ಆಸ್ಟರ್
ಬಹುಜನಪ್ರಿಯವೂ ರಮ್ಯವೂ ಆದ ವಾರ್ಷಿಕ ಸಸ್ಯ ಆಸ್ಟರೇಸೇ ಅಥವಾ ಕಂಪಾಸಿಟೀ ಕುಟುಂಬಕ್ಕೆ ಸೇರಿದೆ. ಸೀಮೆ ಸೇವಂತಿಗೆಯೆಂದೂ ಕರೆಯುತ್ತಾರೆ. ಇದನ್ನು ಮಡಿಗಳಲ್ಲೂ ಕುಂಡಗಳಲ್ಲೂ ಬೆಳೆಸುತ್ತಾರೆ. ಸೇವಂತಿಗೆಯಂತಿರುವ ಈ ಹೂಗಳನ್ನು ಮಂಜರಿಗಳಿಗೂ (ಬುಕೆ) ಕಳಶಗಳಲ್ಲಿ ಜೋಡಿಸುವುದಕ್ಕೂ ಮುಡಿಯಲೂ ಉಪಯೋಗಿಸ ಬಹುದು. ಇಂದಿನ ಹೂವಾಡಿಗರು ಬಳಸುವ ಆಸ್ಟರ್ ಹೂ 1731ರಲ್ಲಿ ಜೆಸ್ಯೂಟ್ ಪಾದ್ರಿಗಳು ಚೀನದಿಂದ ತಂದ ಒಂದು ವಿಧದ ಏಕದಳ ಪುಷ್ಪ. ಅದು ಕ್ರಮಕ್ರಮವಾಗಿ ವಿಕಾಸಗೊಂಡು ಇಂದಿನ ಸ್ವರೂಪವನ್ನು ತಾಳಿದೆ. ಬೆಳೆವಣಿಗೆ, ಬಣ್ಣ ಮತ್ತು ಹೂಗಳ ಆಕಾರಗಳಲ್ಲಿ ವೈವಿಧ್ಯವಿರುವ ಆಸ್ಟರ್ ಹೂಗಳು ಈಗ ಎಲ್ಲೆಲ್ಲೂ ದೊರೆಯುತ್ತವೆ. ಗಿಡ ಸಣ್ಣ ಸಣ್ಣ ರೆಂಬೆಗಳೊಡನೆ 1-3ಮೀ ಎತ್ತರದವರೆಗೆ ಹರಡಿಕೊಂಡು ಪೊದೆಯಂತೆ ಅಚ್ಚುಕಟ್ಟಾಗಿ ಬೆಳೆಯು ತ್ತದೆ. ಆಸ್ಟರ್ನಲ್ಲಿ ಹಳದಿ ಬಣ್ಣವನ್ನುಳಿದು ಮಿಕ್ಕ ಎಲ್ಲ ಬಣ್ಣದ ಹೂಗಳನ್ನೂ ಬಿಡುವ ಜಾತಿಗಳಿವೆ. ಇವುಗಳಲ್ಲಿ ಕ್ಯಾಲಿಫೋರ್ನಿಯನ್ ಜಯಂಟ್, ಕಾಮೆಟ್, ವಿಕ್ಟೋರಿಯ, ಮ್ಯಾಮತ್, ಪ್ಯುನಿಫ್ಲವರ್ಡ್ ಮತ್ತು ಬ್ರ್ಯಾಂಚಿಂಗ್ ಆ್ಯಸ್ಟರುಗಳು ಮುಖ್ಯವಾದುವು.
ಆಸ್ಟರುಗಳನ್ನು ಬೆಳೆಸುವುದು ಬಲು ಸುಲಭ. ಇವುಗಳಿಗೆ ಬಲು ಹಗುರವಾದ, ನೀರು ಸುಲಭವಾಗಿ ಇಂಗಿಹೋಗುವ ಮಣ್ಣು ಅಗತ್ಯ. ಇವನ್ನು ವರ್ಷದ ಎಲ್ಲ ಕಾಲಗಳಲ್ಲೂ ಹೆಚ್ಚು ಮಳೆ ಬೀಳುವ ಮಧ್ಯಮ ಪ್ರದೇಶಗಳಲ್ಲಿ ಬೆಳೆಸಬಹುದು. ಬಿತ್ತಿದ ಮೇಲೆ 3.5-4 ತಿಂಗಳಲ್ಲಿ ಹೂ ಬರುತ್ತವೆ. ಕ್ಯಾಲಿಫೋ಼ರ್ನಿಯನ್ ಜಯಂಟ್ ಮತ್ತು ಇತರ ಕೆಲವು ಆ್ಯಸ್ಟರುಗಳು 4-5 ತಿಂಗಳಲ್ಲಿ ಹೂ ಬಿಡುತ್ತವೆ. ಸಸಿಗಳು ಆರು ಎಲೆಯಾದಾಗ 3-4ಮೀ ಅಂತರ ಕೊಟ್ಟು ನೆಡಬೇಕು. ಗಿಡ 10 ಸೆಂಮೀ-90ಸೆಂಮೀ ಎತ್ತರದವರೆಗೊ ಬೆಳೆಯುತ್ತದೆ. ಕೆಂಪು ಇರುವೆಗಳು, ಕಿತ್ತಳೆ ಬಣ್ಣದ ಬೀಟಲ್ ಮತ್ತು ಲಾರ್ವಗಳು ಆಗಾಗ್ಗೆ ಬಂದು ಗಿಡಗಳನ್ನು ತಿಂದು ಹಾಳುಮಾಡುವುದುಂಟು. ಶೇ 50 ಡಿ.ಡಿ.ಟಿ. ಅಥವಾ ಯಾವುದಾದರೂ ಕ್ರಿಮಿನಾಶಕವನ್ನು ಸಿಂಪಡಿಸುವುದರಿಂದ ಅಂಥ ಪಿಡುಗುಗಳನ್ನು ನಿವಾರಿಸಬಹುದು.