ವಿಷಯಕ್ಕೆ ಹೋಗು

ಆಲತಿಗಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಒಂದು ಪ್ರೇಕ್ಷಣೀಯ ಸ್ಥಳ. ನಾಗಮಂಗಲದ ಉತ್ತರಕ್ಕೆ 10 ಕಿಮೀ ದೂರದಲ್ಲಿದೆ. ಮೈಸೂರು-ತುಮಕೂರು ರಸ್ತೆಯ ಪೂರ್ವಕ್ಕೆ ತೋರುವ ಗಿರಿಶ್ರೇಣಿಯಲ್ಲಿ ಆಲತಿಗಿರಿಯ ಉನ್ನತ ಶಿಖರ ಗೋಚರಿಸುತ್ತದೆ.

ಸ್ಥಳವಿಶೇಷ

[ಬದಲಾಯಿಸಿ]

ಇಲ್ಲಿನ ಶ್ರೀಮಲ್ಲೇಶ್ವರಗುಹಾಲಯ ಹೆಚ್ಚು ಗಮನಾರ್ಹ. ಪ್ರಕೃತಿ ಸೌಂದರ್ಯಕ್ಕೂ ಈ ನೆಲೆ ಹೆಸರಾದುದು. ಆಲತಿಗಿರಿಶ್ರೇಣಿ ದಕ್ಷಿಣೋತ್ತರವಾಗಿ ಹಬ್ಬಿದೆ. ಗಿರಿಯ ನೆತ್ತಿಯ ಗುಹಾಲಯವನ್ನು ತಲುಪಲು ಪೂರ್ವ ಹಾಗೂ ಪಶ್ಚಿಮ ದಿಕ್ಕುಗಳಿಂದ ಸೋಪಾನಗಳನ್ನು ಕಡೆಯಲಾಗಿದೆ. ಈಗ ಇವು ಸವೆದಿವೆ. ಬೆಟ್ಟದ ಮೇಲಿನ ಕಲ್ಲುಬಂಡೆಗಳಲ್ಲಿ ಬಿರುಕುಗಳು ಕಾಣಿಸುತ್ತವೆ. ಬೆಟ್ಟಕ್ಕೆ ಈ ಹೆಸರು ಬಂದುದು ಸಮೀಪದಲ್ಲೇ ಇರುವ ಆಲತಿ ಎಂಬ ಹಳ್ಳಿಯಿಂದ. ಇಲ್ಲಿರುವ ಪಾಂಡವರ ಗುಹೆ, ಮಲ್ಲೇಶ್ವರಗುಹೆ ಎರಡೂ ಪ್ರಸಿದ್ಧವಾದುವು. ಅತ್ಯಂತ ಆಳವಾದ ಡೊಣೆಯೊಂದು ಗುಹಾಲಯದ ಸಮೀಪದಲ್ಲೇ ಇದೆ.

ಮಲ್ಲೇಶ್ವರಗುಹೆಯ ಲಿಂಗದರ್ಶನಕ್ಕೆಂದು ಬಂದವರು ಬಂಡೆಯ ನಡುವಿನ ಗುಹೆಯಲ್ಲಿ ನುಸುಳಿಕೊಂಡು ಹೋಗಬೇಕು. ಮಂಡಿಯುದ್ದ ನೀರಿದ್ದರೂ ಕತ್ತಲೆ ದಟ್ಟವಾಗಿ ಕವಿದಿರುವ ಆ ಮಾರ್ಗದಲ್ಲಿ ಹತ್ತಾರು ಗಜ ಸಾಗಿದರೆ ಲಿಂಗದರ್ಶನವಾಗುತ್ತದೆ. ಬಂಡೆಯನ್ನು ಕೊಡಲಿಯಿಂದಲೇ ಕಡಿದು ಗುಹೆಯನ್ನು ನಿರ್ಮಿಸಿ ದಂತೆ ಗುರುತುಗಳು ಇಂದಿಗೂ ಇವೆ. ಯಾವ ಸಾಧನದಿಂದ ಈ ಬಂಡೆಯ ಗರ್ಭವನ್ನು ಹೀಗೆ ಕೊರೆದಿರಬೇಕು ಎಂಬುದು ಇಂದಿಗೂ ದೊಡ್ಡ ಸೋಜಿಗವಾಗಿಯೇ ಉಳಿದಿದೆ.

ಆಲತಿಗಿರಿಯಲ್ಲಿ ವರ್ಷಕ್ಕೊಮ್ಮೆ ಒಂದು ದೊಡ್ಡ ಜಾತ್ರೆ ನಡೆಯುತ್ತದೆ. ಗಿರಿಯ ತಪ್ಪಲು ಪ್ರಶಾಂತವಾಗಿರುವ ರಮ್ಯ ನಿಸರ್ಗಸೌಂದರ್ಯದಿಂದ ಕಂಗೊಳಿಸುತ್ತದೆ. ಇಲ್ಲಿನ ಗುಹಾಂತರ ದೇವಾಲಯ ಹೆಚ್ಚು ಖ್ಯಾತಿಗಳಿಸದಿದ್ದರೂ ಕರ್ಣಾಟಕದ ಆಶ್ಚರ್ಯಗಳಲ್ಲಿ ಒಂದಾಗಿದೆ.

ಐತಿಹ್ಯ

[ಬದಲಾಯಿಸಿ]

ಮಲ್ಲೇಶ್ವರಗುಹೆಗೆ ಸಂಬಂಧಿಸಿದಂತೆ ಒಂದು ಐತಿಹ್ಯವಿದೆ. ತಾಯಿಯನ್ನು ಕಡಿದು ಬೇಸರಗೊಂಡ ಪರಶುರಾಮ ಲೋಕಸಂಚಾರವನ್ನು ಕೈಕೊಂಡು ಈ ಗಿರಿಯತ್ತ ಬಂದು ವಿಸ್ತಾರವಾಗಿ ಹಬ್ಬಿದ್ದ ಗಿರಿಯನ್ನೇರಿ ಎತ್ತರವಾದ ದೊಡ್ಡ ಬಂಡೆಯೊಂದರ ಬುಡದಲ್ಲಿ ಕುಳಿತು ಆಯಾಸದಿಂದ ಹಾಯ್ ಮಲ್ಲೇಶ ಎಂದು ಉದ್ಗರಿಸಿದನೆಂದೂ ಬಂಡೆಯೊಳಗಿ ನಿಂದ ಓ ಎಂಬ ಧ್ವನಿ ಬಂದಿತೆಂದೂ ಆಗ ಆತ ಆಶ್ಚರ್ಯದಿಂದ ಬಂಡೆಯ ಕಡೆ ನೋಡಿ ಪುರ್ವ ದಿಕ್ಕಿನಿಂದ ಅದನ್ನು ತನ್ನ ಕೊಡಲಿಯಿಂದ ಕಡಿಯತೊಡಗಿ, ಒಬ್ಬ ಮನುಷ್ಯ ಪ್ರವೇಶಿಸುವಷ್ಟು ಭಾಗವನ್ನು ಬಂಡೆಯಲ್ಲಿ ಕಡಿದು ಅದರ ಗರ್ಭವನ್ನು ಪ್ರವೇಶಿಸಿದನೆಂದೂ ಬಂಡೆಯ ಒಡಲಲ್ಲಿ ಜಲ ಕಾಣಿಸಿಕೊಂಡಿತೆಂದೂ ಅದರ ಮಧ್ಯೆ ಮಲ್ಲೇಶ್ವರಲಿಂಗ ಕಾಣಿಸಿಕೊಂಡಿತೆಂದೂ ನಂಬಿಕೆ ಇದೆ.

ಪಾಂಡವಗುಹೆಯಲ್ಲಿ ಹಿಂದೆ ಪಾಂಡವರು ತಂಗಿದ್ದರು ಎಂಬ ಐತಿಹ್ಯವಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: