ವಿಷಯಕ್ಕೆ ಹೋಗು

ಗೂಢೋಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಇದೊಂದು ಅರ್ಥಾಲಂಕಾರ. ಒಬ್ಬನನ್ನು ಕುರಿತು ಹೇಳಬೇಕಾದ ಮಾತನ್ನು ಇನ್ನೊಬ್ಬನಿಗೆ ಹೇಳುವ ಕ್ರಮವುಳ್ಳದ್ದು. ಉದಾ - ಎಲೈ ಎತ್ತೆ ! ಪರರ ಗದ್ದೆಯಿಂದ ತೆರಳು. ಆ ಗದ್ದೆಯ ಪಾಲಕ ಬರುತ್ತಿದ್ದಾನೆ (ಗೂಢೋಕ್ತಿರನ್ಯೋದ್ದೇಶ್ಯಂ ಚೇದ್ಯದನ್ಯಮಂ ಪ್ರತಿ ಕಥ್ಯೆತೇ | ವೃಷಾಪೇಹಿ ಪರ ಕ್ಷೇತ್ರಾದಾಯಾತಿ ಕ್ಷೇತ್ರರಕ್ಷಕಃ- ಕುವಲಯಾನಂದಃ).


ಯಾವುದಾದರೊಂದು ಸಂದರ್ಭದಲ್ಲಿ ಎದುರಿಗಿರುವ ಒಬ್ಬನಿಗೆ ಮರೆಮಾಚುವಂತೆ, ಮತ್ತೊಬ್ಬನಿಗೆ ವಿಷಯ ತಿಳಿಯುವಂತೆ ಹೇಳಬೇಕಾದರೆ, ಆ ಮತ್ತೊಬ್ಬನಿಗೆ ಅದನ್ನು ನೇರವಾಗಿ ಹೇಳದೆ, ಅಪ್ರಕೃತವಾಗಿರುವ ಇನ್ನೊಬ್ಬನನ್ನುದ್ದೇಶಿಸಿ ಆಡಿದ ಚಮತ್ಕಾರದ ಮಾತು ಇದು. ಮೇಲ್ಕಂಡ ಉದಾಹರಣೆಯಲ್ಲಿರುವ ವಿಷಯ ವಾಸ್ತವವಾಗಿ ಪರಸ್ತ್ರೀಕಾಮುಕನೊಬ್ಬನಿಗೆ- ಪರಸ್ತ್ರೀಯಿಂದ ದೂರವಿರು, ಅವಳ ಪತಿ ಬರುತ್ತಿದ್ದಾನೆ ಎಂಬುದಾಗಿ ಅನ್ವಯಿಸತಕ್ಕದ್ದು. ಆದರೆ ಕಾಮುಕನನ್ನುದ್ದೇಶಿಸಿ ನೇರವಾಗಿ ಹಾಗೆ ಹೇಳದೆ ಆಗಮಿಸುತ್ತಿರುವ ಪತಿಯಿಂದ ಅದನ್ನು ಮರೆಮಾಚಲು ಅಪ್ರಕೃತವಾಗಿರುವ ಎತ್ತನ್ನು ಕುರಿತು ಎತ್ತೆ, ತೆರಳು- ಮುಂತಾದ ಮಾತುಗಳಲ್ಲಿ ವಿಷಯ ಸೂಚಿತವಾಗಿದೆ. ಆ ಕಾಮುಕ ಮಾತ್ರ ಅದನ್ನು ಗ್ರಹಿಸಬಲ್ಲ. ಹೀಗೆ ವಾಸ್ತವವಾಗಿ ಕಾಮುಕನಿಗೆ ಹೇಳಲ್ಪಡಬೇಕಾದ ವಿಷಯ- ಪರಸ್ತ್ರೀಯಿಂದ ದೂರವಿರು ಇತ್ಯಾದಿ- ಅಪ್ರಕೃತವಾಗಿರುವ ಎತ್ತನ್ನು ಕುರಿತು ಬೇರೆ ಮಾತುಗಳಲ್ಲಿ ಹೇಳಲ್ಪಟ್ಟು ಪತಿಗೆ ಗೋಪ್ಯವೇ ಆಗಿ ಗೂಢೋಕ್ತಿ ಎನಿಸಿಕೊಂಡಿದೆ.


ಅಲಂಕಾರದಲ್ಲಿ ಶ್ಲೇಷದ ಭಂಗಿ ಇದೆ. ಇದರಲ್ಲಿ ಅಪ್ರಕೃತಕ್ಕೆ ಪ್ರಕೃತದೊಡನೆ ಅನ್ವಯವಿಲ್ಲದಿರುವುದರಿಂದ ಇದು ಶ್ಲೇಷಾಲಂಕಾರದಿಂದಲೂ ಕಾರ್ಯ ಕಾರಣಾದಿ ವ್ಯಂಗ್ಯತ್ವಗಳಿಲ್ಲದಿರುವುದರಿಂದ ಅಪ್ರಸ್ತುತ ಪ್ರಶಂಸಾಲಂಕಾರದಿಂದಲೂ ಬೇರೆಯಾಗಿದೆ.