ಗುಂಡಿಗೆಯ ಅಂಗರಚನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮನುಷ್ಯ ದೇಹದ ಸಮಸ್ತ ಭಾಗಗಳಲ್ಲೂ ಸದಾ ರಕ್ತ ಪರಿಚಲನೆ ಇರುವಂತೆ ಮಾಡುವ ಅಂಗ ಗುಂಡಿಗೆ. ಇದು ಗುಂಡಿಗೆಸ್ನಾಯು (ಕಾರ್ಡಿಯಕ್ ಮಸಲ್) ಎಂಬ ವಿಶೇಷ ಸ್ನಾಯುವಿನಿಂದ ನಿರ್ಮಿತವಾಗಿದೆ. ಇದರ ಸ್ಥಾನ ಎದೆಯಲ್ಲಿ (ನಿಖರವಾಗಿ ಮೂಳೆಗಳಿಂದ ರಚಿತವಾದ ಎದೆಗೂಡಿನ ಒಳಗೆ), ಎರಡು ಫುಪ್ಪಸಗಳ ನಡುವೆ, ಎಡ ಫುಪ್ಪಸ ಕೊಂಚ ಮರೆಮಾಡಿದಂತೆ, ಮುಂಭಾಗಕ್ಕೆ ಎಡಕ್ಕೆ ಓರೆಯಾಗಿ ವಪೆಯ ಮೇಲೆ ಉಂಟು. ಗುಂಡಿಗೆಯ ⅔ ಭಾಗ ದೇಹದ ಮಧ್ಯರೇಖೆಯ ಎಡಕ್ಕೂ ⅓ ಭಾಗ ಬಲಕ್ಕೂ ವ್ಯಾಪಿಸಿದೆ. ಇಡೀ ಗುಂಡಿಗೆ ಮಾವಿನಕಾಯಿಯ ಆಕಾರವಾಗಿದ್ದು ಕೈಮುಷ್ಟಿಗಿಂತಲೂ ಕೊಂಚ ದೊಡ್ಡದಾಗಿರುತ್ತದೆ. ವಯಸ್ಕರಲ್ಲಿ ಇದರ ತೂಕ ಸುಮಾರು 300 ಗ್ರಾಂ. ಮಕ್ಕಳಲ್ಲಿ ಅದು, ಅವರ ಮೈ ತೂಕಕ್ಕೆ ಹೋಲಿಸಿದರೆ, ಹೆಚ್ಚು ತೂಕವಾಗಿರುತ್ತದೆ. 25 ದಿವಸಗಳ ಗರ್ಭಾವಸ್ಥೆಯಲ್ಲಿ ಪ್ರಾರಂಭವಾಗುವ ಗುಂಡಿಗೆಯ ಬಡಿತ, ಜೀವಮಾನ ಪರ್ಯಂತ ಬಡಿಯುತ್ತಲೇ ಇರುತ್ತದೆ. ಗರ್ಭಾವಸ್ಥೆಯಲ್ಲಿ ಬಡಿತದ ದರ ಮಿನಿಟಿಗೆ 130-140; ಹುಟ್ಟಿದ ತರುಣದಲ್ಲಿ ಅದು 90-100 ಆಗಿ, ಬಾಲ್ಯಾವಸ್ಥೆಯಲ್ಲಿ ಕ್ರಮೇಣ ಕಡಿಮೆಯಾಗುತ್ತ ಯೌವನದಿಂದಾಚೆಗೆ ಮಿನಿಟಿಗೆ ಸುಮಾರು 72 ಆಗುತ್ತದೆ. ಗುಂಡಿಗೆಯ ಸುತ್ತ (ಬುಡದ ಹೊರತಾಗಿ) ಕವಚದ ಹಾಗೆ, ಗುಂಡಿಗೆಯ ಹೊರಪೊರೆ (ಪೆರಿಕಾರ್ಡಿಯಂ) ಉಂಟು. ವಾಸ್ತವವಾಗಿ ಇದು ಮೂರು ಪದರಗಳಿಂದಾಗಿದೆ. ಹೊರಪದರ ಗಡಸು, ಉಳಿದೆರಡು ನುಣುಪು. ಈ ಎರಡು ಪದರಗಳಲ್ಲಿ ಹೊರಗಿನದು ಗಡಸು ಪದರಕ್ಕೆ ಅಂಟಿಕೊಂಡಿದೆ. ಒಳಗಿನದು ಗುಂಡಿಗೆಯ ಹೊರಪದರವಾಗಿದೆ. ಇವೆರಡು ಪದರಗಳ ನಡುವೆ ಕೀಲೆಣ್ಣೆಯಂತೆ ನುಣುಪಿಸುವ ಬಹುಸ್ವಲ್ಪ ದ್ರವವಿದ್ದು, ಇದರಿಂದ ಗುಂಡಿಗೆ ತಿಕ್ಕಾಟವಿಲ್ಲದೆ ಹಿಗ್ಗುವುದಕ್ಕೂ ಕುಗ್ಗುವುದಕ್ಕೂ ಸಾಧ್ಯವಾಗಿದೆ.


ಮುಂದಿನಿಂದ ನೋಡಿದರೆ ಗುಂಡಿಗೆಯ ಬಲಗಡೆ ಅಂಚು ಎದೆಮೂಳೆಯ (ಸ್ಟರ್ನಂ) ಬಲ ಅಂಚಿಗಿಂತ ಒಂದು ಬೆರಳಗಲ ಬಲಕ್ಕಿರುತ್ತದೆ. ಹಾಗೆಯೇ ಎಡ ಅಂಚು ಎದೆಮೂಳೆಯ ಎಡ ಅಂಚಿಗಿಂತ ಒಂದು ಬೆರಳಗಲ ಎಡಕ್ಕಿರುತ್ತದೆ. ಗುಂಡಿಗೆಯ ಎಡಬಲಭಾಗಗಳಲ್ಲಿ ರಕ್ತವನ್ನು ಪಡೆಯಲು ಒಂದೊಂದು ಹೃತ್ಕರ್ಣ (ಏಟ್ರಿಯಂ) ರಕ್ತವನ್ನು ಹೊರತಳ್ಳಲು ಒಂದು ಹೃತ್ಕುಕ್ಷಿ (ವೆಂಟ್ರಿಕಲ್) ಹೀಗೆ ಒಟ್ಟು ನಾಲ್ಕು ಕೋಶಗಳಿವೆ (ಚಿತ್ರ 1). ಹೃತ್ಕರ್ಣಗಳಿಗೂ ಹೃತ್ಕುಕ್ಷಿಗಳಿಗೂ ನಡುವೆ ಆಳವಾದ ರೇಖೆ ಉಂಟು. ಈ ರೇಖೆಯಲ್ಲಿ ಕೊಬ್ಬು ತುಂಬಿದ್ದು ಗುಂಡಿಗೆಗೆ ಆಕ್ಸಿಜನ್ಯುಕ್ತ ರಕ್ತವನ್ನು ಭಾಗಶಃ ಒದಗಿಸುವ ಬಲಗುಂಡಿಗೆ ಅಪಧಮನಿ (ರೈಟ್ ಕರೋನರಿ ಆರ್ಟರಿ) ಇರುತ್ತದೆ. ಎರಡು ಹೃತ್ಕುಕ್ಷಿಗಳ ನಡುವೆಯೂ ಒಂದು ರೇಖೆ ಇದೆ. ಈ ರೇಖೆಯಲ್ಲಿ ಎಡಗುಂಡಿಗೆ ಅಪಧಮನಿಯ ಒಂದು ಮುಖ್ಯಶಾಖೆ ಉಂಟು. ಎರಡು ಹೃತ್ಕರ್ಣಗಳನ್ನು ಪ್ರತ್ಯೇಕಿಸುವ ಯಾವ ಗುರುತೂ ಹೊರಗಿನಿಂದ ಕಾಣಿಸುವುದಿಲ್ಲ. ಏಕೆಂದರೆ ಆ ಸ್ಥಳ ಫುಪ್ಪಸ ಧಮನಿ (ಪಲ್ಮನರಿ ಆರ್ಟರಿ) ಮತ್ತು ಮಹಾಪಧಮನಿಯ ಆರೋಹಣ ಭಾಗಗಳಿಂದ (ಅಸೆಂಡಿಂಗ್ ಪಾರ್ಟ್ ಆಫ್ ದಿ ಅಯೋರ್ಟ) ಮರೆಮಾಡಲ್ಪಟ್ಟಿದೆ. ಗುಂಡಿಗೆಯ ತುತ್ತತುದಿ ಎಡ ಹೃತ್ಕುಕ್ಷಿಯ ಕೆಳಮೂತಿಯಾಗಿದ್ದು ಎದೆಯ ಎಡಗಡೆ 5-6ನೆಯ ಪಕ್ಕೆಲಬುಗಳ ನಡುವೆ ಇರುತ್ತದೆ. ರೋಗದಿಂದ ಗುಂಡಿಗೆ ವಿಕಾರವಾದಾಗ ಅಥವಾ ದೊಡ್ಡದಾದಾಗ ಇದು ಜಾಗವನ್ನು ಬದಲಾಯಿಸಿರುತ್ತದೆ. ಎದೆಮೂಳೆಯ ಹಿಂದೆ ಕಾಣುವ ಗುಂಡಿಗೆಯ ಬಲ ಅಂಚು ಬಲ ಹೃತ್ಕರ್ಣದಿಂದಲೂ ಎಡ ಅಂಚು ವಿಶೇಷವಾಗಿ ಎಡ ಹೃತ್ಕುಕ್ಷಿ ಮತ್ತು ಸ್ವಲ್ಪ ಮಾತ್ರ ಎಡ ಹೃತ್ಕರ್ಣದಿಂದಲೂ ಆಗಿವೆ. ಎದೆಮೂಳೆಯ ಹಿಂದೆಯೇ ಇರುವ ಗುಂಡಿಗೆಯ ಮುಂಬದಿಯಲ್ಲಿ ಸುಮಾರು ಭಾಗ ಬಲ ಹೃತ್ಕುಕ್ಷಿಯಿಂದ ಆಗಿದೆ. ಗುಂಡಿಗೆ ಕೆಳ ಅಂಚೂ ಇದರಿಂದಲೇ ಆಗಿದೆ. ಗುಂಡಿಯ ತಳ ಹಿಮ್ಮುಖವಾಗಿರುತ್ತದೆ. ಇದು ಎದೆಪ್ರದೇಶದ 5ನೆಯ ಬೆನ್ನುಮೂಳೆ ಯಿಂದ 8ನೆಯ ಬೆನ್ನುಮೂಳೆವರೆಗೆ (ತೊರ್ಯಾಸಿಕ್ ವರ್ಟಿಬ್ರ) ಪಸರಿಸಿರುತ್ತದೆ. ಇದಕ್ಕೂ ಬೆನ್ನು ಮೂಳೆಗೂ ನಡುವೆ ಮಹಾಪಧಮನಿಯ ಅವರೋಹಣ ಭಾಗವೂ ಅನ್ನನಾಳವೂ ಇರುತ್ತವೆ. ಈ ಭಾಗ ಬಹುವಾಗಿ ಎಡ ಹೃತ್ಕರ್ಣದಿಂದಾಗಿದ್ದು ಇಲ್ಲೆ ಬಲಗಡೆಯಿಂದ 2 ಫುಪ್ಪಸ ಅಭಿಧಮನಿಗಳೂ (ಪಲ್ಮನರಿ ವೇನ್ಸ್) ಎಡಗಡೆಯಿಂದ ಎರಡು ಫುಪ್ಪಸ ಅಭಿಧಮನಿಗಳೂ ಬಂದು ಎಡಹೃತ್ಕರ್ಣವನ್ನು ಸೇರುತ್ತವೆ. ಇವು ಆಕ್ಸಿಜನ್ಯುಕ್ತ ರಕ್ತವನ್ನು ಫುಪ್ಪಸಗಳಿಂದ ಎಡಹೃತ್ಕರ್ಣಕ್ಕೆ ಒಯ್ಯುತ್ತವೆ (ಚಿತ್ರ 2). ವಪೆಗೆ ತಗುಲಿದ ಹಾಗಿರುವ ಗುಂಡಿಗೆಯ ಭಾಗ 2/3ರಷ್ಟು ಎಡಹೃತ್ಕುಕ್ಷಿಯಿಂದಲೂ 1/3ರಷ್ಟು ಬಲಹೃತ್ಕುಕ್ಷಿಯಿಂದಲೂ ಆಗಿದೆ. ವಪೆ ಗುಂಡಿಗೆಯನ್ನು ಯಕೃತ್ತಿನ ಎಡಭಾಗ ಮತ್ತು ಜಠರದಿಂದ ಪ್ರತ್ಯೇಕಿಸುತ್ತದೆ.


ಬಲಪಕ್ಕದಿಂದ ನೋಡಿದರೆ ಬಲಹೃತ್ಕುಕ್ಷಿಗೂ ಬೆನ್ನುಮೂಳೆಗೂ ನಡುವೆ ಬಲ ಹೃತ್ಕರ್ಣ ಕಾಣಿಸುತ್ತದೆ. ತಲೆ ತೋಳುಗಳು ಮತ್ತು ಎದೆಯ ಮೇಲುಭಾಗದಿಂದ ಆಕ್ಸಿಜನ್ವಿರಳರಕ್ತವನ್ನು ಒಯ್ಯುವ ಉನ್ನತಮಹಾಭಿಧಮನಿ (ಸುಪೀರಿಯರ್ ವೀನ ಕೇವ) ಬಲ ಹೃತ್ಕರ್ಣದ ಮೇಲಿನ ಭಾಗಕ್ಕೆ ತೆರೆದುಕೊಳ್ಳುತ್ತದೆ. ಹೀಗೆಯೇ ದೇಹದಲ್ಲಿ ಉಳಿದ ಭಾಗಗಳಿಂದ ರಕ್ತವನ್ನು ಒಯ್ಯುವ ಅವನತಮಹಾಭಿಧಮನಿ (ಇನ್ಫೀರಿಯರ್ ವೀನ ಕೇವ) ಕೆಳಗಿನಿಂದ ವಪೆಯಲ್ಲಿ ತೂರಿ ಬಲಹೃತ್ಕರ್ಣದ ಕೆಳಭಾಗದಲ್ಲಿ ತೆರೆದು ಕೊಳ್ಳುತ್ತದೆ. ಕವಾಟವಿರುವ ಗುಂಡಿಗೆಯ ಮಹಾಭಿಧಮನಿ (ಕರೋನರಿ ಸೈನಸ್) ಇಡೀ ಗುಂಡಿಗೆಯ ಸ್ನಾಯುಗಳಿಂದ ಬರುವ ಆಕ್ಸಿಜನ್ ವಿರಳರಕ್ತವನ್ನು ಬಲಹೃತ್ಕರ್ಣಕ್ಕೆ ತಲುಪಿಸುತ್ತದೆ. ಬಲಹೃತ್ಕರ್ಣದಲ್ಲಿ ಉನ್ನತ ಮಹಾಭಿಧಮನಿ ಸೇರುವ ಕಡೆ ಸೈನೊ ಏಟ್ರಿಯಲ್ ಗಿಣ್ಣು ಮತ್ತು ಗುಂಡಿಗೆಯ ಮಹಾಭಿಧಮನಿಯ ಹತ್ತಿರ ಏಟ್ರಿಯೋವೆಂಟ್ರಿಕ್ಯುಲರ್ ಗಿಣ್ಣು ಎಂಬ ಎರಡು ವಿಶಿಷ್ಟ ಮಾಂಸದ ಗಂಟುಗಳು ಬಲಹೃತ್ಕರ್ಣದ ಮಾಂಸಭಿತ್ತಿಯಲ್ಲಿ ಹುದುಗಿಕೊಂಡಿರುತ್ತವೆ. ಇವುಗಳ ಸ್ವಯಂ ಪ್ರಚೋದಿತ ಕಾರ್ಯಕ್ರಮದಿಂದ ಗುಂಡಿಗೆ ನಿಯತವಾದ ತಾಳಕ್ರಮದಲ್ಲಿರುತ್ತದೆ. ಬಲಹೃತ್ಕರ್ಣದ ಹಿಂದಕ್ಕೂ ಎಡಕ್ಕೂ ಎಡಹೃತ್ಕರ್ಣ ಉಂಟು. ಹೀಗಿರುವುದು ಎರಡು ಹೃತ್ಕರ್ಣಗಳನ್ನು ವಿಭಾಗಿಸುವ ನಡುವಣ ತಡಿಕೆ ಓರೆಯಾಗಿರುವುದರ ಪರಿಣಾಮ. ಭ್ರೂಣಾವಸ್ಥೆಯಲ್ಲಿ ಈ ತಡಿಕೆಯಲ್ಲಿ ಅಂಡಾಕಾರದ ಕಂಡಿ (ಫೊರಾಮನ್ ಓವಾಲೀ) ಇದ್ದು ಅದು ಅವನತಮಹಾಭಿಧಮನಿಯಿಂದ ಬಲಹೃತ್ಕರ್ಣವನ್ನು ತಲುಪಿದ ರಕ್ತವನ್ನು ಕೂಡಲೇ ಎಡಹೃತ್ಕರ್ಣಕ್ಕೆ ಹೋಗಗೊಡುತ್ತದೆ. ರಕ್ತದ ಚಲನೆಯನ್ನು ಈ ರೀತಿ ನಿಯಂತ್ರಿಸಲು ಅವನತಮಹಾಭಿಧಮನಿಯ ಬಾಯಲ್ಲಿ ಯೂಸ್ಟೇಕಿಯಸ್ಸನ ಕವಾಟಗಳಿರುತ್ತವೆ. ಜನನವಾದ ಮೇಲೆ ಎರಡು ಹೃತ್ಕರ್ಣಗಳ ಒಳಪೊರೆಗಳೂ ಅಂಡಾಕಾರದ ಕಂಡಿಯನ್ನು ಮುಚ್ಚಿ ತಡಿಕೆಯಲ್ಲಿ ಒಂದು ತಗ್ಗು ಮಾತ್ರ ಇರುವಂತೆ ಕಾಣುತ್ತದೆ. ಯೂಸ್ಟೇಕಿಯಸ್ಸನ ಕವಾಟಗಳ ಉಳಿಕೆಗಳೂ ಅವನತಮಹಾಭಿ ಧಮನಿಯ ಬಾಯ ಸುತ್ತ ಕಾಣಬರುತ್ತವೆ. ಗುಂಡಿಗೆಯ ಮಿಕ್ಕ ಎಲ್ಲ ಕೋಶಗಳಂತೆ ಬಲಹೃತ್ಕರ್ಣದ ಒಳಗೆ ಕೂಡ ನುಣುಪಾದ ಪೊರೆ ಇದ್ದರೂ ಆ ಪೊರೆಯ ಒಳಗೆ ಇರುವ ಸ್ನಾಯು ತಂತುಗಳ ವಿನ್ಯಾಸದಿಂದ ಅದು ಜುಂಗುಜುಂಗಾಗಿರುವುದು.


ಬಲಹೃತ್ಕರ್ಣದಿಂದ ಬಲಹೃತ್ಕುಕ್ಷಿಗೆ ರಕ್ತ ಇವುಗಳ ನಡುವೆ ಇರುವ ದ್ವಾರದ ಮೂಲಕ ಹರಿದು ತುಂಬಿಕೊಳ್ಳುತ್ತದೆ. ಬಲಹೃತ್ಕರ್ಣ ಸಂಕುಚಿಸಿದಾಗ ಬಲ ಹೃತ್ಕುಕ್ಷಿ ಪುರ್ಣವಾಗಿ ತುಂಬಿಕೊಳ್ಳುತ್ತದೆ. ಬಲಹೃತ್ಕರ್ಣ ಹೃತ್ಕುಕ್ಷಿಗಳ ನಡುವಿನ ಈ ದ್ವಾರದಲ್ಲಿ ತ್ರಿದಳ ಕವಾಟ (ಟ್ರೈಕಸ್ಟಿಡ್ ವಾಲ್ವ್) ಉಂಟು. ಇದು ಬಲಹೃತ್ಕರ್ಣದಿಂದ ಬಲಹೃತ್ಕುಕ್ಷಿಗೆ ರಕ್ತ ಹರಿಯಲು ಅವಕಾಶ ಮಾಡಿಕೊಡುತ್ತದಾದರೂ ಬಲಹೃತ್ಕುಕ್ಷಿ ಸಂಕುಚಿಸಿದಾಗ ಇದರ ಮೂರು ದಳಗಳೂ ತೇಲಿ ಸಂಪರ್ಕಗೊಂಡು ದ್ವಾರ ಮುಚ್ಚಿಕೊಳ್ಳುವುದರಿಂದ ರಕ್ತ ಪುನಃ ಹೃತ್ಕರ್ಣಕ್ಕೆ ಬರದಂತೆ ತಡೆಯುತ್ತದೆ. ಕವಾಟದ ದಳಗಳ ಕೆಳಗಿನ ಕುಚ್ಚುಕುಚ್ಚಾದ ಅಂಚುಗಳ ಕಾರ್ಡೆಟೆಂಡಿನೆ ಎಂಬ ತಂತುಗಳಿಂದ, ಬಲ ಹೃತ್ಕುಕ್ಷಿಯ ಒಳಗಿರುವ ಬೆರಳಿನೋಪಾದಿಯ ಸ್ನಾಯುಗಳ ತುದಿಗೆ ಸೇರಿಸಲ್ಪಟ್ಟಿರುವುದರಿಂದ, ಕವಾಟ ಮುಚ್ಚಿಕೊಂಡಾಗ ದಳಗಳು ದೃಢವಾಗಿದ್ದು ರಕ್ತದ ವಾಪಸಾತಿಯ ತಡೆಯನ್ನು ಯಶಸ್ವಿಯಾಗಿ ನೆರವೇರಿಸುತ್ತದೆ. ಬಲಹೃತ್ಕುಕ್ಷಿಯಿಂದ ರಕ್ತ ಫುಪ್ಪಸ ಅಪಧಮನಿಯೊಳಕ್ಕೆ ನೂಕಲ್ಪಡುತ್ತದೆ. ಈ ಅಪಧಮನಿಯ ಪ್ರಾರಂಭದಲ್ಲಿ ಮೂರು ಅರೆಚಂದ್ರಾಕಾರ ದಳಗಳುಳ್ಳ ಅರೆಚಂದ್ರಾಕಾರ ಕವಾಟವಿದ್ದು ಹೃತ್ಕುಕ್ಷಿ ಸಂಕುಚಿಸಿದಾಗ ವಾಟ್ಸಾಲ್ವನ ಸೈನಸ್ಗಳೆಂಬ ಸಣ್ಣ ಪೊಟರೆಗಳೊಳಕ್ಕೆ ಬರಿದಾದ ದಳಗಳು ತಳ್ಳಲ್ಪಟ್ಟು ರಕ್ತ ಅಪಧಮನಿಯೊಳಗೆ ಹೋಗಲು ಅವಕಾಶ ಮಾಡಿಕೊಡುತ್ತದೆ. ಹೃತ್ಕುಕ್ಷಿಯ ವಿಕಾಸ (ರಿಲ್ಯಾಕ್ಸೇಷನ್) ಪ್ರಾರಂಭವಾದಾಗ ಕವಾಟದ ದಳಗಳಲ್ಲಿ ರಕ್ತತುಂಬಿ ಅವು ಹಿಂದಕ್ಕೆ ಬಿದ್ದು ಅಪಧಮನಿಯನ್ನು ಅಡ್ಡಕಟ್ಟಿ ರಕ್ತ ಪುನಃ ಹೃತ್ಕುಕ್ಷಿಯೊಳಗೆ ಹೋಗದಂತೆ ತಡೆಯುತ್ತವೆ. ಫುಪ್ಪಸ ಅಪಧಮನಿ ರಕ್ತವನ್ನು ಎರಡು ಫುಪ್ಪಸಗಳಿಗೂ ಒಯ್ಯುತ್ತದೆ. ಅಲ್ಲಿ ರಕ್ತ ಆಕ್ಸಿಜನ್ನನ್ನು ಹೀರಿಕೊಂಡು ಎಡಫುಪ್ಪಸದಿಂದ ಎರಡು, ಬಲ ಫುಪ್ಪಸದಿಂದ ಎರಡು ಫುಪ್ಪಸ ಅಭಿಧಮನಿಗಳ ಮೂಲಕ ಎಡ ಹೃತ್ಕರ್ಣಕ್ಕೆ ಬಂದು ಸೇರುತ್ತದೆ. ಎಡಹೃತ್ಕರ್ಣದಿಂದ ರಕ್ತ ಎಡಹೃತ್ಕುಕ್ಷಿಗೆ ಇವೆರಡರ ನಡುವಣ ದ್ವಾರದ ಮೂಲಕ ಹರಿದು ತುಂಬಿಕೊಳ್ಳುತ್ತದೆ. ಬಲಭಾಗದಲ್ಲಿನಂತೆ ಈ ದ್ವಾರದಲ್ಲೂ ಕವಾಟ ಉಂಟು. ಆದರೆ ಇದರಲ್ಲಿ ಎರಡು ದಳಗಳು ಮಾತ್ರ ಇರುವುದರಿಂದ ಇದನ್ನು ದ್ವಿದಳಕವಾಟವೆಂದು ಕರೆಯಲಾಗಿದೆ. ಇದಕ್ಕೆ ಮೈಟ್ರಲ್ ಕವಾಟವೆಂದು ಕೂಡ ಹೆಸರುಂಟು. ಈ ಕವಾಟ ಸಹ ಎಡಹೃತ್ಕರ್ಣ ಸಂಕುಚಿಸುವಾಗಲೂ ತೆರೆದುಕೊಂಡಿದ್ದು ಎಡಹೃತ್ಕುಕ್ಷಿ ಸಂಪೂರ್ಣ ವಾಗಿ ತುಂಬಿ ಅದರ ಸಂಕುಚನೆ ಪ್ರಾರಂಭವಾದಾಗ ಇದರ ಎರಡು ದಳಗಳೂ ತೇಲಿ ಸಂಪರ್ಕಗೊಂಡು ದ್ವಾರ ಮುಚ್ಚಿಕೊಂಡು ಹೃತ್ಕರ್ಣಕ್ಕೆ ರಕ್ತದ ವಾಪಸಾತಿಯನ್ನು ತಡೆಯುತ್ತದೆ. ಈ ದಳಗಳ ಕುಚ್ಚುಕುಚ್ಚಾದ ಅಂಚು ತಂತುಗಳಿಂದ ಎಡಹೃತ್ಕುಕ್ಷಿಯ ಒಳಗಿರುವ ಬೆರಳಿನೋಪಾದಿಯ ಸ್ನಾಯುಗಳ ತುದಿಗೆ ಸೇರಿಕೊಂಡಿರುವುದರಿಂದ ದೃಢಗೊಳಿಸಲ್ಪಟ್ಟು ರಕ್ತದ ತಡೆ ಯಶಸ್ವಿಯಾಗಿರುತ್ತದೆ. ಎಡಹೃತ್ಕುಕ್ಷಿಯ ಸಂಕುಚನದಿಂದ ರಕ್ತ ಮಹಾಪಧಮನಿಗೆ (ಅಯೋರ್ಟ) ನುಗ್ಗಿಸಲ್ಪಡುತ್ತದೆ. ಮಹಾಪಧಮನಿಯ ಪ್ರಾರಂಭದಲ್ಲೂ ಅರೆಚಂದ್ರಾಕಾರ ಕವಾಟವಿದ್ದು ಎಡಹೃತ್ಕುಕ್ಷಿಯ ವಿಕಾಸ ಪ್ರಾರಂಭವಾದಾಗ ಅಪಧಮನಿಯಿಂದ ರಕ್ತದ ಹಿನ್ನುಗ್ಗುವಿಕೆಯನ್ನು ಅದು ತಡೆಯುತ್ತದೆ. ರಕ್ತ ಮಹಾಪಧಮನಿಯ ಮೂಲಕ ಮುಂದೆ ಹರಿದು ದೇಹದ ಎಲ್ಲ ಕಡೆಗಳಿಗೂ ಪುರೈಸಲ್ಪಡುತ್ತದೆ. ಗುಂಡಿಗೆಗೇ ರಕ್ತವನ್ನು ಪುರೈಸುವ ಎಡ, ಬಲ ಎಂಬ ಎರಡು ಗುಂಡಿಗೆ ಅಪಧಮನಿಗಳು ಮಹಾಪಧಮನಿಯ ಪ್ರಾರಂಭದ ಕವಲುಗಳು. ಎಡಬಲ ಹೃತ್ಕುಕ್ಷಿಗಳ ನಡುವೆ ಇರುವ ತಡಿಕೆಯೂ ಸ್ವಲ್ಪಮಟ್ಟಿಗೆ ಓರೆಯಾಗಿರುವುದರಿಂದ ಬಲ ಹೃತ್ಕುಕ್ಷಿ ಸ್ವಲ್ಪ ಮುಂದಕ್ಕೂ ಎಡಹೃತ್ಕುಕ್ಷಿ ಸ್ವಲ್ಪ ಹಿಂದಕ್ಕೂ ಇವೆ. ಈ ತಡಿಕೆ ಕೆಳಭಾಗದಲ್ಲಿ ಸ್ನಾಯುಯುಕ್ತವಾಗಿ ದಪ್ಪವಾಗಿಯೂ ಮಹಾಪಧಮನಿಯ ಉಗಮಸ್ಥಾನದ ಹತ್ತಿರ ಸ್ನಾಯುರಹಿತವಾಗಿ ತೆಳ್ಳಗೂ ಇದೆ. ಅಲ್ಲದೆ ತಡಿಕೆ ಬಲಗಡೆಗೆ ಡೊಂಕಾಗಿ ಉಬ್ಬಿಕೊಂಡಿರುವುದರಿಂದ ಹೃತ್ಕುಕ್ಷಿಗಳ ನೇರದಲ್ಲಿ ಗುಂಡಿಗೆಯನ್ನು ಅಡ್ಡವಾಗಿ ಛೇದಿಸಿದರೆ ಬಲಹೃತ್ಕುಕ್ಷಿ ಅರ್ಧಚಂದ್ರಾಕಾರವಾಗಿದ್ದು ಗುಂಡಗಿರುವ ಎಡಹೃತ್ಕುಕ್ಷಿಯನ್ನು ಆವರಿಸಿದಂತೆ ಕಾಣುವುದು (ಚಿತ್ರ 3). ಹಾಗೆಯೇ ಎಡಹೃತ್ಕುಕ್ಷಿಯ ಭಿತ್ತಿ ಬಲಹೃತ್ಕುಕ್ಷಿಯ ಭಿತ್ತಿಗಿಂತ ಬಹು ದಪ್ಪವಾಗಿರುವುದಾಗಿ ಕಾಣುವುದು. ಹೃತ್ಕುಕ್ಷಿಗಳ ಭಿತ್ತಿ ಬಲಹೃತ್ಕುಕ್ಷಿಯ ಭಿತ್ತಿಗಿಂತಲೂ ತೆಳುವಾಗಿರುತ್ತದೆ. ಹೃತ್ಕರ್ಣ ಹೃತ್ಕುಕ್ಷಿಗಳ ತಡಿಕೆಗಳು ಗುಂಡಿಗೆಯ ಎಡಬಲ ಭಾಗಗಳನ್ನು ನೇರ ಸಂಪರ್ಕವಿಲ್ಲದಂತೆ ಪ್ರತ್ಯೇಕಿಸುತ್ತವೆ.


ಹೃತ್ಕರ್ಣ ಹೃತ್ಕುಕ್ಷಿಗಳ ನಡುವೆ ಯಾವ ನೇರವಾದ ಸಂಬಂಧವೂ ಇಲ್ಲಿ ಕಾಣಿಸುವುದಿಲ್ಲ. ಆದರೂ ಹೃತ್ಕರ್ಣಗಳು ಕುಗ್ಗಿ ಪುನಃ ಹಿಗ್ಗುವುದಕ್ಕೆ ಪ್ರಾರಂಭಿಸಿದ ಮೇಲೆಯೇ ಹೃತ್ಕುಕ್ಷಿಗಳು ಕುಗ್ಗುವುದಕ್ಕೆ ಪ್ರಾರಂಭಿಸುತ್ತವೆ. ಈ ನಿಯಂತ್ರಣ ಕ್ರಮ ಮೇಲೆ ಹೇಳಿದಂತೆ ಸೈನೋ ಏಟ್ರಿಯಲ್ ಮತ್ತು ಏಟ್ರಿಯೋವೆಂಟ್ರಿಕ್ಯುಲರ್ ಗಿಣ್ಣುಗಳಿಂದ ಸಾಧ್ಯವಾಗಿದೆ. ಸೈನೋ ಏಟ್ರಿಯಲ್ ಗಿಣ್ಣಿನಲ್ಲಿ ಗುಂಡಿಗೆಯ ಬಡಿತಕ್ಕೆ ಸ್ವಯಂಪ್ರಚೋದನೆ ಯಾಗುತ್ತದೆ. ಇದು ಎರಡು ಹೃತ್ಕರ್ಣಗಳನ್ನೂ ಒಟ್ಟಿಗೆ ಸಂಕುಚಿಸಿ ಜೊತೆಗೇ ಏಟ್ರಿಯೋವೆಂಟ್ರಿಕ್ಯುಲರ್ ಗಿಣ್ಣನ್ನು ಪ್ರಚೋದಿಸುತ್ತದೆ. ಅಲ್ಲಿಂದ ಪ್ರಚೋದನೆ ಹಿಸ್ಸನ ಬೊಂತೆ (ಬಂಡಲ್ ಆಫ್ ಹಿಸ್ಸ್) ಎಂಬ ಅವ್ಯಕ್ತವಾದ ವಿಶೇಷ ಸ್ನಾಯುಗಳ ಪಟ್ಟಿಯ ಮೂಲಕ ಮುಂದುವರಿಯುತ್ತದೆ. ಹಿಸ್ಸನ ಬೊಂತೆ ಏಟ್ರಿಯೋವೆಂಟ್ರಿಕ್ಯುಲರ್ ಗಿಣ್ಣಿನಿಂದ ಪ್ರಾರಂಭವಾಗಿ ಹೃತ್ಕುಕ್ಷಿಗಳ ನಡುವಿನ ತಡಿಕೆಯ ಮೇಲುಭಾಗವನ್ನು ಸೇರುತ್ತದೆ. ಅಲ್ಲಿ ಎರಡು ಕವಲಾಗಿ ತಡಿಕೆಯ ಎಡಬಲ ಮೈಮೇಲೆ ಮುಂದುವರಿದು ಗುಂಡಿಗೆಯ ತುದಿಯನ್ನು ಸೇರುತ್ತದೆ. ಅಲ್ಲಿಂದ ಹೃತ್ಕುಕ್ಷಿಗಳ ಎಡ ಬಲ ಅಂಚುಗಳಲ್ಲಿ ಕ್ರಮಿಸುತ್ತ ಅನೇಕ ಎಳೆಗಳಾಗಿ ಗುಂಡಿಗೆಯ ಸ್ನಾಯುವಿನ ಜೀವಕಣಗಳೊಡನೆ ವಿಲೀನವಾಗುತ್ತದೆ. ಇದರಿಂದ ಸ್ನಾಯುಗಳೆಲ್ಲ ಹೊಂದಿಕೊಂಡು ಚೋದನೆಗೆ ಈಡಾಗುವಂತೆ ನೆರವಾಗುತ್ತದೆ ಮತ್ತು ಎರಡು ಹೃತ್ಕರ್ಣಗಳು ಒಟ್ಟಿಗೇ ಸಂಕುಚಿಸಿದ ಮೇಲೆ ಸುಮಾರು 0.1 ಸೆಕೆಂಡು ತಡೆದು ಎರಡು ಹೃತ್ಕುಕ್ಷಿಗಳೂ ಒಟ್ಟಿಗೇ ಸಂಕುಚಿಸುವುದಕ್ಕೆ ಸಾಧ್ಯವಾಗಿದೆ.


ಗುಂಡಿಗೆಗೆ ಪೂರೈಕೆಯಾಗುವ ನರಗಳಲ್ಲಿ ಉಪಾನುವೇದನ (ಪ್ಯಾರಾಸಿಂಪತೆಟಿಕ್) ನರವಾದ ವೇಗಸ್ ನರವೂ ಕೊರಳು ಮತ್ತು ಎದೆಯ ಮೇಲ್ಗಡೆಯ ನರಗಂಟುಗಳಿಂದ (ಗ್ಯಾಂಗ್ಲಿಯ) ಬರುವ ಅನುವೇದನ ನರಕವಲುಗಳೂ ಇವೆ. ಇವು ಗುಂಡಿಗೆಯ ಮೇಲ್ಮೈಯಲ್ಲಿ ಮತ್ತು ಆಳದಲ್ಲಿ ಹಿಣಿಲುಗಳಾಗಿರುತ್ತವೆ. ಈ ನರಗಳು ಗುಂಡಿಗೆಯ ಬಡಿತವನ್ನು ಸಂದರ್ಭಕ್ಕೆ ಅನುಸಾರವಾಗಿ ನಿಯಂತ್ರಿಸುತ್ತವೆ.


ಪ್ರಾಣಿಗಳಲ್ಲಿ ಗುಂಡಿಗೆಯ ರಚನೆ[ಬದಲಾಯಿಸಿ]

ತೀರ ಪ್ರಾಥಮಿಕ ದರ್ಜೆಯ ಪ್ರಾಣಿಗಳನ್ನು (ಉದಾಹರಣೆಗೆ ಏಕಾಣು ಜೀವಿಗಳು) ಬಿಟ್ಟು ಇತರ ಎಲ್ಲ ಪ್ರಾಣಿಗಳಿಗೂ ಎರೆಹುಳುಗಳನ್ನೂ ಒಳಗೊಂಡಂತೆ ಅಕಶೇರುಕಗಳಿಗೆ ಸಹ ಗುಂಡಿಗೆ ಉಂಟು. ಪ್ರಾಣಿ ದೇಹದಲ್ಲಿ ರಕ್ತಪರಿಚಲನೆಯ ನಿರಂತರತೆಯನ್ನು ಕೂಡಿಟ್ಟುಕೊಳ್ಳುವುದೇ ಇದು ನಿರ್ವಹಿಸುವ ಕ್ರಿಯೆ. ಪ್ರಸಕ್ತ ಲೇಖನದಲ್ಲಿ ಕಶೇರುಕಗಳಲ್ಲಿ ಗುಂಡಿಗೆಯ ವಿಕಾಸವನ್ನು ವಿವರಿಸಿದೆ.


ಪ್ರಪ್ರಥಮವಾಗಿ ಮಾಂಸಲವಾದ ಒಂದು ಗುಂಡಿಗೆ ಆದಿಮ ಕಶೇರುಕಗಳಲ್ಲಿ ಕಾಣಿಸಿಕೊಂಡಿದೆ. ಚಕ್ರಾಸ್ಯಮೀನುಗಳಲ್ಲಿ ಬಹಳ ಸರಳವಾದ ಮತ್ತು ಮೂಲ ರಚನೆಯನ್ನು ತೋರುವ ಗುಂಡಿಗೆಯನ್ನು ಕಾಣಬಹುದು. ಇದರಲ್ಲಿ ನಾಲ್ಕು ಕೋಣೆಗಳಿದ್ದರೂ ಪ್ರಮುಖವಾದವು ಎರಡು ಮಾತ್ರ - ಹೃತ್ಕರ್ಣ ಮತ್ತು ಹೃತ್ಕುಕ್ಷಿ. ಹೃತ್ಕರ್ಣ ತೆಳುಭಿತ್ತಿನ ಕೋಣೆ. ದೇಹದ ನಾನಾ ಭಾಗಗಳಿಂದ ಬರುವ ಮಲಿನ ರಕ್ತ ಮೊದಲು ಈ ಭಾಗಕ್ಕೆ ಬರುತ್ತದೆ. ಹೀಗೆ ರಕ್ತವನ್ನು ಸಂಗ್ರಹಿಸಿ ತಂದು ಹೃತ್ಕರ್ಣಕ್ಕೆ ಸೇರಿಸುವ ಕ್ರಿಯೆಯಲ್ಲಿ ಸೈನಸ್ ವಿನೋಸಸ್ ಎಂಬ ಇನ್ನೊಂದು ಕೋಣೆ ಪಾತ್ರ ವಹಿಸುತ್ತದೆ. ಹೃತ್ಕರ್ಣದಿಂದ ರಕ್ತ ಮಾಂಸಲವಾದ ಹೃತ್ಕುಕ್ಷಿಗೆ ಹೋಗುತ್ತದೆ. ಅಲ್ಲಿಂದ ಕೋನಸ್ ಎಂಬ ಇನ್ನೊಂದು ಕೋಣೆಯ ಮೂಲಕ ದೇಹದ ವಿವಿಧ ಭಾಗಗಳಿಗೆ ಹರಿಯುತ್ತದೆ. ಗುಂಡಿಗೆಯ ಸುತ್ತ ಸೀಲೋಮಿನಿಂದ ಉದ್ಭವಿಸಿದ ಪೆರಿಕಾರ್ಡಿಯಂ ಎಂಬ ಆವರಣವಿದೆ. ಇದನ್ನು ತೆಳುವಾದ ಭಿತ್ತಿಯೊಂದು ಸುತ್ತುವರಿದಿದೆ. ಪೆರಿಕಾರ್ಡಿಯಮಿನಲ್ಲಿ ಒಂದು ರೀತಿಯ ದ್ರವ ಉಂಟು. ಅದು ಮೃದುಚಾಲಕದ ರೀತಿಯಲ್ಲಿ ವರ್ತಿಸುತ್ತದೆ.


ಪ್ರಾಣಿಯ ಬೆಳೆವಣಿಗೆಯ ಕಾಲದಲ್ಲಿ ಗುಂಡಿಗೆ ಮೂಲತಃ ಒಂದು ರಕ್ತನಾಳದಿಂದ ಆರಂಭವಾಗುತ್ತದೆ. ಈ ರಕ್ತನಾಳ ಖ- ಆಕಾರದಲ್ಲಿ ಬಾಗಿ ವಿಭೇದೀಕರಣಗೊಂಡು ವಿವಿಧ ಕೋಣೆಗಳಾಗಿ ವಿಭಾಗವಾಗಿ ಸಮರ್ಥವಾದ ಪ್ರಬುದ್ಧ ಗುಂಡಿಗೆಯಾಗಿ ರೂಪುಗೊಳ್ಳುತ್ತದೆ. ಕಶೇರುಕಗಳಲ್ಲಿ ಗುಂಡಿಗೆಯ ರಚನೆಯ ವಿಕಾಸವನ್ನು ಕಾಣಬಹುದು.


ಮೀನುಗಳಲ್ಲಿ ಮೇಲೆ ತಿಳಿಸಿದ ನಾಲ್ಕು ಕೋಣೆಗಳೂ ಇದ್ದು ಕೇವಲ ಮಲಿನ ರಕ್ತ ಮಾತ್ರ ಗುಂಡಿಗೆಗೆ ಬರುತ್ತದೆ. ಇದಕ್ಕೆ ಮಲಿನ ರಕ್ತದ ಗುಂಡಿಗೆ ಎಂದು ಹೆಸರು. ಮೀನುಗಳಲ್ಲಿ ಏಕ ರಕ್ತಾಭಿಸರಣೆ ಮಾತ್ರ ಕಂಡುಬರುತ್ತದೆ. ಸೈನಸ್ ವಿನೋಸಸ್ ಮತ್ತು ಹೃತ್ಕರ್ಣದ ಮಧ್ಯೆ ತೆಳುವಾದ ಅಪೂರ್ಣ ಮಾಂಸಲ ಭಿತ್ತಿ ಇದೆ. ಇವೆರಡರ ನಡುವೆ ದ್ವಾರದಲ್ಲಿ ಕವಾಟಗಳಿವೆ. ಸ್ವಲ್ಪ ಒತ್ತಡದಿಂದಲೇ ರಕ್ತ ಹೃತ್ಕರ್ಣದಿಂದ ಹೃತ್ಕುಕ್ಷಿಗೆ ಹರಿಯುತ್ತದೆ. ಹೃತ್ಕುಕ್ಷಿಯ ಮುಂದೆ ಕೋನಸ್ ಆರ್ಟಿಯೋಸಸ್ ಕೋಣೆ ವೆಂಟ್ರಲ್ ಅಯೋರ್ಟ (ವೆಂಟ್ರಲ್ ಮಹಾಪಧಮನಿ) ಅಥವಾ ಬಲ್ಬಸ್ ಆರ್ಟೀರಿಯೋಸಸ್ಗೆ ತೆರೆಯುವುದು. ಬಲ್ಬಸ್ ಆರ್ಟೀರಿಯೋಸಸ್ ಟೀಲಿಯಾಸ್ಟ್ ಮೀನುಗಳಲ್ಲಿ ಮಾತ್ರ ಇದೆ. ಆದ್ದರಿಂದ ಈ ಮೀನುಗಳಲ್ಲಿ ಕೋನಸ್ ಮತ್ತು ಅದರಲ್ಲಿನ ಕವಾಟಗಳು ಕಣ್ಮರೆಯಾಗಿವೆ. ಫುಪ್ಪಸ ಮೀನುಗಳ ಗುಂಡಿಗೆಯಲ್ಲಿ ಕೆಲವು ವಿಶೇಷಗಳನ್ನು ಕಾಣಬಹುದು. ಅಪುರ್ಣ ಅಡ್ಡ ಭಿತ್ತಿಯೊಂದು ಹೃತ್ಕರ್ಣವನ್ನು ವಿಭಾಗಿಸಿದೆ. ಇದರ ಎಡಭಾಗ ಬಲಭಾಗಕ್ಕಿಂತ ಚಿಕ್ಕದು. ಇಲ್ಲಿಗೆ ಈಜುಕೋಶದಿಂದ ಬಂದ ರಕ್ತ ಸೇರುತ್ತದೆ. ಈ ದೃಷ್ಟಿಯಿಂದ ಫುಪ್ಪಸ ಮೀನುಗಳ ಗುಂಡಿಗೆ ಯೂರೊಡಿಲ್ ದ್ವಿಚರಿಗಳ ಗುಂಡಿಗೆಯನ್ನು ಹೋಲುತ್ತದೆ.


ದ್ವಿಚರಿಗಳ ಗುಂಡಿಗೆಯ ರಚನೆ ಮೀನುಗಳ ಗುಂಡಿಗೆಯ ರಚನೆಗಿಂತ ಮುಂದುವರಿದಿದೆ. ದ್ವಿಚರಿಗಳಲ್ಲಿನ ಗುಂಡಿಗೆಯಲ್ಲಿ 3 ಪ್ರಧಾನ ಕೋಣೆಗಳನ್ನು ನೋಡಬಹುದು. ಹೃತ್ಕರ್ಣ ಪುರ್ಣ ಅಡ್ಡ ಭಿತ್ತಿಯಿಂದ ಎರಡು ಭಾಗವಾಗಿದ್ದು ಎಡಭಾಗಕ್ಕೆ ಶ್ವಾಸಕೋಶಗಳಿಂದಲೂ ಬಲಭಾಗಕ್ಕೆ ದೇಹದ ಮಿಕ್ಕ ಭಾಗಗಳಿಂದಲೂ ರಕ್ತ ಬಂದು ಸೇರುತ್ತದೆ. ಕಿವಿರುಗಳುಳ್ಳ ಯೂರೊಡಿಲ್ ದ್ವಿಚರಿಗಳಲ್ಲಿ ಶ್ವಾಸಕೋಶಗಳು ಕೃಶವಾಗಿದ್ದರೂ ಹೃತ್ಕರ್ಣ ಮಾತ್ರ ಎರಡು ಭಾಗಗಳನ್ನು ಪಡೆದೇ ಇದೆ. ಕೋನಸ್ ಸರಳವಾಗಿದೆ. ಸುರುಳಿ ಕವಾಟವಿಲ್ಲ. ಬಲ್ಬಸ್ ಆರ್ಟೀರಿಯೋಸಸ್ ಅಯೋರ್ಟದ ಬುಡದಲ್ಲಿದೆ. ದ್ವಿಚರಿಗಳ ಗುಂಡಿಗೆ ಮೀನುಗಳ ಗುಂಡಿಗೆಯಂತೆ ಬರಿಯ ಮಲಿನ ರಕ್ತದ ಗುಂಡಿಗೆಯಲ್ಲ. ಇದರಲ್ಲಿ ಮಲಿನ ಮತ್ತು ಶುದ್ಧ ರಕ್ತಗಳೆರಡೂ ಇವೆ. ಮಲಿನ ರಕ್ತವನ್ನು ದೇಹದ ಭಾಗಗಳಿಂದ ಸಂಗ್ರಹಿಸಿ ಶುದ್ಧೀಕರಣಕ್ಕಾಗಿ ಫುಪ್ಪಸಗಳಿಗೆ ಕಳುಹಿಸುತ್ತದೆ. ಫುಪ್ಪಸಗಳಿಂದ ಆಮ್ಲಜನಕವನ್ನು ಹೊತ್ತ ರಕ್ತ ದೇಹದ ವಿವಿಧ ಭಾಗಗಳಿಗೆ ಹಂಚುವುದು. ಆದ್ದರಿಂದ ಇವುಗಳಲ್ಲಿ ದ್ವಿರಕ್ತಾಭಿಸರಣಿ ಇದೆ.


ಕಪ್ಪೆ ಮತ್ತು ನೆಲಗಪ್ಪೆಗಳ ಗುಂಡಿಗೆ ಮಿಕ್ಕ ದ್ವಿಚರಿಗಳ ಗುಂಡಿಗೆಗಿಂತ ರಚನೆಯಲ್ಲಿ ಹೆಚ್ಚು ಮುಂದುವರಿದಿದೆ. ಕಪ್ಪೆಯಲ್ಲಿ ಇರುವ ಹೃತ್ಕರ್ಣದ ಅಡ್ಡಭಿತ್ತಿ ಹೃತ್ಕರ್ಣವನ್ನು ಬಲ ಮತ್ತು ಎಡ ಹೃತ್ಕರ್ಣಗಳೆಂಬ ಎರಡು ಭಾಗ ಮಾಡುತ್ತದೆ. ಹೃತ್ಕರ್ಣದ ಕೆಳಗೆ ಹೃತ್ಕುಕ್ಷಿಯಿದೆ. ಇದು ದಪ್ಪ ಮಾಂಸಲ ಭಿತ್ತಿಯಿಂದಾದುದು. ಗುಂಡಿಗೆಯ ಬೆನ್ನುಭಾಗದಲ್ಲಿರುವ ಸೈನಸ್ ವಿನೋಸಸ್ ಬಲ ಹೃತ್ಕರ್ಣಕ್ಕೆ ಸೈನು ಆರಿಕ್ಯುಲಾರ್ ದ್ವಾರದ ಮೂಲಕ ತೆರೆಯುತ್ತದೆ. ಈ ತೆರಪಿನ ಬಳಿ ಸೈನು ಆರಿಕ್ಯುಲಾರ್ ಕವಾಟವಿದೆ. ಇದು ಇರುವುದರಿಂದ ರಕ್ತ ಸೈನಸ್ ವಿನೋಸಸ್ನಿಂದ ಹೃತ್ಕರ್ಣಕ್ಕೆ ಮಾತ್ರ ಹರಿಯಲು ಸಾಧ್ಯ. ಸೈನಸ್ ವಿನೋಸಸ್ ಕೋಣೆಗೆ ಮೂರು ಅಭಿಧಮನಿಗಳು ಬಂದು ಸೇರುತ್ತವೆ. ಮುಂಭಾಗದಿಂದ ಎಡ ಮತ್ತು ಬಲ ಉನ್ನತ ಮಹಾಭಿಧಮನಿಗಳೂ (ಸುಪೀರಿಯರ್ ವೀನ ಕೇವ) ಮತ್ತು ಹಿಂಭಾಗದಿಂದ ಅವನತ ಮಹಾಭಿಧಮನಿಯೂ (ಇನ್ಫೀರಿಯರ್ ವೀನ ಕೇವ) ಸೇರುತ್ತವೆ.

ಎಡಹೃತ್ಕರ್ಣಕ್ಕೆ ಪಲ್ಮನರಿ ಅಭಿಧಮನಿ ತೆರೆಯುತ್ತದೆ. ಹೃತ್ಕರ್ಣಗಳೆರಡೂ ಹೃತ್ಕುಕ್ಷಿಗೆ ಆರಿಕ್ಯುಲೊ ವೆಂಟ್ರಿಕ್ಯುಲಾರ್ ರಂಧ್ರದ ಮೂಲಕ ತೆರೆಯುತ್ತವೆ. ಈ ರಂಧ್ರವನ್ನು ಪಟಲಗಳಂತೆ ಇರುವ ಎರಡು ಆರಿಕ್ಯುಲೋ ವೆಂಟ್ರಿಕ್ಯುಲಾರ್ ಕವಾಟಗಳು ಮುಚ್ಚುತ್ತವೆ. ಕವಾಟದ ಮಡಿಕೆಗಳು ತಂತುಸ್ತಂಭಗಳ ಮೂಲಕ ಹೃತ್ಕುಕ್ಷಿಯ ಮಾಂಸಲ ಭಿತ್ತಿಗೆ ನೇತುಬಿದ್ದಿವೆ. ಈ ತಂತುಸ್ತಂಭಗಳಿಗೆ ಕಾರ್ಡ ಟೆಂಡಿನೆ ಎಂದು ಹೆಸರು. ಹೃತ್ಕುಕ್ಷಿಯ ಬುಡದ ಬಲಭಾಗದಿಂದ ಟ್ರಂಕಸ್ ಆರ್ಟೀರಿಯೋಸಸ್ ಎಂಬ ಅಪಧಮನಿ ಹೊರಡುತ್ತದೆ. ಟ್ರಂಕಸ್ ಬುಡಭಾಗವನ್ನು ಕೋನಸ್ ಆರ್ಟೀರಿಯೋಸಸ್ ಅಥವಾ ಪೈಲ್ಯಾಂಜಿಯಂ ಎಂದೂ ತುದಿಭಾಗವನ್ನು ಬಲ್ಬಸ್ ಅಥವಾ ಸೈನಾಂಜಿಯಂ ಭಾಗವೆಂದೂ ಕರೆಯಲಾಗುತ್ತದೆ. ಕೋನಸ್ ಹೃತ್ಕುಕ್ಷಿಯನ್ನು ಸೇರುವ ಸ್ಥಳದಲ್ಲಿ ಮೂರು ಅರ್ಧಚಂದ್ರಾಕಾರದ ಕವಾಟಗಳಿವೆ. ಕೋನಸ್ನಲ್ಲಿ ಉದ್ದವಾದ, ಸುರುಳಿ ಸುತ್ತಿದ ಹಾಗೂ ಓರೆಯಾದ ಕವಾಟ ಉಂಟು. ಈ ಕವಾಟ ಕೋನಸನ್ನು ಅಸಮರ್ಪಕವಾದ ಎರಡು ಭಾಗಗಳನ್ನಾಗಿ ವಿಭಾಗಿಸುತ್ತದೆ. ಬಲಭಾಗಕ್ಕೆ ಕೇವಮ್ ಅಯೋರ್ಟಿಕಂ ಎಂದೂ ಎಡಭಾಗಕ್ಕೆ ಕೇವಮ್ ಪಲ್ಮೊಕ್ಯುಟೇನಿಯಂ ಎಂದೂ ಹೆಸರು. ಟ್ರಂಕಸ್ ಆರ್ಟೀರಿಯೋಸಸ್ ಎರಡು ಕವಲಾಗುತ್ತದೆ. ಪ್ರತಿಯೊಂದು ಕವಲೂ ಮತ್ತೆ ಮೂರು ಕವಲುಗಳಾಗಿ ಒಡೆಯುತ್ತದೆ. ಇವೇ ಕರೋಟಿಡ್, ಸಿಸ್ಟಮಿಕ್ ಮತ್ತು ಪಲ್ಮೊಕುಟೇನಿಯಸ್ ಅಪಧಮನಿಗಳು. ಸರೀಸೃಪಗಳ ಗುಂಡಿಗೆಯಲ್ಲಿ ಹೃತ್ಕರ್ಣ ಎರಡು ವಿಭಾಗವಾಗಿದೆ. ಪ್ರಪ್ರಥಮವಾಗಿ ಹೃತ್ಕುಕ್ಷಿಯಲ್ಲಿ ಅಪುರ್ಣ ಅಡ್ಡ ಭಿತ್ತಿಯೊಂದು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಹೃತ್ಕುಕ್ಷಿ ಅಪೂರ್ಣವಾಗಿ ಬಲ ಮತ್ತು ಎಡಭಾಗಗಳಾಗಿ ವಿಭಾಗವಾಗಿದೆ. ಅಯೋರ್ಟ ಮತ್ತು ಕೋನಸ್ಗಳು ಬುಡಭಾಗದಲ್ಲೇ ಬೇರೆಯಾಗುವುದರಿಂದ ಪಲ್ಮನರಿ ಅಪಧಮನಿ ಹೃದಯದಿಂದ ಪ್ರತ್ಯೇಕ ಧಮನಿಯಾಗಿಯೇ ಹೊರಡುತ್ತದೆ. ಅಯೋರ್ಟದ ಎರಡು ಕವಲುಗಳು ಕೋನಸಿನ ಬುಡದಲ್ಲೇ ಬೇರೆಯಾಗುತ್ತವೆ. ಆದ್ದರಿಂದ ಮೂರು ಅಪಧಮನಿಗಳು ಹೃದಯದಿಂದಲೇ ಹೊರಡುತ್ತವೆ. ಎಲ್ಲ ಅಪಧಮನಿಗಳ ಬುಡದಲ್ಲಿ ಕವಾಟಗಳಿವೆ. ಸೈನಸ್ ವಿನೋಸಸ್ ಸಣ್ಣದಾಗಿದೆ. ಇದು ಬಲ ಹೃತ್ಕರ್ಣದ ಹತ್ತಿರವಿದ್ದು ಅದಕ್ಕೆ ತಾಗಿಕೊಂಡಿದೆ.


ಸಾಮಾನ್ಯವಾಗಿ ಕಾಣಬರುವ ಸರೀಸೃಪವಾದ ಓತಿಕೇತದ ಹೃದಯದಲ್ಲೂ ಮೇಲೆ ತಿಳಿಸಿದ ರಚನೆಯೇ ಕಂಡುಬರುತ್ತದೆ. ಪುರ್ಣವಾದ ಅಂತರ ಭಿತ್ತಿಯಿಂದಾಗಿ ಹೃತ್ಕುಕ್ಷಿ ಎರಡು ಭಾಗಗಳಾಗಿ ವಿಭಾಗವಾಗಿರುವುದರಿಂದ ಗುಂಡಿಗೆಯಲ್ಲಿ ಒಟ್ಟು ನಾಲ್ಕು ಕೋಣೆಗಳಿವೆ. ಸೈನಸ್ ವಿನೋಸಸ್ ಸಣ್ಣದಾಗಿದೆ. ಈ ಕೋಣೆಗೆ ಮೂರು ಪ್ರಧಾನ ಅಭಿಧಮನಿಗಳಾದ ಕೇವಲ್ಗಳು ಮಲಿನ ರಕ್ತವನ್ನು ತರುತ್ತವೆ. ಸೈನಸ್ ವಿನೋಸಸ್ ಬಲಹೃತ್ಕರ್ಣಕ್ಕೆ ಒಂದು ರಂಧ್ರದ ಮೂಲಕ ತೆರೆಯುತ್ತದೆ. ಈ ರಂಧ್ರವನ್ನು ಸೈನು ಆರಿಕ್ಯುಲಾರ್ ಕವಾಟ ಕಾಪಾಡುತ್ತದೆ. ಎಡಹೃತ್ಕರ್ಣಕ್ಕೆ ಪಲ್ಮನರಿ ಅಭಿಧಮನಿ ತೆರೆಯುತ್ತದೆ. ಇದು ಫುಪ್ಪಸಗಳಿಂದ ಶುದ್ಧರಕ್ತವನ್ನು ತರುತ್ತದೆ. ಎರಡು ಹೃತ್ಕರ್ಣಗಳಿಂದಲೂ ಹೃತ್ಕುಕ್ಷಿಗಳಿಗೆ ಬೇರೆ ಬೇರೆಯಾಗಿಯೇ ಹರಿಯುತ್ತದೆ. ಹೃತ್ಕುಕ್ಷಿ ಬಲವಾದ ದಪ್ಪ ಸ್ಪಂಜಿನ ಮಾಂಸ ಭಿತ್ತಿಯಿಂದಾಗಿದೆ. ಬಲಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಗಳಲ್ಲಿ ಮಲಿನರಕ್ತವೂ ಎಡಹೃತ್ಕರ್ಣ ಮತ್ತು ಹೃತ್ಕುಕ್ಷಿಗಳಲ್ಲಿ ಆಕ್ಸಿಜನೀಕೃತವಾದ ರಕ್ತವೂ (ಶುದ್ಧರಕ್ತ) ಇರುತ್ತದೆ. ಹೃತ್ಕುಕ್ಷಿಯ ಅಂತರ ಭಿತ್ತಿ ಅಪೂರ್ಣವಾಗಿದ್ದರೂ ಸಾಧಾರಣವಾಗಿ ಮಲಿನ ರಕ್ತ ಮತ್ತು ಶುದ್ಧರಕ್ತಗಳು ಬೆರೆಯುವುದಿಲ್ಲ. ಟ್ರಂಕಸ್ ಆರ್ಟೀರಿಯೋಸಸ್ ಬುಡದಲ್ಲೇ ಕವಲೊಡೆದಿರುವುದರಿಂದ ಎಲ್ಲ ಮಹಾಪಧಮನಿಗಳು - ಬಲ ಮತ್ತು ಎಡ ಸಿಸ್ಟಮಿಕ್ ಮತ್ತು ಪಲ್ಮನರಿ ಅಪಧಮನಿಗಳು - ಹೃತ್ಕುಕ್ಷಿಯಿಂದಲೇ ಹೊರಡುತ್ತವೆ. ಇವೆಲ್ಲವೂ ಸಂಯೋಜಿತ ಅಂಗಕೋಶದಿಂದ ಆವೃತವಾಗಿವೆ. ಪಲ್ಮನರಿ ಅಪಧಮನಿಯೂ ಬಲಹೃತ್ಕುಕ್ಷಿಯ ಮೇಲ್ಭಾಗದಿಂದ ಹುಟ್ಟುತ್ತದೆ. ಬಲ ಸಿಸ್ಟಮಿಕ್ ಅಪಧಮನಿ ಎಡ ಹೃತ್ಕುಕ್ಷಿಯಿಂದಲೂ ಎಡ ಸಿಸ್ಟಮಿಕ್ ಅಪಧಮನಿ ಬಲ ಹೃತ್ಕುಕ್ಷಿಯಿಂದಲೂ ಹುಟ್ಟುತ್ತವೆ. ಈ ಎರಡು ಸಿಸ್ಟಮಿಕ್ ಅಪಧಮನಿಗಳು ಮುಂಭಾಗಕ್ಕೆ ಹೋಗುವಾಗ ಒಂದರ ಮೇಲೊಂದು ಅಡ್ಡಹಾಯುವುದರಿಂದ ಟ್ರಂಕಸ್ ಆರ್ಟೀರಿಯೋಸಸ್ ಸ್ವಲ್ಪ ತಿರುಚಿಕೊಂಡಿದೆ. ಇದರಿಂದ ಇವುಗಳ ಹಾದಿ ಬೇರೆಯಾಗಿದೆ. ಅಂದರೆ ಬಲ ಸಿಸ್ಟಮಿಕ್ ಎಡಗಡೆಗೂ ಎಡ ಸಿಸ್ಟಮಿಕ್ ಬಲಗಡೆಗೂ ಹೋಗುತ್ತವೆ. ಅಪಧಮನಿಗಳ ಬುಡಗಳಲ್ಲಿ ಒಂದು ಜೋಡಿ ಅರ್ಧಚಂದ್ರಾಕಾರದ ಕವಾಟಗಳಿವೆ. ಎಡ ಸಿಸ್ಟಮಿಕ್ ಅಪಧಮನಿ ಅಪೂರ್ಣ ಅಂತರ ಭಿತ್ತಿಯ ಮುಂಭಾಗದಲ್ಲೇ ಇರುತ್ತದೆ. ಅಪಧಮನಿಯಲ್ಲಿ ಮಲಿನ ಮತ್ತು ಶುದ್ಧರಕ್ತಗಳು ಬೆರೆತು ಹರಿಯುತ್ತವೆ. ಇನ್ನೂ ಹೆಚ್ಚಾಗಿ ಮುಂದುವರಿದ ಗುಂಡಿಗೆಯ ರಚನೆಯನ್ನು ಮೊಸಳೆಗಳಲ್ಲಿ ಕಾಣಬಹುದು. ಇಲ್ಲಿ ಹೃತ್ಕರ್ಣ ಮತ್ತು ಹೃತ್ಕುಕ್ಷಿಗಳು ಪುರ್ಣವಾಗಿ ಬಲ ಮತ್ತು ಎಡ ಭಾಗಗಳಾಗಿ ವಿಭಾಗವಾಗಿದೆ. ಎಡ ಸಿಸ್ಟಮಿಕ್ ಅಪಧಮನಿ ಬಲ ಹೃತ್ಕುಕ್ಷಿಯಿಂದ ಹೊರಡುವುದರಿಂದ ಮಲಿನ ರಕ್ತವನ್ನು ಒಯ್ಯುತ್ತದೆ. ಶುದ್ಧ ರಕ್ತವನ್ನು ಹೊತ್ತ ಬಲ ಸಿಸ್ಟಮಿಕ್ ಮಹಾಪಧಮನಿ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ. ಈ ಎರಡು ಸಿಸ್ಟಮಿಕ್ ಅಪಧಮನಿಗಳಿಗೂ ಅವುಗಳ ಬುಡದಲ್ಲಿರುವ ವೆನಿಸ್ಸ ರಂಧ್ರ ಸಂಬಂಧ ಕಲ್ಪಿಸುತ್ತದೆ. ಒತ್ತಡ ಹೆಚ್ಚಾಗಿರುವ ಎಡಹೃತ್ಕುಕ್ಷಿ ಸಂಕುಚಿಸಿದಾಗ ಎಡ ಸಿಸ್ಟಮಿಕ್ ಅಪಧಮನಿಗೆ ಸ್ವಲ್ಪ ಆಕ್ಸಿಜನೀಕೃತ ರಕ್ತ ಸೇರುವುದು. ಅದೂ ಅಲ್ಲದೆ ಮೊಸಳೆ ನೀರಿಗೆ ಧುಮುಕಿದಾಗ ಬಲ ಹೃತ್ಕುಕ್ಷಿಯಲ್ಲಿ ಒತ್ತಡ ಹೆಚ್ಚಾಗಿ ರಕ್ತ ವೆನಿಸ್ಸ ರಂಧ್ರದ ಮೂಲಕ ಬಲದಿಂದ ಎಡಭಾಗಕ್ಕೆ ಹರಿಯುವುದು.


ಪಕ್ಷಿಗಳ ಗುಂಡಿಗೆಯಲ್ಲಿ ಖಚಿತವಾದ ನಾಲ್ಕು ಕೋಣೆಗಳಿವೆ. ಶುದ್ಧ ಮತ್ತು ಮಲಿನ ರಕ್ತದ ಮಿಶ್ರಣಕ್ಕೆ ಯಾವುದೇ ಅವಕಾಶವೂ ಇಲ್ಲ. ಸೈನಸ್ ವಿನೋಸಸ್ ಇಲ್ಲವೆಂದೇ ಹೇಳಬಹುದು. ಇದರ ಬಹುತೇಕ ಭಾಗ ಬಲಹೃತ್ಕರ್ಣದಲ್ಲಿ ಸೇರಿಹೋಗಿದೆ. ಬಲ ಹೃತ್ಕುಕ್ಷಿಯನ್ನು ಸ್ವಲ್ಪ ಸುತ್ತುವರಿದಿದ್ದು ರಕ್ತವನ್ನು ಪಲ್ಮನರಿ ಅಪಧಮನಿಗೆ ಕಳುಹಿಸುತ್ತದೆ. ಎಡಹೃತ್ಕುಕ್ಷಿಯ ದ್ವಾರ ತೆಳುವಾದ ಕವಾಟದಿಂದ ರಕ್ಷಿತವಾಗಿದೆ. ಈ ಕವಾಟದ ಪದರಗಳು ಹೃತ್ಕುಕ್ಷಿಯ ಗೋಡೆಗೆ ತಂತುಸ್ತಂಭಗಳಿಂದ ಅಂಟಿಕೊಂಡಿದೆ. ಬಲಹೃತ್ಕರ್ಣ-ಹೃತ್ಕುಕ್ಷಿಯ ಮಧ್ಯೆ ಇರುವ ಕವಾಟ ಅಗಲವಾದ ಮಾಂಸಲ ಪದರದಿಂದ ಕೂಡಿದೆ. ಬಲ ಹೃತ್ಕರ್ಣಕ್ಕೆ ಉನ್ನತ ಮತ್ತು ಅವನತ ಅಭಿಧಮನಿಗಳೂ ಎಡ ಹೃತ್ಕರ್ಣಕ್ಕೆ ಪಲ್ಮನರಿ ಅಭಿಧಮನಿಯೂ ಬಂದು ಸೇರುತ್ತವೆ. ಪಲ್ಮನರಿ ಅಪಧಮನಿ ಬಲಹೃತ್ಕುಕ್ಷಿಯಿಂದಲೂ ಅಯೋರ್ಟಿಕ್ ಮಹಾಪಧಮನಿ ಎಡಹೃತ್ಕುಕ್ಷಿಯಿಂದಲೂ ಹೊರಡುತ್ತವೆ. ಮೂರು ಅರ್ಧಚಂದ್ರಾಕೃತಿಯ ಕವಾಟಗಳು ಪಲ್ಮನರಿ ಅಪಧಮನಿ ಮತ್ತು ಬಲಹೃತ್ಕುಕ್ಷಿಯ ಮಧ್ಯೆಯೂ ಮತ್ತು ಎಡಹೃತ್ಕುಕ್ಷಿ ಮತ್ತು ಮಹಾಪಧಮನಿಯ ಮಧ್ಯೆಯೂ ಇವೆ. ಪಕ್ಷಿಗಳಲ್ಲಿ ಬಲ ಅಯೋರ್ಟಿಕ್ ಅಪಧಮನಿ (ಸಿಸ್ಟಮಿಕ್) ಮಾತ್ರ ಇದೆ. ಎಡ ಸಿಸ್ಟಮಿಕ್ ಅಪಧಮನಿ ಇಲ್ಲ. ಪಕ್ಷಿಗಳ ಗುಂಡಿಗೆ ಬಹು ವಿಶಿಷ್ಟವಾದರೂ ಇದು ಸರೀಸೃಪ ಮಾದರಿಯ ಗುಂಡಿಗೆಯಿಂದ ಮಾರ್ಪಾಡಾದುದೆಂದು ಹೇಳಲಾಗಿದೆ.


ಸಸ್ತನಿಗಳ ಗುಂಡಿಗೆಯಲ್ಲಿಯೂ ನಾಲ್ಕು ಪ್ರಮುಖ ಕೋಣೆಗಳಿವೆ. ಇದು ಪಕ್ಷಿಗಳ ಗುಂಡಿಗೆಯಷ್ಟೇ ಸಮರ್ಥವಾದುದು. ಹೃತ್ಕರ್ಣದ ಅಂತರಪಟಲ ಮತ್ತು ಹೃತ್ಕುಕ್ಷಿಯ ಅಂತರಪಟಲಗಳು ಹೃತ್ಕರ್ಣ ಮತ್ತು ಹೃತ್ಕುಕ್ಷಿಗಳನ್ನು ಎರಡೆರಡು ಭಾಗಗಳನ್ನಾಗಿ ಮಾಡಿವೆ. ಆದ್ದರಿಂದ ಮಲಿನ ರಕ್ತ ಶುದ್ಧ ರಕ್ತದೊಡನೆ ಮಿಶ್ರವಾಗುವುದಿಲ್ಲ. ಸೈನಸ್ ವಿನೋಸಸ್ ಕೋಣೆ ಶೇಷ ಮಾತ್ರವೂ ಇಲ್ಲದೆ ಬಲ ಹೃತ್ಕರ್ಣದೊಡನೆ ಸೇರಿಹೋಗಿದೆ. ಕೋನಸ್ ಕೂಡ ಇಲ್ಲ. ಇದು ಪಲ್ಮನರಿ ಅಯೋರ್ಟ ಮತ್ತು ಸಿಸ್ಟಮಿಕ್ ಮಹಾಪಧಮನಿಗಳಾಗಿ ಪರಿವರ್ತಿತವಾಗಿದೆ. ಬಲಹೃತ್ಕರ್ಣ ಭಿತ್ತಿಯಲ್ಲಿ ಪದವರ್ಧಕ (ಪೇಸ್ಮೇಕರ್) ಅಥವಾ ಸೈನು ಆರಿಕ್ಯುಲಾರ್ ಗೆಣ್ಣಿನ ರಚನೆ ಇದೆ. ಇದು ಸೈನಸ್ ವಿನೋಸಸ್ನ ಅಂಗಾಂಶ. ಹೃತ್ಕರ್ಣಗಳು ಸುಲಭವಾಗಿ ಹಿಗ್ಗಬಲ್ಲವು. ರಕ್ತ ನುಗ್ಗಿದಾಗ ಅದರ ಒತ್ತಡವನ್ನು ಸಮರ್ಪಕವಾಗಿ ಹತೋಟಿಯಲ್ಲಿಟ್ಟಿಕೊಳ್ಳುತ್ತವೆ. ಹೃತ್ಕರ್ಣಗಳು ಹೃತ್ಕುಕ್ಷಿಗೆ ತೆರೆಯುವ ಬಳಿ ಜೇಬಿನ ರೀತಿಯ ಕವಾಟಗಳಿವೆ. ಎಡಹೃತ್ಕರ್ಣ ಮತ್ತು ಹೃತ್ಕುಕ್ಷಿಗಳ ನಡುವಣ ದ್ವಾರವನ್ನು ಎರಡು ಪದರಗಳ ಕವಾಟ ರಕ್ಷಿಸುತ್ತದೆ. ಇದೇ ಬೈಕಸ್ಪಿಡ್ ಕವಾಟ (ಮಿಟ್ರಲ್ ಕವಾಟ ಅಥವಾ ದ್ವೈವಲನ). ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಗಳ ನಡುವಣ ದ್ವಾರದಲ್ಲಿ ಮೂರು ಪದರಗಳ ಕವಾಟವಿದೆ. ಇದನ್ನು ಟ್ರೈಕಸ್ಟಿಡ್ ಕವಾಟವೆಂದು (ತ್ರೈವಲನ) ಕರೆಯುತ್ತಾರೆ. ಈ ಕವಾಟದ ಅಂಚುಗಳು ಹೃತ್ಕುಕ್ಷಿಯ ಏಣುಗಳಿಗೆ ಅಸ್ಥಿರಜ್ಜಿನ ಹುರಿಗಳಿಂದ ಅಂಟಿಕೊಂಡಿವೆ. ಇವೇ ಕಾರ್ಡ ಟೆಂಡಿನೆ ಕವಾಟಗಳು. ಇವು ರಕ್ತ ಹೃತ್ಕರ್ಣದಿಂದ ಹೃತ್ಕುಕ್ಷಿಗೆ ಮಾತ್ರ ಹರಿಯಲು ಬಿಡುತ್ತವೆ. ವಾಪಸು ಹೋಗಲು ಬಿಡುವುದಿಲ್ಲ. ಎಡ ಹೃತ್ಕುಕ್ಷಿಯ ಮುಂಭಾಗದಿಂದ ಸಿಸ್ಟಮಿಕ್ ಅಯೋರ್ಟ ಹೊರಡುತ್ತದೆ. ಪಲ್ಮನರಿ ಅಪಧಮನಿ ಬಲ ಹೃತ್ಕುಕ್ಷಿಯಿಂದ ಹೊರಟು ಎರಡು ಕವಲಾಗಿ ಒಂದೊಂದು ಕವಲೂ ಫುಪ್ಪಸಕ್ಕೆ ಹೋಗುತ್ತದೆ. ಈ ಅಪಧಮನಿಗಳ ಬುಡಗಳಲ್ಲಿ ಮೂರು ಕವಾಟಗಳಿವೆ. ಇವು ರಕ್ತ ವಾಪಸು ಬರದ ಹಾಗೆ ತಡೆಯುತ್ತದೆ. ಸಸ್ತನಿಗಳಲ್ಲಿ ಎಡ ಸಿಸ್ಟಮಿಕ್ ಮಹಾಪಧಮನಿ ಮಾತ್ರ ಉಂಟು.