ವಿಷಯಕ್ಕೆ ಹೋಗು

ಅಂತರ್ಬೋಧೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A phrenological mapping[] of the brainphrenology was among the first attempts to correlate mental functions with specific parts of the brain

ಅಂತರ್ಬೋಧೆ ಸಂವೇದನೆ ಅನುಮಾನ ಮತ್ತು ಆಲೋಚನೆಯ ಹಂಗಿಲ್ಲದೆ, ಯಾವುದಾದರೂ ವಿಷಯವಾಗಿ ಮನಸ್ಸಿಗೆ ನೇರವಾಗಿ ಗೋಚರಿಸುವ ಅರಿವು (ಇಂಟ್ಯೂಷನ್). ಅಂದರೆ ಒಂದು ವಿಷಯ ಅಥವಾ ವಸ್ತುವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ, ಸಾಮಾನ್ಯವಾಗಿ ಇರಬೇಕಾದ, ರಚನಾಂಶವಿಶ್ಲೇಷಣೆ, ತರ್ಕ ಈ ಮುಂತಾದ ಮೆಟ್ಟಿಲುಗಳು ಇರುವುದಿಲ್ಲವೆಂದರ್ಥ. ಅಂತರ್ಬೋಧೆ ಇದ್ದಕ್ಕಿದ್ದಂತೆಯೇ ಮನಸ್ಸಿಗೆ ಹೊಳೆಯುವ ಒಂದು ಅರಿವು ಅಥವಾ ನಿರ್ಣಯ. ಸಾಮಾನ್ಯವಾಗಿ ಅದು ಭಾವನಾಪುರಿತವಾಗಿರುತ್ತದೆಯಲ್ಲದೆ ಆ ಅನುಭವಕ್ಕೆ ಪೂರ್ವಭಾವಿಯಾಗಿ ಯಾವ ವಿಧವಾದ ಪ್ರಜ್ಞಾತ್ಮಕ ಹಂತಗಳೂ ಇರುವುದಿಲ್ಲ. ಅಂತರ್ಬೋಧೆ ಈ ವಿಶ್ವದ ಎಲ್ಲ ಮಹತ್ವಪುರ್ಣ ಜ್ಞಾನದ ಮೂಲವಾಗಿದೆ, ಅಲ್ಲದೆ ವಾಸ್ತವಿಕತೆಯೊಡನೆ ಅದಕ್ಕೆ ಅಂತರಂಗದ ಅನ್ಯೋನ್ಯತೆ ಇದೆ _ ಎಂದು ಫ್ರೆಂಚ್ ತತ್ತ್ವಜ್ಞಾನಿಯಾದ ಹೆನ್ರಿ ಬರ್್ಗಸನ್ ಹೇಳಿದ್ದಾನೆ. ಕ್ಯಾಂಟನ ಪ್ರಕಾರ ಕಾಲ ಮತ್ತು ದೇಶಗಳು ನಮ್ಮ ಅಂತರ್ಬೋಧೆಯ ಸ್ವಚ್ಛ ರೂಪಗಳು. ಕಾಲದೇಶಗಳಿಗೆ ಸಂಬಂಧಪಟ್ಟ ನಮ್ಮ ಜ್ಞಾನ ಎಲ್ಲ ವಿಧವಾದ ಪುರ್ವಾನುಭವದಿಂದಲೂ ಮುಕ್ತವಾದುದು. ಅತೀಂದ್ರಿಯ ದರ್ಶನ, ಧಾರ್ಮಿಕ ಪ್ರಬೋಧನೆ, ನೈತಿಕಪ್ರಜ್ಞೆ, ಅಂತರಂಗ ಭಾವನೆಗಳ ಮತ್ತು ವರ್ತನೆಗಳ ಅರಿವು ಮತ್ತು ಇತರರ ಚಿಂತನೆ, ಭಾವನೆ ಹಾಗೂ ಆಶಯಗಳ ಸೂಕ್ಷ್ಮಪ್ರಜ್ಞೆ, ಇವೆಲ್ಲವುಗಳಿಗೂ ಅಂತರ್ಬೋಧೆ ಅನ್ವಯಿಸುತ್ತದೆ.

ತತ್ವಶಾಸ್ತ್ರದಲ್ಲಿ

[ಬದಲಾಯಿಸಿ]

ವಿಶ್ವದಲ್ಲಿ ಸರ್ವವ್ಯಾಪ್ತವಾಗಿರುವ ಹಲವು ತತ್ತ್ವಗಳ ಅರಿವಿನಲ್ಲಿ ಮಾತ್ರವಲ್ಲದೆ, ಸರ್ವ ಸಾಮಾನ್ಯವಾಗಿ ಕಂಡುಬರುವ ಕೆಲವು ಅಮೂರ್ತ ಸತ್ಯಗಳ ಪ್ರಕಾಶನದಲ್ಲೂ ಅಂತರ್ಬೋಧೆ ತನ್ನ ವಿಶಿಷ್ಟವಾದ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದು ತತ್ತ್ವಜ್ಞಾನಿಗಳ, ತಾರ್ಕಿಕರ ಮತ್ತು ವಿಜ್ಞಾನಿಗಳ ಅಭಿಮತ. ಕೆಲವು ವೇಳೆ, ಮನಸ್ಸಿಗೆ ಸ್ಪಷ್ಟವಾಗಿ ಗೋಚರಿಸಿದ ಸ್ವಯಂವೇದ್ಯ ತತ್ತ್ವಕ್ಕೂ ಒಂದು ಪ್ರಮಾಣವನ್ನು ಪುಷ್ಟೀಕರಿಸುವ ಎಣಿಕೆ ಮತ್ತು ಒಳನೋಟಗಳ ಆಧಾರದಿಂದ ಒಪ್ಪಿಕೊಂಡ ಮುಂಚಿನ ನಿರ್ಣಯಕ್ಕೂ ಅಂತರ್ಬೋಧೆ ಸಂಬಂಧವನ್ನು ಕಲ್ಪಿಸುತ್ತದೆ. ವೈಜ್ಞಾನಿಕ ಮತ್ತು ತಾರ್ಕಿಕ ಬರೆವಣಿಗೆಗಳಲ್ಲಿ ಹಾಗೂ ಸಾಮಾನ್ಯ ಮಾತುಕತೆಗಳಲ್ಲಿ, ಈ ರೀತಿಯ ಉಪಯೋಗ ಕಂಡುಬರುತ್ತದೆ. ತತ್ತ್ವಶಾಸ್ತ್ರದಲ್ಲಿ ಅಂತರ್ಬೋಧೆ, ಪ್ರಜ್ಞಾಪೂರ್ವಕವಾದ ಆಲೋಚನೆಯಿಂದ ತಿಳಿದುಕೊಳ್ಳಲಾಗದ ಸತ್ಯದ ಸ್ವಯಂ ಪ್ರಕಾಶನ ಅಥವಾ ಅರಿವು. ನೈತಿಕ ಮತ್ತು ಧಾರ್ಮಿಕ ಜ್ಞಾನದಲ್ಲಿ, ಅದು ಸತ್ಯದ ತತ್ಕ್ಷಣದ ಪ್ರಕಾಶನ. ಮನೋವಿಜ್ಞಾನದಲ್ಲಾದರೆ ಅಂತರ್ಬೋಧೆ, ದತ್ತಾಂಶಗಳ ಒಂದು ಮೊತ್ತದಲ್ಲಿ ಅಂತರ್ಗತವಾಗಿರುವ ವಿಶಿಷ್ಟ ಅಂಶವನ್ನು ತತ್ಕ್ಷಣ ಅರಿಯುವುದು. ಕೆಲವು ಸಲ, ಅಂತರ್ಬೋಧೆಯನ್ನು ಒಳನೋಟದೊಂದಿಗೆ ಬೆರೆಸುವುದುಂಟು. ಆದರೆ, ಗುರುತಿಸಲು ಸಾಧ್ಯವಾಗುವಂಥ, ಯಾವ ವಿಧವಾದ ಪೂರ್ವಜ್ಞಾನ ಅಥವಾ ಸಂವೇದನಾಜ್ಞಾನಗಳ ಹಂಗಿಲ್ಲದೆ ಅದು ಉಂಟಾಗುವುದರಿಂದ, ಒಳನೋಟದಿಂದ ಅದು ಭಿನ್ನವಾದುದು ಎಂದು ಹೇಳಬಹುದು.

ಮನೋವಿಜ್ಞಾನದಲ್ಲಿ

[ಬದಲಾಯಿಸಿ]

ಆದರೆ ಅಂತರ್ಬೋಧೆಯಿಂದ ಉಂಟಾದ ಜ್ಞಾನ ಸಹಜ ಪ್ರೇರಣಾತ್ಮಕವಾದುದು ಎಂಬ ಅಭಿಪ್ರಾಯದಿಂದ ನಾವು ಅನೇಕ ಅನುಭವಗಳನ್ನು, ಯಾವ ಪ್ರಮಾಣದ ಆಧಾರವೂ ಇಲ್ಲದೆ ಮತ್ತು ಸೂಕ್ತ ಪರಿಶೀಲನೆ ನಡೆಸದೆ ಸ್ವೀಕರಿಸುವುದುಂಟು. ನಮ್ಮ ಪ್ರಜ್ಞಾಕೇಂದ್ರದಲ್ಲಿರದೆ, ಅದರ ಅಸ್ಪಷ್ಟ ಅಂಚಿನಲ್ಲಿರಬಹುದಾದ ಕೆಲವು ಸಂಕೇತಗಳ ಅಥವಾ ಪ್ರಚೋದಕಗಳ ನೆರವಿನಿಂದ ನಮಗೆ ಕೆಲವು ಅನುಭವಗಳು ವೇದ್ಯವಾಗಬಹುದು. ಅಂಥ ಅನುಭವಗಳು ಅಂತರ್ಬೋಧೆ ಜನ್ಯವಾದುವುಗಳೆಂದು ತಪ್ಪು ತಿಳಿಯುವ ಸಾಧ್ಯತೆ ಹೆಚ್ಚು ಎಂಬುದು ಕೆಲವು ಮನೋವಿಜ್ಞಾನಿಗಳ ಅಭಿಮತ. ಅಂತೆಯೇ ಪ್ರೇರಣೆಗಳು, ಆಲೋಚನೆಗಳು ಅಥವಾ ಮತ್ತೊಬ್ಬರು ವರ್ತಿಸಬಹುದಾದ ರೀತಿ ಮುಂತಾದುವುಗಳಿಗೆ ಸಂಬಂಧಪಟ್ಟಂತೆ ಮಾಡಲಾಗುವ ವಿವೇಕಪುರ್ಣ ಊಹೆಗಳು ಅಥವಾ ಎಣಿಕೆಗಳು ಕೂಡ ವ್ಯಕ್ತಿಯ ವಾಕ್ಸರಣಿ ಅಥವಾ ಹಾವಭಾವಗಳಲ್ಲಿ ಅಡಕವಾಗಿರಬಹುದಾದ ಸೂಕ್ಷ್ಮ ಸುಳಿವುಗಳ ನೆರವನ್ನು ಪಡೆಯಬಹುದು. ಅಂಥ ಸಂಕೇತಗಳಿಗೆ ವ್ಯಕ್ತವಾಗುವ ಪ್ರತಿಕ್ರಿಯೆಗಳು, ಹಲವು ವೇಳೆ ಅನುಬೋಧಾತ್ಮಕವಾದುವುಗಳು ಎನ್ನುವ ಭ್ರಾಂತಿಯನ್ನು ಉಂಟುಮಾಡುವಷ್ಟು ಯಾಂತ್ರಿಕವಾಗಿಬಿಡುತ್ತವೆ. ಸಂವೇದನೆ, ಭಾವನೆ ಮತ್ತು ಸಂವೇಗಗಳನ್ನು ಒಳಗೊಂಡ ಇತರ ನಿರ್ಣಯಗಳಂತೆಯೇ ಸೌಂದರ್ಯಾತ್ಮಕ ಮೌಲ್ಯಗಳಿಗೆ ಸಂಬಂಧಪಟ್ಟ ಜ್ಞಾನ, ಅನೇಕ ವೇಳೆ, ಅಂತರ್ಬೋಧಾತ್ಮಕವಾಗಿರುತ್ತದೆ. ಸೌಂದರ್ಯ ಮೀಮಾಂಸೆಯಲ್ಲಿ ಅಂತರ್ಬೋಧೆಯನ್ನು ಪ್ರತಿಭೆ ಎಂದು ಕರೆಯುತ್ತಾರೆ. ಸ್ವಯಂವೇದ್ಯ ಅಥವಾ ಅಚಿಂತ್ಯ ಜ್ಞಾನವೆಂಬ ಅರ್ಥ ಕೊಡುವುದಾದರೆ, ಅಂತರ್ಬೋಧೆ ಜ್ಞಾನದ ಎಲ್ಲ ಪ್ರಕ್ರಿಯೆಗಳಿಗೂ ಅನ್ವಯಿಸುತ್ತದೆ ಎಂಬುದು ಕಾರ್್ಲ ಸ್ಟಿಯರ್ಮನ್ನನ ಅಭಿಪ್ರಾಯ. ಜಿ.ಡಬ್ಲ್ಯೂ. ಆಲ್ಪೋರ್ಟನ ಪ್ರಕಾರ, ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ತರ್ಕ ಮತ್ತು ಅಂತರ್ಬೋಧೆ ಇವೆರಡರ ನೆರವೂ ಆವಶ್ಯಕ. ವ್ಯಕ್ತಿತ್ವ ರಚನೆಯಲ್ಲಿರುವ ಸಮಷ್ಟಿ ವ್ಯವಸ್ಥೆಯನ್ನು ತಿಳಿಯಲು, ಅಂತರ್ಬೋಧೆ ನೆರವಾಗುತ್ತದೆ. ಇವೆರಡನ್ನೂ ಅರ್ಥ ಮಾಡಿಕೊಳ್ಳುವ ನಮ್ಮ ಪ್ರಯತ್ನದಲ್ಲಿ ಅಂತರ್ಬೋಧೆ ಅಡಕವಾಗಿರುತ್ತದೆ. ನಮ್ಮ ಮೊದಲ ನೋಟದಲ್ಲಿಯೇ ಸ್ಥೂಲವಾಗಿಯಾದರೂ ಪೂರ್ಣ ವ್ಯಕ್ತಿಯನ್ನು ಕಾಣುತ್ತೇವೆ. ಇದು ಮುಂದಿನ ಸೂಕ್ಷ್ಮ ತಿಳಿವಿಗೆ ಅಡಿಪಾಯವಾಗುತ್ತದೆ. ಉದಾಹರಣೆಗೆ: ಒಬ್ಬ ಮನೋವೈದ್ಯ, ಒಬ್ಬ ಉಪಬೋಧಕ ಅಥವಾ ಒಬ್ಬ ಸಂದರ್ಶಕ, ಅವನು ವ್ಯವಹರಿಸುತ್ತಿರುವ ವ್ಯಕ್ತಿಯ ವರ್ತನೆಯನ್ನು ಅಸ್ಪಷ್ಟವಾದರೂ ಸಮಗ್ರವಾಗಿ ಗ್ರಹಿಸುವವರೆಗೆ, ಪ್ರಶ್ನೆಗಳನ್ನು ಹೇಗೆ ರೂಪಿಸಬೇಕು ಮತ್ತು ತನ್ನ ಶೋಧನೆಯನ್ನು ಹೇಗೆ ನಡೆಸಬೇಕು ಎಂಬುದರಲ್ಲಿ, ಆತನಿಗೆ ಯಾವ ಕಲ್ಪನೆಯೂ ಇರುವುದಿಲ್ಲ. ಆದುದರಿಂದ, ಯಾವುದಾದರೂ ಸಂಶೋಧನೆಯ ಆರಂಭದಲ್ಲಿ, ಅಂತರ್ಬೋಧೆಯ ಆವಶ್ಯಕತೆ ಇರುತ್ತದಲ್ಲದೆ, ಅದರ ಮುಂದಿನ ಹಂತಗಳಲ್ಲಿಯೂ ಅದರ ಪಾತ್ರ ಇದ್ದೇ ಇರುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Oliver Elbs, Neuro-Esthetics: Mapological foundations and applications (Map 2003), (Munich 2005)