ಅವಂತೀಪುರ
ಗೋಚರ
ಕಾಶ್ಮೀರದಲ್ಲಿ ಶ್ರೀನಗರದಿಂದ ಸು. 24ಕಿಮೀ ಆಗ್ನೇಯಕ್ಕೆ ಝೀಲಮ್ ನದಿಯ ಬಲದಂಡೆಯ ಮೇಲೆ ಇರುವ ಈ ಊರು ಕಾಶ್ಮೀರದ ಉತ್ಪಾಲ ವಂಶದ ಅವಂತಿವರ್ಮನಿಂದ (856-83) ಸ್ಥಾಪಿತವಾಯಿತು. ಈಗ ಇದರ ಹೆಸರು ವಂತೀಪೋರ್. ಇಲ್ಲಿ ಅವಂತೀಸ್ವಾಮಿ ಮತ್ತು ಅವಂತೀಶ್ವರ ದೇವಾಲಯಗಳಿವೆ. ಇವು ಬಹಳ ಶಿಥಿಲವಾಗಿದ್ದರೂ ಕಾಶ್ಮೀರದ ಉತ್ಪಾಲ ವಾಸ್ತುಶಿಲ್ಪಸಂಪ್ರದಾಯದ ಉತ್ತಮ ಉದಾಹರಣೆಗಳಾಗಿವೆ. ಅವಂತೀಸ್ವಾಮಿ ಗುಡಿ ವಿಷ್ಣುದೇವಾಲಯ. ಚತುರಸ್ರಾಕಾರದ ದೊಡ್ಡ ಪ್ರಾಕಾರದ ಮಧ್ಯೆ ಎತ್ತರದ ಜಗಲಿಯ ಮೇಲೆ ಮುಖ್ಯ ಗರ್ಭಗೃಹವೂ ಅದರ ನಾಲ್ಕು ಮೂಲೆಗಳಲ್ಲಿ ಸಣ್ಣ ಸಣ್ಣ ಉಪದೇವತೆಗಳ ಗುಡಿಗಳೂ ಇದ್ದು, ಇದು ಪಂಚಾಯತನ ರೀತಿಯ ಕಟ್ಟಡವಾಗಿದೆ. ಪ್ರಾಕಾರದ ಪಶ್ಚಿಮ ದಿಕ್ಕಿನಲ್ಲಿ ಮಹಾದ್ವಾರವಿದೆ. ದೇವಾಲಯದ ಗೋಡೆಗಳ ಮೇಲೆ ಸುಂದರ ಶಿಲ್ಪಗಳಿವೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: