ವಿಷಯಕ್ಕೆ ಹೋಗು

ಗುಹವಾಸಿ ಪ್ರಾಣಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗುಹೆಗಳಂಥ ವಿಶೇಷ ರೀತಿಯ ಪರಿಸರಗಳಲ್ಲಿ ತಮ್ಮ ಪೂರ್ತಿ ಜೀವನವನ್ನು ಇಲ್ಲವೇ ಜೀವನದ ಅಲ್ಪ ಸಮಯವನ್ನು ಕಳೆಯುವ ಪ್ರಾಣಿಗಳು (ಕೇವ್ ಅನಿಮಲ್ಸ್‌). ಗುಹೆಯ ಪರಿಸ್ಥಿತಿಗಳು ಬಯಲಿಗಿಂತ ಬೇರೆಯಾಗಿದ್ದು ಕೆಲವು ವಿಧಗಳಲ್ಲಿ ಪ್ರಾಣಿಜೀವನಕ್ಕೆ ಅನುಕೂಲವಾಗಿರುತ್ತವೆ. ಗುಹೆಗಳಲ್ಲಿ ಭೂ ಮತ್ತು ಜಲಜೀವಿಗಳೆರಡನ್ನೂ ಕಾಣಬಹುದು. ಪ್ಲಾಟಿಹೆಲ್ಮಿಂಥೀಸ್, ಅನೆಲಿಡ, ಆತಾರ್ರ್‌ಪೊಡ, ಮಾಲಸ್ಕ, ಗ್ಯಾಸ್ಟ್ರಾಪೊಡ ಮತ್ತು ಕಾರ್ಡೇಟ (ಪಿಸೀಸ್ ಮತ್ತು ಆಂಫಿಬಿಯ) ಗುಂಪುಗಳಿಗೆ ಸೇರಿದ ಪ್ರಾಣಿಗಳು ಇವುಗಳಲ್ಲಿ ಮುಖ್ಯವಾದವು. ಪ್ರೊಟಿಸ್ಟ ಗುಂಪಿನ ಜೀವಿಗಳಾಗಲಿ ಸಸ್ಯಗಳಾಗಲಿ ಗುಹೆಗಳಲ್ಲಿ ಕಾಣಬರುವುದಿಲ್ಲ.


ಗುಹೆಗಳು ಒಂದು ವಿಶೇಷ ಭೌತಿಕ ಪರಿಸರ ಸೃಷ್ಟಿಸುವ ಆವಾಸಗಳು. ಸದಾಕಾಲ ಕತ್ತಲು ತುಂಬಿರುವುದು, ಆದರ್ರ್‌ತೆ ಮತ್ತು ಉಷ್ಣತೆಯ ಏರಿಳಿತಗಳಿಲ್ಲದಿರುವುದು, ವಾಯುಪ್ರವಾಹಗಳಿಲ್ಲದಿರುವುದು, ಗುಹೆಯ ಮಣ್ಣಿನಲ್ಲಿ ಸುಣ್ಣಕಲ್ಲು ಇರುವುದರಿಂದ ಉಂಟಾಗುವ ಕಾರ್ಬನ್ ಡೈ ಆಕ್ಸೈಡಿನ ಪರಿಮಾಣದ ಆಧಿಕ್ಯ, ಪ್ರಾದೇಶಿಕ ಪ್ರತ್ಯೇಕತೆ ಮತ್ತು ಇದರಿಂದ ಆಗಾಗ್ಗೆ ಉಂಟಾಗುವ ಆಹಾರದ ಕೊರತೆ- ಇವು ಗುಹೆಗಳಲ್ಲಿ ಸಾಮಾನ್ಯವಾಗಿ ಕಾಣಬರುವ ಪರಿಸ್ಥಿತಿಯ ವೈಚಿತ್ರ್ಯಗಳು. ಗುಹೆಗಳಲ್ಲಿ ವಾಸಿಸುವ ಪ್ರಾಣಿಗಳು ಮೇಲೆ ಹೇಳಿದ ಪರಿಸರದ ವೈವಿಧ್ಯಗಳಿಗೆ ಹೊಂದಾಣಿಕೆಯಾಗುವ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಇಂಥ ಲಕ್ಷಣಗಳಲ್ಲಿ ಮುಖ್ಯವಾದವು ಈ ರೀತಿ ಇವೆ :

  1. ದೇಹದಲ್ಲಿನ ವರ್ಣಕಗಳ ಕ್ಷೀಣತೆ ಅಥವಾ ಇಲ್ಲದಿರುವಿಕೆ. ಇದರಿಂದಾಗಿ ಗುಹಾವಾಸಿ ಪ್ರಾಣಿಗಳು ಬಿಳಿಚಿಕೊಂಡಿರುತ್ತವೆ.
  2. ಆತಾರ್ರ್‌ಪೊಡ ಗುಂಪಿನ ಪ್ರಾಣಿಗಳಲ್ಲಿ ದೇಹದ ಹೊರಕವಚ (ಎಕ್ಸೋಸ್ಕೆಲಿಟನ್) ಬಹಳ ದುರ್ಬಲವಾಗಿರುತ್ತದೆ; ಕಾಲೆಂಬೋಲ ಮತ್ತು ಮೀನುಗಳಲ್ಲಿ ಶಲ್ಕಗಳೇ ರೂಪುಗೊಂಡಿರುವುದಿಲ್ಲ; ಯುರೋಡಿಲ ಮುಂತಾದ ಪ್ರಾಣಿಗಳಲ್ಲಿ ಗ್ರಂಥಿಗಳ ಚಟುವಟಿಕೆ ದುರ್ಬಲವಾಗಿರುತ್ತದೆ.
  3. ಗುಹೆಗಳಲ್ಲಿ ಬೆಳಕಿನ ಅಭಾವವಿರುವುದರಿಂದ ಕಣ್ಣು, ದ್ಯುತಿಗ್ರಾಹಕಗಳು, ಕಣ್ಣು ಸಂಬಂಧಿ ನರಗಳು ಮತ್ತು ಹಾಲೆಗಳ ಬೆಳೆವಣಿಗೆ ಕುಂಠಿತವಾಗಿರುತ್ತದೆ.
  4. ಗುಹಾವಾಸಿ ಪ್ರಾಣಿಗಳ ದೇಹ ಭೂವಾಸಿ ಪ್ರಾಣಿಗಳಿಗೆ ಹೋಲಿಸಿದರೆ ಬಲು ಉದ್ದವಾಗಿಯೂ ಕೃಶವಾಗಿಯೂ ಇರುತ್ತದೆ. ಉದಾ : ಕ್ರಸ್ಟೇಸಿಯ ಗುಂಪಿನ ಬೇತಿನೆಲ, ಪ್ಯಾರಾಬೇತಿನೆಲ, ಸ್ಟೆನಾಸೆಲಸ್, ಟ್ರೆಕಿಟೀ ಪಂಗಡದ ಕೀಟಗಳು ಮತ್ತು ಯುರೋಡಿಲ. ಹಾಗೆಯೇ ಕೆಲವು ಸಂಧಿಪದಿಗಳ ಮತ್ತು ಕೀಟಗಳ ದೇಹದ ಕೆಲವು ಉಪಾಂಗಗಳು, ಸ್ಪರ್ಶಗ್ರಾಹಿ ತಂತುಗಳು, ಕಾಲುಗಳು, ಕೀಟೇ ಎಂಬ ಅಂಗಗಳು ಬಲು ಉದ್ದವಾಗಿರುತ್ತವೆ. ರೆಕ್ಕೆ, ಈಜುರೆಕ್ಕೆ ಮುಂತಾದ ಅಂಗಗಳು ಮೋಟಾಗಿರಬಹುದು ಅಥವಾ ಇಲ್ಲದೇ ಇರಬಹುದು. ಉದಾ: ಸೀಕೋ ಬಾರ್ಬಸ್ ಗೀಟಿರ್ಸ್‌ಯೈ ಎಂಬ ಮೀನು.
  5. ಗುಹವಾಸಿ ಪ್ರಾಣಿಗಳ ಅಂತಃಸ್ರಾವ ಗ್ರಂಥಿ ವ್ಯವಸ್ಥೆಯು-ಮುಖ್ಯವಾಗಿ ಗುರಾಣಿಕ (ತೈರಾಯ್ಡ್‌) ಗ್ರಂಥಿಯ ಬೆಳೆವಣಿಗೆ ಕ್ಷೀಣವಾಗಿರುತ್ತದೆ.
  6. ಇವುಗಳ ಚಯಾಪಚಯ ಕ್ರಿಯೆಗಳ ವೇಗವೂ ಬಲು ನಿಧಾನ.
  7. ಬಹುಪಾಲು ಗುಹವಾಸಿ ಪ್ರಾಣಿಗಳು ಗುಹೆಯ ಉಷ್ಣತೆಗಿಂತ ಹೆಚ್ಚಿನ ಉಷ್ಣತೆಗೆ ಬಂದರೆ ಸತ್ತು ಹೋಗುತ್ತವೆ. ಉದಾಹರಣೆಗೆ, ನೈಸೆಲಸ್ ವೀರೈ ಮತ್ತು ಏಸೆಲಸ್ ಕವಾಟಿಕಸ್ ಎಂಬ ಪ್ರಾಣಿಗಳನ್ನು 15° ಸೆಂ. ಉಷ್ಣತೆಗೆ ಒಡ್ಡಿದಾಗ ಸತ್ತು ಹೋಗುತ್ತದೆ. 8 ಗುಹವಾಸಿ ಪ್ರಾಣಿಗಳ ಡಿಂಭಗಳು ಬೆಳೆದು ಪ್ರೌಢಜೀವಿಗಳಾಗಿದ್ದಾಗಲೂ ತಮ್ಮಲ್ಲಿ ಕೆಲವು ಡಿಂಭಲಕ್ಷಣಗಳನ್ನೋ ಇಲ್ಲವೆ ಮೂಲ ಲಕ್ಷಣಗಳನ್ನೋ ಉಳಿಸಿಕೊಂಡಿರುತ್ತವೆ.
  8. ಇವುಗಳ ಸಂತಾನಾಭಿವೃದ್ಧಿ ಶಕ್ತಿಯೂ ಬಹಳ ಕಡಿಮೆ. ಉದಾಹರಣೆಗೆ ಸೀಕೊಸ್ಫೀರೋಮ ಎಂಬ ಪ್ರಾಣಿ ಒಂದು ಸಲಕ್ಕೆ ಕೇವಲ 7-8 ಮೊಟ್ಟೆಗಳನ್ನಿಡುತ್ತದೆ. ಇದರ ಹತ್ತಿರ ಸಂಬಂಧಿಯಾದ ಸ್ಫೀರೋಮ ಎಂಬ ನೆಲವಾಸಿ ಪ್ರಾಣಿ ಒಂದು ಸಲಕ್ಕೆ 67-90 ಮೊಟ್ಟೆಗಳನ್ನಿಡುತ್ತದೆ.
  9. ಗುಹವಾಸಿ ಪ್ರಾಣಿಗಳ ದೃಷ್ಟಿಶಕ್ತಿ ದುರ್ಬಲವಾಗಿರುವುದರಿಂದ ಉಂಟಾಗುವ ಅನಾನುಕೂಲತೆಗಳನ್ನು ನಿವಾರಿಸುವ ಸಲುವಾಗಿ ಎಂಬಂತೆ ಇವುಗಳ ಸ್ಪರ್ಶಗ್ರಾಹಕ ಶಕ್ತಿ ಬಲು ಚೆನ್ನಾಗಿ ರೂಪುಗೊಂಡಿದೆ.


ಮೇಲೆ ಹೇಳಿದ ಲಕ್ಷಣಗಳೆಲ್ಲ ಸಂಪೂರ್ಣ ಗುಹವಾಸಿ ಪ್ರಾಣಿಗಳಿಗೆ ಅನ್ವಯವಾಗುತ್ತವೆ. ಇವುಗಳಲ್ಲದೆ ಗುಹೆಗಳಲ್ಲಿ ಮಾತ್ರವಲ್ಲದೆ ಅವುಗಳ ಹೊರಗೆ ಕಲ್ಲು ಪೊಟರೆಗಳಲ್ಲಿ ವಾಸಿಸುವ ಪ್ರಾಣಿಗಳೂ, ಗುಹೆಯಿಂದ ಹೊರಗಡೆಯೇ ಹೆಚ್ಚಿನ ಸಮಯವನ್ನು ಕಳೆದು ಆಗಾಗ್ಗೆ ಗುಹೆಗಳಿಗೆ ಭೇಟಿ ಇಡುವ ಪ್ರಾಣಿಗಳೂ ಇವೆ. ಈ ಎರಡನೆಯ ಬಗೆಯ ಪ್ರಾಣಿಗಳ ಗುಂಪಿಗೆ ಬಾವಲಿಗಳನ್ನು ಮತ್ತು ಡಾಬ್ಸಾನಿಯ ಪ್ಯಾಲಿಯೇಟ ಎಂಬ ಹೆಸರಿನ ಹಾರುವ ಅಳಿಲನ್ನು ಸೇರಿಸಬಹುದು. ಕೆಲವು ಬಾವಲಿಗಳು ಚಳಿಗಾಲದಲ್ಲಿ ಗುಹೆಗಳನ್ನು ಸೇರಿ ಶಿಶಿರಸ್ವಾಪತೆಯಲ್ಲಿ ತೊಡಗುತ್ತವೆ. ಇದೂ ಅಲ್ಲದೆ ಗುಹೆಗಳಲ್ಲಿ ಮಾತ್ರ ಸಂತಾನಾಭಿವೃದ್ಧಿ ಮಾಡುವ ಹಕ್ಕಿಗಳೂ ಉಂಟು. ಉದಾಹರಣೆಗೆ ದಕ್ಷಿಣ ಅಮೆರಿಕದಲ್ಲಿ ಕಾಣಬರುವ ಹಕ್ಕಿ, ಸ್ಟಿಯಟಾರ್ನಿಸ್ ಕ್ಯಾರಿಪೆನ್ಸಿಸ್.