ವಿಷಯಕ್ಕೆ ಹೋಗು

ಗುಡೇಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೂಡ್ಲಿಗಿ ತಾಲೂಕಿನಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿದ ಹಲವಾರು ಚಾರಿತ್ರಿಕ ಸ್ಥಳಗಳಿದ್ದು, ಅವುಗಳಲ್ಲಿ ಮಹತ್ವವಾದದ್ದು ಗುಡೇಕೋಟೆ ಪ್ರದೇಶ. ಗುಡೇಕೋಟೆ ತಾಲೂಕಿನ ಹೋಬಳಿ ಕೇಂದ್ರವಾಗಿದ್ದು, ತಾಲೂಕು ಕೇಂದ್ರದಿಂದ ೨೮ ಕಿ.ಮೀ ದೂರದಲ್ಲಿದೆ. ಇಲ್ಲಿನ ದಂತಕಥೆಯಂತೆ ಗುಡೇಕೋಟೆಯನ್ನು ಬಾಣಾಸುರನೆಂಬ ಅರಸ ಆಳುತ್ತಿದ್ದ. ಮಹಾನ್ ಶಿವಭಕ್ತನಾಗಿದ್ದ ಬಾಣಾಸುರನ ಕೋರಿಕೆಯಂತೆ ಶಿವಪಾರ್ವತಿಯರು ಗುಡೇಕೋಟೆಯನ್ನು ರಕ್ಷಿಸುವುದಾಗಿ ಅಭಯ ನೀಡಿದ್ದರಂತೆ. ಅದರಂತೆಯೇ ಇಂದಿಗೂ ಗುಡೇಕೋಟೆ ಗ್ರಾಮದ ಹೊರಭಾಗದಲ್ಲಿ ಶಿವಪಾರ್ವತಿಯರ ಸುಂದರ ದೇಗುಲವಿದೆ. ವಿಶೇಷವೆಂದರೆ ಶಿವನು ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡಿರುವ ಅಪರೂಪದ ವಿಗ್ರಹ ಇಲ್ಲಿದೆ. ಸಂಶೋಧಕರ ಅಭಿಮತದಂತೆ ಗುಡ್ಡದ ಮೇಲೆ ಕಟ್ಟಿರುವ ಕೋಟೆಯಿರುವ ಕಾರಣ ಇದನ್ನು ಗುಡ್ಡದಕೋಟೆ, ಗುಡ್ಡಕೋಟೆ, ಗುಡೇಕೋಟೆ ಎಂಬ ಹೆಸರು ಬರಲು ಕಾರಣವಿರಬಹುದು ಎನ್ನುತ್ತಾರೆ. ಗುಡೇಕೋಟೆಯನ್ನು ಆಳಿದ ಪಾಳೆಯಗಾರರಲ್ಲಿ ಪ್ರಮುಖರೆಂದರೆ ಗಂಡಳನಾಯಕ, ಬೊಮ್ಮಂತರಾಜ, ಚಿನ್ನಯರಾಜ, ಇಮ್ಮಡಿ ರಾಜಪ್ಪನಾಯಕ, ಜಟಿಂಗರಾಯ, ರಾಮಪ್ಪನಾಯಕ, ಇನ್ನಿತರರು. ಗುಡೇಕೋಟೆ ಪಾಳೆಯಗಾರರೊಂದಿಗೆ ಚಿತ್ರದುರ್ಗದ ಪಾಳೆಯಗಾರರು ಸಂಬಂಧ ಬೆಳೆಸಿದ್ದರು ಎಂದು ಸಂಶೋಧಕ ಡಾ.ವಿರುಪಾಕ್ಷಿ ಪೂಜಾರಹಳ್ಳಿಯವರಿಂದ ತಿಳಿದುಬರುತ್ತದೆ. ಮಹತ್ವದ ಅಂಶವೆಂದರೆ ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಒಬ್ಬಳಾಗಿರುವ ಚಿತ್ರದುರ್ಗದ ಒನಕೆ ಓಬವ್ವನ ತವರೂರು ಗುಡೇಕೋಟೆ. ಗುಡೇಕೋಟೆಯ ಛಲವಾದಿ ಚಿನ್ನಪ್ಪನ ಮಗಳು ಓಬವ್ವ ಎಂದು ಆಕರ ಗ್ರಂಥಗಳಿಂದ ತಿಳಿದುಬರುತ್ತದೆ. ಗುಡೇಕೋಟೆ ಸುತ್ತಲೂ ಬೆಟ್ಟಗಳಿಂದ ಆವರಿಸಿರುವ ಪ್ರದೇಶ. ಶತ್ರುಗಳಿಗೆ ಸುಲಭವಾಗಿ ನಿಲುಕಲಾಗದ ಬೃಹತ್ ಹೆಬ್ಬಂಡೆಗಳಿಂದ ಕೂಡಿರುವ ಬೆಟ್ಟದ ಮೇಲೆ ಸುಂದರವಾದ, ಅಭೇದ್ಯವಾದ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆ ಅಲ್ಲಲ್ಲಿ ಶಿಥಿಲವಾಗಿದ್ದು, ಗತವೈಭವವನ್ನು ಸಾರುತ್ತದೆ. ಗುಡೇಕೋಟೆಯಲ್ಲಿ ತಕ್ಷಣವೇ ಆಕರ್ಶಿಸುವುದು ಗ್ರಾಮದ ಪ್ರವೇಶದ್ವಾರದಲ್ಲಿಯೇ ಇರುವ ಉಪ್ಪರಿಗೆಯ ಸ್ಮಾರಕ. ವಾಸ್ತುಶಿಲ್ಪ ಶೈಲಿಯಿಂದ ತಕ್ಷಣ ಗಮನ ಸೆಳೆಯುತ್ತದೆ. ಇದನ್ನು ತಂಗಾಳಿ ಮಹಲ್ ಎಂದೂ ಕರೆಯುತ್ತಾರೆ. ಈಗಾಗಲೇ ಶಿಥಿಲಾವಸ್ಥೆಯಲ್ಲಿರುವ ಸುಂದರ ಉಪ್ಪರಿಗೆಯನ್ನು ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ರಕ್ಷಿಸಬೇಕಾಗಿದೆ. ಇದಲ್ಲದೆ ಇಲ್ಲಿ ಪಾಳೆಯಗಾರರ ಕಾಲಕ್ಕೆ ಸಂಬಂಧಿಸಿದ ಆಂಜನೇಯ ದೇವಾಲಯ, ಚೌಡಮ್ಮ ದೇವಾಲಯ, ಮಲಿಯಮ್ಮ ದೇವಾಲಯ, ರಾಮಲಿಂಗೇಶ್ವರ ದೇವಾಲಯ, ಬಸವಣ್ಣ ದೇವಾಲಯ, ಕಾಳಮ್ಮ ದೇವಾಲಯ, ಈಶ್ವರ ದೇವಾಲಯ, ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಚೌಳೇಶ್ವರ, ಪಂಚಲಿಂಗೇಶ್ವರ, ಶಿವ-ಪಾರ್ವತಿಯರ ದೇವಾಲಯ ಪ್ರಮುಖವಾದವು. ಎಲ್ಲ ದೇವಾಲಯಗಳೂ ವಿಜಯನಗರ ಪೂರ್ವ ಮತ್ತು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿರುವ ದೇವಾಲಯಗಳಾಗಿವೆ. ಗುಡೇಕೋಟೆಯಲ್ಲಿ ಸಂಚರಿಸುವಾಗ ಪಾಳೆಯಗಾರರ ಆಳ್ವಿಕೆಯ ಪ್ರದೇಶದಲ್ಲಿ ಸಂಚರಿಸುತ್ತಿರುವ ಅನುಭವ ಇನ್ನೂ ಉಂಟಾಗಲು ಕಾರಣವೆಂದರೆ ಆಗಿನ ಕುರುಹುಗಳು ಇನ್ನೂ ಸ್ಮಾರಕಗಳಾಗಿ ಉಳಿದಿರುವುದು. ಕೂಡ್ಲಿಗಿ ತಾಲೂಕಿನಲ್ಲಿ ಸಂದರ್ಶಿಸಬೇಕಾದ ಪ್ರೇಕ್ಷಣೀಯ ಐತಿಹಾಸಿಕ ಸ್ಥಳಗಳಲ್ಲಿ ಗುಡೇಕೋಟೆಯೂ ಒಂದು. ಇಲ್ಲಿನ ಸ್ಮಾರಕಗಳನ್ನು ಉಳಿಸಿಕೊಳ್ಳುವ, ಸಂರಕ್ಷಿಸುವ ಕಾರ್ಯ ಮಾತ್ರ ಆಗಬೇಕಾಗಿರುವ ಮಹತ್ವದ ಕಾರ್ಯವಾಗಿದೆ.ಹಾಗು ಗುಡೇಕೋಟೆಯ ಕರಡಿ ಧಾಮವು ಒಂದುುುು ಪ್ರಸಿದ್ಧ ಸ್ಥಳವಾಗಿದೆ ಮತ್ತು ಗುಡೆಕೋಟೆ ಇಂದ ರಾಮಸಾಗರಹಟ್ಟಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಹತ್ತುು ಕಿಲೋಮೀಟರ್ ಸುಂದರ ಅರಣ್ಯವನ್ನು ಹೊಂದಿದ್ದು ಅರಣ್ಯದಲ್ಲಿ ಈ ಪ್ರದೇಶದಲ್ಲಿ ಹಳೆಯ ಕಾಲದ ಎರಬಾಲನಾಯಕ ಎಂಬ ದೇವಸ್ಥಾನದ ಮುಂಭಾಗದಲ್ಲಿ ಹತ್ತಿ ಹೆಚ್ಚು ಬಾರೆ ಹಣ್ಣುಗಳ ಮರಗಳು ಕಂಡುಬರುತ್ತದೆ ಹಾಗೂ ಸೀತಾಫಲಹಣ್ಣು ಇಲ್ಲಿ ಪ್ರಸಿದ್ಧವಾಗಿದ್ದು ನೇರಳೆ ಹಣ್ಣುಗಳು ಮತ್ತು ನವಿಲುಗಳು ಸುಂದರವಾದ ವಿಧವಿಧವಾದ ಪಕ್ಷಿಗಳು ಹಾಗೂ ಕರಡಿಗಳು ಇಲ್ಲಿ ಕಂಡುಬರುತ್ತವೆ