ವಿಷಯಕ್ಕೆ ಹೋಗು

ಆಸ್ಟ್ರಕೋಡರ್ಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೈಲೂರಿಯನ್ ಮತ್ತು ಡಿವೋನಿಯನ್ ಕಾಲದ ಅವಶೇಷಗಳೊಂದಿಗೆ ಕಂಡುಬಂದಿರುವ ಪ್ರಾಚೀನ ಕಾಲದ ಮೀನಿನಂಥ ಪ್ರಾಣಿವರ್ಗ. ನಮಗೆ ಗೊತ್ತಿರುವ ಕಶೇರುಕ ಪ್ರಾಣಿಗಳ ಪೈಕಿ ಅತಿ ಹಳೆಯ ಜೀವಾವಶೇಷಗಳು ಈ ಗುಂಪಿನವೇ ಆಗಿವೆ. ಈ ಗುಂಪಿನ ಪ್ರಾಣಿಗಳಿಗೆ ದವಡೆಗಳು ಇರಲಿಲ್ಲ. ಒಮ್ಮೊಮ್ಮೆ ಇವುಗಳಲ್ಲಿ ಜೋಡಿ ಉಪಾಂಗಗಳು (ಅಪೆಂಡೇಜ್) ಇಲ್ಲದಿರುವುದು ಕಂಡುಬಂದಿದೆ. ಈ ಮೂಲ ಗುಣಲಕ್ಷಣಗಳು ಪ್ರಾಚೀನ ಲಕ್ಷಣಗಳಾಗಿದ್ದು ಈಗ ಜೀವದಿಂದಿರುವ ದುಂಡುಬಾಯಿ ಪ್ರಾಣಿಗಳನ್ನು ಹೋಲುತ್ತವೆ. ಈ ಪ್ರಾಣಿಗಳಿಗೆ ಎಲುಬಿನ ಹೊರಕವಚವಿತ್ತು. ಕೆಲವು ವೇಳೆ ದೇಹದ ಒಳಗೂ ಅಸ್ಥಿಭಾಗಗಳು ಕಂಡುಬರುತ್ತಿದ್ದುವು.

ಆಸ್ಟ್ರಿಯೋಟ್ರೇಸಿ

[ಬದಲಾಯಿಸಿ]

ಹೆಮಿಕೆಫಲಾಸ್ಪಿಸ್ ಎಂಬುದು ಈ ಉಪವರ್ಗಕ್ಕೆ ಸೇರಿದ್ದು. ಇದರ ತಲೆ ಮತ್ತು ಕಿವಿರಿನ ಭಾಗಗಳು ಅರ್ಧ ಚಂದ್ರಾಕಾರದ ದೊಡ್ಡ ಅಸ್ಥಿಕವಚದಿಂದ ಮುಚ್ಚಿದ್ದುವು. ಇದಕ್ಕೆ ಸಹಜವಾದ ಎರಡು ಕಣ್ಣುಗಳ ಜೊತೆಗೆ ಮಧ್ಯದ ನೆತ್ತಿಯ ಕಣ್ಣೊಂದಿತ್ತು. ಬಾಯಿ ಬಹಳ ಸಣ್ಣದು; ಒಳಗಡೆ ಒಂದು ಕಿವಿರು ಕೋಣೆ; ತಲೆಯ ಕೆಳಭಾಗದಲ್ಲಿ ದುಂಡನೆಯ ಹತ್ತು ಜೊತೆ ಕಿವಿರಿನ ರಂಧ್ರಗಳಿದ್ದುವು. ಈ ಪ್ರಾಣಿಯಲ್ಲಿ ವಿದ್ಯುತ್ ಅಂಗಗಳೂ ಒತ್ತಡವನ್ನು ಗೊತ್ತುಮಾಡಿಕೊಳ್ಳತಕ್ಕ ಜ್ಞಾನಾಂಗವೂ ಇದ್ದುದು ಕಂಡುಬಂದಿದೆ.

ಅನಾಸ್ಪಿಡ

[ಬದಲಾಯಿಸಿ]

ಇದರಲ್ಲಿ ಚಿಕ್ಕ ಕದಿರಿನಾಕಾರದ ಮೀನಿನಂಥ ಪ್ರಾಣಿಗಳಿವೆ. ಅನಾಸ್ಪಿಸ್ ಈ ಉಪವರ್ಗಕ್ಕೆ ಸೇರಿದ ಪ್ರಾಣಿ. ಇವಕ್ಕೆ ಅಗಲವಾದ ತಲೆಯ ಕವಚವಿರಲಿಲ್ಲ. ಆದರೆ ಆ ಭಾಗದಲ್ಲಿ ಸಣ್ಣ ಸಣ್ಣ ಹುರುಪೆಗಳಿದ್ದುವು. ಇವುಗಳ ಒಳರಚನೆಯ ಬಗ್ಗೆ ಮಾಹಿತಿ ದೊರೆತಿಲ್ಲ.

ಹೆಟರೋಸ್ಟ್ರೇಸಿ

[ಬದಲಾಯಿಸಿ]

ಟೀರಾಸ್ಪಿಸ್ ಈ ಉಪವರ್ಗಕ್ಕೆ ಸೇರಿದ ಪ್ರಾಣಿ. ಈ ಗುಂಪಿನ ಪ್ರಾಣಿಗಳಲ್ಲೂ ಶರೀರದ ಒಳರಚನೆಯ ಬಗ್ಗೆ ಹೆಚ್ಚು ವಿಷಯಗಳು ತಿಳಿದಿಲ್ಲ. ಆದರೆ ಇದಕ್ಕೆ ಶರೀರದ ಎರಡು ಕಡೆಗಳಲ್ಲೂ ಒಂದೊಂದು ದೊಡ್ಡ ಕಿವಿರಿನ ರಂಧ್ರವಿತ್ತು. ಇದರ ಮುಂಭಾಗ ದೊಡ್ಡ ದೊಡ್ಡ ತಟ್ಟೆಯಾಕಾರದ ಹುರುಪೆಗಳಿಂದ ಆವೃತವಾಗಿತ್ತು. ಕಣ್ಣುಗಳು ಬಲು ಚಿಕ್ಕವು. ಬಾಯಿ ಶರೀರದ ಕೆಳಭಾಗದಲ್ಲಿ ಒಂದು ಅಡ್ಡ ರಂಧ್ರದಂತಿತ್ತು.