ಎಂ. ಶಕುಂತಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯದಲ್ಲಿ ಹಿಂದುಳಿದ ಲಂಬಾಣಿ ಜನಾಂಗದಲ್ಲಿ ದಿನಾಂಕ ೧೮-೪-೧೯೪೪ರಂದು ಜನಿಸಿ, ಕಲಾರಂಗಕ್ಕೆ ಹೆಜ್ಜೆಯಿಟ್ಟ ಶಕುಂತಲಾ ತನ್ನ ೫ನೇ ವಯಸ್ಸಿನಿಂದಲೇ ವಿದ್ಯಾಭ್ಯಾಸದೊಂದಿಗೆ ಸಂಗೀತ, ನೃತ್ಯ ಪಾಠಗಳ ಆರಂಭ. ಸಂಗೀತದಲ್ಲಿ ಅನೇಕ ವರ್ಷಗಳ ತರಬೇತಿಯ ನಂತರ ಆಸ್ಥಾನ ವಿದ್ವಾನರಾಗಿ ಖ್ಯಾತಿ ಪಡೆದಿದ್ದಂತಹ ದಿವಂಗತ ಎಸ್.ಎನ್. ಮರಿಯಪ್ಪನವರಲ್ಲಿ ಹೆಚ್ಚಿನ ಶಿಕ್ಷಣ ಪಡೆದು, ಸಂಗೀತ ಕಚೇರಿಗಳನ್ನಿತ್ತಿರುವುದೂ ಉಂಟು. ನೃತ್ಯಾಭ್ಯಾಸ ಸಂಗೀತ ಕಲಾರತ್ನ ಪದ್ಮಭೂಷಣ, ಡಾ|| ಕೆ.ವೆಂಕಟಲಕ್ಷ್ಮಮ್ಮನವರಲ್ಲಿ ಆರಂಭವಾಗಿ ಅನೇಕ ವರ್ಷಗಳ ಗುರುಕುಲ ಪದ್ಧತಿಯ ಅನುಸಾರವಾಗಿ ತರಬೇತಿ ಪಡೆದು ನಂತರ ರಂಗಪ್ರವೇಶ. ಅನಂತರದ ನೃತ್ಯ ಕಾರ್ಯಕ್ರಮಗಳನ್ನು ನೀಡಲು ಆರಂಭ. ವಿನೋಭಾ ಭಾವೆ, ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಇವರೇ ಮುಂತಾದ ಪ್ರಮುಖ ವ್ಯಕ್ತಿಗಳ ಸಮ್ಮುಖದಲ್ಲಿಯೇ ಅಲ್ಲದೆ ವಿದೇಶಿಯರ ಸಮ್ಮುಖದಲ್ಲಿಯೂ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೃತ್ಯ ಪ್ರದರ್ಶನಗಳನ್ನೇ ಅಲ್ಲದೆ ಸ್ವತಃ ಅನೇಕ ನೃತ್ಯ ಸಂಯೋಜನೆಗಳನ್ನು ಮಾಡಿ ಪ್ರದರ್ಶಿಸಿರುವುದೂ ಉಂಟು. ಅಲ್ಲದೆ ರಾಜ್ಯ, ಅಂತರರಾಜ್ಯ , ಸರ್ಕಾರ ಮತ್ತು ಅನೇಕ ಖಾಸಗಿ ಸಂಘ ಸಂಸ್ಥೆಗಳ ವತಿಯಿಂದಲೂ, ಅನೇಕ ಸಂಗೀತ ಸಭೆಗಳ ವತಿಯಿಂದಲೂ ನೃತ್ಯ ಕಾರ್ಯಕ್ರಮಗಳನ್ನಿತ್ತಿರುವುದೇ ಅಲ್ಲದೆ ಪ್ರಾತ್ಯಕ್ಷಿಕ ಉಪನ್ಯಾಸಗಳನ್ನೂ ನೀಡಿ ಯಶಸ್ವಿಯಾಗಿದ್ದು ಅನೇಕ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತಾರೆ. ಅಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಆರು ವರ್ಷಗಳ ಸೇವೆ ಸಲ್ಲಿಸಿದ್ದು ಕೆಲಕಾಲ ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಕಾಲೇಜಿನ ಪ್ರಾಂಶುಪಾಲರಾಗಿ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತ ಶಿಷ್ಯ ವರ್ಗಕ್ಕೆ ಶಿಕ್ಷಣ ನೀಡುತ್ತ ಕಲಾ ಸೇವೆಯಲ್ಲಿಯೇ ನಿರತರಾಗಿತ್ತಾರೆ. ೧೯೯೫-೯೬ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ಪ್ರಶಸ್ತಿ ನೀಡಿ ಗೌರವಿಸಿದೆ.