ಉಂಡಿಗೆ
ಉಂಡಿಗೆ - ಹಿಂದೆ ಈ ಪದಕ್ಕೆ ರಾಜ ತನ್ನ ರಾಜ್ಯದಲ್ಲಿ ಬಳಸುತ್ತಿದ್ದ ವಿಶಿಷ್ಟವಾದ ಮುದ್ರೆ, ಚಿಹ್ನೆ, ತೆರಪುಗೊಡುವ ಹಾಗೂ ಆಜ್ಞಾವಿದಿತ ಪತ್ರ ಎಂಬೀ ಅರ್ಥಗಳಿದ್ದವು. ಮನೆತನದ, ವಂಶಗಳ ಗೌರವಸೂಚಿಯಾಗಿ ಒಂದೊಂದು ಚಿಹ್ನೆಯನ್ನು ಬಳಸುವ ಪದ್ಧತಿ ಇತ್ತು. ಸೋತ ರಾಜ್ಯ ಗೆದ್ದ ರಾಜ್ಯದ ಉಂಡಿಗೆಯನ್ನು ಬಳಸಬೇಕಾಗಿತ್ತು. ಇದನ್ನೇ ಉಂಡಿಗೇರಿಸು (ಗುಬ್ಬಿಶಾಸನ ಪ್ರ.ಶ.1134) ಎಂದು ಕರೆಯುತ್ತಿದ್ದರು. ಸೋತ ರಾಜ್ಯದ ರಾಜನ ಆಜ್ಞಾವಳಿಗಳಿಗೆ ಅನಂತರ ಬೆಲೆ ಇರುತ್ತಿರಲಿಲ್ಲ. ಯುದ್ಧಮಾಡಿ ಜಯಿಸಿದ ಅನಂತರವೇ ಉಂಡಿಗೆಯನ್ನು ಜಾರಿಗೆ ತರುವುದು ಒಂದು ಮಾರ್ಗ. ಕಲಹವಾಡದೆಯೇ ಕೇವಲ ಒಂದು ಓಲೆಗೆ ತನ್ನ ರಾಜ್ಯದ ಉಂಡಿಗೆಯನ್ನೊತ್ತಿ ಪರರಾಜ್ಯಕ್ಕೆ ಕಳುಹಿಸಿದಾಗ, ಆ ಉಂಡಿಗೆಗೆ ಮಹತ್ತ್ವ ದೊರಕುವುದಾದರೆ ಉಂಡಿಗೆ ಬಂದ ರಾಜ್ಯಕ್ಕೆ ಪರರಾಜ್ಯ ಅಧೀನವಾದಂತೆಯೇ. ತನ್ನೋಲೆ ತನ್ನುಂಡಿಗೆಯನೆ ವಿದಿತಾಜ್ಞಾನ್ವಿತಂ ಮಾಡಿದಂ-ಎಂಬಲ್ಲಿ ಉಂಡಿಗೆಯನ್ನೇ ಆಜ್ಞೆಯಂತೆ ಬಳಸಿದೆ. ಈ ಅಂಶಗಳಿಗೆ ಶಾಸನಾಧಾರವಿದೆ.
ಕಾವ್ಯಗಳಲ್ಲಿ
[ಬದಲಾಯಿಸಿ]ಇನ್ನು ಕಾವ್ಯಗಳಲ್ಲಿ ಉದ್ಧೃತವಾಗಿರುವ ಒಂದೆರಡು ಪ್ರಸಂಗಗಳನ್ನು ನೋಡಬಹುದು. ಉಂಡಿಗೆ ಪದಪ್ರಯೋಗ ಪ್ರಪ್ರಥಮವಾಗಿ ಪಂಪನ ವಿಕ್ರಮಾರ್ಜುನ ವಿಜಯ (ಪಂಪಭಾರತ) ಕಾವ್ಯದಲ್ಲಿ ‘ಅರಿಕೇಸರಿ ತೆಂಕನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಮಾನಾಡನೊಂದೆ ಬಿಲ್ಲೊಳುಂಡಿಗೆ ಸಾಧ್ಯಂಮಾಡಿ’ ಎಂದು ಬಂದಿದೆ. ಇದರ ಅರ್ಥ ಒಂದು ರಾಜ್ಯವನ್ನು ಅರಿಕೇಸರಿ ತನ್ನ ಬಿಲ್ಬಲ್ಮೆಯಿಂದ ಅಧೀನತ್ವಕ್ಕೆ ಒಳಪಡಿಸಿಕೊಂಡನೆಂದು. ಆದರೆ ಇದೇ ಉಂಡಿಗೆ ಪದ ಬಸವಣ್ಣನವರ ವಚನಗಳಲ್ಲಿ ಹೀಗೆ ಪ್ರಯೋಗವಾಗಿದೆ: `ನಿಮ್ಮ ಉಂಡಿಗೆಯ ಪಶುವ ಮಾಡಿದೆಯಾಗಿ’, ‘ಲಿಂಗದ ಉಂಡಿಗೆಯ ಪಶುವಾನಯ್ಯ’, ‘ಎನ್ನ ಉರದ ಉಂಡಿಗೆ’ ‘ಎನ್ನ ಹೃದಯದಲ್ಲಿ ನಿಮ್ಮ ಚರಣ ದುಂಡಿಗೆಯನೊತ್ತಯ್ಯ’. ಪಾದಮುದ್ರೆ, ಚಿಹ್ನೆ, ಲಿಂಗಮುದ್ರೆ ಎಂಬ ಅರ್ಥಗಳಲ್ಲಿ ಉಂಡಿಗೆ ಪದವನ್ನು ಇಲ್ಲಿ ಬಳಸಲಾಗಿದೆ. ಬಸವದೇವರಾಜ ರಗಳೆಯಲ್ಲೂ ಇಂಥ ಪ್ರಯೋಗಗಳಿವೆ.ಶಿವ ಬಸವಣ್ಣನವರ ಮುಂದೆ ಮುತ್ತು ನವರತ್ನಗಳ, ಚಿನ್ನ, ಬೆಳ್ಳಿ ನಾಣ್ಯಗಳ ಮಳೆಗರೆದಂತೆ;
ಎಂಬುದರ ಅರ್ಥ ನಂದಿಯ ಮುದ್ರೆಯುಳ್ಳಂಥ ಚಿನ್ನದ ನಾಣ್ಯಗಳ ಮಳೆಗರೆದನೆಂದು. ಪಶುಪ್ರಾಣಿಗಳ ಮೇಲೆ ತನ್ನದೆನ್ನುವುದಕ್ಕೆ ಒಂದು ಚಿಹ್ನೆಯನ್ನು ಒತ್ತುವುದರ ಪ್ರಸಂಗವೊಂದು ಬಸವಪುರಾಣದಲ್ಲಿದೆ. ಕಿನ್ನರಯ್ಯ ಪ್ರಾಣಿವಧೆಯನ್ನು ಸಹಿಸದವ. ಸಾವಿನ ದವಡೆಯಲ್ಲಿರುವ ಪ್ರತಿಯೊಂದು ಕುರಿಯನ್ನೂ ಒಂದೊಂದು ಸಾವಿರ ಹೊನ್ನನ್ನಿತ್ತು ಬಿಡಿಸಿ ತಂದು ಅವುಗಳಿಗೆ ಲಿಂಗಮುದ್ರೆಯನ್ನು ಒತ್ತಿದ್ದ. ಲಿಂಗಮುದ್ರೆಯಿದ್ದ ಕುರಿಯನ್ನು ಪುನಃ ಬಂಧಿಸಿದಾಗ ಕಿನ್ನರಯ್ಯ ಪ್ರತಿಭಟಿಸಿದ.
<poem
‘ಅವಗೆ ಸಾವಿರ ಹೊಂಗಳಂ ಚೌಕವನೆಣಿಸಿ ಕೊಟ್ಟೆನ್ನಳುಪಿ ಬಂದ ವಗಡಿಸಿದೊಡೆ ಬಿಡೆನೆನುತ ನಾಂ ಹೇಳಿ ಈ ಕುಱಿಯ ಶಿವನ ಮುಂದುಂಡಿಗೆಯನೊತ್ತಿದೆ ಶಿವನ ಲಾಂಛನವಿದು’
ಎಂದೆನ್ನುತ್ತ ಲಿಂಗಮುದ್ರೆಯನ್ನು ತೋರಿಸಿಕೊಟ್ಟ. ಕಾಲಕ್ರಮೇಣ ಉಂಡಿಗೆ ಪದದ ಅರ್ಥ ಬೇರೆ ರೂಪವನ್ನು ತಾಳಲಾರಂಭಿಸಿತು. ‘ಕಲಿದಲಿವಂ ಜವನಲ್ಲಿಯುಂಡಿಗೆದಂದನೋ’ ಯಮನಲ್ಲಿಯೇ ಸೆಣಸಿ ತೆರಪು ಪಡೆದನೇ? ನಿಜವಾಗಿಯೂ ಶೂರನೇ ಹೌದು ಎಂದು ಶಬ್ದಮಣಿದರ್ಪಣದಲ್ಲಿ ಉದಾಹರಿಸಿದೆ. ಉಂಡಿಗೆಯನ್ನು ಹಾಕುವುದು ಒಂದು ಕ್ರಿಯೆಯಾದರೆ ಉಂಡಿಗೆಯನ್ನು ಪಡೆಯುವುದು ಇನ್ನೊಂದು ಕ್ರಿಯೆ.
ಇತ್ತೀಚಿನ ಅರ್ಥ ವ್ಯಾಪ್ತಿ
[ಬದಲಾಯಿಸಿ]ಇತ್ತೀಚೆಗೆ ಉಂಡಿಗೆ ಪದದ ಅರ್ಥವ್ಯಾಪ್ತಿ ಇನ್ನೂ ಹೆಚ್ಚಿದಂತಿದೆ. ಹಿಂದೆ ಸಣ್ಣಪುಟ್ಟ ರಾಜ್ಯಗಳಿಗೆ ಮಾತ್ರ ಅನ್ವಯವಾಗುತ್ತಿದ್ದ ಈ ಪದ ಈಗ ಇಡೀ ರಾಷ್ಟ್ರಕ್ಕೇ ಅನ್ವಯಿಸುವಂತಾಗಿದೆ. ಪ್ರತಿಯೊಂದು ರಾಷ್ಟ್ರಕ್ಕೂ ತನ್ನತನವನ್ನು ಪ್ರತಿನಿಧಿಸುವ ಅಂಕಿತವೊಂದಿರುತ್ತದೆ. ಪರದೇಶ ಪ್ರವಾಸಹೋಗುವ ವ್ಯಕ್ತಿಗಳಿಗೆ ಒಂದು ಗುರುತು ಚೀಟಿ (ಉಂಡಿಗೆ) ಬೇಕಷ್ಟೆ; ಅದನ್ನೇ ಈಗ ರಹದಾರಿ ಎಂದು ಕರೆಯುತ್ತಿದ್ದೇವೆ.