ವಿಷಯಕ್ಕೆ ಹೋಗು

ಆಹಿತಾಗ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇದೋಕ್ತ ಕರ್ಮಗಳನ್ನು ಮಾಡಲು ಆಧಾನ ಕ್ರಿಯೆಯಿಂದ ಸಿದ್ಧವಾದ ದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನೀಯ ಎಂಬ ಮೂರು ವಿಧ ಅಗ್ನಿಗಳನ್ನು ಇಟ್ಟುಕೊಂಡಿರುವ ಗೃಹಸ್ಥ.

ಗೃಹಸ್ಥನಿಗೆ ಮಾತ್ರ ಆಹಿತಾಗ್ನಿಯಾಗಲು ಅಧಿಕಾರ. ಆದರೆ ಅವರಲ್ಲೂ ಕುರುಡ, ಕಿವುಡ, ಕುಂಟ ಮೊದಲಾದ ಅಂಗವಿಕಲರು ಅಧಿಕಾರಿಗಳಲ್ಲ.

ವಿವಾಹಾನಂತರದಲ್ಲಿ ಬ್ರಾಹ್ಮಣರಿಗೆ ವಸಂತಋತುವಿನಲ್ಲೂ ಕ್ಷತ್ರಿಯರಿಗೆ ಗ್ರೀಷ್ಮಋತುವಿನಲ್ಲೂ ವೈಶ್ಯರಿಗೆ ಶರದೃತುವಿನಲ್ಲೂ ಅಗ್ನ್ಯಾಧಾನಕ್ರಿಯೆ ವಿಹಿತವಾಗಿದೆ.

ಆಧಾನವೆಂದರೆ ಅಗ್ನಿಯನ್ನು ಉತ್ಪತ್ತಿಮಾಡಿ ಮಂತ್ರಪೂರ್ವಕ ಯಜ್ಞಾಂಗಣದ ನಿರ್ದಿಷ್ಟ ಸ್ಥಾನಗಳಲ್ಲಿರುವ ಕುಂಡಗಳಲ್ಲಿ ಸ್ಥಾಪಿಸುವುದು. ಈ ಅಗ್ನಿಗಳಲ್ಲಿ ಬೆಳಗ್ಗೆ ಸಾಯಂಕಾಲಗಳಲ್ಲಿ ಅಗ್ನಿಹೋತ್ರ ಹೋಮವನ್ನು ಮಾಡಬೇಕು. ಅಗ್ನ್ಯಾಧಾನಾನಂತರ ಬರುವ ಮೊದಲನೆಯ ಹುಣ್ಣಿಮೆಯಲ್ಲಿ ದರ್ಶಪೂರ್ಣಮಾಸವೆಂಬ ಯಾಗವನ್ನು ಪ್ರಾರಂಭಿಸಬೇಕು. ಕಾಲಾನುಗುಣವಾಗಿ ನೈಮಿತ್ತಿಕ ಮತ್ತು ಕಾಮ್ಯೇಷ್ಟಿಗಳನ್ನು ಮಾಡಬೇಕು. ಆಹಿತಾಗ್ನಿಗೆ ವಿಶೇಷವಾದ ನಿಯಮಗಳುಂಟು. ಈ ಮೂರು ಅಗ್ನಿಗಳನ್ನು ಆತ ಮಕ್ಕಳಂತೆ ಎಚ್ಚರಿಕೆಯಿಂದ ನೋಡಿಕೊಳ್ಳ ಬೇಕು. ಒಂದು ವೇಳೆ ಅನಿರೀಕ್ಷಿತವಾಗಿ ಅಗ್ನಿ ನಷ್ಟವಾದರೆ ಅದಕ್ಕಾಗಿ ವಿಶೇಷವಾದ ಪ್ರಾಯಶ್ಚಿತ್ತಾದಿಗಳನ್ನು ಮಾಡಿ ಮತ್ತೆ ಹೊಸದಾಗಿ ಅಗ್ನಿಯನ್ನು ಸ್ಥಾಪಿಸಬೇಕಾಗುತ್ತದೆ. ಅಗ್ನಿಯನ್ನು ಇಟ್ಟುಕೊಳ್ಳುವ ವಿಧಾನದಲ್ಲೂ ಸೌಕರ್ಯಕ್ಕೆ ತಕ್ಕಂತೆ ಕ್ರಮಾಂತರಗಳಿವೆ. ಹೆಂಡತಿ ಇಲ್ಲದವನಿಗೆ ಅಗ್ನಿ ಇರುವುದಿಲ್ಲ. ಆಹಿತಾಗ್ನಿ ಸತ್ತ ಬಳಿಕ ಆತ ಇಟ್ಟುಕೊಂಡಿದ್ದ ಮೂರು ಅಗ್ನಿಗಳಿಂದಲೇ ಆತನನ್ನು ದಹಿಸಬೇಕು. ಸುಟ್ಟದಿನದಿಂದ ಆಶೌಚಕ್ಕೆ ಪ್ರಾರಂಭ. ಅಂತೆಯೇ ಇನ್ನೂ ಕೆಲವು ವಿಶೇಷ ನಿಯಮಗಳಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: