ಆಡಳಿತ ಕಾಯಿದೆ, ಆಡಳಿತ ಮಂಡಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಡಳಿತಗಾರರ ಅಧಿಕಾರದ ವ್ಯಾಪ್ತಿ ಮತ್ತು ಆಡಳಿತ ವಿಧಾನವನ್ನು ಕುರಿತಾದ ಕಾಯಿದೆಗಳಿಗೆ ಆಡಳಿತ ಕಾಯಿದೆ ಎಂಬ ಹೆಸರಿದೆ. ಇದರಲ್ಲಿ ಅಧಿಕಾರಿಗಳ ಕೆಲವೊಂದು ಕಾರ್ಯನಿರ್ವಹಣೆಯ ಬಗ್ಗೆ ನ್ಯಾಯಾಂಗ ನಡೆಸಬಹುದಾದ ವಿಮರ್ಶೆಯೂ ಸೇರುತ್ತದೆ. ಇಲ್ಲಿ ಆಡಳಿತ ಎಂದರೆ ಸರಕಾರ, ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯಾಲಯಗಳಿಂದ ಭಿನ್ನವಾದದ್ದು. ಆಡಳಿತ ಕಾಯಿದೆಯಲ್ಲಿ ರಾಜ್ಯಾಂಗಕ್ಕೆ ಸಂಬಂಧಿಸಿದ ಶಾಸನರೂಪವಾದ (ಸ್ಟ್ಯಾಚೂಟರಿ), ಸಾಮಾನ್ಯ ಕಾಯಿದೆ ರೂಪದ, ಸರ್ಕಾರ ಮಾಡುವ ಕಾಯಿದೆಗಳ ಎಲ್ಲ ಬಗೆಗಳೂ ಸೇರಿವೆ. ಆಡಳಿತ ಕಾಯಿದೆಯ ಬಹು ಭಾಗ ನ್ಯಾಯಾಂಗ ರೂಪಿಸಿದ್ದಾಗಿದೆ. ಇದನ್ನು ಸ್ಥೂಲವಾಗಿ ಮೂರು ಭಾಗ ಮಾಡಬಹುದು. ಒಂದು ಶಾಸನ ಸಭೆಗಳಿಂದ ಆಡಳಿತ ಭಾಗಕ್ಕೆ ಹಂಚಿಕೆಯಾಗುವ ಅಧಿಕಾರಗಳಿಗೆ ಸಂಬಂಧಿಸಿದ್ದು, ಆಡಳಿತವರ್ಗ ಅಧಿಕಾರವನ್ನು ಚಲಾಯಿಸುವ ವಿಷಯಕ್ಕೆ ಸಂಬಂಧಿಸಿದ್ದು ಎರಡನೆಯದು, ಆಡಳಿತ ವಿಷಯದಲ್ಲಿ ನ್ಯಾಯಾಲಯಗಳು ಮಾಡುವ ವಿಷಯ ಬಹು ಮುಖ್ಯವಾದುದು. ಕಾನೂನು ರಚನೆ, ನ್ಯಾಯತೀರ್ಮಾನ, ತನಿಖೆ, ಮೇಲ್ವಿಚಾರಣೆ, ಅಭಿಯೋಗ (ಪ್ರಾಸಿಕ್ಯೂಷನ್) ಸಲಹೆ ನೀಡಿಕೆ, ನಿರ್ಣಾಯಕ ಘೋಷಣೆ-ಇವು ಅಧಿಕಾರ ಚಲಾವಣೆಯ ಮುಖ್ಯ ಹಂತಗಳು.[೧]

ಕಾನೂನು ರಚನೆ, ಆಡಳಿತ ನಿರ್ವಹಣೆ[ಬದಲಾಯಿಸಿ]

ಕಾನೂನು ರಚನೆ, ಆಡಳಿತ ನಿರ್ವಹಣೆ, ತಕರಾರುಗಳ ಪರಿಹಾರ-ಇವು ಕ್ರಮವಾಗಿ ನ್ಯಾಯವಿಧಾಯಕ ಸಭೆ, ಸರ್ಕಾರ ಮತ್ತು ನ್ಯಾಯಾಲಯಗಳ ಕೆಲಸವಾದರೂ ಕಾಲ ಕ್ರಮೇಣ ಸರಕಾರ ಜಟಿಲವಾದಂತೆಲ್ಲ ಈ ಮೂರು ಕಾರ್ಯಗಳನ್ನು ಸ್ವಲ್ಪವಾಗಿಯೋ, ಹೆಚ್ಚಾಗಿಯೋ ಸರ್ಕಾರವೇ ನಿರ್ವಹಿಸಬೇಕಾದ ಪರಿಸ್ಥಿತಿ ಒದಗಿತು.ಸರಕಾರದ ಕೆಲಸ ಶಾಂತಿ ಮತ್ತು ಶಿಸ್ತನ್ನು ಕಾಪಾಡುವುದರಲ್ಲಿ ಮುಗಿಯಲಿಲ್ಲ. ವಿಧವಿಧವಾದ ತೆರಿಗೆಗಳನ್ನು ಹೊರಿಸಿ ವಸೂಲು ಮಾಡುವುದು, ವಾಣಿಜ್ಯ ಸಂಸ್ಥೆಗಳನ್ನು ನಡೆಸಲು ಅಪ್ಪಣೆಕೊಡುವುದು, ಲಾರಿಬಸ್ಸುಗಳನ್ನು ಓಡಿಸಲು ಅನುಮತಿ ನೀಡುವುದು, ಯಜಮಾನನ ವಿರುದ್ಧ ನೌಕರರ ರಕ್ಷಣೆ, ವಿದೇಶಗಳಿಂದ ಇಲ್ಲಿಗೆ ಬಂದು ನೆಲೆಸುವವರ ಮೇಲ್ವಿಚಾರಣೆ, ವಿದ್ಯಾಸಂಸ್ಥೆಗಳ ಜವಾಬ್ದಾರಿ ಮುಂತಾದ ನೂರಾರು ಸಹಸ್ರಾರು ಕೆಲಸಗಳು ಸರಕಾರದ ವ್ಯಾಪ್ತಿಯೊಳಗೆ ಬಂದುಬಿಟ್ಟಿವೆ. ಇವನ್ನೆಲ್ಲ ನೋಡಿಕೊಳ್ಳಲು ಅನೇಕಾನೇಕ ಇಲಾಖೆಗಳು ಬೇಕು ಮತ್ತು ಈ ಇಲಾಖೆಗಳನ್ನು ನಡೆಸಲು ನೂರಾರು ಅಧಿಕಾರಿಗಳು ಬೇಕು. ಹಾಗೆ ಅಧಿಕಾರಿಗಳನ್ನು ನೇಮಿಸಿದ ಅನಂತರ ಅವರವರ ಕರ್ತವ್ಯವನ್ನು ವಿವರಿಸಬೇಕು. ಹೀಗೆ ಅವರವರ ಕರ್ತವ್ಯವನ್ನು ವಿವರಿಸಲು ಹೊರಟಾಗಲೇ ಅಧಿಕಾರಿಗಳೂ ಕೂಡ, ನೇರವಾಗಿ ಅಲ್ಲದಿದ್ದರೆ ಪರೋಕ್ಷವಾಗಿಯಾದರೂ ಕಾನೂನು ರಚಿಸುವ ಮತ್ತು ತೀರ್ಪು ಕೊಡುವ ಕೆಲಸಗಳನ್ನು ಕೈಗೊಳ್ಳಬೇಕಾಗಿದೆ ಎಂಬ ಅಂಶ ಹೊರಬಿದ್ದಿತು. ಆ ರೀತಿ ಅವರು ರಚಿಸಿಕೊಳ್ಳುವ ಕಾನೂನಿಗೆ ಆಡಳಿತ ಕಾಯಿದೆ ಎಂದೂ ತೀರ್ಪು ಕೊಡುವ ಅಧಿಕಾರಿಯನ್ನು ಅಥವಾ ಅಧಿಕಾರಿಗಳನ್ನು ಆಡಳಿತ ಮಂಡಳಿ ಅಥವಾ ನ್ಯಾಯಾಧಿಕರಣ ಎಂದೂ (ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್) ಕರೆದಿದ್ದಾರೆ.

ನ್ಯಾಯವಿಧಾಯಕ ಸಭೆ ಕಾನೂನು[ಬದಲಾಯಿಸಿ]

ನ್ಯಾಯವಿಧಾಯಕ ಸಭೆ ಕಾನೂನುಗಳನ್ನು ರಚಿಸಿದರೂ ಅವುಗಳನ್ನು ಜಾರಿಗೆ ತರಲು ಸರಕಾರ ನಿಯಮಗಳನ್ನು ರಚಿಸುತ್ತದೆ. ಈ ನಿಯಮಗಳಿಗೂ ಕಾನೂನಿನ ಅಂತಸ್ತೇ ಇರುತ್ತದೆ. ಜನರು ಕಾನೂನು ಮತ್ತು ನಿಯಮಗಳನ್ನು ಒಟ್ಟು ಸೇರಿಸಿ ತಮಗಷ್ಟೆ ಸಂಬಂಧಿಸಿದ ಕಾಯಿದೆ ಎಂಬುದಾಗಿ ಪರಿಗಣಿಸುತ್ತಾರೆ. ಹೀಗಾಗಿ ಈ ನಿಯಮಗಳು ಮತ್ತು ಇದೇರೀತಿ ಸರಕಾರ ನ್ಯಾಯವಿಧಾಯಕ ಸಭೆಯ ಮುಂದೆ ತರದ ಕೆಲವು ಆಜ್ಞೆಗಳು ಆಗಾಗ ಪರಿಣಮಿಸುತ್ತವೆ. ಹಲವು ಖಾಸಗಿ ಸಂಸ್ಥೆಗಳನ್ನು ನಡೆಸುವ ವಿಷಯ ಬಂದಾಗ ಜನರ ವಿರುದ್ಧ ಕೆಲವು ರೀತಿಯ ಕರಗಳನ್ನು ವಿಧಿಸಬೇಕಾದಾಗ ಖಾಸಗಿ ನೌಕರರಿಗೆ ರಕ್ಷಣೆ ಕೊಡಬೇಕಾದ ಪ್ರಸಂಗ ಒದಗಿದಾಗ, ಇತ್ಯಾದಿ ಸಂದರ್ಭಗಳಲ್ಲಿ ಸರಕಾರ ತನ್ನ ಅಧಿಕಾರಿಗಳಿಗೆ ನೀಡುವ ಸೂಚನೆಗಳೆಲ್ಲವೂ ಅವು ಯಾರ ವಿರುದ್ಧ ಇವೆಯೋ ಅವರೆಲ್ಲರ ದೃಷ್ಟಿಯಲ್ಲಿ ಆಡಳಿತ ತನ್ನ ಕಾರ್ಯನಿರ್ವಹಣೆ ಮಾಡುವಾಗ ಜನರ ಅಹವಾಲನ್ನು ಕೇಳಿ ತಾನೇ ತೀರ್ಪು ಕೊಡುತ್ತದೆ. ಇದೇ ಜನರಿಗೆ ಸಿಗುವ ಆಡಳಿತ ಮಂಡಳಿಯ ತೀರ್ಪು.ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಹಳ್ಳಿಯಲ್ಲಿ ಪಾಳುಬಿದ್ದಿರುವ ಜಮೀನನ್ನು ಕಾನೂನು ರೀತ್ಯಾ ಹಂಚಿಕೊಂಡು ವ್ಯವಸಾಯ ಮಾಡಲು ಅನೇಕರು ಅರ್ಜಿಹಾಕಿಕೊಳ್ಳುತ್ತಾರೆ. ಈ ಅರ್ಜಿಗಳನ್ನು ತಹಸೀಲ್‍ದಾರರು ಸ್ವೀಕರಿಸಿ ತಾವೇ ಒಂದು ಆಜ್ಞೆಮಾಡಬಹುದು ಅಥವಾ ಅರ್ಜಿಗಳನ್ನು ತಮ್ಮ ಮೇಲಿನ ಅಸಿಸ್ಟೆಂಟ್ ಕಮೀಷನರ್ ಮುಂದೆ ಇಡಬಹುದು. ಆ ಅಸಿಸ್ಟೆಂಟ್ ಕಮೀಷನರು ಒಂದು ತೀರ್ಪುಕೊಟ್ಟು, ಜಮೀನನ್ನು ಹಲವರಿಗೆ ಹಂಚುವರು (ಇಲ್ಲಿ ಅಸಿಸ್ಟೆಂಟ್ ಕಮೀಷನರನ್ನೇ ಒಂದು ಆಡಳಿತ ಮಂಡಳಿ ಅಥವಾ ಅದರ ಜಾಗದಲ್ಲಿ ಕೆಲಸ ಮಾಡುವ ಅಧಿಕಾರಿ ಎನ್ನಬಹುದು). ಹೀಗಾದ ಹಂಚಿಕೆಯಿಂದ ನೊಂದ ಅರ್ಜಿದಾರರು ಡೆಪ್ಯುಟಿ ಕಮೀಷನರ್ (ಇವರೂ ಆಡಳಿತದ ಒಂದು ಭಾಗ) ಅವರಲ್ಲಿ ಅಪೀಲು ಮಾಡುವರು. ಇವರ ತೀರ್ಪಿನ ವಿರುದ್ಧ ರೆವೆನ್ಯೂ ಕಮೀಷನರ್ ಅಥವಾ ರೆವೆನ್ಯೂ ಟ್ರಿಬ್ಯೂನಲ್ಲಿನಲ್ಲಿ ಒಬ್ಬರು ಅಥವಾ ಹೆಚ್ಚಿಗೆ ಆಡಳಿತ ಶಾಖೆಯ ಅಧಿಕಾರಿಗಳಿರುತ್ತಾರೆ. ಇವರೆಲ್ಲರೂ ತಮ್ಮ ಕೈಲಿರುವ ಕಾಯಿದೆಗಳನ್ನು ಉಪಯೋಗಿಸುವುದರ ಜೊತೆಗೆ ಅವರ ಸ್ವಂತ ವಿವೇಚನೆಗೂ ಬೇಕಾದಷ್ಟು ಅವಕಾಶವಿರುತ್ತದೆ.ಮೇಲಿನ ರೀತಿಯ ಉದಾಹರಣೆಯಂತೆಯೇ ಇತರ ಕ್ಷೇತ್ರಗಳಿಂದಲೂ ಮಾರಾಟ ತೆರಿಗೆಯ ಮಂಡಳಿ, ಕಾರ್ಮಿಕರಿಗಾಗಿ ಇರುವ ಮಂಡಳಿ, ವಾಹನ ನಡೆಸುವವರಿಗಾಗಿ ಇರುವ ಮಂಡಳಿ ಮುಂತಾದುವನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಆಡಳಿತಾಂಗ ನ್ಯಾಯಾಧೀಶರ ಕಾರ್ಯ[ಬದಲಾಯಿಸಿ]

ಈ ಆಡಳಿತಾಂಗ ನ್ಯಾಯಾಧೀಶರ ಕಾರ್ಯವನ್ನು ಕೈಗೊಂಡಾಗ ಪ್ರಜೆಗೆ ಅನನುಕೂಲಕ್ಕಿಂತ ಅನುಕೂಲವೇನಾದರೂ ಹೆಚ್ಚಾಯಿತೇ? ಉನ್ನತಮಟ್ಟದ ಆಡಳಿತ ಮಂಡಳಿಯಿಚಿದಲೂ ತನಗೆ ನ್ಯಾಯ ದೊರಕಲಿಲ್ಲ ಎಂಬುದಾಗಿ ಹೇಳಿಕೊಳ್ಳುವ ಮನುಷ್ಯನಿಗೆ ನ್ಯಾಯಾಲಯಗಳಿಂದ ಏನಾದರೂ ಪರಿಹಾರಕ್ಕೆ ಅವಕಾಶವಿದೆಯೇ? ಆಡಳಿತಾಂಗದ ಮೂಲಕ ಜನರಿಗೆ ನ್ಯಾಯಸಿಗುವುದರ ಪರವಾಗಿ ಅನೇಕ ಕಾನೂನು ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿರುತ್ತಾರೆ. ಮೊದಲನೆಯದಾಗಿ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಕೆಲಸ ಸುಸೂತ್ರವಾಗಿ ನಡೆಯಬೇಕಾದರೆ ಆ ಇಲಾಖೆಯಲ್ಲೇ ವಿಶೇಷ ಪರಿಶ್ರಮ ಪಡೆದ ಅಧಿಕಾರಿಗಳಿರಬೇಕು. ನಮ್ಮ ಮಾಮೂಲಿ ರೀತಿಯ ಸಿವಿಲ್ ಅಥವಾ ಕ್ರಿಮಿನಲ್ ಕೋರ್ಟಿನ ನ್ಯಾಯಾಧೀಶರುಗಳು ಈ ಎಲ್ಲ ಇಲಾಖೆಯ ವಿಷಯಗಳಲ್ಲೂ ಪ್ರಾವೀಣ್ಯಪಡೆದಿರುತ್ತಾರೆಂದು ಹೇಳಲು ಸಾಧ್ಯವಿಲ್ಲ. ಎರಡನೆಯದಾಗಿ ಆಡಳಿತ ಮಂಡಳಿಯ ಮುಂದೆ ವಾದ ಪ್ರತಿವಾದಗಳು ನಡೆಯುವಾಗ ವಿಹಿತಕ್ರಮ ಅಷ್ಟಾಗಿರುವುದಿಲ್ಲ; ಅಲ್ಲಿರುವ ಸರಳತೆಯ ಕಾರಣದಿಂದ ಅರ್ಜಿದಾರ ವಕೀಲರ ಸಹಾಯವಿಲ್ಲದೆಯೇ ತನ್ನ ಕಷ್ಟಸುಖಗಳನ್ನು ಹೇಳಿಕೊಳ್ಳಬಹುದು. ಮೂರನೆಯದಾಗಿ ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟುಗಳ ಕ್ರಮ ಹೆಚ್ಚು ಕಾಲಾವಧಿಯನ್ನು ತೆಗೆದುಕೊಳ್ಳುವಂಥದು ಮತ್ತು ಅನೇಕವೇಳೆ ದುಬಾರಿ. ಆಡಳಿತ ಮಂಡಳಿಯ ಮುಂದೆ ಪ್ರಜೆ ಕಮ್ಮಿ ಖರ್ಚಿನಲ್ಲಿ ಮತ್ತು ಕ್ಷಿಪ್ರವಾಗಿ ಬಂದ ತೀರ್ಪನ್ನು ಪಡೆಯಬಹುದು. ಕಡೆಯದಾಗಿ ನಮ್ಮ ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟುಗಳು ಮೊಕದ್ದಮೆಗಳಿಂದ ತುಂಬಿಹೋಗಿರುತ್ತದೆ. ಹೀಗಿರುವಾಗ ಆಡಳಿತಮಂಡಳಿಗಳ ಮುಂದೆ ಬರುವ ವ್ಯಾಜ್ಯಗಳನ್ನೆಲ್ಲ ಈ ಕೋರ್ಟುಗಳಿಗೆ ತಂದಲ್ಲಿ ಕಾರ್ಯನಿರ್ವಹಣೆಯಲ್ಲಿ ಆಗುವ ನಿಧಾನ ಮತ್ತು ಗಡಿಬಿಡಿಯನ್ನು ಊಹಿಸಿಕೊಳ್ಳುವುದೊಳ್ಳೆಯದು.[೨]

ಆಡಳಿತ ಮಂಡಳಿಗಳ ವಿರುದ್ಧ ಇರುವ ವಾದಗಳು ಹೀಗಿವೆ[ಬದಲಾಯಿಸಿ]

ವ್ಯಾಜ್ಯಗಳನ್ನು ತೀರ್ಮಾನ ಮಾಡುವುದರಲ್ಲಿ ಆಡಳಿತ ಪ್ರವೇಶಿಸಿದರೆ ನ್ಯಾಯಾಲಯಗಳ ಸ್ಥಾನಮಾನಗಳು ಹೋಗುತ್ತಾಬಂದು ಜನರಿಗೆ ಕಾನೂನಿಂದ ಆಗುವ ಪ್ರಯೋಜನ ಕಡಿಮೆಯಾಗುತ್ತದೆ. ಕಟ್ಟುನಿಟ್ಟಾದ ಕ್ರಮವನ್ನು ನ್ಯಾಯಾಲಯ ಹಾಕಿಕೊಂಡು ಸಮರ್ಥರಾದ ವಕೀಲರು ವಾದಿಸಿದ ಅನಂತರ ಆಗುವ ತೀರ್ಮಾನದ ಗುಣಮಟ್ಟವನ್ನು ಆಡಳಿತ ಮಂಡಳಿ ಮುಟ್ಟಲಾರದು. ಆಡಳಿತಾಂಗದ ಅಧಿಕಾರಿಗಳು ಅನೇಕವೇಳೆ ಸರ್ಕಾರದ ಪರವಾಗಿಯೇ ಪೂರ್ವಕಲ್ಪಿತ ಭಾವನೆಗಳನ್ನು ಹೊಂದಿರುತ್ತಾರೆ. ಅಂಥ ಸಂದಭದಲ್ಲಿ ಸರಕಾರದ ವಿರುದ್ಧ ಹೊಡೆದಾಡುತ್ತಿರುವ ವ್ಯಕ್ತಿಗೆ ಪೂರ್ಣ ನ್ಯಾಯ ಸಿಗುವ ಬಗೆ ಹೇಗೆ? ಇಲ್ಲಿ ಒಂದು ಉದಾಹರಣೆಯನ್ನು ಕೊಡಬಹುದು: ಮಾರಾಟ ತೆರಿಗೆಯನ್ನು ವಸೂಲು ಮಾಡುವ ಕಾರ್ಯವನ್ನು ಕೈಗೊಂಡಿರುವ ಸರ್ಕಾರದಿಂದ ನೇಮಿತರಾಗಿ ಸರ್ಕಾರದ ವಿರುದ್ಧವೇ ತೀರ್ಪು ಕೊಡಲು ಅವರ ಮನ ಒಪ್ಪುವುದೇ? ಕೊಂಚವಾದರೂ ಅವರ ಮನಸ್ಸು ಸರ್ಕಾರದ ಕಡೆ ವಾಲುವುದಿಲ್ಲವೇ? ಈ ಪ್ರಶ್ನೆಗಳನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಿಬಿಡುವುದಕ್ಕಾಗುವುದಿಲ್ಲ. ಆಡಳಿತ ಕಾಯಿದೆ ಮತ್ತು ಮಂಡಳಿಯ ಪರ ಮತ್ತು ವಿರುದ್ಧ ಇರುವ ಈ ವಾದಗಳನ್ನು ಕಾನೂನು ಶಾಸ್ತ್ರಜ್ಞರು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಯೂರೋಪು ಮತ್ತು ಅಮೆರಿಕ ದೇಶಗಳಲ್ಲಿ ಹಿಂದಿನ ಮತ್ತು ಈಗಿನ ಶತಮಾನಗಳಲ್ಲಿ ಇವೆಲ್ಲವೂ ಚರ್ಚೆಗೆ ಬಂದು ಅನುಭವದ ಮೇಲೆ ಅಲ್ಲಿಯ ಸರಕಾರಗಳು ಬದಲಾವಣೆಗಳನ್ನು ಮಾಡಿಕೊಂಡಿವೆ. ಅನೇಕರ ಅಭಿಪ್ರಾಯ ಹೀಗಿವೆ:ಸರಕಾರ ಕಾರ್ಯನಿರ್ವಹಣೆ ಈಗಿನ ಕಾಲದಲ್ಲಿ ಅದರಲ್ಲೂ 20ನೆಯ ಶತಮಾನದ ಉತ್ತರಾರ್ಧದಲ್ಲಿ, ಅತಿ ಹೆಚ್ಚಿನದೂ ಬಹುಮುಖವುಳ್ಳದ್ದೂ ಆಗಿಹೋಗಿದೆ. ಈ ಕಾರಣದಿಂದ ಸರಕಾರದ ಹೆಚ್ಚು ಕೆಲಸಗಳನ್ನು ಅದೆ ಮೂರು ಅಂಗಗಳಲ್ಲಿ ಒಂದಾದ ಆಡಳಿತಾಂಗವೇ ವಹಿಸಿಕೊಳ್ಳಬೇಕು. ಹಾಗೆ ವಹಿಸಿಕೊಂಡು ತನ್ನ ಕರ್ತವ್ಯನಿರ್ವಹಣೆ ಮಾಡುವಾಗ ಅಧಿಕಾರಿ ಅನೇಕವೇಳೆ ನ್ಯಾಯಾಧೀಶನಂತೆ ವರ್ತಿಸಲೂ ಅವನಿಗೆ ಬೇಕಾದ ನಿಯಮಗಳನ್ನೂ ವಿಶೇಷ ರೀತಿಯ ಆಜ್ಞೆಗಳನ್ನೂ ಸರ್ಕಾರ ಆಗಿಂದಾಗ್ಗೆ ಹೊರಡಿಸುವುದೂ ಅನಿವಾರ್ಯ. ಹೀಗಾಗಿ ಆಡಳಿತ ಕಾಯಿದೆ ಮತ್ತು ಮಂಡಳಿಗಳು ಇರುವುದರಿಂದ ಅನಾನುಕೂಲಕ್ಕಿಂತ ಅನುಕೂಲವೇ ಜಾಸ್ತಿ.

ಆಡಳಿತ ಮಂಡಳಿಗಳ ತೀರ್ಪ[ಬದಲಾಯಿಸಿ]

ಆಡಳಿತ ಮಂಡಳಿಗಳ ತೀರ್ಪನ್ನು ಪರಿಶೀಲಿಸಿ ಪುನಃ ತೀರ್ಪನ್ನು ಕೊಡುವ ವ್ಯಾಪ್ತಿಯನ್ನು (ಉನ್ನತಮಟ್ಟದ) ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟುಗಳಿಗೆ ಕೊಟ್ಟಿರುತ್ತಾರೆ. ಆಡಳಿತ ಮಂಡಳಿಯ ತೀರ್ಪಿನ ವಿರುದ್ಧ ಅಪೀಲು ಹೋಗಬೇಕೆನ್ನುವವ ಈ ಕೋರ್ಟುಗಳಿಗಾಗಲಿ ಅಥವಾ ಅನೇಕ ವೇಳೆ ಹೈಕೋರ್ಟಿಗಾಗಲಿ ಅರ್ಜಿಕೊಡಬಹುದು. ಹಾಗೆ ಅರ್ಜಿದಾರ ಬಂದಾಗ ಅವನ ಮತ್ತು ವಿರೋಧ ಪಕ್ಷದವನ ಮಾತುಗಳನ್ನು ಕೇಳಿ ಕೋರ್ಟು ತನ್ನದೇ ಆದ ತೀರ್ಪನ್ನು ಕೊಡುತ್ತದೆ. ಆ ರೀತಿ ತೀರ್ಪು ಕೊಡುವಾಗ ಅಧಿಕಾರಿ ಅಥವಾ ಮಂಡಳಿಯ ಸದಸ್ಯರು ಸ್ವಂತ ವಿವೇಚನೆಯ ದುರುಪಯೋಗ ಮಾಡಿಕೊಂಡಿದ್ದಾರೆಯೇ, ಅವರು ತಮ್ಮ ವ್ಯಾಪ್ತಿಗಿಂತಲೂ ಮೀರಿಹೋಗಿದ್ದಾರೆಯೇ, ಅವರು ಹಾಕಿಕೊಂಡ ಕ್ರಮ ದೋಷಪೂರಿತವಾಗಿದೆಯೇ, ತೀರ್ಪು ಸಂವಿಧಾನದ ಯಾವ ಭಾಗಕ್ಕಾದರೂ ವಿರೋಧವಾಗಿದೆಯೇ, ಅವರ ಮುಂದೆ ಇದ್ದ ರುಜುವಾತು ಅವರು ತೀರ್ಮಾನಕ್ಕೆ ಬರಲು ಸಾಕಾದಷ್ಟಿತ್ತೇ-ಮುಂತಾದ ಅಂಶಗಳನ್ನು ಈ ಉನ್ನತಮಟ್ಟದ ಕೋರ್ಟಿನ ನ್ಯಾಯಾಧೀಶರು ಗಣನೆಗೆ ತೆಗೆದುಕೊಳ್ಳುತ್ತಾರೆ.

ಆಡಳಿತ ಮಂಡಳಿಯ ವಿರುದ್ಧ ಹೈಕೋರ್ಟು[ಬದಲಾಯಿಸಿ]

ಆಡಳಿತ ಮಂಡಳಿಯ ವಿರುದ್ಧ ಹೈಕೋರ್ಟು ಮುಂತಾದವಕ್ಕೆ ಅಪೀಲು ಬಂದಾಗ ಅಥವಾ ರಿಟ್ ಅರ್ಜಿ ಸಲ್ಲಿಸಿದಾಗ ಸಾಧಾರಣವಾಗಿ ಒಂದು ಪದ್ಧತಿ ಆಚರಣೆಯಲ್ಲಿದೆ. ತಥ್ಯ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಹೇಳಿರುವುದೇ ಕಡೆಯ ಮಾತು. ಕಾನೂನಿನ ಪ್ರಶ್ನೆ ಬಂದಲ್ಲಿ ಮಾತ್ರ ಅದಕ್ಕಿಂತಲೂ ಉನ್ನತಮಟ್ಟದ ಕೋರ್ಟು ವಿಷಯಗಳನ್ನು ಪರಿಶೀಲಿಸುತ್ತದೆ. ಉದಾಹರಣೆಗಾಗಿ, ಒಬ್ಬ ವ್ಯಾಪಾರಿ ಅಟ್ಲಾಸ್ ಅಥವಾ ಭೂಪಟಗಳ ಪುಸ್ತಕಗಳನ್ನು ಮಾರಿದನೇ ಇಲ್ಲವೇ ಎಂಬುದು ತಥ್ಯಪ್ರಶ್ನೆ. ಓದುವ ಪುಸ್ತಕಗಳಿಗೆ ವ್ಯಾಪಾರ ತೆರಿಗೆ ಇಲ್ಲದಿರುವಾಗ ಭೂಪಟಗಳ ಪುಸ್ತಕಗಳಿಗೆ ತೆರಿಗೆಯ ವಿನಾಯಿತಿ ಇರಬೇಕೇ ಬೇಡವೇ ಎಂಬುದು ಕಾನೂನಿನ ಪ್ರಶ್ನೆ (ಅನೇಕವೇಳೆ ದತ್ತಪ್ರಶ್ನೆ ತಥ್ಯಪ್ರಶ್ನೆಯೇ, ಕಾನೂನಿನ ಪ್ರಶ್ನೆಯೇ ಎಂಬುದೇ ಭಾರಿ ಸಮಸ್ಯೆಯಾಗುತ್ತದೆ). ಎಂಬುದರ ಚರ್ಚೆ ಪ್ರಕೃತಕ್ಕೆ ಗೌಣ, ಹೀಗೆ ಕಾನೂನಿನ ಪ್ರಶ್ನೆಗಳನ್ನು ಮಾತ್ರ ಅಪೀಲು ಕೋರ್ಟು ಪರಿಶೀಲಿಸಿ ಹಿಂದಿನ ತೀರ್ಪನ್ನೇ ಕಾಯಂ ಮಾಡಬಹುದು. ಯಾವ ರೀತಿ ಬೇಕಾದರೂ ಅದನ್ನು ಬದಲಾಯಿಸಬಹುದು ಅಥವಾ ಹಲವು ಸೂಚನೆಗಳನ್ನು ಕೊಟ್ಟು ಮತ್ತೆ ಮೊಕದ್ದಮೆಯನ್ನು ಹಿಂದಕ್ಕೆ ಕಳುಹಿಸಬಹುದು.ಒಟ್ಟಿನಲ್ಲಿ ಆಡಳಿತ ಮಂಡಲಿಯ ವಿರುದ್ಧವೂ ಉನ್ನತ ಮಟ್ಟದ ಡಿಸ್ಟ್ರಿಕ್ಟ್ ಕೋರ್ಟು, ಹೈಕೋರ್ಟು, ಸುಪ್ರೀಂ ಕೋರ್ಟುಗಳಿಗೆ ಅಪೀಲು ಹೋಗಲು ಅವಕಾಶವಿರುವುದರಿಂದ ಆಡಳಿತ ಕಾನೂನು ಮತ್ತು ಮಂಡಲಿಯಿಂದ ಆಗಬಹುದಾದ ಅನಾನುಕೂಲಗಳು ಆದಷ್ಟು ಕಡಿಮೆಯಾಗಿವೆ.

ಉಲ್ಲೇಖಗಳು[ಬದಲಾಯಿಸಿ]