ವಿಷಯಕ್ಕೆ ಹೋಗು

ಕರೋನ ವಿಸರ್ಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Corona discharge on a Wartenberg wheel

ಕರೋನ ವಿಸರ್ಜನೆ ವಾಯುಮಂಡಲದ ಸಂಮರ್ದದಲ್ಲಿ ಅಥವಾ ಸರಿಸುಮಾರಾಗಿ ಅಷ್ಟೇ ಸಂಮರ್ದದಲ್ಲಿ ಅನಿಲಗಳಲ್ಲಿ ಉಂಟಾಗುವ ವಿದ್ಯುದ್ವಹನತೆಯ ಒಂದು ಪ್ರರೂಪ (ಕರೋನ ಡಿಸ್ಚಾರ್ಜ್). ಹೆಚ್ಚಿನ ವಿಭವಾಂತರದಲ್ಲಿ ಕೆಲಸ ಮಾಡುವ ವಿದ್ಯುತ್ ಸ್ಥಾಯಿ ಯಂತ್ರಗಳು (ಎಲೆಕ್ಟ್ರೊಸ್ಟ್ಯಾಟಿಕ್ ಆಪರೇಟರ್ಸ್) ತಮ್ಮನ್ನು ಸುತ್ತುವರಿದಿರುವ ವಸ್ತುವಿನ ರೋಧವನ್ನು (ಇನ್ಸುಲೇಷನ್) ಅವಲಂಬಿಸುತ್ತವೆ. ಸಾಮಾನ್ಯವಾಗಿ ಯಂತ್ರೋಪಕರಣಗಳನ್ನು ಸುತ್ತುವರಿದಿರುವ ನಿರೋಧಕ (ಇನ್ಸುಲೇಟರ್) ಗಾಳಿ. 0 ಡಿಗ್ರಿ ಸೆಂ. ಉಷ್ಣತೆ ಮತ್ತು 760 ಮಿ.ಮಿ. ಒತ್ತಡದಲ್ಲಿರುವ ಒಣಗಾಳಿ. ವಿದ್ಯುತ್ ಕ್ಷೇತ್ರ ಬಲವಿದ್ದಾಗ (ಎಲೆಕ್ಟ್ರಿಕ್ಫೀಲ್ಡ್‌ ಇನ್ಟೆನ್ಸಿಟಿ) ತನ್ನ ನಿರೋಧಕತ್ವವನ್ನು ಕಳೆದುಕೊಂಡು ವಿದ್ಯುದ್ವಿಸರ್ಜನೆಯಾಗುವುದಕ್ಕೆ ಕಾರಣವಾಗುತ್ತದೆ. ಗಾಳಿಯಿಂದ ಸುತ್ತುವರಿಯಲ್ಪಟ್ಟ ವಿದ್ಯುದ್ವಾಹಕವಸ್ತು ವಿದ್ಯುದಂಶವನ್ನು (ಎಲೆಕ್ಟ್ರಿಕಲ್ ಚಾರ್ಜ್) ತನ್ನಲ್ಲಿ ಅಡಗಿಸಿಟ್ಟು ಕೊಳ್ಳಬೇಕಾದರೆ ಅದರ ಮೇಲ್ಮೈ ಮೊನಚಾಗಿರಬಾರದು, ತುದಿಗಳು ದುಂಡಾಗಿರಬೇಕು. ಮೊನಚಾಗಿರುವ ಭಾಗಗಳಲ್ಲಿ ವಿದ್ಯುದಂಶದ ಸಾಂದ್ರತೆ ಹೆಚ್ಚಾಗಿದ್ದು ವಿದ್ಯುತ್ ಕ್ಷೇತ್ರಬಲ ಅಧಿಕವಾಗಿರುವುದು. ಸುತ್ತುವರಿಯಲ್ಪಟ್ಟ ಗಾಳಿಯ ಅಣುಗಳಲ್ಲಿ ಧನವಿದ್ಯುದಂಶವುಳ್ಳ ನ್ಯೂಕ್ಲಿಯಸ್ ಇರುತ್ತದೆ. ಅವನ್ನು ಋಣವಿದ್ಯುದಂಶವುಳ್ಳ ಎಲೆಕ್ಟ್ರಾನುಗಳು ಸುತ್ತುವರಿದಿರುವುವು. ವಸ್ತುವಿನ ಮೊನಚಾದ ಭಾಗಗಳಲ್ಲಿ ಧನವಿದ್ಯುತ್ ಕಣಗಳ ಸಾಂದ್ರತೆ ಹೆಚ್ಚಾಗಿದ್ದಾಗ ಇವು ಗಾಳಿಯ ತಟಸ್ಥ ಅಣುಗಳಲ್ಲಿರುವ ಋಣವಿದ್ಯುತ್ ಕಣಗಳನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತವೆ. ಗಾಳಿಯ ಅಣುಗಳು ಅಯಾನೀಕರಿಸಿ ಧನವಿದ್ಯುದಂಶವುಳ್ಳ ಕಣಗಳಿಂದ ತುಂಬಿರುತ್ತದೆ. ಇವು ವಿಕರ್ಷಣೆಹೊಂದಿ ದೂರ ಹೋಗುತ್ತವೆ. ಈ ಸ್ಥಳವನ್ನು ಗಾಳಿಯ ತಟಸ್ಥ ಅಣುಗಳು ಆಕ್ರಮಿಸಿಕೊಂಡು ಮೇಲೆ ಹೇಳಿದ ರೀತಿಯಲ್ಲಿ ಅಯಾನೀಕರಿಸುತ್ತವೆ. ಇದೇ ರೀತಿ ವಸ್ತುವಿನ ಮೊನಚಾದ ಭಾಗಗಳಲ್ಲಿ ಋಣವಿದ್ಯುತ್ ಕಣಸಾಂದ್ರತೆ ಅಧಿಕವಾಗಿದ್ದಾಗ ಗಾಳಿಯ ತಟಸ್ಥ ಅಣುಗಳು ಋಣ ವಿದ್ಯುತ್ಕಣಗಳನ್ನು ವಿಕರ್ಷಿಸಿ ಅಯಾನೀಕರಣವನ್ನು ಉಂಟುಮಾಡುತ್ತವೆ. ಈ ರೀತಿ ಉಂಟಾಗುವ ವಿದ್ಯುದ್ವಿಸರ್ಜನೆಯೇ ಕರೋನ ವಿಸರ್ಜನೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]