ವಿಷಯಕ್ಕೆ ಹೋಗು

ಗಾಂಧಿ ಅರ್ಥಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾತ್ಮ ಗಾಂಧಿಯವರು ಅರ್ಥಶಾಸ್ತ್ರದ ಮೇಲೆ ಯಾವ ಉದ್ಗ್ರಂಥವನ್ನೂ ಬರೆಯಲಿಲ್ಲ. ಸಾಂಪ್ರದಾಯಿಕವಾಗಿ ಅರ್ಥಶಾಸ್ತ್ರದ ಅಧ್ಯಯನ ಮಾಡಿ ಯಾವ ಪದವಿಯನ್ನು ಪಡೆದಿರಲಿಲ್ಲ. ಆದರೆ ಅವರು ಜೀವನದ ಬಹು ಮುಖ ಸಮಸ್ಯೆಗಳನ್ನು ಅರಿತಿದ್ದು. ಅವಕ್ಕೆ ತಮ್ಮವೇ ಆದ ಪರಿಹಾರಗಳನ್ನು ಮೊದಲು ತಮ್ಮ ಜೀವನದ ಮೇಲೆ ಪ್ರಯೋಗ ಮಾಡಿಕೊಂಡು ಅನಂತರ ಭಾಷಣಗಳು ಹಾಗೂ ಲೇಖನಗಳ ಮೂಲಕ ಪ್ರಸಿದ್ಧಪಡಿಸುತ್ತಿದ್ದರು. ಮಾನವನ ಆರ್ಥಿಕ ಸಮಸ್ಯೆಗಳ ಬಗ್ಗೆ ಅವರು ಆಗಿಂದಾಗ್ಗೆ ಆಡುತ್ತಿದ್ದ ಮಾತುಗಳನ್ನು ಮತ್ತು ಲೇಖನಗಳನ್ನು ಸುಸಂಬದ್ಧವಾಗಿ ಸಂಕಲನ ಮಾಡಿದರೆ ಒಂದು ಆರ್ಥಿಕ ಸಿದ್ಧಾಂತವೇ ರೂಪು ತಳೆಯುತ್ತದೆ. ಗಾಂಧೀಯವರು ಜೀವನವನ್ನು ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಎಂದು ಮುಂತಾಗಿ ಪ್ರತ್ಯೇಕ ಭಾಗಗಳಾಗಿ ಮಾಡಿ ಸಂಕೀರ್ಣವಾಗಿ ನೋಡದೆ ಅದನ್ನು ಸಮಗ್ರವಾಗಿ ವೀಕ್ಷಿಸುತ್ತಿದ್ದರು. ಮಾನವನ ಪರಿಪುರ್ಣ ವಿಕಾಸಕ್ಕೆ ಪೋಷಕವಾಗುವಂತೆ ಆಧ್ಯಾತ್ಮಿಕ, ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ತತ್ತ್ವಗಳನ್ನು ಅನ್ವಯಿಸಬೇಕೆಂಬುದು ಅವರ ವಿಚಾರವಾಗಿತ್ತು. ಅರ್ಥಾತ್ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚರ್ತುವಿಧ ಪುರುಷಾರ್ಥಗಳ ವಿಚಾರಪುರ್ವಕ, ನಿಷ್ಠಾವಂತ ಅನ್ವಯವೇ ಅವರ ಸಿದ್ಧಾಂತದ ಮೂಲಸೂತ್ರ ಎನ್ನಬಹುದು. ಅರ್ಥವನ್ನು ಧರ್ಮ ನೀತಿಗಳಿಂದ ಬೇರ್ಪಡಿಸಿ, ಕೇವಲ ಸಂಪತ್ತಿನ ಉತ್ಪಾದನೆ ವಿತರಣೆಗಳ ದೃಷ್ಟಿಯಿಂದ ಅರ್ಥಶಾಸ್ತ್ರದ ವ್ಯಾಖ್ಯೆ ಮಾಡುವುದನ್ನು ಗಾಂಧಿಯವರು ವಿರೋಧಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ನೀತಿಬಾಹಿರವಾದ ಅರ್ಥಶಾಸ್ತ್ರ ಪಾಶವೀಶಾಸ್ತ್ರವೇ ಎನಿಸಿತ್ತು. ಅರ್ಥಶಾಸ್ತ್ರ ನಿಯಮಗಳು ಧರ್ಮನಿಷ್ಠವಾಗಿರಬೇಕು: ಉದಾತ್ತ ಜೀವನದ ಸಾಗಣೆಗೆ ಅನುವಾಗಬೇಕು. ಉದಾತ್ತ ಜೀವನವೆಂದರೆ ಸರಳಜೀವನ; ಉಚ್ಚವಿಚಾರಗಳ ಸೂತ್ರಕ್ಕೆ ಬದ್ಧವಾಗಿರುವಂಥದು. ಮಾನವನ ಜೀವಿತದ ಉದ್ದೇಶ ಧನ ಕನಕ ವಸ್ತು ವಾಹನಗಳ ಸಂಗ್ರಹವಾಗಬಾರದು. ಅದು ಆತ್ಮಶ್ರೀಯ ವಿಕಾಸದ ಸಾಧನೆಯಾಗಿರತಕ್ಕದ್ದು. ಆತ್ಮಶ್ರೀಯ ವಿಕಾಸವಾಗುವುದು ಮಿತಿಮೀರಿದ ಐಹಿಕ ಸುಖದ ಆಸೆಯಿಂದಲ್ಲ. ಬದಲಾಗಿ ಸರಳಜೀವನದಿಂದ ಆದ್ದರಿಂದ ಮನುಷ್ಯ ತನ್ನ ಆತ್ಮವಿಕಾಸವನ್ನೇ ಧ್ಯೇಯವನ್ನಾಗಿಟ್ಟುಕೊಂಡು ಜೀವನ ನಿರ್ವಾಹಕ್ಕೆ ಅತ್ಯಗತ್ಯವಾಗಿ ಎಷ್ಟು ಬೇಕೋ ಅಷ್ಟೇ ವಸ್ತುಗಳನ್ನು ಉಪಯೋಗಿಸಬೇಕು. ಹಾಗೆ ತನಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪಡೆಯಲು ಪ್ರತಿಯೊಬ್ಬನೂ ಶ್ರಮನಿಷ್ಠ ಜೀವನವನ್ನು ನಡೆಸಬೇಕು. ಇದೇ ಅನ್ನಕಾಯಕ. ಜೀವನ ನಿರ್ವಹಣೆಗಾಗಿ ಶ್ರಮ ಮಾಡದೇ ಕೂಡಿಟ್ಟ ಹಣದ ಬಲದಿಂದಲೂ ಬೇರೋಬ್ಬರ ಶ್ರಮದ ಶೋಷಣೆಯಿಂದಲೋ ಲೋಲುಪ್ತಿಯ ಜೀವನ ನಡೆಸುವುದು ಚೌರ್ಯಕ್ಕೆ ಸಮಾನ: ಸಮಾಜದ ವಿಷಮತೆಗೆ ಕಾರಣ. ಸುವ್ಯವಸ್ಥಿತ ಅಹಿಂಸಾತ್ಮಕ ಸಮಾಜಕ್ಕೆ ಶ್ರಮನಿಷ್ಠ ಕಾಯಕ ಅಥವಾ ಅನ್ನಕಾಯಕ ಆಧಾರವಾಗಿರತಕ್ಕದ್ದು. ಸ್ವದೇಶೀವ್ರತ, ಗಾಂಧೀ ಅರ್ಥವಿಚಾರದ ಅವಿಭಾಜ್ಯ ಅಂಗ, ಸ್ವದೇಶೀ ಎಂದರೆ ತನ್ನ ನೆರೆಹೊರೆಯವರ, ಹಳ್ಳಿಯ, ರಾಜ್ಯದ ಅಥವಾ ದೇಶದ ಸಂಘಸಂಸ್ಥೆಗಳ ಬಗ್ಗೆ ಅಭಿಮಾನ ಮತ್ತು ಸ್ವದೇಶೀ ವಸ್ತುಗಳ ಉಪಯೋಗ, ಸ್ವದೇಶೀಗಳ ಬಗ್ಗೆ ಅಭಿಮಾನ ಮತ್ತು ಸ್ವದೇಶೀ ವÀಸ್ತುಗಳ ಉಪಯೋಗ. ಸ್ವದೇಶೀ ದೀಕ್ಷೆ ತನ್ನ ನೆರೆಹೊರೆಯವರ ಹಿತಚಿಂತನೆಯಿಂದಲೆ ಆರಂಭವಾಗುತ್ತದೆ. ನೆರೆಹೊರೆಯವರು ತಯಾರಿಸಿದ ವಸ್ತುಗಳನ್ನು ಕೊಳ್ಳಬೇಕು. ಸ್ಥಳೀಯ ಮತ್ತು ದೇಶೀಯ ಉದ್ಯಮಗಳಿಗೆ ಉತ್ತೇಜನ ನೀಡಬೇಕು. ಅವುಗಳನ್ನವಲಂಬಿಸಿರುವ ಜನರ ಹಿತವನ್ನು ಈ ಮೂಲಕ ರಕ್ಷಿಸಬೇಕು. ಇದು ಸ್ವದೇಶೀ ಧರ್ಮದ ಕಟ್ಟಲೆ. ಸ್ವದೇಶೀ ಎಂದಮಾತ್ರಕ್ಕೆ ಪರದೇಶೀಯವಾದ್ದನ್ನು ದ್ವೇಷಿಸ ಬೇಕೆಂಬುದಲ್ಲ. ಯಾವುದೇ ನೆರೆಹೊರೆಯಲ್ಲಿ, ಸ್ಥಳೀಯವಾಗಿ ಅಥವಾ ಸ್ವದೇಶದಲ್ಲಿ ಸಿಕ್ಕುವುದಿಲ್ಲವೋ ಅದನ್ನು ಬೇರೆಡೆಯಿಂದ, ಪರದೇಶಗಳಿಂದ ತರಿಸಿಕೊಳ್ಳಲು ಅಭ್ಯಂತರವಿಲ್ಲ. ಅದರೆ ನೆರೆಹೊರೆಯಲ್ಲಿ ತಯಾರಾದ ವಸ್ತುಗಳನ್ನು ಕೊಳ್ಳದೆ ತಯಾರಕರನ್ನು ಹಸಿವಿಗೆ ದೂಡಿ, ದೂರದಿಂದ ಪೈಪೋಟಿಯಿಂದ ಬರುವ ವಸ್ತುಗಳನ್ನು ಕೊಳ್ಳುವುದು ಸ್ವದೇಶೀ ಧರ್ಮಕ್ಕೆ ವಿರೋಧ, ಅದು ಅಮಾನುಷವೂ ಆದೀತು. ಸ್ವದೇಶೀ ಎಂಬುದು ನಮ್ಮ ನಿಕಟ ವಾತಾರಣಕ್ಕೆ ಅನ್ವಯಿಸುವ ಸ್ವಧರ್ಮ ಎಂದು ಗಾಂಧೀಯವರು ಹೇಳಿದ್ದಾರೆ. ಆರ್ಥಿಕ ನಿಯಮಗಳು ಸರ್ವಕಾಲಕ್ಕೂ ಸರ್ವದೇಶಕ್ಕೂ ಸಾರ್ವತ್ರಿಕವಾಗಿ ಸಮಾನವಾಗಿ ಅನ್ವಯಿಸುವ ನಿಯಮಗಳೇನೂ ಇಲ್ಲ. ಒಂದು ದೇಶಕ್ಕೆ ಲಾಭದಾಯಕ ವಾಗಿ ಅನ್ವಯಿಸಬಹುದಾದ ಆರ್ಥಿಕ ನಿಯಮಗಳು ಮತ್ತೊಂದು ದೇಶಕ್ಕೆ ಪ್ರಯೋಜನ ಕಾರಿಯಾಗಿರಬಹುದೆಂದು ಹೇಳಲಾಗುವುದಿಲ್ಲ. ಆರ್ಥಿಕ ಸಂಸ್ಥೆಗಳು, ಆಚಾರವಿಚಾರಗಳು ಆಯಾ ದೇಶಗಳ ವಾಯುಗುಣ, ಭೌಗೋಳಿಕ ಸನ್ನಿವೇಶ, ಜನರ ಸಂಖ್ಯೆ ಅವರ ಭಾವನೆಗಳು ಇತ್ಯಾದಿ ವಿಷಯಗಳನ್ನು ಅವಲಂಬಿಸಿರುತ್ತದೆ. ಚಳಿದೇಶದ ಜನರಿಗೆ ಅಗತ್ಯವಾಗಬಹುದಾದ ಉಡಿಗೆ ತೊಡಿಗೆ, ತಿಂಡಿ ತಿನಿಸು ಉಷ್ಣದೇಶದವರಿಗೆ ಅಗತ್ಯವಾಗದಿರಬಹುದು. ಜನಸಂಖ್ಯೆ ಕಡಿಮೆಯಿರುವ ದೇಶದಲ್ಲಿ ರೂಢವಾಗಿರುವ ಉತ್ಪಾದನೆ ವಿತರಣೆಗಳ ವ್ಯವಸ್ಥೆ ಜನನಿಬಿಡವಾದ ದೇಶಗಳಿಗೆ ಮಾರಕವಾಗಬಹುದು. ಅಂದರೆ ಯಾವುದೇ ಆರ್ಥಿಕ ನಿಯಮಗಳು ಅಥವಾ ಪದ್ಧತಿ ಸರ್ವವ್ಯಾಪಕವಾಗಿರುವುದು ಸಾಧ್ಯವಿಲ್ಲ. ಆಯಾ ದೇಶಗಳ ಸ್ಥಿತಿಗತಿಗಳಿಗನುಗುಣವಾಗಿ ಅರ್ಥಶಾಸ್ತ್ರದ ನಿಯಮಗಳನ್ನು, ಅರ್ಥವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಆದ್ದರಿಂದ ಸಂಖ್ಯಾಬಾಹುಳ್ಯವುಳ್ಳ ಗ್ರಾಮಾಧಾರಿತ ಭಾರತ ಪಾಶ್ಚಾತ್ಯ ರಾಷ್ಟ್ರಗಳ ಆರ್ಥಿಕ ಪದ್ಧತಿಯನ್ನು ಅನುಸರಿಸುವುದು ಸಾಧುವಲ್ಲ. ಹಳ್ಳಿಗಳ ದೇಶವಾದ ಭಾರತದ ಅರ್ಥವ್ಯವಸ್ಥೆ ಗ್ರಾಮಸ್ವಾವಲಂಬನೆಯ ಆಧಾರದ ಮೇಲೆ ನಿರ್ಮಾಣವಾಗಬೇಕು. ಪ್ರತಿ ಹಳ್ಳಿಯೂ ಅದಕ್ಕೆ ಅಗತ್ಯವಾದ ವಸ್ತುಗಳನ್ನು ಉತ್ಪಾದನೆ ಮಾಡಿಕೊಳ್ಳಬೇಕು. ಗ್ರಾಮ ಅರ್ಥವ್ಯವಸ್ಥೆ ಕೃಷಿ ಮತ್ತು ಕುಟೀರ ಉದ್ಯಮಗಳ ಆಧಾರದ ಮೇಲೆ ನಿಲ್ಲಬೇಕು. ಗ್ರಾಮಕ್ಕೆ ಅಗತ್ಯವಾದ ಆಹಾರ ಧಾನ್ಯ, ಹತ್ತಿ, ಎಣ್ಣೆಕಾಳುಗಳು, ತರಕಾರಿ, ದನಗಳಿಗೆ ಮೇವು ಎಲ್ಲವನ್ನೂ ಗ್ರಾಮದಲ್ಲೇ ಉತ್ಪಾದನೆ ಮಾಡಿಕೊಳ್ಳಬೇಕು. ಹತ್ತಿ ನೂತು ಬಟ್ಟೆಯನ್ನು ನೆಯ್ದು ಕೊಳ್ಳಬೇಕು. ಕೃಷಿ ಗ್ರಾಮೋದ್ಯೋಗ ಗಳಿಗೆ ಬೇಕಾದ ಉಪಕರಣಗಳು ಗ್ರಾಮದಲ್ಲೇ ತಯಾರಾಗಬೇಕು. ಆರೋಗ್ಯರಕ್ಷಣೆ, ನೈರ್ಮಲ್ಯ, ಗ್ರಾಮರಕ್ಷಣೆ ಎಲ್ಲವೂ ಹಳ್ಳಿಯವರದೇ ಜವಾಬ್ದಾರಿ. ಈ ರೀತಿಯಲ್ಲಿ ವ್ಯವಸ್ಥೆಯಾದರೆ ಪ್ರತಿಗ್ರಾಮವೂ ಸ್ವಾವಲಂಬಿ ಫಟಕವಾಗುತ್ತದೆ. ಭಾರತ ಸ್ವಾವಲಂಬಿ ಗ್ರಾಮ ಘಟಕಗಳ ಅಜೇಯ ಗಣರಾಜ್ಯವಾಗುತ್ತದೆ.

ಉತ್ಪಾದನೆಯ ಗುರಿ ಲಾಭಸಂಪಾದನೆಯಾಗಿರಬಾರದು

[ಬದಲಾಯಿಸಿ]

ಸಾಮಾಜಿಕಹಿತ ಸಾಧನೆಯಾಗಿರಬೇಕು, ಉತ್ಪಾದನೆಯ ವ್ಯವಸ್ಥೆ ಜನರ ಅಗತ್ಯಗಳನ್ನು ಪುರೈಸುವ ಶಕ್ತಿ ಪಡೆದಿರುವುದರ ಜೊತೆಗೆ, ಅದು ಶೋಷಣರಹಿತವು ಪರಮಾವಧಿ ಉದ್ಯೋಗ ಕಾರಕವೂ ಆಗಿರಬೇಕು. ಕೈಗಾರಿಕೆಗಳಲ್ಲಿ ಮುಂದುವರಿದ ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ಕೈಗಾರಿಕಾ ವ್ಯವಸ್ಥೆ ಆರ್ಥಿಕ ಶಕ್ತಿಯ ಕೇಂದ್ರಿಕರಣಕ್ಕೆ ಎಡೆ ಮಾಡಿ ಕೊಟ್ಟಿದೆ. ಹಿಡಿಜನ ಬಂಡವಾಳಗಾರರ ಕೈಯಲ್ಲಿ ಆರ್ಥಿಕ ಶಕ್ತಿ ಕೇಂದ್ರಿಕೃತವಾಗಿರುವುದರಿಂದ ಶ್ರಮವರ್ಗದ ಶೋಷಣೆ, ಅಹಿತಕರ ಪೈಪೋಟಿ, ಮಾರುಕಟ್ಟೆಗಳ ಸ್ವಾಮ್ಯಕ್ಕಾಗಿ ಹೋರಾಟ ಹಾಗೂ ಸಾಮ್ರಾಜ್ಯಶಾಹಿ ದುರಾಕ್ರಮಣಗಳಿಗೆ ಅವಕಾಶವಾಗಿದೆ: ಯುದ್ಧಗಳಿಗೆ ಕಾರಣವಾಗಿದೆ. ಆದ್ದರಿಂದ ಅಹಿಂಸೆ ಮತ್ತು ಚಿರಶಾಂತಿಯ ಆಧಾರದ ಮೇಲೆ ಸಮಾಜದ ರಚನೆಯಾಗ ಬೇಕಾದರೆ ಅರ್ಥವ್ಯವಸ್ಥೆ ವಿಕೇಂದ್ರೀಕೃತವಾಗಬೇಕು. ವಿಕೇಂದ್ರೀಕೃತ ಅರ್ಥವ್ಯವಸ್ಥೆಯಲ್ಲಿ ಮನುಷ್ಯ ಕೇಂದ್ರಬಿಂದುವಾಗಿರತಕ್ಕದ್ದು, ಶ್ರಮಶಕ್ತಿಯ ಉಪಯೋಗದಿಂದ ವಸ್ತುಗಳ ಉತ್ಪಾದನೆಯಾಗತಕ್ಕದ್ದು. ಪೈಪೋಟಿ ಮಾಯವಾಗಿ ಸಹಕಾರ ಸರ್ವವ್ಯಾಪಕವಾಗಿರುತ್ತದೆ. ಉತ್ಪಾದನೆ ವ್ಯವಸ್ಥೆ ಕೃಷಿ ಮತ್ತು ಗೃಹಕೈಗಾರಿಕೆಗಳ ಮೇಲೆ ನಿಂತಿರತಕ್ಕದ್ದಾಗಿದೆ. ಕೃಷಿ, ಗೋಪಾಲನೆ, ಸಿದ್ಧವಸ್ತುಗಳ ಮಾರಾಟ ಮುಂತಾದವು ಸಹಕಾರದ ಆಧಾರದ ಮೇಲೆ ಜರುಗಬೇಕು. ಲಕ್ಷಾಂತರ ಗ್ರಾಮಗಳ ಕೋಟಿಕೋಟಿ ಕುಟೀರಗಳಲ್ಲಿ ಅನುಭೋಗ ವಸ್ತುಗಳ ತಯಾರಿಕೆ ಸಮೃದ್ಧಿಯಾಗಿ ಆಗಬೇಕು. ಇಂಥ ವ್ಯವಸ್ಥೆಯಲ್ಲಿ ಪರಮಾವಧಿ ಉದ್ಯೋಗ, ಹೇರಳ ಉತ್ಪಾದನೆ, ಸ್ಥಳೀಯ ವಿತರಣೆ, ಶೋಷಣರಾಹಿತ್ಯ, ಕೆಲಸಗಾರನಿಗೆ ತಕ್ಕ ಕೌಶಲದ ಔನ್ನತ್ಯದ ಸಾಧನೆ ಮತ್ತು ತಾನೇ ಉತ್ಪಾದಿಸಿದೆನೆಂಬ ಸಂತೋಷ ಎಲ್ಲವೂ ಲಭ್ಯವಾಗುತ್ತವೆ. ಇಂಥ ಉತ್ಪಾದನೆಯ ವ್ಯವಸ್ಥೆಯಲ್ಲಿ ಯಂತ್ರಗಳ ಸ್ಥಾನ ಆದಷ್ಟು ಕಡಿಮೆಯಾಗಿರತಕ್ಕದ್ದು. ಯಂತ್ರಗಳ ಕುರಿತು ಭ್ರಾಂತಿ ಇರುವುದಿಲ್ಲ. ಯಂತ್ರ ಇಂದಿನಂತೆ ಮಾನವನ ಉದ್ಯೋಗಾವಕಾಶವನ್ನು ಚೌರ್ಯ ಮಾಡುವ ಮಾರಕಶಕ್ತಿ ಯಾಗಿರುವುದಿಲ್ಲ. ಯಾವ ಯಾವ ಕ್ಷೇತ್ರಗಳಲ್ಲಿ ಕೇವಲ ಅನಿವಾರ್ಯವೋ ಅಂಥ ಕಡೆ ಮಾತ್ರ ಯಂತ್ರ ಉಪಯೋಗಿಸಲ್ಪಡುತ್ತದೆ. ಅನಿವಾರ್ಯವಾಗಿ ಯಂತ್ರೋಪಕರಣಗಳ ಸಹಾಯದಿಂದ ದೊಡ್ಡ ಉದ್ಯಮಗಳೂ ರೈಲ್ವೆ ಸಾರಿಗೆ ಮುಂತಾದವು ಇರಲೇಬೇಕೋ ಅಂಥ ಎಡೆಗಳಲ್ಲಿ ಅವುಗಳ ಒಡೆತನ ಸರ್ಕಾರಕ್ಕೆ ಸೇರಿರಬೇಕು. ಗಾಂಧಿಯವರು ಮೇಲೆ ಕಾಣಿಸಿದ ಆದರ್ಶ ಆರ್ಥಿಕ ವ್ಯವಸ್ಥೆಯ ರೂಪ ರೇಷೆಯನ್ನು ಕೊಟ್ಟಿದ್ದರೂ ಪ್ರಚಲಿತ ಸಮಸ್ಯೆಗಳ ಬಗ್ಗೆ ಅವರು ಗಮನಹರಿಸದೆ, ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸದೆ ಇರಲಿಲ್ಲ. ಬಂಡವಾಳವಾದ, ಸಾಮ್ಯವಾದ, ಸಮಾಜ ವಾದ ಇವುಗಳ ಬಗ್ಗೆ ಅವರ ಅಭಿಪ್ರಾಯ ಸ್ಪಷ್ಟವೂ ಖಚಿತವೂ ಆಗಿತ್ತು. ಬಂಡವಾಳವಾದದ ಅಳಿವು ಆವಶ್ಯಕ. ಆದರೆ ಬಂಡವಾಳಗಾರರನ್ನು ಹಿಂಸಾಮಾರ್ಗದಿಂದ ನಿರ್ನಾಮ ಮಾಡಿದರೆ ಬಂಡವಾಳಶಾಹಿಯ ನಾಶವಾಗುವುದಿಲ್ಲ. ಮನುಷ್ಯನಲ್ಲಿ ರೂಢವಾಗಿರುವ ಲೋಭ ಮತ್ತು ಪರಿಗ್ರಹ ಪ್ರವೃತ್ತಿ ದೂರವಾಗುವಂತೆ ಪ್ರಯತ್ನಪಡಬೇಕು. ಅದಕ್ಕೆ ಹೃದಯಪರಿವರ್ತನ ಮಾರ್ಗವೇ ಶ್ರೇಷ್ಠ ಮಾರ್ಗ, ಬಂಡವಾಳ ಮತ್ತು ಕಾರ್ಮಿಕರ ನಡುವೆ ನಿರಂತರ ಸಂಘರ್ಷವಿರುವುದು ಅನಿವಾರ್ಯವಲ್ಲ. ಕಾರ್ಮಿಕರ ಸಹಕಾರವಿಲ್ಲದೆ ಬಂಡವಾಳ ಏನನ್ನೂ ಸಾಧಿಸಲಾರದು. ಕೆಲಸಗಾರರ ವರ್ಗದಲ್ಲಿ ಸಂಘಟನೆ ಆಗಿ ಅದರ ಶಕ್ತಿಯ ಅರಿವಾದರೆ ಅದನ್ನು ಬಂಡವಾಳವರ್ಗ ಶೋಷಣೆ ಮಾಡಲು ಸಾಧ್ಯವೇ ಇಲ್ಲ. ಎಲ್ಲಿ ಶೋಷಣೆ, ಅನ್ಯಾಯ ತಲೆದೋರುತ್ತದೋ ಅಲ್ಲಿ ಕಾರ್ಮಿಕರು ಶೋಷಕರೊಡನೆ ಅಹಿಂಸಾತ್ಮಕವಾಗಿ ಅಸಹಕರಿಸುವುದರ ಮೂಲಕ ಮುಕ್ತರಾಗಬಹುದು. ಉದ್ಯಮದ ಒಡೆಯರು ತಾವು ತಮ್ಮ ಸ್ವತ್ತಿನ ಧರ್ಮದರ್ಶಿಗಳೆಂದು ಮನಗಾಣ ಬೇಕು. ಕೆಲಸಗಾರನ್ನೂ ಉದ್ಯಮದ ಪಾಲುದಾರರೆಂದು ಭಾವಿಸಬೇಕು. ಯೋಗ್ಯ ವೇತನ ಮತ್ತು ಕೆಲಸದ ಭದ್ರತೆಯ ಭರವಸೆಯನ್ನು ಕೆಲಸಗಾರರಿಗೆ ದೊರಕಿಸಿಕೊಡಬೇಕು. ಅವರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಪ್ರಗತಿಗೆ ಸೌಕರ್ಯಗಳನ್ನು ಒದಗಿಸತಕ್ಕದ್ದು. ಕೆಲಸಗಾರರು ತಮಗೆ ದೊರೆಯುವ ಬಿಡುವು ಮತ್ತು ಹೆಚ್ಚಿನ ವೇತನವನ್ನು ಸ್ವಚ್ಛ ಮನ ಸ್ವಚ್ಛ ಆತ್ಮ ಇವುಗಳ ಸಾಧನೆಗೆ ವಿನಿಯೋಗಿಸಬೇಕು. ಸಮಾಜವಾದವನ್ನು ಸರಿಯಾದ ರೀತಿಯಲ್ಲಿ ಅನ್ವಯಿಸಿದ್ದಾದರೆ ಅದೊಂದು ಅತ್ಯುಚ್ಛ ತತ್ತ್ವವೇ ಸರಿ. ಆದರೆ ಅದನ್ನು ಬಲವಂತವಾಗಿ ಹಿಂಸಾಮಾರ್ಗದಲ್ಲಿ ಅನ್ವಯಿಸಲು ಹೋದರೆ ಅದೊಂದು ಪಾಶವೀಪ್ರಯೋಗವಾಗುತ್ತದೆ. ನಿಜವಾದ ಸಮಾಜವಾದವೆಂದರೆ ಅಮೂಲ್ಯವಾದ ಅಪರಿಗ್ರಹತತ್ತ್ವವನ್ನು ಸಮಾಜಕ್ಕೆ ಅನ್ವಯಿಸುವುದು. ಈ ಕಾರ್ಯ ಮನಃಪುರ್ವಕವಾಗಿ ಅಹಿಂಸಾತ್ಮಕವಾಗಿ ಅನ್ವಯವಾದರೆ ಅದರಿಂದ ಮಾನವಕಲ್ಯಾಣ ಸಾಧಿತವಾಗುತ್ತದೆ. ಸಮಾಜವಾದ ಕೇಂದ್ರೀಕೃತ ಸರ್ಕಾರದಿಂದ ಇಳಿದು ಬರುವುದಿಲ್ಲ. ಅದರ ಆದರ್ಶವನ್ನು ಜನರು ತಾವಾಗಿಯೇ ಅಂಗೀಕರಿಸಿದರೆ ಅಥವಾ ಶಾಂತಿಯುತ ಪರಿವರ್ತನೆ ಮತ್ತು ಅನುನಯಗಳಿಂದ ಅವರು ಒಪ್ಪುವಂತೆ ಮಾಡಿದುದಾದರೆ, ಅದು ಯಶಸ್ವಿಯಾಗುತ್ತದೆ. ವ್ಯಕ್ತಿಗಳು ತಮ್ಮ ಆಸೆ ಅಪೇಕ್ಷೆಗಳನ್ನು ಕಡಿಮೆ ಮಾಡಿಕೊಂಡು, ಇರುವ ವಸ್ತುಗಳು ಸರ್ವರ ಉಪಯೋಗಕ್ಕೂ ಹಂಚಿಕೆಯಾಗ ಬೇಕೆಂಬ ಅಂತಃಕರಣದಿಂದ ಕೂಡಿ, ತಮಗೆ ಅತ್ಯಗತ್ಯವಾದಷ್ಟು ಮಾತ್ರವೇ ಆವಶ್ಯಕ ವಸ್ತುಗಳನ್ನು ಬಳಸಬೇಕು. ಸಮಾಜದ ಸಂಪತ್ತನ್ನು ಹೆಚ್ಚಿಸಲು ಹಿತವನ್ನು ಸಂವರ್ಧಿಸಲು ತಮ್ಮ ಸಕಲ ಶಕ್ತಿ ಸಾಮಥರ್್ಯಗಳನ್ನೂ ವಿನಿಯೋಗಿಸುವ ಮನೋಭಾವವನ್ನು ಅವರು ಹೊಂದಿರಬೇಕು. ಮೇಲಾಗಿ ಜಗತ್ತಿನಲ್ಲಿರುವ ಸರ್ವಸ್ವವೂ ಈಶ್ವರನದೆಂಬ ಸತ್ಯವನ್ನು ಅರಿತು. ತಮ್ಮಲಿರುವುದನ್ನೆಲ್ಲ ಜನತಾಜನಾರ್ಧನನ ಸೇವೆಗಾಗಿ ವಿನಿಯೋಗಿಸಬೇಕು. ಯಾರೋಬ್ಬರ ಸ್ವತ್ತಿಗಾಗಲಿ ಸಂಪತ್ತಿಗಾಗಲಿ ಆಸೆ ಪಡಬಾರದು. ಪ್ರತಿಯೊಬ್ಬನೂ ತನ್ನ ದೇಹಶಕ್ತಿ, ಬುದ್ಧಿ, ಸಂಪತ್ತು ಎಲ್ಲಕ್ಕೂ ತಾನು ಧರ್ಮದರ್ಶಿಯೆಂದು ಭಾವಿಸಿ, ಸಂಪಾದನೆಯ ಫಲದಲ್ಲಿ ತನ್ನ ಬದುಕಿಗೆ ಎಷ್ಟು ಅಗತ್ಯವೂ ಅಷ್ಟನ್ನು ತಾನು ಬಳಸಿಕೊಂಡು ಮಿಕ್ಕದ್ದನ್ನೆಲ್ಲ ಸಮಾಜದ ಹಿತಕ್ಕಾಗಿ ಧಾರೆ ಎರೆಯಬೇಕು. ಅಂಥ ವ್ಯಕ್ತಿಗಳನ್ನುಳ್ಳ ಸಮಾಜದಲ್ಲಿ ಸ್ವಾತಂತ್ರ್ಯ, ಸಮತೆ, ಸಮೃದ್ಧಿ ಮತ್ತು ಶಾಂತಿ ಶಾಶ್ವÀತವಾಗಿ ನೆಲೆಗೊಂಡಿರುತ್ತವೆ.

ಗಾಂಧಿಯವರ ಶಿಕ್ಷಣ ತತ್ತ್ವದೃಷ್ಟಿ

[ಬದಲಾಯಿಸಿ]

ಶಿಕ್ಷಣದ ಬಗ್ಗೆಯೂ ಗಾಂಧಿ ಅವರು ತತ್ತ್ವ ಚಿಂತನೆ ನಡೆಸಿ ಪ್ರಯೋಗಗಳ ಮೂಲಕ ಅವನ್ನು ಪರೀಕ್ಷಿಸಿ ನೋಡಿದರು. ಅದರ ಫಲವಾಗಿ 20ನೆಯ ಶತಮಾನದ ನಾಲ್ಕನೆಯ ದಶಕದಲ್ಲಿ ಪುರ್ಣವಾಗಿ ಭಾರತೀಯ ವೆನ್ನಬಹುದಾದ ನೂತನ ಶಿಕ್ಷಣ ಪದ್ಧತಿಯೊಂದು ರೂಪುಗೊಂಡಿತು. ಅವರ ಧಾರ್ಮಿಕ ದೃಷ್ಟಿಯಿಂದ ದೇವರೇ ಸತ್ಯ. ಅದನ್ನು ಸಾಧಿಸಲು ಅಹಿಂಸೆಯೇ ಮಾರ್ಗ. ಸ್ವಾತಂತ್ರ್ಯ ಸತ್ಯದ ಒಂದು ಮುಖ. ಪ್ರತಿರಾಷ್ಟ್ರಕ್ಕೂ ತನ್ನದೇ ಆದ ಶಿಕ್ಷಣಪದ್ಧತಿಯನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಅಗತ್ಯ. ಭಾರತ ಆಧ್ಯಾತ್ಮಿಕ ದೃಷ್ಟಿಗೆ ಪ್ರಾಚೀನಕಾಲದಿಂದಲೂ ಜೀವನವನ್ನು ಮುಡಿಪಾಗಿರಿಸಿರುವುದರಿಂದ ಅಂಥ ಶಿಕ್ಷಣ ಆಧ್ಯಾತ್ಮಿಕ ತತ್ತ್ವ ದೃಷ್ಟಿಯನ್ನು ಅವಲಂಬಿಸಿರಬೇಕು. ಆದರೂ ಫಲಾಪೇಕ್ಷೆಯನ್ನು ಕಡೆಗಣಿಸುವಂತಿಲ್ಲ. ಆದ್ದರಿಂದ ಸತ್ಯ, ಅಹಿಂಸೆ, ಸೇವೆ, ಸಹಕಾರ, ಸಾಮಾಜಿಕ ನ್ಯಾಯ ಇವುಗಳ ಬುನಾದಿಯ ಮೇಲೆ ನೂತನ ಸಮಾಜದ ರಚನೆಗೆ ಅಂಥ ಶಿಕ್ಷಣಪದ್ಧತಿ ಉಪಕರಣವಾಗಬೇಕು. ಹೀಗೆ ತಮ್ಮ ಜೀವನದ ದೃಷ್ಟಿಯನ್ನು ಆಧಾರ ಮಾಡಿಕೊಂಡು ರೂಪಿಸಿದ ಅವರ ನೂತನ ಶಿಕ್ಷಣಪದ್ಧತಿ ಭಾರತದಲ್ಲಿ ಜೀವನಶಿಕ್ಷಣ, ಮೂಲಶಿಕ್ಷಣ, ನಯೀ ತಾಲೀಂ (ನೂತನ ಶಿಕ್ಷಣ) ಇತ್ಯಾದಿ ಹೆಸರುಗಳಿಂದ ಪ್ರಚಾರಕ್ಕೆ ಬಂದಿದೆ. ಗಾಂಧೀಜಿ ತಮ್ಮ ಶಿಕ್ಷಣಪದ್ಧತಿಯನ್ನು ರೂಪಿಸುವ ವೇಳೆಗೆ ಶಿಕ್ಷಣಪ್ರಪಂಚದಲ್ಲಿ ನಿಸರ್ಗವಾದ, ಆದರ್ಶವಾದ, ಯಥಾರ್ಥವಾದ, ಫಲಪರಿಣಾಮಾನುಮೇಯವಾದ- ಎಂಬ ನಾಲ್ಕು ತತ್ತ್ವ ದೃಷ್ಟಿಗಳು ಪ್ರಚಾರದಲ್ಲಿದ್ದವು. ನಿಸರ್ಗ ಸತ್ಯದ ಸಮಗ್ರತೆ; ನಿಸರ್ಗ ಸಮಸ್ತ ಪದಾರ್ಥಸ್ವರೂಪ: ನಿಸರ್ಗಕ್ಕೆ ಅನ್ವಯಿಸುವ ವಿಧಾನಗಳನ್ನು ಅನ್ವಯಿಸಲು ಆಗದ ಯಾವ ಜ್ಞಾನ ಅಥವಾ ಅನುಭವದ ಕ್ಷೇತ್ರವೂ ಇಲ್ಲ; ಅಸ್ತಿತ್ವಕ್ಕೆ ಅತಿಮಾನುಷ ಅಥವ ಆಧ್ಯಾತ್ಮಿಕ ಪ್ರಪಂಚವೊಂದರ ಕೈವಾಡವಿಲ್ಲ. ಹಾಗೆಯೇ ಎಲ್ಲ ಪ್ರಕ್ರಿಯೆಗಳನ್ನೂ ಪದಾರ್ಥದ ಚಲನೆಯ ರೂಪದಲ್ಲಿ ವಿವರಿಸುವ ಭೌತ ಅಥವಾ ಯಂತ್ರಕೌಶಲವಾದವೂ ಸರಿಯಲ್ಲ-ಎಂದು ಪ್ರತಿಪಾದಿಸುತ್ತದೆ, ಆಧುನಿಕ ನಿಸರ್ಗವಾದ. ಇದನ್ನು ಮೊದಲು ರೂಸೋ ಅನಂತರ, ಪೆಸ್ಟಲಾಜಿ, ಹರ್ಬಾರ್ಟ್, ಸ್ಟಾನ್ಲಿ ಹಾಲ್, ಜಾನ್ ಡ್ಯೂಯಿ ಇವರು ಆಧಾರಮಾಡಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಅಳವಡಿಸಿಕೊಂಡರು. ಈ ವಿಧಾನದಂತೆ ಶಿಕ್ಷಣ ಸ್ವಾಭಾವಿಕ ಬೋಧನ ಕ್ರಮಗಳನ್ನು ಅನುಸರಿಸಬೇಕು. ಮಗುವಿನ ಜೀವನದಲ್ಲಿ ಸ್ವಾಭಾವಿಕ ಬೆಳೆವಣಿಗೆಯ ಅಂತಸ್ತುಗಳನ್ನು ಇದು ಅಂಗೀಕರಿಸುತ್ತದೆ. ಹಾಗೆಯೇ, ಸಿದ್ಧತೆಯ ಮಟ್ಟ, ವೈಯಕ್ತಿಕ ಭಿನ್ನತೆಗಳು ಮತ್ತು ಆಧುನಿಕ ಶಿಕ್ಷಣದ ಪ್ರಗತಿಪರ ಅಂಶಗಳನ್ನು ಪುರಸ್ಕರಿಸುತ್ತದೆ. ಶಿಕ್ಷಣ ಮಕ್ಕಳ ಸ್ವಾಭಾವಿಕ ಬೆಳೆವಣಿಗೆಗೆ ಅನುಗುಣವಾಗಿರ ಬೇಕೆಂದೂ ಕೆಲವು ಚಟುವಟಿಕೆ ಮತ್ತು ಅನುಭವಗಳ ಆಧಾರದ ಮೇಲೆ ಸಾಗಬೇಕೆಂದೂ ಶಿಸ್ತು ಮಕ್ಕಳ ಸ್ವಪ್ರೇರಣೆಯಿಂದ ಮೂಡಬೇಕೆಂದೂ ವಾದಿಸುತ್ತದೆ. ವೈಯಕ್ತಿಕ ಗಮನ, ಇಂದ್ರಿಯಗಳ ಬಳಕೆ, ಆರೋಗ್ಯಜೀವನ, ಅನುಭವಗಳ ಫಲವಾಗಿ ಅಂತರ್ಜನ್ಯವಾಗಿ ವೃದ್ಧಿಸುವ ನೈತಿಕ ಬೆಳೆವಣಿಗೆ (ಹೊರಗಿನ ಕಟ್ಟುನಿಟ್ಟುಗಳಿಂದಲ್ಲ) -ಇವುಗಳಿಗೆ ಪ್ರಾಧಾನ್ಯ ವೀಯುತ್ತದೆ. ಆದರೆ 18ನೆಯ ಶತಮಾನದ ಅಧ್ಯಾತ್ಮವಾದವನ್ನೂ ತರ್ಕಪ್ರಮಾಣ ವಾದವನ್ನೂ ಇದು ವಿರೋಧಿಸುತ್ತದೆ. ಮುಖ್ಯವಾಗಿ ಕೃತಕರೀತಿಯ ಕಟ್ಟುಕಟ್ಟಳೆಗಳಿಗೆ ಬದಲಾಗಿ ಶಿಕ್ಷಣ ಸ್ವಾಭಾವಿಕ ರೀತಿಯದಾಗಿದ್ದು ನಿಸರ್ಗದ ಮಡಿಲಲ್ಲಿ ನಡೆಯಬೇಕೆಂದು ವಾದಿಸುತ್ತದೆ. ಒಂದು ದೃಷ್ಟಿಯಲ್ಲಿ ಇದು ಆದಿಕಾಲದ ಸಮಾಜ ರಚನೆಗೆ ಶರಣು ಹೋಗಬೇಕೆಂದೂ ಸೂಚಿಸುತ್ತದೆ. ಆದರ್ಶವಾದ ವಿಚಾರವಿವರಣೆಯಲ್ಲಿ ಪ್ರಧಾನವಾಗಿ ಚಿತ್ಸತ್ಯತೆಯನ್ನು ಒತ್ತಿ ಹೇಳುತ್ತದೆ. ‘ಪ್ರಪಂಚ ಮನಸ್ಸಿನ ಅಥವಾ ಬುದ್ಧಿಯ ಕಲ್ಪನೆ; ಶಾಶ್ವತವಾದ್ದು ಚಿತ್ಸ್ವರೂಪದ್ದು; ಆದ್ದರಿಂದ ಎಲ್ಲ ಜ್ಞಾನವೂ ಮನಸ್ಸನ್ನು ಅವಲಂಬಿಸಿದ್ದು ಅದರ ಕ್ರಿಯಾಪರಿಮಿತಿಯೊಳಗೇ ಇರತಕ್ಕದ್ದು. ಕಲೆ, ಶಿಕ್ಷಣ, ಧರ್ಮ, ವಿಜ್ಞಾನ, ತರ್ಕ ಇವೆಲ್ಲಕ್ಕೂ ಮೂಲಕಾರಕ ಚೈತನ್ಯ. ಇಂದ್ರಿಯಗೋಚರ ಬಾಹ್ಯ ಜಗತ್ತೆಲ್ಲ ಶಿಕ್ಷಣದಲ್ಲಿ ಭಾವನಾಮಯವಾದುದು’ ಎಂದು ಪ್ರತಿಪಾದಿಸುತ್ತಿದೆ. ಇದರ ಪ್ರಭಾವದಿಂದ ಹಿಂದಿನವರ ಆದರ್ಶಗಳಿಗೂ ಸಂಪ್ರದಾಯಗಳಿಗೂ ಪ್ರಾಮುಖ್ಯ ಬಂತು. ಜೀವನದ ಉದ್ದೇಶ ಪರಮಾರ್ಥವೆಂಬುದನ್ನು ಎತ್ತಿಹಿಡಿದು ಅದರ ಸಾಧನೆಗಾಗಿ ಇಂದ್ರಿಯನಿಗ್ರಹ, ಭಾವ ಮತ್ತು ಬುದ್ದಿಗಳ ಆದರ್ಶಪಥದಲ್ಲಿ ನಿರೂಪಣೆ ಇತ್ಯಾದಿಯಾದ ಶಿಕ್ಷಣ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿತು. ಯಥಾರ್ಥವಾದ (ವಾಸ್ತವ) ಜ್ಞಾನ ವಸ್ತುಗಳನ್ನು ಅರಿಯುವ ಕಾರ್ಯಕ್ಕಿಂತ ಬೇರೆಯಾದ್ದೆಂದೂ ಅದು ಅರಿಯುವ ಕಾರ್ಯವನ್ನು ಅವಲಂಬಿಸಿರದೆ ಸ್ವತಂತ್ರ್ಯ ಅಸ್ತಿತ್ವ ತಳೆದಿದೆಯೆಂದೂ ಅದರ ಸ್ವಭಾವ ಮತ್ತು ಲಕ್ಷಣಗಳು ಅರಿಯುವ ಕಾರ್ಯದಿಂದ ರೂಪುಗೊಳ್ಳುವುದಿಲ್ಲ ಮತ್ತು ಬದಲಾಗುವುದಿಲ್ಲವೆಂದೂ ಪ್ರತಿಪಾದಿಸುತ್ತದೆ. ಶಿಕ್ಷಣದಲ್ಲಿ ಕೇವಲ ಶಬ್ದಗಳನ್ನೊಳಗೊಂಡ ಕಾರ್ಯಕ್ರಮಗಳಿಗೇ ಪ್ರಾಮುಖ್ಯವೀಯುವುದನ್ನು ಇದು ವಿರೋಧಿಸುತ್ತದೆ. ಶಿಕ್ಷಣದಿಂದ ವ್ಯಕ್ತಿಯಾದವನು ವಿಚಾರ ಮಾಡುವುದನ್ನು ಕಲಿತು ಜೀವನದಲ್ಲಿ ಒದಗಬಹುದಾದ ವಿವಿಧ ಸನ್ನಿವೇಶಗಳಿಗೆ ಹೊಂದಿಕೊಂಡು ಹೋಗುವ ಶಕ್ತಿಯನ್ನು ಸಾಧಿಸಬೇಕೆಂದು ಪ್ರತಿಪಾದಿಸುತ್ತದೆ. ಜ್ಞಾನ ಮತ್ತು ಅದರ ಸಾಧನೆಗಾಗಿ ನಡೆಸುವ ಚಟುವಟಿಕೆಗಳೆರಡಕ್ಕೂ ಶಿಕ್ಷಣದಲ್ಲಿ ಪ್ರಾಧಾನ್ಯವೀಯುತ್ತದೆ. ಮಾನವನ ವರ್ತನೆಯ ಪರಿವರ್ತನೆಯಲ್ಲಿ ಬಾಹ್ಯ ಸನ್ನಿವೇಶಗಳ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಶಿಕ್ಷಣದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿರಬೇಕೆಂದು ಪ್ರತಿಪಾದಿಸಿದರೂ ಅದು ಇತರರ ಹಕ್ಕಿಗೂ ನೆಮ್ಮದಿಗೂ ಮಾರಕವಾಗಬಾರದೆಂದು ಸೂಚಿಸುತ್ತದೆ. ಮಾನವನ ಸ್ವಭಾವದಲ್ಲೂ ಸಮಾಜಜೀವನದಲ್ಲೂ ಬುದ್ಧಿಗ್ರಾಹ್ಯ ಅಂಶಗಳಿವೆಯೆಂದು ಅವು ವ್ಯಕ್ತಿಯ ಮತ್ತು ಸಮಾಜದ ಜೀವನಕ್ಕೆ ಮಾರ್ಗದರ್ಶನವಾಗ ಬಲ್ಲವೆಂದೂ ವಿವರಿಸುತ್ತದೆ. ಫಲಪರಿಣಾಮಾನುಮೇಯವಾದವನ್ನು (ಪ್ರಾಗ್ಮಮ್ಸಂ) ಪೇಸ್ರ್, ಡ್ಯೂಯಿ ಮುಂತಾದ ಅಮೆರಿಕದ ತತ್ತ್ವಚಿಂತಕರು ಪ್ರತಿಪಾದಿಸಿ ಶಿಕ್ಷಣಕ್ಷೇತ್ರಕ್ಕೆ ಅನ್ವಯಿಸಿಕೊಂಡರು. ವಿಲಿಯಂ ಜೆಮ್ಸ್ ಅದಕ್ಕೆ ಮನೋವಿಜ್ಞಾನದ ಬೆಳಕಿನಲ್ಲಿ ಅರ್ಥ ಕಲ್ಪಿಸಿಕೊಟ್ಟ. ಅದರ ಪ್ರಕಾರ ಒಂದು ಭಾವನೆಯ ಅರ್ಥ ಅದು ನಿರ್ದೇಶಿಸುವ ನಡೆವಳಿಕೆಯಲ್ಲಿರುತ್ತದೆ. ಎಲ್ಲ ಭಾವನೆಗಳಲ್ಲೂ ಅವುಗಳ ಅಭ್ಯಾಸದಲ್ಲಿರಬಹುದಾದ ವ್ಯತ್ಯಾಸಗಳಿಂದ ಅವುಗಳ ವೈಶಿಷ್ಟ್ಯ ಕಾಣಿಸಿಕೊಳ್ಳುತ್ತದೆ. ಚಿಂತನೆ ಕಾರ್ಯವನ್ನು ನಿರ್ದೇಶಿಸುವ ಒಂದು ಪ್ರಕ್ರಿಯೆ. ಸತ್ಯ ಒಂದು ಸಾಮಾಜಿಕ ಮೌಲ್ಯ. ಬಹಿರಂಗವಾಗಿ ಚರ್ಚಿಸಿ ಪರೀಕ್ಷಿಸಿದಂತೆ ಆ ಮೌಲ್ಯಗಳು ಭಾವನೆಗಳಲ್ಲಿ ಸಂಗ್ರಹವಾಗುತ್ತವೆ. ವಾಸ್ತವ್ಯ ಅಥವಾ ಸತ್ಯ ಅಂತಿಮ ಸ್ವರೂಪದಲ್ಲಿ ಬಹುತ್ವದ್ದಾಗಿರುತ್ತದೆ. ಕೆಲವರು ಇದೊಂದು ಉಪಯುಕ್ತವಾದವೆಂದು ಪರಿಗಣಿಸಿ ಯಾವುದು ಉದ್ದೇಶವನ್ನು ಸಾಧಿಸುವುದೋ ಯಾವುದು ಹಿತಕರ ಫಲನೀಡುವುದೋ ಅದೇ ಸತ್ಯ ಎಂದು ಭಾವಿಸುವುದುಂಟು. ಹೇಗೆ ಆಗಲಿ, ಶಿಕ್ಷಣದಲ್ಲಿ ಇದು ತೀವ್ರ ರೀತಿಯ ಪರಿಣಾಮವನ್ನು ಮೂಡಿಸಿದೆ. ಜೀವನದಲ್ಲಿ ಯಾವುದು ಫಲದಾಯಕವೊ ಅದೆಲ್ಲ ಶಿಕ್ಷಣದ ಕಾರ್ಯಕ್ರಮದಲ್ಲಿ ಸೇರಬೇಕೆಂದೂ ಶಾಲೆ ವಿಶಾಲವೂ ಬಹುವಿಧವೂ ಆದ ಅನುಭವಗಳನ್ನೊದಗಿಸುವ ಸ್ಥಳವಾಗಬೇಕೆಂದೂ ಜ್ಞಾನ ಅನುಭವದಿಂದ ಸಿದ್ಧಿಸಬೇಕೆಂದೂ ಸೂಚಿಸುತ್ತದೆ. ವಿಜ್ಞಾನಕ್ಕೆ ಪ್ರಧಾನ ಸ್ಥಾನವನ್ನು ದೊರಕಿಸಿಕೊಟ್ಟು ಈ ತತ್ತ್ವಪಂಥ ಅನುಭವಗಳೇ ಪ್ರಧಾನವಾಗುಳ್ಳ ಉದ್ಯಮ ಪದ್ಧತಿಯ (ಪ್ರೋಜೆಕ್ಟ್) ಉಗಮಕ್ಕೆ ಅವಕಾಶ ಮಾಡಿಕೊಟ್ಟಿತು. ಯಾವುದನ್ನೇ ಆಗಲಿ ಅದರ ಪರಿಣಾಮದಿಂದ ಅರಿತುಕೊಳ್ಳಬೇಕೆನ್ನುವ ಈ ತತ್ತ್ವ ಪಂಥದ ದೃಷ್ಟಿಯಲ್ಲಿ ಅಂತಿಮ ಸ್ವರೂಪದ ಸತ್ಯವೆಂಬುದೇ ಇಲ್ಲ. ಅದು ನಿರಂತರವೂ ಪರಿವರ್ತನೆಯಾಗುತ್ತಿರುತ್ತದೆ. ಶಿಕ್ಷಣದಲ್ಲೂ ನಿರಂತರ ಪರಿವರ್ತನೆಗಳನ್ನು ಪ್ರೋತ್ಸಾಹಿಸುತ್ತದೆ. ಗಾಂಧೀಜಿಯ ಶಿಕ್ಷಣ ಧೋರಣೆ ಮೇಲಿನ ನಾಲ್ಕು ತತ್ತ್ವಪಂಥಗಳಲ್ಲಿ ಯಾವ ಒಂದು ಪಂಥವನ್ನೂ ಆಧಾರಮಾಡಿಕೊಳ್ಳದಿದ್ದರೂ ಅವುಗಳಲ್ಲೊಂದೊಂದರ ಹಲಕೆಲವು ಅಂಶಗಳನ್ನು ಒಳಗೊಂಡಿದೆ. ಎಂದ ಮಾತ್ರಕ್ಕೆ ಆ ನಾಲ್ಕರಿಂದಲೂ ಆಯ್ದ ತತ್ತ್ವದೃಷ್ಟಿಗಳ ಆಧಾರದ ಮೇಲೆ ಅವರು ತಮ್ಮ ದೃಷ್ಟಿಯನ್ನು ರೂಪಿಸಿದರೆಂದು ಭಾವಿಸಕೂಡದು ಅದನ್ನು ಅವರು ಪ್ರತ್ಯೇಕವಾಗಿ ತಮ್ಮ ಜೀವನದರ್ಶನದ ವಿಶಿಷ್ಟಪ್ರಭಾವದಿಂದ ರೂಪಿಸಿದರು. ಅದರೂ ಅವರ ತತ್ತ್ವದೃಷ್ಟಿ ಯಾವ ಯಾವ ಅಂಶಗಳಲ್ಲಿ ಮೇಲಿನ ತತ್ತ್ವಪಂಥಗಳನ್ನು ಹೋಲುತ್ತದೆಂಬುದನ್ನು ಪರಿಶೀಲಿಸಬೇಕಾಗಿದೆ. ಗಾಂಧಿಯವರು ರೂಪಿಸಿದ ಮೂಲಶಿಕ್ಷಣ ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅನ್ವಯವಾಗುವಂಥದು. ಭಾರತದ ಜನತೆಯ ಶೇ. 80 ರಷ್ಟು ಭಾಗ ಗ್ರಾಮಗಳಲ್ಲಿ ಜೀವಿಸುವುದರಿಂದ ಭಾರತದಲ್ಲಿ ರೂಪಿಸುವ ಯಾವ ರಾಷ್ಟ್ರೀಯ ಶಿಕ್ಷಣ ಯೋಜನೆಯೇ ಆಗಲಿ ಪ್ರಥಮತಃ ಅವರ ಹಿತದೃಷ್ಟಿಗೆ ಒಪ್ಪುವಂತೆ ರೂಪಗೊಳ್ಳ ಬೇಕೆಂಬುದು ಸ್ವಾಭಾವಿಕ. ಗ್ರಾಮಗಳು ನಿಸರ್ಗದ ಮಡಿಲಲ್ಲಿರುವುದರಿಂದ ಅದರೊಡನೆ ಸಂಪರ್ಕ ಹೊಂದಿ ಅದರಿಂದ ಪರಿಣಾಮ ಹೊಂದಿ ಬೆಳೆಯಲು ಅವಕಾಶವಿದೆ. ಜೀವನದಲ್ಲಿ ಕಂಡುಬರುವ ಒಂದು ಸ್ವಾಭಾವಿಕ ಸನ್ನಿವೇಶವನ್ನು (ಕಸಬು) ಆಧಾರ ಮಾಡಿಕೊಂಡು ಅಲ್ಲಿ ಕಲಿಯುವ ರೀತಿಯಲ್ಲಿ ಶಾಲೆಯಲ್ಲೂ ಮಕ್ಕಳು ಶಿಕ್ಷಣ ಪಡೆಯಬೇಕೆಂಬ ಅವರ ದೃಷ್ಟಿ ನಿಸರ್ಗವಾದದ ತತ್ತ್ವದೃಷ್ಟಿಯನ್ನು ಅಳವಡಿಸಿಕೊಂಡಿದೆ. ಕೃತಕರೀತಿಯಲ್ಲಿ ವಿಷಯಗಳನ್ನು ಪ್ರತ್ಯೇಕಿಸಿ ವರ್ಗೀಕರಿಸುವುದರ ಬದಲು ಜೀವನದಲ್ಲಿ ಅವು ಪಾತ್ರವಹಿಸುವ ಸ್ವರೂಪದಲ್ಲಿ ಕಲಿಸುವುದೂ ಆ ತತ್ತ್ವದೃಷ್ಟಿಯನ್ನೇ ವ್ಯಕ್ತಪಡಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಪರಮಚೈತನ್ಯ ಸ್ವರೂಪನ ಒಂದು ಅಂಶವೆಂದು ಅವರು ನಂಬಿದ್ದುದರಿಂದ ಅದು ಆದರ್ಶವಾದದಲ್ಲಿ ಕಂಡುಬರುವ ಅಂಶವೆಂಬುದನ್ನು ಗುರುತಿಸಬಹುದು. ಅನ್ಯಭಾಷೆಯೊಂದರ ಮೂಲಕ ಅನ್ಯಸಂಸ್ಕೃತಿಯೊಂದನ್ನು ಕುರಿತ ವಿದ್ಯೆ ಕಲಿಯುವುದು ನಮ್ಮವರಿಗೆ ಅಸ್ವಾಭಾವಿಕವೆಂದು ಬಗೆದು ‘ಇಲ್ಲಿನವರ ಶಿಕ್ಷಣ, ಇಲ್ಲಿನ ಜನತೆಯ ಜೀವನಕ್ಕೆ ಸಂಬಂಧಿಸಿದಂತೆ ನಡೆಯಬೇಕು; ಅವರ ಮಾತೃಭಾಷೆಯಲ್ಲಿ ನಡೆಯಬೇಕು; ಇಲ್ಲಿನವರ ಜೀವನ ವಿಧಾನದಲ್ಲಿ ನಡೆಯಬೇಕು. ಹಾಗೂ ಬಡತನದ ಈ ವಿಶಾಲ ದೇಶದಲ್ಲಿ ಅಷ್ಟಾಗಿ ಧನದ ಅಗತ್ಯವಿರದೆ ನಡೆಯಬೇಕು’ ಎಂಬ ಅವರ ದೃಷ್ಟಿ ಯಥಾರ್ಥವಾದವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಸಮಾಜದಲ್ಲಿ ಜೀವನೋಪಾಯಕ್ಕಾಗಿ ಜನತೆ ಅನುಸರಿಸುತ್ತಿರುವ ಕಸಬೊಂದನ್ನು ಕೇಂದ್ರವಾಗಿ ಮಾಡಿಕೊಂಡು ಅದನ್ನು ಕಲಿಯಲು ಅಗತ್ಯವೆನಿಸುವ ಜ್ಞಾನ, ಕೌಶಲ, ಮನೋಭಾವ ಇವುಗಳನ್ನು ಕಲಿಸುವ ಯತ್ನ ಫಲ ಪರಿಣಾಮಾನುಮೇಯವಾದದ ಮುಖ್ಯ ಅಂಶವನ್ನು ಅಳವಡಿಸಕೊಂಡಿದೆ. ಹಾಗೂ ಅನುಭವಗಳ ಮೂಲಕ ಶಿಕ್ಷಣ ದೊರಕಿಸಬೇಕೆಂಬ ಆ ತತ್ತ್ವಪಂಥದ ವಿಧಾನವನ್ನು ಅನುಸರಿಸುತ್ತದೆ. ಸದ್ಯದಲ್ಲಿ ಎಲ್ಲ ದೇಶಗಳಲ್ಲೂ ಫಲ ಪರಿಣಾಮವಾದಕ್ಕೆ ಪ್ರಾಶಸ್ತ್ಯ ದೊರಕುತ್ತಿದೆ. ಅದನ್ನು ಆಧಾರಮಾಡಿಕೊಂಡು ಮೊಟ್ಟಮೊದಲು 20ನೆಯ ಶತಮಾನದ ಆದಿಯಲ್ಲಿ ಜಾನ್ ಡ್ಯೂಯಿಯವರು ಉದ್ಯಮ ಶಾಲೆಗಳನ್ನು ಅಮೆರಿಕದಲ್ಲಿ ಆರಂಭಿಸಿದರು. ಅವರ ತತ್ತ್ವದೃಷ್ಟಿಯನ್ನು ಪ್ರಪಂಚದಾದ್ಯಂತ ಪುರಸ್ಕರಿಸಲಾಯಿತು. 20ನೆಯ ಶತಮಾನದ ಪ್ರಧಾನ ತತ್ತ್ವಚಿಂತಕರೆನಿಸಿರುವ ಅವರು ಮೂಲಶಿಕ್ಷಣ ಪದ್ಧತಿಯನ್ನು ಕುರಿತು ‘ಅದು ನನ್ನ ಶಿಕ್ಷಣಪದ್ಧತಿಗಿಂತಲೂ ಒಂದು ಹಂತ ಮುಂದೆ ಸಾಗಿದೆ ‘ಎಂದು ತಮ್ಮ ಅಭಿಪ್ರಾಯವನ್ನು ಸೂಚಿಸಿರುವರು. ಇಂಥ ಅನೇಕ ಪ್ರಗತಿಪರ ಅಂಶಗಳನ್ನೊಳಗೊಂಡ ಗಾಂಧೀಜಿಯವರ ಶಿಕ್ಷಣದೃಷ್ಟಿ ಆಕಸ್ಮಿಕವಾಗಿ ರೂಪಗೊಂಡದ್ದಲ್ಲ. ಅವರ ಜೀವನದರ್ಶನ ಬೆಳೆದು ಪಕ್ವಗೊಂಡಂತೆ ಅವರ ಶಿಕ್ಷಣತತ್ತ್ವವೂ ರೂಪುಗೊಂಡಿತು. ಅದನ್ನವರು ಪ್ರತ್ಯೇಕವಾಗಿ ರೂಪುಗೊಳಿಸಲಿಲ್ಲ. ಅವರ ಜೀವನ ದರ್ಶನದ ಕಾರ್ಯಸ್ವರೂಪವಾಗಿ ಅವರ ಶಿಕ್ಷಣ ಪದ್ಧತಿ ಮೈದಾಳಿತು. ಆದ್ದರಿಂದ ಆ ಶಿಕ್ಷಣಪದ್ಧತಿಯಲ್ಲಿ ಅವರ ಜೀವನದ ತತ್ತ್ವದೃಷ್ಟಿ ಪ್ರತಿಬಿಂಬಿಸಿರುವುದು ಸ್ವಾಭಾವಿಕ. ಗಾಂಧೀಜಿಯ ತತ್ತ್ವದೃಷ್ಟಿಯನ್ನು ಯಾವೊಂದು ಸಾಂಪ್ರದಾಯಿಕ ಹೆಸರಿನಿಂದಲೂ ಕರೆಯುವಂತಿಲ್ಲ. ಏಕೆಂದರೆ, ಅದರಲ್ಲಿರುವ ಲಕ್ಷಣಗಳು ಯಾವ ಒಂದು ತತ್ತ್ವಪಂಥವನ್ನು ಪುರ್ಣವಾಗಿ ಅನುಸರಿಸುವುದಿಲ್ಲ. ಅದನ್ನು ಗಾಂಧೀವಾದವೆನ್ನುವುದು ಸೂಕ್ತ. ಅವರ ಈ ತತ್ತ್ವದೃಷ್ಟಿಯನ್ನು ಪೋಷಿಸಿದ್ದು ರಸ್ಕಿನ್ನರ ‘ಅಂಟು ದಿಸ್ ಲ್ಯಾಸ್್ಟ’ ಎಂಬ ಕೃತಿ. ವ್ಯಕ್ತಿಯ ಒಳ್ಳಿತು ಎಲ್ಲರ ಒಳ್ಳಿತಿನಲ್ಲೂ ಅಡಗಿದೆ. ತಮ್ಮ ತಮ್ಮ ದುಡಿಮೆಯಿಂದ ತಮ್ಮ ತಮ್ಮ ಜೀವನೋಪಾಯವನ್ನು ಹುಡುಕಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಒಬ್ಬ ನ್ಯಾಯವಾದಿಯ ಕೆಲಸ ಒಬ್ಬ ಕ್ಷೌರಿಕನ ಕೆಲಸದಷ್ಟೇ ಅಮೂಲ್ಯವಾದುದು. ಉಳುವ ರೈತನ, ದುಡಿಯುವ ಕಾರ್ಮಿಕನ ಜೀವನ ಅಷ್ಟೇ ಯೋಗ್ಯ ಜೀವನ - ಎಂಬ ನಂಬಿಕೆಯನ್ನು ಆ ಗ್ರಂಥಪಠನ ಅವರಲ್ಲಿ ಮೂಡಿಸಿತು. ಹಾಗೆಯೇ ಗೀತೆಯ ಪಠನದಿಂದ ಆತ್ಮವತ್ ಸರ್ವಭೂತೇಷು ಎಂಬ ದೃಷ್ಟಿಯನ್ನು ಆಗಲೇ ಅವರು ಅಂತರ್ಗತ ಮಾಡಿಕೊಂಡಿದ್ದರು. ತಮ್ಮ ಈ ಭಾವನೆಗಳನ್ನವರು ಒಟ್ಟಾರೆ ಸರ್ವೋದಯ ಎಂದು ಕರೆದರು. ಆ ತತ್ತ್ವದೃಷ್ಟಿಯನ್ನು ಕಾರ್ಯರೂಪಕ್ಕೆ ಇಳಿಸಲು ಸಿದ್ಧರಾದರು. ಆ ಕಾರ್ಯ ಅವರಿಗೆ ಸತ್ಯಶೋಧನೆಯಾಯಿತು. ಅದಕ್ಕೆ ಅಹಿಂಸೆ ಅಥವಾ ಪ್ರೇಮ ಪಥವಾಯಿತು.

ಗಾಂಧೀಜಿಯ ಪ್ರಯೋಗಗಳು

[ಬದಲಾಯಿಸಿ]

ತತ್ತ್ವದೃಷ್ಟಿಯ ಕಾರ್ಯಸ್ವರೂಪವೇ ಶಿಕ್ಷಣ ಎಂದು ಆಗಲೇ ಸೂಚಿಸಿದೆಯಷ್ಟೆ. ತಮ್ಮ ಸರ್ವೋದಯ ತತ್ತ್ವವನ್ನು ಪ್ರಯೋಗಿಸಿ ನೋಡಲು ಗಾಂಧೀಜಿ ಹಲವು ಪ್ರಯೋಗಗಳನ್ನು ನಡೆಸಿದರು. ಆ ಒಂದೊಂದು ಪ್ರಯೋಗವೂ ಒಂದೊಂದು ಶಿಕ್ಷಣಯೋಜನೆಯೆನ್ನಬಹುದು. ಫೀನಿಕ್ಸ್ ಆಶ್ರಮ, ಟಾಲ್ಸ್ಟಾಯ್ ಆಶ್ರಮ, ಸತ್ಯಾಗ್ರಹಾಶ್ರಮ, ಸೇವಾ ಗ್ರಾಮ ಆಶ್ರಮ ಇವೇ ಮೊದಲಾದವು ಸತ್ಯ - ಅಹಿಂಸಾ ಶಿಕ್ಷಣದ ಕೇಂದ್ರಗಳೆನಿಸಿದವು. ಟಾಲ್ಸ್ಟಾಯ್ ಆಶ್ರಮದಲ್ಲಿ ಅವರೇ ಶಿಕ್ಷಕರಾಗಿದ್ದರು. ತಮ್ಮ ಮತ್ತು ಇತರ ಮಕ್ಕಳಿಗೆ ಜೀವನೋಪಾಯದ ಕಸಬೊಂದರ ಮೂಲಶಿಕ್ಷಣ ಕೊಡಲು ತಾವೇ ಚಮ್ಮಾರನ ಕೆಲಸವನ್ನು ಕಲಿತರು. ಇದು ಅವರು ದಕ್ಷಿಣ ಆಫ್ರಿಕದಲ್ಲಿದ್ದಾಗ ನಡೆಸಿದ ಪ್ರಯೋಗ. ಅನಂತರ ಅವರು ಮಾತೃಭೂಮಿಗೆ ಹಿಂದಿರುಗಿದ ಮೇಲೆ ಅಹಮದಾಬಾದಿನ ಬಳಿ ಆಶ್ರಮವನ್ನು ಮಾಡಿಕೊಂಡು ಅಲ್ಲಿ ನೂಲುವುದು, ನೇಯುವುದು, ಮತ್ತು ಅವಕ್ಕೆ ಸಂಬಂಧಿಸಿದ ಇತರ ಕಾರ್ಯಗಳನ್ನೂ ಜೀವನೋಪಾಯದ ಕಸಬನ್ನಾಗಿ ಆರಿಸಿಕೊಂಡು ಅದರ ಆಧಾರದ ಮೇಲೆ ಶಿಕ್ಷಣವೀಯುವ ಬಗ್ಗೆ ಸತತವಾಗಿ ಪ್ರಯತ್ನ ನಡೆಸಿದರು. ಈ ಎಲ್ಲ ಪ್ರಯೋಗಗಳಲ್ಲಿ ದೊರೆತ ಅನುಭವಗಳಿಂದ ಕಸಬನ್ನು ಕೇಂದ್ರವಾಗಿ ಮಾಡಿಕೊಂಡು ಶಿಕ್ಷಣವೀಯುವುದರ ಯಥಾರ್ಥತೆಯನ್ನು ಚೆನ್ನಾಗಿ ಮನದಟ್ಟು ಮಾಡಕೊಂಡರು.