ವಿಷಯಕ್ಕೆ ಹೋಗು

ಕರ್ನಾಟಕದ ವಾಸ್ತುಶಿಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ವಾಸ್ತುಶಿಲ್ಪ: ಕರ್ನಾಟಕದ ವಾಸ್ತು ಶಿಲ್ಪ ಚಾರಿತ್ರಿಕಯುಗದ ಆರಂಭಕಾಲದಿಂದಲೂ ಪ್ರಾಮುಖ್ಯತೆ ಗಳಿಸಿಕೊಂಡಿದೆ. ಇಲ್ಲಿಯ ನಾನಾ ಅರಸುತನಗಳೂ ಶ್ರೀಮಂತ ವಂಶಗಳೂ ಇದಕ್ಕೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿವೆ. ಅಲ್ಲದೆ ಈ ನಾಡು ತನ್ನ ವಿಶಿಷ್ಪ ಭೌಗೋಳಿಕ ಸನ್ನಿವೇಶದ ಕಾರಣದಿಂದಾಗಿ ಅನೇಕ ವಾಸ್ತುಶೈಲಿಗಳ ಸಂಗಮ ಸ್ಥಾನವಾಗಿದೆ. ಆದ್ದರಿಂದ ಕರ್ನಾಟಕದ ವಾಸ್ತುಶಿಲ್ಪಸಂಪತ್ತು ಗಮನಾರ್ಹವೂ ವೈವಿಧ್ಯಪೂರ್ಣವೂ ಆದದ್ದು. ವಿವಿಧ ರಾಜವಂಶಗಳ ಕಾಲದಲ್ಲಿ ಕರ್ನಾಟಕದ ಈ ಕಲೆ ಬೆಳೆದು ಬಂದ ಬಗೆಯನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ.

ಮೌರ್ಯರ ಮತ್ತು ಸಾತವಾಹನರ ಕಾಲ

[ಬದಲಾಯಿಸಿ]

ಕರ್ನಾಟಕದಲ್ಲಿ ವಾಸ್ತುಶಿಲ್ಪ ಅತ್ಯಂತ ಪುರಾತನವಾದದ್ದಾದರೂ ಯಾವಾಗ ಪ್ರಾರಂಭವಾಯಿತೆಂದು ಹೇಳಲು ಖಚಿತ ಆಧಾರಗಳಿಲ್ಲ. ಅಶೋಕನ ಕಾಲದ ಕಟ್ಟಡಗಳು ಕರ್ನಾಟಕದಲ್ಲಿ ಇದ್ದಿರಬಹುದಾದರೂ ಅವು ನಾಶವಾಗಿರಬಹುದು. ಅಶೋಕನ ಪ್ರಾಂತೀಯ ಸರ್ಕಾರವಿದ್ದ ಮಾಸ್ಕಿಯಂಥಹ ಪಟ್ಟಣದಲ್ಲಿಯೂ ಯಾವ ಕಟ್ಟಡಗಳೂ ಉಳಿದುಬಂದಿಲ್ಲ. ಇಸಿಲದಲ್ಲಿ (ಬ್ರಹ್ಮಗಿರಿ-ಚಿತ್ರದುರ್ಗ ಜಿಲ್ಲೆ)ಯಲ್ಲಿ ವೀಲರ್ ನಡೆಸಿದ ಭೂಶೋಧನೆಯಲ್ಲಿ ತುಂಬ ಶಿಥಿಲವಾದ, ಇಟ್ಟಿಗೆಯ, ಬೌದ್ಧ ಕಟ್ಟಡವೊಂದು ಮಾತ್ರ ಸಿಕ್ಕಿತು (ನೋಡಿ- ಇಸಿಲ). ಸಾತವಾಹನರ ಕಟ್ಟಡಗಳೂ ಅಪೂರ್ವವೇ. ಚಂದ್ರವಳ್ಳಿ (ಚಿತ್ರದುರ್ಗ ಜಿಲ್ಲೆ) ಭೂಶೋಧನೆಯಲ್ಲಿ ಕಟ್ಟಡಗಳು ಸಿಕ್ಕದಿದ್ದರೂ ಸಾತವಾಹನ ಕಾಲದ ದೊಡ್ಡಗಾತ್ರದ (೧೬" x ೧೦" x ೧೩") ಇಟ್ಟಿಗೆಗಳು ಸಿಕ್ಕಿದುವು. ಇಟ್ಟಿಗೆ ಕಟ್ಟಡಗಳು ಚಿತ್ತಾಪುರ ಆ ಕಾಲದಲ್ಲಿದ್ದವೆಂದು ಊಹಿಸಬಹುದು. ಇವುಗಳಿಂದ ಇಟ್ಟಿಗೆ ಕಟ್ಟಡಗಳು ತಾಲ್ಲೂಕಿನ ಸನ್ನತಿ ಎಂಬಲ್ಲಿ ಸಾತವಾಹನ ಕಾಲದ ಬೌದ್ಧಸ್ತೂಪಗಳ ಆಯಕ ಕಂಬಗಳು ಮತ್ತು ಸ್ತೂಪಗಳ ಮೇಲೆ ಜೋಡಿಸಿದ ಸುಣ್ಣಕಲ್ಲಿನ ಶಿಲ್ಪಗಳೂ ವಿಪುಲವಾಗಿ ಸಿಕ್ಕಿವೆ. ಇವುಗಳ ಮೇಲೆ ಸಾತವಾಹನ ಕಾಲದ ಲಿಪಿಯ ಪ್ರಾಕೃತ ಶಾಸನಗಳಿವೆ. ಇವುಗಳ ಕಾಲ ಕ್ರಿ.ಶ. ೧ರಿಂದ ೩ನೇ ಶತಮಾನ. ಶಿಲ್ಪದ ರೀತಿ ಅಮರಾವತಿ ಮತ್ತು ನಾಗಾರ್ಜುನಕೊಂಡವನ್ನು ಹೋಲುತ್ತದೆ. ಈ ಶಿಲ್ಪಗಳು ಆಗಿನ ಕಾಲದ ಸಾಮಾಜಿಕ ಜೀವನ ಮತ್ತು ಕಲೆಗಳ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಿವೆ. ಇತ್ತೀಚೆಗೆ ನಡೆದ ಪ್ರಾಕ್ತನ ಉತ್ಖನನದಲ್ಲಿ ಬನವಾಸಿಯಲ್ಲಿ ಕುದುರೆಯ ಲಾಳಾಕೃತಿಯಲ್ಲಿರುವ (ಗಜಪೃಷ್ಠಾಕೃತಿ) ಎರಡು ದೇವಗೃಹಗಳು ಕಂಡುಬಂದಿವೆ. ಇವುಗಳಲ್ಲೊಂದರಲ್ಲಿ ಎರಡು, ಮತ್ತೊಂದರಲ್ಲಿ ಮೂರು ವಲಯಗಳಿದ್ದು ಈ ವಲಯಗಳ ಮಧ್ಯೆ ಇಕ್ಕಟ್ಟಾದ ಪ್ರದಕ್ಷಿಣ ಮಾರ್ಗ(?)ವಿದೆ. ಇದರಲ್ಲೊಂದರ ನಕ್ಷೆ ವಿಶದವಾಗಿ ತಿಳಿದಿದ್ದು ಮುಂದುಗಡೆ ಆಯಾಕಾರದ ಕೊಠಡಿಗಳೂ ಹಿಂಭಾಗದಲ್ಲಿ ಒಂದು ಎತ್ತರದ ಜಗತಿಯೂ ತಿಳಿದುಬರುತ್ತದೆ. ಈ ಜಗತಿ ಲಾಳಾಕಾರಕ್ಕೆ ಹೊಂದಿಕೊಂಡಿರುವುದರಿಂದ ಮೇಲಿನ ಕಟ್ಟಡವೂ ಅದೇ ಆಕೃತಿಯಲ್ಲಿದೆ. ಇಲ್ಲಿಯ ಸುಮಾರು ಐದಡಿಗಳ ದಪ್ಪದ ಗೋಡೆಗಳು ಆ ಕಾಲದ ಕಟ್ಟಡಗಳ ಸುಭದ್ರತೆಯನ್ನು ತೋರುತ್ತದೆ.

ಕದಂಬರ ಕಾಲ

[ಬದಲಾಯಿಸಿ]
ಕದಂಬ ರಾಜವಂಶದ ಅವಧಿಯಲ್ಲಿ ಹಲವಾರು ಶಾಲೆಗಳ ವಾಸ್ತುಶಿಲ್ಪದ ಸಂಶ್ಲೇಷಣೆ
ಕದಂಬ ಶಿಕಾರ (ಗೋಪುರ) ಕಲಸಾ (ಪಿನಾಕಲ್) ಜೊತೆಗೆ ಮೇಲ್ಭಾಗದಲ್ಲಿ
ಮಧುಕೇಶ್ವರ ದೇವಾಲಯ

ಕದಂಬರು ಕರ್ನಾಟಕದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದರು. ಅವರ ಮುಖ್ಯ ಪಟ್ಟಣಗಳು ಬನವಾಸಿ ಮತ್ತು ಹಲಸಿ. ಕದಂಬರ ಕಾಲದಲ್ಲಿ ಗರ್ಭಗೃಹಮುತ್ತು ಸುಕನಾಸಿ ಬೇರೆಬೇರೆಯಾಗಿ ನಿರ್ಮಾಣವಾಗಲು ಪ್ರಾರಂಭವಾಯಿತೆಂದು ಮೊರೇಸ್ ಅಭಿಪ್ರಾಯಪಡುತ್ತಾನೆ.

೫ನೆಯ ಶತಮಾನದ ತಾಲಗುಂದದ ಶಾಸನದಲ್ಲಿ ಪ್ರಣವೇಶ್ವರ ದೇವಾಲಯದ ಪ್ರಸ್ತಾಪವಿದೆ. ಅದು ೪೫೦ಕ್ಕಿಂತ ಹಿಂದಿನದು. ಅದರ ಗರ್ಭಗೃಹದ ಬಾಗಿಲಿನ ಮೇಲೆ ಕದಂಬ ಮೃಗೇಶವರ್ಮನ ರಾಣಿ ಪ್ರಭಾವತಿಯ ಶಾಸನವಿದೆ. ಹಲಸಿಯ ಜಿನದೇವಾಲಯವೂ ಮೃಗೇಶವರ್ಮನ ಕಾಲದ್ದೆಂದು ಫ್ಲೀಟ್ ತಿಳಿಸಿದ್ದಾನೆ.

ಹಲಸಿಯ ಕಲ್ಲೇಶ್ವರ ದೇವಾಲಯಲ್ಲಿ ಕದಂಬರ ವಾಸ್ತುಶಿಲ್ಪದ ಮುಂದಿನ ಹಂತವನ್ನು ನೋಡಬಹುದು. ಇಲ್ಲಿ ನಾಲ್ಕು ಮತ್ತು ಎಂಟು ಮುಖಗಳುಳ್ಳ ಕಂಬಗಳಿವೆ. ಗರ್ಭಗೃಹ, ಸುಖನಾಸಿಯ ಜೊತೆಗೆ ಮಂಟಪವೂ ಸೇರಿಕೊಂಡಿದೆ.

ಕ್ರಮೇಣ ಚಿಕ್ಕದಾಗುವ, ಸಮತಲ ಅಂತಸ್ತುಗಳಿಂದ ಕೂಡಿರುವ ಶಿಖರ ಕದಂಬ ವಾಸ್ತುಶಿಲ್ಪದ ಮತ್ತೊಂದು ವೈಶಿಷ್ಟ್ಯ. ಇದನ್ನು ಯಲವಟ್ಟಿಯ ದೇವಾಲಯದಲ್ಲೂ ಕೆಲವು ಹೊಯ್ಸಳ ದೇವಾಲಯಗಳಲ್ಲೂ ಕಾಣಬಹುದು. ದೊಡ್ಡ ಗದ್ದವಳ್ಳಿಯ ಲಕ್ಷ್ಮಿದೇವಾಲಯ ಇದಕ್ಕೆ ಉದಾಹರಣೆ.

ಗಂಗರ ಕಾಲ

[ಬದಲಾಯಿಸಿ]

ಗಂಗರ ವಾಸ್ತುಶಿಲ್ಪ ಹೆಚ್ಚಾಗಿ ಉಳಿದುಬಂದಿಲ್ಲ. ಅನೇಕ ಕಟ್ಟಡಗಳು ಅವರ ರಾಜಧಾನಿಯಾದ ತಲಕಾಡಿನ ಮುರಳುಗುಡ್ಡೆಗಳಲ್ಲಿ ಹೂತುಹೋಗಿರಬಹುದು. ಗಂಗರ ಕಂಬಗಳು ಅತ್ಯಂತ ಸೊಗಸಾದುವು. ಇವು ಬುಡದಲ್ಲಿ ಘನಾಕಾರವಾಗಿದ್ದು ತುದಿಯಲ್ಲಿ ಚೂಪಾಗಿದ್ದು ಬೋದಿಗೆಯ ಕೆಳಗಡೆ ಚಕ್ರದ ಆಕೃತಿ ಹೊಂದಿದೆ. ಆರ್ಕೆಶ್ವರ, ಮರಳೇಶ್ವರ, ಪಾತಾಳೇಶ್ವರ ಮೊದಲಾದ ದೇವಾಲಯಗಳು ೮ನೆಯ ಶತಮಾನಕ್ಕೆ ಸೇರಿದವು.

ಗಂಗ ಕಾಲದ ವಾಸ್ತುಶಿಲ್ಪ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಉಳಿದುಬಂದಿದೆ. ಚಂದ್ರಪ್ರಭ ಬಸದಿ ಶಿವಮಾರನಿಂದ ೮೦೦ರಲ್ಲಿ ಕಟ್ಟಲ್ಪಟ್ಟಿತು. ಚಾವುಂಡರಾಯ ಬಸದಿ ಚಾವುಂಡರಾಯನಿಂದ ೯೮೨ರಲ್ಲಿ ಕಟ್ಟಲ್ಪಟ್ಟಿತು. ವಿಶ್ವವಿಖ್ಯಾತವಾದ ಶ್ರವಣಬೆಳಗೊಳದ ದೊಡ್ಡ ಬೆಟ್ಟದ ವೇಲಿರುವ ಬಹಳ ಸುಂದರವಾದ ಗೊಮ್ಮಟೇಶ್ವರ ವಿಗ್ರಹದ ಶಿಲ್ಪಿಯ ಹೆಸರು ತಿಳಿಯದು. ಈ ಶಿಲ್ಪ ಸುಮಾರು ಅರುವತ್ತು ಅಡಿ ಉದ್ದದ ಗ್ರಾನೈಟ್ ಶಿಲೆಯಲ್ಲಿ ಕೆತ್ತಲ್ಪಟ್ಟಿದೆ. ಪಾದದ ಹತ್ತಿರದ ಬಂಡೆಯ ಮೇಲಿರುವ ಗಂಗ ಕಾಲದ ಶಾಸನ ಈ ವಿಗ್ರಹವನ್ನು ಚಾವುಂಡರಾಯ ಮಾಡಿಸಿದನೆಂದು ತಿಳಿಸುತ್ತದೆ. ಚಾವುಂಡರಾಯ ಗಂಗರಸ ರಾಚಮಲ್ಲನ (೯೭೪-೮೪) ಮಂತ್ರಿಯಾಗಿದ್ದ.

೯೭೮ರಲ್ಲಿ ರಚಿಸಲ್ಪಟ್ಟ ಚಾವುಂಡರಾಯಪುರಾಣ ಚಾವುಂಡರಾಯ ಮಾಡಿದ ಹಲವಾರು ಕೆಲಸಗಳನ್ನು ತಿಳಿಸುತ್ತದೆಯಾದರೂ ಈ ಮೂರ್ತಿಯನ್ನು ಪ್ರತಿಷ್ಠೆ ಮಾಡಿದ ವಿಷಯವನ್ನು ಹೇಳಿಲ್ಲ. ಆದುದರಿಂದ ಇದರ ಕಾಲ ೯೭೮ರ ಅನಂತರವೆಂದು ಊಹಿಸಬಹುದು. (ನೋಡಿ- ಕರ್ನಾಟಕದ ಮೂರ್ತಿಶಿಲ್ಪ)

ಬಾಣಸಂದ್ರದ ಬಳಿಯ ಅರಳಗುಪ್ಪೆಯ (ನೋಡಿ- ಅರಳಗುಪ್ಪೆ) ಪಂಚಲಿಂಗ ದೇವಾಲಯದಲ್ಲಿ ಗಂಗ ಶೈಲಿಯ ಕಂಬಗಳಿರುವುದರಿಂದ ಅದನ್ನು ಆ ಕಾಲದ್ದೆಂದು ಊಹಿಸಬಹುದು. ಅದರ ಪ್ರಾಕಾರದಲ್ಲಿ ಸತ್ಯವಾಕ್ಯ ರಾಚಮಲ್ಲ ಪೆರ್ಮಾನಡಿಯ ೧೦ನೆಯ ಶತಮಾನದ ವೀರಗಲ್ಲಿದೆ. ಈ ದೇವಾಲಯ ಬಹಳ ಸುಂದರವಾದುದು. ಮಧ್ಯದಲ್ಲಿರುವ ಲಿಂಗಕ್ಕೆ ಕಲ್ಲೇಶ್ವರ ಎಂದು ಹೆಸರು. ಕಲ್ಲೇಶ್ವರ ದೇವಾಲಯದ ನವರಂಗದ ಕಂಬಗಳು ಮತ್ತು ಅಷ್ಟದಿಕ್ಪಾಲಕರೊಂದಿಗೆ ಕೂಡಿದ ಶಿವನನ್ನು ಹೊಂದಿರುವ ಭುವನೇಶ್ವರಿ ಹೆಚ್ಚು ಕಲಾಪೂರ್ಣವಾದುವು. ಶ್ರವಣಬೆಳಗೊಳದ ಸಮೀಪದಲ್ಲಿರುವ ಕಂಬದಹಳ್ಳಿ (ನೋಡಿ) ಕರ್ನಾಟಕ ವಾಸ್ತು ಶಿಲ್ಪದಲ್ಲಿ ವಿಖ್ಯಾತವಾದುದು. ಅಲ್ಲಿ ೯೦೦ರ ಸುಮಾರಿನ ಕೆಲವು ಕಟ್ಟಡಗಳಿದ್ದು ಅವುಗಳಲ್ಲಿ ಆದಿನಾಥ ಬಸದಿ ಮುಖ್ಯವಾದುದು. ಇದರ ಶಿಖರ ನಂದಿಯಲ್ಲಿರುವ ಭೋಗ ನಂದೀಶ್ವರ ಮತ್ತು ನರಸಮಂಗಲದ ರಾಮೇಶ್ವರ ದೇವಾಲಯಗಳ ಶಿಖರಗಳನ್ನು ಹೋಲುತ್ತದೆ. ಗಂಗ ಶಿಲ್ಪದ ಪ್ರಭಾವ ಕಂಬದಹಳ್ಳಿಯ ಕಟ್ಟಡಗಳ ಮೇಲಿರಬಹುದೆಂದು ಅನೇಕ ವಿದ್ವಾಂಸರ ಊಹೆ.

ಚಾಳುಕ್ಯರ ಕಾಲ

[ಬದಲಾಯಿಸಿ]
ಬಾದಾಮಿ ಚಾಲುಕ್ಯ ವಾಸ್ತುಶಿಲ್ಪ, ಬಾದಾಮಿ ಗುಹೆ ದೇವಾಲಯಗಳು
ಕುಳಿತಿರುವ ವಿಷ್ಣು ಬಾದಾಮಿ ಗುಹೆಯ ದೇವಸ್ಥಾನದಲ್ಲಿ
ಬಾದಾಮಿಯ ಗುಹೆ ಸಂಖ್ಯೆ ೪ರಲ್ಲಿ ಬಾಹುಬಲಿ

ಬಾದಾಮಿ ಚಾಳುಕ್ಯರು ಗುಹಾಂತರ ದೇವಾಲಯಗಳನ್ನಲ್ಲದೆ ತಮ್ಮದೇ ಆದ ಶೈಲಿಯ ದೇವಾಲಯಗಳನ್ನೂ ಕಟ್ಟಡಗಳನ್ನೂ ಕಟ್ಟಿಸಿದರು. ೧ನೆಯ ಪುಲಕೇಶಿಯ ಮಕ್ಕಳಾದ ಕೀರ್ತಿವರ್ಮ ಮತ್ತು ಮಂಗಳೇಶ (೬ನೆಯ ಶತಮಾನ) ಬಾದಾಮಿಯ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಬಾದಾಮಿಯ ಕೋಟೆಯನ್ನು ೧ನೆಯ ಪುಲಕೇಶಿ ಕಟ್ಟಿಸಿದ. ಬಾದಾಮಿಯಲ್ಲಿ ಮರಳುಶಿಲೆಯಲ್ಲಿ ಕೊರೆದ ನಾಲ್ಕು ಗುಹಾಂತರ ದೇವಾಲಯಗಳಿವೆ. ಅವುಗಳಲ್ಲಿ ಒಂದು ಶಿವನದು, ಒಂದು ಜಿನನದು, ಎರಡು ವಿಷ್ಣುವಿನವು. ೩ನೆಯ ಗುಹಾಂತರ ದೇವಾಲಯದಲ್ಲಿ ಮಂಗಳೀಶನ ಶಾಸನವಿದೆ. ಪ್ರತಿಯೊಂದರಲ್ಲಿಯೂ ಕಂಬಗಳಿಂದ ಕೂಡಿದ ವರಾಂಡ, ಒಳಾಂಗಣ ಮತ್ತು ಚದರಾಕಾರದ ಗರ್ಭಗೃಹಗಳು ಇವೆ.

ಐಹೊಳೆ (ನೋಡಿ) ಚಾಳುಕ್ಯರ ವಾಸ್ತುಶಿಲ್ಪದ ತೌರುಮನೆಯೆಂದು ಹೇಳಬಹುದು. ಇಲ್ಲಿ ೪೫೦ ರಿಂದ ೬೫೦ರ ತನಕ ಬೆಳೆದು ಬಂದ ಚಳುಕ್ಯರ ಶಿಲ್ಪಪ್ರಗತಿ ಕಂಡುಬರುತ್ತದೆ. ಐಹೊಳೆಯಲ್ಲಿ ಸುಮರು ೭೦ ದೇವಾಲಯಗಳಿವೆ. ೨ನೆಯ ಪುಲಕೇಶಿ ಕಾಲವಾದ ಅನಂತರ ವಿಜಯಾದಿತ್ಯ ಮತ್ತು ೨ನೆಯ ವಿಕ್ರಮಾದಿತ್ಯರ ಕಾಲದಲ್ಲಿ ಚಾಳುಕ್ಯರು ಪಲ್ಲವರನ್ನು ಸೋಲಿಸಿ ಕಂಚಿಯ ಮೇಲೆ ನುಗ್ಗಿದರಷ್ಟೆ. ಕಂಚಿಯ ರಾಜಸಿಂಹೇಶ್ವರ ದೇವಾಲಯವನ್ನು ನೋಡಿ ೨ನೆಯ ವಿಕ್ರಮಾದಿತ್ಯ ತನ್ನ ಮೆಚ್ಚುಗೆ ತೋರಿಸಿದ್ದಲ್ಲದೆ ಪಲ್ಲವ ರಾಜ್ಯದಿಂದ ದೇವಾಲಯಗಳನ್ನು ನಿರ್ಮಿಸಲು ಅನೇಕ ಶಿಲ್ಪಿಗಳನ್ನು ತನ್ನ ದೇಶಕ್ಕೆ ಒಯ್ದ. ಈ ರೀತಿ ದ್ರಾವಿಡ ವಾಸ್ತುಶಿಲ್ಪದ ಅನೇಕ ಅಂಶಗಳು ಚಳುಕ್ಯರ ವಾಸ್ತುಶಿಲ್ಪಕ್ಕೆ ನೆರವಾದವು. ಐಹೊಳೆಯಿಂದ ೨೪ ಕಿಮೀ ದೂರದ ಪಟ್ಟದಕಲ್ಲಿನಲ್ಲಿ ೬೫೦ರ ಅನಂತರ ಚಳುಕ್ಯ ಶಿಲ್ಪದ ಅತ್ಯಂತ ಪ್ರಗತಿದಾಯಕವಾದ ಹಂತ ಕಾಣಬರುತ್ತದೆ. ಅಲ್ಲಿಯ ವಾಸ್ತುಶಿಲ್ಪ ವಿವಿಧ ಶೈಲಿಗಳ ಮಿಲನಕ್ಕೆ ಒಳ್ಳೆಯ ಉದಾಹರಣೆ. ಅಲ್ಲಿರುವ ಕಾಶಿನಾಥ, ಪಾಪನಾಥ ಮೊದಲಾದ ದೇವಾಲಯಗಳು ಉತ್ತರ ಭಾರತದ ನಾಗರಶೈಲಿಗೂ ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ, ಗಳಗನಾಥ ಮೊದಲಾದವು ದಕ್ಷಿಣ ಭಾರತದ ದ್ರಾವಿಡಶೈಲಿಗೂ ಸೇರಿವೆಯೆಂದು ಪರ್ಸಿ ಬ್ರೌನ್ ಅಭಿಪ್ರಾಯಪಟ್ಟಿದ್ದಾನೆ. ನಾಗರ ಮತ್ತು ದ್ರಾವಿಡ ಇವೆರಡು ಶೈಲಿಗಳ ವೈಶಿಷ್ಟ್ಯವನ್ನು ವೇಸರ ಶೈಲಿಯಲ್ಲಿ ಅಳವಡಿಸಲಾಗಿದೆ. ಚಾಳುಕ್ಯರ ವಾಸ್ತುಶಿಲ್ಪದಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳೆರಡೂ ಮಿಳಿತವಾಗಿದ್ದು ಇದನ್ನೇ ವೇಸರವೆಂದು ಹೇಳಲಾಗಿದೆ. ಚಳುಕ್ಯರ ವಾಸ್ತುಶಿಲ್ಪ ಮೂರು ಅಂಶಗಳಿಂದ ಕೂಡಿದೆ. ೧ ಬೌದ್ಧ ಚೈತ್ಯದ ಕುದುರೆಲಾಳಾಕಾರ (ಐಹೊಳೆಯ ದುರ್ಗಾ ದೇವಾಲಯ). ೨ ಎರಡೂ ಕಡೆ ಬಾಗುಳ್ಳ ಶಿಖರ. ೩ ಸಮತಲ ಅಂತಸ್ತುಗಳಿಂದ ಕೂಡಿದ ಶಿಖರ.

ಆದರೆ ಪಾಪನಾಥ ಮತ್ತು ವಿರೂಪಾಕ್ಷ ದೇವಾಲಯಗಳಲ್ಲಿ ಉತ್ತರ ದಕ್ಷಿಣ ಭಾರತದ ಪ್ರಭಾವಗಳೆರಡೂ ಇವೆ. ಎರಡನೆಯ ವಿಕ್ರಮಾದಿತ್ಯನ ರಾಣಿ ಲೋಕಮಹಾದೇವಿ ವಿರೂಪಾಕ್ಷ ದೇವಾಲಯವನ್ನೂ ಆಕೆಯ ಸಹೋದರಿ ತ್ರೈಲೋಕ ಮಹಾದೇವಿ ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ದೇವಾಲಯವನ್ನೂ ಕಟ್ಟಿಸಿದರು.

ಲಾಡ್ಖಾನ್ ಶಿವಾಲಯ ಐಹೊಳೆಯ ದೇವಾಲಯಗಳಲ್ಲೆಲ್ಲ ಪುರಾತನವಾದುದು. ೪೫೦ ರಲ್ಲಿ ಕಟ್ಟಲ್ಪಟ್ಟ ಈ ವಿಷ್ಣು ದೇವಾಲಯದಲ್ಲಿ ಸ್ವಲ್ಪ ಕಾಲ ಮುಸಲ್ಮಾನನೊಬ್ಬ ವಾಸ ಮಾಡುತ್ತಿದ್ದುದರಿಂದ ಇದಕ್ಕೆ ಲಾಡ್ಖಾನ್ ದೇವಾಲಯವೆಂದು ಹೆಸರಾಯಿತು. ಇಲ್ಲಿ ಕಲಶವನ್ನು ಒಂದು ಅಲಂಕಾರದ ಚಿಹ್ನೆಯಾಗಿ ಉಪಯೋಗಿಸಲಾಗಿದೆ. ಇಲ್ಲಿನ ಮಂಟಪದ ಕಂಬಗಳ ಮೇಲಿನ ಗಂಗಾ ಮತ್ತು ಯಮುನಾ ದೇವಿಯರ ವಿಗ್ರಹಗಳು ಗುಪ್ತರ ದೇವಾಲಯಗಳ ಕುರುಹಾದರೂ ಚಾಳುಕ್ಯರು ತಮ್ಮ ವಾಸ್ತುಶಿಲ್ಪದಲ್ಲಿ ಅವನ್ನು ಉಪಯೋಗಿಸಿಕೊಂಡಿದ್ದಾರೆ. ಸು. ೫೦ ಅಡಿ ಚದರದ ಈ ದೇವಾಲಯದಲ್ಲಿ ಬೆಳಕು ಬರಲು ಗೋಡೆಯಲ್ಲೇ ಮಾಡಿರುವ ಜಾಲಂಧ್ರಗಳು ಸುಂದರವಾಗಿಯೂ ಜಾಣ್ಮೆಯಿಂದಲೂ ಕೆತ್ತಲ್ಪಟ್ಟಿವೆ. ಇದೇ ಶೈಲಿಗೆ ಸೇರಿದ ಕೊಂಟಿ ಗುಡಿಯಲ್ಲಿ ದಪ್ಪವೂ ಕುಳ್ಳೂ ಆದ ಬೋದಿಗೆಗಳವರೆಗೂ ಚದರಾಕಾರವೂ ಆದ ನಾಲ್ಕು ಕಂಬಗಳಿವೆ. ದುರ್ಗಾದೇವಾಲಯ ಐಹೊಳೆಯ ಅತ್ಯಂತ ಸೊಗಸಾದ ಕಟ್ಟಡ. ಬೌದ್ಧ ಚೈತ್ಯಗಳ ಲಕ್ಷಣವಾದ ಕುದುರೆ ಲಾಳಾಕಾರದ ಈ ದೇವಾಲಯದ ಪಡಸಾಲೆ ಕಂಬಗಳ ಮೇಲೆ ಸುಂದರವಾದ ಶಿಲ್ಪಗಳನ್ನು ಕೆತ್ತಿದೆ. ಮೇಗುತಿ ಎಂಬ ಜೈನ ದೇವಾಲಯ ೨ನೆಯ ಪುಲಿಕೇಶಿಯ ಕಾಲದಲ್ಲಿ (೬೭೪) ನಿರ್ಮಿತವಾಯಿತು.

ರಾಷ್ಟ್ರಕೂಟರ ಕಾಲ

[ಬದಲಾಯಿಸಿ]

ಎಲ್ಲೋರ ಈಗ ಕರ್ನಾಟಕದಲ್ಲಿಲ್ಲದಿದ್ದರೂ ಒಮ್ಮೆ ಕರ್ನಾಟಕ ಚಕ್ರವರ್ತಿಗಳಾದ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಅಲ್ಲಿರುವ ಕೈಲಾಸ ದೇವಾಲಯ ರಾಷ್ಟ್ರಕೂಟ ೧ನೆಯ ಕೃಷ್ಣನಿಂದ ಎಂಟನೆಯ ಶತಮಾನದಲ್ಲಿ ನಿರ್ಮಿತವಾಯಿತು. ಅದು ಒಂದೇ ಕಲ್ಲಿನಲ್ಲಿ ಕೊರೆಯಲ್ಪಟ್ಟಿದೆ. ಅದರ ವಿನ್ಯಾಸ ಅಥೆನ್ಸ್‌ನ ಪಾರ್ಥೆನಾನ್ ಕಟ್ಟಡದಷ್ಟೇ ಆದರೂ ಅದರ ಒಂದೂವರೆಯಷ್ಟು ಎತ್ತರವಾಗಿದೆ. ಕೈಲಾಸ ದೇವಾಲಯವನ್ನು ಮೇಲಿಂದ ಕೆಳಕ್ಕೆ ಕೆತ್ತಿರುವುದರಿಂದ ಶಿಲ್ಪಿಗಳಿಗೆ ಅಟ್ಟಣಿಗೆ ಕಟ್ಟಿಕೊಂಡು ಕೆಲಸಮಾಡುವ ಪ್ರಮೇಯ ಬರಲಿಲ್ಲ. ಮಾನ್ಯಖೇಟದಲ್ಲಿ ರಾಷ್ಟ್ರಕೂಟರ ಕಟ್ಟಡಗಳು ಉಳಿದು ಬಂದಿಲ್ಲ. ಅವರ ಕಾಲದ ಕಲ್ಲಿನ ದೇವಾಲಯಗಳು ಬಹಳ ಕಡಿಮೆ. ಸಂಡೂರಿನ ದೇವಾಲಯ ಕಲ್ಲಿನಿಂದ ಕಟ್ಟಲ್ಪಟ್ಟಿದೆಯೆಂದೂ ಅದರೊಳಗೆ ಮೂರನೆಯ ಇಂದ್ರನ ಶಿಲ್ಪವಿದೆಯೆಂದೂ ಹರ್ಮನ್ ಗೊಯೆಟ್ಸ್‌ ತಿಳಿಸುತ್ತಾನೆ.

ಕಲ್ಯಾಣ ಚಾಳುಕ್ಯರ ವಾಸ್ತುಶಿಲ್ಪ

[ಬದಲಾಯಿಸಿ]

ಇದು ಧಾರವಾಡ ಜಿಲ್ಲೆಯಲ್ಲಿ ಜನಿಸಿ ಪ್ರವರ್ಧಮಾನಕ್ಕೆ ಬಂದಿತಾದರೂ ಹನ್ನೊಂದನೆಯ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಗೂ ಪ್ರಸರಿಸಿತು. ಲಕ್ಕುಂಡಿಯ ಕಾಶಿವಿಶ್ವೇಶ್ವರ, ಕುರುವತ್ತಿಯ ಮಲ್ಲಿಕಾರ್ಜುನ ಮತ್ತು ಇಟಗಿಯ ಮಹಾದೇವ-ಇವು ಹನ್ನೆರಡನೆಯ ಶತಮಾನದ ಚಾಳುಕ್ಯ ಶೈಲಿಯ ಬಹಳ ಸುಂದರ ದೇವಾಲಯಗಳು. ನಾಗವಾವಿಯಲ್ಲಿ (ನಾಗೈ) ಕಟ್ಟಲ್ಪಟ್ಟ ಮಧುಸೂಧನ ದೇವಾಲಯ ಮತ್ತೊಂದು ಪ್ರಖ್ಯಾತ ಕಟ್ಟಡ. ಅಲ್ಲಿ ಇನ್ನೂ ಅನೇಕ ಸುಂದರ ದೇವಾಲಯಗಳಿವೆ. ಹೊಯ್ಸಳರಾಜರು ಚಾಳುಕ್ಯರಿಗೆ ಅಧೀನರಾಗಿದ್ದುದರಿಂದ ಆ ಶೈಲಿಯ ಕಟ್ಟಡಗಳನ್ನು ಕಟ್ಟಲಾರಂಭಿಸಿದರು. ಶಿರಾಳಕೊಪ್ಪದ ಸಮೀಪದಲ್ಲಿರುವ ಬೆಳಗಾಮಿ (ಬಳ್ಳಿಗಾವೆ) ಇದಕ್ಕೆ ಉತ್ತಮ ನಿದರ್ಶನ. ಕುಪ್ಪಗದ್ದೆ ಮತ್ತು ಅನವಟ್ಟಿಗಳಲ್ಲೂ ಇದನ್ನು ಕಾಣಬಹುದು.

ಹೊಯ್ಸಳರ ಕಾಲ

[ಬದಲಾಯಿಸಿ]
ಹೊಯ್ಸಳ ವಾಸ್ತುಶಿಲ್ಪ
ಲಕ್ಷ್ಮಿ ನರಸಿಂಹ ದೇವಸ್ಥಾನ, ನುಗ್ಗೆಹಳ್ಳಿ
ಬೇಲೂರಿನ ಹೊಯ್ಸಳ ಸಾಮ್ರಾಜ್ಯದ ಸಂಕೇತವಾಗಿ ಹುಲಿಯ ಜೊತೆ ಹೋರಾಡುತ್ತಿರುವ ಸಳ
ಸೋಮನಾಥಪುರದಲ್ಲಿ ನಕ್ಷತ್ರ ಆಕಾರದ ವಿಮಾನ
ಸೋಮನಾಥಪುರ
ಚೆನ್ನಕೇಶವ ದೇವಾಲಯ, ಬೇಲೂರು
Hoysala carving of Vishnu and his consort Lakshmi from a Belur-Halebid temple
Cheluva-Narayana Swamy Temple, Melukote
Ishvara temple at Arasikere with an unusual 16-pointed stellate (star) mantapa (hall)
Siva and Parvathi - Hoysaleswara Temple

ಚೋಳರ ಮೇಲಿನ ವಿಜಯಸ್ಮಾರಕವಾಗಿ ವಿಷ್ಣುವರ್ಧನ ಅನೇಕ ದೇವಾಲಯಗಳನ್ನು ಕಟ್ಟಿಸಿದ. ಇವುಗಳಲ್ಲಿ ಬೇಲೂರಿನ ವಿಜಯನಾರಾಯಣ (ಕೇಶವ) ಮತ್ತು ತಲಕಾಡಿನ ಕೀರ್ತಿನಾರಾಯಣ ದೇವಾಲಯಗಳು ಮುಖ್ಯವಾದುವು. ವಿಜಯನಾರಾಯಣ ವಿಗ್ರಹದ ಪೀಠದ ಕೆಳಗೆ ಇರುವ ಶಾಸನದಿಂದ ಬೇಲೂರು ದೇವಾಲಯ ೧೧೧೭ರಲ್ಲಿ ನಿರ್ಮಿಸಲ್ಪಟ್ಟಿತೆಂದು ತಿಳಿದುಬರುತ್ತದೆ. ಈ ದೇವಾಲಯದ ಜಾಲಂಧ್ರಕ್ಕೆ ಸೇರಿರುವ ಗೋಡೆಯ ಮೇಲೆ ವಿಷ್ಣುವರ್ಧನನ ದರ್ಬಾರನ್ನು ಕೆತ್ತಿದೆ.

ಹೊಯ್ಸಳರ ದೇವಾಲಯಗಳು ದಕ್ಷಿಣ ಭಾರತದ ಇತರ ದೇವಾಲಯಗಳಂತೆ ಹೆಚ್ಚು ಎತ್ತರವಾಗಿಲ್ಲ. ಅವುಗಳಿಗೆ ಉಪಯೋಗಿಸಿರುವ ಒಂದು ರೀತಿಯ ಬಳಪದ ಕಲ್ಲು ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕದಿದ್ದುದು ಇದಕ್ಕೆ ಕಾರಣವಿರಬಹುದು. ಫರ್ಗ್ಯುಸನ್ ಹೇಳುವಂತೆ ಹೊಯ್ಸಳ ದೇವಾಲಯಗಳನ್ನು ದೂರದಿಂದ ನೋಡಿದರೆ ಅವುಗಳ ಮಹತ್ತ್ವ ಅಷ್ಟು ಚೆನ್ನಾಗಿ ಗೋಚರವಾಗುವುದಿಲ್ಲ. ಆದರೆ ಸಮೀಪದಿಂದ ನೋಡಿದಾಗ ಅವುಗಳ ಅದ್ಭುತ ಕಲಾಕೌಶಲ ಬೆರಗುಗೊಳಿಸುತ್ತದೆ. ಹೊಯ್ಸಳರು ಚಾಳುಕ್ಯರ ಕಟ್ಟಡ ಶೈಲಿಯನ್ನೇ ಅನುಸರಿಸಿ ಬೆಳೆಸಿಕೊಂಡು ಬಂದರೂ ವಿಗ್ರಹಶಿಲ್ಪ, ಬಳ್ಳಿ, ಪ್ರಾಣಿಶಿಲ್ಪ ಮೊದಲಾದ ತಮ್ಮದೇ ಆದ ಅನೇಕ ಆಲಂಕಾರಿಕ ಅಂಶಗಳನ್ನು ಸೇರಿಸಿದರು. ಅವರ ಕೆತ್ತನೆ ಕೆಲಸ ಚಿನ್ನಬೆಳ್ಳಿಯಲ್ಲಿ ಕೆಲಸಮಾಡುವ ಅಕ್ಕಸಾಲಿಗರ ನೈಪುಣ್ಯಕ್ಕಿಂತಲೂ ಮಿಗಿಲಾದುದು.

ಹೊಯ್ಸಳರ ಕಾಲದ ದೇವಾಲಯ ಚಿಕ್ಕದಾದರೂ ಎತ್ತರವಾದ ನಕ್ಷತ್ರಾಕಾರದ ಜಗತಿಯ ಮೇಲೆ ಕಟ್ಟಿರುವುದರಿಂದ ಅದರ ಠೀವಿ ಎದ್ದು ಕಾಣುತ್ತದೆ. ಕಟ್ಟಡದ ಹೊರಗೋಡೆಗಳನ್ನು ಅಲೆಗಳ ಏರುತಗ್ಗುಗಳಂತೆ ಬಿಡಿಸಿರುವುದರಿಂದ ಅಲ್ಲಿ ಬೆಳಕು ಮತ್ತು ನೆರಳಿನ ಪ್ರತಿಕ್ರಿಯೆ ಸ್ಪಷ್ಟವಾಗಿ ಕಾಣುವುದು. ಹೊಯ್ಸಳ ದೇವಾಲಯದಲ್ಲಿ ಭುವನೇಶ್ವರಿಯನ್ನು ಕೆತ್ತಿರುವ ಮಾಟ ಮತ್ತೆಲ್ಲಿಯೂ ಕಾಣದು. ಇಷ್ಟೇ ಅಲ್ಲದೆ ನವರಂಗದಲ್ಲಿ ವಿಧವಿಧವಾಗಿ ಕೆತ್ತಲ್ಪಟ್ಟಿರುವ ಕಂಬಗಳು ವೈವಿಧ್ಯಪೂರ್ಣವಾಗಿವೆ. ಅವುಗಳಲ್ಲಿ ಹದಿನಾರು ಅಥವಾ ಮೂವತ್ತೆರಡು ಮೂಲೆಯವು, ವರ್ತುಲಾಕಾರ ಅಥವಾ ಗಂಟೆಯಾಕಾರದವು ಇದ್ದು, ಕನ್ನಡಿಯ ಹೊಳಪಿನಿಂದ ಕೂಡಿವೆ.

ಬೇಲೂರು ದೇವಸ್ಥಾನವನ್ನು ಜಕಣಾಚಾರಿ ಮತ್ತು ಡಕಣಾಚಾರಿ ಎಂಬ ಪ್ರಖ್ಯಾತ ಶಿಲ್ಪಿಗಳು ಕಟ್ಟಿದರೆಂದು ಪ್ರತೀತಿ. ಆದರೆ ಇವರು ಚಾರಿತ್ರಿಕ ವ್ಯಕ್ತಿಗಳಲ್ಲ ; ಊಹಾ ಪ್ರಪಂಚಕ್ಕೆ ಸೇರಿದವರು. ಅನೇಕ ಶಿಲ್ಪಿಗಳ ಹೆಸರುಗಳನ್ನು ಬೇಲೂರು ದೇವಸ್ಥಾನದಲ್ಲಿ ಅವರು ಕೆತ್ತಿದ ಶಿಲ್ಪಗಳ ಕೆಳಗೆ ಕಾಣಬಹುದು. ದಾಸೋಜ ಮತ್ತು ಅವನ ಮಗ ಚಾವಣರೆಂಬುವರು ಬಳ್ಳಿಗಾವೆಯಿಂದ (ಬೆಳಗಾಮಿ) ಬಂದವರು. ಇವರು ಅನೇಕ ಬಿರುದುಗಳನ್ನು ಸಂಪಾದಿಸಿದ್ದರು. ದಾಸೋಜನಿಗೆ ಬಿರುದರೂವಾರಿ ಗೊಂದಲ ಬಡಿವ ಎಂದೂ ಚಾವಣನಿಗೆ ಬಿರುದರೂವಾರಿ ಮದನಮಹೇಶ ಎಂದೂ ಬಿರುದುಗಳಿತ್ತೆಂದು ಶಾಸನಗಳಿಂದ ಗೊತ್ತಾಗಿದೆ. ದಾಸೋಜ ಮತ್ತು ಚಾವಣರು ತಲಾ ನಾಲ್ಕು ಬೇಲೂರಿನ ಶಿಲಾಬಾಲಕಿಯರ ವಿಗ್ರಹಗಳನ್ನು ಮಾಡಿದರು. ದಾಸೋಜನ ಬೇಟೆಗಾತಿ ವಿಗ್ರಹ ಅತ್ಯದ್ಭುತವಾದುದು. ಮಂಗನೊಂದು ಯುವತಿಯ ಸೀರೆಯನ್ನೆಳೆಯುವಂತೆ ಕೆತ್ತಿದ ಚಾವಣನ ಶಿಲ್ಪ ಪ್ರಶಂಸನೀಯ. ಕೊಳಲಿನ ನೃತ್ಯದ ಶಿಲಾಬಾಲಿಕೆಯ ವಿಗ್ರಹ ಕೆತ್ತಿದ ಮಲ್ಲಿಯಣ್ಣ, ನೃತ್ಯದಲ್ಲಿ ತೊಡಗಿರುವ ಯುವತಿಯ ಶಿಲ್ಪ ಕೆತ್ತಿದ ಗದುಗಿನ ನಾಗೋಜ, ನವರಂಗದಲ್ಲಿ ಶಿಲ್ಪ ಕೆಲಸ ಮಾಡಿದ ಚಿಕ್ಕ ಹಂಪ ಮತ್ತು ಪಾದರಿ ಮಲ್ಲೋಜ ಇವರೆಲ್ಲರೂ ವಿಷ್ಣುವರ್ಧನನ ಶಿಲ್ಪಿಗಳು. ಇವರಲ್ಲದೆ ಮಸಣ, ಮಾಚಾರಿ ಎಂಬುವರ ಹೆಸರುಗಳೂ ಈ ಕಾಲದಲ್ಲಿ (೧೧೧೭ರ ಸುಮಾರು) ಕಾಣಸಿಗುತ್ತದೆ.

ಹಳೇಬೀಡು ಹೊಯ್ಸಳ ದೇವಾಲಯಗಳ ಬೀಡೆಂದರೆ ತಪ್ಪಲ್ಲ. ಹೊಯ್ಸಳ ರಾಜಧಾನಿಯಾಗಿದ್ದ ಹಳೇಬೀಡಿನಲ್ಲಿ ಅನೇಕ ದೇವಾಲಯಗಳಿದ್ದುದು ಆಶ್ಚರ್ಯವೇನೂ ಅಲ್ಲ. ಆದರೆ ಅಲ್ಲಿನ ಅನೇಕ ದೇವಾಲಯಗಳು ಈಗ ನಾಶವಾಗಿವೆ. ಹೊಯ್ಸಳೇಶ್ವರ ದೇವಾಲಯವನ್ನು ವಿಷ್ಣುವರ್ಧನನ ಅಧಿಕಾರಿ ಕೇತಮಲ್ಲ ೧೧೨೧ರಲ್ಲಿ ಕಟ್ಟಿಸಿದ. ೨೦ ವರ್ಷಗಳ ಅನಂತರ ೧ನೆಯ ನರಸಿಂಹನ ಪಟ್ಟಶಿಲ್ಪಿ ಕೇದಾರೋಜ ನಾಲ್ಕು ದ್ವಾರ ಮತ್ತು ಜಾಲಂಧ್ರಗಳನ್ನು ಸೇರಿಸಿದ. ದಕ್ಷಿಣ ದ್ವಾರದ ಮೇಲಿರುವ ಈ ಕೆಳಕಂಡ ಶಾಸನ ಇದನ್ನು ವ್ಯಕ್ತಪಡಿಸುತ್ತದೆ.

  • ೧ ಸ್ವಸ್ತಿಶ್ರೀಮತು ಪ್ರತಾಪ ಹೊಯ್ಸಳ ನರಸಿಂಹದೇವನ ರುವಾರಿ ಕೇದಾರರೊಂಜಂಗೆ ಮಲಪರಗಂಡ
  • ೨ ಭೇರುಂಡ ರೂವಾರಿ ಗಿರಿವಜ್ರದಂಡ ರೂವಾರಿ ಕಾಳಿದಾಸಿ ಗೆಯ್ದ ಮಕರತೋರಣ ಮಂಗಳಶ್ರೀ

ಇದೇ ದೇವಸ್ಥಾನದ ನೃತ್ಯಸರಸ್ವತಿಯ ವಿಗ್ರಹವನ್ನು ಹರಿಪ ಕೆತ್ತಿದ. ಅನೇಕ ಶಿಲ್ಪಿಗಳು ತಮ್ಮ ಕಲಾಕೃತಿಗಳ ಕೆಳಗೆ ನಾಮಾಂಕಿತದ ಮೊದಲನೆಯ ಅಕ್ಷರವನ್ನು ಮಾತ್ರ ಕೊರೆಯುತ್ತಿದ್ದರು. ಹೊಯ್ಸಳೇಶ್ವರ ದೇವಾಲಯದ ಸುಪ್ರಸಿದ್ಧ ಶಿಲ್ಪಿ ಮಾಬ ಮಾ ಎಂಬ ಒಂದೇ ಅಕ್ಷರ ಹಾಕಿಕೊಂಡಿದ್ದಾನೆ. ಇವರಲ್ಲದೆ ಬಲ್ಲಣ್ಣ, ಬೋಚಣ್ಣ, ಚವುಗ, ದೇವೋಜ, ಮುಂತಾದವರು ಈ ದೇವಾಲಯದಲ್ಲಿ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ೧೩ನೆಯ ಶತಮಾನದ ಹೋನೋಜ ಅರಳಗುಪ್ಪೆಯ ಕೇಶವ ದೇವಾಲಯದಲ್ಲಿ ೨೭ ಶಿಲ್ಪಗಳ ಕೆಳಗೆ ತನ್ನ ಹೆಸರನ್ನು ಹಾಕಿಕೊಂಡಿದ್ದಾನೆ. ಅವುಗಳಲ್ಲಿ ಹನ್ನೆರಡವುಗಳ ಕೆಳಗೆ ಹೋ ಮಾತ್ರ ಇದೆ. ಹೊಯ್ಸಳರ ಕಾಲದ ಇನ್ನೂ ಅನೇಕ ವಿಖ್ಯಾತ ಶಿಲ್ಪಿಗಳ ವಿಷಯವನ್ನಿಲ್ಲಿ ಸಂಕ್ಷಿಪ್ತವಾಗಿ ಪರಿಶೀಲಿಸಬಹುದು. ಮಲ್ಲಿತಮ್ಮ ತರೀಕೆರೆ ತಾಲ್ಲೂಕು ಅಮೃತಾಪುರದ ಅಮೃತೇಶ್ವರ ದೇವಾಲಯದ ಸೊಗಸಾದ ಭುವನೇಶ್ವರಿಗಳನ್ನು ೧೧೯೬ರಲ್ಲಿ ರಚಿಸಿದ. ನುಗ್ಗೇಹಳ್ಳಿಯ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ೧೨೪೯ರಲ್ಲಿಯೂ ಮಂಡ್ಯ ಜಿಲ್ಲೆಯ ಗೋವಿಂದನ ಹಳ್ಳಿಯ ಪಂಚಲಿಂಗ ದೇವಾಲಯದಲ್ಲಿಯೂ ಹಾಸನ ಜಿಲ್ಲಿಯ ಜಾವಗಲ್ಲಿನ ಲಕ್ಷ್ಮೀನೃಸಿಂಹ ದೇವಾಲಯದಲ್ಲಿಯೂ ಹಾರನಹಳ್ಳಿಯ ಕೇಶವ ದೇವಾಲಯದಲ್ಲಿ ೧೨೩೪ ರಲ್ಲಿಯೂ ಸೋಮನಾಥಪುರದ ಕೇಶವ ದೇವಾಲಯದಲ್ಲಿ ೧೨೬೮ರಲ್ಲಿಯೂ ಈತ ನಿರ್ಮಿಸಿದ ಅನೇಕ ಅಮೋಘ ಶಿಲ್ಪಗಳಿವೆ. ಸೋಮನಾಥಪುರದ ಕೇಶವ ದೇವಾಲಯ ಒಂದರಲ್ಲಿಯೇ ೪೦ ವಿಗ್ರಹಗಳ ಕೆಳಗೆ ಇವನ ಹೆಸರಿದೆ.

ಚೋಳರ ವಾಸ್ತುಶಿಲ್ಪ

[ಬದಲಾಯಿಸಿ]

ಚೋಳರ ವಾಸ್ತುಶಿಲ್ಪ ಕರ್ನಾಟಕದಲ್ಲಿ ವಿರಳವೆಂದು ಹೇಳಬಹುದು. ಕೋಲಾರ ಜಿಲ್ಲೆಯ ನಂದಿಯ ಭೋಗನಂದೀಶ್ವರ ದೇವಾಲಯದಲ್ಲಿ ಸ್ವಲ್ಪ ಮಟ್ಟಿಗೆ ಚೋಳ ಶೈಲಿಯ ಕಟ್ಟಡ ಕಾಣಬಹುದು. ಈ ದೇವಸ್ಥಾನ ಬಾಣ ವಂಶಕ್ಕೆ ಸೇರಿದ ರತ್ನಾವಳಿಯಿಂದ ಪ್ರಾರಂಭಿಸಲ್ಪಟ್ಟಿತು. ಆದರೆ ಈ ದೇವಾಲಯದ ಬಸವ ಮಂಟಪ ರಾಜೇಂದ್ರ ಚೋಳನ ಕಾಲದಲ್ಲಿ ಸ್ಥಾಪಿತವಾಯಿತು. ಬೆಂಗಳೂರಿನ ಸಮೀಪದಲ್ಲಿರುವ ಬೇಗೂರಿನ ಸುಮಾರು ೧೧ನೆಯ ಶತಮಾನದ ದೇವಾಲಯಗಳಲ್ಲಿ ಚೋಳರ ಶಿಲ್ಪದ ಹೋಲಿಕೆಯನ್ನುಳ್ಳ ಅನೇಕ ಸುಂದರ ವಿಗ್ರಹಗಳಿವೆ. ಮಾಲಿಂಗಿಯ ಜನಾರ್ದನ ದೇವಾಲಯ ರಾಜರಾಜನ ಕಾಲದಲ್ಲಿ ರಚಿತವಾಯಿತು. ನೆಲಮಂಗಲ ತಾಲ್ಲೂಕು ಬಿನ್ನಮಂಗಲದ ಮುಕ್ತಿನಾಥ ದೇವಾಲಯ ಒಂದನೆಯ ಕುಲೋತ್ತುಂಗನ ಕಾಲದಲ್ಲಿ ಕಟ್ಟಲ್ಪಟ್ಟಿತು.

ವಿಜಯನಗರ ಕಾಲ

[ಬದಲಾಯಿಸಿ]

ಹಂಪಿಯಲ್ಲಿರುವ ಮಹಾನವಮಿ ದಿಬ್ಬ ಹಿಂದೆ ಸಿಂಹಾಸನ ಜಗತಿಯಾಗಿತ್ತೆಂದೂ ಒರಿಸ್ಸದ ರಾಜನನ್ನು ಗೆದ್ದ ಜ್ಞಾಪಕಾರ್ಥವಾಗಿ ಅದನ್ನು ಕೃಷ್ಣದೇವರಾಯ ಕಟ್ಟಿಸಿದನೆಂದೂ ಪೇಸ್ ಎಂಬ ವಿದೇಶಿಯ ಹೇಳಿದ್ದಾನೆ. ಈ ಜಗತಿಯ ಕೆಳಭಾಗ ಸುಂದರ ಶಿಲ್ಪಕೃತಿಗಳಿಂದ ಅಲಂಕರಿಸಲ್ಪಟ್ಟಿದೆ. ಸಿಂಹಾಸನದ ಜಗತಿಯಂತೆಯೇ ಕೃಷ್ಣದೇವರಾಯ ಹಜಾರ ರಾಮಸ್ವಾಮಿ ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದ. ಇದರ ಕಂಬಗಳಲ್ಲಿ ಸುಂದರ ವಿಗ್ರಹಗಳಿವೆ.

ಕೃಷ್ಣದೇವರಾಯ ಉದಯಗಿರಿಯಿಂದ ತಂದ ಕೃಷ್ಣ ವಿಗ್ರಹಕ್ಕಾಗಿ ಕೃಷ್ಣಸ್ವಾಮಿ ದೇವಾಲಯವನ್ನು ೧೫೧೩ರಲ್ಲಿ ಕಟ್ಟಿಸಿದ. ಆತ ಸುಪ್ರಸಿದ್ಧ ವಿಠಲಸ್ವಾಮಿ ದೇವಾಲಯವನ್ನು ಪ್ರಾರಂಭಿಸಿದನೆಂದು ಶಾಸನವೊಂದು ತಿಳಿಸುತ್ತದೆ. ಈ ಕೆಲಸ ಆಚ್ಯುತರಾಯ ಮತ್ತು ಸದಾಶಿವರಾಯರ ಕಾಲದಲ್ಲಿ ಮುಂದುವರಿದರೂ ಅಪೂರ್ಣವಾಗಿಯೇ ಉಳಿಯಿತು. ಮಹಮ್ಮದೀಯರು ವಿಜಯನಗರವನ್ನು ಮುತ್ತಿದಾಗ ಇದರ ಸೊಗಸಾದ ಶಿಲ್ಪ ಮತ್ತು ಕಂಬಗಳನ್ನು ಒಡೆದುಹಾಕಿದರು. ಇದರ ಬಳಿ ಇರುವ ಕಲ್ಲಿನ ರಥವೇನೋ ಹಾಗೆಯೇ ಉಳಿದುಬಂದಿದೆ.

ಈ ಕಾಲದ ಪಂಪಾಪತಿ ದೇವಾಲಯದ ಕೆಲವು ಭಾಗಗಳು ವಿಜಯನಗರದ ಸ್ಥಾಪನೆಗಿಂತ ಮುಂಚೆಯೇ ಇದ್ದುವೆಂದು ಲಾಂಗ್ಹಸ್ರ್ಟ್‌ ತಿಳಿಸುತ್ತಾನೆ. ಈ ದೇವಾಲಯದ ರಂಗಮಂಟಪವನ್ನು ಕೃಷ್ಣದೇವಾರಾಯ ಕಿರೀಟಧಾರಣೆಯ ಜ್ಞಾಪಕಾರ್ಥವಾಗಿ ೧೫೦೯-೧೦ರಲ್ಲಿ ಕಟ್ಟಿಸಿದನೆಂದು ಶಾಸನ ತಿಳಿಸುತ್ತದೆ. ಈಗಲೂ ಈ ದೇವಾಲಯ ಹಾಳುಹಂಪಿಯಲ್ಲಿ ಕರ್ಣಾಟಕದ ಹಿರಿಮೆಯನ್ನು ಎತ್ತಿ ತೋರಿಸುವಂತೆ ಕಾಣುತ್ತದೆ. ಶ್ರೀರಂಗಂ, ಲೇಪಾಕ್ಷಿ, ತಾಡಪತ್ರಿ ಮೊದಲಾದ ಸ್ಥಳಗಳಲ್ಲಿ ವಿಜಯನಗರದ ಕಟ್ಟಡಗಳು ಉಳಿದುಬಂದಿವೆ. ಶ್ರೀರಂಗದ ಕುದುರೆ ಮಂಟಪ ಪ್ರಖ್ಯಾತವಾದುದು.

ಹಿಂದೂ-ಮುಸ್ಲಿಂ ವಾಸ್ತು ಶಿಲ್ಪ

[ಬದಲಾಯಿಸಿ]

ಹಿಂದೂ-ಮುಸ್ಲಿಂ ರೀತಿಯ ಕಟ್ಟಡಗಳು ಕರ್ಣಾಟಕದ ಗುಲ್ಬರ್ಗಾ, ಬಿದರೆ, ಬಿಜಾಪುರ ಮೊದಲಾದ ಪ್ರದೇಶಗಳಲ್ಲಿ ರೂಢಿಗೆ ಬಂದುವು. ಬಹಮನೀ ರಾಜಧಾನಿಯಾದ ಬಿದರೆಯಲ್ಲಿ ಮಹಮೂದ್ ಗಾವಾನ್ ೩ನೆಯ ಮಹಮ್ಮದ್ ಷಾನ ಮಂತ್ರಿಯಾಗಿದ್ದಾಗ ಕಟ್ಟಿಸಿದ ಮದ್ರಸ ಅಥವಾ ಕಾಲೇಜಿನ ಕಟ್ಟಡ ಬಹಳ ಪ್ರಾಮುಖ್ಯವಾದುದು. ಅದರ ಎತ್ತರವಾದ ಗುಮ್ಮಟಗಳು, ಉಪನ್ಯಾಸಕ್ಕೆ ಉಪಯೋಗಿಸುತ್ತಿದ್ದ ಕೋಣೆಗಳು, ಪ್ರಾರ್ಥನಾಮಂದಿರ, ಪ್ರಾಧ್ಯಾಪಕರ ಕೋಣೆಗಳು, ೩,೦೦೦ ಗ್ರಂಥಗಳನ್ನು ಹೊಂದಿದ್ದ ಗ್ರಂಥಾಲಯ ಈಗಲೂ ಉಳಿದುಬಂದಿವೆ. ಬಿದರೆಯಲ್ಲಿರುವ ರಂಗೀನ್ ಮಹಲ್ ಮತ್ತೊಂದು ಉತ್ತಮ ಕಟ್ಟಡ. ಇದರಲ್ಲಿ ಉಪಯೋಗಿಸಿರುವ ಅನೇಕ ಬಣ್ಣದ ಹೆಂಚುಗಳು, ಮರದ ಕೆತ್ತನೆ ಕೆಲಸ ಮತ್ತು ಕಪ್ಪೆಚಿಪ್ಪಿನ ಅಲಂಕಾರ ಇದಕ್ಕೆ ಈ ಹೆಸರನ್ನು ತಂದಿವೆ. ಇದನ್ನು ಅಲಿಬರೀದ್ (೧೫೪೨-೮೦) ಕಟ್ಟಿಸಿದ.

ಭಾರತದಲ್ಲೇ ಅತ್ಯಂತ ಆಕರ್ಷಣೀಯವಾದ ಕಟ್ಟಡವೆಂದರೆ ಗುಲ್ಬರ್ಗಾ ಕೋಟೆಯಲ್ಲಿರುವ ಮಸೀದಿ. ಇದನ್ನು ಫಿರೋಜ್ó ಷಾ ಬಹಮನಿಯ ಕಾಲದಲ್ಲಿ ೧೩೬೭ರಲ್ಲಿ ಕಟ್ಟಲಾಯಿತು. ಸ್ಪೇನ್ ದೇಶದ ಕಾರ್ಡೋವದಲ್ಲಿರುವ ದೊಡ್ಡ ಮಸೀದಿಯೇ ಇದಕ್ಕೆ ಮಾದರಿ, ಇದರ ಅಗಲ ಮತ್ತು ಉದ್ದ ೨೧೬ ್ಠ ೧೭೬ ಅಡಿಗಳು. ವಿಚಿತ್ರವೆಂದರೆ ಮಸೀದಿ ಮೇಲ್ಛಾವಣಿಯಿಂದ ಮುಚ್ಚಲ್ಪಟ್ಟಿದೆ. ಇದನ್ನು ಕಟ್ಟಿದ ಶಿಲ್ಪಿ ರಫೀ ಉತ್ತರ ಪರ್ಷಿಯದ ಕಾಜ್ವಿನ್ ಎಂಬ ಪಟ್ಟಣದಿಂದ ಬಂದವ.

ಬಿಜಾಪುರದಲ್ಲಿರುವ ಆಸೆರ್ಮಹಲ್, ಗಗನಮಹಲ್, ಚೀನಿ ಮಹಲ್, ಸಾತ್ ಮಂಜಿಲ್ ಮೊದಲಾದುವು ಆ ಸುಲ್ತಾನರ ಕಲಾಭಿಮಾನದ ಪ್ರತೀಕಗಳು. ಹೈದರ್ ಬುರ್ಜ್‌ ಹತ್ತಿರವಿರುವ ದಖನಿ ಈದ್ಗಾ ಮೇಲಿರುವ ಶಾಸನ ಅದು ೧೫೩೮ರಲ್ಲಿ ಒಂದನೆಯ ಇಬ್ರಾಹಿಮನ ಕಾಲದಲ್ಲಿ ಕಟ್ಟಲ್ಪಟ್ಟಿತ್ತೆಂದು ತಿಳಿಸುತ್ತದೆ. ಒಂದನೆಯ ಆಲಿ ಅದಿಲ್ ಷಾ ಕಾಲದಲ್ಲಿ ಗಗನಮಹಲ್ (೧೫೬೧) ಮತ್ತು ಜಾಮಿ ಮಸೀದಿ ಕಟ್ಟಲ್ಪಟ್ಟವು.

ಆದಿಲ್ ಷಾಹಿ ಕಟ್ಟಡಗಳಲ್ಲೆಲ್ಲ ಅತ್ಯಂತ ಅಮೋಘವಾದುದು ಇಬ್ರಾಹಿಂ ರೋಜó. ಇದರಲ್ಲಿ ಮಸೀದಿ ಮತ್ತು ಗೋರಿ ಅಡಕವಾಗಿವೆ. ಇದು ಎರಡನೆಯ ಇಬ್ರಾಹಿಮನ (೧೫೮೦-೧೬೨೭) ಕಾಲದಲ್ಲಿ ರಚಿತವಾಯಿತು. ಇಬ್ರಾಹಿಮನ ರಾಣಿ ತಾಜ್ ಸುಲ್ತಾನಳಿಗಾಗಿ ಕಟ್ಟಲ್ಪಟ್ಟು ಅವನೇ ಮೊದಲು ಸತ್ತುದರಿಂದ ಅವನ ಗೋರಿಯಾಯಿತು. ಇದರ ಆಲಂಕಾರಿಕ ಆಕರ್ಷಣೆ ಆಮೋಘವಾದುದೆಂದು ಕಸಿನ್ಸ್‌ ಅಭಿಪ್ರಾಯಪಡುತ್ತಾನೆ.

ಮತ್ತೊಂದು ಉತ್ತಮ ಕಟ್ಟಡ ಗೋಳಗುಮ್ಮಟ. ಗಾತ್ರದಲ್ಲಿ ಬಿಜಾಪುರದ ಕಟ್ಟಡಗಳಲ್ಲೆಲ್ಲ ಅತ್ಯಂತ ದೊಡ್ಡದಾದ ಇದನ್ನು ಎರಡನೆಯ ಇಬ್ರಾಹಿಂನ ಮಗ ಮಹಮ್ಮದ (೧೬೨೭-೧೬೫೬) ಕಟ್ಟಿಸಿದ. ಇದರ ಗೋಳ ಬಹಳ ಎತ್ತರವಾದುದು ಮತ್ತು ಇದರ ಕೆಳಗಿನ ಹಜಾರ ಪ್ರಪಂಚದಲ್ಲಿರುವ ಪಿಸುಮಾತಿನ ಹಜಾರಗಳಲ್ಲಿ (ವಿಸ್ಪರಿಂಗ್ ಗ್ಯಾಲರಿ) ಅತ್ಯಂತ ಉತ್ತಮವಾದುದು. (ಎಸ್.ಎಂ.)

ಇದೇ ರೀತಿ ಭಾಗಗಳಲ್ಲಿ ಆಳುತ್ತಿದ್ದ ಮೊಗಲ ಸರದಾರರು ಕಟ್ಟಿಸಿದ ಹಲವು ಕಟ್ಟಡಗಳು ಉಳಿದು ಬಂದಿವೆ. ಅವುಗಳಲ್ಲಿ ಶಿರಾದಲ್ಲಿರುವ ಜಮ್ಮಾಮಸೀದಿ, ಮಲ್ಲಿಕ್ರಿಹಾನ್ ದರ್ಗಾಗಳನ್ನು ಹೆಸರಿಸಬಹುದು. ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯ ಒಡೆದು ಸಣ್ಣಸಣ್ಣ ಸ್ವತಂತ್ರ ಪಾಳೆಯಪಟ್ಟುಗಳು ತಲೆಯೆತ್ತಿಕೊಂಡಾಗ ಅಲ್ಲಿನ ಪಾಳೆಯಗಾರರು ತಮ್ಮ ತಮ್ಮ ಪರಿಮಿತಿಯಲ್ಲಿ ಕಲೆಗೆ ಪ್ರೋತ್ಸಾಹ ಕೊಟ್ಟರು. ಇವರಲ್ಲಿ ಮುಖ್ಯರಾದವರು ಕೆಳದಿಯ ನಾಯಕರು, ಚಿತ್ರದುರ್ಗದ ಪಾಳೆಯಗಾರರು, ಯಲಹಂಕದ ಪ್ರಭುಗಳು ಮತ್ತು ಮೈಸೂರು ಒಡೆಯರು.

ಕೆಳದಿಯ ನಾಯಕರ ಕಾಲ

[ಬದಲಾಯಿಸಿ]

ವಿಜಯನಗರದ ಶಿಲ್ಪಕಲೆಯಿಂದ ಸ್ಫೂರ್ತಿ ಪಡೆದರೂ ಇವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡರು. ಇವರು ದೇವಾಲಯಗಳನ್ನು ಗಟ್ಟಿ ಕಲ್ಲಿನಿಂದ ನಿರ್ಮಿಸಿದ್ದು ದ್ರಾವಿಡ ಹೊಯ್ಸಳ ಶೈಲಿಗಳನ್ನಲ್ಲದೆ ಮುಸ್ಲಿಂ ಶೈಲಿಯನ್ನೂ ಅಳವಡಿಸಿಕೊಂಡರು. ಇಕ್ಕೇರಿಯ ಅಘೋರೇಶ್ವರ ದೇವಾಲಯ ಈ ಕಾಲದ ಕಟ್ಟಡಗಳಲ್ಲಿ ಪ್ರಮುಖವಾದುದು. ಹೊಯ್ಸಳ ದೇವಾಲಯಗಳಂತೆ ಇದನ್ನೂ ಎತ್ತರವಾದ ಜಗತಿಯ ಮೇಲೆ ನಿರ್ಮಿಸಿದ್ದು ಗರ್ಭಗುಡಿಯ ಮೇಲಿನ ಕಲ್ಲಿನ ಗೋಪುರ, ನವರಂಗದ ಗುಂಡುಕಂಬಗಳು, ಹೊರಗೋಡೆಯ ಮೇಲೆ ತೆಳುವಾಗಿ ಬಿಡಿಸಿರುವ ಮೂರ್ತಿಶಿಲ್ಪಗಳು ಹೊಯ್ಸಳ ರೀತಿಯ ಅನುಕರಣೆಯನ್ನು ವಿಶಾಲವಾದ ನವರಂಗ, ಅನೇಕ ರೀತಿಯ ಕಂಬಗಳು, ಕತ್ತಲೆ ಪ್ರದಕ್ಷಿಣ ಮಾರ್ಗ ಜೋಡಿ ಸುಕನಾಸಿಗಳು ದ್ರಾವಿಡ ರೀತಿಯ ಅನುಕರಣೆಯನ್ನೂ ಅಲ್ಲಲ್ಲಿ ಕಾಣುವ ಕಮಾನುಗಳು ಮುಸ್ಲಿಂ ರೀತಿಯ ಅನುಕರಣೆಯನ್ನೂ ಸೂಚಿಸುತ್ತವೆ. ಕೆಳದಿಯ ರಾಮೇಶ್ವರ ಮತ್ತು ವೀರಭದ್ರ ದೇವಾಲಯಗಳ ನಿರ್ಮಾಣ ಕಾರ್ಯ ೧೬ನೆಯ ಶತಮಾನಕ್ಕೆ ಸೇರಿದೆ. ಇಲ್ಲಿನ ಒಳಚಾವಣೆಗಳ ಶಿಲ್ಪ ಅಪೂರ್ವ. ಅದರಲ್ಲಿಯೂ ವಿವರವಾಗಿ ಬಿಡಿಸಿರುವ ಗಂಡಭೇರುಂಡ ಮೂರ್ತಿ ಈ ಶಿಲ್ಪಕ್ಕೆ ಮಾದರಿಯಾಗಿದೆ. ಈ ರಾಜ್ಯದ ಅನೇಕ ಕಡೆಗಳಲ್ಲಿರುವ ಸಣ್ಣ ಸಣ್ಣ ಗುಡಿಗಳು ಆ ಕಾಲದ ವಾಸ್ತುಶಿಲ್ಪದ ವೈಶಿಷ್ಟ್ಯವಾಗಿವೆ. ಎತ್ತರದ ತಳಹದಿಯ ಮೇಲೆ ಪುಟ್ಟ ಗರ್ಭಗುಡಿ, ಸುಕನಾಸಿಗಳು ಮಾತ್ರ ಇದ್ದು ಮುಂಭಾಗದಲ್ಲಿ ನೆಲದಿಂದ ಎದ್ದು ನಿಂತ ಎತ್ತರವಾದ ಕಂಬಗಳುಳ್ಳ ದ್ವಾರಮಂಟಪವಿದ್ದು ಕೆಲವು ವೇಳೆ ಗರ್ಭಗುಡಿಯ ಮೇಲೆ ಕಲ್ಲಿನ ಶಿಖರಗಳಿರುತ್ತವೆ. ಅವುಗಳ ಗೋಡೆಗಳ ಮೇಲೆ ಮೂರ್ತಿಶಿಲ್ಪಗಳಿರುತ್ತವೆ. ತೀರ್ಥಹಳ್ಳಿ, ನಗರ, ಸಾಲಗೆರೆ, ಶೃಂಗೇರಿ ಮುಂತಾದೆಡೆಗಳಲ್ಲಿರುವ ದೇವಾಲಯಗಳಿಗೆ ಜಂಬಿಟ್ಟಿಗೆ ಬಳಸಿದೆ. ಆಗ್ರಹಾರದಲ್ಲಿಯ ೧೭೩೩ರ ನೀಲಕಂಠೇಶ್ವರ ದೇವಾಲಯ ನಾಯಕರ ಕಾಲದ ರಚನೆಗೆ ಮಾದರಿಯಾಗಿದೆ. ಕೇವಲ ೧೦‘ ್ಠ ೮’ ಗಳ ಈ ದೇವಾಲಯದ ಗೋಡೆಗಳ ಒಳಗೂ ಹೊರಗೂ ರಾಮಾಯಣ, ಭಾರತ, ಭಾಗವತಗಳ ಕಥೆಗಳೂ ದ್ವಾರಪಾಲಕರು, ಅಷ್ಟದಿಕ್ಪಾಲಕರು, ವಿಷ್ಣುವಿನ ದಶಾವತಾರ, ಶಿವಲೀಲೆಗಳು ಮತ್ತು ಇತರ ಮೂರ್ತಿಶಿಲ್ಪಗಳೂ ರೂಪಿತವಾಗಿವೆ. ಚಿತ್ರದುರ್ಗ ಪಾಳೆಯಗಾರರು ಕಟ್ಟಿಸಿದ ಹಲವು ದೇವಾಲಯಗಳು ಇತರ ಕಟ್ಟಡಗಳು ಚಿತ್ರದುರ್ಗದ ಬೆಟ್ಟದ ಮೇಲೆಯೂ ಇತರ ಕಡೆಗಳಲ್ಲಿಯೂ ಉಳಿದುಬಂದಿವೆ. ಇವರ ಕಾಲದಲ್ಲಿ ಪುನರ್ನಿರ್ಮಾಣಗೊಂಡ ನೀರ್ತಡಿಯ ರಂಗನಾಥ ದೇವಾಲಯ ತನ್ನ ಹೊರಗೋಡೆಯ ಮೂರ್ತಿಶಿಲ್ಪಗಳಿಗೂ ತೆಳುವಾದರೂ ಉನ್ನತವಾದ ಗೋಪುರಕ್ಕೂ ಪ್ರಸಿದ್ಧವಾಗಿದೆ. ಇದಕ್ಕಿಂತ ಮಿಗಿಲಾಗಿ ಹೊಳಲ್ಕೆರೆ ತಾಲ್ಲೂಕು ರಾಮದುರ್ಗದಲ್ಲಿ ಗುಡ್ಡವೊಂದನ್ನು ಕೊರೆದು ನಿರ್ಮಿಸಿರುವ ಗುಹಾಂತರ್ದೇವಾಲಯ ನಾಯಕರ ಸಾಧನೆಯ ಪ್ರತೀಕವಾಗಿದೆ. ಕಗ್ಗಲ್ಲಿನ ಮೊರಡಿಯಲ್ಲಿ ಕಂಡರಿಸಿರುವ ಈ ಗವಿಯಲ್ಲಿ ಕಂಬ, ಒಳಚಾವಣಿ ಮತ್ತು ತೊಲೆ-ಇವುಗಳ ಮೇಲೆ ತುಂಬಿರುವ ಶಿಲ್ಪವೈಖರಿ ಆಶ್ಚರ್ಯವುಂಟು ಮಾಡುವಂಥದು.

ಯಲಹಂಕ ಪ್ರಭುಗಳ ಕಾಲ

[ಬದಲಾಯಿಸಿ]

ಶಿವಗಂಗೆ, ಮಾಗಡಿ, ಬೆಂಗಳೂರು ಮುಂತಾದ ಕಡೆ ಅನೇಕ ದೇವಾಲಯಗಳನ್ನು ಕಟ್ಟಿಸಿರುವ ಕೆಂಪೇಗೌಡನ ಕಾಲದ ಕಟ್ಟಡಗಳಲ್ಲಿ ಅಲಸೂರಿನ ಸೋಮೇಶ್ವರ ದೇವಾಲಯದ ಗೋಪುರ ಉನ್ನತವೂ ಭವ್ಯವೂ ಆಗಿದೆ. ಬೆಂಗಳೂರು ಕೋಟೆ ವೆಂಕಟರಮಣಸ್ವಾಮಿ ದೇವಾಲಯವನ್ನು ಮೈಸೂರಿನ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಕಟ್ಟಿಸಿದುದೆಂದು ಪ್ರತೀತಿಯಿದ್ದರೂ ಅದು ಕೆಂಪೇಗೌಡನ ಕಾಲದ ಕಟ್ಟಡವೇ ಆಗಿರಬಹುದು. ಇವುಗಳೊಂದಿಗೆ ಗವಿ ಗಂಗಾಧರೇಶ್ವರ ದೇವಾಲಯದ ಮುಂದೆ ಬೃಹತ್ಪ್ರಮಾಣದಲ್ಲಿ ನಿಂತಿರುವ ಛತ್ರಿಗಳು, ತ್ರಿಶೂಲ, ಡಮರುಗ ಮುಂತಾದುವು ಕುತೂಹಲಕಾರಿಯಾಗಿವೆ. ಮೈಸೂರಿನ ಒಡೆಯರ ಕಾಲ : ಇವರು ಮೇಲುಕೋಟೆ, ನಂಜನಗೂಡು, ಮೈಸೂರು, ಶ್ರೀರಂಗಪಟ್ಟಣ, ಗುಂಡ್ಲುಪೇಟೆ, ಮೊದಲಾದ ಕಡೆಯ ಅನೇಕ ದೇವಾಲಯಗಳಿಗೂ ಹಲವು ಮೂರ್ತಿಶಿಲ್ಪಗಳಿಗೂ ಕಾರಣರಾಗಿದ್ದಾರೆ. ರಾಜಒಡೆಯರ ಕಾಲದ್ದಾದ ಮೇಲುಕೋಟೆಯ ಅಪೂರ್ಣ ಕೋಟೆಬಾಗಿಲು ಅವರ ಕಾಲದ ಸಾಧನೆಗೆ ಒಂದು ಹೆಗ್ಗುರುತು. ದೊಡ್ಡದೇವರಾಜ ಒಡೆಯರು ನಿರ್ಮಿಸಿದ ಚಾಮುಂಡಿಬೆಟ್ಟದ ಬಸವ, ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಗುಂಡ್ಲುಪೇಟೆಯಲ್ಲಿ ನಿರ್ಮಿಸಿದ ರಾಮೇಶ್ವರ, ಪರವಾಸುದೇವ ದೇವಾಲಯಗಳು, ಶ್ರೀರಂಗಪಟ್ಟಣದಲ್ಲಿ ಕಂಠೀರವ ನರಸರಾಜ ಒಡೆಯರು ಕಟ್ಟಿಸಿದ ನರಸಿಂಹಸ್ವಾಮಿ ದೇವಾಲಯ - ಇವು ದ್ರಾವಿಡ ರೀತಿಯ ಸಾಮಾನ್ಯ ಕಟ್ಟಡಗಳಾದರೆ ಯಳಂದೂರಿನಲ್ಲಿ ೧೭ನೆಯ ಶತಮಾನದಲ್ಲಿ ನಿರ್ಮಿಸಿರಬಹುದಾದ ಗೌರೀಶ್ವರ ದೇವಾಲಯದ ಮಹಾದ್ವಾರ ತಾಡಪತ್ರಿಯ ದೇವಾಲಯವನ್ನು ನೆನಪಿಗೆ ತರುವ ಒಂದು ಸುಂದರ ಕಲಾಕೃತಿ.

ಸಮಕಾಲಿಕ ಅಶಾಂತ ರಾಜಕೀಯ ಪರಿಸ್ಥಿತಿಯ ನಿಮಿತ್ತವಾಗಿ ಈ ಕಾಲದಲ್ಲಿ ಹಲವಾರು ಸುಭದ್ರ ಕೋಟೆಗಳು ನಿರ್ಮಿತವಾದುವು. ಕೊತ್ತಲ-ಬುರುಜುಗಳನ್ನು ಅಳವಡಿಸಿದ್ದ ಕೋಟೆಯ ಸುತ್ತಲೂ ಆಳವಾದ ಕಂದಕಗಳನ್ನು ತೋಡಿಸುವ ಪದ್ಧತಿ ಬಳಕೆಗೆ ಬಂತು. ಇಂಥ ಅಭೇದ್ಯ ಕೋಟೆಗಳನ್ನು ಹೈದರ್ ಮತ್ತು ಟಿಪ್ಪು ಕಾಲದಲ್ಲಿ ಇನ್ನೂ ಬಲಪಡಿಸಲಾಯಿತು. ಚಿತ್ರದುರ್ಗ, ಬಳ್ಳಾರಿ, ಶ್ರೀರಂಗಪಟ್ಟಣ, ದೇವನಹಳ್ಳಿ, ಬೆಂಗಳೂರು ಮುಂತಾದ ಕಡೆ ಇಂಥ ಕೋಟೆಗಳಿವೆ.

ಹೈದರ್ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿ ಕರ್ಣಾಟಕದ ದಕ್ಷಿಣಭಾಗದಲ್ಲಿಯೂ ಕೆಲವು ಮುಸ್ಲಿಂ ರೀತಿಯ ಕಟ್ಟಡಗಳು ನಿರ್ಮಾಣವಾದುವು. ಬೆಂಗಳೂರಿನ ಟಿಪ್ಪು ಅರಮನೆ, ಶ್ರೀರಂಗಪಟ್ಟಣದ ದರಿಯಾ ದೌಲತ್, ಜುಮ್ಮಾಮಸೀದಿ, ಗುಂಬಜ್ಗಳು ಇವಕ್ಕೆ ನಿದರ್ಶನಗಳು.

ಭಾರತಾಂಗ್ಲ ವಾಸ್ತುಶೈಲಿ

[ಬದಲಾಯಿಸಿ]

ಪಾಶ್ಚಾತ್ಯರ ಆಳ್ವಿಕೆಯೊಂದಿಗೆ ಐರೋಪ್ಯ ರೀತಿಯ ಕಟ್ಟಡಗಳ ನಿರ್ಮಾಣ ಆರಂಭವಾಯಿತು. ಮೊದಲಿಗೆ ಕಟ್ಟಡಗಳು ಪಾಶ್ಚಾತ್ಯ ಇಂಜಿನಿಯರುಗಳಿಂದ ರೂಪಿಸಲ್ಪಟ್ಟು ಯೂರೋಪಿನ ಬೇರೆ ಬೇರೆ ವಾಸ್ತುಶೈಲಿಗಳಲ್ಲಿವೆ. ಈ ಕಾಲದಲ್ಲಿ ಅನೇಕ ಚರ್ಚುಗಳು ಗಾಥಿಕ್ ಶೈಲಿಯಲ್ಲಿ ನಿರ್ಮಾಣವಾದುವು. ಬೆಂಗಳೂರಿನ ಟ್ರಿನಿಟಿ ಚರ್ಚು, ಮಂಗಳೂರಿನ ಸೇಂಟ್ ಅಲೋಯ್ಸಿಯಸ್ ಚರ್ಚು, ಮೈಸೂರಿನ ಸೇಂಟ್ ಫಿಲೋಮಿನ ಚರ್ಚುಗಳು ಈ ಶೈಲಿಯ ಅತ್ಯಂತ ಆಕರ್ಷಕ ಕಟ್ಟಡಗಳು.

ಚರ್ಚುಗಳು ಮತ್ತು ಇತರ ಮತೀಯ ಕಟ್ಟಡಗಳಿಗಿಂತ ಈ ಕಾಲದಲ್ಲಿ ಹೆಚ್ಚಾಗಿ ಸಾರ್ವಜನಿಕ ಕಟ್ಟಡಗಳ ನಿರ್ಮಾಣವಾಯಿತು. ಈ ಕಟ್ಟಡಗಳಲ್ಲಿ ಗಾಥಿಕ್ ಶೈಲಿಯೇ ಅಲ್ಲದೆ ಗ್ರೀಸ್, ಇಟಲಿ, ಫ್ರಾನ್ಸ್‌ಗಳ ಪುನರುಜ್ಜೀವನ ಶೈಲಿಯ ಅನುಕರಣೆ ಕಂಡುಬರುತ್ತದೆ. ಗಾಥಿಕ್ ಶೈಲಿಯ ಕಟ್ಟಡಗಳಿಗೆ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕಟ್ಟಡ ಉತ್ತಮ ಉದಾಹರಣೆ. ಬೆಂಗಳೂರಿನ ಅಠಾರಾ ಕಚೇರಿ, ವಸ್ತು ಸಂಗ್ರಹಾಲಯ, ಡ್ಯಾಲಿ ಮೆಮೋರಿಯಲ್ ಹಾಲ್, ಮೈಸೂರಿನ ಮಹಾರಾಜ ಕಾಲೇಜು. ಜೂಬಿಲಿ ಕಟ್ಟಡ, ಡಿಸ್ಟ್ರಿಕ್ಟ್‌, ಆಫೀಸ್ ಕಟ್ಟಡಗಳು ಪುನರುಜ್ಜೀವನ ಶೈಲಿಯಲ್ಲಿ ನಿರ್ಮಾಣವಾಗಿವೆ. ಬೆಂಗಳೂರಿನ ಅರಮನೆ ಇಂಗ್ಲೆಂಡ್ ಮತ್ತು ನಾರ್ಮಂಡಿಗಳಲ್ಲಿ ನಿರ್ಮಿತವಾದ ಮಧ್ಯಯುಗದ ದುರ್ಗಗಳಂತಿದ್ದು ವಿಂಡ್ಸರ್ ಅರಮನೆಯ ಮಾದರಿಯಲ್ಲಿದೆ. ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಂಥ ಹಲವು ಕಟ್ಟಡಗಳಲ್ಲಿ ಅಮೆರಿಕದ ಪುನರುಜ್ಜೀವನ ಶೈಲಿಯನ್ನು ಗುರುತಿಸಬಹುದು. ೧೯ನೆಯ ಶತಮಾನದಲ್ಲಿ ಹೀಗೆ ವಿದೇಶೀ ಶೈಲಿ ಕರ್ನಾಟಕದ ವಾಸ್ತುಶಿಲ್ಪಿಗಳಲ್ಲಿ ಹೆಚ್ಚಾಗಿ ಕಂಡರೂ ದೇಶೀಯ ಶೈಲಿಯೂ ಅಲ್ಲಲ್ಲಿ ಉಳಿದುಕೊಂಡು ಬಂದಿದೆ. ಇದರೊಂದಿಗೆ ಹಿಂದೂ, ಮುಸ್ಲಿಂ ಮತ್ತು ಪಾಶ್ಚಾತ್ಯ ಶೈಲಿಗಳು ಮಧುರವಾಗಿ ಸಮ್ಮಿಳನಗೊಂಡು ಹೊಸ ರೀತಿಯ ಕಟ್ಟಡಗಳ ಆವಿರ್ಭಾವಕ್ಕೂ ಅವಕಾಶವಾಗಿದೆ.

ಈಚಿನ ಕಟ್ಟಡಗಳು

[ಬದಲಾಯಿಸಿ]

೨೦ನೆಯ ಶತಮಾನದ ಆದಿಯಲ್ಲಿ ಕಟ್ಟಿದ ದೇವಾಲಯಗಳಲ್ಲಿ ಶೃಂಗೇರಿಯ ಶಾರದಾ ದೇವಾಲಯ ಮುಖ್ಯವಾದುದು. ಕಗ್ಗಲ್ಲಿನಲ್ಲಿ ದ್ರಾವಿಡ ರೀತಿಯಲ್ಲಿ ಕಡೆದಿರುವ ಕಂಬಗಳೂ ಅವುಗಳ ಮುಂಭಾಗದಲ್ಲಿ ಉನ್ನತವಾಗಿ ರೂಪುಗೊಂಡಿರುವ ಮೂರ್ತಿಶಿಲ್ಪಗಳೂ ದಕ್ಷಿಣದ ಶಿಲ್ಪಿಗಳು ಇಂದಿಗೂ ಉಳಿಸಿಕೊಂಡು ಬಂದಿರುವ ಶಿಲ್ಪಕಲಾ ಸಂಪ್ರದಾಯವನ್ನು ಎತ್ತಿ ತೋರಿಸುತ್ತವೆ. ಈ ದೇವಾಲಯದೊಂದಿಗೆ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಕಗ್ಗಲ್ಲಿನಲ್ಲಿ ಕಟ್ಟಿರುವ ಶಂಕರ ಮಠಗಳನ್ನೂ ಹೆಸರಿಸಬಹುದು. ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭವ್ಯವಾದ ಶ್ರೀ ಕಾಲಭೈರವನ ದೇವಾಲಯವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಇನ್ನೂ ಅನೇಕ ಮಠ ಮತ್ತು ಪುಣ್ಯಕ್ಷೇತ್ರಗಳಲ್ಲಿ ಆಧುನಿಕ ದೇವಾಲಯಗಳು ರೂಪುಗೊಂಡಿವೆ. ಶ್ರೀ ಕ್ಷೇತ್ರ ಧರ್ಮಸ್ಥಳÀದಲ್ಲಿನ ಗೊಮ್ಮಟೇಶ್ವರ ಪ್ರತಿಮೆ ಮೂರ್ತಿ ಶಿಲ್ಪಕ್ಕೆ ಕಳೆದ ಶತಮಾನದ ಕೊಡುಗೆ ಬೆಂಗಳೂರಿನ ಹನುಂತನ ಬೃಹತ್ ವಿಗ್ರಹ ಹಾಗೂ ಹಳೇ ವಿಮಾನ ನಿಲ್ದಾಣ ರಸ್ತೆಯ ಶಿವನ ಬೃಹತ್ ವಿಗ್ರಹ ಇತ್ತೀಚಿನ ಸೇರ್ಪಡೆ.

ಆಧುನಿಕ ಕಟ್ಟಡಗಳಲ್ಲಿ ಅತ್ಯಂತ ಸುಂದರವೂ ಭವ್ಯವೂ ಆದ ಮೈಸೂರಿನ ಅರಮನೆ ಹಿಂದೂ, ಮುಸ್ಲಿಂ ಮತ್ತು ಪಾಶ್ಚಾತ್ಯ ಶೈಲಿಗಳ ಆಕರ್ಷಣೀಯ ಸಂಗಮ. ಹೊರ ನೋಟಕ್ಕೆ ಮೊಗಲ್ ಶೈಲಿಯ ಗಾಂಭೀರ್ಯವನ್ನು ಹೊಂದಿರುವ ಈ ವಿಶಾಲವಾದ ಕಟ್ಟಡದ ಮಧ್ಯಗೋಪುರ ೧೪೫ ಅಡಿಗಳಷ್ಟು ಎತ್ತರದ್ದಾಗಿದೆ. ಹಲವು ರೀತಿಯ ಕಲ್ಲುಗಳನ್ನು ಉಪಯೋಗಿಸಿ ಕಟ್ಟಿರುವ ಈ ಕಟ್ಟಡದ ತಳದಿಂದ ತುದಿಯವರೆಗೂ ಕಾಣುವ ಕುಸುರಿ ಕೆಲಸದ ಮನೋಹರ ಸೌಂದರ್ಯ ಬೆರಗುಗೊಳಿಸುವಂಥದು. ಹೊಯ್ಸಳ ರೀತಿಯಲ್ಲಿ ಬಿಡಿಸಿರುವ ಬಳ್ಳಿಗಳು, ಸುರುಳಿಗಳು, ಪಕ್ಷಿಗಳು, ಪ್ರಾಣಿಗಳು, ನಾನಾಭಂಗಿಯಲ್ಲಿ ಇರುವ ಮೂರ್ತಿಗಳು ಎಲ್ಲವೂ ಅಪರೂಪ ಕೃತಿಗಳು. ಇವುಗಳ ಮಾಟದಲ್ಲಿ, ನಿಲುವಿನಲ್ಲಿ ಗಾಥಿಕ್ ಶೈಲಿಯ ಪ್ರಭಾವವನ್ನು ಗುರ್ತಿಸಬಹುದು. ಕಲ್ಲಿನ ಕೆಲಸದೊಂದಿಗೆ ಈ ಕಟ್ಟಡದೊಳಗಿರುವ ಮರದ ಕೆತ್ತನೆ, ದಂತದ ಕೆಲಸ, ಗಾರೆ ಬಣ್ಣಗಳ ಕೃತಿ-ಇವು ಒಂದನ್ನೊಂದು ಮೀರಿಸುವಂತೆ ಚಿತ್ತಾಕರ್ಷಕವಾಗಿದ್ದು ಕಟ್ಟಡದ ಸೌಂದರ್ಯವನ್ನು ಅತ್ಯಂತ ಉನ್ನತ ಮಟ್ಟಕ್ಕೆ ಏರಿಸಿವೆ. ಭಾರತದಲ್ಲಿಯೇ ಇದನ್ನು ಮೀರಿಸುವ ಆಧುನಿಕ ಕಲ್ಲಿನ ಕಟ್ಟಡ ಬೇರೊಂದಿಲ್ಲ ಎಂಬ ಪಾಶ್ಚಾತ್ಯ ವಿದ್ಯಾಂಸರೊಬ್ಬರ ಅಭಿಪ್ರಾಯ ಅತಿಶಯೋಕ್ತಿಯಲ್ಲ.

ಇತ್ತೀಚೆಗೆ ಕಟ್ಟಿದ ಬೃಹತ್ಪ್ರಮಾಣದ ಆಕರ್ಷಕ ಕಟ್ಟಡವೆಂದರೆ ವಿಧಾನ ಸೌಧ. ಆಧುನಿಕ ರೀತಿಯ ವಿಶಾಲಯವಾದ ಈ ಕಟ್ಟಡಕ್ಕೆ ಪ್ರಾಚೀನ ದ್ರಾವಿಡ ರೀತಿಯ ದೇವಾಲಯಗಳ ಗೋಪುರಗಳ ಮಾದರಿಗಳನ್ನಳವಡಿಸಿ, ಗಾಂಭೀರ್ಯ ಮತ್ತು ಭವ್ಯತೆಗಳು ಎದ್ದು ಕಾಣುವಂತೆ ಮಾಡಲಾಗಿದೆ. ಅದರ ಪಕ್ಕದಲ್ಲೇ ವಿಕಾಸಸೌಧ ಎಂಬ ವಿಧಾನಸೌಧವನ್ನೇ ಹೋಲುವ ಸಚಿವಾಲಯ ಈಗ ಎದ್ದುನಿಂತಿದೆ. (ಎಂ.ಎಚ್.)