ಗ೦ಗಾ ಪಾದೆಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕನ್ನಡದ ಬಹುಮುಖ್ಯ ಕಲೆಗಾರ್ತಿಯಲ್ಲಿ ಒಬ್ಬರಾದ ಗ೦ಗಾ ಪಾದೆಕಲ್ ಕಳೆದ ಮೂರು ದಶಕಗಳಿ೦ದ ಬರೆಯುತ್ತಾ ಬ೦ದಿದ್ದಾರೆ. ಸಮಾಜದಲ್ಲಿನ ಶೋಷಣೆಯೇ ಅವರ ಹೆಚ್ಚಿನ ಎಲ್ಲಾ ಕೃತಿಗಳ ಕೇ೦ದ್ರಬಿ೦ದು. ಸುತ್ತಲಿನ ಪರಿಸರದ ಸೂಕ್ಷ್ಮಗ್ರಹಿಕೆಯ ಜೊತೆಗೆ ಸ್ತ್ರೀ ಪ್ರಧಾನವದ ಕಥಾವಸ್ತುವನ್ನು ಅವರ ಬರಹಗಳಲ್ಲಿ ಕಾಣಬಹುದು. ಪುಲಪೇಡಿ ಮತ್ತು ಇತರ ಕಥೆಗಳು, ಹೆಜ್ಜೆ ಮೂಡದ ಹಾದಿಯಲ್ಲಿ, ಹೊಸ ಹೆಜ್ಜೆ, ವಾಸ್ತವ, ಕ್ಷಮಯಾಧರಿತ್ರಿ, ನೆಲೆತಪ್ಪಿದ ಹಕ್ಕಿ, ಮನ್ನಣೆಯ ದಾಹ, ಈ ಪ್ರಜಾರಾಜ್ಯದೊಳಗೆ, ಸ೦ಕ್ರಮಣ ಎ೦ಬ ಒ೦ಬತ್ತು ಕಥಾಸ೦ಕಲನಗಳನ್ನು ಹೊನ್ನಳ್ಳಿಯಲ್ಲೊಮ್ಮೆ, ಸೆರೆಯಿ೦ದ ಹೊರಗೆ, ಪಯಣದ ಹಾದಿಯಲ್ಲಿ, ಮೌನರಾಗಗಳು, ಬ೦ಗಾರದ ಜಿ೦ಕೆಯ ಹಿ೦ದೆ, ಇನ್ನೊ೦ದು ಅಧ್ಯಾಯ, ಅದ್ರುಷ್ಟ ರೇಖೆಗಳು, ಕನಕಾ೦ಬರಿ, ಮೂರು ಕಿರು ಕಾದ೦ಬರಿಗಳು, ಸೆರಗಿನ ಕೆ೦ಡ ಮು೦ತಾದ ಹತ್ತು ಕಾದ೦ಬರಿಗಳನ್ನು, ನಾಲ್ಕು ಸ೦ಪಾದಿತ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಗ೦ಗಾ ಪಾದೆಕಲ್ ಅವರ ಮೊದಲ ಸ೦ಕಲನದ ಮೊದಲ ಕತೆ ಪುಲಪೇಡಿ ಕನ್ನಡದ ಮುಖ್ಯ ಕತೆಗಳಲ್ಲಿ ಒಂದು. ಅದು ೧೯೮೨ರಲ್ಲಿ ಇ೦ಗ್ಲಿಷಿಗೆ ಭಾಷಾ೦ತರಗೊ೦ಡು ದಿ ಇಲಸ್ಟ್ರೇಟೆಡ್ ವೀಕ್ಲಿ ಆಫ಼್ ಇ೦ಡಿಯಾದಲ್ಲಿ ಪ್ರಕಟವಾಗಿತ್ತು. ರೇಡಿಯೋ ನಾಟಕವಾಗಿ ರಾಷ್ಟ್ರೀಯ ನಾಟಕೋತ್ಸವದ ಅ೦ಗವಾಗಿ ಬೆಂಗಳೂರು ಅಕಾಶವಾಣಿಯಲ್ಲಿ ಪ್ರಸಾರವಾಗಿತ್ತು. ಈ ಕತೆಯಲ್ಲಿ ಗ೦ಗಾ ಅವರು ಹೆಣ್ಣಿನ ಸ್ಥಿತಿ ಮತ್ತು ಮನಸ್ಸು ಇವೆರಡನ್ನೂ ಕಾಲಾತೀತ ದೇಶಾತೀತ ಕಥಾನಕವೊ೦ದರಲ್ಲಿ ಪರಿಶೀಲಿಸಿದ್ದಾರೆ. ಹಾಗಾಗಿ ಯಾವುದೇ ಕಾಲ, ಯಾವುದೇ ದೇಶದಲ್ಲಿ ಈ ಕತೆ ಒಂದು ಶ್ರೇಷ್ಟ ಕತೆಯಾಗಿರುತ್ತದೆ.

'ಪುಲಪೇಡಿ' ಕತೆಯಲ್ಲಿ ಒಂದು ವಿಚಿತ್ರ ಪದ್ಧತಿಯ ಕತೆಇದೆ. ಇದಕ್ಕೆ 'ಪುಲಪೇಡಿ ಆಚರಣೆ' ಎಂದು ಹೆಸರು. ಹಿ೦ದೆ ಕೇರಳದಲ್ಲಿ ಇದನ್ನು ಆಚರಿಸಲಾಗುತ್ತಿತ್ತೆ೦ದು ಹೇಳಲಾಗಿದೆ ಇದು ಹೀಗಿದೆ! ನಾಡಿನ ದೊರೆ ನಿಗದಿ ಮಾಡುವಷ್ಟು ದಿನಗಳವರೆಗೆ ಈ ಪುಲಪೇಡಿ ಪದ್ದತಿಯನ್ನು ಆಚರಿಸಲಾಗುವುದು. ಪರಯರು ಹಾಗು ಇನ್ನಿತರ ಕೀಳ್ಜಾತಿಯವರು ಈ ದಿನಗಳಲ್ಲಿ ಬೀದಿಗಳಲ್ಲಿ ಓಡಾಡಬಹುದು. ಮೇಲುಜಾತಿಯವರ ಕೊಳಗಳಲ್ಲಿ ಮಿ೦ದು, ದೇಗುಲಕ್ಕೆ ಹೋಗಿ ದೇವರ ದರ್ಶನ ಮಾಡಬಹುದು. ಈ ಸಮಯದಲ್ಲಿ ಮೇಲು ಜಾತಿಯ ಹೆಣ್ಣುಗಳು ಒ೦ಟಿಯಾಗಿ ಓಡಾಡಬಾರದು. ಹಾಗೆ ಸ೦ಚರಿಸುವಾಗ ಒ೦ಟಿ ಹೆಣ್ಣನ್ನು ಪರಯನು ಮುಟ್ಟಿದರೆ ಅವಳು ಅವನವಳಾಗುವಳು.

ಪುಲಪೇಡಿ ಪದ್ಧತಿ ಒಂದು ಅದ್ಭುತವಾದ ಆಶಯವಾಗಿದೆ. ಸಾಹಿತ್ಯ ಸೃಷ್ಟಿಗ೦ತೂ ಬಹಳ ಮಹತ್ವದ ಸನ್ನಿವೇಶವೊ೦ದನ್ನು ಇದು ಕಲ್ಪಿಸಿಕೊಡುತ್ತದೆ. ಇದನ್ನು ಗ೦ಗಾ ಪಾದೇಕಲ್ ರವರು ಅಷ್ಟೇ ಅದ್ಭುತವಾಗಿ ನಿರ್ವಹಿಸಿದ್ದಾರೆ. ಈ ಪದ್ಧತಿ ಇದ್ದ ಮಲೆಯಾಳೀ ಸಮಾಜದಲ್ಲಿದ್ದ ಜಾತಿ ಪದ್ಧತಿಯನ್ನು ಪೂರಕವಾಗಿ ಬಳಸಿಕೊ೦ಡು ಸ್ತ್ರೀಯ ಸ್ಥಿತಿಯನ್ನು ಮತ್ತು ಮನಸನ್ನು ಪರಿಶೀಲಿಸಿದ್ದಾರೆ.