ಅಕ್ಕಾಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ಕಾಡ್[ಬದಲಾಯಿಸಿ]

ಮೆಸಪೊಟೇಮಿಯಬ್ಯಾಬಿಲೋನಿಯ ಪ್ರದೇಶದ ಉತ್ತರ ಭಾಗ. ಈ ಹೆಸರು ಮೊದಲನೆಯ ಸಾರಗಾನ್ ರಾಜ ಸ್ಥಾಪಿಸಿದ ಪಟ್ಟಣದ ಹೆಸರಿನಿಂದ ಬಂದಿದೆ. ಶರ್ರುಂಕಿನ್ ಅಥವಾ ಸಾರಗಾನನೇ ಮೊಟ್ಟಮೊದಲನೆಯ ಸೆಮಿಟಿಕ್ ವರ್ಗದ ಬ್ಯಾಬಿಲೋನಿಯದ ರಾಜ. ಇಷ್ಟಾರ್ ದೇವತೆಯ ವರಪ್ರಸಾದದಿಂದ ಇವನು ಅತ್ಯಂತ ಪ್ರಭಾವಯತ ದೊರೆಯಾದನೆಂದು ಸಾಹಿತ್ಯಗ್ರಂಥಗಳಿಂದ ತಿಳಿಯುತ್ತದೆ. ಸಾರಗಾನನು ಕಿಷ್ ಎಂಬಲ್ಲಿ ಆಳುತ್ತಿದ್ದ ಉರ್ಜಬಾಬ ಎಂಬುವನನ್ನು ಸೋಲಿಸಿ ಅಕ್ಕಾಡ್ನ ರಾಜಮನೆತನವನ್ನು ಸ್ಥಾಪಿಸಿದ. ಇವನ ರಾಜ್ಯ ಮೆಡಿಟರೇನಿಯನ್ ಸಮುದ್ರದಿಂದ ಪರ್ಷಿಯನ್ ಕೊಲ್ಲಿಯವರೆಗೂ ಹರಡಿದ್ದಿತು. ಆಗೇಡ್ ಅಥವಾ ಅಕ್ಕಾಡ್ ಎಂಬ ವೈಭವಯತವಾದ ರಾಜಧಾನಿಯನ್ನು ಸ್ಥಾಪಿಸಿದ ಕೀರ್ತಿಯೂ ಇವನಿಗೆ ಸಲ್ಲುತ್ತದೆ. ಇವನಿಗೆ ಸೆಮಿಟಿಕ್ ಭಾಷೆಯಲ್ಲಿ ಬಹುಪಾಂಡಿತ್ಯವಿದ್ದಿತು. ಸಾರಗಾನನು 56 ವರ್ಷಗಳ ಕಾಲ (ಪ್ರ.ಶ.ಪು. 2356-2300) ರಾಜ್ಯಭಾರ ಮಾಡಿದ. ಇವನ ಮರಣಾನಂತರ ಇವನ ಮಕ್ಕಳಾದ ರಿಮಸ್ ಮತ್ತು ಮನಿಷ್ಟುಷು ರಾಜ್ಯವಾಳಿದರು. ಇವರ ಅನಂತರ ಸಾರಗಾನನ ಮೊಮ್ಮಗನಾದ ನರಮುಸಿನ್ ಎಂಬುವನು ದೊರೆಯಾದ. ಇವನೂ ತನ್ನ ತಾತನಂತೆಯೇ ಪ್ರಭಾವಯತನಾದ ದೊರೆಯಾಗಿದ್ದ. ಇವನ ರಾಜ್ಯಭಾರದ ಅಂತ್ಯಕಾಲದಲ್ಲಿ ಗುಟಿ ಎಂಬಲ್ಲಿಂದ ಬಂದ ಜನಗಳು ಅಕ್ಕಾಡ್ ರಾಜ್ಯದ ಮೇಲೆ ಯುದ್ಧವನ್ನು ಮಾಡಿ ಅಕ್ಕಾಡ್ ನಗರವನ್ನು ನಾಶಮಾಡಿ, ಅಕ್ಕಾಡ್ ರಾಜಮನೆತನದ ಪತನಕ್ಕೆ ಕಾರಣರಾದರು. ಅಕ್ಕಾಡ್ ರಾಜಮನೆತನದವರ ಕಾಲದಲ್ಲಿ ಅಕ್ಕೇಡಿಯನ್ ಭಾಷೆ ಮತ್ತು ಲಿಪಿ ಅಭಿವೃದ್ಧಿಯಾಯಿತು. ವಾಸ್ತುಶಿಲ್ಪವೂ ಉತ್ತಮ ಸ್ಥಿತಿಯನ್ನು ಪಡೆದಿತ್ತು. ಸಾರಗಾನನ ಕಾಲದಲ್ಲಿ ವ್ಯಾಪಾರವು ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಪರ್ಷಿಯ ದೇಶದಿಂದ ವ್ಯಾಪಾರಕ್ಕಾಗಿ ಹಡಗುಗಳು ಇಲ್ಲಿಗೆ ಬರುತ್ತಿದ್ದವು. ಭಾರತದ ಸಿಂಧೂ ನಾಗರಿಕತೆಯ ಅವಶೇಷಗಳಾದ ಮಣ್ಣಿನ ಮುದ್ರೆಗಳು ಅಕ್ಕಾಡಿನಲ್ಲಿ ದೊರಕಿರುವುದು ಗಮನಾರ್ಹ. ಇದರಿಂದ ಭಾರತಕ್ಕೂ ಮತ್ತು ಅಕ್ಕಾಡ್ ರಾಜ್ಯಕ್ಕೂ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳಿದ್ದವೆಂದು ತಿಳಿಯುತ್ತದೆ.

"https://kn.wikipedia.org/w/index.php?title=ಅಕ್ಕಾಡ್&oldid=713787" ಇಂದ ಪಡೆಯಲ್ಪಟ್ಟಿದೆ