ವಿಷಯಕ್ಕೆ ಹೋಗು

ಕಶಾಂಗಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಶಾಂಗಿಗಳು : ಪ್ರೋಟೋಜೋವ ವಿಭಾಗದ ಒಂದು ಪ್ರಮುಖ ವರ್ಗ (ಫ್ಲಾಜೆಲೇಟ). ಮ್ಯಾಸ್ಟಿಗೋಫೋರ ಪರ್ಯಾಯ ನಾಮ. ಈ ವರ್ಗದ ಪ್ರಾಣಿಗಳು ಜಲವಾಸಿಗಳು; ಸಮುದ್ರಗಳಲ್ಲೊ ಸಿಹಿನೀರಿನ ಕೊಳಗಳಲ್ಲೊ ವಾಸಿಸುತ್ತವೆ. ಈ ವರ್ಗದ ಪ್ರಾಣಿಗಳಲ್ಲಿ ಚಾಟಿಯಂತಿರುವ ಕಶಾಂಗಗಳೇ ಚಲನಾಂಗಗಳು. ದೇಹಕ್ಕೆ ನಿರ್ದಿಷ್ಟವಾದ ಆಕಾರವಿದ್ದು. ಸ್ಪಷ್ಟವಾದ ಮುಂಭಾಗವಿದೆ. ಕೋಶ ದ್ರವ್ಯವನ್ನು ಎಕ್ಟೋಪ್ಲಾಸಂ ಮತ್ತು ಎಂಡೊಪ್ಲಾಸಂ ಎಂದು ವಿಂಗಡಿಸುವುದು ಕಷ್ಟ. ಮುಂಭಾಗದಲ್ಲಿ ಗಂಟಲು ಎನ್ನುವ ತಗ್ಗಾದ ಪ್ರದೇಶವಿದೆ. ಇದು ಆಹಾರಸೇವನೆಗಾಗಿ ಇರದೆ, ಕಶಾಂಗವನ್ನು ಹೊಂದಿರುವ ಸ್ಥಳವಾಗಿದೆ. ದೇಹದಲ್ಲಿ ಎದ್ದುಕಾಣುವ ವಸ್ತುಗಳೆಂದರೆ ಹಸಿರು, ಕೆಂಪು, ಹಳದಿ ಹಾಗೂ ಕಂದು ಬಣ್ಣದ ಕ್ರೋಮೋಪ್ಲಾಸ್ಟ್‌ಗಳು. ಇವುಗಳ ಜೊತೆಗೆ ಬಹುತರವಾಗಿ ಪೈರನಾಯಿಡ್ಗಳು ಇರುವುವು. ಮುಂಭಾಗದಲ್ಲಿ ಪ್ರಕಾಶವನ್ನು ತಿಳಿಯಬಲ್ಲ ಕೆಂಪು ನೇತ್ರಬಿಂದು ಹಲವು ಕಶಾಂಗಿಗಳಲ್ಲಿ ಇದೆ. ನ್ಯೂಕ್ಲಿಯಸ್ ಒಂದೇ ಇದ್ದು, ಸಿಹಿನೀರು ವಾಸಿಗಳಲ್ಲಿ ಸಂಕೋಚನಾವಕಾಶಗಳು ಸಾಮಾನ್ಯವಾಗಿವೆ. ಹರಿತ್ತನ್ನು ಹೊಂದಿರುವ ಕಶಾಂಗಿಗಳಲ್ಲಿ ಪೋಷಣೆ ಪುರ್ತಿಸಸ್ಯ ಮಾದರಿಯದು; ಉಳಿದೆಲ್ಲವುಗಳಲ್ಲಿ ಸ್ಯಾಪ್ರೊಜೋಯಿಕ್ ಇಲ್ಲವೆ ಪುರ್ತಿಪ್ರಾಣಿ ಮಾದರಿಯದು. ಈ ವರ್ಗವನ್ನು ಕೆಳಗೆ ಕಾಣಿಸಿದಂತೆ ೯ ಗಣಗಳಾಗಿ ವಿಭಾಗಿಸಿದ್ದಾರೆ.

  1. ಕ್ರೈಸೊಮಾನಡೈನ_ಉದಾ: ಕ್ರೈಸಮೀಬ
  2. ಕ್ರಿಪ್ಟೊಮಾನಡೈನ_ಉದಾ: ಕ್ರಿಪ್ಟೊಮೊನಾಸ್
  3. ಡೈನೊಫ್ಲಾಜೆಲೇಟ_ಉದಾ: ಸಿರೇಶಿಯಮ್, ನಾಕ್ಟಿಲ್ಯೂಕ
  4. ಯೂಗ್ಲಿನಾಯ್ಡೈನ_ಉದಾ: ಯೂಗ್ಲಿನ
  5. ಫೈಟೊಮಾನಡೈನ_ಉದಾ: ವಾಲ್ವಾಕ್ಸ್‌, ಪಾಂಡೊರೈನ
  6. ಪ್ರೋಟೊಮಾನಡೈನ_ಉದಾ: ಟ್ರಿಪ್ಯಾನೊಸೋಮ, ಲೀಶ್ ಮಾನಿಯ
  7. ಪಾಲಿಮ್ಯಾಸ್ಟಿಗೈನ_ಉದಾ: ಟ್ರೈಕೊಮೊನಾಸ್, ಜಿಯಾರ್ಡಿಯ
  8. ಹೈಪರ್ ಮ್ಯಾಸ್ಟಿಗೈನ_ಉದಾ: ಲೋಫೋಮೊನಾಸ್
  9. ರೈಝೊಮ್ಯಾಸ್ಟಿಗೈನ_ಉದಾ: ಮ್ಯಾಸ್ಟಿಗಮೀಬ. (ಎಸ್.ಬಿ.ಎಂ.)