2008ರ ಮುಂಬೈ ದಾಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

2008ರ ಮುಂಬಯಿ ದಾಳಿ[ಬದಲಾಯಿಸಿ]

ದಾಳಿಗೊಳಗಾದ ಮುಂಬಯಿ ನಗರದ ಪ್ರಮುಖ ಸ್ಥಳಗಳು

೨೦೦೮ರ ನವೆಂಬರ್ ನಲ್ಲಿ ಪಾಕಿಸ್ತಾನ ಮೂಲದ ಇಸ್ಲಾಂ ಮೂಲಭೂತವಾದದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸುಮಾರು ೧೨ ಜನ ಉಗ್ರರು ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ಭಾರತದ ಒಳ ನುಸುಳಿದ್ದು ಅಲ್ಲದೆ ಸತತ ಮೂರು ದಿನಗಳ ಕಾಲ ಮುಂಬಯಿ ನಗರವನ್ನು ಗುರಿಯಾಗಿಸಿಕೊಂಡು[೧] ಬಾಂಬು ಮತ್ತು ಗುಂಡಿನ ಮಳೆಗರೆದು ಸಾರ್ವಜನಿಕ ಜೀವನ ಹಾಗು ಅಪಾರ ಆಸ್ತಿ-ಪಾಸ್ತಿ ನಷ್ಟಗಳಿಗೆ ಕಾರಣರಾದರು. ಮುಂಬಯಿ ಮಹಾನಗರ ಮೂರು ದಿನಗಳ ಕಾಲ ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಸಿಲುಕಿ ಅಕ್ಷರಶಃ ನರಕ ದರ್ಶನ ಮಾಡಿತು. ದಾಳಿ ಮುಗಿದು ಎಲ್ಲ ಉಗ್ರರನ್ನು ಭಾರತದ ಸೇನೆ ಹಾಗು ದೇಶದ ಆಂತರಿಕ ಪೋಲಿಸ್ ಪಡೆ ಹತ್ಯೆ ಮಾಡಿತು. ಅದರಲ್ಲಿ ಒಬ್ಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸಫಲವಾಯಿತು.

೨೦೦೮ರ ನವೆಂಬರ್ ೨೬ ರಂದು ಆರಂಭವಾದ ದಾಳಿ ೨೯ರ ಶನಿವಾರದವರೆಗೂ ಬಿರುಸಾಗಿ ನಡೆಯಿತು. ಅಷ್ಟರಲ್ಲಿ ದೇಶದ ಸೇನಾ ಪಡೆಯೂ ಮುಂಬಯಿಗೆ ಧಾವಿಸಿ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಮೊದಲಾಯಿತು. ದಾಳಿಯ ಫಲವಾಗಿ ಸರ್ಕಾರಿ ಅಧಿಕಾರಿಗಳೂ, ಸಿಪಾಯಿಗಳು, ಸಾರ್ವಜನಿಕರೂ ಸೇರಿದಂತೆ ೧೬೪ ಜನ ಪ್ರಾಣ ಕಳೆದುಕೊಂಡರು ಹಾಗೂ ೪೦೦ಕ್ಕೂ ಮಿಗಿಲಾಗಿ ಗಾಯಾಳುಗಳಾಗಿ ಚಿಕಿತ್ಸೆ ಪಡೆದರು. ಮುಂಬಯಿ ನಾಗರೀಕರು, ವಾಣಿಜ್ಯವಲಯದ ಪ್ರಮುಖರು ಒಳಗೊಂಡು ಮುಂಬಯಿ ವಾಸಿಗಳೆಲ್ಲರೂ ತಾವ್ರ ಆತಂಕಕ್ಕೆ ಈಡಾಗಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಭದ್ರತಾ ಸುರಕ್ಷತೆಯ ಬಗ್ಗೆ ಚರ್ಚೆಗಳು ನಡೆದವು. ಈ ಮಧ್ಯೆ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ತಾನೇ ಹೊತ್ತುಕೊಂಡಿತು. ದಕ್ಷಿಣ ಮುಂಬಯಿನ ಎಂಟು ವಿವಿಧ ಸ್ಥಳಗಳಲ್ಲಿ ದಾಳಿಗಳು ನಡೆದವು. ಮುಂಬಯಿ ಹೃದಯ ಭಾಗವಾದ ಛತ್ರಪತಿ ಶಿವಾಜಿ ಟರ್ಮಿನಸ್, ಗಣ್ಯರು ಹಾಗು ವಿದೇಶಿಗಳು ಹೆಚ್ಚಾಗಿ ಇರುವಂತಹ ಒಬೆರಾಯ್ ಟ್ರೈಡೆಂಟ್, ವಿಶ್ವ ವಿಖ್ಯಾತ ತಾಜ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಕಾಮಾ ಹಾಸ್ಪಿಟಲ್, ನಾರಿಮನ್ ಹೌಸ್, ಮೆಟ್ರೋ ಸಿನೆಮಾ, ಸೆಂಟ್ ಕ್ಸೇವಿಯರ್ ಕಾಲೇಜು ದಾಳಿಗೆ ಸಾಕ್ಷಿಯಾದ ಸ್ಥಳಗಳು. ಮೇಜ್ ಗಾವ್ ನಲ್ಲಿ ಒಂದು ಬಾಂಬನ್ನು ಸ್ಪೋಟಿಸಲಾಯಿತು. ೨೮ರಂದು ದಾಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತ ಮುಂಬಯಿ ಪೋಲಿಸರು ಹಾಗು ಸ್ಥಳದಲ್ಲಿ ಲಭ್ಯವಿದ್ದ ಸೇನಾ ಪಡೆ ತಾಜ್ ಹೋಟೆಲ್ ಒಂದನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಆದರೆ ತಾಜ್ ಹೋಟೆಲ್ ಒಳಗೆ ಅವಿತುಕೊಂಡು ನಿರಂತರವಾಗಿ ದಾಳಿ ಮಾಡುತ್ತಿದ್ದ ಉಗ್ರರನ್ನು ಸೆದೆ ಬಡಿಯಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ದೇಶದ ಇತರ ಸ್ಥಳಗಳಿಂದ ಮುಂಬಯಿಗೆ ರಾಷ್ಟ್ರೀಯ ಭದ್ರತಾಪಡೆಗಳನ್ನ ರವಾನಿಸಲಾಯಿತು. ನವೆಂಬರ್ ೨೯ರ ದಿನಾಂತ್ಯ ದಷ್ಟರಲ್ಲಿ ಎಲ್ಲ ದಾಳಿಕೋರರನ್ನು ಕೊಂದು ಒಬ್ಬನನ್ನು ಸೆರೆ ಹಿಡಿಯುವಲ್ಲಿ ಭದ್ರತಾ ಪಡೆ ಸಫಲವಾಯಿತು. ಆತನೇ ಅಜ್ಮಲ್ ಕಸಾಬ್.

ತಾಜ್ ಮಹಲ್ ಹೋಟೆಲ್ ರಾತ್ರಿ ಬೆಳಕಿನಲ್ಲಿ

ದಾಳಿಯ ಹಿನ್ನೆಲೆ[ಬದಲಾಯಿಸಿ]

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ, ಆರ್ಥಿಕತೆ, ಸೇನೆ, ವ್ಯಾಪಾರ, ವಹಿವಾಟು ವಿಚಾರಗಳಲ್ಲಿ ಸದಾ ಮುಂದಿರುವ ಭಾರತದ ನಗರ ಮುಂಬಯಿ. ಈ ಕಾರಣಗಳಿಗೆ ಭಯೋತ್ಪಾದಕರ, ದೇಶ ದ್ರೋಹಿಗಳ ಕಣ್ಣು ಮೊದಲು ಬೀಳುವುದು ಮುಂಬಯಿ ನಗರದ ಮೇಲೆಯೇ. ದೆಹಲಿಯು ದೇಶದ ರಾಜಧಾನಿಯಾದರೂ ಬರಿ ಅಧಿಕಾರ ಕೇಂದ್ರವಾಗಿ ಹೆಸರಾಗಿದೆ, ಆದರೆ ಮುಂಬಯಿ ನಗರ ದೇಶದ ಹೃದಯದಂತಿದ್ದು ದೇಶದ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಹಾನಗರವಾಗಿದೆ ಕೂಡ. ದೇಶದಲ್ಲೇ ಅತ್ಯಂತ ಸುಸಜ್ಜಿತವೆನ್ನಬಹುದಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವನವೀನ ತಂತ್ರಜ್ಞಾನದ ಫಲವಾಗಿ ಇತ್ತೀಚಿನ ಮಾನೋ ರೈಲು. ಶೀಘ್ರ ಸಾರಿಗೆಗೆ ಅನುವಾಗಲು ಮೆಟ್ರೋ ರೈಲು ಇನ್ನು ಮುಂತಾದ ಸೌಲಭ್ಯಗಳನ್ನು ಮಹಾನಗರಕ್ಕೆ ಒದಗಿಸಿದ ಹೊರತಾಗಿಯೂ ಕೂಡ ಭದ್ರತೆಯಲ್ಲಿ ಲೋಪವಿದೆ ಎನ್ನಬಹುದಾದ ದಾಳಿಗಳು ಈ ಹಿಂದೆ ನಡೆದಿವೆ, ಹೀಗಾಗಿ ಮುಂಬಯಿ ನಗರ ಭಯೋತ್ಪಾದಕರ ದಾಳಿಗೆ ಹೆಚ್ಚು ಬಾರಿ ಗುರಿಯಾದ ಭಾರತದ ನಗರ ಎಂಬ ಅಪಖ್ಯಾತಿಗೆ ಕೂಡ ಭಾಜನವಾಗಿ ಬಿಟ್ಟಿದೆ. ಮಹಾನಗರಿ, ದೇಶದ ಆರ್ಥಿಕ ರಾಜಧಾನಿ ಮುಂಬಯಿ ನಗರದ ಮೇಲೆ ನಡೆದ ದಾಳಿ ಇದೇ ಮೊದಲಲ್ಲ.

  • ೧೯೯೩ರ ಮಾರ್ಚ್ ೧೨ರನ್ದು ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಬರೋಬ್ಬರಿ ೨೫೭ ಜನ ಆಹುತಿಯಾಗಿ, ಸುಮಾರು ೭೦೦ ಜನ ಗಾಯಾಳುಗಳಾಗಿದ್ದರು. ಆದರೆ ಆ ಸಮಯದಲ್ಲಿ ಆ ದಾಳಿಗೂ ಬಾಬ್ರಿ ಮಸೀದಿ ದ್ವಂಸಕ್ಕೂ ಸಂಬಂಧ ಕಲ್ಪಿಸಲಾಗಿತ್ತು, ಹಾಗು ಅದೇ ಮುಖ್ಯ ಕಾರಣವೆಂದೂ ನಂಬಲಾಗಿತ್ತು.
  • ೨೦೦೨ ಡಿಸೆಂಬರ್ ೬ರಂದು ಘಾಟ್ಕೊಪರ್ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಅಸುನೀಗಿ, ಸುಮಾರು ೨೮ ಜನ ಗಾಯಗೊಂಡಿದ್ದರು. ಈ ಸ್ಫೋಟವನ್ನು ಅಯೋಧ್ಯೆಯ ಬಾಬ್ರಿ ಮಸೀದಿ ದ್ವಂಸದ ಒಂದು ದಶಕದ ಜ್ಞಾಪಕಾರ್ಥವಾಗಿಯೇ ಸ್ಫೋಟಿಸಲಾಗಿದೆ ಎಂಬ ಅನುಮಾನಗಳು ಇನ್ನೂ ಇವೆ.
  • ೨೦೦೩ರ ಜನವರಿ ೨೭ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯೀಯವರು ಮುಂಬಯಿಗೆ ಭೇಟಿ ಕೊಡುವ ಮುನ್ನಾ ದಿನ ವಿಲೇ ಪಾರ್ಲೆ ರೈಲು ನಿಲ್ದಾಣದಲ್ಲಿ ಬೈಸಿಕಲ್ ಬಾಂಬ್ ಒಂದು ಸ್ಫೋಟವಾಗಿ ಓರ್ವ ವ್ಯಕ್ತಿ ಸತ್ತು, ೨೫ ಜನ ಗಾಯಾಳುಗಳಾದರು.
  • ೨೦೦೩ ರ ಮಾರ್ಚ್ ೧೩ರಂದು ಅಂದರೆ ಸರಿಯಾಗಿ ಬಾಬ್ರಿ ಮಸೀದಿ ದ್ವಂಸವಾಗಿ ಒಂದು ದಶಕ ಪೂರೈಸಿದ ಮರು ದಿನವೇ ಮುಂಬಯಿ ನ ಮುಲುಂಡ್ ರೈಲುನಿಲ್ದಾಣದ ಬಳಿ ಚಲಿಸುತ್ತಿರುವ ರೈಲಿನ ಒಂದು ಬೋಗಿಯಲ್ಲಿ ಬಾಂಬ್ ಸ್ಫೋಟವಾಗಿ ೧೦ ಜನ ಸತ್ತು, ಸುಮಾರು ೭೦ ಜನ ಗಾಯಾಳುಗಳಾಗುತ್ತಾರೆ.
  • ೨೦೦೩ರ ಜುಲೈ ೨೮ ರಂದು ಮುಂಬಯಿ ನಗರ ಸಾರಿಗೆಗೆ ಸೇರಿದ ಬಸ್ ಒಂದು ಘಾಟ್ಕೋಪರ್ ಎಂಬಲ್ಲಿ ಚಲಿಸುತ್ತಿದ್ದಾಗ ಬಸ್ ನ ಒಳಗೆ ಬಾಂಬ್ ಸ್ಫೋಟವಾಗಿ ೪ ಜನ ಸತ್ತು, ಸುಮಾರು ೩೨ ಜನ ಗಾಯಾಳುಗಳಾಗುತ್ತಾರೆ.
  • ಅದೇ ವರ್ಷದ ಆಗಸ್ಟ್ ೨೫ರಂದು ದಕ್ಷಿಣ ಮುಂಬಯಿಯಲ್ಲಿ ಎರಡು ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿವೆ. ಸುಪ್ರಸಿದ್ಧ ಗೇಟ್ ವೇ ಆಫ್ ಇಂಡಿಯಾ ಹತ್ತಿರ ಒಂದು ಸ್ಫೋಟವಾದರೆ, ಮತ್ತೊಂದು ಜಾವೇರಿ ಬಜಾರ್ ನಲ್ಲಿ. ಈ ಎರಡು ಸ್ಫೋಟಗಳು ಸುಮಾರು ೪೪ ಜನಗಳನ್ನು ಆಹುತಿ ಪಡೆದು, ೧೫೦ ಜನಗಳು ಗಾಯಾಳುಗಳಾಗುವಂತೆ ಮಾಡಿವೆ.
  • ೨೦೦೬ರ ಜುಲೈ ೧೧ ರಂದು ಬರೀ ೧೧ ನಿಮಿಷಗಳ ಅಂತರದಲ್ಲಿ ಮುಂಬಯಿ ಸಬ್ ಅರ್ಬನ್ ರೈಲ್ವೆಯ ವಿವಿಧ ಸ್ಥಳಗಳಲ್ಲಿ ಏಳು ಬಾಂಬ್ಗಳನ್ನ ಸ್ಫೋಟಿಸಲಾಗಿದೆ. ಈ ಸ್ಫೋಟದಲ್ಲಿ ವಿದೇಶದ ೨೨ ಜನರೂ ಸೇರಿ ಒಟ್ಟು ೨೦೯ಜನ ಅಸುನೀಗಿದ್ದಾರೆ ಹಾಗು ಸುಮಾರು ೭೦೦ ಜನ ಗಾಯಗೊಂಡಿದ್ದಾರೆ. ಮುಂಬಯಿ ಪೋಲಿಸ್ ರ ತನಿಖಾ ಹೇಳಿಕೆ ಪ್ರಕಾರ ಬಾಂಬ್ ಸ್ಫೋಟಿಸಲು ಮುಂದಾಳತ್ವ ವಹಿಸಿದ್ದು ಲಷ್ಕರ್-ಎ-ತೊಯ್ಬಾ ಮತ್ತು ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿಗಳ ಚಳುವಳಿ(SIMI)[೪]

ದೋಣಿಯ ಪರಿಶೀಲನೆ[ಬದಲಾಯಿಸಿ]

ಲಷ್ಕರ್‌ -ಇ- ತಯಬಾ ಉಗ್ರರು 2008ರ ಮುಂಬಯಿ ದಾಳಿಗೆ ಬಳಸಿದ್ದಾರೆ ಎನ್ನಲಾದ ದೋಣಿಯನ್ನು ಪರಿಶೀಲಿಸುವಂತೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ನ್ಯಾಯಾಂಗ ಆಯೋಗಕ್ಕೆ ಆದೇಶ ನೀಡಿದೆ.

ಕರಾಚಿಯಲ್ಲಿರುವ ‘ಅಲ್ಫೋಸ್‌’ ದೋಣಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕಷ್ಟವಾಗಿರುವುದರಿಂದ ನ್ಯಾಯಾಂಗ ಆಯೋಗ ಅಲ್ಲಿಗೆ ತೆರಳಿ ಪರಿಶೀಲಿಸಬೇಕೆಂದು ಪಾಕಿಸ್ತಾನದ ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ಕರಾಚಿಗೆ ತೆರಳಲಿರುವ ಆಯೋಗವು ದೋಣಿ ಪರಿಶೀಲಿಸುವುದರ ಜತೆ ಸಾಕ್ಷಿದಾರ ಮುನೀರ್‌ ಎಂಬಾತನಿಂದ ಹೇಳಿಕೆ ಪಡೆದುಕೊಳ್ಳಲಿದೆ. ಮುಂಬಯಿ ದಾಳಿಯ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಭಾರತ ಪಾಕಿಸ್ತಾನಕ್ಕೆ ಪತ್ರ ಬರೆದ ಬಳಿಕ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ದೋಣಿ ಪರಿಶೀಲನೆಗೆ ಆದೇಶ ನೀಡಿದೆ.

ನೋಡಿ[ಬದಲಾಯಿಸಿ]

ಹೆಚ್ಚನ ಮಾಹಿತಿಗೆ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "26/11 ಮುಂಬೈ ಉಗ್ರರ ದಾಳಿ 8 ವರ್ಷ: ಕರಾಳ ದಿನ ನೆನೆದ ದೇಶದ ಜನತೆ". Archived from the original on 2016-11-27. Retrieved 2017-02-19.
  2. http://www.prajavani.net/news/article/2016/09/29/441385.html
  3. [೧]
  4. How 26/11 Mumbai attack happened in 2008: From first eyewitness to Kasab November 26, 2017