ವಿಷಯಕ್ಕೆ ಹೋಗು

ಅಯ್ಯಶಾಸ್ತ್ರೀ, ಕವಿತಿಲಕ ಸೋಸಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕವಿತಿಲಕ ಸೋಸಲೆ ಅಯ್ಯಶಾಸ್ತ್ರಿ : - (1854-1934). ಕನ್ನಡ ಸಾಹಿತ್ಯ ಆಧುನಿಕ ಯುಗವನ್ನು ಪ್ರವೇಶಮಾಡುತ್ತಿದ್ದ ಸಂಧಿಕಾಲದಲ್ಲಿ ಸಾಂಪ್ರದಾಯಿಕ ಮಾರ್ಗದಲ್ಲಿ ಕಾವ್ಯರಚನೆ ಮಾಡಿದ ಹೆಸರಾಂತ ಕವಿಗಳಲ್ಲಿ ಒಬ್ಬರು. ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳು, ಅಳಿಯ ಲಿಂಗರಾಜ ಅರಸಿನವರು, ನಂದಳಿಕೆ ಲಕ್ಷ್ಮಿನಾರಣಪ್ಪ (ಮುದ್ದಣ್ಣ) ಇವರ ಸಮಕಾಲೀನರು. ಆಗತಾನೇ ರೂಪುಗೊಳ್ಳುತ್ತಿದ್ದ ಕನ್ನಡ ರಂಗಭೂಮಿಗೂ ಕನ್ನಡ ನಾಟಕ ಸಾಹಿತ್ಯಕ್ಕೂ ಸೇವೆ ಸಲ್ಲಿಸಿದವರಲ್ಲಿ ಮೊದಲಿಗರು.

ಶಾಸ್ತ್ರಿಗಳು (1854)ನೆಯ ಮಾರ್ಚ್ (20)ರಂದು ಮೈಸೂರು ಜಿಲ್ಲೆಯ ತಿರುಮಕೊಡಲು ನರಸೀಪುರ ತಾಲ್ಲೂಕು ಸೋಸಲೆಯಲ್ಲಿ ಜನಿಸಿದರು. ಸ್ಮಾರ್ತಬ್ರಾಹ್ಮಣಪಂಗಡಕ್ಕೆ ಸೇರಿದ ವೇ|| ಗರಳಪುರಿ ಶಾಸ್ತ್ರಿಗಳು ಇವರ ತಂದೆ. ಗರಳಪುರಿಯವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಮಹಾವಿದ್ವಾಂಸರಾಗಿಯೂ ಚಾಮರಾಜ ಒಡೆಯರ ಸಂಸ್ಕøತೋಪಾಧ್ಯಾಯರಾಗಿಯೂ ಇದ್ದರು; ಸಂಸ್ಕøತದಲ್ಲಿ ಗ್ರಂಥರಚನೆ ಮಾಡಿದ್ದರು. ಹೀಗೆ, ಅಯ್ಯಶಾಸ್ತ್ರಿಗಳ ಹುಟ್ಟು ವಿದ್ವಾಂಸ ಮನೆತನದಲ್ಲಿ ಆಯಿತು. ಶಾಸ್ತ್ರಿಗಳಿಗೆ ಇಟ್ಟಿದ್ದ ಹೆಸರು ವೆಂಕಟಸುಬ್ಬಶರ್ಮ. ತಂದೆ ಕರೆಯುತ್ತಿದ್ದ ಅಯ್ಯ ಎಂಬ ಅಡ್ಡಹೆಸರೇ ರೂಢಿಗೆ ಬಂದು, ಮುಂದೆ ಅಯ್ಯಶಾಸ್ತ್ರಿ ಎಂದೇ ಪ್ರಸಿದ್ದರಾದರು.

ವಿದ್ಯಾಭ್ಯಾಸ

[ಬದಲಾಯಿಸಿ]

ತಂದೆಯ ಕೋರಿಕೆಯಂತೆ ಅವರ ಶಿಷ್ಯರಾಗಿದ್ದ ಪೆರಿಯಸ್ವಾಮಿ ತಿರುನಮಲಾಚಾರ್ಯರ ಬಳಿ ಅಯ್ಯಶಾಸ್ತ್ರಿಗಳು ಕಾವ್ಯ, ಅಲಂಕಾರಶಾಸ್ತ್ರ, ತರ್ಕ, ವ್ಯಾಕರಣ ಮುಂತಾದುವನ್ನು ವ್ಯಾಸಂಗಮಾಡಿದರು. ಶಾಸ್ತ್ರಿಗಳಿಗೆ ಬಾಲ್ಯದಿಂದಲೂ ಸಂಸ್ಕøತ ಕವಿತಾರಚನೆಯಲ್ಲಿ ಆಸಕ್ತಿ; ಇದಕ್ಕೆ ಗುರುಹಿರಿಯರ ಉತ್ತೇಜನವೂ ಇತ್ತು. ಕನ್ನಡ ಕವಿತ್ವದಲ್ಲಿ ಇವರಿಗೆ ಒಲುಮೆ ಬಲುಮೆಗಳು ಉಂಟಾದದ್ದು ಅಳಿಯ ಲಿಂಗರಾಜರ ಹಾಗೂ ಬಸವಪ್ಪಶಾಸ್ತ್ರಿಗಳ ಸಹವಾಸ. ಉತ್ತೇಜನ, ಮಾರ್ಗದರ್ಶನಗಳಿಂದ. ಜೊತೆಗೆ, ಸ್ವಂತ ವ್ಯಾಸಂಗದಿಂದಲೂ ಶಾಸ್ತ್ರಿಗಳು ಕನ್ನಡ ಪಾಂಡಿತ್ಯವನ್ನು ಬಲಪಡಿಸಿಕೊಂಡರು. ಇವರು ಕೆಲವು ವರ್ಷಗಳ ಕಾಲ ಸದ್ವಿದ್ಯಾಪಾಠಶಾಲೆಯಲ್ಲೂ ಭಾಷೋಜ್ಜೀವಿನೀ (ಕನ್ನಡ) ಪಾಠಶಾಲೆಯಲ್ಲೂ ಸಂಸ್ಕøತ, ಕನ್ನಡ ಭಾಷಾಬೋಧಕರಾಗಿದ್ದರು. ಅದೇ ಸುಮಾರಿನಲ್ಲಿ (1887-88) ಚಾಮರಾಜ ಒಡೆಯರ ಅಪ್ಪಣೆಯಂತೆ, ಅರಮನೆಯ ಜಗನ್ಮೋಹನ ಮುದ್ರಾಕ್ಷರ ಶಾಲೆಯಲ್ಲಿ ಸಂಸ್ಕøತ ಕನ್ನಡ ಗ್ರಂಥಗಳ ಪರಿಶೋಧಕ ಪಂಡಿತರಾಗಿ ಕೆಲಸ ಮಾಡಿದರು. ಆಗ ಇವರು ಪರಿಶೋಧಿಸಿದ ಕನ್ನಡ ಗ್ರಂಥಗಳು: ಕರ್ಣಾಟಕ ಶಬ್ದಾನುಶಾಸನ, ಕರ್ಣಾಟಕ ಕಾದಂಬರಿ ನಾಗರಸನ ಕರ್ಣಾಟಕ ಭಗವದ್ಗೀತೆ, ಕರ್ಣಾಟಕ ವಚನಭಾರತ.

ವೃತ್ತಿಜೀವನ

[ಬದಲಾಯಿಸಿ]

ಚಾಮರಾಜ ಒಡೆಯರ ಅನುಜ್ಞೆಯಂತೆ ಶಾಸ್ತ್ರಿಗಳು ಕೆಲವು ಕಾಲ ರಾಜಕುಮಾರಿಯರ ಉಪಾಧ್ಯಕ್ಷರಾಗಿದ್ದರು. ಆ ಕಾಲದಲ್ಲಿ ಶಾಸ್ತ್ರಿಗಳ ಗ್ರಂಥರಚನೆಗೆ ಪ್ರಭುಗಳಿಂದ ವಿಶೇಷ ಪ್ರೋತ್ಸಾಹ ದೊರಕಿತು. ಸಾಂಗಲಿಯ ಮಹಾರಾಷ್ಟ್ರ ನಾಟಕ ಸಂಘವೊಂದು ಮೈಸೂರಿನಲ್ಲಿ ಆಡಿದ ಮರಾಠಿ ನಾಟಕಗಳು ಪ್ರಭುಗಳನ್ನು ಆಕರ್ಷಿಸಿದುವು. ಕನ್ನಡದಲ್ಲೂ ನಾಟಕಗಳನ್ನು ಬರೆಯಿಸಿ ಆಡಿಸಬೇಕೆಂಬ ತೀವ್ರ ಅಭಿಲಾಷೆ ಅವರಲ್ಲಿ ಮೊಳೆಯಿತು. ಆ ಕಾಲದಲ್ಲಿ ಚಾಮರಾಜ ಒಡೆಯರೊಂದಿಗೆ ಬೊಂಬಾಯಿಗೆ ಹೋಗಿ ಅಲ್ಲಿ ಪಾರ್ಸಿ ನಾಟಕಗಳನ್ನು ನೋಡಿಕೊಂಡು ಬಂದವರಲ್ಲಿ ಅಯ್ಯಶಾಸ್ತ್ರಿಗಳೂ ಒಬ್ಬರು. ಅಲ್ಲಿಂದ ಹಿಂದಿರುಗಿದ ಮೇಲೆ ಪ್ರಭುಗಳು ತಮ್ಮ ಆಸ್ಥಾನಕವಿಗಳಿಂದ ನಾಟಕಗಳನ್ನು ಬರೆಸಿದರು: ಅರಮನೆಯಲ್ಲಿ ನಾಟಕಸಂಘವೊಂದನ್ನು ಸ್ಥಾಪಿಸಿದರು. ಹೀಗೆ, ರಾಜರ ಪ್ರೋತ್ಸಾಹದಿಂದ ಅಯ್ಯಶಾಸ್ತ್ರಿಗಳು ಕಾಳಿದಾಸನ ವಿಕ್ರಮೋರ್ವಶೀಯವನ್ನು ಓದುವವರಿಗೂ ನಾಟಕದವರಿಗೂ ಅನುಕೂಲವಾಗುವಂತೆ ಅನುವಾದ ಮಾಡಿದರು (1891). ಇದೇ ಉದ್ದೇಶದಿಂದ ಪೂರ್ವದಲ್ಲಿ ಹಿಂದೂಸ್ಥಾನಿ ಭಾಷಯಲ್ಲಿದ್ದ ಪ್ರತಾಪಸಿಂಹಚರಿತ್ರೆ ನಾಟಕವನ್ನೂ ಕನ್ನಡಕ್ಕೆ ಪರಿವರ್ತಿಸಿದರು (ಅಚ್ಚಾದದ್ದು 1930). ಶಾಸ್ತ್ರಿಗಳು ರಚಿಸಿದ ಸ್ವಂತ ನಾಟಕವೆಂದರೆ, ರಾಮಾಯಣದ ಸಂಪೂರ್ಣ ಕಥೆಯನ್ನು ಒಳಗೊಂಡ ಶ್ರೀ ರಾಮಾಯಣನಾಟಕಂ (ಅಚ್ಚಾದದ್ದು 1904). ಇವರಿಂದ ರಚಿತವಾದ ಇನ್ನೊಂದು ನಾಟಕ ನಳಚರಿತ್ರೆ. ಇವುಗಳಲ್ಲಿ ವಿಕ್ರಮೋರ್ವಶೀಯ ಮೊಟ್ಟಮೊದಲು ಅರಮನೆಯ ನಾಟಕಸಂಘದವರಿಂದ ಪ್ರದರ್ಶಿತವಾಯಿತು. ಸಂಘದ ಮೇಲ್ವಿಚಾರಣೆ ಕೆಲವುಕಾಲ ಶಾಸ್ತ್ರಿಗಳ ಕೈಯಲ್ಲಿತ್ತು. ಹೀಗೆ, ಕನ್ನಡ ನಾಟಕ ಸಾಹಿತ್ಯದ ಹಾಗೂ ರಂಗಭೂಮಿಯ ಬೆಳವಣಿಗೆಯ ಆರಂಭಾವಸ್ಥೆಯಲ್ಲಿ ಶಾಸ್ತ್ರಿಗಳು ಗಮನಾರ್ಹ ಪಾತ್ರವನ್ನು ವಹಿಸಿದ್ದರು.

ಕಾವ್ಯಗಳು

[ಬದಲಾಯಿಸಿ]

ಚಾಮರಾಜ ಒಡೆಯರ ಪಟ್ಟಾಭಿಷೇಕದ (1884) ಸಂದರ್ಭದಲ್ಲಿ ಆ ಮಹೋತ್ಸವವನ್ನು ಕುರಿತು ಅಯ್ಯಶಾಸ್ತ್ರಿಗಳು ಸಂಸ್ಕøತ ಚಂಪೂಕಾವ್ಯವೊಂದನ್ನು ರಚಿಸಿದರು. ಅದೇ ಅವರ ಮೊದಲ ಕಾವ್ಯ. ಅವರ ಒಲವು ಕನ್ನಡದ ಕಡೆಗೆ ಹರಿದ ಮೇಲೆ, ಮೈಸೂರು ಮಹಾರಾಜಚರಿತಂ ಎಂಬ ಚಂಪೂಕಾವ್ಯವನ್ನೂ ವಾರ್ಧಕ ಷಟ್ಪದಿಯಲ್ಲಿ ಶೇಷರಾಮಾಯಣಂ ಎಂಬ ಪದ್ಯಮಹಾಕಾವ್ಯವನ್ನೂ (1901) ದಮಯಂತೀಚರಿತ್ರೆ, ಯಕ್ಷಪ್ರಶ್ನೆ, ರಾಜಭಕ್ತಿಲಹರಿ ಎಂಬ ಇತರ ಕೆಲವು ಷಟ್ಪದೀ ಕಾವ್ಯಗಳನ್ನೂ ರಚಿಸಿದರು. ಆಗ್ಗೆ ದಮಯಂತೀಚರಿತ್ರೆ ಜನಪ್ರಿಯವೆನಿಸಿತ್ತು.

ಪ್ರಶಸ್ತಿಗಳು

[ಬದಲಾಯಿಸಿ]

ಶಾಸ್ತ್ರಿಗಳ ಉಭಯ ಭಾಷಾಪಾಂಡಿತ್ಯ ಮತ್ತು ಕವಿತಾಸಾಮಥ್ರ್ಯಗಳನ್ನು ಮೆಚ್ಚಿ, (1905)ರಲ್ಲಿ ಮಹಾವಿದ್ವಾನ್ ಪದವಿಯನ್ನೂ (1902)ರಲ್ಲಿ ಕವಿತಿಲಕ ಎಂಬ ಬಿರುದನ್ನೂ ನಾಲ್ಮಡಿ ಕೃಷ್ಣರಾಜ ಒಡೆಯರು ಅವರಿಗೆ ದಯಪಾಲಿಸಿದರು.

ಕಾವ್ಯಗಳು

[ಬದಲಾಯಿಸಿ]

ಶಾಸ್ತ್ರಿಗಳ ಸ್ವಂತ ಕನ್ನಡಕಾವ್ಯಗಳಲ್ಲಿ ಶೇಷರಾಮಾಯಣ ಎಲ್ಲ ದೃಷ್ಟಿಗಳಿಂದಲೂ ಮೇಲಾದುದು. ಉತ್ತರರಾಮಾಯಣದ ರಾಮಾಶ್ವಮೇಧದ ಕಥಾಭಾಗವನ್ನು ಪದ್ಮಪುರಾಣೋಕ್ತ ರೀತಿಯಿಂದ ಕನ್ನಡಿಗರಿಗೆ ಸುಲಭವಾಗಿ ತಿಳಿಯುವಂತೆ ನಿರೂಪಣೆ ಮಾಡುವುದು ಕಾವ್ಯದ ಉದ್ದೇಶ. ಕಥೆಯ ವಿವರಗಳಲ್ಲಿ ಇದು ಮುದ್ದಣನ ರಾಮಾಶ್ವಮೇಧವನ್ನು ಹೋಲುತ್ತದೆ; ಶೈಲಿಯಲ್ಲಿ ಲಕ್ಷ್ಮೀಶನ ಜೈಮಿನಿಭಾರತದ ಪ್ರಭಾವ ಕಂಡುಬರುತ್ತದೆ.

ಅಯ್ಯಶಾಸ್ತ್ರಿಗಳು ಸಂಸ್ಕøತದಲ್ಲಿ ಚಾಮರಾಜೇಂದ್ರ ಪಟ್ಟಾಭಿಷೇಕ ಮತ್ತು ಕೃಷ್ಣಾಂಬಾಪರಿಣಯ ಎಂಬ ಚಂಪೂಕಾವ್ಯಗಳನ್ನೂ ದಶಸ್ತೋತ್ರ, ಆಶೀರ್ವಚನ ಪಂಚಕ, ಭಗವತ್ಪಾದಾಚಾರ್ಯಪ್ರಶಂಸೆ-ಇವೇ ಮುಂತಾದ ಸಣ್ಣ ಕವಿತೆಗಳನ್ನೂ ರಚಿಸಿರುತ್ತಾರೆ. (ಎಂ.ವಿ.ಎಸ್.)