ಸಿದ್ದೇಶ್ವರ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೯೯೭ರಲ್ಲಿ ಜಿಲ್ಲೆಯಾಗಿ ಪರಿವರ್ತನೆಯಾದ ಹಾವೇರಿ ಐತಿಹಾಸಿಕವಾಗಿಯೂ ಪ್ರಸಿದ್ಧ ಜಿಲ್ಲೆ. ಜಿಲ್ಲೆಯ ಕದರ ಮಂಡಲಗಿಯಲ್ಲಿ ದ್ವಾಪರಯುಗದಲ್ಲಿ ಜನಮೇಜಯ ಕಟ್ಟಿಸಿದ ಮಾರುತಿ ದೇವಾಲಯವಿದ್ದರೆ, ಕಾಗಿನೆಲೆಯಲ್ಲಿ ಕನಕದಾಸರ ಆರಾಧ್ಯದೈವ ಆದಿಕೇಶವ ದೇವಾಲಯವಿದೆ.

ಇದಲ್ಲದೆ ಮೋಟೆಬೆನ್ನೂರಿನಲ್ಲಿ ಮಲ್ಲಿಕಾರ್ಜುನ ದೇವಾಲಯ, ಸಂಗೂರಿನಲ್ಲಿ ಈಶ್ವರ, ವೀರಭದ್ರ ದೇವಾಲಯ, ಹಿರೇಬೆಂಡಿಗೇರಿಯಲ್ಲಿ ಕಾಳಪ್ಪನ ದೇಗುಲ, ಹುಲಗೂರಿನಲ್ಲಿ ಸಿದ್ಧಲಿಂಗ ದೇವಾಲಯಗಳಿವೆ. ಜಿಲ್ಲೆಯ ಅಬ್ಬಲೂರು ಸರ್ವಜ್ಞ ಕವಿ ಹುಟ್ಟಿದ ಊರು ಎಂದು ಹೇಳಲಾಗಿದೆ. ಸಂತ ಶಿಶುನಾಳ ಷರೀಪರು ಶಿಗ್ಗಾಂವಿಯ ಬಾಡದಲ್ಲಿ ಹುಟ್ಟಿದವರು.

ಜಿಲ್ಲಾಕೇಂದ್ರ ಹಾವೇರಿ ಹಿಂದೆ ಪಾವರಿ, ಹಾವರಿ, ಹಾಹರಿ, ನಳಪುರಿ ಎಂಬ ಹೆಸರಿನಿಂದ ಕರೆಸಿಕೊಂಡಿತ್ತು. ಚಾಲುಕ್ಯ, ಕಳಚುರಿ, ಹೊಯ್ಸಳ ಮತ್ತು ಸೇವುಣರ ಕಾಲದಲ್ಲಿ ಹಾವೇರಿ ಪ್ರಸಿದ್ಧ ನಗರವಾಗಿತ್ತೆಂದು ಇತಿಹಾಸ ಹೇಳುತ್ತದೆ.

ಪಟ್ಟಣದಲ್ಲಿ ಸಿದ್ದೇಶ್ವರ, ನರಸಿಂಹ, ವೀರಭದ್ರ ಮತ್ತು ಕಲ್ಲೇಶ್ವರ ದೇವಸ್ಥಾನಗಳಿವೆ. ಈ ಪೈಕಿ ಸಿದ್ದೇಶ್ವರ ದೇವಸ್ಥಾನ ಶಿಲ್ಪಕಲೆಯ ದೃಷ್ಟಿಯಿಂದ ಭವ್ಯವಾಗಿದೆ. ಕಲ್ಯಾಣ ಚಾಳುಕ್ಯರ ಕಾಲದ ವಾಸ್ತುಶಿಲ್ಪವನ್ನೊಳಗೊಂಡ ಈ ದೇಗುಲದ ಭಿತ್ತಿಗಳ ಸಾಲು ಪಟ್ಟಿಕೆಗಳಲ್ಲಿರುವ ಸೂಕ್ಷ್ಮ ಕುಸುರಿ ಕೆತ್ತನೆ ಆಕರ್ಷಕವಾಗಿದೆ.

ದೇಗುಲದ ಗೋಪುರ ಏಕಕೂಟವಾಗಿದ್ದು, ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳ ಸಂಗಮವಾಗಿ ಅಚ್ಚುಕಟ್ಟಾಗಿದೆ.

ದೇವಾಲಯದಲ್ಲಿ ಉಮಾಮಹೇಶ್ವರ, ಮಹಾಲಕ್ಷ್ಮಿ, ಸೂರ್ಯ ಮತ್ತು ನಾಗ-ನಾಗಿಣಿ ವಿಗ್ರಹಗಳಿವೆ. ಶಿವಲಿಂಗವನ್ನು ಹಿಡಿದಿರುವ ವಿಷ್ಣುವಿನ ಮೂರ್ತಿ ಹಾಗೂ ಅಷ್ಟ ಮಾತೃಕೆಯರ ನೃತ್ಯಭಂಗಿಯ ಶಿಲ್ಪಗಳು ಅಪರೂಪದ್ದಾಗಿವೆ.

ಈ ದೇವಾಲಯದಲ್ಲಿಯೂ ಮುಖಮಂಟಪ, ಸುಖನಾಸಿ, ಭುವನೇಶ್ವರಿ ಹಾಗೂ ಗರ್ಭಗೃಹವಿದೆ.

ನರಸಿಂಹ ದೇವಾಲಯದ ಭಮುಭಾಗದಲ್ಲಿ ಕಲಾತ್ಮಕ ಕಂಬಗಳಿವೆಯಾದರೂ ಭಿತ್ತಿಗಳು ಸಾದಾ ಕಲ್ಲಿನ ನಿರ್ಮಾಣವಾಗಿದ್ದು ಕಲಾತ್ಮಕ ವಿಶೇಷತೆಗಳಿಲ್ಲ. ಆದರೆ ತಳಪಾಯದ ಕಲ್ಲಿನ ಮೇಲಿರುವ ಪಟ್ಟಿಕೆಯಲ್ಲಿ ಸೂಕ್ಷ್ಮ ಕೆತ್ತನೆಗಳಿವೆ.