ಹೃದಯದ ಅಂಗರಚನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನುಷ್ಯ ದೇಹದ ಸಮಸ್ತ ಭಾಗಗಳಲ್ಲೂ ಸದಾ ರಕ್ತ ಪರಿಚಲನೆ ಇರುವಂತೆ ಮಾಡುವ ಅಂಗ ಹೃದಯ.[೧] ಇದು ಹೃದಯ ಸ್ನಾಯು (ಕಾರ್ಡಿಯಾಕ್ ಮಸಲ್) ಎಂಬ ವಿಶೇಷ ಸ್ನಾಯುವಿನಿಂದ ನಿರ್ಮಿತವಾಗಿದೆ. ಹೃದಯದ ಸ್ಥಾನ ಎದೆಯಲ್ಲಿ (ನಿಖರವಾಗಿ ಮೂಳೆಗಳಿಂದ ರಚಿತವಾದ ಎದೆಗೂಡಿನ ಒಳಗೆ), ಎರಡು ಪುಪ್ಪುಸಗಳ ನಡುವೆ, ಎಡ ಪುಪ್ಪುಸ ಕೊಂಚ ಮರೆಮಾಡಿದಂತೆ, ಮುಂಭಾಗಕ್ಕೆ ಎಡಕ್ಕೆ ಓರೆಯಾಗಿ ವಪೆಯ ಮೇಲೆ ಉಂಟು. ಹೃದಯದ 2/3 ಭಾಗ ದೇಹದ ಮಧ್ಯರೇಖೆಯ ಎಡಕ್ಕೂ 1/3 ಭಾಗ ಬಲಕ್ಕೂ ವ್ಯಾಪಿಸಿದೆ. ಇಡೀ ಹೃದಯ ಮಾವಿನಕಾಯಿಯ ಆಕಾರವಾಗಿದ್ದು ಕೈಮುಷ್ಟಿಗಿಂತಲೂ ಕೊಂಚ ದೊಡ್ಡದಾಗಿರುತ್ತದೆ.[೨] ವಯಸ್ಕರಲ್ಲಿ ಇದರ ತೂಕ ಸುಮಾರು 300 ಗ್ರಾಂ.[೩] ಮಕ್ಕಳಲ್ಲಿ ಅದು, ಅವರ ಮೈ ತೂಕಕ್ಕೆ ಹೋಲಿಸಿದರೆ, ಹೆಚ್ಚು ತೂಕವಾಗಿರುತ್ತದೆ. 25 ದಿವಸಗಳ ಗರ್ಭಾವಸ್ಥೆಯಲ್ಲಿ ಪ್ರಾರಂಭವಾಗುವ ಹೃದಯದ ಬಡಿತ, ಜೀವಮಾನ ಪರ್ಯಂತ ಬಡಿಯುತ್ತಲೇ ಇರುತ್ತದೆ. ಗರ್ಭಾವಸ್ಥೆಯಲ್ಲಿ ಬಡಿತದ ದರ ಮಿನಿಟಿಗೆ 130-140; ಹುಟ್ಟಿದ ತರುಣದಲ್ಲಿ ಅದು 90-100 ಆಗಿ, ಬಾಲ್ಯಾವಸ್ಥೆಯಲ್ಲಿ ಕ್ರಮೇಣ ಕಡಿಮೆಯಾಗುತ್ತ ಯೌವನದಿಂದಾಚೆಗೆ ಮಿನಿಟಿಗೆ ಸುಮಾರು 72 ಆಗುತ್ತದೆ.[೪] ಹೃದಯದ ಸುತ್ತ (ಬುಡದ ಹೊರತಾಗಿ) ಕವಚದ ಹಾಗೆ ಹೃದಯದ ಹೊರಪೊರೆ (ಪೆರಿಕಾರ್ಡಿಯಂ) ಉಂಟು.[೫] ವಾಸ್ತವವಾಗಿ ಇದು ಮೂರು ಪದರಗಳಿಂದಾಗಿದೆ.[೬] ಹೊರಪದರ ಗಡಸು, ಉಳಿದೆರಡು ನುಣುಪು. ಈ ಎರಡು ಪದರಗಳಲ್ಲಿ ಹೊರಗಿನದು ಗಡಸು ಪದರಕ್ಕೆ ಅಂಟಿಕೊಂಡಿದೆ. ಒಳಗಿನದು ಹೃದಯದ ಹೊರಪದರವಾಗಿದೆ. ಇವೆರಡು ಪದರಗಳ ನಡುವೆ ಕೀಲೆಣ್ಣೆಯಂತೆ ನುಣುಪಿಸುವ ಬಹುಸ್ವಲ್ಪ ದ್ರವವಿದ್ದು, ಇದರಿಂದ ಹೃದಯ ತಿಕ್ಕಾಟವಿಲ್ಲದೆ ಹಿಗ್ಗುವುದಕ್ಕೂ ಕುಗ್ಗುವುದಕ್ಕೂ ಸಾಧ್ಯವಾಗಿದೆ.[೭]

ಹೃದಯದ ಮುಂಬದಿಯ ನೋಟ

ಮುಂದಿನಿಂದ ನೋಡಿದರೆ ಹೃದಯದ ಬಲಗಡೆ ಅಂಚು ಎದೆಮೂಲೆಯ (ಸ್ಟರ್ನಂ) ಬಲ ಅಂಚಿನಿಂದ ಒಂದು ಬೆರಳಗಲ ಬಲಕ್ಕಿರುತ್ತದೆ. ಹಾಗೆಯೇ ಎಡ ಅಂಚು ಎದೆಮೂಳೆಯ ಎಡ ಅಂಚಿಗಿಂತ ಒಂದು ಬೆರಳಗಲ ಎಡಕ್ಕಿರುತ್ತದೆ. ಹೃದಯದ ಎಡಬಲಭಾಗಗಳಲ್ಲಿ ರಕ್ತವನ್ನು ಪಡೆಯಲು ಒಂದೊಂದು ಹೃತ್ಕರ್ಣ (ಏಟ್ರಿಯಂ) ರಕ್ತವನ್ನು ಹೊರತಳ್ಳಲು ಒಂದು ಹೃತ್ಕುಕ್ಷಿ (ವೆಂಟ್ರಿಕಲ್) ಹೀಗೆ ನಾಲ್ಕು ಕೋಶಗಳಿವೆ.[೮][೯] ಹೃತ್ಕರ್ಣಗಳಿಗೂ ಹೃತ್ಕುಕ್ಷಿಗಳಿಗೂ ನಡುವೆ ಆಳವಾದ ರೇಖೆ ಉಂಟು. ಈ ರೇಖೆಯಲ್ಲಿ ಕೊಬ್ಬು ತುಂಬಿದ್ದು ಹೃದಯಕ್ಕೆ ಆಕ್ಸಿಜನ್‌ಯುಕ್ತ ರಕ್ತವನ್ನು ಭಾಗಶಃ ಒದಗಿಸುವ ಬಲಹೃದಯ ಅಪಧಮನಿ (ರೈಟ್ ಕರೋನರಿ ಆರ್ಟರಿ) ಇರುತ್ತದೆ. ಎರಡು ಹೃತ್ಕುಕ್ಷಿಗಳ ನಡುವೆಯೂ ಒಂದು ರೇಖೆ ಇದೆ. ಈ ರೇಖೆಯಲ್ಲಿ ಎಡಹೃದಯ ಅಪಧಮನಿಯ ಒಂದು ಮುಖ್ಯ ಶಾಖೆ ಉಂಟು. ಎರಡು ಹೃತ್ಕರ್ಣಗಳನ್ನು ಪ್ರತ್ಯೇಕಿಸುವ ಯಾವ ಗುರುತು ಹೊರಗಿನಿಂದ ಕಾಣಿಸುವುದಿಲ್ಲ. ಏಕೆಂದರೆ ಆ ಸ್ಥಳ ಪುಪ್ಪುಸ ಧಮನಿ (ಪಲ್ಮನರಿ ಆರ್ಟರಿ) ಮತ್ತು ಮಹಾಪಧಮನಿಯ ಆರೋಹಣ ಭಾಗಗಳಿಂದ (ಅಸೆಂಡಿಂಗ್ ಪಾರ್ಟ್ ಆಫ್ ದಿ ಅಯೋರ್ಟ) ಮರೆಮಾಡಲ್ಪಟ್ಟಿವೆ. ಹೃದಯದ ತುತ್ತತುದಿ ಎಡ ಹೃತ್ಕುಕ್ಷಿಯ ಕೆಳಮೂತಿಯಾಗಿದ್ದು ಎದೆಯ ಎಡಗಡೆ 5-6 ನೆಯ ಪಕ್ಕೆಲುಬುಗಳ ನಡುವೆ ಇರುತ್ತದೆ. ರೋಗದಿಂದ ಹೃದಯ ವಿಕಾರವಾದಾಗ ಅಥವಾ ದೊಡ್ಡದಾದಾಗ ಇದು ಜಾಗವನ್ನು ಬದಲಾಯಿಸಿರುತ್ತದೆ. ಎದೆಮೂಲೆಯ ಹಿಂದೆ ಕಾಣುವ ಹೃದಯದ ಬಲ ಅಂಚು ಬಲ ಹೃತ್ಕರ್ಣದಿಂದಲೂ ಎಡ ಅಂಚು ವಿಶೇಷವಾಗಿ ಎಡ ಹೃತ್ಕುಕ್ಷಿ ಮತ್ತು ಸ್ವಲ್ಪ ಮಾತ್ರ ಎಡ ಹೃತ್ಕರ್ಣದಿಂದಲೂ ಆಗಿದೆ. ಹೃದಯದ ಕೆಳ ಅಂಚು ಇದರಿಂದಲೇ ಆಗಿದೆ. ಹೃದಯ ತಳ ಹಿಮ್ಮಖವಾಗಿರುತ್ತದೆ. ಇದು ಎದೆ ಪ್ರದೇಶದ 5ನೆಯ ಬೆನ್ನಮೂಳೆಯಿಂದ 8ನೆಯ ಬೆನ್ನುಮೂಳೆವರೆಗೆ (ತರ‍್ಯಾಸಿಕ್ ವರ್ಟಿಬ್ರ) ಪ್ರಸರಿಸಿರುತ್ತದೆ. ಇದಕ್ಕೂ ಬೆನ್ನುಮೂಳೆಗೂ ನಡುವೆ ಮಹಾಪಧಮನಿಯ ಅವರೋಹಣ ಭಾಗವೂ ಅನ್ನನಾಳವೂ ಇರುತ್ತದೆ. ಈ ಭಾಗ ಬಹುವಾಗಿ ಎಡ ಹೃತ್ಕರ್ಣದಿಂದಾಗಿದ್ದು ಇಲ್ಲಿ ಬಲಗಡೆಯಿಂದ 2 ಪುಪ್ಪುಸ ಅಭಿಧಮನಿಗಳು ಬಂದು ಎಡಹೃತ್ಕರ್ಣವನ್ನು ಸೇರುತ್ತವೆ. ಇವು ಆಕ್ಸಿಜನ್‌ಯುಕ್ತ ರಕ್ತವನ್ನು ಪುಪ್ಪುಸಗಳಿಂದ ಎಡಹೃತ್ಕರ್ಣಕ್ಕೆ ಒಯ್ಯುತ್ತವೆ. ವಪೆಗೆ ತಗುಲಿದ ಹಾಗಿರುವ ಹೃದಯದ ಭಾಗ 2/3 ರಷ್ಟು ಎಡಹೃತ್ಕುಕ್ಷಿಯಿಂದಲೂ 1/3 ರಷ್ಟು ಬಲಹೃತ್ಕುಕ್ಷಿಯಿಂದಲೂ ಆಗಿದೆ. ವಪೆಯು ಹೃದಯವನ್ನು ಯಕೃತ್ತಿನ ಎಡಭಾಗ ಮತ್ತು ಜಠರದಿಂದ ಪ್ರತ್ಯೇಕಿಸುತ್ತದೆ.

ಬಲಪಕ್ಕದಿಂದ ನೋಡಿದರೆ ಬಲಹೃತ್ಕುಕ್ಷಿಗೂ ಬೆನ್ನಮೂಳೆಗೂ ನಡುವೆ ಬಲ ಹೃತ್ಕರ್ಣ ಕಾಣಿಸುತ್ತದೆ. ತಲೆ ತೋಳುಗಳು ಮತ್ತು ಎದೆಯ ಮೇಲುಭಾಗದಿಂದ ಆಕ್ಸಿಜನ್‌ವಿರಳರಕ್ತವನ್ನು ಒಯ್ಯುವ ಉನ್ನತಮಹಾಭಿಧಮನಿ (ಸುಪೀರಿಯರ್ ವೀನ ಕೇವ) ಬಲ ಹೃತ್ಕರ್ಣದ ಮೇಲಿನ ಭಾಗಕ್ಕೆ ತೆರೆದುಕೊಳ್ಳುತ್ತದೆ. ಹೀಗೆಯೇ ದೇಹದಲ್ಲಿ ಉಳಿದ ಭಾಗಗಳಿಂದ ರಕ್ತವನ್ನು ಒಯ್ಯುವ ಅವನತಮಹಾಭಿಧಮನಿ (ಇನ್ಫೀರಿಯರ್ ವೀನ ಕೇವ) ಕೆಳಗಿನಿಂದ ವಪೆಯಲ್ಲಿ ತೂರಿ ಬಲಹೃತ್ಕರ್ಣದ ಕೆಳಭಾಗದಲ್ಲಿ ತೆರೆದುಕೊಳ್ಳುತ್ತದೆ. ಕವಾಟವಿರುವ ಹೃದಯದ ಮಹಾಭಿಧಮನಿ (ಕರೋನರಿ ಸೈನಸ್) ಇಡೀ ಹೃದಯದ ಸ್ನಾಯುಗಳಿಂದ ಬರುವ ಆಕ್ಸಿಜನ್ ವಿರಳರಕ್ತವನ್ನು ಬಲಹೃತ್ಕರ್ಣಕ್ಕೆ ತಲುಪಿಸುತ್ತದೆ. ಬಲಹೃತ್ಕರ್ಣದಲ್ಲಿ ಉನ್ನತ ಮಹಾಭಿಧಮನಿ ಸೇರುವ ಕಡೆ ಸೈನೊ ಏಟ್ರಿಯಲ್ ಗಿಣ್ಣು ಮತ್ತು ಹೃದಯದ ಮಹಾಭಿಧಮನಿಯ ಹತ್ತಿರ ಏಟ್ರಿಯೊವೆಂಟ್ರಿಕ್ಯುಲರ್ ಗಿಣ್ಣು ಎಂಬ ಎರಡು ವಿಶಿಷ್ಟ ಮಾಂಸದ ಗಂಟುಗಳು ಬಲಹೃತ್ಕರ್ಣದ ಮಾಂಸಭಿತ್ತಿಯಲ್ಲಿ ಹುದುಗಿಕೊಂಡಿರುತ್ತವೆ. ಇವುಗಳ ಸ್ವಯಂ ಪ್ರಚೋದಿತ ಕಾರ್ಯಕ್ರಮದಿಂದ ಹೃದಯ ನಿಯತವಾದ ತಾಳಕ್ರಮದಲ್ಲಿರುತ್ತದೆ. ಬಲಹೃತ್ಕರ್ಣದ ಹಿಂದಕ್ಕೂ ಎಡಕ್ಕೂ ಎಡಹೃತ್ಕರ್ಣ ಉಂಟು. ಹೀಗಿರುವುದು ಎರಡು ಹೃತ್ಕರ್ಣಗಳನ್ನು ವಿಭಾಗಿಸುವ ನಡುವಣ ತಡಿಕೆ ಓರೆಯಾಗಿರುವುದರ ಪರಿಣಾಮ. ಭ್ರೂಣಾವಸ್ಥೆಯಲ್ಲಿ ತಡಿಕೆಯಲ್ಲಿ ಅಂಡಾಕಾರದ ಕಂಡಿ (ಫೊರಾಮನ್ ಓವಾಲೀ) ಇದ್ದು ಅದು ಅವನತಮಹಾಭಿಧಮನಿಯಿಂದ ಬಲಹೃತ್ಕರ್ಣವನ್ನು ತಲುಪಿದ ರಕ್ತವನ್ನು ಕೂಡಲೇ ಎಡಹೃತ್ಕರ್ಣಕ್ಕೆ ಹೋಗಗೊಡುತ್ತದೆ. ರಕ್ತದ ಚಲನೆಯನ್ನು ಈ ರೀತಿ ನಿಯಂತ್ರಿಸಲು ಅವನತಮಹಾಭಿಧಮನಿಯ ಬಾಯಲ್ಲಿ ಯೂಸ್ಟೇಕಿಯಸ್ಸನ ಕವಾಟಗಳಿರುತ್ತದೆ. ಜನನವಾದ ಮೇಲೆ ಎರಡು ಹೃತ್ಕರ್ಣಗಳ ಒಳಪೊರೆಗಳೂ ಅಂಡಾಕಾರದ ಕಂಡಿಯನ್ನು ಮುಚ್ಚಿ ತಡಿಕೆಯಲ್ಲಿ ಒಂದು ತಗ್ಗು ಮಾತ್ರ ಇರುವಂತೆ ಕಾಣುತ್ತದೆ. ಯೂಸ್ಟೇಕಿಯಸ್ಸನ ಕವಾಟಗಳ ಉಳಿಕೆಗಳೂ ಅವನತಮಹಾಭಿಧಮನಿಯ ಬಾಯ ಸುತ್ತ ಕಾಣಬರುತ್ತದೆ. ಹೃದಯದ ಮಿಕ್ಕ ಎಲ್ಲ ಕೋಶಗಳಂತೆ ಬಲಹೃತ್ಕರ್ಣದ ಒಳಗೆ ಕೂಡ ನುಣುಪಾದ ಪೊರೆ ಇದ್ದರೂ ಆ ಪೊರೆಯ ಒಳಗೆ ಇರುವ ಸ್ನಾಯು ತಂತುಗಳ ವಿನ್ಯಾಸದಿಂದ ಅದು ಜುಂಗುಜುಂಗಾಗಿರುವುದು.

ಬಲಹೃತ್ಕರ್ಣದಿಂದ ಬಲಹೃತ್ಕುಕ್ಷಿಗೆ ರಕ್ತ ಇವುಗಳ ನಡುವೆ ಇರುವ ದ್ವಾರದ ಮೂಲಕ ಹರಿದು ತುಂಬಿಕೊಳ್ಳುತ್ತದೆ. ಬಲಹೃತ್ಕರ್ಣ ಸಂಕುಚಿಸಿದಾಗ ಬಲಹೃತ್ಕುಕ್ಷಿ ಪೂರ್ಣವಾಗಿ ತುಂಬಿಕೊಳ್ಳುತ್ತದೆ. ಬಲಹೃತ್ಕರ್ಣ-ಹೃತ್ಕುಕ್ಷಿಗಳ ನಡುವಿನ ಈ ದ್ವಾರದಲ್ಲಿ ತ್ರಿದಳ ಕವಾಟ (ಟ್ರೈಕಸ್ಪಿಡ್ ವಾಲ್ವ್) ಉಂಟು. ಇದು ಬಲ ಹೃತ್ಕರ್ಣದಿಂದ ಬಲಹೃತ್ಕುಕ್ಷಿಗೆ ರಕ್ತ ಹರಿಯಲು ಅವಕಾಶ ಮಾಡಿಕೊಡುತ್ತದಾದರೂ ಬಲಹೃತ್ಕುಕ್ಷಿ ಸಂಕುಚಿಸಿದಾಗ ಇದರ ಮೂರು ದಳಗಳೂ ತೇಲಿ ಸಂಪರ್ಕಗೊಂಡು ದ್ವಾರ ಮುಚ್ಚಿಕೊಳ್ಳುವುದರಿಂದ ರಕ್ತ ಪುನಃ ಹೃತ್ಕರ್ಣಕ್ಕೆ ಬರದಂತೆ ತಡೆಯುತ್ತದೆ. ಕವಾಟದ ದಳಗಳ ಕೆಳಗಿನ ಕುಚ್ಚುಕುಚ್ಚಾದ ಅಂಚುಗಳು ಕಾರ್ಡೆ ಟೆಂಡಿನೆ ಎಂಬ ತಂತುಗಳಿಂದ ಬಲ ಹೃತ್ಕುಕ್ಷಿಯ ಒಳಗಿರುವ ಬೆರಳಿನೋಪಾದಿಯ ಸ್ನಾಯುಗಳ ತುದಿಗೆ ಸೇರಿಸಲ್ಪಟ್ಟಿರುವುದರಿಂದ ಕವಾಟ ಮುಚ್ಚಿಕೊಂಡಾಗ ದಳಗಳು ದೃಢವಾಗಿದ್ದು ರಕ್ತದ ವಾಪಸಾತಿಯ ತಡೆಯನ್ನು ಯಶಸ್ವಿಯಾಗಿ ನೆರವೇರಿಸುತ್ತದೆ. ಬಲಹೃತ್ಕುಕ್ಷಿಯಿಂದ ರಕ್ತ ಪುಪ್ಪುಸ ಅಪಧಮನಿಯೊಳಕ್ಕೆ ನೂಕಲ್ಪಡುತ್ತದೆ. ಈ ಅಪಧಮನಿಯ ಪ್ರಾರಂಭದಲ್ಲಿ ಮೂರು ಅರೆಚಂದ್ರಾಕಾರ ದಳಗಳುಳ್ಳ ಅರೆಚಂದ್ರಾಕಾರ ಕವಾಟವಿದ್ದು ಹೃತ್ಕುಕ್ಷಿ ಸಂಕುಚಿಸಿದಾಗ ವಾಲ್ಸಾಲ್ವನ ಸೈನಸ್‌ಗಳೆಂಬ ಸಣ್ಣ ಪೊಟರೆಗಳೊಳಕ್ಕೆ ಬರಿದಾದ ದಳಗಳು ತಳ್ಳಲ್ಪಟ್ಟು ರಕ್ತ ಅಪಧಮನಿಯೊಳಗೆ ಹೋಗಲು ಅವಕಾಶಮಾಡಿಕೊಡುತ್ತದೆ. ಹೃತ್ಕುಕ್ಷಿಯ ವಿಕಾಸ (ರಿಲ್ಯಾಕ್ಸೇಷನ್) ಪ್ರಾರಂಭವಾದಾಗ ಕವಾಟದ ದಳಗಳಲ್ಲಿ ರಕ್ತತುಂಬಿ ಅವು ಹಿಂದಕ್ಕೆ ಬಿದ್ದು ಅಪಧಮನಿಯನ್ನು ಅಡ್ಡಕಟ್ಟಿ ರಕ್ತ ಪುನಃ ಹೃತ್ಕುಕ್ಷಿಯೊಳಗೆ ಹೋಗದಂತೆ ತಡೆಯುತ್ತದೆ. ಪುಪ್ಪುಸ ಅಪಧಮನಿ ರಕ್ತವನ್ನು ಎರಡು ಪುಪ್ಪುಸ ಅಭಿಧಮನಿಗಳ ಮೂಲಕ ಎಡಹೃತ್ಕರ್ಣಕ್ಕೆ ಬಂದು ಸೇರುತ್ತದೆ. ಎಡಹೃತ್ಕರ್ಣದಿಂದ ರಕ್ತ ಎಡಹೃತ್ಕುಕ್ಷಿಗೆ, ಇವೆರಡ ನಡುವಣ ದ್ವಾರದ ಮೂಲಕ ಹರಿದು ತುಂಬಿಕೊಳ್ಳುತ್ತದೆ. ಬಲಭಾಗದಲ್ಲಿನಂತೆ ಈ ದ್ವಾರದಲ್ಲೂ ಕವಾಟ ಉಂಟು. ಆದರೆ ಇದರಲ್ಲಿ ಎರಡು ದಳಗಳು ಮಾತ್ರ ಇರುವುದರಿಂದ ಇದನ್ನು ದ್ವಿದಳಕವಾಟವೆಂದು ಕರೆಯಲಾಗಿದೆ. ಇದಕ್ಕೆ ಮೈಟ್ರಲ್ ಕವಾಟವೆಂದು ಕೂಡ ಹೆಸರುಂಟು. ಈ ಕವಾಟ ಸಹ ಎಡಹೃತ್ಕರ್ಣ ಸಂಕುಚಿಸುವಾಗಲೂ ತೆರೆದುಕೊಂಡಿದ್ದು ಎಡಹೃತ್ಕುಕ್ಷಿ ಸಂಪೂರ್ಣವಾಗಿ ತುಂಬಿ ಅದರ ಸಂಕುಚನೆ ಪ್ರಾರಂಭವಾದಾಗ ಇದರ ಎರಡು ದಳಗಳೂ ತೇಲಿ ಸಂಪರ್ಕಗೊಂಡು ದ್ವಾರ ಮುಚ್ಚಿಕೊಂಡು ಹೃತ್ಕರ್ಣಕ್ಕೆ ರಕ್ತದ ವಾಪಸಾತಿಯನ್ನು ತಡೆಯುತ್ತದೆ. ಈ ದಳಗಳ ಕುಚ್ಚುಕುಚ್ಚಾದ ಅಂಚು ತಂತುಗಳಿಂದ ಎಡಹೃತ್ಕುಕ್ಷಿಯ ಒಳಗಿರುವ ಬೆರಳಿನೋಪಾದಿಯ ಸ್ನಾಯುಗಳ ತುದಿಗೆ ಸೇರಿಕೊಂಡಿರುವುದರಿಂದ ದೃಢಗೊಳಿಸಲ್ಪಟ್ಟು ರಕ್ತದ ತಡೆ ಯಶಸ್ವಿಯಾಗಿರುತ್ತದೆ. ಎಡಹೃತ್ಕುಕ್ಷಿಯ ಸಂಕುಚನದಿಂದ ರಕ್ತ ಮಹಾಪಧಮನಿಗೆ (ಅಯೋರ್ಟ) ನುಗ್ಗಿಸಲ್ಪಡುತ್ತದೆ. ಮಹಾಪಧಮನಿಯ ಪ್ರಾರಂಭದಲ್ಲೂ ಅರೆಚಂದ್ರಕಾರ ಕವಾಟವಿದ್ದು ಎಡಹೃತ್ಕುಕ್ಷಿಯ ವಿಕಾಸ ಪ್ರಾರಂಭವಾದಾಗ ಅಪಧಮನಿಯಿಂದ ರಕ್ತದ ಹಿನ್ನುಗ್ಗುವಿಕೆಯನ್ನು ಅದು ತಡೆಯುತ್ತದೆ. ರಕ್ತ ಮಹಾಪಧಮನಿಯ ಮೂಲಕ ಮುಂದೆ ಹರಿದು ದೇಹದ ಎಲ್ಲ ಕಡೆಗಳಿಗೂ ಪೂರೈಸಲ್ಪಡುತ್ತದೆ. ಹೃದಯಕ್ಕೇ ರಕ್ತವನ್ನು ಪೂರೈಸುವ ಎಡ, ಬಲ ಎಂಬ ಎರಡು ಹೃದಯದ ಅಪಧಮನಿಗಳು, ಮಹಾಪಧಮನಿಯ ಪ್ರಾರಂಭದ ಕವಲುಗಳು, ಎಡಬಲ ಹೃತ್ಕುಕ್ಷಿಗಳ ನಡುವೆ ಇರುವ ತಡಿಕೆಯೂ ಸ್ವಲ್ಪ ಮಟ್ಟಿಗೆ ಓರೆಯಾಗಿರುವುದರಿಂದ ಬಲ ಹೃತ್ಕುಕ್ಷಿ ಸ್ವಲ್ಪ ಮುಂದಕ್ಕೂ ಎಡಹೃತ್ಕುಕ್ಷಿ ಸ್ವಲ್ಪ ಹಿಂದಕ್ಕೂ ಇವೆ. ಈ ತಡಿಕೆ ಕೆಳಭಾಗದಲ್ಲಿ ಸ್ನಾಯುರಹಿತವಾಗಿ ತೆಳ್ಳಗೂ ಇದೆ. ಅಲ್ಲದೆ ತಡಿಕೆ ಬಲಗಡೆಗೆ ಡೊಂಕಾಗಿ ಉಬ್ಬಿಕೊಂಡಿರುವುದರಿಂದ ಹೃತ್ಕುಕ್ಷಿಗಳ ನೇರದಲ್ಲಿ ಹೃದಯವನ್ನು ಅಡ್ಡವಾಗಿ ಛೇದಿಸಿದರೆ ಬಲಹೃತ್ಕುಕ್ಷಿ ಅರ್ಧಚಂದ್ರಾಕಾರವಾಗಿದ್ದು ಗುಂಡಗಿರುವ ಎಡಹೃತ್ಕುಕ್ಷಿಯನ್ನು ಆವರಿಸಿದಂತೆ ಕಾಣುವುದು. ಹಾಗೆಯೇ ಎಡಹೃತ್ಕುಕ್ಷಿಯ ಭಿತ್ತಿ ಬಲಹೃತ್ಕುಕ್ಷಿಯ ಭಿತ್ತಿಗಿಂತ ಬಹು ದಪ್ಪವಾಗಿರುವುದಾಗಿ ಕಾಣುವುದು. ಹೃತ್ಕರ್ಣಗಳ ಭಿತ್ತಿ ಹೃತ್ಕುಕ್ಷಿಯ ಭಿತ್ತಿಗಿಂತಲೂ ತೆಳುವಾಗಿರುತ್ತದೆ. ಹೃತ್ಕರ್ಣ ಹೃತ್ಕುಕ್ಷಿಗಳ ತಡಿಕೆಗಳು ಹೃದಯದ ಎಡಬಲ ಭಾಗಗಳನ್ನು ನೇರ ಸಂಪರ್ಕವಿಲ್ಲದಂತೆ ಪ್ರತ್ಯೇಕಿಸುತ್ತದೆ.

ಹೃತ್ಕರ್ಣ ಹೃತ್ಕುಕ್ಷಿಗಳ ನಡುವೆ ಯಾವ ನೇರವಾದ ಸಂಬಂಧ ಇಲ್ಲ. ಹೃತ್ಕರ್ಣಗಳು ಕುಗ್ಗಿ ಪುನಃ ಹಿಗ್ಗುವುದಕ್ಕೆ ಪ್ರಾರಂಭಿಸಿದ ಮೇಲೆಯೇ ಹೃತ್ಕುಕ್ಷಿಗಳು ಕುಗ್ಗುವುದಕ್ಕೆ ಪ್ರಾರಂಭಿಸುತ್ತದೆ. ಈ ನಿಯಂತ್ರಣ ಕ್ರಮ ಮೇಲೆ ಹೇಳಿದಂತೆ ಸೈನೋ ಏಟ್ರಿಯಲ್ ಗಿಣ್ಣಿನಲ್ಲಿ ಹೃದಯದ ಬಡಿತಕ್ಕೆ ಸ್ವಯಂಪ್ರಚೋದನೆಯಾಗುತ್ತದೆ. ಇದು ಎರಡು ಹೃತ್ಕರ್ಣಗಳನ್ನೂ ಒಟ್ಟಿಗೆ ಸಂಕುಚಿಸಿ ಜೊತೆಗೆ ಏಟ್ರಿಯೋವೆಂಟ್ರಿಕ್ಯುಲರ್ ಗಿಣ್ಣನ್ನು ಪ್ರಚೋದಿಸುತ್ತದೆ. ಅಲ್ಲಿಂದ ಪ್ರಚೋದನೆ ಹಿಸ್ಸನ ಬೊಂತೆ (ಬಂಡಲ್ ಆಫ್ ಹಿಸ್ಸ್) ಎಂಬ ಅವ್ಯಕ್ತವಾದ ವಿಶೇಷ ಸ್ನಾಯುಗಳ ಪಟ್ಟಿಯ ಮೂಲಕ ಮುಂದುವರಿಯುತ್ತದೆ. ಹಿಸ್ಸನ ಬೊಂತೆ ಏಟ್ರಿಯೋವೆಂಟ್ರಿಕ್ಯುಲರ್ ಗಿಣ್ಣಿನಿಂದ ಪ್ರಾರಂಭವಾಗಿ ಹೃತ್ಕುಕ್ಷಿಗಳ ನಡುವಿನ ತಡಿಕೆಯ ಮೇಲುಭಾಗವನ್ನು ಸೇರುತ್ತದೆ. ಅಲ್ಲಿ ಎರಡು ಕವಲಾಗಿ ತಡಿಕೆಯ ಎಡಬಲ ಮೈಮೇಲೆ ಮುಂದುವರಿದು ಹೃದಯದ ತುದಿಯನ್ನು ಸೇರುತ್ತದೆ. ಅಲ್ಲಿಂದ ಹೃತ್ಕುಕ್ಷಿಗಳ ಎಡ ಬಲ ಅಂಚುಗಳಲ್ಲಿ ಕ್ರಮಿಸುತ್ತ ಅನೇಕ ಎಳೆಗಳಾಗಿ ಹೃದಯದ ಸ್ನಾಯುವಿನ ಜೀವಕಣಗಳೊಡನೆ ವಿಲೀನವಾಗುತ್ತದೆ. ಇದರಿಂದ ಸ್ನಾಯುಗಳೆಲ್ಲ ಹೊಂದಿಕೊಂಡು ಚೋದನೆಗೆ ಈಡಾಗುವಂತೆ ನೆರವಾಗುತ್ತದೆ ಮತ್ತು ಎರಡು ಹೃತ್ಕರ್ಣಗಳು ಒಟ್ಟಿಗೇ ಸಂಕುಚಿಸಿದ ಮೇಲೆ ಸುಮಾರು 0.1 ಸೆಕೆಂಡು ತಡೆದು ಹೃತ್ಕುಕ್ಷಿಗಳೂ ಒಟ್ಟಿಗೇ ಸಂಕುಚಿಸುವುದಕ್ಕೆ ಸಾಧ್ಯವಾಗಿವೆ.

ಹೃದಯಕ್ಕೆ ಪೂರೈಕೆಯಾಗುವ ನರಗಳಲ್ಲಿ ಉಪಾನುವೇದನ (ಪ್ಯಾರಾಸಿಂಪತೆಟಿಕ್) ನರವಾದ ವೇಗಸ್ ನರವೂ ಕೊರಳು ಮತ್ತು ಎದೆಯ ಮೇಲ್ಗಡೆಯ ನರಗಂಟುಗಳಿಂದ (ಗ್ಯಾಂಗ್ಲಿಯ) ಬರುವ ಅನುವೇದನೆ ನರಕವಲುಗಳೂ ಇವೆ. ಇವು ಹೃದಯದ ಮೇಲ್ಮೈಯಲ್ಲಿ ಮತ್ತು ಆಳದಲ್ಲಿ ಹಿಣಿಲುಗಳಾಗಿರುತ್ತವೆ. ಈ ನರಗಳು ಹೃದಯದ ಬಡಿತವನ್ನು ಸಂದರ್ಭಕ್ಕೆ ಅನುಸಾರವಾಗಿ ನಿಯಂತ್ರಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Taber, Clarence Wilbur; Venes, Donald (2009). Taber's cyclopedic medical dictionary. F. A. Davis Co. pp. 1018–1023. ISBN 978-0-8036-1559-5.
  2. Moore, Keith L.; Dalley, Arthur F.; Agur, Anne M. R. (2009). "1". Clinically Oriented Anatomy. Wolters Kluwel Health/Lippincott Williams & Wilkins. pp. 127–173. ISBN 978-1-60547-652-0.
  3. Bianco, Carl (April 2000). "How Your Heart Works". HowStuffWorks. Archived from the original on 29 July 2016. Retrieved 14 August 2016.
  4. Guyton & Hall 2011, pp. 105–107.
  5. "Pericardiectomy". Johns Hopkins Medicine. 19 November 2019. Retrieved 20 Sep 2020.
  6. Betts, J. Gordon (2013). Anatomy & physiology. OpenStax College, Rice University. pp. 787–846. ISBN 978-1-938168-13-0. Archived from the original on 27 February 2021. Retrieved 11 August 2014.
  7. Gray's Anatomy 2008, p. 959.
  8. Starr, Cecie; Evers, Christine; Starr, Lisa (2009). Biology: Today and Tomorrow With Physiology. Cengage Learning. p. 422. ISBN 978-0-495-56157-6. Archived from the original on 2 May 2016.
  9. Reed, C. Roebuck; Brainerd, Lee Wherry; Lee, Rodney; Kaplan, Inc. (2008). CSET : California Subject Examinations for Teachers (3rd ed.). New York: Kaplan Pub. p. 154. ISBN 978-1-4195-5281-6. Archived from the original on 4 May 2016.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: