ಬಿಲಗುಂಜಿ ಕಮಲೇಶ್ವರ
ಗೋಚರ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಿಕ್ಕಬಿಲಗುಂಜಿ ಕಮಲೇಶ್ವರ ದೇಗುಲದಲ್ಲಿ ಪರಶಿವ ಗಂಗೆಯ ಶಿರದ ಮೇಲೆ ನೆಲೆಸಿದ್ದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಕೀರ್ತಿಗಳಿಸಿದ್ದಾನೆ. ಇಲ್ಲಿ ಶಿವನ ಪದತಳದಲ್ಲಿ ಗಂಗೆ ತೀರ್ಥರೂಪದಲ್ಲಿ ನೆಲೆಸಿದ್ದು ಸದಾ ಹರಿಯುತ್ತಿರುತ್ತಾಳೆ.
ಕಲಾ ನಿಪುಣತೆ
[ಬದಲಾಯಿಸಿ]- ಸಂಪೂರ್ಣ ಶಿಲಾಮಯ ದೇಗುಲವಾಗಿರುವ ಈ ದೇವಸ್ಥಾನ ಸುಂದರ ಕಂಬಗಳ ಕೆತ್ತನೆ, ಜಗತಿ, ನವರಂಗ, ಗರ್ಭಗುಡಿ ಹಾಗೂ ನಂದಿಮಂಟಪ ಹೊಂದಿದೆ. ಮೇಲ್ಚಾವಣಿಯ ಮೇಲೆ ಮರ ಉರುಳಿ ಗೋಪುರ ಶಿಥಿಲಗೊಂಡ ಕಾರಣ ಹೊಸದಾಗಿ ಮರ ಮತ್ತು ಹಂಚು ಬಳಸಿ ಮೇಲ್ಚಾವಣಿ ನಿರ್ಮಿಸಲಾಗಿದೆ. ಇದರಿಂದಾಗಿ ಮೇಲ್ನೋಟಕ್ಕೆ ಆಧುನಿಕ ಕಟ್ಟಡದಂತೆ ತೋರುವ ಈ ದೇಗುಲ ಸಮೀಪಿಸಿದಾಗ ಶಿಲಾ ದೇಗುಲದ ವೈಭವ ಕಣ್ಣಿಗೆ ಕಟ್ಟುತ್ತದೆ.
- ದೇಗುಲದ ಹಿಂಭಾಗದಲ್ಲಿ ಎತ್ತರದ ಶಿಖರ, ಮುಂಭಾಗದಲ್ಲಿ ಪವಿತ್ರ ಪುಷ್ಕರಣಿ ಇದೆ. ಎಲ್ಲೆಡೆ ಒಂದು ಪುಷ್ಕರಣಿ ಇದ್ದರೆ ಇಲ್ಲಿ ಎರಡು ಪುಷ್ಕರಣಿ ಹಾಗೂ ಎರಡು ತೀರ್ಥದ ನೆಲೆಯಿರುವುದು ಇರುವುದು ವಿಶೇಷ. ದೇಗುಲದ ಬಲಭಾಗದಲ್ಲಿ ಚಿಕ್ಕ ಆಲಯವಿದ್ದು ನಕ್ಷತ್ರಾಕಾರದ ಪುಷ್ಕರಣಿ ತೀರ್ಥದಲ್ಲಿ ಉದ್ಭವ ಶಿವಲಿಂಗವಿದೆ. ಈ ಶಿವಲಿಂಗ ನೆಲದಿಂದ ೫ ಅಡಿ ಎತ್ತರವಿದ್ದು ಆಳ ಪತ್ತೆಯಾಗಿಲ್ಲ. ಈ ಶಿವಲಿಂಗದ ಎದುರು ನಂದಿ ವಿಗ್ರಹವಿದ್ದು ನಿಂತ ಭಂಗಿಯಲ್ಲಿದೆ. ನಿಂತ ಶೈಲಿಯ ನಂದಿ ವಿಗ್ರಹ ಭಾರತರದ ಕೆಲವೇ ಕೆಲವು ದೇಗುಲಗಳಲ್ಲಿದ್ದು ಇದು ಈ ಕ್ಷೇತ್ರದ ವಿಶೇಷತೆ ಯಾಗಿದೆ.
ಸ್ಥಳ ಪುರಾಣ
[ಬದಲಾಯಿಸಿ]- ಈ ದೇಗುಲ ಅತ್ಯಂತ ಪ್ರಾಚೀನದಾಗಿದ್ದು ಶಿವಪುರಾಣದಲ್ಲಿ ಉಲ್ಲೇಖವಿದೆ. ಹಿಂದೆ ಕಾಶಿರಾಜನು ದಕ್ಷಿಣ ಭಾರತದ ಪರ್ಯಟನೆಗೆ ಬಂದಾಗ ಈ ಕ್ಷೇತ್ರಕ್ಕೆ ಆಗಮಿಸಿದನಂತೆ. ಪ್ರತಿನಿತ್ಯ ಗಂಗಾ ಸೇವನೆ ನಂತರ ಉಳಿದ ಆಹಾರ ಸೇವನೆ ಆತನ ವ್ರತವಾಗಿತ್ತು. ಈ ಕ್ಷೇತ್ರಕ್ಕೆ ಬಂದಾಗ ಗಂಗೆಯ ಆಗಮನವಾಗಲಿಲ್ಲ. ಅದಕ್ಕಾಗಿ ಆತ ಅನ್ನ ಆಹಾರ ತ್ಯಜಿಸಿ ತಪಸ್ಸಿಗೆ ಕುಳಿತನಂತೆ.
- ಆಗ ರಾತ್ರಿ ಕನಸಿನಲ್ಲಿ ಗಂಗೆ ಕಾಣಿಸಿಕೊಂಡು ನೀನು ತಪಕ್ಕೆ ಕುಳಿತ ಸನಿಹದ ನೆಲವನ್ನು ಅಗೆದು ನೋಡು. ತಾನು ನೆಲಸಿದ್ದೇನೆ ಅಂದು ತಿಳಿಸಿದನಂತೆ. ಅದೇ ರೀತಿ ರಾಜ ನೆಲವನ್ನು ಅಗೆಸಿ ತೆಗೆದಾಗ ಗಂಗೆ ಚಿಮ್ಮುತ್ತಾ ಹರಿಯುತ್ತಿದ್ದಳಂತೆ. ಗಂಗಾ ತೀರ್ಥ ಸೇವಿಸಿ ತಪಸ್ಸನ್ನು ಮುಗಿಸಿ ಕಾಶಿರಾಜ ಮುಂದಿನ ಪರ್ಯಟನೆ ಕೈಗೊಂಡನು. ಅನಂತರ ಹಲವು ವರ್ಷಗಳ ಕಾಲ ಗಂಗೆ ಉಕ್ಕಿ ಹರಿಯುತ್ತಿದ್ದಳು.
- ಋಷಿಯೋರ್ವನು ಈ ಸ್ಥಳದಲ್ಲಿ ತಪಸ್ಸಿಗೆ ಕುಳಿತಾಗ ಗಂಗೆ ಮತ್ತೆ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಶಿರೋಭಾಗದಲ್ಲಿ ಈಶ್ವರಲಿಂಗ ಪ್ರತಿಷ್ಠಾಪಿಸುವಂತೆ ತಿಳಿಸಿದಳು. ಅಂತೆಯೇ ಶಿವಲಿಂಗ ಸ್ಥಾಪಿಸಿ ಅಂತರ್ಭಾಗದಲ್ಲಿ ಗಂಗೆ ಹರಿದು ಮುಂದಕ್ಕೆ ಸಾಗುವಂತೆ ಮಾಡಲಾಯಿತು. ಇಲ್ಲಿನ ಗರ್ಭಗುಡಿಯಲ್ಲಿನ ಶಿವಲಿಂಗದ ಕೆಳಗಿನಿಂದ ಗಂಗೆ ತೀರ್ಥರೂಪದಲ್ಲಿ ಹರಿದು ದೇಗುಲದ ಹಿಂಭಾಗದ ಗುಹೆಯಂತಹ ಸ್ಥಳದಲ್ಲಿ ಈಗಲೂ ಉಕ್ಕುತ್ತಿದ್ದಾಳೆ. ಅಲ್ಲಿಂದ ಉದ್ಭವಲಿಂಗ, ಹಾಗೂ ಪುಷ್ಕರಣಿಗಳ ಮೂಲಕ ಪ್ರವಹಿಸುತ್ತಿದ್ದಾಳೆ.
ರಾಜರಿಂದ ಪೂಜೆ
[ಬದಲಾಯಿಸಿ]- ಈ ಕ್ಷೇತ್ರ ಪ್ರಾಚೀನ ಕಾಲದಿಂದಲೂ ಶಕ್ತಿ ಸ್ಥಳವಾಗಿದ್ದು ೧೭ ನೇ ಶತಮಾನದಲ್ಲಿ ಕೆಳದಿ ಅರಸರ ಕಾಲದಲ್ಲಿ ಸುಸಜ್ಜಿತ ಶಿಲಾ ದೇವಾಲಯವಾಗಿ ಅಭಿವೃದ್ಧಿಗೊಂಡಿತು. ಇದು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದ್ದು ಬನವಾಸಿಯ ಶ್ರೀಮಧುಕೇಶ್ವರ ದೇವಾಲಯದಂತೆ ಕಂಬಗಳ ರಚನೆ, ನವರಂಗ ಮುಖ ಮಂಟಪಗಳ ರಚನೆ ಹೊಂದಿದೆ. ಹಲವು ರಾಜ ಮನೆತನಗಳ ಅರಸರು ಭಕ್ತಿಯಿಂದ ಪೂಜಿಸಿ ದಾನ ದತ್ತಿಗಳನ್ನು ನೀಡುತ್ತಿದ್ದರು.
- ಕೆಳದಿ ಅರಸರು ಶಿವರಾತ್ರಿಯ ದಿನ ಇಲ್ಲಿಗೆ ಆಗಮಿಸಿ ಮಹಾಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಕೆಳದಿ ನೃಪವಿಜಯದಲ್ಲಿ ವರ್ಣನೆಯಿದೆ. ನಂತರ ಘೋರ ತಪಸ್ವಿಗಳಾದ ಶ್ರೀಶಿವಾನಂದ ಸರಸ್ವತಿ ಸ್ವಾಮಿಗಳು ನರ್ಮದಾ ನದಿಯಿಂದ ಕಮಲ ಶಿಲೆಯ ಲಿಂಗವನ್ನು ತರಿಸಿ ಇಲ್ಲಿ ಪ್ರತಿಷ್ಠಾಪಿಸಿದ್ದು ಈ ಲಿಂಗ ಸೂರ್ಯನ ಬೆಳಕಿನ ಸಮಯದಲ್ಲಿ ವಿಶೇಷ ಹೊಳಪನ್ನು ಹೊರ ಸೂಸುತ್ತದೆ.
- ದೇವಾಲಯದ ಅಡಿಪಾಯ ಮಣ್ಣಿನಲ್ಲಿ ಹೂತು ಹೋಗಿದ್ದು ದೇಗುಲದ ಜಗುಲಿ, ಗರ್ಭಗುಡಿಗಳು ನೆಲಮಟ್ಟದಲ್ಲೇ ಇವೆ. ಹಿಂಭಾಗದ ಶಿಖರದ ಮಣ್ಣು ಕುಸಿದು ಅಡಿಪಾಯ , ಅಮೂಲ್ಯ ಶಾಸನ, ಪರಿವಾರ ದೇವತೆಗಳ ವಿಗ್ರಹಗಳು ಮುಚ್ಚಿ ಹೋಗಿರುವ ಶಂಕೆ ಇದ್ದು ಉತ್ಖನನದ ಮೂಲಕ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.
ಪವಿತ್ರ ತಪೋಭೂಮಿ
[ಬದಲಾಯಿಸಿ]- ಪರಮ ಯೋಗಿಗಳಾದ ಶ್ರೀಪರಮಾನಂದ ಸರಸ್ವತಿ ಸ್ವಾಮೀಜಿ, ಭಗವಾನ್ ಶ್ರೀಧರ ಸ್ವಾಮಿಗಳ ಗುರುಗಳಾದ ಶ್ರೀಶಿವಾನಂದ ಸರಸ್ವತಿ ಮತ್ತು ಶ್ರೀಧರ ಸ್ವಾಮಿಗಳು ಈ ಸ್ಥಳಕ್ಕೆ ಆಗಮಿಸಿ ಹಲವು ಕಾಲ ಪೂಜೆ ಮತ್ತು ತಪಸ್ಸನ್ನು ಆಚರಿಸಿದ್ದಾರೆ. ಹಲವು ವರ್ಷಗಳ ಕಾಲ ಪೂಜೆ ಪುನಸ್ಕಾರಗಳು ಇಲ್ಲದೆ ಈ ಕ್ಷೇತ್ರ ಉಗ್ರ ಸ್ವರೂಪ ತಾಳಿತ್ತು.
- ಸುಮಾರು ೧೫೦ ವರ್ಷಗಳ ಹಿಂದೆ ಶ್ರೀಶಿವಾನಂದ ಸರಸ್ವತಿ ಸ್ವಾಮಿಗಳು ತಮ್ಮ ಶಿಷ್ಯ ಹಾಗೂ ಸದ್ಗೃಸ್ಥನಾದ ಉತ್ತರಕನ್ನಡ ಜಿಲ್ಲೆ ಹೊನ್ನಾರವ ತಾಲೂಕಿನ ನವಿಲಗೋಣದ ಗಣಪತಿ ಗೋಪಾಲ ಭಟ್ ಎಂಬವರಿಗೆ ಈ ಸ್ಥಳಕ್ಕೆ ತೆರಳಿ ದೇವರನ್ನು ಆರಾಧಿಸುವಂತೆ ತಿಳಿಸಿದರು. ಯಶಸ್ವಿಗಾಗಿ ತಮ್ಮ ಪಾದುಕೆಗಳನ್ನು ತೆಗೆದು ಕೊಟ್ಟು ಕಳುಹಿಸಿದರಂತೆ.
- ಈಗ ಅದೇ ಗೃಹಸ್ಥನ ಕುಟುಂಬದ ಕುಡಿ ಶಂಕರನಾರಾಯಣ ಭಟ್ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕ್ಷೇತ್ರದ ಮಹಿಮೆಯ ಬಗ್ಗೆ ಅಚ್ಚರಿಯಿಂದ ವರ್ಣಿಸುತ್ತಾರೆ. ಅವರ ಮನೆಯಲ್ಲಿ ಇಂದಿಗೂ ಶ್ರೀಗಳ ಪಾದುಕೆಗೆ ನಿತ್ಯ ಪೂಜೆ ಸಲ್ಲುತ್ತಿದೆ. ಸಾಗರದಿಂದ ತ್ಯಾಗರ್ತಿ ಮಾರ್ಗವಾಗಿ ೧೭ ಕಿ.ಮೀ.ದೂರದಲ್ಲಿ ಮತ್ತು ಶಿವಮೊಗ್ಗ ಜೋಗ ಮಾರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಸ್ಪಾಡಿಯಿಂದ ೫ ಕಿ.ಮೀ.ದೂರದಲ್ಲಿ ಈ ದೇಗುಲವಿದೆ.
ರಾಮ ನವಮಿಯಂದು ಮಹಾರಥೋತ್ಸವ
[ಬದಲಾಯಿಸಿ]- ದೇಗುಲದಲ್ಲಿ ನಿತ್ಯ ತ್ರಿಕಾಲ ಪೂಜೆ ಮತ್ತು ನೈವೇದ್ಯ ಸಮರ್ಪಣೆಯಾಗುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ನವರಾತ್ರಿಯಲ್ಲಿ ನಿತ್ಯ ಪಾರಾಯಣ ಪೂಜೆ, ಗಂಗಾಷ್ಟಮಿಯಂದು ಸಾಮೂಹಿಕ ಪೂಜೆ ಮತ್ತು ಉತ್ಸವ, ಕಾರ್ತಿಕ ಮಾಸದಲ್ಲಿ ನಿತ್ಯ ರಾತ್ರಿ ದೀಪೋತ್ಸವ ಜರುಗುತ್ತದೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷ ದತ್ತ ಜಯಂತಿ ಉತ್ಸವ ಮೂರುದಿನಗಳ ಕಾಲ ಜರುಗುತ್ತದೆ.
- ರಾಮ ನವಮಿಯ ಸಂದರ್ಭದಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯುತ್ತದೆ. ರಾಮ ನವಮಿಯಂದು ಮಹಾರಥೋತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ಪಲಕ್ಕಿ ಉತ್ಸವ ನಡೆಸಲಾಗುತ್ತಿದ್ದು ನೀಚಡಿ, ಅಡ್ಡೇರಿ, ಬಿಲಗುಂಜಿ ಗ್ರಾಮಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಪ್ರತಿದಿನ ಇಲ್ಲಿಗೆ ಸ್ಥಳ ಮತ್ತು ಪರಸ್ಥಳಗಳಿಂದ ಭಕ್ತರು ಮತ್ತು ಪ್ರವಾಸಿಗಳು ಬರುತ್ತಾರೆ.ಸಾಗರದಿಂದ ಕಾಸ್ಪಾಡಿ ಮಾರ್ಗವಾಗಿ ಮತ್ತು ಬೊಮ್ಮತ್ತಿ ಮಾರ್ಗವಾಗಿ ಬಸ್ಸಿನ ವ್ಯವಸ್ಥೆ ಇದೆ.