ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್
ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್ | |
---|---|
ಜನನ | ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್ ೧೮೫೭ ಡಿಸೆಂಬರ್ ೧೬ ಅಮೇರಿಕ |
ರಾಷ್ಟ್ರೀಯತೆ | ಅಮೇರಿಕ |
ಅಮೇರಿಕದ ಖಗೋಳವಿಜ್ಞಾನಿಯಾಗಿದ್ದ ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್‌ರವರು ೧೮೫೭ರ ಡಿಸೆಂಬರ್ ೧೬ರಂದು ಟೆನ್ನೆಸ್ಸೀಯ ನಾಶ್‌ವಿಲ್ಲೆಯಲ್ಲಿ ಜನಿಸಿದರು. ೧೮೮೯ರಲ್ಲಿ ಅವರು ಶನಿಗ್ರಹದ ಉಂಗುರಗಳ ವೃತ್ತಾಕಾರದ ಕಕ್ಷೆಗೆ ಸಮಾಂತರವಾಗಿರುವ ಕಪ್ಪು ಛಾಯೆಗಳನ್ನು ಕಂಡುಹಿಡಿದರು. ಆಗ ಆ ಸಂಶೋಧನೆ ಚರ್ಚೆಗೆ ಎಡೆಮಾಡಿದರೂ, ನಂತರ ವ್ಯೋಮನೌಕೆ ವಾಯೇಜರ್-೧ ಅವರ ಸಂಶೋಧನೆಯನ್ನು ದೃಢಪಡಿಸಿತು. ತಾರೆಗಳ ಸ್ಪೋಟದ ಸಮಯದಲ್ಲಿ ಸೃಷ್ಟಿಯಾಗುವ ಅನಿಲ ಉತ್ಸರ್ಜನೆಯನ್ನು ಅವರು ೧೮೯೨ರಲ್ಲಿ ಕಂಡುಹಿಡಿದರು. ಅದೇ ವರುಷ ಅವರು ಗುರುಗ್ರಹದ ಐದನೆಯ ಚಂದ್ರವಾದ ’ಅಮಾಲ್‌ಥಿಯಾ’ವನ್ನು ಕಂಡುಹಿಡಿದರು. ಗೆಲಿಲಿಯೋ ಗೆಲಿಲೈ (೧೫೬೪-೧೬೪೨) ೧೬೦೯ರಲ್ಲಿ ಗುರುಗ್ರಹದ ಮೊದಲ ನಾಲ್ಕು ಚಂದ್ರರನ್ನು ಕಂಡುಹಿಡಿದಿದ್ದರು.[೧] ನಂತರ ಗುರುಗ್ರಹದ ಚಂದ್ರನನ್ನು ಕಂಡುಹಿಡಿದ ಮೊದಲ ವ್ಯಕ್ತಿ ಬರ್ನಾರ್ಡ್ ಆಗಿದ್ದಾರೆ. ೧೮೯೫ರಲ್ಲಿ ಬರ್ನಾರ್ಡ್‌ರವರು ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಅವರು ಆ ಅವಧಿಯಲ್ಲಿ ಕ್ಷೀರ ಪಥದ ಛಾಯಾಚಿತ್ರಗಳನ್ನು ತೆಗೆದರು. ನಂತರ ಅವರು ಜರ್ಮನಿಯ ಖಗೋಳವಿಜ್ಞಾನಿ ಮ್ಯಾಕ್ಸ್ ವುಲ್ಫ್‌ರವರ (೧೮೬೩-೧೯೩೨) ಜೊತೆಗೂಡಿ ಗೆಲಕ್ಸಿಯ ಕಪ್ಪು ಪ್ರದೇಶಗಳು ವಾಸ್ತವವಾಗಿ ಅನಿಲ ಮತ್ತು ಧೂಳಿನ ಮೋಡಗಳಾಗಿವೆ ಎಂಬುದಾಗಿ ಕಂಡುಹಿಡಿದರು.[೨] ಅವರು ೧೯೧೬ರಲ್ಲಿ ಮುಂದೆ ’ಬರ್ನಾರ್ಡ್ ನಕ್ಷತ್ರ’ ಎಂಬುದಾಗಿ ನಾಮಕರಣ ಮಾಡಲಾದ ನಕ್ಷತ್ರವನ್ನು ಕಂಡುಹಿಡಿದರು. ಬರ್ನಾರ್ಡ್ ನಕ್ಷತ್ರವ್ಯವಸ್ಥೆ ನಮ್ಮ ಸೂರ್ಯನಿಗೆ ಹತ್ತಿರವಾಗಿರುವ ಆಲ್ಫಾ ಸೆಂಟಾರಿ ನಕ್ಷತ್ರವ್ಯವಸ್ಥೆಯ ನಂತರದ ನಕ್ಷತ್ರ ವ್ಯವಸ್ಥೆಯಾಗಿದೆ. ಬರ್ನಾರ್ಡ್‌ರವರು ೧೯೨೩ರ ಫೆಬ್ರವರಿ ೬ರಂದು ವಿಸ್ಕೋಸಿನ್‌ನ ವಿಲಿಯಂಸ್ ಬೇಯಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ http://www.britannica.com/biography/Edward-Emerson-Barnard
- ↑ "ಆರ್ಕೈವ್ ನಕಲು". Archived from the original on 2011-09-17. Retrieved 2016-04-24.