ಅರೈಆನ್
ಅರೈಆನ್ : ಅರ್ಧಚಾರಿತ್ರಿಕ ಅರ್ಧಪೌರಾಣಿಕ ಪುರುಷ. ಲೆಸ್ಬಸ್ ದ್ವೀಪದ ಮೆತಿಮ್ನಾದಲ್ಲಿ ಜನಿಸಿದನೆಂದು ಪುರಾಣಕಥೆ. ಪ್ರ ಶ.ಪೂ. 7ನೆಯ ಶತಮಾನದ ಉತ್ತರಾರ್ಧ ದಲ್ಲಿದ್ದ ಆಲ್ಕ್‍ಮಾನ್ ಎಂಬ ಭಾವಗೀತೆಗಳನ್ನು ರಚಿಸಿದ ಕವಿಯ ಶಿಷ್ಯನಾಗಿದ್ದನಂತೆ. ಅರೈಆನನ ಜೀವಿತದ ಬಹುಭಾಗ ಕಾರಿನ್ತಿನ ಸರ್ವಾಧೀಶ ಪೆರಿಆಂಡರ್‍ನ (ಪ್ರ.ಶ.ಪೂ. 625-585) ಆಶ್ರಯದಲ್ಲಿ ಕಳೆಯಿತೆಂದು ಊಹೆ. ಆತನ ಆಸ್ಥಾನದಲ್ಲೂ ತಾನು ಪ್ರವಾಸಗೊಂಡ ಇಟಲಿ, ಸಿಸಿಲಿ ಇತ್ಯಾದಿ ಪ್ರದೇಶಗಳಲ್ಲೂ ಪುಷ್ಕಳ ಬಹುಮಾನವನ್ನು ಪಡೆದು ಅರೈಆನ್ ವಿಶೇಷ ಧನಿಕನಾದ. ಇವನ ಹಾಡುಗಾರಿಕೆಯ ವಿಷಯವಾಗಿ ಸೊಗಸಾದ ದಂತಕಥೆ ಇದೆ. ಒಮ್ಮೆ ತಾನು ಗಳಿಸಿದ್ದ ಹೇರಳ ದ್ರವ್ಯದೊಂದಿಗೆ ಟಾರೆಂಟಮ್ಮಿನಿಂದ ಕಾರಿನ್ತಿಗೆ ಯಾನ ಹೂಡಿದ್ದ ನೌಕೆಯಲ್ಲಿ ಪ್ರಯಾಣ ಮಾಡುವಾಗ ಇವನ ವಿತ್ತ ರಾಶಿವನ್ನು ಅಪಹರಿಸುವ ದುರಾಶೆ ನಾವಿಕರಲ್ಲಿ ತೀವ್ರವಾಯಿತು. ಅವರು ಇವನಿಗೆ, ಹೇಗಾದರೂ ನೀನು ಸಾಯಲೇ ಬೇಕು. ಕಠಾರಿಯಿಂದ ಇರಿದುಕೊ ಅಥವಾ ಸಮುದ್ರಕ್ಕೆ ಬೀಳು ಎಂದರಂತೆ. ಸಾಯುವ ಮುನ್ನ ಚರಮಗೀತೆಯೊಂದನ್ನು ಹಾಡಲು ಅನುಮತಿಬೇಡಿ, ಬೆಲೆಯುಳ್ಳ ಅಂಗಿ ವಸ್ತ್ರಗಳನ್ನು ಧರಿಸಿ, ಲೈರ್ ವಾದ್ಯವನ್ನು ಬಾರಿಸುತ್ತ , ಕವಿ ದನಿ ಎತ್ತಿದ. ಇವನ ದಿವ್ಯಗಾಯನವನ್ನು ಆಲಿಸಿದ ಹಂದಿ ಮೀನುಗಳು(ಡಾಲ್ಫಿನ್) ನೌಕೆಯ ಹಿಂದೆ ಹಿಂಡು ಹಿಂಡಾಗಿ ಸಾಗಿದುವು. ಹಾಡು ನಿಲ್ಲಿಸಿ ನೀರಿಗೆ ದುಮ್ಮಿಕ್ಕಿದ ಅರೈಆನ್‍ನನ್ನು ಮೀನುಗಳು ಹೆಗಲಲ್ಲಿ ಹೊತ್ತು ಟೆನಿರಸ್ ಬೆಟ್ಟಕ್ಕೆ ಕೊಂಡೊಯ್ದುವು. ಅಲ್ಲಿಂದ ಇವನು ಕಾರಿನ್ತಿಗೆ ಹೋಗಿ ದೊರೆಗೆ ದೂರಿತ್ತ. ನೌಕೆ ಕಾರಿನ್ತಿಗೆ ಬಂದ ಕೂಡಲೆ ನಾವಿಕರನ್ನು ಕರೆಸಿ, ಅರೈಆನ್ ಎಲ್ಲಿ? ಎಂದು ಕೇಳಿದ, ಪೆರಿಆಂಡರ್. ಟಾರೆಂಟಮ್ಮಿನಲ್ಲೇ ಅವನು ಉಳಿದುನಿಂತ ಎಂದರು, ನಾವಿಕರು. ತಾನು ಅಂದು ಉಟ್ಟಿದ್ದ ಉಡುಪಿನಲ್ಲೇ ಅರೈಆನ್ ಕಾಣಿಸಿಕೊಂಡದ್ದನ್ನು ನೋಡಿದ ಆ ಧೂರ್ತರು ಬೆªರಿಡುತ್ತ ತಮ್ಮ ಅಪರಾಧವನ್ನು ಒಪ್ಪಿಕೊಂಡು ದಂಡನೆಗೆ ಒಳಗಾದರು. ಅರೈಆನಿಗೆ ಡಿತಿರ್ಯಾಂಬ್ ಎಂಬ ನೃತ್ಯಗೀತದ ಜನಕನೆಂಬ ಕೀರ್ತಿಯಿದೆ. ಅದನ್ನು ಅವನೇ ಸೃಜಿಸಿ, ಹೆಸರಿಟ್ಟು ಹೇಳಿಕೊಟ್ಟನಂತೆ. ಪಾನದೇವತೆಯಾದ ಡಯೋನೀಸಸ್ಸನ ಆರಾಧನೆಯ ಮುಖ್ಯಾಂಗಗಳಲ್ಲಿ ಡಿತಿರ್ಯಾಂಬ್ ಒಂದು. ಮೋಜುಗಾರ ಕುಣಿಯುತ್ತ ಕೂಗುತ್ತಿದ್ದ ಅಸಂಬದ್ಧ ಪಲ್ಲವಿಗಳಿಂದ ಅದು ಬೆಳೆದುಬಂದಿರಬೇಕು. ಅದಕ್ಕೆ ಕ್ರಮವನ್ನೂ ಕಾವ್ಯರೂಪವನ್ನೂ ಹೊಂದಿಸಿಕೊಟ್ಟು, ಪ್ರಾಯಶಃ 50 ಮಂದಿ ನರ್ತಕರು ವರ್ತುಲಾಕಾರವಾಗಿ ನಿಂತು, ಅದನ್ನು ತಾಳಬದ್ಧವಾಗಿ ಹಾಡುವಂತೆ ಶಿಕ್ಷಣವಿತ್ತವ ಅರೈಆನ್. ಎರಡನೆಯದಾಗಿ, ಸಂಗೀತಕ್ಕೆ ಟ್ರ್ಯಾಜಿಕ್ ಧಾಟಿವನ್ನು ತಂದುಕೊಟ್ಟವನೂ ಇವನೇ. ಎಂದರೆ, ಗಂಭೀರನಾಟಕ ಬಳಸಿಕೊಂಡ ಸಂಗೀತವಿಧಾನವನ್ನು ಇವನೇ ನಿರ್ಮಾಣಗೈದ. ಇವನ ಕೃತಿ ಯಾವುದೂ ಉಳಿದುಬಂದಿಲ್ಲ.