂರಿತ ಧೂಮ, ದೂಳುಗಳ ಸಂಪರ್ಕದಿಂದ ಉಸಿರಾಡುವಾಗ ಶ್ವಾಸಕೋಶಗಳಲ್ಲಿ ರೋಗಗಳ ಬೀಜವನ್ನು ಬಿತ್ತಲು ಅವಕಾಶ ಕಲ್ಪಿತವಾದವು.[೨]
ಉತ್ತರ ಅಮೆರಿಕ
[ಬದಲಾಯಿಸಿ]ಉತ್ತರ ಅಮೆರಿಕದಲ್ಲಿ ಉದ್ಯೋಗಗಳಿಂದುಂಟಾಗುವ ರೋಗಗಳ ಕಡೆ ಗಮನ ಸೆಳೆದ ಪ್ರಖ್ಯಾತ ವ್ಯಕ್ತಿ ಎಂದರೆ ಆಲಿಸ್ ಹ್ಯಾಮಿಲ್ಟನ್. ಕೆಲಸಗಾರರ ಆರೋಗ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅನೇಕ ಕಾರ್ಯಕ್ರಮಗಳು ಅವಶ್ಯಕವೆಂದು ಈಕೆ ಸ್ಪಷ್ಟಪಡಿಸಿದಳು. ಆದರೆ ಹಲವಾರು ಕಾರಣಗಳಿಂದ ಇವು ಕಾರ್ಯಗತವಾಗಲಿಲ್ಲ. ಮಾಲೀಕರಲ್ಲಿಯಾಗಲಿ ಕೆಲಸಗಾರರಲ್ಲಿಯಾಗಲಿ ಇವÀನ್ನು ಪ್ರಾರಂಭಿಸಲು ಅಷ್ಟು ಉತ್ಸಾಹವಿರಲಿಲ್ಲ. ಆದರೆ 1907-1920ರಲ್ಲಿ ಜಾರಿಗೆ ಂದ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಅನೇಕ ಶಾಸನಗಳ ಫಲವಾಗಿ ಕುಂಠಿತವಾಗಿದ್ದ ಪ್ರಗತಿ ಚುರುಕುಗೊಂಡಿತೆಂದು ಹೇಳಬಹುದು. ಸಮಸ್ಯೆಗಳ ಅರಿವುಂಟಾಯಿತಾಗಿ ಕೆಲಸಗಾರರ ಸಂಘಗಳೂ ಮಾಲೀಕರೂ ಕೂಲಿU್ಫರರ ಆರೋಗ್ಯ ನೆವ್ಮ್ಮಂದಿಯ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಲು ಉಪಕ್ರಮಿಸಿದರು.ಪ್ರಾರಂಭದಲ್ಲಿ ಒಬ್ಬ ಕೆಲಸಗಾರನಿಗೆ ಪೆಟ್ಟಾದ ತರುವಾಯ ಅಥವಾ ರೋಗ ಬಂದ ಮೇಲೆ ಚಿಕಿತ್ಸೆಗೆ ಹೆಚ್ಚು ಗಮನ ಕೊಡಲಾಗುತ್ತಿತ್ತು. ಬಹು ಬೇಗ ಚಿಕಿತ್ಸೆಗಿಂತ ತಡೆಗಟ್ಟುವುದು ಮುಖ್ಯ ಹಾಗೂ ತಡೆಗಟ್ಟಲು ತಗಲುವ ಖರ್ಚು ಚಿಕಿತ್ಸೆಗೆ ತಗಲುವ ಖರ್ಚಿಗಿಂತ ಕಡಿಮೆ ಎಂಬುದು ಮಂದಟ್ಟಾಯಿತು. ಚಲಿಸುವ ಯಂತ್ರಭಾಗಗಳು ಅಪಾಯಕ್ಕೆ ಎಡೆಗೊಡದಂತೆ ಆವರಣಗಳಿಂದ ರಕ್ಷಿತವಾದವು. ಕೆಲಸ ಮಾಡುವ ಕಡೆ ಸಾಕಷ್ಟು ಗಾಳಿ ಬೆಳಕಿನ ಏರ್ಪಾಡಾಯಿತು. ವಿಷಪೂರಿತ ರಾಸಾಯನಿಕಗಳನ್ನು ಬಳಸುವ ಬದಲು ವಿಷರಹಿತ ರಾಸಾಯನಿಕಗಳು ಬಳಕೆಗೆ ಬಂದುವು. ಎಲ್ಲಿ ಈ ರೀತಿಯ ಮಾರ್ಪಾಡು ಸಾಧ್ಯವಿಲ್ಲವೋ ಅಲ್ಲಿ ವಿಶಿಷ್ಟ ರೀತಿಯ ಉಡುಪುಗಳಿಂದ ಹಾಗೂ ಮುಖಕ್ಕೆ ಮುಸುಕು ಹಾಕಿಕೊಂಡು ಕೆಲಸ ಮಾಡುವುದರ ಮೂಲಕ ರಕ್ಷಣೆಯನ್ನು ಒದಗಿಸಲಾಯಿತು. ಈ ಸಾಧನಗಳಿಂದ ಅನೇಕ ಕೈಗಾರಿಕಾ ರೋಗಗಳನ್ನು ತಡೆಗಟ್ಟಿ ಅವುಗಳಿಂದ ನರಳುವವರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಆದರೆ ಸಮಸ್ಯೆ ಒಂದು ಕಡೆ ಕಡಿಮೆಯಾದಂತೆ ಮತ್ತೊಂದೆಡೆ ಹೊಸ ಹೊಸ ಸಮಸ್ಯೆಗಳು ಉದ್ಭವವಾಗತೊಡಗಿದುವು.ಕೆಲಸಗಾರರಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಯಾವ ರೋಗಾಪಾಯವೂ ಸಂಭವಿಸದಂತೆ ಕ್ರಮಗಳು ಜಾರಿಗೆ ಬಂದಂತೆಲ್ಲ ಅವರ ಸಾಮಾನ್ಯ ಆರೋಗ್ಯ ಹಾಗೂ ನೆಮ್ಮದಿ ಸಹ ಬಹಳ ಮುಖ್ಯವೆಂಬುದು ಮಾಲಿಕರಿಗೆ ವೇದ್ಯವಾಯಿತು. ಏಕೆಂದರೆ ಕೆಲಸಗಾರ ಆರೋಗ್ಯದಿಂದಿದ್ದು ದೃಢಕಾಯನಾಗಿದ್ದರೆ ಅವನಿಂದ ಉತ್ಪತ್ತಿಯೂ ಹೆಚ್ಚು.. ಮಾಲಿಕನಿಗೆ ಲಾಭವೂ ಅಧಿಕ. ಆದ್ದರಿಂದ ಇದೇ ಸಮಯಕ್ಕೆ ಎಲ್ಲ ದೊಡ್ಡ ಕಾರ್ಖಾನೆ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಕಾರ್ಮಿಕನ ಆರೋಗ್ಯರಕ್ಷಣೆಯನ್ನು ಕುರಿತ ಚಟುವಟಿಕೆಗಳು ಪ್ರಾರಂಭವಾದವು. ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಪ್ರತಿಯೊಬ್ಬ ಕಾರ್ಮಿಕನನ್ನೂ ವೈದ್ಯ ಪರೀಕ್ಷೆಗೆ ಒಳಪಡಿಸುತ್ತಿದ್ದರು. ಇದರಿಂದ ಅವನ ಆರೋಗ್ಯ ವಿಚಾರ ತಿಳಿಯುವುದಲ್ಲದೆ ಅವನ ಯೋಗ್ಯತೆಗೆ ತಕ್ಕಂತೆ ಕೆಲಸ ನೀಡಲು ಸಹಾಯಕವಾಯಿತು. ಅಲ್ಲದೇ ಕಾರ್ಮಿಕ ಕೆಲಸಕ್ಕೆ ಸೇರುವ ವೇಳೆಯಲ್ಲಿ ಆತನ ಆರೋಗ್ಯ ಹೇಗಿತ್ತೆಂಬುದಕ್ಕೆ ದಾಖಲೆ ಇದ್ದು ಮುಂದೆ ಉದ್ಭವಿಸಬಹುದಾದ ರೋಗಗಳಿಗೆ ಹೊಣೆಯಾದದ್ದು ಎಂಬುದನ್ನು ಖಚಿತವಾಗಿ ಇತ್ಯರ್ಥ ಮಾಡುವುದು ಸುಲಭವಾಯಿತು. ಇಷ್ಟೇ ಅಲ್ಲದೆ ನಿಯಮಿತ ಕಾಲಗಳಲ್ಲಿ ಪುನಃಪುನಃ ವೈದ್ಯಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡಲಾಯಿತು. ಈ ಪರೀಕ್ಷೆಗಳು ಕಡ್ಡಾಯ ಅಥವಾ ಐಚ್ಛಿಕವಿರಬಹುದು. ಇವುಗಳಲ್ಲಿ ರೋಗದ ಸುಳಿವು ಗೊತ್ತಾದರೆ ಇನ್ನೂ ಮೊದಲ ಹಂತಗಳಲ್ಲೇ ಚಿಕಿತ್ಸೆಗೆ ಒಳಪಡಿಸಿ ಜಾಗ್ರತೆ ಗುಣಹೊಂದಲು ದಾರಿಯಾಯಿತು. ವೈದ್ಯಪರೀಕ್ಷೆ ಮತ್ತು ಚಿಕಿತ್ಸೆಯೊಂದಿಗೇ ವೈದ್ಯರು ಕಾರ್ಮಿಕರಿಗೆ ಅವರ ಆರೋಗ್ಯಪಾಲನೆಗೆ ಸಂಬಂಧಿಸಿದ ವಿಚಾರವಾಗಿ ತಿಳಿವಳಿಕೆ ಕೊಡಲು ಏರ್ಪಾಡಾಯಿತು. ಉದಾಹರಣೆಗೆ ಆಹಾರದ ಮಹತ್ತ್ವ, ಧೂಮಪಾನದಿಂದ ಆಗುವ ಅಪಾಯ, ಆರೋಗ್ಯ ನಿಯಮಗಳ ಪಾಲನೆ, ಕಾಲಕಾಲಕ್ಕೆ ವೈದ್ಯ ಪರೀಕ್ಷೆ ನಡೆಸುವ ಉದ್ದೇಶ, ಮಲ, ಮೂತ್ರ, ರಕ್ತ, ಇವುಗಳ ಪರೀಕ್ಷೆಯ ಆವಶ್ಯಕತೆ ಮುಂತಾದವನ್ನು ಕುರಿತು ಕಾರ್ಮಿಕರಿಗೆ ವಿವರಿಸಲಾಯಿತು.
ವೈದ್ಯಕೀಯ ಚಿಕಿತ್
[ಬದಲಾಯಿಸಿ]ವೈದ್ಯಕೀಯ ಚಿಕಿತ್ಸೆ ಕೊಡಲು ಸೌಲಭ್ಯಗಳನ್ನು ಕಾರ್ಖಾನೆಗಳಲ್ಲಿಯೇ ಒದಗಿಸಬಹುದು. ಅಥವಾ ಕಾರ್ಮಿಕನ ಇಚ್ಛಾನುಸಾರ ಅವನ ಸ್ವಂತ ವೈದ್ಯನಿಂದ ಚಿಕಿತ್ಸೆ ಪಡೆಯಲು ಅನುಮತಿ ಕೊಡಬಹುದು. ಕಾರ್ಖಾನೆಗಳಲ್ಲಿಯೇ ಸೌಲಭ್ಯಗಳು ಏನೇನಿರಬೇಕೆಂದು ನಿರ್ದಿಷ್ಟವಾಗಿ ಹೇಳುವುದು ಸುಲಭವಲ್ಲ. ಬೇಕಾದ ಸಿಬ್ಬಂದಿ, ಸಲಕರಣೆ ಇತ್ಯಾದಿ ಮಾಲಿಕರ ಹಿತಾಸಕ್ತಿಯನ್ನು ಅವಲಂಬಿಸುವುದೊಂದೇ ಅಲ್ಲದೆ ಯಾವ ರೀತಿಯ ಕೈಗಾರಿಕಾ ಉತ್ಪಾದನೆ ನಡೆಯುತ್ತಿದೆ, ಎಷ್ಟು ಜನ ಕೆಲಸಗಾರರಿದ್ದಾರೆ, ನೆರೆಕರೆಯಲ್ಲಿರುವ ವೈದ್ಯಕೀಯ ಸೌಲಭ್ಯಗಳು ಏನು ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಇತ್ಯರ್ಥ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ 2,500 ಜನ ಕೆಲಸ ಮಾಡುವ ಕ್ಷೇತ್ರದಲ್ಲಿ ಒಬ್ಬ ವೈದ್ಯನ ಸೇವೆ ಸದಾ ಕಾಲದಲ್ಲಿ ದೊರಕಬೇಕು ಹಾಗೂ 1,250 ಜನ ಕೆಲಸಗಾರರಿಗೆ ಒಬ್ಬ ದಾದಿ, ಒಬ್ಬ ಗುಮಾಸ್ತ ಇರಬೇಕು. ವೈದ್ಯಕೀಯ ಮತ್ತು ಆರೋಗ್ಯ ಕೇಂದ್ರದಲ್ಲಿ ಕಡೇ ಪಕ್ಷ ಪ್ರತಿ ಕೆಲಸಗಾರನಿಗೆ ಒಂದು ಚದರಡಿಯಂತೆ ಸ್ಥಳಾವಕಾಶವಿರಬೇಕು. ಸಣ್ಣ ಕೈಗಾರಿಕೆಗಳಲ್ಲಿ ಅಂದರೆ ಕೆಲವೇ ಜನ ಕೆಲಸ ಮಾಡುವಲ್ಲಿ ಪೂರ್ಣ ಕಾಲದ ವೈದ್ಯನ ಸೇವೆಗೆ ಅಗತ್ಯವಿಲ್ಲ. ಅವಶ್ಯ ಬಿದ್ದಾಗ ವೈದ್ಯರು ಬಂದು ಸೇವೆ ನೀಡುವಂತಿರಬಹುದು.
ಅಮೆರಿಕದ ಸಂಯುಕ್ತಸಂಸ್ಥಾನಗಳು
[ಬದಲಾಯಿಸಿ]ಇಲ್ಲಿ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಯೋಜನೆಗಳು ಜಾರಿಯಲ್ಲಿರುವುದೊಂದೇ ಅಲ್ಲದೆ ಬಹಳ ಮಟ್ಟಿಗೆ ಪ್ರಗತಿಪರ ಹಾದಿಯಲ್ಲಿ ಅವು ಅಭಿವೃದ್ಧಿಗೊಂಡಿವೆ. ಇಪ್ಪತ್ತನೆಯ ಶತಮಾನದ ಮಧ್ಯದಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮಗಳು ಮೊದಮೊದಲಲ್ಲಿ ರೋಗ ಬಂದಾಗ ಸೌಲಭ್ಯಗಳನ್ನೊದಗಿಸುವುದಕ್ಕೂ ಆರೋಗ್ಯ ವಿಮಾ ಯೋಜನೆಗೆ ನೌಕರರನ್ನೊಳ ಪಡಿಸುವುದಕ್ಕೂ ಸೀಮಿತವಾಗಿದ್ದುವು. ಕಾಲಕ್ರಮೇಣ ರೋಗಪ್ರತಿಬಂಧಕ ಚುಚ್ಚು ಮದ್ದಿಗೆ ಏರ್ಪಾಡು ಮಾಡುವುದು, ಮಾನಸಿಕ ರೋಗ್ಯದ ಕಡೆ ಗಮನ ಕೊಡಲು ಸೌಲಭ್ಯ ಕಲ್ಪಿಸುವುದು ಮತ್ತು ಮಾದಕ ಪಾನೀಯಗಳ ಚಟವಿರುವವರನ್ನು ಸುಧಾರಣೆ ಮಾಡುವುದು ಸಹ ಈ ಯೋಜನೆಗಳಿಗೆ ಸೇರಿದುವು. ಬರಬರುತ್ತ ಉದ್ಯೋಗದಿಂದ ಉಂಟಾಗುವ ಅನಾರೋಗ್ಯ ನಿವಾರಣೆಯ ಮೂಲ ಉದ್ದೇಶ ಕಾರ್ಮಿಕನ ಸಾಮಾನ್ಯ ಆರೋಗ್ಯವನ್ನು ಉತ್ತಮಪಡಿಸುವ ಲಕ್ಷ್ಯಕ್ಕೆ ತಿರುಗಿತೆಂದು ಹೇಳಬಹುದು. ಏಕೆಂದರೆ ಕೆಲಸಕ್ಕೆ ಕಾರ್ಮಿಕರ ಗೈರುಹಾಜರಿಗೆ ಕಾರಣಗಳಲ್ಲಿ ಸಾಮಾನ್ಯ ಅನಾರೋಗ್ಯವೇ ಮುಖ್ಯವೆಂದು ಕಂಡುಬಂದಿತು. ಇದರ ಜೊತೆಗೆ ಉದ್ಯೋಗಕ್ಕೆ ಸಂಬಂಧಪಡದ ಅಪಘಾತಗಳೂ ಇದಕ್ಕೆ ಅನೇಕ ವೇಳೆ ಕಾರಣವೆಂದು ತಿಳಿಯಿತು.ಅಮೆರಿಕದ ಸಾರ್ವಜನಿಕ ಆರೋಗ್ಯ ಸೇವಾ ಶಾಖೆ ಉದ್ಯೋಗಗಳಿಂದ ಉದ್ಭವಿಸುವ ರೋಗಗಳ ವಿಚಾರವಾಗಿ ಅನೇಕ ಅಧ್ಯಯನಗಳನ್ನು ನಡೆಸಿ ಅಂಕಿ ಅಂಶಗಳನ್ನು ಶೇಖರಿಸಿದೆ; ಶೇಖರಿಸುತ್ತಲೂ ಇದೆ. ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಕೈಗಾರಿಕಾ ಆರೋಗ್ಯ ಮೇಲ್ವಿಚಾರಣೆಗೆ ಒಂದು ಪ್ರತ್ಯೇಕ ಶಾಖೆಯನ್ನೇ ಸ್ಥಾಪಿಸಲಾಗಿದೆ. ಇದರಲ್ಲಿ ಕೈಗಾರಿಕಾ ಕ್ಷೇತ್ರಗಳನ್ನು ಆರೋಗ್ಯ ದೃಷ್ಟಿಯಿಂದ ತಜ್ಞರು ಪರಿಶೀಲಿಸಿ ಅವುಗಳ ಸ್ಥಿತಿಗಳನ್ನು ತಿಳಿದು ಅವನ್ನು ಉತ್ತಮಗೊಳಿಸಲು ಸೂಚನೆಗಳನ್ನು ಕೊಡುತ್ತಾರೆ. ಇದರಿಂದ ಮಾಲಿಕರಿಗೆ ಬಹಳ ಉಪಕಾರವಾಗುತ್ತದೆ. ಕೆಲವು ವಿಪತ್ತು ವಿಮಾ ಕಂಪನಿಗಳು ವೈದ್ಯಕೀಯ ಹಾಗೂ ಕೈಗಾರಿಕೋದ್ಯಮ ಆರೋಗ್ಯ ರಕ್ಷಣ ಸೇವೆಯನ್ನೂ ತಜ್ಞರ ಸಲಹೆಗಳನ್ನೂ ಒದಗಿಸಲು ಮುಂದೆ ಬಂದವೆ. ಕೇವಲ ಸಣ್ಣ ಪುಟ್ಟ ಕ್ಷೇತ್ರಗಳಲ್ಲೂ ಮಾಲಿಕರು ವೈದ್ಯರ ಸೇವೆಯನ್ನು ಒಪ್ಪೊತ್ತು ಪಡೆದು ತಜ್ಞರ ಅಭಿಪ್ರಾಯದಂತೆ ಯಶಸ್ವಿ ಸೇವೆಯನ್ನು ಒದಗಿಸಲು ಅವಕಾಶವಿದೆ. 1960ರ ಹೊತ್ತಿಗೆ ಅಮೆರಿಕದಲ್ಲಿ ನೂರಕ್ಕೆ ಕೇವಲ ಹತ್ತು ಕಾರ್ಮಿಕರು ಮಾತ್ರ ಬೃಹದ್ವ್ಯಾಪಕ ಕೈಗಾರಿಕಾ ಆರೋಗ್ಯ ರಕ್ಷಣಾ ಕಾರ್ಯಕ್ರಮದಲ್ಲಿ ಸೇರಿದ್ದರು. ಆ ಕಾಲದಲ್ಲಿ ಉದ್ಯಮಗಳು ಇನ್ನೂ ಅಷ್ಟಾಗಿ ಬೆಳೆದಿರಲಿಲ್ಲವೆಂದು ಹೇಳಬಹುದು. ಚಿಕ್ಕಪುಟ್ಟ ಉದ್ಯಮಗಳು ಮಾತ್ರ ಬೆಳೆದಿದ್ದುವು. ಇದರಿಂದ ತುರ್ತು ಪರಿಸ್ಥಿತಿಗೆ ಬೇಕಾಗುವ ವೈದ್ಯಕೀಯ ಸೇವೆಗೆ ಏರ್ಪಾಡಿತ್ತೇ ವಿನಾ ಮಿಕ್ಕ ವೇಳೆಗಳಲ್ಲಿ ಯಾವ ವಿಧವಾದ ಸೌಲಭ್ಯಗಳೂ ಇರಲಿಲ್ಲ. ಇದಕ್ಕೆ ಕಾರಣ ಈ ರೀತಿಯ ಬೃಹದ್ವ್ಯಾಪಕ ಸೇವೆಯನ್ನೊದಗಿಸಲು ತಗಲುವ ಮಿತಿ ಮೀರಿದ ಖರ್ಚು. ದೊಡ್ಡ ಕೈಗಾರಿಕಾಕ್ಷೇತ್ರಗಳಲ್ಲಿ ಅಂದರೆ ಮೂರು ನಾಲ್ಕು ಸಾವಿರ ಕೆಲಸಗಾರರು ಕೆಲಸ ಮಾಡುವ ಕಡೆ ವರ್ಷಂಪ್ರತಿ ತಲೆಗೆ ಮೂವತ್ತು ಡಾಲರು ಖರ್ಚು ಆಗುತ್ತಿತ್ತು. ಇದನ್ನು ಉತ್ಪನ್ನ ಮಾಡುವ ಸಾಮಗ್ರಿಗಳ ಡಾಲರು ಖರ್ಚು ಆಗುತ್ತಿತ್ತು. ಇದನ್ನು ಉತ್ಪನ್ನ ಮಾಡುವ ಸಾಮಗ್ರಿಗಳ ಖರ್ಚಿನೊಂದಿಗೆ ಸೇರಿಸಿ ದೊಡ್ಡ ಕೈಗಾರಿಕೆಗಳು ಹಣವನ್ನು ಸರಿತೂಗಿಸಿಕೊಳ್ಳಲು ಅವಕಾಶವಿದೆ. ಆದರೆ ಸಣ್ಣಪುಟ್ಟ ಉದ್ಯಮಗಳಿಗೆ ಈ ರೀತಿ ಮಾಡಲು ಅವಕಾಶವಿಲ್ಲ. ಈ ಯೋಜನೆಯನ್ನು ಕಾರ್ಯಗತ ಮಾಡಿದರೆ ಅವರಿಗೆ ಭಾರಿ ನಷ್ಟವಾಗದಿರದು. ಇಂಥ ಸಮಸ್ಯೆಯನ್ನು ಅಮೆರಿಕದ ಕೆಲವು ಸಂಸ್ಥಾನಗಳಲ್ಲಿ ಐದಾರು ಸಣ್ಣಪುಟ್ಟ ಕೈಗಾರಿಕೆಗಳು ಒಂದಾಗಿ ಬೃಹದ್ವ್ಯಾಪಕ ಕೈಗಾರಿಕಾ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಕಾರ್ಯಗತ ಮಾಡಿಕೊಳ್ಳುವುದರ ಮೂಲಕ ಬಗೆಹರಿಸಿಕೊಂಡವು. ಪ್ರತಿ ಕ್ಷೇತ್ರದಿಂದ, ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಯನ್ನು ಅವಲಂಬಿಸಿ, ಮಾಲಿಕರು ತಮ್ಮ ಭಾಗದ ಹಣವನ್ನು ನಿಷ್ಕರ್ಷಿಸಿ ತುಂಬಿಕೊಡುತ್ತಿದ್ದರು. ತಜ್ಞರ ಸೇವೆ ಈ ರೀತಿ ಎಲ್ಲರಿಗೂ ದೊರಕುವಂತಾಯಿತು. ಈ ಕೈಗಾರಿಕಾ ಸಂಸ್ಥೆಗಳಲ್ಲಿ ಬೃಹದ್ವ್ಯಾಪಕ ಆರೋಗ್ಯ ರಕ್ಷಣಾ ವ್ಯವಸ್ಥೆಯಿಂದ ಕಾರ್ಮಿಕರ ಅನುಕೂಲ ಒಂದೇ ಅಲ್ಲದೆ ಕೈಗಾರಿಕಾ ರೋಗಗಳ ವಿಚಾರವಾಗಿ ಸಂಶೋಧನೆ ನಡೆಸಲು ಹಾಗೂ ವೈದ್ಯರನನು ಈ ಶಾಖೆಯಲ್ಲಿ ಕೆಲಸ ಮಾಡಲು ಪರಿಣತರನ್ನಾಗಿ ಮಾಡುವ ವಿಶಿಷ್ಟ ರೀತಿಯ ತರಬೇತು ಕೊಡಲು ಸಹ ಬೇಕಾದ ಕ್ಷೇತ್ರ ಸಿಕ್ಕಂತಾಯಿತು. ಉದಾಹರಣೆಗೆ ಕಾರ್ಮಿಕರಲ್ಲಿ ಹೃದಯ, ರಕ್ತನಾಳಗಳಿಗೆ ಸಂಬಂಧಪಟ್ಟ ರೋಗಗಳು, ಏಡಿಗಂತಿ, ಶ್ವಾಸಕೋಶ ಮತ್ತು ಕರುಳಿನ ರೋಗಗಳು ಎಷ್ಟರಮಟ್ಟಿಗೆ ವ್ಯಾಪಿಸಿವೆ, ಉದ್ಯೋಗದಿಂದ ಈ ರೋಗಗಳ ಮೇಲೆ ಏನು ಪರಿಣಾಮ ಮುಂತಾದ ಅಂಶಗಳನ್ನು ಶೇಖರಿಸಬಹುದು. ಕಾಲಕಾಲಕ್ಕೆ ಕಡ್ಡಾಯವಾಗಿ ಪ್ರತಿ ಕಾರ್ಮಿಕರ ವೈದ್ಯ ಪರೀಕ್ಷೆ, ರಕ್ತ ಮಲಮೂತ್ರ ಇತ್ಯಾದಿಗಳ ತನಿಖೆ ನಡೆಯುವುದರಿಂದ ಅತಿ ಮುಖ್ಯವಾಗಿ ಸಂಶೋಧನೆಗೆ ಬೇಕಾದ ಆಧಾರಾಂಶಗಳು ಸುಲಭವಾಗಿ ದೊರೆಯುತ್ತವೆ.
ಇಂಗ್ಲೆಂಡ್
[ಬದಲಾಯಿಸಿ]ಕೆಲಸದ ಪರಿಣಾಮವಾಗಿ ಕೆಲಸಗಾರನ ದೈಹಿಕ ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಮೇಲೆ ಉಂಟಾಗುವ ಪ್ರತಿಕೂಲಗಳು ಇಂಗ್ಲೆಂಡ್ ದೇಶದ ಕೈಗಾರಿಕಾ ಕ್ಷೇತ್ರದ ಇತಿಹಾಸದಲ್ಲಿ ಮೊದಲಿನಿಂದಲೂ ತಿಳಿದಿದ್ದ ಸಂಗತಿ. ಹದಿನೆಂಟನೆಯ ಶತಮಾನದ ಕಡೆಯವರೆಗೆ (ಅಂದರೆ ಉಗಿ ಸಾಮಥ್ರ್ಯವನ್ನು ಉಪಯೋಗಿಸಿಕೊಂಡು ನಡೆಯುವ ಸ್ವಯಂಚಾಲನ ಯಂತ್ರಗಳುಳ್ಲ ಕಾರ್ಖಾನೆಗಳು ಸ್ಥಾಪಿತವಾಗುವ ವರೆಗೆ) ಜನಸಾಮಾನ್ಯರಿಗೆ ಈ ಸಮಸ್ಯೆಯ ಅರಿವು ಹಾಗೂ ತೀವ್ರತೆ ತಿಳಿದಿರಲಿಲ್ಲ. ಬಟ್ಟೆ ಗಿರಣಿಗಳಲ್ಲಿ ಕೆಲಸ ಮಾಡುವವರಲ್ಲಿ ಸೋಂಕು ಜಾಡ್ಯಗಳು ಅಂದರೆ ಕಾಲರ, ಸಿಡುಬು, ಟೈಫಸ್ ಮುಂತಾದ ಭೀಕರ ರೋಗಗಳು ತಾಂಡವವಾಡಲು ಉಪಕ್ರಮಿಸಿದಾಗ ಕಾನೂನುಗಳನ್ನು ಸಿದ್ಧಪಡಿಸಿ ಜಾರಿಗೆ ತರಲಾಯಿತು. ಕಾರ್ಖಾನೆಗಳ ಕಾಯಿದೆಗಳು 1802ರಿಂದ ಪ್ರಾರಂಭವಾದುವು. ಹತ್ತಿ ಮತ್ತು ಉಣ್ಣೆ ಗಿರಣಿಗಳಿಗೆ ಅನ್ವಯಿಸುವ ಕಾಯಿದೆಗಳು ಜಾರಿಗೆ ಬಂದವು. 1833ರಲ್ಲಿ ಮೊಟ್ಟಮೊದಲು ಕಾರ್ಖಾನೆಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ನೇಮಿಸುವ ಕಾನೂನು ಜಾರಿಗೆ ಬಂದಿತು. ಒಂಬತ್ತರಿಂದ ಹದಿಮೂರು ವರ್ಷದ ಎಲ್ಲ ಬಾಲ ಕಾರ್ಮಿಕರು ದಿನವಹಿ ಕಡೇ ಪಕ್ಷ ಎರಡು ಗಂತೆಗಳಷ್ಟಾದರೂ ಪಾಠ ಕಲಿಯಲು ಶಾಲೆಗೆ ಹೋಗಲು ಒತ್ತಾಯ ಮಾಡುವ ಕಾನೂನುಗಳು ಸಹ ಆಗಲೇ ಜಾರಿಗೆ ಬಂದವು. ಇಂಗ್ಲೆಂಡಿನಲ್ಲಿ ಮುಂದೆ ಬಂದ ಕಡ್ಡಾಯ ಶಿಕ್ಷಣದ ತಳಹದಿ ಇದು ಎಂದು ಹೇಳಬಹುದು. ಕಾರ್ಖಾನೆಯ ಒಳಭಾಗವನ್ನು ಶುಭ್ರವಾಗಿಡಲು ಸುಣ್ಣಬಣ್ಣಗಳನ್ನು ಬಳಿಯಬೇಕೆಂಬ ನಿಯಮ 1844ರಲ್ಲಿ ಬಂದಿತು. ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ವಯಸ್ಸನ್ನು ನಿರ್ಧರಿಸಿ ಸಮರ್ಥನಪತ್ರಗಳನ್ನು ಪಡೆದು ತರಲು ಕಾರ್ಖಾನೆಗಳ ಪರಿಶೀಲನಾಧಿಕಾರಿ ವೈದ್ಯರನ್ನು ಗೊತ್ತುಪಡಿಸುವ ಅಧಿಕಾರವನ್ನು ಪಡೆದ. ಕ್ರಮೇಣ ವೈದ್ಯಕೀಯ ಪರಿಶೀಲನೆ ಮತ್ತು ನೆರವನ್ನು ಕಡ್ಡಾಯ ಮಾಡುವ ಕಾನೂನುಗಳು ಒಂದೊಂದಾಗಿ ಬಂದವು. ರಕ್ಷಣೆಯಿಲ್ಲದ ಸ್ವಯಂಚಾಲಿತ ಯಂತ್ರಗಳಿಂದ ಹಾಗೂ ಅಡ್ಡಲಾಗಿ ಹಾಯುವ ಯಂತ್ರ ದಂಡಗಳಿಂದ ಉಂಟಾಗುವ ಸಾವುಗಳು ಮತ್ತು ತೀವ್ರ ಗಾಯಗಳಿಗೆ ತಕ್ಕ ರಕ್ಷಣೆ ಮತ್ತು ಪರಿಹಾರ ಕೊಡಲು ಮಾಲಿಕನ ಹೊಣೆ ಅಥವಾ ಜವಾಬ್ದಾರಿ ಕಾನೂನು 1880ರಲ್ಲಿ ಇಂಗ್ಲೆಂಡಿನಲ್ಲಿ ಜಾರಿಗೆ ಬಂದಿತು. 1946ರಲ್ಲಿ ಅಂಗೀಕೃತವಾದ ರಾಷ್ಟ್ರೀಯ ಜೀವ ವಿಮಾ (ಕೈಗಾರಿಕೋದ್ಯಮಗಳಿಂದ ಸಂಭವಿಸುವ ಗಾಯಗಳಿಗೆ ಅನ್ವಯಿಸುವ) ಕಾನೂನಿಗೆ 1880ರ ಮಾಲಿಕನ ಹೊಣೆ ಕಾನೂನೇ ತಳಹದಿ. 1908ರಲ್ಲಿ ರಾಷ್ಟ್ರೀಯ ಆರೋಗ್ಯ ವಿಮಾ ಕಾಯಿದೆ ಜಾರಿಗೆ ಬಂದಿತು. ಎರಡನೆಯ ಮಹಾಯುದ್ಧ ಮುಕ್ತಾಯವಾದ ಅನಂತರ ಸೈನ್ಯದಿಂದ ಹೊರಬಂದ ಅನೇಕ ಅಂಗವಿಕಲರಿಗೆ ಕೆಲಸಗಳನ್ನು ಒದಗಿಸುವ ಪ್ರಶ್ನೆ ಆಡಳಿತದ ತುರ್ತುಗಮನವನ್ನು ಸೆಳೆಯಿತು. ವಿಕಲಗೊಂಡ ಅಂಗಗಳನ್ನು (ಕೈಕಾಲು ಇತ್ಯಾದಿ) ಪುನಃ ಕೆಲಸಕ್ಕೆ ಬರುವಂತೆ ಚಿಕಿತ್ಸೆ ಮಾಡಲು ಶಸ್ತ್ರವೈದ್ಯರು ಸಾಹಸಪಟ್ಟು ಬಹುಮಟ್ಟಿಗೆ ಯಶಸ್ವಿಗಳಾದರು. ಅಂಗವಿಕಲರಿಗೆ ರಕ್ಷಣೆ ಕೊಡುವ ಕಾನೂನು 1944ರಲ್ಲಿ ಜಾರಿಗೆ ಬಂದಿತು. ಈ ಕಾರ್ಯಕ್ರಮಗಳ ಪ್ರಗತಿಯಿಂದಲೇ 1948ರಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ಕಾರ್ಯಗತವಾಯಿತು. ಈ ಕಾರ್ಯಕ್ರಮಗಳಲ್ಲಿ ಕೈಗಾರಿಕೋದ್ಯಮ ಕ್ಷೇತ್ರಗಳಲ್ಲಿ ಸಂಭವಿಸುವ ಗಾಯ ಅಪಘಾತಗಳಿಗೆ ಚಿಕಿತ್ಸೆ, ನೆರವು ಪರಿಹಾರಗಳನ್ನೊದಗಿಸಲು ಅವಕಾಶವಿತ್ತು, ಕೆಲಸಗಾರರ ಆರೋಗ್ಯ, ನೆಮ್ಮದಿ ಹಾಗೂ ಅಪಾಯದಿಂದ ರಕ್ಷಣೆಯನ್ನು ಕಾರ್ಖಾನೆಗಳಿಗೆ ಅನ್ವಯಿಸುವ ಕಾಯಿದೆ 1961ರಲ್ಲಿ ಜಾರಿಗೆ ಬಂದಿತು. ಇದರಲ್ಲಿ ಎಲ್ಲ ವಿಧದ ಕಾರ್ಖಾನೆಗಳಿಗೆ ಅನ್ವಯಿಸುವಂತೆ ಕನಿಷ್ಟ ಪಕ್ಷ ದೊರೆಯಬೇಕಾದ ಸೌಲಭ್ಯಗಳ ಮಟ್ಟ ಸೂಚಿಸಲಾಯಿತು. ಕೆಲವು ಉದ್ಯಮಗಳಲ್ಲಿ ನಿರ್ದಿಷ್ಟವಾದ ಅಪಾಯ, ರೋಗ ಹಾಗೂ ನೆಮ್ಮದಿ ಭಂಗವಾಗುವ ಸಂಭವಗಳು ಹೆಚ್ಚಿಗೆ ಇದ್ದರೆ ಇವನ್ನು ಪ್ರತಿಬಂಧಿಸಲು ಮುಂಜಾಗ್ರತೆ ವಹಿಸಲು ವಿಶಿಷ್ಟ ರೀತಿಯ ರಕ್ಷಣಾ ಕ್ರಮಗಳನ್ನು ಕಡ್ಡಾಯ ಮಾಡುವುದಕ್ಕೆ ಕಾನೂನು ಅವಕಾಶ ಕೊಟ್ಟಿತು. ಇವೆಲ್ಲವನ್ನೂ ಜಾರಿಗೆ ತಂದು ಅವು ಆಯಾ ಕ್ಷೇತ್ರಗಳಲ್ಲಿ ವಾಸ್ತವವಾಗಿ ಆಚರಣೆಗೆ ತರಲ್ಪಟ್ಟಿವೆಯೇ ಇಲ್ಲವೇ ಎಂಬುದನ್ನು ನಿಶ್ಚಯ ಮಾಡಿಕೊಂಡು ಸಲಹೆ ಕೊಡುವ ಜವಾಬ್ದಾರಿ ಕಾರ್ಖಾನೆಗಳ ಪರಿಶೀಲನಾಧಿಕಾರಿಗಳ ಆಡಳಿತಕ್ಕೊಳಪಟ್ಟದ್ದು.
ಗಣಿಗಳಿಂದ ಕಲ್ಲಿದ್ದಲನ್ನು ತೆಗೆಯುವ ಉದ್ಯೋಗ
[ಬದಲಾಯಿಸಿ]ಗಣಿಗಳಿಂದ ಕಲ್ಲಿದ್ದಲನ್ನು ತೆಗೆಯುವ ಉದ್ಯೋಗ ಇಂಗ್ಲೆಂಡಿನ ಒಂದು ಅತಿ ಮುಖ್ಯ ಕೈಗಾರಿಕೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಅನುಭವಿಸುವ ಸ್ಥಿತಿಗತಿಗಳೇ ವಿಶಿಷ್ಟ ರೀತಿಯವು. ಸಾವುನೋವುಗಳುಂಟಾಗುವ ಅಪಘಾತಗಳು. ಕಲ್ಲಿದ್ದಲ ದೂಳು ಶ್ವಾಸಕೋಶಗಳನ್ನು ಹೊಕ್ಕು ಅದರಿಂದ ಉಂಟಾಗುವ ಶ್ವಾಸಕೋಶ ರೋಗಗಳು, ಎಡೆಬಿಡದೆ ಅಲುಗುವ ಕಣ್ಣುಗುಡ್ಡೆಗಳ ರೋಗಗಳು, ಸಂಧಿವಾತ ರೋಗಗಳು ಇತ್ಯಾದಿಗಳು ಅನೇಕ ಕಾರ್ಮಿಕರನ್ನು ಪೀಡಿಸುತ್ತವೆ. ಇಷ್ಟೇ ಅಲ್ಲದೆ ಭೂಗರ್ಭಗಣಿಗಳು ಬಹಳ ಕೆಳಗಿರುವುದರಿಂದ ಅಲ್ಲಿಯ ವಾತಾವರಣ ಅಂದರೆ ಅತಿ ಶಾಖ, ತೇವದಿಂದ ಕೂಡಿದ ಗಾಳಿ ಹಾಗೂ ಕಶ್ಮಲ ಮಿಶ್ರಿತ ಗಾಳಿಯಿಂದಲೂ ಕೆಲಸ ಮಾಡುವವನ ಆರೋಗ್ಯ ಬಹಳ ಸುಲಭವಾಗಿ ಕೆಡಬಹುದು. ಇಕ್ಕಟ್ಟಾದ ಜಾಗದಲ್ಲಿ ದಿನವಹಿ ಆರರಿಂದ ಎಂಟು ಗಂಟೆಗಳ ದೈಹಿಕ ಶ್ರಮ ಇವುಗಳೊಂದಿಗೆ ಸೇರಿದರೆ ಕಾರ್ಮಿಕನ ಸ್ಥಿತಿ ಮತ್ತಷ್ಟು ಕೆಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಇಲ್ಲಿ ಕೆಲಸ ಮಾಡುವವರಿಗೆ ಆರೋಗ್ಯ ರಕ್ಷಣೆ, ನೆಮ್ಮದಿ ಮುಂತಾದ ಸೌಲಭ್ಯಗಳನ್ನು ಕಲ್ಪಸಿಕೊಡಲು ಕಲ್ಲಿದ್ದಲು ಗಣಿಗಳ ಆಡಳಿತಕ್ಕೆ ಒಂದು ಪ್ರತ್ಯೇಕ ಹಾಗೂ ಖಾಯಂ ವೈದ್ಯಕೀಯ ಪರಿಶೀಲನಾಧಿಕಾರಿಯನ್ನು 1927ರಲ್ಲಿ ಗೊತ್ತು ಮಾಡಲಾಯಿತು. ಒಂದನೆಯ ಮಹಾಯುದ್ಧ ನಡೆಯುತ್ತಿದ್ದ ವೇಳೆಯಲ್ಲಿ ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ಷೇತ್ರದ ಆಧುನಿಕ ವೈದ್ಯವಿಜ್ಞಾನ ಪ್ರಾರಂಭವಾಯಿತೆಂದು ಹೇಳಬಹುದು. ಮದ್ದುಗುಂಡುಗಳನ್ನು ತಯಾರಿಸುವ ಕಾರ್ಖಾನೆಯ ಕೆಲಸಗಾರರ ಆರೋಗ್ಯ ರಕ್ಷಣಾ ಸಮಿತಿ ಒಂದನ್ನು ಡೇವಿಡ್ ಲಾಯಿಡ್ ಜಾರ್ಜ್ ಆಗ ರಚಿಸಿದ. ಯುದ್ಧ ಕೊನೆಗೊಂಡಾಗ ಕೆಲವು ಮುಖ್ಯಸ್ಥರು ಕೆಲಸಗಾರರ ಆರೋಗ್ಯ ರಕ್ಷಣೆಯ ಹೊಣೆಯನ್ನು ಕಾರ್ಖಾನೆಗಳು ಹೊತ್ತುಕೊಳ್ಳುವುದು ಅತಿ ಮುಖ್ಯವೆಂಬುದನ್ನು ಅರಿತು ತಮ್ಮ ತಮ್ಮ ಸಂಸ್ಥೆಗಳಲ್ಲಿ ಒಬ್ಬ ವೈದ್ಯನ ಸೇವೆಯನ್ನು ಪೂರ್ಣವಾಗಿ ಒದಗಿಸಿಕೊಂಡರು. ಆದರೆ ಈ ದಿಶೆಯಲ್ಲಿ ಸಾಕಷ್ಟು ಪ್ರಗತಿ ಆಗಲಿಲ್ಲ. 1935ರ ಹೊತ್ತಿಗೆ ಈ ಕಾರ್ಖಾನೆಗಳಲ್ಲಿ ಪೂರ್ಣ ಸೇವೆ ಸಲ್ಲಿಸುತ್ತಿದ್ದ 35 ಮಂದಿ ವೈದ್ಯರು ತಮ್ಮದೇ ಆದ ಒಂದು ಸಂಘವನ್ನು ರಚಿಸಿಕೊಂಡರು. ಇದೇ ಕೈಗಾರಿಕಾ ಕ್ಷೇತ್ರಕ್ಕೆ ಸೇವೆ ಸಲ್ಲಿಸುವ ವೈದ್ಯರ ಸಂಘ. 1960ರಲ್ಲಿ ಈ ಸಂಘದ ಸದಸ್ಯತ್ವ 1,000ವನ್ನು ಮೀರಿತ್ತು.
ಸರ್ಕಾರದ ಸರಬರಾಜು ಖಾತೆ
[ಬದಲಾಯಿಸಿ]ಎರಡನೆಯ ಮಹಾಯುದ್ಧದ ಸಮಯದಲ್ಲಿ ಸರ್ಕಾರದ ಸರಬರಾಜು ಖಾತೆ ಎಲ್ಲ ಮದ್ದು ಗುಂಡು ಕಾರ್ಖಾನೆಗಳಲ್ಲೂ ಈ ವೈದ್ಯ ಇಲಾಖೆ ಒಂದನ್ನು ಸ್ಥಾಪಿಸಿತು. ಇದು ತನ್ನ ಸೇವೆಯನ್ನು ಒದಗಿಸುವುದೊಂದೇ ಅಲ್ಲದೆ ಇಡೀ ಕೈಗಾರಿಕಾ ಕ್ಷೇತ್ರದ ವೈದ್ಯಕೀಯ ಹಾಗೂ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಅತ್ಯಗತ್ಯವಾಗಿ ಇರಬೇಕಾದ ಚಟುವಟಿಕೆ ಸಿಬ್ಬಂದಿ ಮತ್ತು ಸಂಸ್ಥೆಯ ಮಾದರಿಯನ್ನು ಸಹ ಸೂಚಿಸಿತು. ಈ ಸೂಚನೆಗಳನ್ನೊಳಗೊಂಡ ಶಿಫಾರಸು ಕಾರ್ಯಗತವಾಗಲಿಲ್ಲ. ಇದಕ್ಕೆ ಮುಖ್ಯಕಾರಣಗಳು ಹಣದ ಕೊರತೆ ಹಾಗೂ ಆಡಳಿತ ಸಮಸ್ಯೆಗಳು. ಸರ್ಕಾರ ಈ ಸುಧಾರಣೆಗಳನ್ನು ಆಚರಣೆಗೆ ತರುವ ಹೊಣೆಯನ್ನು ಖಾಸಗೀ ಕೈಗಾರಿಕೆಗಳ ಆಡಳಿತಕ್ಕೆ ವಹಿಸಿತಾದರೂ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿರಲಿಲ್ಲ. ಆದರೆ ರಾಷ್ಟ್ರೀಕರಣವಾದ ಕಲ್ಲಿದ್ದಲು, ಹಡಗು ಕಟ್ಟೆ ಕೂಲಿಗಾರರು, ವಿದ್ಯುಚ್ಛಕ್ತಿ, ಪರಮಾಣುಶಕ್ತಿ ಮುಂತಾದ ಕ್ಷೇತ್ರಗಳಲ್ಲಿ ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ನೆರವಿಗೆ ಬೃಹದ್ವ್ಯಾಪಕ ಸೇವೆ ಸ್ಥಾಪಿತವಾಯಿತು. ಉತ್ತಮವಾಗಿ ವ್ಯವಸ್ಥೆ ಮಾಡಿರುವ ತುರ್ತು ಚಿಕಿತ್ಸಾವಿಭಾಗ ಕೂಲಿಗಾರರ ಪೂರ್ಣ ವಿಶ್ವಾಸವನ್ನು ಗಳಿಸಿತು. ಇದರಿಂದ ಕಾಯಿಲೆ ಗೈರುಹಾಜರಿ ಬಹಳ ಮಟ್ಟಿಗೆ ಕಡಿಮೆ ಆಗಿ ಮಾಲಿಕರ ಗಮನವನ್ನು ಆಕರ್ಷಿಸಿತು. ಕೆಲಸಗಾರನಿಗೆ ಯಾವ ವಿಧವಾದ ಕೆಲಸದಲ್ಲಿ ಆಸಕ್ತಿ, ಸಹಜ ಪ್ರವೃತ್ತಿ ಇದೆ ಎಂಬುದನ್ನು ಕೆಲಸಕ್ಕೆ ಸೇರುವ ಮುನ್ನ ವಿಮರ್ಶಿಸುವುದರಿಂದ ಅವನನ್ನು ಸೇರಿದ ತರುವಾಯ ಕೆಲಸದಿಂದ ತೆಗೆದು ಹಾಕುವ ಸಂದರ್ಭಗಳು ಬಹುಮಟ್ಟಿಗೆ ಕಡಿಮೆಯಾದುವು. ತಾತ್ಕಾಲಿಕವಾಗಿಯಾಗಲಿ ಶಾಶ್ವತವಾಗಿ ಆಗಲಿ ರೋಗ, ನ್ಯೂನತೆ ಅಥವಾ ಅಂಗವಿಕಲತೆ ಉಂಟಾದಲ್ಲಿ ಅಂಥವರಿಗೆ ತಕ್ಕ ಚಿಕಿತ್ಸೆಗೆ ಏರ್ಪಾಡು ಮಾಡಿ ಗುಣವಾಗದಿದ್ದಲ್ಲಿ ಸೂಕ್ತ ಶಿಕ್ಷಣ ಕೊಟ್ಟು ತಕ್ಕ ಕೆಲಸವನ್ನು ಒದಗಿಸಿ ಪುನಃ ಅವರು ಸಂಪಾದಿಸಲು ಅವಕಾಶ ಕಲ್ಪಿಸಿ ಕೊಡುವುದು ಕೈಗಾರಿಕಾ ಕ್ಷೇತ್ರಕ್ಕೆ ಅನ್ವಯಿಸುವ ವೈದ್ಯವಿಜ್ಞಾನದ ಒಂದು ಮುಖ್ಯ ಜವಾಬ್ದಾರಿ. ಕಾರ್ಖಾನೆಯ ನೈರ್ಮಲ್ಯ, ಕೈಗಾರಿಕೋದ್ಯಮಗಳಲ್ಲಿ ಉದ್ಭವಿಸುವ ರೋಗಗಳು, ಅವುಗಳ ಕಾರಣ, ಅವುಗಳ ಚಿಕಿತ್ಸೆ ಹಾಗೂ ಪ್ರತಿಬಂಧಕ ಕ್ರಮಗಳು ಮತ್ತು ಅಪಘಾತಗಳನ್ನು ತಪ್ಪಿಸುವ ವಿಧಾನ ಇವೇ ಮುಂತಾದ ವಿಷಯಗಳಲ್ಲಿ, ಕಾರ್ಖಾನೆಯ ವೈದ್ಯ ಸೂಕ್ತಸಲಹೆಯನ್ನು ಕೊಡುತ್ತಾನೆ. ಮೊದಮೊದಲು ರೋಗ ಮತ್ತು ಅವುಗಳ ಚಿಕಿತ್ಸೆಯ ಮೇಲೆಯೇ ಹೆಚ್ಚು ಗಮನವಿಡಲಾಗುತ್ತಿತ್ತು. ಪ್ರತಿಬಂಧಕ ಕ್ರಮಗಳ ಮೇಲೆ ಅಷ್ಟು ಲಕ್ಷ್ಯವಿರುತ್ತಿರಲಿಲ್ಲ. ಕಾಲಕ್ರಮೇಣ ಈ ನ್ಯೂನತೆಯನ್ನು ಹೋಗಲಾಡಿಸಲಾಯಿತು. ಇಂಗ್ಲೆಂಡಿನಲ್ಲಿ ಕೈಗಾರಿಕೆಗಳು ಸಣ್ಣ ಸಣ್ಣ ಸಂಸ್ಥೆಗಳಾಗಿದ್ದು ಅವುಗಳಲ್ಲಿ ಕೆಲವೇ ಕೆಲಸಗಾರರಿರುತ್ತಿದ್ದರು. ಇದರಿಂದ ಆಡಳಿತ ವಹಿಸಿದ ಮಾಲಿಕರಿಗೆ ವೈದ್ಯ ಸಹಾಯ ಹಾಗೂ ಆರೋಗ್ಯ ರಕ್ಷಣೆಗೆ ಏರ್ಪಾಡು ಮಾಡುವುದು ಸುಲಭಸಾಧ್ಯವಾಗಲಿಲ್ಲ. ದೊಡ್ಡ ದೊಡ್ಡ ಕೈಗಾರಿಕಾ ಪಟ್ಟಣಗಳಲ್ಲಿ ಉದಾಹರಣೆಗೆ ಬರ್ಮಿಂಗ್‍ಹ್ಯಾಮ್ ಪಟ್ಟಣದಲ್ಲಿ ಕಾರ್ಮಿಕರಿಗೇ ಪ್ರತ್ಯೇಕ ಆಸ್ಪತ್ರೆಯನ್ನು ತೆರೆಯಲಾಯಿತು. ಈ ರೀತಿಯ ಆಸ್ಪತ್ರೆಗಳು ಬಹಳ ಯಶಸ್ವಿಯಾಗಿ ಸೇವೆ ಸಲ್ಲಿಸಿದುವು. ಅಲ್ಲದೇ ಅಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಸಂಶೋಧನೆಗಳಿಗೂ ಗಮನವಿತ್ತು ಕಾರ್ಮಿಕರ ರೋಗ ರುಜಿನಾದಿಗಳ ವಿಚಾರವಾಗಿ ಅತ್ಯಂತ ಮಹತ್ತರವಾದ ಜ್ಞಾನ ಸಂಪಾದನೆ ಮಾಡಿದರು. ಅಂಗವಿಕಲರಿಗೆ, ಹೃದಯ ರೋಗಿಗಳಿಗೆ, ಪಾಶ್ರ್ವವಾಯುವಿನಿಂದ ನರಳುವವರಿಗೆ ಪ್ರತ್ಯೇಕ ಗಮನ ಕೊಟ್ಟು ಯಶಸ್ವಿ ಚಿಕಿತ್ಸೆ ನಡೆಸಿ, ಅವರು ಪುನಃ ತಮ್ಮ ಜೀವನ ಸಾಗಿಸಲು ಬೇಕಾದ ಶಿಕ್ಷಣ ಸೌಲಭ್ಯಗಳನ್ನು ಹೊಂದಲು ಸಂಸ್ಥೆಗಳು ಸ್ಥಾಪಿತವಾದುವು. ಅನೇಕ ವೇಳೆ ಈ ಸಂಸ್ಥೆಗಳಿಗೆ ಸರ್ಕಾರದಿಂದ ಸಹಾಯ ಮತ್ತು ಸಹಕಾರ ದೊರೆಯುವಂತಾಯಿತು. ಕೈಗಾರಿಕಾ ಕ್ಷೇತ್ರದಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಹಾಗೂ ತಡೆಗಟ್ಟಲು ಎಂಜಿನಿಯರುಗಳ ಸಹಾಯವನ್ನು ಹೆಚ್ಚು ಹೆಚ್ಚಾಗಿ ಪಡೆಯಲಾಯಿತು. ಯಂತ್ರಗಳನ್ನು ರೂಪಿಸುವಾಗಲೇ ಕೆಲವು ಬದಲಾವಣೆಗಳನ್ನು ಮಾಡಿದ ಅನಂತರ ಅಪಾಯವಾಗಬಹುದಾದ ಭಾಗಗಳಿಂದ ರಕ್ಷಣೆ ಕೊಡುವ ಮಾರ್ಪಾಡುಗಳಾದವು. ಇವೇ ಅಲ್ಲದೆ ಕಾರ್ಮಿಕನೇ ಧರಿಸಿ ರಕ್ಷಣೆ ಪಡೆಯುವ ಕವಚ, ಕನ್ನಡಕ, ಕೈಚೀಲ, ಶ್ವಾಸಶೋಧಕ ಇತ್ಯಾದಿ ಸಲಕರಣೆಗಳು ಅಪಘಾತಗಳಿಂದ ಹಾಗೂ ರೋಗಗಳಿಂದ ರಕ್ಷಣೆ ಕೊಟ್ಟವು. ಕೆಲವು ಕೈಗಾರಿಕಾ ರೋಗಗಳು ಈ ರಕ್ಷಣೆಗಳಿಂದ ನಿರ್ಮೂಲವಾದುವು. ಉದಾಹರಣೆಗೆ ಭೂಗರ್ಭ ಗಣಿಯ ಕೆಲಸಗಾರರಲ್ಲಿ, ಕಲ್ಲು ದೂಳು ಶ್ವಾಸಕೋಶ ಸೇರಿ ಪ್ರೇರೇಪಿಸುವ ಸಿಲಿಕೋಸಿಸ್, ರಾಸಾಯನಿಕಗಳ ಸಂಪರ್ಕದಿಂದ ಧರ್ಮವ್ಯಾಧಿ, ಶ್ವಾಸಕೋಶದ ಏಡಿಗಂತಿ, ವಿದ್ಯುತ್, ವಿಕಿರಣಪಟುತ್ವಗಳಿಂದ ಉಂಟಾದ ಅಪಾಯ ಇವೆಲ್ಲವನ್ನೂ ಸೂಕ್ತರೀತಿಯ ರಕ್ಷಣೆ ಪಡೆದು ಯಶಸ್ವಿಯಾಗಿ ಪ್ರತಿಬಂಧಿಸಲು ಸಾಧ್ಯವಾಯಿತು.
ಕಸುಬು ಬೇಸಾಯ
[ಬದಲಾಯಿಸಿ]ಭಾರತ: 85% ಭಾಗ ಜನ ಐದೂವರೆ ಲಕ್ಷ ಹಳ್ಳಿಗಳಲ್ಲಿ ವಾಸಿಸುವರು. ಇವರ ಮುಖ್ಯ ಕಸುಬು ಬೇಸಾಯ. ಇದು ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯ. ಕೈಗಾರಿಕೋದ್ಯಮಗಳಿಗೆ ಸಂಬಂಧಪಟ್ಟಂತೆ ಉದ್ಭವಿಸುವ ರೋಗಗಳ ಸಮಸ್ಯೆ ಈ ದೇಶದಲ್ಲಿ ಇತ್ತೀಚಿನವರೆಗೆ ವಿಶೇಷವಾಗಿ ಇರಲಿಲ್ಲವೆಂದು ಹೇಳಬಹುದು. ಮುಂಬಯಿ, ಮದ್ರಾಸು, ಕಲ್ಕತ್ತ, ಅಹಮದಾಬಾದ್, ಜಮ್‍ಷೆಡ್‍ಪುರ ಮತ್ತು ಭೂಗರ್ಭ ಗಣಿಗಳಿರುವ ಸ್ಥಳಗಳಲ್ಲಿ ಕೈಗಾರಿಕೋದ್ಯಮಗಳ ಬೆಳೆವಣಿಗೆ ಈ ಶತಮಾನದಲ್ಲಿ ಅತಿಯಾಗಿ ಅಭಿವೃದ್ಧಿಗೊಂಡಿದೆ. ಅದೂ ಅಲ್ಲದೆ ಹಳ್ಳಿಗಳಿಂದ ಪಟ್ಟಣಗಳಿಗೆ ಜನರು ಯಥೇಚ್ಛವಾಗಿ ವಲಸೆ ಬಂದು ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರಾಗಿ ಸೇರಿದ್ದಾರೆ. ಇಂಥ ವಲಸೆಗಳಿಂದ ಪಟ್ಟಣಗಳಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿವೆ. ವಲಸೆ ಬಂದ ಎಲ್ಲ ಜನರಿಗೂ ಉದ್ಯೋಗ ಒದಗಿಸುವುದು ಸುಲಭಸಾಧ್ಯವಲ್ಲ. ಸರ್ಕಾರ ಈ ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕೇವಲ ವ್ಯವಸಾಯವನ್ನೇ ನಂಬಿದ್ದರೆ ಜನರಿಗೆ ಅದರಿಂದ ಜೀವನ ಸಾಗುವುದು ಕಷ್ಟವೆಂದು ತಿಳಿದು ಒಂದು ಸುಭದ್ರವಾದ ಆರ್ಥಿಕ ಸ್ಥಿತಿ ರಾಷ್ಟ್ರದಲ್ಲಿ ನೆಲೆಸಬೇಕಾದರೆ ಕೈಗಾರಿಕೆಗಳು ಸ್ಥಾಪನೆಯಾಗಬೇಕೆಂಬ ನೀತಿಯನ್ನು ಅಂಗೀಕರಿಸಿತು. 1943ರ ಅಕ್ಟೋಬರಿನಲ್ಲಿ ಭಾರತ ಸರ್ಕಾರ ಒಂದು ಆರೋಗ್ಯ ಸಮೀಕ್ಷಣ ಮತ್ತು ಅಭಿವೃದ್ಧಿ ಮಂಡಲಿಯನ್ನು ಸರ್ ಜೋಸೆಫ್ ಭೋರ್‍ರವರ ನೇತೃತ್ವದಲ್ಲಿ ನೇಮಿಸಿತು. ಅಂದಿನ ಬ್ರಿಟಿಷ್ ಭಾರತದ ಆರೋಗ್ಯ ಸಮಸ್ಯೆ ಹಾಗೂ ಆರೋಗ್ಯ ವ್ಯವಸ್ಥೆ ಮತ್ತು ಅವಕ್ಕೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸುವುದೊಂದೇ ಅಲ್ಲದೆ ಮುಂದೆ ಈ ವಿಷಯದಲ್ಲಿ ಭಾರತ ಸರ್ಕಾರ ರೂಪಿಸಬೇಕಾದ ಮೂಲತತ್ತ್ವಗಳನ್ನು ಶಿಫಾರಸು ಮಾಡಲು ಮಂಡಲಿಗೆ ಆದೇಶ ಕೊಡಲಾಯಿತು. ಇದು ಐದು ಉಪಸಲಹಾಮಂಡಲಿಗಳನ್ನು ಏರ್ಪಡಿಸಿಕೊಂಡು ಕಾರ್ಯೋದ್ಯುಕ್ತವಾಯಿತು. ಆ ಮಂಡಲಿಗಳಿವು: 1 ಜನಾರೋಗ್ಯ, 2 ವೈದ್ಯಕೀಯ ಸೌಲಭ್ಯ, 3 ವೈದ್ಯವೃತ್ತಿ ಶಿಕ್ಷಣ, 4 ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ, 5 ಕೈಗಾರಿಕೋದ್ಯಮಗಳಿಗೆ ಅನ್ವಯಿಸುವ ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಸೌಲಭ್ಯಗಳು.
ಆರೋಗ್ಯ ರಕ್ಷಣೆ ಹಾಗೂ ವೈದ್ಯಕೀಯ ಸೌಲಭ್
[ಬದಲಾಯಿಸಿ]ಆರೋಗ್ಯ ರಕ್ಷಣೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಬಯಸುವ ಕಾರ್ಮಿಕರಲ್ಲಿ ಎರಡು ಗುಂಪುಗಳನ್ನು ಕಾಣಬಹುದು. ಜನಸಾಮಾನ್ಯರೊಂದಿಗೆ ಸೇರಿ ಅವರ ಅನಾರೋಗ್ಯ ಹಾಗೂ ರೋಗಗಳೊಂದಿಗೆ ಸೆಣಸಾಡುವ ಕಾರ್ಮಿಕರ ಗುಂಪು ಒಂದು. ಕೇವಲ ಕೈಗಾರಿಕಾ ಕ್ಷೇತ್ರಗಳಲ್ಲಿ ಕೆಲಸ ಮಾಡುವುದರಿಂದಲೇ ಉದ್ಭವಿಸುವ ರೋಗಗಳನ್ನು ಎದುರಿಸುವ ಗುಂಪು ಮತ್ತೊಂದು. ಉದಾಹರಣೆಗೆ ಕುರಿ ತುಪ್ಪಟದೊಂದಿಗೆ ಕೆಲಸ ಮಾಡುವವರಿಗೆ ಅಂತ್ರ್ಯಕ್ಸ್ ರೋಗ ಬರುವ ಸಂಭವ ಅಧಿಕ ಧರ್ಮ ಹದ ಮಾಡುವ ಲಉದ್ಯೋಗದಲ್ಲಿ ನರತರಾದವರು ಧರ್ಮವ್ಯಾಧಿಯಿಂದ ನರಳುವುದು ಸಾಮಾನ್ಯ. ಈ ರೋಗಗಳು ಕೈಗಾರಿಕೆ ಅಥವಾ ಉದ್ಯೋಗದಿಂದಲೇ ಬರುವ ವಿಶಿಷ್ಟ ರೋಗಗಳೆಂದು ಹೇಳಬಹುದು. ಕೆಲಸ ಮಾಡುವ ವಾತಾವರಣ ಮತ್ತಿತರ ಪ್ರಭಾವಗಳಿಂದಲೂ ಕಾರ್ಮಿಕರ ಆರೋಗ್ಯ ಕೆಡುವ ಸಂಭವಗಳುಂಟು. ಬೆಳಕು ಗಾಳಿಗಳ ಕೊರತೆ, ದೂಳು, ಶಬ್ದಗಳ ವೈಪರೀತ್ಯಗಳಿಂದಲೂ ರೋಗ ಉಂಟಾಗಬಹುದು. ಹೀಗಿರುವುದರಿಂದ ಸಾರ್ವಜನಿಕ ಜನಾರೋಗ್ಯಕ್ಕೆ ಅನ್ವಯಿಸುವ ರೋಗ ನಿವಾರಣೆ ವೈದ್ಯಕೀಯ ಸೌಲಭ್ಯಗಳಷ್ಟೇ ಅಲ್ಲದೇ ಕಾರ್ಮಿಕರ ಆರೋಗ್ಯ ಪಾಲನೆಗೆ ಹಾಗೂ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಅತ್ಯಗತ್ಯವೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ವಿಶಿಷ್ಟ ರೀತಿಯ ಸೌಲಭ್ಯಗಳನ್ನು ಏರ್ಪಡಿಸುವುದು ಕಾರ್ಮಿಕರ ಆರೋಗ್ಯ ರಕ್ಷಣಾ ಹಾಗೂ ವೈದ್ಯಕೀಯ ಸೌಲಭ್ಯ ಸೇವಾಡಳಿತದ ಮುಖ್ಯ ಉದ್ದೇಶ. ಈ ಆಡಳಿತಕ್ಕೊಳಪಡುವ ಕಾರ್ಮಿಕರನ್ನು ಒಂಬತ್ತು ಪ್ರಮುಖ ಗುಂಪುಗಳನ್ನಾಗಿ ವಿಭಾಗಿಸಿದೆ: 1 ಕಾರ್ಖಾನೆ ಕಾಯಿದೆ ಅನ್ವಯಿಸುವ ಸಂಸ್ಥೆಗಳಲ್ಲಿರುವವರು, 2 ನಿಯಮಗಳಿಗೆ ಒಳಪಡದ ಕಾರ್ಖಾನೆಗಳಲ್ಲಿರುವವರು, 3 ಗಣಿ ಕೆಲಸಗಾರರು, 4 ಕಟ್ಟಡ ಕಟ್ಟುವ ಕೆಲಸಗಾರರು, 5 ಭಾರೀ ಮರಾಮತ್ತುಗಳಲ್ಲಿರುವ ಕೆಲಸಗಾರರು, 6 ಸಾಗಣಿ ಸಂಸ್ಥೆ, ಅಂದರೆ ಭೂ, ಜಲ, ವಾಯು ಸಂಚಾರ ವಾಹನಗಳನ್ನು ನಡೆಸುವ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾದವರು, 7 ತೋಟಗಳಲ್ಲಿ ಕೆಲಸ ಮಾಡುವವರು (ಅಂದರೆ ಕಾಫೆ, ಟೀ, ರಬ್ಬರ್ ಭೋಜನಶಾಲೆ ಹಾಗೂ ಹೋಟೇಲ್ ಕೆಲಸಗಾರರು.ಮೇಲೆ ಹೇಳಿದ ಕೆಲಸಗಳಲ್ಲಿ ಸುಮಾರು ಎಷ್ಟು ಕೆಲಸಗಾರರಿದ್ದಾರೆಂಬುದನ್ನು ನಿರ್ದಿಷ್ಟವಾಗಿ ತಿಳಿಸಲು ಅಂಕಿ ಅಂಶ ಸಾಲದು. ಇಡೀ ಭಾರತದಲ್ಲಿ ಇದ್ದ ಕಾರ್ಮಿಕರ ಸಂಖ್ಯೆ (1942ರಲ್ಲಿ) 50 ಲಕ್ಷಕ್ಕಿಂತ ಹೆಚ್ಚು ಎಂದು ಅಧಿಕೃತವಾಗಿ ವರದಿ ಆಗಿದೆ. ಈ ಅಂದಾಜಿನ ಜೊತೆಗೆ ಗಣನೆಗೆ ಬರದಿರುವವರನ್ನೂ ಸೇರಿಸಿದರೆ ಒಟ್ಟು ಸಂಖ್ಯೆ 70-80 ಲಕ್ಷಕ್ಕೂ ಅಧಿಕವಿರಬಹುದೆಂದು ಹೇಳಬಹುದು (1942).
ಕೈಗಾರಿಕೆ ಉದ್ಯಮಗಳ ಕಾರ್ಮಿಕರ ಆರೋಗ್ಯ
[ಬದಲಾಯಿಸಿ]ಕೈಗಾರಿಕೆ ಉದ್ಯಮಗಳ ಕಾರ್ಮಿಕರ ಆರೋಗ್ಯದ ಕಡೆ ಗಮನ ಕೊಡುವುದು ಅಯಿ ಮುಖ್ಯ. ಲ ಭಾರತದಲ್ಲಂತೂ ಈ ಕಾರ್ಮಿಕರ ಆರೋಗ್ಯದ ಕಡೆ ವಿಶಿಷ್ಟ ಗಮನ ಕೊಡಬೇಕಾದದ್ದು ಅತ್ಯಗತ್ಯ. ಏಕೆಂದರೆ ಕೈಗಾರಿಕೆಯೇ ಅತಿ ಪ್ರಧಾನವಾದ ಪಾಶ್ಚಾತ್ಯ ದೇಶಗಳಲ್ಲಿ ಕಾರ್ಮಿಕರು ಒಂದು ಗೊತ್ತಾದ ಪ್ರದೇಶದಲ್ಲಿ ಸ್ಥಿರವಾಗಿ ನೆಲೆಸಿರುವರು. ಭಾರತದಲ್ಲಿ ಬಹು ಮಟ್ಟಿಗೆ ಈ ಕಾರ್ಮಿಕರು ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬಂದಿರುವವರಾದರೂ ಅವರು ತಮ್ಮ ಹಳ್ಳಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡಿರುವುದೇ ವಾಡಿಕೆ. ಇಂಥ ಒಬ್ಬ ಕಾರ್ಮಿಕ ವಾಸಿಸುವ ಮನೆ, ಸುತ್ತಮುತ್ತಲಿರುವ ಪ್ರದೇಶ, ಕೆಲಸ ಮಾಡುವ ಸ್ಥಳ ಬಹು ಮಟ್ಟಿಗೆ ಅವನ ಹಳ್ಳಿ ವಾಸಕ್ಕಿಂತ ಅನಾರೋಗ್ಯಕರ ಕೊಂಪೆ ಎಂದು ಹೇಳಬಹುದು. ಸಂಸಾರದಿಂದ ದೂರವಾದ ಕಾರ್ಮಿಕ ಪಟ್ಟಣಗಳ ದುಶ್ಚಟಗಳಿಗೆ ಮಾರುಹೋಗಲು ಅವಕಾಶವಿದೆ. ಹೀಗೆ ಅನಾರೋಗ್ಯ ವಾತಾವರಣ ಹಾಗೂ ಸಾಂಕ್ರಾಮಿಕ ಜಾಡ್ಯಗಳ ಬಲೆಯಲ್ಲಿ ಸಿಕ್ಕಿ ಭಾರತದ ಕಾರ್ಮಿಕರು ಕ್ಷಯ, ಕುಷ್ಠ, ಮೇಹ ಮುಂತಾದ ರೋಗಗಳೊಂದಿಗೆ ಹೆಣಗಾಡುವುದು ಸಾಮಾನ್ಯ. ಕಾರ್ಮಿಕರು ಹೋಗಿಬಂದು ಮಾಡುವಾಗ ಈ ರೋಗಗಳು ಪಟ್ಟಣಗಳಿಂದ ಹಳ್ಳಿಗಳಿಗೂ ಹರಡುವುದರಲ್ಲಿ ಯಾವ ಸಂದೇಹವೂ ಇಲ್ಲ. ಕೈಗಾರಿಕಾ ಕ್ಷೇತ್ರಗಳಲ್ಲಿ ಕಾರ್ಮಿಕರು ಕಿಕ್ಕಿರಿದು ಸಾಂದ್ರತೆ ಅಧಿಕವಾಗಿದ್ದ ವೇಳೆಯಲ್ಲಿ ಯುದ್ಧಾರಂಭವಾದಾಗ (1939) ಸ್ಥಿತಿಗತಿಗಳು ವಿಪರೀತಕ್ಕಿಟ್ಟುಕೊಂಡವು. ಉದಾಹರಣೆಗೆ 1941ರ ಜನಗಣತಿಯ ಪ್ರಕಾರ ಕಾನ್ಪುರದ ಜನಸಂಖ್ಯೆ 4,87,000 ಇದ್ದದ್ದು 1944ರ ಅಕ್ಟೋಬರ್‍ನಲ್ಲಿ ಎಂಟು ಲಕ್ಷಕ್ಕೂ ಹೆಚ್ಚಿಗೆ ಇತ್ತು ಎಂದು ಅಂದಾಜಾಗಿತ್ತು. ಇದೇ ರೀತಿಯ ಹೆಚ್ಚಳ ಮುಂಬಯಿ, ಕಲ್ಕತ್ತ ಮತ್ತಿತರ ಕೈಗಾರಿಕಾ ಕೇಂದ್ರಗಳಲ್ಲಿಯೂ ಕಂಡು ಬಂದಿತು. ನೆಲೆಸಲು ಕಾರ್ಮಿಕರಿಗೆ ವಸತಿಗಳಿಲ್ಲದೆ, ಈ ರೀತ ಒಮ್ಮಿಂದೊಮ್ಮೆಗೇ ಜನಸಾಂದ್ರತೆ ಅಧಿಕವಾತಿ, ಇರುವ ವಸತಿಗಳಲ್ಲೇ ಜನ ಕಿಕ್ಕಿರಿದು ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಯಿತು. ಅತ್ಯಗತ್ಯವಾಗಿ ಬೇಕಾದ ವಸತಿಗಳ ಸಂಖ್ಯೆ ಮತ್ತು ಅವುಗಳಲ್ಲಿರಬೇಕಾದ ಕನಿಷ್ಟ ಸೌಲಭ್ಯಗಳನ್ನು ಗೊತ್ತುಪಡಿಸಿ ಅವನ್ನು ಆಚರಣೆಗೆ ತಂದರೆ ಈ ದುಷ್ಪರಿಣಾಮಗಳನ್ನು ನಿವಾರಿಸಬಹುದು. ಈ ರೀತಿಯ ಒಂದು ಸುಧಾರಣೆಗೆ ಮಾಲೀಕರಿಂದಲೂ ಯಾವ ರೀತಿಯ ಪ್ರತಿಭಟನೆಗಳು ಬರಲಾರವು. ಏಕೆಂದರೆ ಕಾರ್ಮಿಕರ ಆರೋಗ್ಯ ವೃದ್ಧಿಯಾದಂತೆ ಉತ್ಪತ್ತಿ ಅಧಿಕವಾಗುತ್ತದೆ.ಭಾರತದ ಕೈಗಾರಿಕೋದ್ಯಮ ಕ್ಷೇತ್ರದ ಆರೋಗ್ಯಪಾಲನೆಗೆ ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದ ಮುಖ್ಯ ಸಮಸ್ಯೆಗಳನ್ನು ಮುಂದೆ ಯಾದಿ ಮಾಡಿದೆ: 1 ಕಾರ್ಮಿಕರಲ್ಲಿ ಅಸ್ವಸ್ಥತೆ ಹಾಗೂ ಸಾವುಗಳು, 2 ಚಿಕಿತ್ಸಾ ಸೌಲಭ್ಯಗಳು, 3 ಗಾಯಗೊಂಡ ಮತ್ತು ರೋಗಕ್ಕೆ ಬಲಿಯಾದ ಕಾರ್ಮಿಕರು ಕೆಲಸಕ್ಕೆ ಪುನಃ ಅರ್ಹತೆ ಪಡೆಯಲು ಶಿಕ್ಷಣ ಸೌಲಭ್ಯಗಳು, 4 ಅಪಘಾತಗಳು, 5 ಕಾರ್ಖಾನೆಗಳ ನೈರ್ಮಲ್ಯ, ಬೆಳಕು ಮತ್ತು ಗಾಳಿ, 6 ಕುಡಿಯುವ ನೀರಿನ ಸರಬರಾಜು, 7 ವ್ಯಕ್ತಿ ನೈರ್ಮಲ್ಯ, 8 ಕೆಲಸಗಾರನ ಉಡುಪು ಮತ್ತು ಕಣ್ಣುಗಳ ರಕ್ಷಣೆ, 9 ಮಲ ಮೂತ್ರ ವಿಸರ್ಜನೆಗೆ ಶೌಚರೂಪಗಳು, 10 ಪೌಷ್ಟಿಕ ಆಹಾರ, 11 ಕುಡಿತ ಮತ್ತು ಮಾದಕೌಷಧ ಸೇವಿಸುವ ದುಶ್ಚಟಗಳು, 12 ಹೆಣ್ಣಾಳುಗಳು ಹಾಗೂ ಅವರ ಶಿಶುಗಳಿಗೆ ವಿಶಿಷ್ಟ ಸೌಲಭ್ಯಗಳು, 13 ಕೆಲಸದ ವೇಳೆ, 14 ವಿಶ್ರಾಂತಿ ಸ್ಥಳ, 15 ವಸತಿಗಳು, 16 ಸಾರಿಗೆ ಸೌಕರ್ಯ, 17 ಕೈಗಾರಿಕೆ ವಲಯಗಳ ನಿರ್ಮಾಣ, 18 ಕಾನೂನುಬಾಹಿರ ಕಾರ್ಖಾನೆಗಳು, 19 ಕಾರ್ಖಾನೆ ಕಾಯಿದೆಗಳ ಆಡಳಿತ, 20 ಕಾರ್ಖಾನೆಗಳ ಪರೀಕ್ಷೆ.
1 ಕಾರ್ಮಿಕರಲ್ಲಿ ಅಸ್ವಸ್ಥತೆ ಹಾಗೂ ಸಾವುಗಳು
[ಬದಲಾಯಿಸಿ]ಇವನ್ನು ಕುರಿತ ಅಂಕಿ ಅಂಶಗಳನ್ನು ಸಂಗ್ರಹಿಸಲು ತಕ್ಕ ವ್ಯವಸ್ಥೆ ಸಾಲದು. ಅನೇಕ ಕಾರ್ಖಾನೆಗಳಲ್ಲಿ ಆಸ್ಪತ್ರೆಯಾಗಲೀ ವೈದ್ಯರಾಗಲೀ ಇಲ್ಲ. ಇರುವ ಕಾರ್ಖಾನೆಗಳಲ್ಲಿ ದೊರೆಯುವ ಅಂಕಿ ಅಂಶಗಳು ಅಪೂರ್ಣ, ಆರೋಗ್ಯ ವಿಮಾ ಯೋಜನೆ ಜಾರಿಗೆ ಬಂದಲ್ಲಿ ಕಾರ್ಮಿಕ ಪರಿಹಾರ ನಡೆಯುವ ಮುನ್ನ ವೈದ್ಯರಿಂದ ಅರ್ಹತಾಪತ್ರವನ್ನು ಪಡೆಯಬೇಕಾಗುವುದರಿಂದ ಅಂಕಿ ಅಂಶಗಳ ದಾಖಲಾತಿ ದೊರೆಯಲು ಅವಕಾಶವಿದೆ. ಭಾರತದಲ್ಲಿ ಆರೋಗ್ಯ ವಿಮಾ ಇನ್ನೂ ಕಡ್ಡಾಯವಾಗಿಲ್ಲ. ಎಲ್ಲ ಕಾರ್ಮಿಕರಿಗೂ ವೈದ್ಯಕೀಯ ಸೌಲಭ್ಯಗಳನ್ನು ಉತ್ತಮ ದರ್ಜೆಯಲ್ಲಿ ಒದಗಿಸಬೇಕೆಂಬ ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡು ಭಾರತ ಸರ್ಕಾರ 1948ರಲ್ಲಿ ಕೆಲಸಗಾರರ ರಾಜ್ಯವಿಮಾ ಕಾಯಿದೆಯನ್ನು ಜಾರಿಗೆ ತಂದಿತು. ಭಾರತದ ಅನೇಕ ರಾಜ್ಯಗಳಲ್ಲಿ ಈಗ ಈ ಯೋಜನೆ ಜಾರಿಯಲ್ಲಿದ್ದರೂ ಯೋಜನೆ ಅತಿ ನಿಧಾನವಾಗಿ ಮುಂದುವರಿಯುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶಗಳಿವು: (ಅ) ಕೆಲಸಗಾರರಿಗೆ ವೈದ್ಯಕೀಯ ಹಾಗೂ ಆರೋಗ್ಯ ರಕ್ಷಣೆಯ ಸೌಲಭ್ಯಗಳನ್ನು ಒದಗಿಸುವುದು; (ಆ) ಸಾಂಕ್ರಾಮಿಕ ಜಾಡ್ಯಗಳನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸುವುದು; (ಇ) ಉದ್ಯೋಗದಿಂದ ಉತ್ಪತ್ತಿಯಾಗುವ ರೋಗಗಳನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವುದು; ಮತ್ತು (ಈ) ಮನೆಗಳಲ್ಲೇ ಹೆರಿಗೆ ಮಾಡಿಸಲು, ತರಬೇಕಾದ ದಾದಿಯರ ಸೇವೆಯನ್ನೊದಗಿಸುವುದು ಹಾಗೂ ಕುಟುಂಬಯೋಜನೆ ಆಚರಣೆಗೆ ತರಲು ಸೌಲಭ್ಯಗಳನ್ನು ಕಲ್ಪಿಸುವುದು.2 ಚಿಕಿತ್ಸಾಸೌಲಭ್ಯಗಳು: ಕಾರ್ಖಾನೆಗಳ ಕಾಯಿದೆ ಪ್ರಕಾರ, ಕೈಗಾರಿಕೆಯ ಆಡಳಿತವನ್ನು ವಹಿಸಿರುವವರು ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆಯನ್ನು ಒದಗಿಸಲೇಬೇಕೆಂಬ ಒತ್ತಾಯವಿದೆ. ಇದನ್ನು ಎಲ್ಲ ಕಾರ್ಖಾನೆಗಳಲ್ಲೂ ಯಶಸ್ವಿಯಾಗಿ ಒದಗಿಸಲಾಗುತ್ತಿದೆ ಎಂಬ ಭರವಸೆ ವರದಿಗಳಿಂದ ತಿಳಿದು ಬಂದಿದೆ. ಆದರೆ ಆಡಳಿತಗಾರರೇ ನಡೆಸಿಕೊಂಡು ಬರುತ್ತಿರುವ ಆಸ್ಪತ್ರೆಗಳಲ್ಲಿ ಅನೇಕು ಉನ್ನತಮಟ್ಟದಲ್ಲಿಲ್ಲವೆಂದು ಹೇಳಬಹುದು. ಔಷಧ ಸಲಕರಣೆಗಳ ಕೊರತೆ ಇದ್ದೇ ಇದೆ. ಆದರೆ ಇತ್ತೀಚೆಗೆ ಅನೇಕ ಕಾರ್ಖಾನೆಗಳಲ್ಲಿ ಒದಗಿಸುತ್ತಿರುವ ಸೌಲಭ್ಯಗಳು ಬಹಳಮಟ್ಟಿಗೆ ಉತ್ತಮಗೊಂಡಿವೆ. ಈ ಕೆಲಸಗಾರರಿಗೆ ಕಾರ್ಖಾನೆಯ ಹೊರಗೆ ಅಂದರೆ ಸರ್ಕಾರದಿಂದ, ಸ್ಥಳೀಯ ಸಂಸ್ಥೆಗಳಿಂದ ಮತ್ತು ಖಾಸಿ ವೈದ್ಯರಿಂದ ದೊರೆಯುತ್ತಿರುವ ವೈದ್ಯಕೀಯ ಹಾಗೂ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಪರಿಶೀಲಿಸಿದಲ್ಲಿ ಅವು ಕೇವಲ ಅಲ್ಪ ಎಂಬುದರ್ಥವಾಗುತ್ತದೆ. ಕೆಲಸಗಾರರ ರಾಜ್ಯವಿಮಾ ಯೋಜನೆ ಜಾರಿಯಲ್ಲಿದ್ದರೂ ಯೋಜನೆ ಎಲ್ಲ ರಾಜ್ಯಗಳಲ್ಲೂ ಇಲ್ಲ. ಇರುವ ರಾಜ್ಯಗಳಲ್ಲೂ ಎಲ್ಲ ಕೈಗಾರಿಕಾ ಕ್ಷೇತ್ರಗಳಿಗೂ ಅದು ಅನ್ವಯಿಸುವುದಿಲ್ಲ. ಅನ್ವಯಿಸುವ ಸ್ಥಳಗಳಲ್ಲೂ ಅನೇಕ ಕುಂದು ಕೊರತೆಗಳು, ಸಮಸ್ಯೆಗಳು ಇದ್ದೇ ಇವೆ. ಅತಿ ತ್ವರಿತದಿಂದ ಅನೇಕ ಕೈಗಾರಿಕೆಗಳು ಏಕಾಏಕಿ ಉದ್ಭವಿಸಿ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿವೆ. ಅನೇಕ ಕೆಲಸಗಾರರು ಬಡತನದಿಂದಾಗಿ ವೈದ್ಯಕೀಯ ನೆರವನ್ನು ಪಡೆಯಲು ಖಾಸಗಿ ವೈದ್ಯರ ಹತ್ತಿರ ಹೋಗಲು ಶಕ್ತರಾಗಿಲ್ಲ. ಸರ್ಕಾರಿ ಅಥವಾ ಇತರ ಪುಕ್ಕಟೆ ಚಿಕಿತ್ಸೆ ದೊರಕುವ ಸಂಸ್ಥೆಗಳಿಗೆ ಹೋಗಬೇಕು.3 ಗಾಯಗೊಂಡ ಮತ್ತು ರೋಗಕ್ಕೆ ಬಲಿಯಾದ ಕಾರ್ಮಿಕರು ಕೆಲಸಕ್ಕೆ ಪುನಃ ಅರ್ಹತೆ ಪಡೆಯಲು ಶಿಕ್ಷಣ ಸೌಲಭ್ಯಗಳು: ವೈದ್ಯಕೀಯ ಚಿಕಿತ್ಸೆಗೇ ಸೇರಿದ ಈ ಮುಖ್ಯ ವಿಭಾಗದಲ್ಲಿ ಪ್ರಗತಿ ಬಹಳ ಕುಂಠಿತವಾಗಿದೆ. ಕೆಲಸಗಾರರ ಒಂದು ಅಪಘಾತದಿಂದ ಅಂಗವಿಕಲನಾದಲ್ಲಿ ಅಥವಾ ರೋಗದಿಂದೆದ್ದು ಪುನಃ ಮೊದಲಿನ ಕೆಲಸಕ್ಕೇ ಹೋಗಲು ಸಾಧ್ಯವಿಲ್ಲದಿದ್ದಲ್ಲಿ, ಅಂಥವನಿಗೆ ಯಾವ ಕೆಲಸ ಮಾಡಲು ಸಾಧ್ಯವೋ ಆ ಕೆಲಸಕ್ಕೆ ಶಿಕ್ಷಣ ಕೊಟ್ಟು ಅರ್ಹತೆ ದೊರಕಿಸಿ ಕೊಡಬೇಕಾದದ್ದು ಆಡಳಿತದ ಹೊಣೆ. ಇಲ್ಲದಿದ್ದಲ್ಲಿ ಕೆಲಸಗಾರ ತನ್ನ ಕೆಲಸವನ್ನು ಕಳೆದುಕೊಂಡು ಸಂಸಾರಕ್ಕೆ ಹೊರೆಯಾಗಿ ಇಡೀ ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ಭಾರವಾಗುತ್ತಾನೆ. ಇದನ್ನು ತಪ್ಪಿಸಲು ಶಿಕ್ಷಣ, ತರಬೇತಿ, ಚಿಕಿತ್ಸೆ ಇತ್ಯಾದಿಯನ್ನು ರೂಪಿಸಿಕೊಡಬೇಕು. ಈಗ ಸದ್ಯಕ್ಕೆ ಈ ರೀತಿಯ ಸೌಲಭ್ಯಗಳನ್ನೊದಗಿಸುವ ಸಂಸ್ಥೆಗಳು ಬಹಳ ವಿರಳ. 4 ಅಪಘಾತಗಳು: ಅಪಘಾತಗಳಿಗೆ ಅನ್ವಯಿಸುವ ಷರತ್ತುಗಳು ರಾಜ್ಯ ಸರ್ಕಾರಗಳು ಮಂಡಿಸಿರುವ ಕಾರ್ಖಾನೆಗಳ ಕಾಯಿದೆಗಳಲ್ಲಿ ಅಡಕವಾಗಿದ್ದು, ಅವುಗಳಿಗೆ ಸಾಕಷ್ಟು ಪ್ರಾಮುಖ್ಯ ಕೊಡಲಾಗಿದೆ ಎಂದು ಹೇಳಬಹುದು. ಅನೇಕ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಈ ಷರತ್ತುಗಳನ್ನು ಪಾಲಿಸುತ್ತಿದ್ದಾರೆಂದೂ ಖಚಿತವಾಗಿದೆ. ಕೆಲವು ಸಣ್ಣಪುಟ್ಟ ಕಾರ್ಖಾನೆಗಳು ತಮ್ಮಲ್ಲಿ ಸಂಭವಿಸುವ ಅಪಘಾತಗಳನ್ನು ವರದಿ ಮಾಡುತ್ತಿಲ್ಲ. ಈ ಅಪಘಾತಗಳನ್ನು ಮೂರು ವಿಧವಾಗಿ ವಿಂಗಡಿಸಿದೆ: ಪ್ರಾಣಾಪಾಯದವು. ಗಂಭೀರವಾದವು ಮತ್ತು ಸಣ್ಣಪುಟ್ಟಗಾಯಗಳು. ಕರ್ನಾಟಕದ ಕಾರ್ಖಾನೆಗಳಲ್ಲಿ 1961-66 ಅವಧಿಯಲ್ಲಿ ಸಂಭವಿಸಿದ ಪ್ರಾಣಾಪಾಯ ಹಾಗೂ ಪ್ರಾಣಾಪಾಯವಿಲ್ಲದ ಅಪಘಾತಗಳ ಅಂಕಿ ಅಂಶಗಳು ಈ ರೀತಿ ಅಧಿಕೃತವಾಗಿ ವರದಿಯಾಗಿವೆ.
ಅಪಘಾತ 1961 1963 1964 1964 1965 1966
ಪ್ರಾಣಾಪಾಯವಾದವು(ಸಂಖ್ಯೆ) 20 28 16 22 23 21
1,000 ಕೆಲಸಗಾರರಿಗೆ ಪ್ರಮಾಣ 1 2 1 1 1 1
ಪ್ರಾಣಾಪಾಯವಿಲ್ಲದವು (ಸಂಖ್ಯೆ) 3,302 4,967 7,305 7,596 8,326 8,695
1,000 ಕೆಲಸಗಾರರಿಗೆ ಪ್ರಮಾಣ 19 26.3 35.5 33 417 45.6
ಒಟ್ಟು ಸಂಖ್ಯೆ 3.322 4,995 7,321 7,618 8,349 8,716
1,000 ಕೆಲಸಗಾರರಿಗೆ ಪ್ರಮಾಣ 19.1 26.5 35.6 33.1 41.8 49.7
ಔಷಧ ಶಾಲೆಗಳು ಮತ್ತು ಆಸ್ಪತ್ರೆ
[ಬದಲಾಯಿಸಿ]ಔಷಧ ಶಾಲೆಗಳು ಮತ್ತು ಆಸ್ಪತ್ರೆಗಳನ್ನುಳ್ಳ ಕಾರ್ಖಾನೆಗಳು ಚಿಕಿತ್ಸೆಯನ್ನು ಸ್ಥಳದಲ್ಲೇ ಕೊಡಲು ಅವಕಾಶವಿದೆ. ಆದರೆ ಈ ಸೌಲಭ್ಯವಿಲ್ಲದ ಕಾರ್ಖಾನೆಗಳು ಸಾರ್ವಜನಿಕ ಆಸ್ಪತ್ರೆಗಳನ್ನು ಅವಲಂಬಿಸಬೇಕು. ಅನೇಕ ಕಾರ್ಖಾನೆಗಳಲ್ಲಿ ರೋಗಿಗಳನ್ನು ಹಾಗೂ ಗಾಯವಾದವರನ್ನು ತಕ್ಕ ಚಿಕಿತ್ಸೆಗೆ ಕಾಲವಿಳಂಬವಾಗದಂತೆ ತತ್‍ಕ್ಷಣ ಸಾಗಿಸಲು ಸೌಕರ್ಯವಿಲ್ಲ. ಅನೇಕ ಕಡೆಗಳಲ್ಲಿ ರೋಗಿಗಳೇ ಆಸ್ಪತ್ರೆಗೆ ಹೋಗಲು ವ್ಯವಸ್ಥೆ ಮಾಡಿಕೊಳ್ಳಬೇಕು. ಅಪಘಾತವಾದವರಿಗೆ ಪರಿಹಾರ ಕೊಡುವುದು ಕಾರ್ಖಾನೆಯ ಆಡಳಿತ ಅಥವಾ ಮಾಲಿಕರ ಜವಾಬ್ದಾರಿ. ಇದರಿಂದ ಅನೇಕ ಅಪಘಾತಗಳು ವರದಿಯೇ ಆಗುವುದಿಲ್ಲ. ಆದರೆ ಇತ್ತೀಚೆಗೆ ವೃತ್ತಿಸಂಘಗಳು ಸ್ಥಾಪಿತವಾಗಿ ಪ್ರಾಮುಖ್ಯಕ್ಕೆ ಬಂದಂತೆ ಕೆಲಸಗಾರರು ತಮ್ಮ ಹಕ್ಕು ಬಾಧ್ಯತೆಗಳನ್ನು ಹೆಚ್ಚು ಹೆಚ್ಚಾಗಿ ಅರಿತು ಸುವ್ಯವಸ್ಥಿತ ರೀತಿಯಲ್ಲಿ ಸಂಘಟನೆಗೊಳ್ಳುತ್ತಿದ್ದಾರೆ. ಕೆಲವು ದೊಡ್ಡ ಕಾರ್ಖಾನೆಗಳು ಪರಿಹಾರ ಕೊಡಲು ವಿಮಾ ಮಾಡಿರುವುದರಿಂದ ಪರಿಹಾರ ಕೊಡಲು ಅದಚಣೆಗಳಿರುವುದಿಲ್ಲ. ಅನೇಕ ವೇಳೆ ಕೆಲಸಗಾರರಿಗೂ ಆಡಳಿತಕ್ಕೂ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಇವು ಹೆಚ್ಚುತ್ತಿವೆ. ಈ ಸಂದರ್ಭಗಳಲ್ಲಿ ಎರಡು ಪಕ್ಷದವರೂ ನಿಯಮಿತವಾದ ನ್ಯಾಯಾಲಯಗಳಲ್ಲಿ ತಮ್ಮ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಂಥ ನ್ಯಾಯಾಲಯಗಳಲ್ಲಿ ಬಹುಮಟ್ಟಿಗೆ ಕೆಲಸಗಾರರ ಅಭಿಪ್ರಾಯಗಳಿಗೇ ಮನ್ನಣೆ ಇರುವುದು ಕಂಡುಬರುತ್ತದೆ. ಕಾರ್ಖಾನೆಯ ಆಡಳಿತ ನೊಂದವನಿಗೆ ಕೊಡುವ ಪರಿಹಾರ ತೀರ ಕಡಿಮೆ ಎಂಬ ದೂರು ಇದ್ದೇ ಇದೆ. ಪರಿಹಾರ ಕೊಡಲು ಜರುಗಬೇಕಾದ ಕಾನೂನು ಕ್ರಮ ಇನ್ನೂ ಸರಳವಾಗಬೇಕೆಂಬುದು ಎಲ್ಲರ ಆಶೆ. 5 ಕಾರ್ಖಾನೆಗಳ ನೈರ್ಮಲ್ಯ, ಬೆಳಕು ಮತ್ತು ಗಾಳಿ: ಕಾನೂನು ಪ್ರಕಾರ ಕಾರ್ಮಿಕರ ಆರೋಗ್ಯ ನೆಮ್ಮದಿ ಹಾಗೂ ಹಿತರಕ್ಷಣೆ ಸಾಧಿಸಲು ಕಾರ್ಖಾನೆಗಳ ಕಾಯಿದೆಯಲ್ಲಿ ಸಾಕಷ್ಟು ಅವಕಾಶವಿದೆ. ಎಲ್ಲ ಕಾರ್ಖಾನೆಗಳೂ ನೈರ್ಮಲ್ಯವನ್ನು ಸದಾ ಕಾಪಾಡಿಕೊಳ್ಳಬೇಕು. ಕಾರ್ಖಾನೆಯಿಂದ ಹೊರಬೀಳುವ ವಿಸರ್ಜಕಗಳು ಕೆಲಸ ಮಾಡುವವರ ಮಲಮೂತ್ರ ಹಾಗೂ ಕಸಗಳು ನಿಯಮಿತವಾದಂತೆ ಯಾರಿಗೂ ಅಪಾಯವಿಲ್ಲದಂತೆ ವಿಲೆವಾರಿಯಾಗಬೇಕು. ಒದಗಿಸಲೇಬೇಕಾದ ಕನಿಷ್ಠ ಸೌಲಭ್ಯಗಳ ವಿವರಣೆ ಇದ್ದರೂ ಇವನ್ನು ಆಚರಣೆಯಲ್ಲಿ ಸದಾ ಇಡಲು ತಕ್ಕ ವ್ಯವಸ್ಥೆ ತ್ವರಿತರೀತಿಯಿಂದ ಸಾಗಬೇಕು. ಕಾರ್ಖಾನೆಗಳಲ್ಲಿ ಕೆಲಸಗಾರರ ಹಿತದೃಷ್ಟಿಯಿಂದ ಸಾಕಷ್ಟು ಗಾಳಿ ಸಂಚಾರವಿರಲು ತಕ್ಕ ಷರತ್ತುಗಳಿವೆ. ಈ ಷರತ್ತುಗಳನ್ನು ಎಲ್ಲ ರಾಜ್ಯ ಸರ್ಕಾರಗಳೂ ಅನುಮೋದಿಸಿ ರೂಢಿಗೆ ತಂದಿವೆ.6 ಕುಡಿಯುವ ನೀರಿನ ಸರಬರಾಜು: ಕೆಲಸಗಾರರಿಗೆ ದಾಹವನ್ನು ಹಿಂಗಿಸಲು ಸಾಕಷ್ಟು ಕುಡಿಯುವ ನೀರನ್ನು ಕೆಲಸ ಮಾಡುವ ಕಡೆ ಸದಾ ದೊರೆಯುವಂತೆ ಏರ್ಪಡಿಸಬೇಕಾದದ್ದು ಪ್ರತಿ ಕಾರ್ಖಾನೆಯ ಆಡಳಿತವರ್ಗದ ಗುರುತರ ಜವಾಬ್ದಾರಿ.7 ವ್ಯಕ್ತಿ ನೈರ್ಮಲ್ಯ: ಕೆಲಸ ಮುಗಿದ ಅನಂತರ ಕಾರ್ಮಿಕರು ತಮ್ಮ ಮನೆಗೆ ಹೋಗುವ ಮೊದಲು, ಸ್ನಾನ ಮಾಡಿ ಹೋಗಲು ತಕ್ಕ ಏರ್ಪಾಡಿರಬೇಕು. ಈ ಸೌಲಭ್ಯ ಭೂಗರ್ಭಗಣಿಗಳಲ್ಲಿ ಹಾಗೂ ಇತರ ಗಣಿಗಳಲ್ಲಿ ಕೆಲಸ ಮಾಡುವವಿಗೆ ಅತ್ಯವಶ್ಯ.8 ಕೆಲಸಗಾರನ ಉಡುಪು ಮತ್ತು ಕಣ್ಣುಗಳ ರಕ್ಷಣೆ: ಕೆಲವು ಕೆಲಸಗಳಲ್ಲಿ ವಿಶಿಷ್ಟರೀತಿಯ ಉಡುಪು ಅವಶ್ಯಕ. ಆಡಳಿತ ವರ್ಗದವರೇ ಈ ಉಡುಪನ್ನು ಕೆಲಸಗಾರರಿಗೆ ಒದಗಿಸಬೇಕು. ಇದನ್ನು ಕೊಳ್ಳಲು ಕೆಲಸಗಾರರಿಗೆ ಬರುವ ವೇತನದಲ್ಲಿ ಸಾಧ್ಯವಾಗಲಾರದು. ತಾನು ಹಾಕಿರುವ ಉಡುಪಿನಲ್ಲೇ ಕೆಲಸಮಾಡುವುದರಿಂದ ಬಟ್ಟೆ ಮಲಿನವಾಗುವುದೊಂದೇ ಅಲ್ಲದೆ ರಾಸಾಯನಿಕ ಮುಂತಾದ ವಿಷಪದಾರ್ಥಗಳ ಸಂಪರ್ಕವಾದಲ್ಲಿ ಕೆಲಸಗಾರನ ಆರೋಗ್ಯಕ್ಕೆ ಧಕ್ಕೆ ತಗಲುತ್ತದೆ. ಇದನ್ನು ತಪ್ಪಿಸಲು ಮೂಂಜಾಗ್ರತೆ ಕ್ರಮ ಅಗತ್ಯ. ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಕೆಲಸಗಾರ ಕನ್ನಡಕವನ್ನು ಧರಿಸುವುದು ಆವಶ್ಯಕ. ಆಡಳಿತರ್ವದವರು ಕನ್ನಡಕವನ್ನು ಒದಗಿಸಿದ್ದರೂ ಅನೇಕ ಕಾರ್ಖಾನೆಗಳಲ್ಲಿ ಕೆಲಸಗಾರರು ಅವನ್ನು ಧರಿಸಿರುವುದಿಲ್ಲ. ಅದರಲ್ಲೂ ಕೆಲವು ಉದ್ಯೋಗಗಳಲ್ಲಿ ಕಣ್ಣಿಗೆ ಹೊರವಸ್ತುಗಳು ಬೀಳುವುದು ಸಾಮಾನ್ಯ. ಹೀಗೆ ಬಿದ್ದರೆ ಅದರ ಪರಿಣಾಮವಾಗಿ ಕಣ್ಣುಗಳೇ ಹೋಗುವುದು ಅಸಂಭವವಲ್ಲ. ಕಣ್ಣುಗಳನ್ನು ಕೆಲಸಗಾರ ಕಳೆದುಕೊಂಡರೆ ಅದಕ್ಕೆ ಮಾಲಿಕರು ಭಾರೀ ಪರಿಹಾರವನ್ನು ಕೊಡಬೇಕಾಗುವುದು.
ಪೌಷ್ಟಿಕ ಆಹಾರ:
[ಬದಲಾಯಿಸಿ]9 ಮಲ ಮೂತ್ರ ವಿಸರ್ಜನೆಗೆ ಶೌಚಕೂಪಗಳ ಸೌಲಭ್ಯ: ಕಾರ್ಖಾನೆಗಳ ಕಾಯಿದೆ ಪ್ರಕಾರ ಪ್ರತಿ 50 ಕೆಲಸಗಾರರಿಗೆ ಒಂದು ಶೌಚಕೂಪವಿರಬೇಕೆಂಬ ಕಡ್ಡಾಯವಿದೆ. ಇಂಥ ಕಕ್ಕಸುಗಳನ್ನು ಚೊಕ್ಕಟವಾಗಿಟ್ಟ ಹೊರತು ಅವುಗಳಿಂದ ಉಪಯೋಗವಿಲ್ಲ. ಹಾಗಿಲ್ಲದಿದ್ದರೆ ಅವುಗಳ ಸುತ್ತಲೂ ಹೇಸಿಗೆಯುಂಟಾಗಿ ಕಕ್ಕಸುಗಳಿಲ್ಲದಿರುವುದು ಮೇಲೆನಿಸುತ್ತದೆ.10 ಪೌಷ್ಟಿಕ ಆಹಾರ: ಕಾಫಿ, ಟೀ ಇತರ ತೋಟಗಳಲ್ಲಿ ಹಾಗೂ ಗಣಿಗಳಲ್ಲಿ ಕೆಲಸ ಮಾಡುವವರ ಆಹಾರ ಬಹಳ ಕೆಳಮಟ್ಟದ್ದೆಂದು ಅಧ್ಯಯನಗಳಿಂದ ತಿಳಿದಿದೆ. ಹೊಟ್ಟೆ ತುಂಬುವಷ್ಟು ಆಹಾರ ಇಲ್ಲದಿರುವುದೊಂದೇ ಅಲ್ಲದೆ ತಿನ್ನುವ ಆಹಾರದಲ್ಲಿ ಪೌಷ್ಟಿಕ ಅಂಶವೂ ಬಹಳ ಕಡಿಮೆ. ಆಹಾರದಲ್ಲಿ ಪಿಷ್ಟ, ಸಸಾರಜನಕ ಹಾಗೂ ಜಿಡ್ಡು ಸೂಕ್ತ ಪ್ರಮಾಣದಲ್ಲಿಲ್ಲ. ಪಿಷ್ಟವೇ ಅಧಿಕ. ಪ್ರತಿ ಕಾಖಾನೆಯಲ್ಲೂ ಎಲ್ಲ ಕೆಲಸಗಾರರಿಗೂ ಪೌಷ್ಟಿಕ ಆಹಾರ ರಿಯಾಯಿತಿ ದರದಲ್ಲಿ ದೊರೆಯುವ ವ್ಯವಸ್ಥೆ ಆಗಬೇಕು. ಆಹಾರ ತೆಗೆದುಕೊಳ್ಳಲು ಸೂಕ್ತಸ್ಥಳ, ಕೂಡಲು ತಕ್ಕ ಕುರ್ಚಿ, ಮೇಜು, ಶುಭ್ರವಾದ ನೀರು, ಪಾತ್ರೆಪಡಿಗಗಳ ಸೌಲಭ್ಯವಿರಬೇಕು. ನೈರ್ಮಲ್ಯದ ಕಡೆ ಹೆಚ್ಚು ಗಮನವಿರಬೇಕು. ಈಗಾಗಲೇ ಕ್ಯಾಂಟೀನ್ ವ್ಯವಸ್ಥೆ ಅನೇಕ ಕಾರ್ಖಾನೆಗಳಲ್ಲಿವೆ. ಕೆಲಸಗಾರರಿಗೆ ತಮಗೆ ದಿನವಹಿ ಬೇಕಾಗುವ ಸಾಮಾನುಗಳನ್ನು ಕೊಳ್ಳಲು ಸಹಕಾರ ಸಂಘ ಸ್ಥಾಪನೆಯಾಗಬೇಕು.11 ಕುಡಿತ ಮತ್ತು ಮಾದಕೌಷಧ ಸೇವಿಸುವ ದುಶ್ಚಟಗಳು: ಇವು ಕೆಲಸಗಾರರಲ್ಲಿ ಎಷ್ಟರಮಟ್ಟಿಗೆ ಅಂಟಿವೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ.. ಕೆಲವು ಕಾನೂನು ಜಾರಿ ಮಾಡಿ ಇವನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದೆಂಬುದು ಹೇಳಲಾಗುವುದಿಲ್ಲ.12 ಹೆಣ್ಣಾಳುಗಳು ಹಾಗೂ ಅವರ ಶಿಶುಗಳಿಗೆ ವಿಶಿಷ್ಟ ಸೌಲಭ್ಯಗಳು: ಹೆಣ್ಣಾಳುಗಳು ಕೆಲಸ ಮಾಡುವ ಕೈಗಾರಿಕೆಗಳಲ್ಲಿ ಅವರಿಗೆ ವಿಶಿಷ್ಟ ಸೌಲಭ್ಯಗಳಿರಬೇಕೆಂಬುದರಲ್ಲಿ ಭಿನ್ನಮತವಿಲ್ಲ. ಆದರೆ ಈ ಸೌಲಭ್ಯಗಳನ್ನು ಆಡಳಿತ ಒದಗಿಸದಿದ್ದರೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇವರ ಆರೋಗ್ಯ ರಕ್ಷಣೆಗೆ, ರೋಗ ಚಿಕಿತ್ಸೆಗೆ ಸಾಕಷ್ಟು ಸ್ತ್ರೀವೈದ್ಯರು, ತರಬೇತಾದ ದಾದಿಯರು ಇತ್ಯಾದಿ ಭಾರತದಲ್ಲಿಲ್ಲ. ಸ್ತ್ರೀಕಾರ್ಮಿಕರು ಕೆಲಸ ಮಾಡುವಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಬಾಲವಾಡಿಗಳೂ ಶಿಶುಪೋಷಣ ಮಂದಿರಗಳೂ ಇರಬೇಕು. ಐವತ್ತು ಮಂದಿ ಮಹಿಳೆಯರಿಗಿಂತ ಹೆಚ್ಚು ಮಂದಿ ಕೆಲಸ ಮಾಡುವಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಪ್ರತ್ಯೇಕ ಸ್ಥಳ ಮತು ಸೌಲಭ್ಯಗಳನ್ನು ಒದಗಿಸಲು ಒತ್ತಾಯ ಮಾಡುವುದು ಅಥವಾ ಬಿಡುವ ಹಕ್ಕನ್ನು ರಾಜ್ಯಸರ್ಕಾರಕ್ಕೆ ಬಿಟ್ಟಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ಹಾಗೂ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಮತ್ತು ಈ ಸೌಲಭ್ಯಗಳಿವೆಯಷ್ಟೆ.. ಇದನ್ನು ಕಡ್ಡಾಯ ಮಾಡುವುದೊಂದೇ ಪರಿಹರ. ಬಾಲವಾಡಿ ಹಾಗೂ ಶಿಶುಪೋಷಣಮಂದಿರಗಳು ಹೇಗಿರಬೇಕು ಮತ್ತು ಅವುಗಳಲ್ಲಿರಬೇಕಾದ ಕನಿಷ್ಠ ಸೌಲಭ್ಯಗಳೇನು ಇತ್ಯಾದಿಯನ್ನು ಕಾಯಿದೆಯಲ್ಲಿ ನಮೂದಿಸಲಾಗಿದೆ. ಈ ಸ್ಥಳಗಳಲ್ಲಿ ಮಕ್ಕಳಿಗೆ ಕುಡಿಯಲು ಹಾಲನ್ನು ಪುಕ್ಕಟೆಯಾಗಿ ಒದಗಿಸಬೇಕು. ಗರ್ಭಿಣಿಯರು, ಹೆರಿಗೆ ಕಾಲದಲ್ಲಿ ಮತ್ತು ಅನಂತರ ಕೆಲವು ದಿನ ಕೆಲಸದಲ್ಲಿರಲಾಗುವುದಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ರಜಾ ಕಾಲ (ಹೆರಿಗೆಯ ನಿರೀಕ್ಷಿತ ದಿನಕ್ಕೆ ನಾಲ್ಕಾರುವಾರ ಮುಂಚಿತವಾಗಿ ಹಾಗೂ ಆದ ಅನಂತರ ನಾಲ್ಕಾರು ವಾರ) ಮತ್ತು ಈ ಕಾಲದಲ್ಲಿ ವೇತನ ಇತ್ಯಾದಿ ಒದಗಿಸಲು ಹೆರಿಗೆ ಸಹಾಯಾರ್ಥ ನಿಧಿ ಶಾಸನ ಅವಕಾಶ ಕಲ್ಪಿಸಿ ಕಡ್ಡಾಯ ಮಾಡುತ್ತದೆ. ಈ ಶಾಸನ ಎಲ್ಲೆಡೆಗಳಲ್ಲೂ ಜಾರಿಯಲ್ಲಿದೆ. ಇದರಿಂದ ತಾಯಿ ಮತ್ತು ಶಿಶುವಿನ ಆರೋಗ್ಯ ರಕ್ಷಣೆ ಸುಧಾರಿಸುವುದರಲ್ಲಿ ಸಂಶಯವಿಲ್ಲ. ಈ ಶಾಸನದಿಂದ ಕೆಲಸದಲ್ಲಿ ನಿರತರಾಗಿರುವ ಹೆಣ್ಣಾಳುಗಳ ಸಂಖ್ಯೆ ಕಡಿಮೆಯಾಗುವುದಿಲ್ಲ. ಗರ್ಭಿಣಿ ಎಂದು ದೃಢಪಡಿಸುವ ಪ್ರಮಾಣಪತ್ರವನ್ನು ವೈದ್ಯರಿಂದ ಸಾದರಪಡಿಸಬೇಕು. ಇವರನ್ನು ಪರೀಕ್ಷೆ ಮಾಡಿ ಪ್ರಮಾಣಪತ್ರಗಳನ್ನು ಕೊಡಲು ಮಹಿಳಾ ವೈದ್ಯರ ಕೊರತೆ ಇದೇ ಇದೆ. ಮಹಿಳೆಯರು ಪುರುಷವೈದ್ಯರ ಬಳಿ ಪರೀಕ್ಷೆ ನಡೆಸಿಕೊಳ್ಳಲು ಹಿಂಜರಿಯುತ್ತಾರೆ.
13 ಕೆಲಸದ ವೇಳೆ
[ಬದಲಾಯಿಸಿ]ಕೆಲಸಗಾರನ ಆರೋಗ್ಯ ಅವನ ದೈನಂದಿನ ಕೆಲಸದ ವ್ಯಾಪ್ತಿ, ವಿಶ್ರಾಂತಿ ಅವಧಿ, ಕೆಲಸದ ಸ್ವರೂಪ ಇತ್ಯಾದಿಗಳನ್ನು ಅವಲಂಬಿಸಿದೆ. ಮಾಲೀಕನಿಗೆ ಸಾಕಷ್ಟು ಲಾಭ ಆಗಬೇಕಾದರೆ ಕೆಲಸಗಾರರು ಹೆಚ್ಚು ವೇಳೆ ಕೆಲಸ ಮಾಡಿ ಉತ್ಪತ್ತಿ ಅಧಿಕ ಮಾಡಬೇಕೆಂಬುದನ್ನು ಒಪ್ಪತಕ್ಕದ್ದಾದರೂ ಕೆಲಸಗಾರನೂ ಒಬ್ಬ ಮನುಷ್ಯ, ಅವನ ಆರೋಗ್ಯ ಕೆಡಬಾರದೆಂಬ ಮುಖ್ಯ ಉದ್ದೇಶ ಮುಂದಿರಬೇಕು. ಹೆಚ್ಚು ವೇಳೆ ಕೆಲಸ ಮಾಡುವುದರಿಂದ ಕೆಲಸಗಾರ ಅತಿ ಶೀಘ್ರದಲ್ಲಿ ಆಯಾಸ ಹೊಂದಿ ಕ್ರಮೇಣ ಬಲಹೀನವಾಗಿ ರೋಗಗ್ರಸ್ತನಾಗುತ್ತಾನೆ. ಆಯಾಸ ಹೊಂದಿದವ ಅಪಘಾತಗಳಿಗೆ ಸಿಕ್ಕಿಕೊಳ್ಳುವ ಸಂಭವವೂ ಹೆಚ್ಚು. ಇದರಿಂದ ಉತ್ಪತ್ತಿ ಕಡಿಮೆ ಆಗುವುದು. ವರ್ಷದುದ್ದಕ್ಕೂ ಕೆಲಸ ನಡೆಯುವ ಸಾಮಾನ್ಯ ಕಾರ್ಖಾನೆಗಳಲ್ಲಿ ವಾರಕ್ಕೆ ದುಡಿಮೆ ಐವತ್ತನಾಲ್ಕು ಗಂಟೆಗಳಿಗೆ ಮೀರಿರಬಾರದೆಂದೂ ನಿಯತಕಾಲಿಕ ಕಾರ್ಖಾನೆಗಳಲ್ಲಿ ವಾರಕ್ಕೆ ಅರುವತ್ತು ಗಂಟೆಗಳ ದುಡಿಮೆಗೆ ಮೀರಿರಬಾರದೆಂದೂ ಕಾರ್ಖಾನೆ ಕಾಯಿದೆಯಲ್ಲಿ ನಿಯಮ ಉಂಟು. ಇತ್ತೀಚೆಗೆ ತಜ್ಞರು ಇದನ್ನು ಪುನರ್ವಿಮರ್ಶೆ ಮಾಡಿ ದುಡಿಮೆ ವಾರಕ್ಕೆ ನಲವತ್ತೆಂಟು ಗಂಟೆಗಳಿಗೆ ಮೀರಿರಬಾರದೆಂದು ನಿಶ್ಚಯಿಸಿದ್ದಾರೆ. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಹಾಗೂ ಫ್ರಾನ್ಸ್ ದೇಶದಲ್ಲಿ ವಾರಕ್ಕೆ ನಲವತ್ತು ಗಂಟೆಗಳಷ್ಟೇ ಕೆಲಸ. ಇಂಗ್ಲೆಂಡಿನಲ್ಲಿ ವಾರಕ್ಕೆ ನಲವತ್ತೈದು ಗಂಟೆಗಳು. ಇವೆಲ್ಲವನ್ನೂ ಪರಿಶೀಲಿಸಿದರೆ ಭಾರತದಲ್ಲಿ ಕೆಲಸಗಾರನ ದೇಹದಾಢ್ರ್ಯ ಅಷ್ಟಿಲ್ಲ, ತಿನ್ನಲು ಸಾಕಷ್ಟಿಲ್ಲ ಆರೋಗ್ಯನಿಯಮಗಳಿಗೆ ಅನುಗುಣವಾದ, ವಸತಿ, ಗಾಳಿ ಬೆಳಕು ಇತ್ಯಾದಿಯಂತೂ ಇಲ್ಲವೇ ಇಲ್ಲ. ಹೀಗಿರುವಾಗ ವಾರಕ್ಕೆ ಐವತ್ತನಾಲ್ಕು ಗಂಟೆಗಳ ಕೆಲಸ ಭಾರತದ ಕಾರ್ಮಿಕನಿಗೆ ಆರೋಗ್ಯಪಾಲನೆಯ ದೃಷ್ಟಿಯಿಂದ ಅಧಿಕವೆಮದು ಹೇಳಬಹುದು. ಇದನ್ನು ಗಣನೆಗೆ ತೆಗೆದುಕೊಂಡು ತಜ್ಞರು ವಾರಕ್ಕೆ ನಲವತ್ತೈದು ಗಂಟೆಗಳ ಕೆಲಸವನ್ನು ಶಿಫಾರಸು ಮಾಡಿದ್ದಾರೆ.14 ವಿಶ್ರಾಂತಿ ಸ್ಥಳ: ಅನೇಕ ಕಾರ್ಖಾನೆಗಳಲ್ಲಿ ಕೆಲಸಗಾರರು ವಿಶ್ರಾಂತಿ ಪಡೆಯಲವಕಾಶವಾಗುವಂತೆ ಪ್ರತ್ಯೇಕ ವಿಶ್ರಾಂತಿಗೃಹಗಳನ್ನು ಏರ್ಪಡಿಸಲಾಗಿದೆ. ಆದರೆ ಇಂಥ ಬಹುತೇಕ ಕಟ್ಟಡಗಳನ್ನು ನಿರ್ಮಿಸಲು ಉಪಯೋಗಿಸಿರುವ ಸಾಮಗ್ರಿಗಳು ಅಷ್ಟು ಸಮರ್ಪಕವಾಗಿ ಕಂಡು ಬಂದಿಲ್ಲ. ಭಾರತ ಬಿಸಿಲು, ಮಳೆಗಳ ದೇಶವಾದ್ದರಿಂದ ಕೆಲಸಗಾರರಿಗೆ ಅವರ ಆರೋಗ್ಯ ದೃಷ್ಟಿಯಿಂದ ಸಾಕಷ್ಟು ರಕ್ಷಣೆ ಕೊಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ಈ ವಿಶ್ರಾಂತಿ ಗೃಹಗಳು ಕಾರ್ಖಾನೆಯಿಂದ ಹೊರಗಿರುವುದು ಉತ್ತಮ.15 ವಸತಿಗಳು: ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಅತಿಮುಖ್ಯವಾಗಿ ಎದುರಿಸಬೇಕಾದ ಸಮಸ್ಯೆ ಎಂದರೆ ಕಾರ್ಮಿಕರ ವಸತಿಗಳು. ಈಗಲಂತೂ ಈ ಸಮಸ್ಯೆ ಬೃಹದಾಕಾರ ತಾಳಿರುವುದೊಂದೇ ಅಲ್ಲದೆ ಅದಕ್ಕೆ ಪರಿಹಾರವೂ ಆಶಾದಾಯಕವಾಗಿಲ್ಲವೆಂದು ಹೇಳಬಹುದು. ಇರುವ ವಸತಿಗಳಲ್ಲಿ ಸಂಸಾರಗಳು ಕಿಕ್ಕಿರಿದಿವೆ. ಅಕ್ಕಪಕ್ಕದ ನೈರ್ಮಲ್ಯವನ್ನಂತೂ ಹೇಳುವ ಹಾಗೇ ಇಲ್ಲ. 30% ಕ್ಕೂ ಮೇಲ್ಪಟ್ಟು ಸಂಸಾರಗಳು ಗೋಣಿಪಟ್ಟೆ, ತಗಡುಗಳಿಂದ ನಿರ್ಮಿತವಾದ ಸೂರುಗಳ ಕೆಳಗಡೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇಲ್ಲೆಲ್ಲ ರಸ್ತೆ, ಚರಂಡಿ, ಗಾಳಿ, ಬೆಳಕು, ದೀಪ, ನೀರು ಕಕ್ಕಸು ಇತ್ಯಾದಿಗಳ ವ್ಯವಸ್ಥೆಯಂತೂ ಇಲ್ಲ. ಕಾಯಿದೆಳಲ್ಲಿರುವ ನಿಯಮಗಳು ಈ ವ್ಯವಸ್ಥೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಭೂಮಾಲೀಕನ ಮೇಲೆ ಹೊರಿಸುತ್ತವೆ. ಈ ವಸತಿಗಳ ಸಮಸ್ಯೆಯನ್ನು ಅಧ್ಯಯನ ಮಾಡಿ ವರದಿಗಳನ್ನೂ ಶಿಫಾರಸುಗಳನ್ನೂ ಪಡೆದಿದೆ. ಆದರೆ ಅವನ್ನು ಕಾರ್ಯರೂಪಕ್ಕೆ ತರುವುದು ಅತ್ಯಂತ ಕಷ್ಟವಾಗಿದೆ. ದೇಶದಲ್ಲಿ ಕೈಗಾರಿಕಾಭಿವೃದ್ಧಿ ನಾಗಾಲೋಟದಲ್ಲಿ ಓಡುತ್ತಿದ್ದರೆ ವಸತಿನಿರ್ಮಾಣ ಕೇವಲ ಬಸವನ ಹುಳುವಿನಂತೆ ತೆವಳುತ್ತಿದೆ ಎಂದು ಹೇಳಬಹುದು.16 ಸಾರಿಗೆ ಸೌಕರ್ಯ: ಕೆಲಸಗಾರರಿಗೆ ತಮ್ಮ ಮನೆಗಳಿಂದ ಕೆಲಸದೆಡೆಗಳಿಗೆ ಬರಲು ವಾಹನಸೌಕರ್ಯ ಇತ್ತೀಚಿನ ವರೆಗೆ ಅಷ್ಟಾಗಿ ಇರಲಿಲ್ಲವೆಂದು ಹೇಳಬಹುದು. ಕಡೇಪಕ್ಷ ಒಬ್ಬ ಕಾರ್ಮಿಕ ದಿನವಹಿ ನಾಲ್ಕು ಐದು ಮೈಲಿಗಳಷ್ಟಾದರೂ ಓಡಾಡುತ್ತ ವರ್ಷದುದ್ದಕ್ಕೂ ವಾರಕ್ಕೆ ಐವತ್ನಾಲ್ಕು ಗಂಟೆಗಳಷ್ಟು ಕಾಲ ಕೆಲಸ ಮಾಡಬೇಕೆಂದರೆ ಅತಿ ಕಷ್ಟ.. ಸಾರಿಗೆ ಸೌಲಭ್ಯ ವಸತಿಯ ವ್ಯವಸ್ಥೆಯೊಂದಿಗೆ ಸೇರಿದೆ. ಏಕೆಂದರೆ ಆಡಳಿತ ಕಾರ್ಖಾನೆಗೆ ಸಮೀಪದಲ್ಲಿ ವಸತಿಸೌಕರ್ಯ ಕಲ್ಪಿಸಿಕೊಟ್ಟರೆ ಸಾರಿಗೆ ಸೌಕರ್ಯದ ಅವಶ್ಯಕತೆ ಇರುವುದಿಲ್ಲ. ಆದರೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕಾರ್ಖಾನೆಯ ಸಮೀಪದಲ್ಲಿ ವಸತಿಗಳನ್ನು ಒದಗಿಸುವುದಕ್ಕೆ ಆಗುವುದಿಲ್ಲ. ದೂರದ ಬಡಾವಣೆಗಳಲ್ಲಿ ವಸತಿಗಳನ್ನು ಒದಗಿಸುವುದು ಮಾತ್ರ ಸಾಧ್ಯ. ಈ ಸಂದರ್ಭಗಳಲ್ಲಿ ಸುಲಭದರದಲ್ಲಿ ಸಾರಿಗೆ ಸೌಕರ್ಯವನ್ನೊದಗಿಸುವುದು ಕಾರ್ಖಾನೆಯ ಉತ್ಪತ್ತಿ ಹಾಗೂ ಲಾಭದೃಷ್ಟಿಯಿಂದ ಹಿತ. ಈ ಸೌಕರ್ಯವನ್ನು ಈಗೀಗ ದೊಡ್ಡ ಪಟ್ಟಣಗಳಲ್ಲಿ ಅನೇಕ ಕಾರ್ಖಾನೆಗಳು ತಮ್ಮ ಕೆಲಸಗಾರರಿಗೆ ಒದಗಿಸಿವೆ.
17 ಕೈಗಾರಿಕಾ ವಲಯಗಳ ನಿರ್ಮಾಣ
[ಬದಲಾಯಿಸಿ]ಭಾರತದಲ್ಲಿ ಈಗ ಯಥೇಚ್ಛವಾಗಿ ಕೈಗಾರಿಕಾ ನಗರಗಳು ಉದ್ಭವಿಸಿವೆ. ಹಿಂದೆ ಈ ನಗರಗಳು ಯಾವ ಕಟ್ಟುನಿಟ್ಟಿಲ್ಲದೆ ಚಲ್ಲಾಪಿಲ್ಲಿಯಾಗಿ ರೂಪುಗೊಂಡವು. ಅನೇಕ ಕಡೆ ಜನನಿವಾಸಗಳ ಮಧ್ಯೆ ಕೈಗಾರಿಕಾ ಕಾರ್ಖಾನೆಗಳು ಕಂಡುಬರುತ್ತದೆ. ಇದರಿಂದ ಜನಾರೋಗ್ಯಕ್ಕೆ ಆಗುವ ಅಪಾಯ ಅಷ್ಟಿಷ್ಟಲ್ಲ. ಆದರೆ ಇತ್ತೀಚೆಗೆ ನಗರಗಳಲ್ಲಿ, ಪೌರಾಡಳಿತ ಸ್ಥಳಗಳಲ್ಲಿ ಕೈಗಾರಿಕೆ ಉದ್ಯಮಗಳಿಗೇ ಬೇರೆ ಪ್ರತ್ಯೇಕವಾಗಿ ನಿವೇಶನಗಳನ್ನು ಏರ್ಪಡಿಸಿ ಕೈಗಾರಿಕಾ ವಲಯಗಳು ನಿರ್ಮಿತವಾಗಿವೆ. ಯಾವುದೇ ಕೈಗಾರಿಕೆ ಕಾರ್ಖಾನೆ ಸ್ಥಾಪಿತವಾದರೂ ಅದು ಈ ವಲಯದಲ್ಲಿ ಆಗಬೇಕು. ಇದರಿಂದ ಸಾಮಾನ್ಯ ಜನರಿಗೆ ಸಂಪರ್ಕ ಕಡಿಮೆಯಾಗಿ ಅಡ್ಡಿ ಆತಂಕಗಳಿಲ್ಲದಂತಾಗಿದೆ. ಹಾಗೂ ಜನಾರೋಗ್ಯವನ್ನು ಕಾಪಾಡಲು ಸೂಕ್ತಕ್ರಮಗಳನ್ನು ಕೈಕೊಳ್ಳಲು ಸಹಾಯವಾಗಿದೆ. 18 ಕಾನೂನುಬಾಹಿರ ಕಾರ್ಖಾನೆಗಳು: ಇಪ್ಪತ್ತು ಅಥವಾ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಒಂದು ನಿವೇಶನದಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ವರ್ತಮಾನ ಕಾಲದಿಂದ ಹಿಂದಿನ 12 ತಿಂಗಳುಗಳಲ್ಲಿ ಕೆಲಸ ಮಾಡಿದ್ದರೆ ಅಥವಾ ಚಲನಪ್ರೇರಕವಾಗಿ ವಿದ್ಯುತ್ತು ಮೊದಲಾದ ಶಕ್ತಿಯ ಬಳಕೆ ಆಗಿದ್ದರೆ ಆ ನಿವೇಶನ ಕಾರ್ಖಾನೆ ಎನಿಸಿ ಕೊಳ್ಳುತ್ತದೆ. ಶಕ್ತಯನ್ನು ಬಳಸಿ ಅಥವಾ ಬಳಸದೆ ಉತ್ಪತ್ತಿಯಾಗುವ ಇತರ ನಿವೇಶನಗಳನ್ನು ಕಾರ್ಖಾನೆ ಎಂಬುದಾಗಿ ನಿರ್ಧರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಡಲಾಗಿದೆ. ಚಿಕ್ಕಪುಟ್ಟ ಸಂಸ್ಥೆಗಳನ್ನು ಕೂಡ ರಾಜ್ಯ ಸರ್ಕಾರಗಳು ಇಷ್ಟಪಟ್ಟಲ್ಲಿ ಕಾರ್ಖಾನೆಗಳಾಗಿ ಪರಿಗಣಿಸಬಹುದು. ಆರೋಗ್ಯ ರಕ್ಷಣೆಯ ಮತ್ತು ವೈದ್ಯಕೀಯ ಸೌಲಭ್ಯಗಳ ದೃಷ್ಟಿಯಿಂದ ಉತ್ಪತ್ತಿಯಾಗುತ್ತಿರುವ ಸಂಸ್ಥೆಗಳು ಎಷ್ಟೇ ಚಿಕ್ಕವಾದರೂ ಅವುಗಳ ಮೇಲೆ ಮೇಲ್ವಿಚಾರಣೆ ಮತ್ತು ಹತೋಟಿ ಇರಲೇಬೇಕಾಗುತ್ತದೆ. ಉದಾಹರಣೆಗೆ, ಬೀಡಿ ಕಟ್ಟುವ ಉದ್ಯಮ, ಧರ್ಮ ಹದ ಮಾಡುವ ಕಡೆ, ಗಾಜು ಹಾಗೂ ಗಾಜಿನ ಬಳೆಗಳನ್ನು ಮಾಡುವಲ್ಲಿ ಕೆಲಸಗಾರರು ಬಹಳ ಹೊತ್ತು ಅನಾರೋಗ್ಯವಾದ ವಾತಾವರಣದಲ್ಲಿ ಎಡೆಬಿಡದೆ ಕೆಲಸ ಮಾಡುತ್ತಾರೆ. ಸಾಕಷ್ಟು ಗಾಳಿ ಬೆಳಕು ಕುಡಿಯುವ ನೀರಿನ ಸೌಕರ್ಯ ಸಹ ಈ ಸ್ಥಳಗಳಲ್ಲಿಲ್ಲದಿರುವುದು ಸಾಮಾನ್ಯ. ತೀರ ಎಳೆಯ ವಯಸ್ಸಿನ ಹುಡುಗರೂ ಈ ಉದ್ಯಮಗಳಲ್ಲಿ ಕೆಲಸ ಮಾಡುತ್ತಾರೆ. ದೇಶದ ಆರ್ಥಿಕದೃಷ್ಟಿಯಿಂದ ಈ ಉದ್ಯಮಗಳು ಹಾಗೂ ಮತ್ತಿತರ ಕೆಲವು ಬಹು ಮುಖ್ಯವೆಂದು ಹೇಳಬಹುದು. ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪಿತವಾಗುತ್ತಿರುವಾಗ ಈ ಚಿಕ್ಕಪುಟ್ಟ ಉದ್ಯಮಗಳಿಗೆ ಸಾಕಷ್ಟು ಗಮನವಿಲ್ಲದೆ ಅವು ಸಂಪೂರ್ಣವಾಗಿ ಮಾಯವಾದರೆ ಅದರಿಂದ ದೇಶಕ್ಕೆ ಹಿತವಲ್ಲ. 19 ಕಾರ್ಖಾನೆ ಕಾಯಿದೆಗಳ ಆಡಳಿತ: ಈ ಕಾಯಿದೆಗಳಲ್ಲಿ ಕಂಡುಬರುವ ಒಂದು ನ್ಯೂನತೆ ಏನೆಂದರೆ ಕಾರ್ಖಾನೆಗಳನ್ನು ಪರಿಶೀಲಿಸುವ ಮುಖ್ಯ ಮತ್ತು ಇತರ ಅಧಿಕಾರಿಗಳಿಗೆ ಯಥೇಚ್ಛವಾಗ ವಿವೇಚನಾಧಿಕಾರಗಳನ್ನು ಕೊಡಲಾಗಿದೆ. ಅಂದರೆ ಕಾಯಿದೆಯ ಷರತ್ತುಗಳನ್ನು ಉಲ್ಲಂಘಿಸುವವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾದಾಗ ಈ ರೀತಿಯ ವಿವೇಚನಾಧಿಕಾರ ಅಡ್ಡಿಯಾಗುವುದರಲ್ಲಿ ಸಂಶಯವಿಲ್ಲ. ಕಾನೂನು ರೀತ್ಯ ಕ್ರಮ ಪ್ರತಿಯೊಬ್ಬರ ಮೇಲೂ ಜರುಗಿಸುವಂತಿರಬೇಕೇ ಹೊರತು ಕೆಲವರ ಮೇಲೆ ಜರುಗಿಸಿ, ಬೇಕಾದವರನ್ನು ಬಿಟ್ಟುಬಿಡುವ ಸ್ವಾತಂತ್ರ್ಯ ಸಾಮಾನ್ಯವಾಗಿ ಇರಕೂಡದೆಂಬುದು ತಜ್ಞರ ಅಭಿಪ್ರಾಯ. ಕಾನೂನನ್ನು ಉಲ್ಲಂಘಿಸುವವರಿಗೆ ಕಟುವಾದ ಶಿಕ್ಷೆ ಕೊಡಬೇಕು. ಇಲ್ಲದಿದ್ದಲ್ಲಿ ಆಡಳಿತದಲ್ಲಿ ಬಿಗಿತಪ್ಪಿ ಕಾನೂನಿನಿಂದ ನಿರೀಕ್ಷಿಸಿದಷ್ಟು ಪರಿಣಾಮ ಪಡೆಯಲು ಸಾಧ್ಯವಾಗಲಾರದು.20 ಕಾರ್ಖಾನೆಗಳ ಪರಿಶೀಲನೆ ಮತ್ತು ಪರೀಕ್ಷೆ: ಕಾರ್ಖಾನೆಗಳನ್ನು ಯಶಸ್ವಿಯಾಗಿ ಆಗಾಗ್ಗೆ ಪರಿಶೀಲನೆ ನಡೆಸಿ ಕಂಡುಬರುವ ನ್ಯೂನತೆಗಳನ್ನು ಆಡಳಿತದ ಗಮನಕ್ಕೆ ತಂದು, ನ್ಯೂನತೆಗಳನ್ನು ಸರಿಪಡಿಸಿದ್ದಾರೆಯೇ ಇಲ್ಲವೇ ಎಂಬುದನ್ನರಿಯಲು ಸಾಕಷ್ಟು ಸಿಬ್ಬಂದಿ ಇಲ್ಲವೆಂದು ಹೇಳಲಾಗಿದೆ. ಒಬ್ಬ ನುರಿತ ಎಂಬುದನ್ನರಿಯಲು ಸಾಕಷ್ಟು ಸಿಬ್ಬಂದಿ ಇಲ್ಲವೆಂದು ಹೇಳಲಾಗಿದೆ. ಒಬ್ಬ ನುರಿತ ಪರೀಕ್ಷಕ ವರ್ಷಕ್ಕೆ ಇನ್ನೂರು ಕಾರ್ಖಾನೆಗಳಿಗಿಂತ ಹೆಚ್ಚಿಗೆ ಪರಿಶೀಲನೆ ನಡೆಸಲಾರ. ಎಲ್ಲ ರಾಜ್ಯಗಳಲ್ಲೂ ಪರೀಕ್ಷಕರ ಸಂಖ್ಯೆ ಅಧಿಕಗೊಳ್ಳಬೇಕು. ಪರೀಕ್ಷಕರನ್ನು ಕೆಲಸಕ್ಕೆ ತೆಗೆದುಕೊಂಡ ಅನಂತರ ಅವರಿಗೆ ಕಾರ್ಖಾನೆಗೆ ಅನ್ವಯಿಸುವ ಆರೋಗ್ಯ ಮತ್ತು ವೈದ್ಯಕೀಯ ವಿಷಯಗಳಲ್ಲಿ ಶಿಕ್ಷಣ ಕೊಟ್ಟಲ್ಲಿ ಅವರಿಂದ ಉತ್ತಮ ಮಟ್ಟದ ಪರಿಣಾಮಕಾರಿ ಪರಿಶೀಲನೆಯನ್ನು ನಿರೀಕ್ಷಿಸಬಹುದು.[೩]
ಪರಿಸಮಾಪ್ತಿ
[ಬದಲಾಯಿಸಿ]ಕೈಗಾರಿಕೋದ್ಯಮ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಆರೋಗ್ಯ, ಚಿಕಿತ್ಸೆ, ರೋಗ ಪ್ರತಿಬಂಧಕ ಇತ್ಯಾದಿ ಸೌಲಭ್ಯಗಳು ಪ್ರಪಂಚದ ಯಾವ ದೇಶದಲ್ಲೂ ಪರಿಪೂರ್ಣವಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಎಲ್ಲ ದೇಶಗಳೂ ಮುಂದುವರಿಯುತ್ತಿವೆ ಎಂದು ಹೇಳಬಹುದು. ಕಾರ್ಯಕ್ರಮಗಳನ್ನು ಜಾರಿಗೆ ತರಲು ಮೂಲ ಸಂಪತ್ತಿರುವ ದೇಶಗಳಲ್ಲಿ ಅವೆಲ್ಲವನ್ನೂ ಬಳಸುವಷ್ಟು ಚಟುವಟಿಕೆಗಳಿಲ್ಲ. ಚಟುವಟಿಕೆಗಳು ಸಾಕಷ್ಟಿದ್ದರೂ ಯಶಸ್ವಿಯಾದ ಪ್ರತಿಫಲವಿಲ್ಲ. ಈ ಕ್ಷೇತ್ರಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ನಿವಾರಿಸಲು ಅನೇಕ ಮಾರ್ಗಗಳಿದ್ದರೂ ಹಣದ ಕೊರತೆ ಅಥವಾ ಶಿಕ್ಷಣ ಹೊಂದಿದ ಸಿಬ್ಬಂದಿಯ ಕೊರತೆ ಮುಂತಾದವನ್ನು ಜಯಿಸಲು ಕಷ್ಟಸಾಧ್ಯವಾಗಿದೆ. ಇದ್ದಷ್ಟು ಹಣದಲ್ಲಿ ಆದಷ್ಟು ಸೌಕರ್ಯಗಳನ್ನು ಒದಗಿಸಿ ಕಾರ್ಮಿಕನ ಆರೋಗ್ಯ ನೆಮ್ಮದಿಯನ್ನು ಪಾಲನೆ ಮಾಡುವುದು ಆಡಳಿತದ ಕರ್ತವ್ಯ. [೪]
ಉಲ್ಲೇಖಗಳು
[ಬದಲಾಯಿಸಿ]