ಕಟುಕಾರಕ
ಕಟುಕಾರಕ ಕಹಿಯಾದ ಕ್ರಿಯಾಂಶವಿರುವ, ಹಸಿವನ್ನು ಹುಟ್ಟಿಸುವ ಮದು (ಬಿಟ್ಟರ್ಸ್). ಇದರಲ್ಲಿ ಎರಡು ಬಗೆಗಳಿವೆ. ಕ್ವಾಸಿಯ ಚಕ್ಕೆ, ಕೆಲಂಬ ಬೇರುಗಳು, ರೇವಲ್ಚಿನ್ನಿ (ರುಬಾರ್ಟ್), ಲೋಳೆಸರ (ಆಲೋಸ್)-ಇವು ಸರಳ ಕಟುಕಾರಕಗಳು. ಪರಿಮಳದ (ಆರೋಮ್ಯಾಟಿಕ್) ಕಟುಕಾರಕಗಳಲ್ಲಿ ಕಿರಾಯತ, ಅಂಗೊಸ್ಪೂರ, ಕ್ಯಾಸ್ಕರಿಲ್ಲ, ಸೀಮೆಸೇವಂತಿಗೆ (ಕ್ಯಾಮೊಮೈಲ್), ಕಾಡುದಾಲ್ಚಿನ್ನಿ, ಚಿರಾಯತ (ಜಂಷಿಯನ್), ನಿಂಬೆ ಅಲ್ಲದೆ ಕಿತ್ತಳೆ ಸಿಪ್ಪೆಗಳಿವೆ. ಇವುಗಳಲ್ಲಿ ಆರಿಹೋಗುವ ಸುವಾಸನೆಯ ಎಣ್ಣೆಗಳಿದ್ದು ರುಚಿ ಕೊಡುವಂತಿವೆ. ಸರಳ ಕಟುಕಾರಕಕ್ಕಿಂತ ಪರಿಮಳದ ಕಟುಕಾರಕ ಹೆಚ್ಚು ಪರಿಣಾಮಕಾರಿ. ಬೇಗನೆ ವರ್ತಿಸುತ್ತದೆ. ಮದ್ಯಾರ್ಕವಾಗಿ (ಟಿಂಕ್ಚರ್) ತಯಾರಾದದ್ದು ಇನ್ನೂ ಸಾರಯುತ.
ಔಷಧವಾಗಿ
[ಬದಲಾಯಿಸಿ]ಕಟುಕಾರಕವನ್ನು ಬಾಯಿಗೆ ಹಾಕಿಕೊಂಡಾಗ ಜೊಲ್ಲುಸುರಿವಂತೆ ಮಾಡಿ, ರುಚಿಕುಡಿಗಳನ್ನು (ಟೇಸ್ಟ್ ಬಡ್ಸ್) ಹಿಮ್ಮುರಿವ ವರ್ತನೆಯಿಂದ (ರಿಫ್ಲೆಕ್ಸ್ ಆಕ್ಷನ್) ಚೋದಿಸಿ ಜಠರ ರಸವನ್ನೂ ಸುರಿಸುವಂತೆ ಮಾಡುತ್ತವೆ. ಆದ್ದರಿಂದಲೇ ಇವನ್ನು ಸುಮ್ಮನೆ ಮಾತ್ರೆಯಂತೆ ನುಂಗಿಬಿಟ್ಟರೆ ಹಸಿವನ್ನು ಹೆಚ್ಚಿಸವು; ಜೊಲ್ಲು, ಜಠರ ರಸಗಳನ್ನೂ ಚೋದಿಸವು. ಬಹಳ ದಿನಗಳು ಹಾಸಿಗೆ ಹಿಡಿದಿರುವ ರೋಗಿಗಳಿಗೆ ಹಸಿವು ಹುಟ್ಟಿಸಲು ಇವು ಬಲು ಸಹಾಯಕ. ಈ ಮದ್ದುಗಳಿರುವ ಪಾನೀಯಗಳನ್ನು ಊಟಕ್ಕೆ ಸು. ಅರೆತಾಸು ಮುನ್ನ ಕೊಡಬೇಕು. ಬಲು ಕಹಿಯಾದ ಕಾಜವಾರವಿಷ (ಸ್ಟ್ರಿಕ್ನೀನ್), ಕ್ವಿನೀನುಗಳಿರುವ ಬಲವರ್ಧಗಳು ಬಳಕೆಯಲ್ಲಿರುವುದು ಸರಿಯಲ್ಲ. ಮೇಲೆ ತಿಳಿಸಿದವಕ್ಕಿಂತ ಇವೇನೂ ಮೇಲ್ತರದವಲ್ಲ.
ತಯಾರಿಕೆ
[ಬದಲಾಯಿಸಿ]ಕಟುಕಾರಕಗಳನ್ನು ಬಹುಮಟ್ಟಿಗೆ ಊರಿದಸಾರವಾಗಿ ತಯಾರಿಸುವರು. ಗಿಡಗಳ ಹೂ, ಎಲೆ, ತೊಗಟೆ ಇಲ್ಲವೇ ಬೇರನ್ನು ಪಾತ್ರೆಯಲ್ಲಿ ಹಾಕಿ ಅದರ ಮೇಲೆ ಕುದಿವ ನೀರನ್ನು ಸುರಿದು, ತುಸು ಹೊತ್ತಾದ ಮೇಲೆ ಬಗ್ಗಿಸಿ ನೀರನ್ನು ಬಸಿದುಕೊಂಡು ಕುಡಿಯಲು ಕೊಡುವುದುಂಟು. ಕೆಲ ವೇಳೆ, ತಣ್ಣೀರಿನ ಸಾರಕವೇ ಸಾಕಾಗುತ್ತದೆ. ಮದ್ಯಸಾರದಿಂದಲೂ ಹೀಗೆ ಸಾರ ತೆಗೆವುದುಂಟು
ಪರಿಣಾಮಗಳು
[ಬದಲಾಯಿಸಿ]ಜಠರದ ಮೇಲೆ ಎಲ್ಲ ಕಟುಕಾರಕಗಳ ಪ್ರಭಾವ ಒಂದೇ ತೆರನಾದರೂ ಕರುಳುಗಳ ಮೇಲಿನ ಪ್ರಭಾವ ಬೇರೆ. ಪರಿಮಳದ ಕಟುಕಾರಕಗಳಲ್ಲಿ ಚೊಗರಿನ (ಅಸ್ಟ್ರಿಂಜೆಂಟ್) ಗುಣವಿರುವ ಟ್ಯಾನಿನ್ ಇರುವುದರಿಂದ ಇವನ್ನು ಬಹಳ ದಿನಗಳು ಸೇವಿಸುತ್ತಿದ್ದರೆ ಮಲಕಟ್ಟುತ್ತದೆ. ಇನ್ನು ಕೆಲವು ಹೊಟ್ಟೆಯಲ್ಲಿನ ವಾಯು ಕಳೆವುವು
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Thirsty Traveler on Bitters Archived 2006-01-11 ವೇಬ್ಯಾಕ್ ಮೆಷಿನ್ ನಲ್ಲಿ.
- Food & Drink: Cocktails: Bitters Are Back
- Historic Recipe for Angostura Bitters Archived 2012-03-03 ವೇಬ್ಯಾಕ್ ಮೆಷಿನ್ ನಲ್ಲಿ.