ಕೈಗಾರಿಕಾ ಬ್ಯಾಂಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತೀಯ ರಿಸರ್ವ್ ಬ್ಯಾಂಕ್, ಮುಂಬಯಿ

ಸಾಪ್ತಾಹಿಕ ಅಥವಾ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡುವ ಸೌಲಭ್ಯವಿರುವ ಮತ್ತು ಸಣ್ಣ ಮೊಬಲಗುಗಳ ಮಧ್ಯಮಾವಧಿ ಸಾಲ ನೀಡುವ ಹಣಕಾಸಿನ ಸಂಸ್ಥೆಯನ್ನು ಈ ಹೆಸರಿನಿಂದ ಕರೆಯುವವಾಡಿಕೆ ಅಮೆರಿಕದಲ್ಲೂ ಇಂಗ್ಲೆಂಡಿನಲ್ಲೂ ಉಂಟು. ಇಂಥ ಸಮಸ್ಯೆಗಳನ್ನು ಬ್ಯಾಂಕುಗಳೆಂದು ಕರೆಯುವುದರ ಔಚಿತ್ಯ ವಾದಗ್ರಸ್ಥವಾದದ್ದು. ಆದರೆ ಇವು ಸಾರ್ವಜನಿಕರಿಂದ ಠೇವಣಿಗಳ ಲೆಕ್ಕದಲ್ಲಿ ಹಣ ಪಡೆಯುವುದರಿಂದಲೂ ಸಾರ್ವಜನಿಕರಿಗೆ ಉದ್ದರಿ ನೀಡಲು ಈ ಹಣವನ್ನು ಬಳಸಿಕೊಳ್ಳುವುದರಿಂದಲೂ ಇವನ್ನು ಬ್ಯಾಂಕುಗಳೆಂದು ಕರೆಯಬಹುದೆಂದು ವಾದಿಸಲಾಗಿದೆ. ಕೈಗಾರಿಕೆಗಳಿಗೆ ಅಗತ್ಯವಾದ ದೀರ್ಘಾವಧಿಯ ಸ್ಥಿರಬಂಡವಾಳವನ್ನು ಒದಗಿಸುವ ವಿನಿಯೋಜನ ಬ್ಯಾಂಕುಗಳು ವ್ಯಾಪಕವಾದ ಅರ್ಥದಲ್ಲಿ ಕೈಗಾರಿಕಾ ಬ್ಯಾಂಕುಗಳು, ವಿನಿಯೋಜನ ಬ್ಯಾಂಕುಗಳ ಉದ್ದೇಶಗಳು ವಾಣಿಜ್ಯ ಬ್ಯಾಂಕುಗಳ ಉದ್ದೇಶಗಳಿಗಿಂತ ಭಿನ್ನವಾದಂಥವು. ಕೈಗಾರಿಕಾ ಸಂಸ್ಥೆಗಳ ಷೇರುಗಳನ್ನೂ ಡಿಬೆಂಚರುಗಳನ್ನೂ ಸಾರ್ವಜನಿಕರಿಗೆ ನೀಡುವುದರಲ್ಲಿ ಇವು ಸಹಾಯ ಮಾಡುತ್ತವೆ. ಇವು ಉಳಿತಾಯಗಾರರಿಗೂ ಬಂಡವಾಳ ಹೂಡುವವರಿಗೂ ಮಧ್ಯವರ್ತಿಗಳಾಗಿರುತ್ತವೆ. ಕೆಲವು ಸಾರಿ ಇವು ಹೊಸ ಕೈಗಾರಿಕೆಗಳನ್ನು ಸ್ಥಾಪಿಸಿ ಅನಂತರ ಬಂಡವಾಳಗಾರರಿಗೆ ವಹಿಸುವುದೂ ಉಂಟು. ಷೇರು, ಡಿಬೆಂಚರುಗಳನ್ನು ಅಧಿಕಗಾತ್ರದಲ್ಲಿ ಕೊಂಡು, ಅವನ್ನು ಸಣ್ಣ ಗಾತ್ರಗಳಲ್ಲಿ ಸಾರ್ವಜನಿಕರಿಗೆ ವಿಕ್ರಯಿಸಿ ಲಾಭಗಳಿಸುವುದೂ ಉಂಟು. [೧]

ಬ್ಯಾಂಕುಗಳು ಮತ್ತು ಕೈಗಾರಿಕೆ[ಬದಲಾಯಿಸಿ]

೧೯ನೆಯ ಶತಮಾನದಲ್ಲಿ ಜರ್ಮನಿ ಮತ್ತು ಫ್ರಾನ್ಸ್ ನ ಬ್ಯಾಂಕುಗಳು ವಿನಿಯೋಜನ ವ್ಯವಹಾರ ಮಾಡುತ್ತಿದ್ದುವು. ಆದರೆ ಬ್ರಿಟಿಷ್ ಬ್ಯಾಂಕುಗಳು ಇವುಗಳಲ್ಲಿ ಆಸಕ್ತಿ ವಹಿಸಲಿಲ್ಲ. ಒಂದನೆಯ ಮಹಾಯುದ್ಧಾನಂತರ ವಿನಿಯೋಜನ ಬ್ಯಾಂಕಿಂಗ್ ವ್ಯವಹಾರದ ಪ್ರಾಮುಖ್ಯ ಕಡಿಮೆಯಾಗಿತ್ತು. ಆದರೆ ೧೯೪೫ರ ಅನಂತರ ಫ್ರಾನ್ಸಿನಲ್ಲಿ ವಿವಿಧ ಕೈಗಾರಿಕೆಗಳಿಗೆ ನೆರವು ನೀಡುವ ಉದ್ದೇಶದಿಂದ ಅನೇಕ ವಿಶಿಷ್ಟ ಸಂಸ್ಥೆಗಳನ್ನು ಸರ್ಕಾರ ಸ್ಥಾಪಿಸಿತು. ಜಪಾನಿನಲ್ಲೂ ವಿನಿಯೋಜನ ಬ್ಯಾಂಕಿಂಗ್ ತಕ್ಕಮಟ್ಟಿನ ಪ್ರಾಮುಖ್ಯಗಳಿಸಿತ್ತು.[೨]

ಇಂಗ್ಲೆಂಡ್[ಬದಲಾಯಿಸಿ]

ಬ್ರಿಟನಿನ ವಾಣಿಜ್ಯ ಬ್ಯಾಂಕುಗಳ ಮುಖ್ಯ ಗುಣಲಕ್ಷಣವೇನೆಂದರೆ ಕೈಗಾರಿಕೆಗಳಿಗೆ ಅಲ್ಪಾವಧಿ ಸಾಲವನ್ನು ಮಾತ್ರ ಸರಬರಾಯಿ ಮಾಡುವುದು. ಕೈಗಾರಿಕೆಗಳ ಸ್ಥಾಪನೆ, ವ್ಯವಸ್ಥಾಪನೆ ಮತ್ತು ವಿಸ್ತರಣೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಬ್ಯಾಂಕುಗಳು ತಲೆಹಾಕುವುದಿಲ್ಲ. ಕಚ್ಚಾಸಾಮಗ್ರಿಗಳನ್ನು ಕೊಳ್ಳಲೂ ದಿನಚರಿ ಖರ್ಚುಗಳಿಗೂ ಅಗತ್ಯವಾದ ಹಣವನ್ನು ಮಾತ್ರ ಬ್ರಿಟಿಷ್ ಬ್ಯಾಂಕುಗಳು ಕೈಗಾರಿಕೆಗಳಿಗೆ ಒದಗಿಸುತ್ತವೆ. ಎಂದರೆ ಈ ಬ್ಯಾಂಕುಗಳು ಕೈಗಾರಿಕೆಗಳಿಗೆ ಬೇಕಾದ ಸ್ಥಿರ ಆಸ್ತಿಗಳನ್ನು ಕೊಳ್ಳಲೂ ಯಂತ್ರಗಳ ಸ್ಥಾಪನೆಗೂ ದೀರ್ಘಾವಧಿ ವಿಸ್ತರಣ ಕಾರ್ಯಗಳಿಗೂ ಹಣಕಾಸನ್ನು ನೀಡುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಇಂಗ್ಲೆಂಡಿನ ವಾಣಿಜ್ಯ ಬ್ಯಾಂಕುಗಳಲ್ಲಿರುವ ಸಾರ್ವಜನಿಕ ಠೇವಣಿಗಳು ಬಹಳಮಟ್ಟಿಗೆ ಅಲ್ಪಾವಧಿಯವು. ಬ್ಯಾಂಕುಗಳು ದ್ರವತೆಗೆ ಹೆಚ್ಚಿನ ಗಮನ ನೀಡುವುದು ಬಹಳ ಕಾಲದಿಂದಲೂ ಅಲ್ಲಿ ನಡೆದು ಬಂದಿರುವ ಸಂಪ್ರದಾಯ.ಇಂಗ್ಲೆಂಡಿನ ಬ್ಯಾಂಕುಗಳು ಕೈಗಾರಿಕೆಗಳ ಅಲ್ಪಾವಧಿ ಸಾಲವನ್ನು ಮಾತ್ರ ಸರಬರಾಯಿ ಮಾಡುತ್ತಿದ್ದರೂ ಆ ದೇಶದ ಕೈಗಾರಿಕಾಭಿವೃದ್ಧಿಗೆ ಎಂದೂ ಅಡಚಣೆಯಾಗಲಿಲ್ಲ. ವಾಣಿಜ್ಯ ಬ್ಯಾಂಕುಗಳು ಪ್ರವರ್ಧಮಾನಕ್ಕೆ ಬರುವುದಕ್ಕೆ ಹಿಂದಿನಿಂದಲೂ ಆ ದೇಶದಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಸುವ್ಯವಸ್ಥಿತವಾದ ಕೈಗಾರಿಕಾ ಬಂಡವಾಳ ಮಾರುಕಟ್ಟೆ ಇತ್ತು. ಇದಲ್ಲದೆ ಲಂಡನ್ ನಗರ ಪ್ರಪಂಚ ಹಣಕಾಸಿನ ಕೇಂದ್ರವಾಗಿದ್ದುದರಿಂದ ಕೈಗಾರಿಕೆಗಳಿಗೆ ಬೇಕಾದ ಹಣಕಾಸಿನ ಸರಬರಾಯಿ ಸತತವಾಗಿ ಬರುತ್ತಿತ್ತು. ಆದ್ದರಿಂದ ವಾಣಿಜ್ಯ ಬ್ಯಾಂಕುಗಳು ತಮ್ಮ ಕಾರ್ಯವ್ಯಾಪ್ತಿಯನ್ನು ದೀರ್ಘಾವಧಿ ಹಣಕಾಸನ್ನು ಒದಗಿಸುವ ಕಡೆ ವಿಸ್ತರಿಸುವ ಅವಶ್ಯಕತೆಯೂ ಇರಲಿಲ್ಲ.ಆದರೆ ಬರುಬರುತ್ತ ಬ್ರಿಟಿಷ್ ಕೈಗಾರಿಕಾ ಹಣಕಾಸಿನ ವ್ಯವಸ್ಥೆಯಲ್ಲಿ ಮಧ್ಯಮಾವಧಿ ಹಣಕಾಸಿನ ಕೊರತೆ ಹೆಚ್ಚಾಯಿತು. ಏಕೆಂದರೆ ವಾಣಿಜ್ಯ ಬ್ಯಾಂಕುಗಳು ಅಲ್ಪಾವಧಿ ಸಾಲವನ್ನು ಮಾತ್ರ ಒದಗಿಸುತ್ತಿದ್ದುವು.[೩] ಬಂಡವಾಳ ಮಾರುಕಟ್ಟೆಯಿಂದ ದೀರ್ಘಾವಧಿ ಸಾಲದ ಸರಬರಾಯಿ ಆಗುತ್ತಿತ್ತು. ಮಧ್ಯಮಾವಧಿ ಹಣಕಾಸಿನ ಕೊರತೆಯನ್ನು ಮ್ಯಾಕ್ ಮಿಲನ್ ಸಮಿತಿ (೧೯೨೯-೩೧) ತನ್ನ ವರದಿಯಲ್ಲಿ ಎತ್ತಿ ತೋರಿಸಿತು.[೪] ಅಲ್ಲಿಂದೀಚೆಗೆ ಬ್ರಿಟಿಷ್ ಸರ್ಕಾರ ಕೈಗಾರಿಕೆಗಳಿಗೆ ಮಧ್ಯಮಾವಧಿ ಸಾಲವನ್ನು ನೀಡಲು ಕೆಲವು ಕೈಗಾರಿಕಾ ಹಣಕಾಸು ಕಾರ್ಪೊರೇಷನ್‍ಗಳನ್ನು ಸ್ಥಾಪಿಸಿತು. ಇದಲ್ಲದೆ, ಇತ್ತೀಚೆಗೆ ಬ್ರಿಟಿಷ್ ವಾಣಿಜ್ಯ ಬ್ಯಾಂಕುಗಳು ಸಹ ಕೈಗಾರಿಕೆಗಳಿಗೆ ಒದಗಿಸುವ ಅಲ್ಪಾವಧಿ ಸಾಲವನ್ನು ಕೆಲವು ಸಾರಿ ನವೀಕರಿಸುವುದರ ಮೂಲಕ ಮಧ್ಯಮಾವಧಿ ಸಾಲವನ್ನು ಸರಬರಾಯಿ ಮಾಡುತ್ತಿವೆ.[೫]

ಜರ್ಮನಿ[ಬದಲಾಯಿಸಿ]

ಜರ್ಮನಿಯ ಬ್ಯಾಂಕುಗಳು ಕೈಗಾರಿಕೆಗಳ ಸ್ಥಾಪನೆ ವ್ಯವಸ್ಥಾಪನೆಗಳಲ್ಲೂ ಅವುಗಳಿಗೆ ಬೇಕಾದ ದೀರ್ಘಾವಧಿ ಹಣಕಾಸನ್ನು ಒದಗಿಸುವುದರಲ್ಲೂ ಹೆಚ್ಚಿನ ಪಾತ್ರವಹಿಸಿರುವುದನ್ನು ಕಾಣಬಹುದು. ಜರ್ಮನಿಯಲ್ಲಿ ಬ್ಯಾಂಕುಗಳಿಗೂ ಕೈಗಾರಿಕೆಗಳಿಗೂ ಕಳೆದ ಶತಮಾನದಿಂದ ಈ ಶತಮಾನದ ಮೂವತ್ತರ ದಶಕದವರೆಗೆ ನಿಕಟ ಸಂಬಂಧವಿತ್ತು. ಕೈಗಾರಿಕಾ ಬಂಡವಾಳದ ಅಭಾವವೂ ದೇಶದಲ್ಲಿದ್ದ ಬಡತನವೂ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಕಷ್ಟು ಜನ ಮುಂದೆ ಬರದಿದ್ದದೂ ಇದಕ್ಕೆ ಕಾರಣ. ಬ್ಯಾಂಕುಗಳು ಕೈಗಾರಿಕೆಗಳ ಸ್ಥಾಪನೆಗೂ ಅವುಗಳ ವಿಸ್ತರಣೆಗೂ ಅವಶ್ಯಕವಾದ ದೀರ್ಘಾವಧಿ ಹಣಕಾಸನ್ನು ಸರಬರಾಯಿ ಮಾಡಲು ಪ್ರಾರಂಭಿಸಿದುವು. ಕೈಗಾರಿಕಾ ವ್ಯವಸ್ಥಾಪಕರ ಪರವಾಗಿ ಷೇರುಗಳನ್ನೂ ಡಿಬೆಂಚರುಗಳನ್ನೂ ಮಾರಿ ಅವಕ್ಕೆ ಬೇಕಾದ ಹಣಕಾಸನ್ನು ಕೂಡ ಒದಗಿಸುತ್ತಿದ್ದುವು. ಕೈಗಾರಿಕಾಭಿವೃದ್ಧಿಯಲ್ಲಿ ಬಹಳ ಪ್ರಗತಿ ಹೊಂದಿದ್ದ ಇಂಗ್ಲೆಂಡಿನೊಂದಿಗೆ ಸ್ಪರ್ಧಿಸಿ ತಮ್ಮ ಬೆಳೆವಣಿಗೆಯನ್ನು ತ್ವರಿತಗೊಳಿಸಲು ಜರ್ಮನ್ ಕೈಗಾರಿಕೆಗಳು ಬ್ಯಾಂಕುಗಳಿಂದ ಬಂಡವಾಳವನ್ನು ನಿರೀಕ್ಷಿಸಿದುವು. ತಮ್ಮ ಮೇಲೆ ಬಿದ್ದ ಜವಾಬ್ದಾರಿಯನ್ನು ಬ್ಯಾಂಕುಗಳೂ ಅರಿತುಕೊಂಡು ಕೈಗಾರಿಕೆಗಳಿಗೆ ಬೇಕಾದ ಹಣಕಾಸನ್ನು ಸರಬರಾಯಿ ಮಾಡಿದುವಲ್ಲದೆ ಅವುಗಳ ಬೆಳೆವಣಿಗೆಯಲ್ಲೂ ಆಸಕ್ತಿ ವಹಿಸುತ್ತಿದ್ದುವು. ಇಷ್ಟಲ್ಲದೆ ಕೆಲವು ಸಾರಿ ಬ್ಯಾಂಕುಗಳು ಕೂಟಗಳನ್ನು ರಚಿಸಿಕೊಂಡು ಹೊಸದಾಗಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುತ್ತಿದ್ದುವು. ಈ ರೀತಿ ಜರ್ಮನ್ ಬ್ಯಾಂಕುಗಳು ಕೈಗಾರಿಕೆಗಳಿಗೆ ಬೇಕಾದ ಹಣಕಾಸನ್ನು ನೀಡುವುದಲ್ಲದೆ ಅವನ್ನು ಸ್ವತಃ ಸ್ಥಾಪಿಸುತ್ತಿದ್ದುವು; ಮತ್ತು ಅವಕ್ಕೆ ಸಲಹೆ ನೀಡುತ್ತಿದ್ದುವು. ಜರ್ಮನಿಯಲ್ಲಿ ಬ್ಯಾಂಕುಗಳಿಗೂ ಕೈಗಾರಿಕೆಗಳಿಗೂ ಇದ್ದ ಸಂಬಂಧ ಕಾರ್ಟೆಲ್ ಚಳವಳಿಯಿಂದ ಇನ್ನೂ ಹೆಚ್ಚಿತು. ಈ ನಿಕಟ ಸಂಬಂಧವನ್ನು ಕುರಿತು ಜೈಡಲ್ಸ್ ಈ ರೀತಿ ಬರೆಯುತ್ತಾನೆ: ಜರ್ಮನ್ ಬ್ಯಾಂಕುಗಳು ಒಂದು ಕೈಗಾರಿಕೆಯನ್ನು ಅದರ ಹುಟ್ಟಿನಿಂದ ಸಾವಿನವರೆಗೂ ನೋಡಿಕೊಳ್ಳುತ್ತಿದ್ದುವು; ಅದರ ಸ್ಥಾಪನೆಯಿಂದ ಹಿಡಿದು ಅದು ಮುಚ್ಚುವ ತನಕವೂ ಬೆಂಬಲವಾಗಿ ನಿಂತುಕೊಳ್ಳುತ್ತಿದ್ದುವು. ಕೈಗಾರಿಕೆ ಹಣದ ಮುಗ್ಗಟ್ಟನ್ನೆದುರಿಸಬೇಕಾದಾಗ ಅಥವಾ ಇತರ ತೊಂದರೆಗಳಿಗೆ ಸಿಕ್ಕಿದಾಗ ಅದಕ್ಕೆ ಆದಷ್ಟು ಸಹಾಯ ಮಾಡುತ್ತಿದ್ದುವು. ಅದೇ ರೀತಿ ಕೈಗಾರಿಕೆಗಳಿಂದ ಲಾಭವನ್ನು ಸಹ ಪಡೆಯುತ್ತಿದ್ದುವು.ಒಟ್ಟಿನಲ್ಲಿ ಹಣಕಾಸನ್ನು ಒದಗಿಸುವುದರ ಜೊತೆಗೆ ಜರ್ಮನ್ ಬ್ಯಾಂಕುಗಳ ಚೈತನ್ಯಪೂರ್ಣ ವ್ಯವಸ್ಥಾಪಕನ ಸಾಮಥ್ರ್ಯ. ಕೈಗಾರಿಕಾ ಸ್ಥಾಪನೆಯ ಸಾಮಥ್ರ್ಯ, ಶ್ರದ್ಧಾನ್ವಿತ ಮೇಲ್ವಿಚಾರಣೆ-ಇವೆಲ್ಲವೂ ಆ ದೇಶದ ತ್ವರಿತ ಕೈಗಾರಿಕಾಭಿವೃದ್ಧಿಗೆ ಕಾರಣವಾದುವು.ಆದರೆ ಈ ಪದ್ಧತಿಯಲ್ಲಿ ಕ್ರಮೇಣ ಕೆಲವು ನ್ಯೂನತೆಗಳು ಕಾಣತೊಡಗಿದುವು. ಬ್ಯಾಂಕುಗಳು ಮತ್ತು ದೊಡ್ಡ ಕೈಗಾರಿಕೆಗಳ ಸಂಬಂಧ ಹೆಚ್ಚಿದ್ದರಿಂದ ಸಣ್ಣ ಬಂಡವಾಳ ಹೂಡುವವರನ್ನು ಕಡೆಗಣಿಸಲಾಯಿತು. ಬ್ಯಾಂಕುಗಳು ದ್ರವತೆಯನ್ನು ಕಳೆದುಕೊಳ್ಳಲು ಆರಂಭಿಸಿದುವು. ೧೯೩೦ರ ದಶಕದಲ್ಲಿ ಜರ್ಮನ್ ಬ್ಯಾಂಕಿಂಗ್ ಪದ್ಧತಿ ಒಡೆದು ಚೂರಾಯಿತು. ಅಲ್ಲಿಂದೀಚೆಗೆ ಜರ್ಮನಿಯಲ್ಲಿ ವಿನಿಯೋಜನ ಮತ್ತು ಠೇವಣಿ ಬ್ಯಾಂಕಿಂಗ್‍ಗಳ ಸಂಮಿಶ್ರಣವನ್ನು ನಿಷೇಧಿಸಲಾಯಿತು. ಬ್ಯಾಂಕುಗಳು ದ್ರವತೆಯನ್ನು ಕಾಪಾಡಿಕೊಂಡು ಬರಬೇಕೆಂದೂ ಸ್ಥಿರ ಆಸ್ತಿಗಳ ಮೇಲೆ ಅವು ಹಣ ವಿನಿಯೋಜಿಸುವುದನ್ನು ಕಡಿಮೆ ಮಾಡಬೇಕೆಂದೂ ಕಾನೂನನ್ನು ಜಾರಿಗೆ ತರಲಾಯಿತು. ಇವುಗಳ ಪರಿಣಾಮವಾಗಿ ಜರ್ಮನಿಯಲ್ಲಿ ಕೈಗಾರಿಕೆಗಳಿಗೆ ದೀರ್ಘಾವಧಿ ಸಾಲವನ್ನು ಒದಗಿಸುವುದರಲ್ಲಿ ಬ್ಯಾಂಕುಗಳ ಪಾತ್ರ ಈಗ ಬಹುಮಟ್ಟಿಗೆ ಕಡಿಮೆಯಾಗಿದೆ. ಪಶ್ಚಿಮ ಜರ್ಮನಿಯಲ್ಲಿ ಕೈಗಾರಿಕೆಗಳಿಗೆ ದೀರ್ಘಾವಧಿ ಹಣಕಾಸನ್ನು ಒದಗಿಸಲು ೧೯೪೮-೪೯ರಲ್ಲಿ ಎರಡು ಪ್ರತ್ಯೇಕ ಹಣಕಾಸಿನ ಸಂಸ್ಥೆಗಳ ಸ್ಥಾಪನೆಯಾಯಿತು.[೬]

ಜಪಾನ್[ಬದಲಾಯಿಸಿ]

ಜಪಾನಿನಲ್ಲಿ ಎರಡನೆಯ ಮಹಾಯುದ್ಧದ ಅನಂತರ ಕೈಗಾರಿಕೆಗಳು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಹಣಕಾಸಿನ ನೆರವಿಗೆ ಬ್ಯಾಂಕುಗಳ ಕಡೆ ತಿರುಗಿದುವು. ಕೈಗಾರಿಕಾ ಪುನರುಜ್ಜೀವನ ಮತ್ತು ಸ್ಥಾಪನೆಗಳಿಗೆ ಬೇಕಾದ ಹಣವನ್ನು ಒದಗಿಸಲು ಆಗ ಯಾವ ವಿಶೇಷ ಕೈಗಾರಿಕಾ ಹಣಕಾಸು ಕಾರ್ಪೊರೇಷನ್‍ಗಳೂ ಇರಲಿಲ್ಲ. ಈ ಸಂದರ್ಭದಲ್ಲಿ ಬ್ಯಾಂಕುಗಳು ಕೈಗಾರಿಕೆಗಳಿಗೆ ಬೇಕಾದ ಪರಸ್ಪರ ಬಂಡವಾಳವನ್ನು ಕಾರ್ಪೊರೇಟ್ ಷೇರು ಮತ್ತು ಡೆಬೆಂಚರುಗಳನ್ನು ಕೊಳ್ಳುವುದರ ಮೂಲಕವೂ ಇನ್ನೂ ಅನೇಕ ರೀತಿಯಲ್ಲೂ ಸರಬರಾಯಿ ಮಾಡಿದುವು. ಬ್ಯಾಂಕುಗಳು ಈ ರೀತಿ ದ್ರವತಾರಹಿತ ಆಸ್ತಿಗಳ ಆಧಾರದ ಮೇಲೆ ಸಾಲ ನೀಡುತ್ತಿದ್ದುದರಿಂದ ಕೆಲವು ಸಾರಿ ಬ್ಯಾಂಕಿಂಗ್‍ನಲ್ಲಿ ಉತ್ಕಟ ಸ್ಥಿತಿಯುಂಟಾಗಿ, ಕೇಂದ್ರ ಬ್ಯಾಂಕ್ ಆದ ಬ್ಯಾಂಕ್ ಆಫ್ ಜಪಾನ್ ಬಲವಂತದಿಂದ ಅವುಗಳ ಸಹಾಯಕ್ಕೆ ಬರಬೇಕಾಗುತ್ತಿತ್ತು. ಆದ್ದರಿಂದ ಅಲ್ಲೂ ಇತ್ತೀಚೆಗೆ ದೀರ್ಘಾವಧಿ ಸಾಲವನ್ನು ಒದಗಿಸುವುದರಲ್ಲಿ ಬ್ಯಾಂಕುಗಳ ಪಾತ್ರ ಕಡಿಮೆಯಾಗಿದೆ.[೭]

ಭಾರತ[ಬದಲಾಯಿಸಿ]

ಭಾರತದ ಬ್ಯಾಂಕುಗಳು ಬ್ರಿಟಿಷ್ ಬ್ಯಾಂಕುಗಳ ಮಾದರಿಯಲ್ಲಿ ಸ್ಥಾಪಿತವಾಗಿವೆ. ಆದ್ದರಿಂದ ಇವು ಕೈಗಾರಿಕೆಗಳಿಗೆ ಅಲ್ಪಾವಧಿ ಸಾಲವನ್ನು ಮಾತ್ರ ಸರಬರಾಯಿ ಮಾಡುತ್ತವೆ. ಜರ್ಮನಿ ಮತ್ತು ಜಪಾನ್‍ಗಳ ಕೈಗಾರಿಕಾಭಿವೃದ್ಧಿಯನ್ನು ನೋಡಿ ಭಾರತದಲ್ಲೂ ಕೊನೆಯ ಪಕ್ಷ ಮೂರು ಸಾರಿ ಬ್ಯಾಂಕುಗಳು ದೀರ್ಘಾವಧಿ ಹಣಕಾಸನ್ನು ಒದಗಿಸುವ ಪ್ರಯತ್ನ ಮಾಡಿದುವು. ೧೯೦೬-೧೩ರಲ್ಲಿ, ಸ್ವದೇಶಿ ಚಳವಳಿಯ ಕಾಲದಲ್ಲಿ, ಹೊಸದಾಗಿ ಸ್ಥಾಪಿತವಾದ ಕೈಗಾರಿಕೆಗಳಿಗೆ, ಅದರಲ್ಲೂ ಪಂಜಾಬ್ ಪ್ರಾಂತ್ಯದಲ್ಲಿ, ಬ್ಯಾಂಕುಗಳು ದೀರ್ಘಾವಧಿ ಹಣಕಾಸನ್ನು ಸರಬರಾಯಿ ಮಾಡಿದುವು. ಕಂಪನಿಗಳ ಷೇರು ಮತ್ತು ಡಿಬೆಂಚರುಗಳನ್ನು ಕೊಳ್ಳುವುದರ ಮೂಲಕವೂ ಸ್ಥಿರ ಆಸ್ತಿಗಳಾದ ಕಾರ್ಖಾನೆ, ಯಂತ್ರಗಳು ಮತ್ತು ಕಟ್ಟಡಗಳ ಆಧಾರದ ಮೇಲೆಯೂ ಬ್ಯಾಂಕುಗಳೂ ಕೈಗಾರಿಕಾ ಹಣಕಾಸು ಸರಬರಾಯಿ ಮಾಡತೊಡಗಿದುವು. ಕೈಗಾರಿಕಾ ಹಣಕಾಸನ್ನು ಒದಗಿಸುತ್ತಿದ್ದ ಮುಖ್ಯ ಬ್ಯಾಂಕುಗಳೆಂದರೆ ಪೀಪಲ್ಸ್ ಬ್ಯಾಂಕ್ ಆಫ್ ಪಂಜಾಬ್, ದಿ ಇಂಡಿಯನ್ ಸ್ಪೀಷೀ ಬ್ಯಾಂಕ್, ದಿ ಹಿಂದೂಸ್ತಾನ್ ಬ್ಯಾಂಕ್, ದಿ ಲಾಹೋರ್ ಬ್ಯಾಂಕ್, ದಿ ಮಾರ್ವಾರಿ ಬ್ಯಾಂಕ್ ಮತ್ತು ದಿ ಇಂಡಸ್ಟ್ರಿಯಲ್ ಅಂಡ್ ಕ್ರೆಡಿಟ್ ಬ್ಯಾಂಕ್ ಆಫ್ ಇಂಡಿಯ. ಇವುಗಳಲ್ಲಿ ಅನೇಕ ಬ್ಯಾಂಕುಗಳು ೧೯೧೩-೧೫ರ ಹಣಕಾಸಿನ ಮುಗ್ಗಟ್ಟಿನಲ್ಲಿ ಪತನ ಹೊಂದಿದುವು. ಈ ಬ್ಯಾಂಕುಗಳು ಸೂಕ್ತವಾದ ಬ್ಯಾಂಕಿಂಗ್ ನೀತಿಯನ್ನು ಅನುಸರಿಸದೆ ಕೈಗಾರಿಕಾ ಉದ್ಯಮಗಳಿಗೆ ದೀರ್ಘಾವಧಿ ಹಣಕಾಸನ್ನು ಒದಗಿಸಿದ್ದು ಇವುಗಳ ಪತನಕ್ಕೆ ಕಾರಣ. ಬಂಡವಾಳ ವಿನಿಯೋಜನೆಗೆ ಸಂಬಂಧಿಸಿದ ಪ್ರತಿಯೊಂದು ಬ್ಯಾಂಕಿಂಗ್ ತತ್ತ್ವವೂ ಈ ಕಾಲದಲ್ಲಿ ಉಲ್ಲಂಘಿತವಾಗಿತ್ತು.ಉಲ್ಲೇಖ ದೋಷ: Closing </ref> missing for <ref> tag</ref>

ಕೈಗಾರಿಕೆ ಬ್ಯಾಂಕುಗಳ ಸ್ಥಾಪನೆ[ಬದಲಾಯಿಸಿ]

ಒಂದನೆಯ ಮಹಾಯುದ್ಧದ ಅನಂತರ ಕೆಲವು ಕೈಗಾರಿಕೆಗಳನ್ನು ಸ್ಥಾಪಿಸಲೂ ಕೈಗಾರಿಕೆಗಳಿಗೆ ದೀರ್ಘಾವಧಿ ಹಣಕಾಸನ್ನು ಒದಗಿಸಲೂ ಮತ್ತೆ ಅನೇಕ ಕೈಗಾರಿಕಾ ಬ್ಯಾಂಕುಗಳು ಜನ್ಮತಾಳಿದುವು. ಯುದ್ಧದ ಪರಿಣಾಮವಾಗಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಅನೇಕ ಸದವಕಾಶಗಳಿದ್ದುದರಿಂದ ಅವಕ್ಕೆ ಬೇಕಾದ ಹಣಕಾಸನ್ನು ಸರಬರಾಯಿ ಮಾಡುವ ಸಲುವಾಗಿ ಬ್ಯಾಂಕುಗಳನ್ನು ಸ್ಥಾಪಿಸುವುದು ಆ ಅವಧಿಯಲ್ಲಿ ದಿನಚರಿಯ ಮಾತಾಗಿತ್ತು. ಈ ಕಾಲದಲ್ಲಿ ಸ್ಥಾಪಿತವಾದ ಬ್ಯಾಂಕುಗಳಲ್ಲಿ ಮುಖ್ಯವಾದವೆಂದರೆ ದಿ ತಾತಾ ಇಂಡಸ್ಟ್ರಿಯಲ್ ಬ್ಯಾಂಕ್ (೧೯೧೭), ದಿ ಕಲ್ಕತ್ತ ಇಂಡಸ್ಟ್ರಿಯಲ್ ಬ್ಯಾಂಕ್(೧೯೧೯), ದಿ ಇಂಡಿಯನ್ ಇಂಡಸ್ಟ್ರಿಯಲ್ ಬ್ಯಾಂಕ್ (೧೯೧೯), ದಿ ಇಂಡಸ್ಟ್ರಿಯಲ್ ಬ್ಯಾಂಕ್ ಆಫ್ ವೆಸ್ಟರ್ನ್ ಇಂಡಿಯ (೧೯೧೯), ದಿ ಮೈಸೂರ್ ಇಂಡಸ್ಟ್ರಿಯಲ್ ಬ್ಯಾಂಕ್ (೧೯೨೦), ದಿ ಕರ್‍ನಾನಿ ಇಂಡಸ್ಟ್ರಿಯಲ್ ಬ್ಯಾಂಕ್(೧೯೨೧) ದಿ ರಾಯ್‍ಕಟ್ ಇಂಡಸ್ಟ್ರಿಯಲ್ ಬ್ಯಾಂಕ್ (೧೯೨೨), ದಿ ಲಕ್ಷ್ಮೀ ಇಂಡಸ್ಟ್ರಿಯಲ್ ಬ್ಯಾಂಕ್(೧೯೨೩), ಮತ್ತು ದಿ ಸೌತ್ ಮಲಬಾರ್ ಇಂಡಸ್ಟ್ರಿಯಲ್ ಬ್ಯಾಂಕ್ (೧೯೨೯). ಈ ಕೈಗಾರಿಕಾ ಬ್ಯಾಂಕುಗಳು ಬಹಳ ವರ್ಷ ಉಳಿಯಲಿಲ್ಲ. </ref>https://www.thefreedictionary.com/industrial+bank</ref>

=ಕೈಗಾರಿಕೆ ಬ್ಯಾಂಕುಗಳ ಅಳಿವೆಗೆ ಕಾರಣ[ಬದಲಾಯಿಸಿ]

೧.ಜರ್ಮನ್ ಬ್ಯಾಂಕಿಂಗ್ ಮಾದರಿಯ ಅನುಕರಣೆ. ಹೀಗೆ ಮಾಡುವಾಗ ಜರ್ಮನ್ ಬ್ಯಾಂಕಿಂಗಿನ ನೈಜರೀತಿ, ವ್ಯವಸ್ಥೆ, ರಚನೆ ಮತ್ತು ಕೆಲಸಕಾರ್ಯಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಂಡಿರಲಿಲ್ಲ. ಜರ್ಮನಿಯಲ್ಲಿ ಅಲ್ಪಾವಧಿ ಠೇವಣಿಗಳನ್ನು ಅಲ್ಪಾವಧಿ ಸಾಲ ನೀಡಲೂ ದೀರ್ಘಾವಧಿ ಠೇವಣಿಗಳನ್ನು ದೀರ್ಘಾವಧಿ ಸಾಲ ಕೊಡಲೂ ಉಪಯೋಗಿಸುತ್ತಿದ್ದರು. ಆದರೆ ಭಾರತದ ಇಂಡಸ್ಟ್ರಿಯಲ್ ಬ್ಯಾಂಕುಗಳು ಅಲ್ಪಾವಧಿ ಠೇವಣಿಗಳನ್ನು ದೀರ್ಘಾವಧಿ ಸಾಲ ನೀಡಲು ಉಪಯೋಗಿಸಿದುವು. ೨.ಸಾಮಾನ್ಯವಾಗಿ ಭಾರತದ ಬ್ಯಾಂಕುಗಳ ವ್ಯವಸ್ಥಾಪಕ ವರ್ಗದವರು ಸ್ವಾರ್ಥಿಗಳಾಗಿಯೂ ಅಸಮರ್ಥರಾಗಿಯೂ ಇದ್ದರು. ೩.ಇವರಿಗೆ ಕೈಗಾರಿಕಾ ಬ್ಯಾಂಕಿಂಗಿನಲ್ಲಿ ಒಳ್ಳೆಯ ಪರಿಜ್ಞಾನವಿರಲಿಲ್ಲ. ೪.ಬಂಡವಾಳವನ್ನು ಹೂಡುವಾಗ ಸರಿಯಾದ ಉದ್ಯಮಗಳನ್ನು ಆಯ್ಕೆಮಾಡಿಕೊಳ್ಳಲಿಲ್ಲ. ಈ ಸಂಸ್ಥೆಗಳು ಬಂಡವಾಳವನ್ನು ನಾನಾ ಉದ್ಯಮಗಳಲ್ಲಿ ಹೂಡುವ ಬದಲು ಕೆಲವೇ ಉದ್ಯಮಗಳಲ್ಲಿ ಸಾಂದ್ರೀಕರಿಸಿದ್ದುವು.

ಕೈಗಾರಿಕಾ ಚಟುವಟಿಕೆ[ಬದಲಾಯಿಸಿ]

ಎರಡನೆಯ ಮಹಾಯುದ್ಧದ ಅವಧಿಯಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಬೇಕಾದ ಹಣಕಾಸನ್ನು ಒದಗಿಸಲು ಮತ್ತೆ ಕೆಲವು ಕೈಗಾರಿಕಾ ಬ್ಯಾಂಕುಗಳು ಬಂದುವು. ಯುದ್ಧಕಾಲದಲ್ಲಿ ಬ್ಯಾಂಕುಗಳಲ್ಲಿ ಠೇವಣಿಗಳ ಶೇಖರಣೆ ಹೆಚ್ಚಾಗುತ್ತಿದ್ದುದರಿಂದಲೂ ಕೈಗಾರಿಕಾ ಚಟುವಟಿಕೆ ಬಿರುಸಾಗಿ ನಡೆಯುತ್ತಿದ್ದುದರಿಂದಲೂ ವಾಣಿಜ್ಯ ಬ್ಯಾಂಕುಗಳು ಕೂಡ ಕೈಗಾರಿಕೆಗಳಿಗೆ ದೀರ್ಘಾವಧಿ ಹಣಕಾಸನ್ನು ಒದಗಿಸಲು ಪ್ರಾರಂಭಿಸಿದುವು. ಆದರೆ ಈ ಸಾರಿಯೂ ಕೈಗಾರಿಕಾ ಹಣಕಾಸಿನ ವಿಷಯದಲ್ಲಿ ಬ್ಯಾಂಕುಗಳು ಕಟು ಅನುಭವ ಪಡೆಯಬೇಕಾಯಿತು. ಅನೇಕ ಬ್ಯಾಂಕುಗಳು, ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ, ಅವನತಿ ಹೊಂದಿದುದಕ್ಕೆ ಮುಖ್ಯ ಕಾರಣವೇನೆಂದರೆ ಅಲ್ಪಾವಧಿ ಠೇವಣಿಗಳನ್ನು ದೀರ್ಘಾವಧಿ ಸಾಲ ಕೊಡಲು ಉಪಯೋಗಿಸಿದ್ದು.ಈ ರೀತಿ ಎಲ್ಲೆಲ್ಲಿ ಮತ್ತು ಯಾವಾಗ ಕೈಗಾರಿಕಾ ಬ್ಯಾಂಕುಗಳನ್ನು ಸ್ಥಾಪಿಸಿದರೂ ಅವೆಲ್ಲವೂ ಭಾರತದಲ್ಲಿ ಅನರ್ಥಕ್ಕೀಡಾದುವು. ಕೈಗಾರಿಕೆಗಳಿಗೆ ದೀರ್ಘಾವಧಿ ಹಣಕಾಸನ್ನು ಒದಗಿಸಲು ಪ್ರತ್ಯೇಕ ಹಣಕಾಸು ಕಾರ್ಪೊರೇಷನ್‍ಗಳನ್ನು ಸ್ಥಾಪಿಸಬೇಕೆಂದು ಕೇಂದ್ರೀಯ ಬ್ಯಾಂಕಿಂಗ್ ವಿಚಾರಣಾ ಸಮಿತಿ ೧೯೩೧ರಲ್ಲೇ ಸಲಹೆ ಮಾಡಿತ್ತು. ಆದರೆ ಹೇಗೆ ಸ್ಥಾಪಿಸಬೇಕೆಂಬುದರ ವಿಷಯವಾಗಿ ಅದು ವಿವರಗಳನ್ನು ಕೊಟ್ಟಿರಲಿಲ್ಲ. ಆದ್ದರಿಂದ ಈ ಸಮಿತಿಯ ಸಲಹೆಯನ್ನು ಕಾರ್ಯರೂಪಕ್ಕೆ ತರುವುದು ಸ್ವಾತಂತ್ರ್ಯ ಬರುವ ತನಕ ಸಾಧ್ಯವಾಗಲಿಲ್ಲ. ಬ್ಯಾಂಕುಗಳು ಪರೋಕ್ಷವಾಗಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಹಣಕಾಸನ್ನು ಒದಗಿಸುವುದರಲ್ಲಿ ಭಾಗವಹಿಸಬಹುದೆಂದು ೧೯೫೪ರಲ್ಲಿ ಷರಾಫ್ ಸಮಿತಿ ಶಿಫಾರಸ್ಸು ಮಾಡಿತ್ತು. ಅದೇ ಸಮಯದಲ್ಲಿ ಭಾರತಕ್ಕೆ ಬಂದಿದ್ದ ಅಂತರರಾಷ್ಟ್ರೀಯ ಹಣ ನಿಧಿಯ ನಿಯೋಗವೂ ಷರಾಫ್ ಸಮಿತಿಯ ಶಿಫಾರಸನ್ನು ಅನುಮೋದಿಸಿತು.

ಪಂಚವಾರ್ಷಿಕ ಯೋಜನೆಗಳು[ಬದಲಾಯಿಸಿ]

ಭಾರತಕ್ಕೆ ಸ್ವಾತ್ರಂತ್ರ್ಯ ಬಂದಮೇಲೆ, ಅದರಲ್ಲೂ ಪಂಚವಾರ್ಷಿಕ ಯೋಜನೆಗಳು ಪ್ರಾರಂಭವಾದಂದಿನಿಂದ, ಕೈಗಾರಿಕಾ ಹಣಕಾಸಿನ ಕೊರತೆ ಹೆಚ್ಚಾಗುತ್ತ ಬಂದಿದೆ. ವಾಣಿಜ್ಯ ಬ್ಯಾಂಕುಗಳು ಅಲ್ಪಾವಧಿ ಸಾಲವನ್ನು ಮಾತ್ರ ಒದಗಿಸುವುದರಿಂದಲೂ ಮಧ್ಯಮಾವಧಿ ಮತ್ತು ದೀರ್ಘಾವಧಿ ಹಣಕಾಸನ್ನು ಒದಗಿಸುತ್ತಿದ್ದ ವ್ಯವಸ್ಥಾಪಕ ನಿಯೋಗಿಗಳ ಮತ್ತು ಇತರ ಸಾಂಪ್ರದಾಯಿಕ ಮೂಲಗಳ ಪಾತ್ರ ಕಡಿಮೆಯಾಗುತ್ತ ಬಂದದ್ದರಿಂದಲೂ ಕೈಗಾರಿಕೆಗಳು ಹಣದ ಮುಗ್ಗಟ್ಟನ್ನು ಅನುಭವಿಸಬೇಕಾಯಿತು. ಆದ್ದರಿಂದ ಸರ್ಕಾರ ಕಳೆದ ೨೫ ವರ್ಷಗಳಲ್ಲಿ ಅನೇಕ ಕೈಗಾರಿಕಾ ಹಣಕಾಸು ಕಾರ್ಪೊರೇಷನ್‍ಗಳನ್ನು ಸ್ಥಾಪಿಸಿತು. ಇವುಗಳಲ್ಲಿ ಮುಖ್ಯವಾದವೆಂದರೆ ಭಾರತದ ಕೈಗಾರಿಕಾ ಹಣಕಾಸು ಕಾರ್ಪೊರೇಷನ್, ರಾಜ್ಯ ಹಣಕಾಸು ಕಾರ್ಪೊರೇಷನ್‍ಗಳು, ರಾಜ್ಯ ಕೈಗಾರಿಕಾಭಿವೃದ್ಧಿ ಕಾರ್ಪೊರೇಷನ್‍ಗಳು, ಭಾರತದ ಕೈಗಾರಿಕಾ ಉದ್ದರಿ ಮತ್ತು ವಿನಿಯೋಜನ ಬ್ಯಾಂಕ್ ಮತ್ತು ಯೂನಿಟ್ ಟ್ರಸ್ಟ್ ಆಫ್ ಇಂಡಿಯ. ಈ ಕೈಗಾರಿಕಾ ಹಣಕಾಸು ಸಂಸ್ಥೆಗಳು ಕೈಗಾರಿಕೆಗಳಿಗೆ ಬೇಕಾದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ಒದಗಿಸಿ ಕೈಗಾರಿಕಾ ಪ್ರಗತಿಗೆ ಬಹಳ ಸಾಧಕವಾಗಿವೆ. ಇದೇ ರೀತಿ ಅನೇಕ ಹಿಂದುಳಿದ ರಾಷ್ಟ್ರಗಳಲ್ಲಿ ಅಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಭಾರತದ ವಾಣಿಜ್ಯ ಬ್ಯಾಂಕುಗಳು ಹೊಸದಾಗಿ ಸ್ಥಾಪಿಸಿರುವ ಹಣಕಾಸಿನ ಕಾರ್ಪೊರೇಷನುಗಳ ಷೇರುಗಳನ್ನೂ, ಡೆಬೆಂಚರುಗಳನ್ನೂ ಕೊಳ್ಳುವುದರ ಮೂಲಕ ಪರೋಕ್ಷವಾಗಿ ದೀರ್ಘಾವಧಿ ಕೈಗಾರಿಕಾ ಹಣಕಾಸಿನಲ್ಲಿ ಭಾಗವಹಿಸುತ್ತಿವೆ. ಇತ್ತೀಚೆಗೆ ವಾಣಿಜ್ಯ ಬ್ಯಾಂಕುಗಳಲ್ಲಿ ಅವಧಿ ಠೇವಣಿಗಳು ದಿನೇ ದಿನೇ ಹೆಚ್ಚುತ್ತಿತುವುದರಿಂದ ಅವು ಮಧ್ಯಮಾವಧಿ ಸಾಲವನ್ನೂ ಒದಗಿಸುತ್ತವೆ, ಇದಲ್ಲದೆ ಅಲ್ಪಾವಧಿ ಸಾಲವನ್ನು ನವೀಕರಿಸುವುದರ ಮೂಲಕ ಮಧ್ಯಮಾವಧಿ ಹಣಕಾಸನ್ನು ಕೈಗಾರಿಕೆಗಳಿಗೆ ಸರಬರಾಯಿ ಮಾಡುತ್ತಿವೆ.

ಉಲ್ಲೇಖಗಳು[ಬದಲಾಯಿಸಿ]