ಅಂತರ್ವ್ಯಾಪ್ತಿ
ಅಂತರ್ವ್ಯಾಪ್ತಿ
[ಬದಲಾಯಿಸಿ]ತತ್ತ್ವಶಾಸ್ತ್ರದಲ್ಲಿ ಅಂತರ್ವ್ಯಾಪ್ತಿ ಪ್ರಶ್ನೆ ಅತಿ ಪ್ರಧಾನವಾದುದು. ತತ್ತ್ವಜ್ಞರು ಜಗತ್ತಿನ ಸತ್ಯತೆ ಮಿಥ್ಯತೆಗಳನ್ನು ವಿಮರ್ಶಿಸುವಾಗ ಜಗತ್ತಿನಲ್ಲಿರುವ ಸತ್ಯವಾವುದು, ಅದರ ಸ್ವರೂಪವೇನು. ಸತ್ಯ ವಿಶ್ವೈಕ್ಯವಾದುದೇ ಅಥವಾ ವಿಶ್ವಾತೀತವಾದುದೇ. ಎಂದು ವಿಚಾರ ಮಾಡಬೇಕಾಗುತ್ತದೆ. ಪರಬ್ರಹ್ಮ ವಸ್ತು ಜಗತ್ತಿನಲ್ಲಿ ಅಂತರ್ವ್ಯಾಪ್ತಾವಾದುದು ಎಂದೂ ಚೇತನಾಚೇತನಗಳಲ್ಲಿ ಅದೇ ಅಂತರ್ಗತವಾಗಿದೆ ಎಂದೂ ವಿಶ್ವೈಕ್ಯವಾದುವು ಹೇಳುತ್ತದೆ. ಪ್ರಕೃತಿಯೇ ಪರಬ್ರಹ್ಮನೆಂದು ವಾದಿಸುವವರೂ ಹೀಗೆ ಹೇಳುತ್ತಾರೆ. (ಪ್ಯಾನ್ಥೀಇಸ್ಟ್ಸ್). ಆದರೆ ಅಂತರ್ವ್ಯಾಪ್ತಿಗೆ ಮತ್ತೊಂದು ಅರ್ಥವೂ ಉಂಟು. ಜಗತ್ತಿನ ಚೇತನಗಳಲ್ಲಿ ಜೀವರುಗಳಲ್ಲಿ ಅಂತರ್ವ್ಯಾಪ್ತನಾದ ಪರಬ್ರಹ್ಮನ ಸ್ವರೂಪವನ್ನು ಈಶ್ವರವಾದಿಗಳು ಮುಂದೆ ಹೇಳುವ ರೀತಿಯಲ್ಲಿ ಪ್ರತಿಪಾದಿಸುತ್ತಾರೆ. ಅವನು ಅಸಂಖ್ಯಾತ ಜೀವರುಗಳನ್ನು ಸೃಷ್ಟಿಸಿ ಅವರಲ್ಲಿ ಪ್ರವೇಶಿಸುತ್ತಾನೆ. ಜಗತ್ತಿನ ಸರ್ವ ವ್ಯಾಪಾರವನ್ನೂ ಸೃಷ್ಟಿಸ್ಥಿತಿ ಲಯಗಳನ್ನೂ ನಡೆಸುವ ಯಂತ್ರವಾಹಕನಾಗಿರುತ್ತಾನೆ. ಪರಬ್ರಹ್ಮ ವಸ್ತುವೊಂದೇ ಸತ್ಯ ಮತ್ತು ನಿತ್ಯ. ಮತ್ತೆಲ್ಲವೂ ಅಸತ್ಯ, ಅನಿತ್ಯ. ಅವನು ಪ್ರಪಂಚದಲ್ಲಿದ್ದು ಸಪ್ರಪಂಚನಾಗಿದ್ದರೂ ಅವನೇ ಅದಕ್ಕೆ ಉಪಾದಾನ ಮತ್ತು ನಿಮಿತ್ತಕಾರಣನಾಗಿರುವುದರಿಂದ ಅವನು ವಿಶ್ವಾತೀತನೂ ಆಗಿರುತ್ತಾನೆ. ಪ್ರಪಂಚಕ್ಕೆ ಅಧೀನನಲ್ಲ. ಅಂತರ್ವ್ಯಾಪ್ತನಾಗಿದ್ದರೂ ಪ್ರಪಂಚವನ್ನು ಮೀರಿ ಸರ್ವಸ್ವತಂತ್ರನಾಗಿರುತ್ತಾನೆ. ಪ್ರಕೃತಿಯಲ್ಲಿ ಮತ್ತು ಜೀವರುಗಳಲ್ಲಿ ಒಂದೇ ರೀತಿಯಾಗಿ ಅಂತರ್ವ್ಯಾಪ್ತನಲ್ಲ. ಪ್ರಕೃತಿ ಜೀವರುಗಳಿಗೆ ಸಾಧನಸಾಮಗ್ರಿ. ಅವರು ಪ್ರಕೃತಿಗಿಂತ ಹೆಚ್ಚು ಸ್ವತಂತ್ರರು. ಅವರಿಗೆ ಕರ್ಮ ಮಾಡುವ ಸ್ವಾತಂತ್ರ್ಯವಿದೆ. ಅಂತರ್ವ್ಯಾಪ್ತನಾದ ಪರಮಾತ್ಮ ಕರ್ಮದ ಫಲವನ್ನು ನಿಯಾಮಕ ಮಾಡುವವ; ಕರ್ಮದಿಂದ ನಿರ್ಲಿಪ್ತನಾದರೂ ಅಸಂಗ, ಸರ್ವಸಾಕ್ಷಿ ಮತ್ತು ಸರ್ವಜ್ಞ. ಅಂತರ್ವ್ಯಾಪ್ತನಾದ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ಜೀವಾತ್ಮರುಗಳ ಸಾಧನೆಯ ಗುರಿ.
ನಿಷ್ಪ್ರಪಂಚವಾದಿಗಳ ಪ್ರಕಾರ ಜಗತ್ತು ಮಿಥ್ಯ ಮತ್ತು ಮಾಯೆಯಿಂದ ಆವೃತವಾದುದು. ಅದನ್ನು ವ್ಯಾವಹಾರಿಕ ಸತ್ಯವೆನ್ನಬಹುದು. ಜ್ಞಾನದಿಂದ ಮಾಯೆಯ ನಾಶವಾದಾಗ ಜೀವಾತ್ಮ ಪರಮಾತ್ಮರು ಬೇರೆಬೇರೆಯಲ್ಲವೆಂದು ಅರಿವು ಉಂಟಾಗುವುದೇ ಸಾಕ್ಷಾತ್ಕಾರ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |