ಗೋಲ್ಡಿಂಗ್, ಲೂಯಿಸ್
ಗೋಲ್ಡಿಂಗ್, ಲೂಯಿಸ್ 1895-1958. ಇಂಗ್ಲಿಷ್ ಕಾದಂಬರಿಕಾರ.
ಬದುಕು
[ಬದಲಾಯಿಸಿ]ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಅಲ್ಲಿನ ಕ್ವೀನ್ಸ್ ಕಾಲೇಜು ಮಿಸಲೆನಿ ಎಂಬ ಪತ್ರಿಕೆಯ ಸಂಪಾದಕನೂ ಆಕ್ಸ್‌ಫರ್ಡ್ ಬುಕ್ಸ್ ಆಫ್ ವರ್ಸ್ ಎಂಬ ಕವಿತಾ ಸಂಕಲನ ಮಾಲೆಯ ಸಂಪಾದಕರುಗಳಲ್ಲೊಬ್ಬನೂ ಆದ.
ವಿದ್ಯಾರ್ಥಿಯಾಗಿದ್ದಾಗಲೇ ಈತನ ಮೊದಲ ಎರಡು ಕವನಸಂಗ್ರಹಗಳು ಪ್ರಕಟವಾದವು. ಆದರೆ ನಿಜಕ್ಕೂ ಇವನ ಮೊದಲ ಕೃತಿ ಒಂದು ಕಾದಂಬರಿಯಾಗಿತ್ತಂತೆ; ತುಂಬ ಎಳೆಯ ವಯಸ್ಸಿನಲ್ಲಿಯೇ ಈತ ಬರೆದ ಈ ಕಾದಂಬರಿಯನ್ನು ಪ್ರಕಟಿಸಲೊಪ್ಪುವ ಪ್ರಕಾಶಕರೇ ದೊರೆಯಲಿಲ್ಲವಾಗಿ ಈತ ಬರೆಯುವ ಹವ್ಯಾಸವನ್ನೇ ಕೈಬಿಡಬೇಕೆಂದು ಯೋಚಿಸಿದ್ದನಂತೆ.
ಆಕ್ಸ್‌ಫರ್ಡಿನಿಂದ ಹೊರಬಂದ ಮೇಲೆ ಗೋಲ್ಡಿಂಗ್ ಒಂದನೆಯ ಮಹಾಯುದ್ಧ ದಲ್ಲಿ ಸೈನಿಕನಾಗಿ ಸೇರಿದ. ಯುದ್ಧಾನಂತರ ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿದ. ತನ್ನ ಪ್ರವಾಸಾನುಭವಗಳನ್ನು ಕುರಿತು ಬರೆದ. ಇಪ್ಪತ್ತನೆಯ ಶತಮಾನದ ಪ್ರವಾಸ ಸಾಹಿತ್ಯ ನಿರ್ಮಾಪಕರಲ್ಲಿ ಅತ್ಯಂತ ಅನುಭವಿಗಳೆಂದೂ ತುಂಬ ಸ್ವಾರಸ್ಯವಾಗಿ ಬರೆಯುವವರೆಂದೂ ಖ್ಯಾತಿವೆತ್ತವರಲ್ಲಿ ಈತನೂ ಒಬ್ಬ.
ಯಹೂದ್ಯರ ಹಿತಕ್ಕಾಗಿ ಅತ್ಯುತ್ಸುಕನಾಗಿ ಹೋರಾಡುತ್ತಿದ್ದು ಅವರ ಸಮಸ್ಯೆಯನ್ನು ದಿ ಜ್ಯೂಯಿಷ್ ಪ್ರಾಬ್ಲೆಮ್ ಎಂಬ ಪುಸ್ತಕದಲ್ಲಿ ಈತ ಹೃದಯಂಗಮವಾಗಿ ನಿರೂಪಿಸಿದ್ದಾನೆ. ಪ್ರಪಂಚದ ಹಲವಾರು ದೇಶಗಳಲ್ಲಿ ಈ ಪುಸ್ತಕಕ್ಕೆ ಪ್ರಶಂಸೆ ದೊರೆತಿದೆ.
ಸಾಹಿತ್ಯ
[ಬದಲಾಯಿಸಿ]ಕಾದಂಬರಿಗಳು, ಸಣ್ಣಕಥೆಗಳು, ಕವಿತೆಗಳು, ಪದ್ಯನಾಟಕಗಳು, ಪ್ರವಾಸ ಸಾಹಿತ್ಯ, ವಿಚಾರಸಾಹಿತ್ಯ, ವಿಮರ್ಶೆ-ಹೀಗೆ ವಿವಿಧ ಬಗೆಯ ಸಾಹಿತ್ಯವನ್ನು ಗೋಲ್ಡಿಂಗ್ ನಿರ್ಮಾಣ ಮಾಡಿದ್ದಾನೆ. ರಂಗಭೂಮಿ, ರಜತಪರದೆ ಮತ್ತು ಬಾನುಲಿಗಳಿಗಾಗಿ ಬರೆಯುತ್ತಿದ್ದವರಲ್ಲಿ ಈತ ಬಹಳ ಯಶಸ್ವಿಯೆನ್ನಿಸಿಕೊಂಡ.
1932ರ ಮೊದಲೇ ಸುಮಾರು ಮೂವತ್ತು ಕಾದಂಬರಿಗಳನ್ನು ಈತ ಪ್ರಕಟಿಸಿಯಾಗಿತ್ತಾದರೂ ಇವನಿಗೆ ಮೊದಲಾಗಿ ಖ್ಯಾತಿಯನ್ನು ತಂದುದು 1932ರಲ್ಲಿ ಬೆಳಕುಕಂಡ ಮೆಗ್ನೋಲಿಯ ಸ್ಟ್ರೀಟ್ ಎಂಬ ಕಾದಂಬರಿ. ಒಂದು ಬೀದಿಯಲ್ಲಿ ಯಹೂದ್ಯ ನಿವಾಸಿಗಳಿರುವ, ಮತ್ತೊಂದು ಬೀದಿಯಲ್ಲಿ ಯಹೂದ್ಯೇತರ ನಿವಾಸಿಗಳಿರುವ ವಠಾರವೊಂದರ ಕಥೆಯಿದು. ಇವನ ಹಲವು ಕಾದಂಬರಿಗಳಲ್ಲಿ ಬರುವ ಡೂಮಿಂಗ್ಟನ್ ಎಂಬ ಪಾತ್ರ ಲೇಖಕನನ್ನೇ ಪ್ರತಿನಿಧಿಸುವುದೆಂದು ಓದುಗರ ಅಭಿಪ್ರಾಯ.
ಕೆಲವು ಕಾದಂಬರಿಗಳು
[ಬದಲಾಯಿಸಿ]ಫಾರ್ವರ್ಡ್ ಫ್ರಮ್ ಬ್ಯಾಬಿಲಾನ್ (1920), ಸೀ ಕೋಸ್ಟ್ ಆಫ್ ಬೊಹಿಮಿಯ (1923), ಡೇ ಆಫ್ ಅಟೋನ್ಮೆಂಟ್ (1925), ದಿ ಮಿರಕಲ್ ಬಾಯ್ (1927), ಸ್ಟೋರ್ ಆಫ್ ಲೇಡೀಸ್ (1927), ಗಿವ್ ಅಪ್ ಯುವರ್ ಲವರ್ಸ್ (1930), ಫೈವ್ ಸಿಲ್ವರ್ ಡಾಟರ್ಸ್ (1934), ಹನಿ ಫಾರ್ ದಿ ಘೋಸ್ಟ್ (1949), ದಿ ಡೇಂಜರಸ್ ಪ್ಲೇಸಸ್ (1951), ದಿ ಲವಿಂಗ್ ಬ್ರದರ್ಸ್ (1952).
ಕವನ ಸಂಕಲನಗಳು
ದಿ ಸಾರೋ ಆಫ್ ವಾರ್ (1919), ಷಪಡ್ರ್ಸ್ ಸಿಂಗಿಂಗ್ (1921), ಪ್ರಾಫೆಟ್-ಅಂಡ್ ಫೂಲ್ (1923).
ಪ್ರವಾಸ ಸಾಹಿತ್ಯ
ಸನ್ವರ್ಡ್ (1924), ಸಿಸಿಲಿಯನ್ ನೂನ್ (1925), ದೋಸ್ ಏನ್ಷಿಯಂಟ್ ಲ್ಯಾಂಡ್ಸ್ (1928), ಅಡ್ವೆಂಚರ್ಸ್ ಇನ್ ಲಿವಿಂಗ್ ಡೇಂಜರಸ್ಲಿ (1930).
ಇವನ ಇತರ ಕೆಲವು ಕೃತಿಗಳು
ಜೇಮ್ಸ್ ಜಾಯ್ಸ್ (1933), ದಿ ಬೇರ್ನಕಲ್ ಬೀಡ್ (1952).