ಆರ್ಜೆಷ್ಕೊವ ಎಲಿಜ಼

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೮೪೨-೧೯೧೦. ಪೋಲೆಂಡಿನ ಕಾದಂಬರಿಕಾರ್ತಿ. ವಾರ್ಸದಲ್ಲಿ ವಿದ್ಯಾಭ್ಯಾಸ. ಗಂಡ ರಾಜಕೀಯ ಕಾರಣಗಳಿಗಾಗಿ ಪೋಲೆಂಡನ್ನು ಬಿಟ್ಟ ಮೇಲೆ, ಗ್ರಾಡ್ನೊದಲ್ಲಿ ವಾಸಮಾಡಿದಳು. ಕಾದಂಬರಿಗಳ ರಚನೆಯನ್ನು ಪ್ರಾರಂಭಿಸಿದುದು ಇಲ್ಲಿಯೇ (೧೮೬೬). ಪ್ರತ್ಯಕ್ಷೈಕ ಪ್ರಮಾಣವಾದದ ವಾಸ್ತವಿಕತೆ (ಪಾಸಿಟಿವಿಸ್ಟ್‌ರಿಯಲಿಸಂ) ಇವಳ ಕೃತಿಗಳಲ್ಲಿ ಕಾಣುತ್ತದೆ. ಸಂಕುಚಿತ ರಾಷ್ಟ್ರೀಯತೆ ಮತ್ತು ಯೆಹೂದ್ಯ ದ್ವೇಷಗಳನ್ನು ಖಂಡಿಸಿದಳು. ಸ್ತ್ರೀ ವಿದ್ಯಾಭ್ಯಾಸ ಮತ್ತು ಯೆಹೂದ್ಯರಿಗೆ ನ್ಯಾಯ ಇವುಗಳನ್ನು ಸಮರ್ಥಿಸಿದಳು. ರೈತರ ಮತ್ತು ಶ್ರೀಮಂತವರ್ಗದ ಜೀವನಗಳನ್ನು ಚಿತ್ರಿಸಿ, ಶ್ರೀಮಂತರು ರೈತರನ್ನು ಕೀಳಾಗಿ ಕಾಣುವ ಬಗೆಯನ್ನೂ ರೈತರ ಅಜ್ಞಾನದಿಂದ ಆಗುವ ಅನಾಹುತಗಳನ್ನೂ ನಿರೂಪಿಸಿದಳು. ಲೋಕಾಯುತವಾದವನ್ನು ಖಂಡಿಸಿದಳು. ಪ್ರಗತಿಶೀಲ ಯೆಹೂದ್ಯರು ನ್ಯಾಯ ದೊರಕಿಸಿಕೊಳ್ಳಲು ನಡೆಸಿದ ಹೋರಾಟವನ್ನು ಚಿತ್ರಿಸಿದಳು. ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಲಿಥುಯೇನಿಯನ್ ಪೋಲಿಷರ ಜೀವನವನ್ನು ಚಿತ್ರಿಸುವ ನೀಮೆನ್ನ ದಡದ ಮೇಲೆ ಎಂಬ ಕಾದಂಬರಿ ಈಕೆಯ ಮಹಾಕೃತಿ. ಸಮರ್ಥವೂ ವಿಶಿಷ್ಟವೂ ಆದ ಶೈಲಿ, ಅನ್ಯಾಯಕ್ಕೊಳ್ಳಗಾದವರ ಬಗೆಗೆ ನೈಜವಾದ ಮರುಕ ಇವು ಇವಳ ಕಾದಂಬರಿಗಳಿಗೆ ಸತ್ತ್ವ ನೀಡಿವೆ. ಸ್ಟೀಫನ್ ಪೆರೊಮ್ಸ್ಕಿ ಮೊದಲಾದ ಬರೆಹಗಾರರು ಇವಳ ಪ್ರಭಾವಕ್ಕೆ ಒಳಗಾದರು.